ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೋಲು ಕಲಿಸಿದ ಪಾಠಗಳು

ಎಂಟು ತಿಂಗಳಲ್ಲಿ ಆರು ನಾಯಕರ ಆಟಕ್ಕೆ ವೇದಿಕೆಯಾದ ಭಾರತ ಕ್ರಿಕೆಟ್‌ ತಂಡ
Last Updated 7 ಜುಲೈ 2022, 22:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಅಂಗಳದಲ್ಲಿ ಈಚೆಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಜೋ ರೂಟ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಏಕೆಂದರೆ, ನಾಯಕತ್ವದ ಒತ್ತಡ ಕಳಚಿಕೊಂಡಿರುವ ಇಬ್ಬರೂ ತಮ್ಮ ಬ್ಯಾಟಿಂಗ್ ವೈಭವ ಮೆರೆಯುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದರಲ್ಲಿ ರೂಟ್ ಮಾತ್ರ ಕ್ರಿಕೆಟ್‌ಪ್ರೇಮಿಗಳ ಮನಗೆದ್ದರು.

ಆ್ಯಷಸ್ ಸರಣಿಯಲ್ಲಿ ಅನುಭವಿಸಿದ ವೈಫಲ್ಯವು ರೂಟ್‌ ನಾಯಕತ್ವಕ್ಕೆ ಕುತ್ತು ತಂದಿತ್ತು. ಕೊಹ್ಲಿ ಅವರು ಬಿಸಿಸಿಐಗೆ ‘ಬುದ್ಧಿ’ ಕಲಿಸಲು ಟೆಸ್ಟ್ ತಂಡದ ನಾಯಕತ್ವ ತೊರೆದರು. ನಾಯಕತ್ವ ಬಿಟ್ಟುಕೊಟ್ಟ ಬಳಿಕ ರೂಟ್ ಶತಕಗಳ ಮೂಲಕ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದ್ದಾರೆ. ಇದರಿಂದಾಗಿ, ನ್ಯೂಜಿಲೆಂಡ್ ಮತ್ತು ಭಾರತದ ಎದುರಿಗಿನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಜಯಿಸಿತು.ಬೆನ್‌ ಸ್ಟೋಕ್ಸ್‌ ನಾಯಕತ್ವಕ್ಕೆ ರೂಟ್‌ ಬಲ ತುಂಬಿದರು. ಇಂಗ್ಲೆಂಡ್ ಕೋಚ್ ಆಗಿ ಬ್ರೆಂಡನ್ ಮೆಕ್ಲಮ್ ಗಮನ ಸೆಳೆಯಲು ಇದು ನೆರವಾಯಿತು. ಆದರೆ, ಭಾರತದ ಕೋಚ್‌ ರಾಹುಲ್ ದ್ರಾವಿಡ್‌ ಅವರಿಗೆ ಮತ್ತೆ ನಿರಾಶೆಯೇ ಉಳಿಯಿತು.

ಆದರೆ ಈ ಸೋಲು ಭಾರತಕ್ಕೆ ದುಬಾರಿಯಾಗುವ ಸಾಧ್ಯತೆ ಇದೆ. ಏಕೆಂದರೆ, ಪ್ರತೀ ಪಂದ್ಯವೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಭಾಗವಾಗಿದೆ. ಒಂದೊಂದು ಗೆಲುವೂ ಮಹತ್ವದ್ದು. ಈ ಸೋಲಿನಿಂದಾಗಿ ಭಾರತವು ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಿಳಿಯಿತು. ಇದನ್ನು ಸರಿದೂಗಿಸಬೇಕಾದರೆ ಮುಂದಿನ ಸರಣಿಗಳಲ್ಲಿ ಗೆಲುವಿನ ಒತ್ತಡ ಹೆಚ್ಚಲಿದೆ. ಆದ್ದರಿಂದಲೇಇಲ್ಲಿ ಆಟಗಾರರ ವೈಫಲ್ಯಗಳ ಜೊತೆಗೆ ರಾಷ್ಟ್ರೀಯ ಆಯ್ಕೆ ಸಮಿತಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕೆಲವು ನೀತಿಗಳ ಕುರಿತ ಮಂಥನವೂ ಅವಶ್ಯಕ.

ಮೊದಲನೆಯದಾಗಿ, ವಿರಾಟ್ ನಂತರ ತಂಡಕ್ಕೆ ಗಟ್ಟಿ ನಾಯಕತ್ವ ಸಿಗಲಿಲ್ಲ ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ. ಈ ಎಂಟು ತಿಂಗಳಲ್ಲಿ ಆರು ನಾಯಕರನ್ನು ತಂಡ ಕಂಡಿದೆ.ಬಲಾಢ್ಯ ಇಂಗ್ಲೆಂಡ್ ತಂಡದ ಎದುರು ಆಡುವಾಗ ಸಮರ್ಥ ಮತ್ತು ಅನುಭವಿ ನಾಯಕತ್ವದ ಅವಶ್ಯಕತೆ ತಂಡಕ್ಕೆ ಇತ್ತು. ಕೋವಿಡ್‌ ದೃಢಪಟ್ಟಿದ್ದರಿಂದ ರೋಹಿತ್ ಶರ್ಮಾ ಬದಲಿಗೆ ನಾಯಕತ್ವದ ಅನುಭವವೇ ಇಲ್ಲದ ಜಸ್‌ಪ್ರೀತ್ ಬೂಮ್ರಾ ಅವರಿಗೆ ಹೊಣೆ ನೀಡಲಾಯಿತು. ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ 2–1ರ ಮುನ್ನಡೆ ಸಾಧಿಸಿದ್ದಾಗ ನಾಯಕರಾಗಿದ್ದ ಕೊಹ್ಲಿಗೇ ಈ ಪಂದ್ಯದಲ್ಲಿ ಹೊಣೆ ನೀಡಬಹುದಿತ್ತಲ್ಲವೇ? ಇಲ್ಲದಿದ್ದರೆ ಭವಿಷ್ಯದ ನಾಯಕನೆಂದೇ ಹೇಳಲಾಗುತ್ತಿರುವ ರಿಷಭ್ ಪಂತ್‌ ಅವರಿಗೆ ಅವಕಾಶ ಕೊಡಬಹುದಿತ್ತಲ್ಲವೇ? ಐಪಿಎಲ್ ಮತ್ತು ಕೆಲವು ಅಂತರ
ರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಒಂದಿಷ್ಟು ಅನುಭವ ಪಂತ್‌ಗೆ ಇತ್ತು. ಕಪಿಲ್ ದೇವ್ ನಂತರ ತಂಡದ ನಾಯಕತ್ವ ವಹಿಸಿದ ವೇಗದ ಬೌಲರ್‌ ಎಂಬ ಹೆಗ್ಗಳಿಕೆ ಬೂಮ್ರಾಗೆ ದಕ್ಕಿತು. ಆದರೆ ಈ ಪಂದ್ಯದ ಸೋಲು ಅವರ ನಾಯಕತ್ವದ ಸಾಮರ್ಥ್ಯಕ್ಕೆ
ಅಳತೆಗೋಲಾಗಬಾರದಲ್ಲವೇ?

ಎರಡನೆಯದಾಗಿ, ಆರಂಭಿಕ ಬ್ಯಾಟರ್‌ಗಳ ಸಂಯೋಜನೆಯಲ್ಲಿ ತಂಡವು ಕೈಸುಟ್ಟುಕೊಂಡಿತು. ರೋಹಿತ್ ಮತ್ತು ರಾಹುಲ್ ಅಲಭ್ಯರಾಗಿದ್ದ ಕಾರಣ ಮಯಂಕ್ ಅವರನ್ನು ಕೊನೆಕ್ಷಣದಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರೂಢಿ ಇರುವ ಚೇತೇಶ್ವರ್ ಪೂಜಾರ ಅವರು ಶುಭಮನ್ ಗಿಲ್ ಜೊತೆಗೆ ಇನಿಂಗ್ಸ್ ಆರಂಭಿಸಿದರು. ಪೂಜಾರ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದಷ್ಟೇ ಸಾಧನೆ. ಈ ಹಿಂದೆ ಗಿಲ್ ಮತ್ತು ಮಯಂಕ್ ಅವರು ಉತ್ತಮ ಅಡಿಪಾಯ ಹಾಕಿದ್ದ ಉದಾಹರಣೆಗಳು ಇವೆ. ಅನುಭವಿಗಳಾದ ಹನುಮವಿಹಾರಿ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ನಿರೀಕ್ಷೆ ಹುಸಿಗೊಳಿಸಿದರು. ಗಾಯದಿಂದ ಚೇತರಿಸಿಕೊಂಡು ಬಂದ ಜಡೇಜ ಮತ್ತು ಎಂದಿನಂತೆ ವಿದೇಶಿ ನೆಲದಲ್ಲಿ ಮಿಂಚಿದ ಪಂತ್ ಅವರ ಆಟ ಮಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದು.

ಮೂರನೆಯದಾಗಿ, ಬಿಸಿಸಿಐನ ಕಾರ್ಯಭಾರ ನಿರ್ವಹಣೆ ನೀತಿ (ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್) ಕೂಡ ಎಲ್ಲ ಮಾದರಿಗಳಲ್ಲಿಯೂ ಆಟಗಾರರ ಲಯದ ಮೇಲೆ ಪರಿಣಾಮ ಬೀರುತ್ತಿರುವುದು ಕಾಣುತ್ತಿದೆ. ಈಚೆಗೆ ಬೆಂಗಳೂರಿನಲ್ಲಿ ರಣಜಿ ಟ್ರೋಫಿ ಕ್ವಾರ್ಟರ್‌
ಫೈನಲ್‌ನಲ್ಲಿ ಉತ್ತರಪ್ರದೇಶದ ಎದುರು ಕರ್ನಾಟಕ ತಂಡದಲ್ಲಿ ಪ್ರಸಿದ್ಧ ಕೃಷ್ಣಗೆ ಆಡಲು ಅವಕಾಶ ನೀಡಿರಲಿಲ್ಲ. ಇಂಗ್ಲೆಂಡ್ ಟೆಸ್ಟ್‌ಗೆ ಅವರನ್ನು ಫಿಟ್‌ ಆಗಿ ಉಳಿಸಿಕೊಳ್ಳಲು ಬಿಸಿಸಿಐ ಸೂಚಿಸಿತ್ತು. ಆದರೆ, ಪ್ರಸಿದ್ಧಗೆ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಅವಕಾಶ ನೀಡಲಿಲ್ಲ.

ಇನ್ನು ಮೂರು ತಿಂಗಳು ಕಳೆದರೆ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು. ಅದಕ್ಕೂ ಮುನ್ನ ಆಟಗಾರರಿಗೆ ಕೇವಲ ಹದಿನೈದು ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿದೆ. ಅನುಭವಿಗಳಿಗೆ ಹೆಚ್ಚು ವಿಶ್ರಾಂತಿ ನೀಡಿದರೆ, ವಿದೇಶಿ ನೆಲದಲ್ಲಿ ಆಡುವ ಅಭ್ಯಾಸ ದೊರೆಯುವುದು ಹೇಗೆ? ಅವರ ಸಾಮರ್ಥ್ಯವನ್ನು ನೆಟ್ಸ್‌ನಲ್ಲಿ ಮಾತ್ರ ಒರೆಗೆ ಹಚ್ಚಲು ಸಾಧ್ಯವೇ? ಪಂದ್ಯಗಳಲ್ಲಿ ಆಡಿದಷ್ಟೂ ಆಟ ಮಾಗುತ್ತದೆ. ವಿಶ್ರಾಂತಿ ಪಡೆದರೆ ಅನುಭವ ಸಿಗುವುದೆಲ್ಲಿಂದ? ಆದರೆ ಇದೇ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸದಲ್ಲಿಯೂ ರೋಹಿತ್ ಸೇರಿದಂತೆ ಹಲವು ಅನುಭವಿಗಳಿಗೆ ವಿಶ್ರಾಂತಿ ನೀಡಲಾಗಿದೆ. ಶಿಖರ್ ಧವನ್ ನಾಯಕತ್ವ ವಹಿಸಲಿದ್ದಾರೆ. ಈಗ ಪ್ರಯೋಗಕ್ಕೆ ವಿರಾಮವಿಟ್ಟು, ವಿಶ್ವಕಪ್ ತಂಡವನ್ನು ಸಿದ್ಧಗೊಳಿಸಿ ಕಣಕ್ಕಿಳಿಸಲು ಸೂಕ್ತ ಕಾಲ. ಬೇರೆ ದೇಶಗಳ ತಂಡಗಳು ಈಗಾಗಲೇ ಸಿದ್ಧವಾಗಿವೆ.

ಇನ್ನೊಂದೆಡೆ ರೋಹಿತ್‌ಗೆ ನಾಯಕತ್ವದ ಅನುಭವವೂ ಪೂರ್ಣವಾಗಿ ಸಿಗುತ್ತಿಲ್ಲ. ನಾಯಕರಾದ ನಂತರಅವರು ವಿಶ್ರಾಂತಿ ಪಡೆದದ್ದೇ ಹೆಚ್ಚು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಎರಡು ತಿಂಗಳು ದಣಿವಿಲ್ಲದೇ ಎಲ್ಲ ಪಂದ್ಯಗಳಲ್ಲಿಯೂ ಆಡುವ ಆಟಗಾರರಿಗೆ ರಾಷ್ಟ್ರೀಯ ತಂಡಕ್ಕೆ ಬಂದ ಕೂಡಲೇ ಗಾಯ, ನೋವು ಕಾಡುವುದು ಏಕೆ ಎಂಬ ವಿಷಯವೂ ಚರ್ಚೆಯಾಗುತ್ತಿದೆ. ರೋಹಿತ್‌ಗೆ ಈ ಹೊಣೆ ನೀಡಿರುವ ಮಂಡಳಿಯೂ ಗೊಂದಲದಲ್ಲಿದೆ. ಅದರ ಫಲವಾಗಿಯೇ ಹೊಸ ನಾಯಕನ ಶೋಧಕ್ಕಾಗಿ ಪ್ರಯೋಗ ಮಾಡುತ್ತಿದೆ. ಇದರಿಂದ ತಂಡದಲ್ಲಿ ಅಸ್ಥಿರತೆ ತಲೆದೋರುತ್ತಿರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ಭಾರತ ತಂಡಕ್ಕೆ ಯಾರು ಬೇಕಾದರೂ ನಾಯಕರಾಗ
ಬಹುದೆಂಬ ಮೀಮ್‌ಗಳು ಹರಿದಾಡುತ್ತಿವೆ. ಇದು ಬಿಸಿಸಿಐ ಘನತೆಗೆ ತಕ್ಕುದಲ್ಲ.

ಕೊನೆಯದಾಗಿ, ಭಾರತದ ಕ್ರಿಕೆಟ್‌ ಬೆಳೆಯಲು ಕಾರಣವಾಗಿರುವ ದೇಶಿ ಟೂರ್ನಿಗಳಿಗೆ ಮಹತ್ವ ನೀಡು ವತ್ತ ಗಮನಹರಿಸಲು ಇದು ಸಕಾಲ. ರಾಷ್ಟ್ರೀಯ ತಂಡ ಗಳ ಆಯ್ಕೆಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳ ಸಾಧನೆಗಳೇ ಮಾನದಂಡವಾಗಬೇಕು. ಆಗಷ್ಟೇ, ಎಳೆಯ ಕ್ರಿಕೆಟಿಗರಿಗೆ ತಮ್ಮ ರಾಜ್ಯ ಹಾಗೂ ದೇಶದ ತಂಡಗಳಲ್ಲಿ ಆಡುವ ತುಡಿತ ಬೆಳೆಯುತ್ತದೆ. ಈ ಹಿಂದೆ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದಾಗ, ಗಾಯಗೊಂಡು ಚೇತರಿಸಿಕೊಂಡ ಆಟ ಗಾರರು ಯಾವುದಾದರೂ ದೇಶಿ ಟೂರ್ನಿಯಲ್ಲಿ ಆಡಿಯೇ ರಾಷ್ಟ್ರೀಯ ಬಳಗಕ್ಕೆ ಮರಳಬೇಕು ಎಂಬ ನಿಯಮ ಮಾಡಿದ್ದರು. ಇದರಿಂದಾಗಿ ಆಟಗಾರರು ತಮ್ಮ ಫಿಟ್‌ನೆಸ್ ಮತ್ತು ಗಾಯದ ನಿರ್ವಹಣೆಯ ಕುರಿತು ಗಂಭೀರವಾಗಿದ್ದರು. ಆದರೆ ಈಗ ಆ ನಿಯಮವಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಹಸಿರು ನಿಶಾನೆ ತೋರಿದರೆ ಸಾಕು. ಯಾವುದೇ ಹಂತದಲ್ಲಿಯೂ ಆಟಗಾರ ತಂಡಕ್ಕೆ ಮರಳಬಹುದು. ಇದು ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗುತ್ತಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸೂಕ್ತ ನಿಯಮ ರೂಪಿಸುವುದು ದೇಶದ ಕ್ರಿಕೆಟ್‌ ಭವಿಷ್ಯಕ್ಕೆ ಒಳ್ಳೆಯದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT