ಮಂಗಳವಾರ, ಮಾರ್ಚ್ 21, 2023
20 °C
ಬಹುತೇಕರ ಶಿಕ್ಷಣಕ್ಕೆ ಕನಿಷ್ಠ ಅನುದಾನ, ಕೆಲವೇ ಸಂಸ್ಥೆಗಳ ತುಷ್ಟೀಕರಣ

ವಿಶ್ಲೇಷಣೆ | ಗುರುಕುಲ ಶಿಕ್ಷಣ ಈಗಲೂ ಇದೆ!

ಎಂ.ಚಂದ್ರ ಪೂಜಾರಿ Updated:

ಅಕ್ಷರ ಗಾತ್ರ : | |

‘ಪ್ರಾಚೀನ ಭಾರತದಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿ ಉತ್ತಮವಾಗಿತ್ತು, ಅದು ಮೊಘಲರು ಮತ್ತು ಬ್ರಿಟಿಷರ ದಾಳಿಯಿಂದ ನಾಶವಾಯಿತು. ಒಂದು ವೇಳೆ ಇಂದು ಈ ಪದ್ಧತಿ ಇರುತ್ತಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ನಾವಿಂದು ಎದುರಿ ಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು’ ಎಂಬಂಥ, ಗುರುಕುಲ ಶಿಕ್ಷಣ ಪದ್ಧತಿಯ ಸಕಾರಾತ್ಮಕ ಗುಣಗಳನ್ನು ಬಣ್ಣಿಸುವ ಬರಹ, ಭಾಷಣಗಳು ಹೇರಳವಾಗಿವೆ. ನನ್ನ ಈ ಲೇಖನದ ಉದ್ದೇಶವು ಅಂದಿನ ಗುರುಕುಲ ಶಿಕ್ಷಣ ಪದ್ಧತಿ ಕುರಿತು ಚರ್ಚಿಸುವುದಲ್ಲ. ಅದರ ಲಕ್ಷಣಗಳುಳ್ಳ ಶಿಕ್ಷಣ ಪದ್ಧತಿ ನಾಶವಾಗಿಲ್ಲ ಮತ್ತು ಇಂದೂ ಚಾಲ್ತಿಯಲ್ಲಿದೆ ಎಂದು ಹೇಳುವುದು. ‌

ಶಿಕ್ಷಣವು ಸಂಪೂರ್ಣವಾಗಿ ರಾಜಾಶ್ರಯದಲ್ಲಿ ನಡೆಯುವುದು, ಸಮಾಜದ ಸಣ್ಣ ಗುಂಪಿಗೆ (ಕ್ಷತ್ರಿಯರು ಮತ್ತು ಬ್ರಾಹ್ಮಣರಿಗೆ ಮಾತ್ರ) ಪ್ರವೇಶ ಇರುವುದು, ಪೂರ್ಣ ಸ್ವಾಯತ್ತತೆ ಹೊಂದಿರುವುದು- ಇವೆಲ್ಲ ಅಂದಿನ ಗುರುಕುಲ ಶಿಕ್ಷಣ ಪದ್ಧತಿಯ ಮುಖ್ಯ ಲಕ್ಷಣಗಳು. ಮೊಘಲರು ಮತ್ತು ಬ್ರಿಟಿಷರ ದಾಳಿಯಿಂದ ಇಲ್ಲಿನ ಕ್ಷತ್ರಿಯರು ಮೂಲೆಗುಂಪಾದರು. ಆದರೆ ಬ್ರಾಹ್ಮಣರು, ವೈಶ್ಯರಂತಹ ಪ್ರಬಲ ವರ್ಗಗಳ ಶಿಕ್ಷಿತರಿಗೆ ಬಾಧಕ ಎದುರಾಗಲಿಲ್ಲ. ಅದಕ್ಕೆ ಕಾರಣ, ಸ್ಥಳೀಯರನ್ನು ಅರ್ಥ ಮಾಡಿಕೊಳ್ಳದೆ ಆಡಳಿತ ನಡೆಸುವುದು ಮೊಘಲರು ಮತ್ತು ಬ್ರಿಟಿಷರಿಗೆ ಅಸಾಧ್ಯವಾಗಿತ್ತು ಮತ್ತು ಸ್ಥಳೀಯರನ್ನು ಅರ್ಥಮಾಡಿಕೊಳ್ಳಲು ಆಗ ಶಿಕ್ಷಿತರಾಗಿದ್ದವರನ್ನು ಹತ್ತಿರ ಸೇರಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗೆ ಪ್ರಾಪ್ತವಾದ ಅಧಿಕಾರದ ಸಾಮೀಪ್ಯವು ಈ ವರ್ಗಗಳ ಶಿಕ್ಷಣ ಹಾಗೂ ಇತರ ಸವಲತ್ತುಗಳ ಮುಂದುವರಿಕೆಗೆ ಕಾರಣವಾಗಿರಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದಲೇ ಬ್ರಿಟಿಷರು ನಮ್ಮ ಮೇಲೆ ಆಳ್ವಿಕೆ ನಡೆಸಿದ್ದು. ಬಲಾಢ್ಯ ಸ್ವತಂತ್ರ ಭಾರತ ನಿರ್ಮಾಣಕ್ಕೆ ವಿಜ್ಞಾನ ಮತ್ತು ತಂತ್ರ ಜ್ಞಾನ ಅನಿವಾರ್ಯ ಎನ್ನುವ ಚರ್ಚೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿತ್ತು. ಈ ಎಲ್ಲದರ ಫಲವಾಗಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‌ (ಐಐಎಸ್‌ಸಿ) ಆರಂಭವಾದವು. 50-60ರ ದಶಕದಲ್ಲಿ ವಿದೇಶಿ ನೆರವಿನಿಂದ ನಾಲ್ಕು ಐಐಟಿಗಳು ಸ್ಥಾಪನೆಗೊಂಡವು. ನಂತರದ ದಿನಗಳಲ್ಲಿ 19 ಐಐಟಿ, 29 ಎನ್‍ಐಟಿ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ), 8 ಐಐಎಸ್‍ಇಆರ್ (ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಸೈನ್ಸ್ ಎಜುಕೇಶನ್ ಆ್ಯಂಡ್‌ ರಿಸರ್ಚ್), 20 ಐಐಎಂ (ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‍ಮೆಂಟ್), 7 ಎಐಐಎಂಎಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸಸ್‌), 25 ಐಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‍ಫರ್ಮೇಷನ್ ಟೆಕ್ನಾಲಜಿ), 3 ಎನ್‍ಐಡಿಗಳನ್ನು (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್) ಭಾರತ ಸರ್ಕಾರ ಆರಂಭಿಸಿದೆ. ಇವನ್ನು ಇನ್‍ಸ್ಟಿಟ್ಯೂಟ್ಸ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ ಎಂದು ಪರಿಗಣಿಸಲಾಗಿದೆ. ಅಂದರೆ ನಮ್ಮ ದೇಶ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸುವ ಸಂಸ್ಥೆಗಳು ಎನ್ನುವ ಅರ್ಥ.

ಇಂಥ ಸಂಸ್ಥೆಗಳು ಸ್ಥಳೀಯ ರಾಜಕೀಯದ ಪ್ರಭಾವಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ನೆಹರೂ ಅವರ ಕಾಲದಿಂದಲೇ ಇವು ಪ್ರಧಾನಮಂತ್ರಿಯವರ ನೇರ ಉಸ್ತುವಾರಿಯಲ್ಲಿವೆ. ಈ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ನೆಹರೂ ವಿಶೇಷ ಆಸಕ್ತಿ ತೋರಿಸಲಿಲ್ಲ. ಅವರ ಪ್ರಕಾರ, ಇಲ್ಲಿ ಸಂಖ್ಯೆಗಿಂತ ಗುಣಮಟ್ಟ ಮುಖ್ಯವಾಗ ಬೇಕು. ಗುಣಮಟ್ಟದ ದೃಷ್ಟಿಯಿಂದ ನೋಡಿದರೆ, ಹಿಂದಿ ನಿಂದಲೇ ಶಿಕ್ಷಣ ಪಡೆಯುತ್ತಿದ್ದವರು ಇಲ್ಲಿರಲು ಯೋಗ್ಯರು ಎನ್ನುವ ನಿಲುವನ್ನು ನೆಹರೂ ಕೂಡ ಪರೋಕ್ಷವಾಗಿ ವ್ಯಕ್ತ ಪಡಿಸಿದ್ದಾರೆ. ಹೀಗೆ, ಒಂದು ಸಣ್ಣ ವರ್ಗದ ಚಾರಿತ್ರಿಕ ಅನುಕೂಲವು ನಂತರದ ದಿನಗಳಲ್ಲಿ ‘ಮೆರಿಟ್’ ಆಗಿ ಪರಿವರ್ತನೆಗೊಂಡಿದೆ. ಇದೇ ಕಾರಣದಿಂದ, 2006 ರಲ್ಲಿ ಸೆಂಟ್ರಲ್ ಎಜುಕೇಷನಲ್ ಇನ್‍ಸ್ಟಿಟ್ಯೂಷನ್ಸ್ (ರಿಸರ್ವೇಷನ್ ಇನ್ ಅಡ್ಮಿಷನ್) ಆ್ಯಕ್ಟ್ ಬರುವತನಕ ಈ ಸಂಸ್ಥೆಗಳಲ್ಲಿ ಮೀಸಲಾತಿ ಇರಲಿಲ್ಲ.

2006ರ ಕಾಯ್ದೆಯ ಅನ್ವಯ, ಪರಿಶಿಷ್ಟ ಜಾತಿಗೆ (ಎಸ್‍ಸಿ) ಶೇ 15, ಪರಿಶಿಷ್ಟ ವರ್ಗಕ್ಕೆ (ಎಸ್‍ಟಿ) ಶೇ 7.5 ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಸೀಟುಗಳು ಮೀಸಲಿವೆ. ಈ ಕಾಯ್ದೆಯ ವಿರುದ್ಧ ಬಹಳಷ್ಟು ಬೀದಿ ಹೋರಾಟಗಳು, ಕೋರ್ಟ್ ಕಟ್ಟಲೆಗಳು ನಡೆದು, ಇದು ಅನುಷ್ಠಾನಗೊಳ್ಳಲು ಹೆಚ್ಚುಕಡಿಮೆ ನಾಲ್ಕು ವರ್ಷ ತೆಗೆದುಕೊಂಡಿದೆ. ಕಾಯ್ದೆ ಜಾರಿಗೊಂಡ ಹಲವು ವರ್ಷಗಳ ನಂತರವೂ ಈ ವರ್ಗದ
ಪಿಎಚ್‌.ಡಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕೇಂದ್ರ ಶಿಕ್ಷಣ ಸಚಿವಾಲಯದ ಅಂಕಿಅಂಶದ ಪ್ರಕಾರ, 2016-20ರಲ್ಲಿ ಬೆಂಗಳೂರಿನ ಐಐಎಸ್‍ಸಿಯಲ್ಲಿ ಶೇ 2.1ರಷ್ಟು ಎಸ್‍ಟಿ, ಶೇ 9ರಷ್ಟು ಎಸ್‍ಸಿ ಮತ್ತು ಶೇ 8ರಷ್ಟು ಒಬಿಸಿ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯಲು ಸಾಧ್ಯವಾಗಿದೆ. 17 ಐಐಟಿಗಳಲ್ಲಿ ಶೇ 1.7ರಷ್ಟು ಎಸ್‍ಟಿ, ಶೇ 9ರಷ್ಟು ಎಸ್‍ಸಿ ಮತ್ತು ಶೇ 27ರಷ್ಟು ಒಬಿಸಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇತರ ಸಂಸ್ಥೆಗಳಲ್ಲೂ ಮೀಸಲಾತಿ ಸ್ಥಿತಿ ಇದಕ್ಕಿಂತ ಉತ್ತಮವಾಗಿಲ್ಲ.

2019ರವರೆಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಮಾತ್ರ ಮೀಸಲಾತಿ ಅನ್ವಯವಾಗುತ್ತಿತ್ತು. ಅದು ಕೂಡ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಸಚಿವಾಲಯದ 2019ರ ಅಂಕಿಅಂಶದ ಪ್ರಕಾರ, ಐಐಟಿಗಳಲ್ಲಿ ಬೋಧಕ ಸಿಬ್ಬಂದಿಯ ಶೇ 91ರಷ್ಟು ಮತ್ತು ಐಐಎಂಗಳಲ್ಲಿ ಶೇ 94ರಷ್ಟು ಜನರಲ್ ಕೆಟಗರಿಯಿಂದ ಬಂದರೆ, ಮೀಸಲಾತಿಯಿಂದ ಐಐಟಿಯಲ್ಲಿ ಶೇ 9 ಮತ್ತು ಐಐಎಂಗಳಲ್ಲಿ ಶೇ 6ರಷ್ಟು ಬೋಧಕ ಸಿಬ್ಬಂದಿ ಬಂದಿದ್ದಾರೆ. ಇದೇ ಕಾರಣದಿಂದ, 2019ರಲ್ಲಿ ಕೇಂದ್ರ ಸರ್ಕಾರವು ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಬೇಕೆಂದು ಈ ಸಂಸ್ಥೆಗಳಿಗೆ ಆದೇಶಿಸಿದೆ. ಜೊತೆಗೆ ಸಹಾಯಕ ಪ್ರಾಧ್ಯಾಪಕರಿಗೆ ಸೀಮಿತವಾಗಿದ್ದ
ಮೀಸಲಾತಿಯನ್ನು ಪ್ರೊಫೆಸರ್ ಹುದ್ದೆಗಳಿಗೂ ವಿಸ್ತರಿಸಿದೆ.

ಮೀಸಲಾತಿ ಮಾತ್ರವಲ್ಲ, ಒಟ್ಟಾರೆ ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆಯೂ ತೀರಾ ಕಡಿಮೆ ಇದೆ. 2019ರ ವೇಳೆಗೆ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಶೇ 72ರಷ್ಟು ಸ್ಟೇಟ್ ಯೂನಿವರ್ಸಿಟಿ ಗಳಲ್ಲಿ, ಶೇ 8.8ರಷ್ಟು ಸೆಂಟ್ರಲ್ ಯೂನಿವರ್ಸಿಟಿಗಳಲ್ಲಿ, ಶೇ 3.4ರಷ್ಟು ಮಂದಿ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದರೆ, ಇನ್‍ಸ್ಟಿಟ್ಯೂಷನ್ಸ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ ಸಂಸ್ಥೆಗಳಲ್ಲಿ ಶೇ 3.6ರಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದರು. ಹಾಗೆಂದು ಈ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನ ಕಡಿಮೆ ಇಲ್ಲ.

2022-23ರ ಕೇಂದ್ರ ಬಜೆಟ್‍ನಲ್ಲಿ ₹ 40,828 ಕೋಟಿಯನ್ನು ಉನ್ನತ ಶಿಕ್ಷಣಕ್ಕಾಗಿ ತೆಗೆದಿರಿಸಲಾ
ಗಿದೆ. ಇದರಲ್ಲಿ ಶೇ 44ರಷ್ಟನ್ನು ಇನ್‍ಸ್ಟಿಟ್ಯೂಷನ್ಸ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್‌ ವ್ಯಾಪ್ತಿಯ ಸಂಸ್ಥೆಗಳಿಗೆ ನೀಡಿದರೆ, ಸ್ಟೇಟ್ ಯೂನಿವರ್ಸಿಟಿಗಳಿಗೆ ಶೇ 17ರಷ್ಟು ಮತ್ತು ಸೆಂಟ್ರಲ್ ಯೂನಿವರ್ಸಿಟಿಗಳಿಗೆ ಶೇ 24ರಷ್ಟು ಮೊತ್ತವನ್ನು ನೀಡಲಾಗಿದೆ. ಕೆಲವು ವರ್ಷಗಳ ಹಿಂದೆ ಕೆಲವು ಐಐಟಿ, ಐಐಎಸ್‌ಸಿ, ವಿಶ್ವವಿದ್ಯಾಲಯಗಳನ್ನು ಇನ್‍ಸ್ಟಿಟ್ಯೂಷನ್ಸ್ ಆಫ್ ಎಮಿನೆನ್ಸ್ ಎಂದು ಪ್ರಕಟಿಸಿ, ಅವುಗಳಿಗೆ 5 ವರ್ಷಗಳ ಅವಧಿಗೆ ತಲಾ ₹ 1,000 ಕೋಟಿ ಅನುದಾನ ಘೋಷಿಸಲಾಗಿದೆ.

ಹೀಗೆ ಇಂದಿನ ಗುರುಕುಲ ಶಿಕ್ಷಣ ಪದ್ಧತಿಯ ಪರಿಣಾಮಗಳು ಇಂತಿವೆ: ಒಂದು, ಬಹುತೇಕರಿಗೆ ಗುಣಮಟ್ಟದ ಶಿಕ್ಷಣ ನಿರಾಕರಣೆ. ಎರಡು, ನ್ಯಾಷನಲ್ ಇಂಪಾರ್ಟೆನ್ಸ್ ಹೆಸರಿನಲ್ಲಿ ಬೆರಳೆಣಿಕೆಯಷ್ಟು ಸಂಸ್ಥೆ ಗಳನ್ನು ಪ್ರೋತ್ಸಾಹಿಸುವುದು. ಮೂರು, ಚಾರಿತ್ರಿಕ ಅನುಕೂಲವನ್ನೇ ಮೆರಿಟ್ ಎಂದು ಪರಿಗಣಿಸುವುದು ಮತ್ತು ನಾಲ್ಕು, ಎಲ್ಲರ ತೆರಿಗೆ ಹಣದಲ್ಲಿ ಒಂದು ಸಣ್ಣ ಗುಂಪು ಗುಣಮಟ್ಟದ ಶಿಕ್ಷಣ ಪಡೆದು ವಿದೇಶಗಳಲ್ಲಿ ಸೇವೆ ಸಲ್ಲಿಸುವುದು.

ಬಹುತೇಕರ ಶಿಕ್ಷಣದ ಮೇಲೆ ಹೆಚ್ಚು ಅನುದಾನ ವಿನಿಯೋಗಿಸದೆ ಕೆಲವೇ ಸಂಸ್ಥೆಗಳನ್ನು ತುಷ್ಟೀಕರಿಸಿ, ಅಲ್ಲಿ ಓದಿದವರನ್ನು ಮೆರಿಟೋರಿಯಸ್ ಎಂದು ಘೋಷಿಸುವುದಕ್ಕೂ,  ಬಡವರೇ ತುಂಬಿರುವ ದೇಶ ದಲ್ಲಿ ಕೋಟಿಗಟ್ಟಲೆ ಹಣ ಸುರಿದು ನಡೆಯುವ ಚುನಾ ವಣೆಗಳಲ್ಲಿ ಕೆಲವರನ್ನು ಜನಪ್ರತಿನಿಧಿಗಳು ಎಂದು ಘೋಷಿಸುವುದಕ್ಕೂ ಏನಾದರೂ ವ್ಯತ್ಯಾಸ ಇದೆಯೇ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು