ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಜನಮುಖಿಯಾಗಲಿ ತಂತ್ರಜ್ಞಾನ

ಜನಹಿತ, ನೈತಿಕತೆ ಹಾಗೂ ಪರಿಸರದ ಸ್ವಾಸ್ಥ್ಯ ಕಾಪಾಡುವ ತಂತ್ರಜ್ಞಾನಗಳ ಜರೂರತ್ತಿದೆ ಈಗ
Last Updated 5 ಮೇ 2022, 19:31 IST
ಅಕ್ಷರ ಗಾತ್ರ

ಅನುಕೂಲಸ್ಥರು ತಾವು ಧರಿಸಿದ ರಫ್ತಿನ ಗುಣಮಟ್ಟದ ಬಟ್ಟೆ, ಕೈಗಡಿಯಾರ ಇತ್ಯಾದಿಗಳನ್ನು ನಾಲ್ಕು ಜನರೆದುರು ಪ್ರದರ್ಶಿಸಿ ಬೀಗುವ ಸಂಗತಿ ಎಪ್ಪತ್ತು-ಎಂಬತ್ತರ ದಶಕಗಳಲ್ಲಿ ಸಾಮಾನ್ಯವಾಗಿತ್ತು. ‘ಹಾಗಾದರೆ, ಜನಸಾಮಾನ್ಯರಿಗೆ ಮಾರುಕಟ್ಟೆಯಲ್ಲಿ ದೊರಕುವ ಉತ್ಪನ್ನಗಳೆಲ್ಲ ಕಳಪೆಯವೇ?’ ಇಂಥದೊಂದು ಪ್ರಶ್ನೆಯನ್ನು ಆ ಕಾಲಘಟ್ಟದ ಕಾರ್ಯಾಗಾರವೊಂದರಲ್ಲಿ ಪ್ರಸಿದ್ಧ ವಿಜ್ಞಾನಿ ಎ.ಕೆ.ಎನ್. ರೆಡ್ಡಿ ಅವರ ಮುಂದಿಟ್ಟಾಗ, ಅವರ ಉತ್ತರ ಮಾರ್ಮಿಕವಾಗಿತ್ತು. ‘ವಿಜ್ಞಾನ- ತಂತ್ರಜ್ಞಾನಗಳು ಯಾವಾಗಲೂ ಉತ್ಕೃಷ್ಟವಾಗಿಯೇ ಇರುತ್ತವೆ. ಆದರೆ, ಉತ್ಪಾದಕರು ಹಾಗೂ ಮಾರಾಟಗಾರರ ನೈತಿಕತೆ ಆಧರಿಸಿ ಆ ಉತ್ಪನ್ನಗಳ ಗುಣಮಟ್ಟ ಏರುಪೇರಾದಾವು!’ ಸರ್ಕಾರಿ ನಿಯಂತ್ರಣದಲ್ಲಿ ಬಂದಿಯಾಗಿದ್ದ ಅಂದಿನ ಉದ್ಯಮ ಕ್ಷೇತ್ರಕ್ಕೆ ಹಿಡಿದ ಕೈಗನ್ನಡಿಯಂತಿತ್ತು ಆ ಮಾತು.

ಕೈಗಾರಿಕಾ ಕ್ರಾಂತಿಯ ನಂತರ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ವಿಕಾಸವಾಯಿತು ಎಂಬುದೇನೋ ನಿಜ. ಆದರೆ, ಅದು ಅಧಿಕಾರಸ್ಥರ ಕೈವಶವಾಗುತ್ತಾ, ಜನಸಾಮಾನ್ಯರಿಗೆ ಗಗನಕುಸುಮವಾಗಿದ್ದು, ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನಾದ್ಯಂತ ಕಂಡ ವಿದ್ಯಮಾನ. ಹಾಗೆಂದೇ, ಗುಣಮಟ್ಟದ ಉತ್ಪನ್ನ ಹಾಗೂ ಸೇವೆಗಳನ್ನು ಎಲ್ಲರ ಕೈಗಿಡುವ ದಾರಿಗಳನ್ನು ಪ್ರಪಂಚದೆಲ್ಲೆಡೆ ಸಮಾಜಮುಖಿ ಚಿಂತಕರೆಲ್ಲ ಶೋಧಿಸುತ್ತಲೇ ಬಂದರು. ಅಂಥ ಪ್ರಯತ್ನಗಳ ಫಲವಾಗಿ ರೂಪುಗೊಂಡಿದ್ದರಲ್ಲಿ ‘ಜನ-ವಿಜ್ಞಾನ ಆಂದೋಲನ’ವೂ ಒಂದು.

ಆದರೆ, ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸ್ಫೋಟಗೊಂಡ ಆರ್ಥಿಕ ಉದಾರಿಕರಣ ಚಿಂತನೆಗಳು, ಈ ಜನಕೇಂದ್ರಿತ ವಿಜ್ಞಾನ- ತಂತ್ರಜ್ಞಾನಗಳ ಪ್ರಯತ್ನಗಳನ್ನು ಮೂಲೆಗುಂಪಾಗಿಸಿದವು. ಉದ್ಯಮಗಳ ಖಾಸಗೀಕರಣವಾಗಿಬಿಟ್ಟರೆ ತಂತ್ರಜ್ಞಾನವು ಸುಲಭವಾಗಿ ಜನಸಾಮಾನ್ಯರ ಮಡಿಲು ಸೇರುತ್ತದೆ ಎಂಬ ವಾದವನ್ನು ಆಕರ್ಷಕವಾಗಿ ಮುಂದಿಡಲಾಯಿತು. ಎಂಬತ್ತು-ತೊಂಬತ್ತರ ದಶಕಗಳಲ್ಲಿ ದೇಶದಲ್ಲಿ ನಡೆದ ‘ಗ್ಯಾಟ್’ ಒಪ್ಪಂದದ ಚರ್ಚೆಗಳಿರಲೀ, ಆನಂತರದಲ್ಲಿ ಸರ್ಕಾರ ಕೈಗೊಂಡ ಆರ್ಥಿಕ ಉದಾರೀಕರಣದ ಪ್ರಕ್ರಿಯೆಗಳಿರಲೀ, ಈ ಸಂಕಥನವನ್ನೇ ನಿರೂಪಿಸಿದವಲ್ಲವೇ? ದೇಶವು ಉದಾರೀಕರಣಕ್ಕೆ ತೆರೆದುಕೊಂಡು ಈಗ ಮೂರು ದಶಕಗಳೇ ಸಂದಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಗಳಿಗೆಯಲ್ಲಿ ಒಮ್ಮೆ ಹಿಂತಿರುಗಿ ಅವಲೋಕಿಸಿದರೆ ಕಾಣುವುದೇನು? ಬಟ್ಟೆ, ಕೈಗಡಿಯಾರ, ಕೃಷಿ ಸಲಕರಣೆ, ವಿದ್ಯುನ್ಮಾನ ಉಪಕರಣ ಅಥವಾ ಇನ್ನೇನೇ ಇರಲಿ, ಗೊಂದಲಕ್ಕೀಡಾಗುವಷ್ಟು ಥರಾವರಿ ಬಗೆಗಳು ಮಾರುಕಟ್ಟೆಯನ್ನು ವ್ಯಾಪಿಸಿವೆ. ಅವುಗಳಲ್ಲಿ ನಿಜಕ್ಕೂ ಅವಶ್ಯಕವಾದವುಗಳು ಯಾವುವು? ಅವುಗಳ ಗುಣಮಟ್ಟವೇನು? ಕೊಳ್ಳಲು ತಾವೆಷ್ಟು ಶಕ್ತರು? ಇತ್ಯಾದಿಗಳೆಲ್ಲ ಅರ್ಥವಾಗದೆ ಬಹುತೇಕ ಜನಸಾಮಾನ್ಯರು ದಿಗ್ಭ್ರಮೆಗೆ ಒಳಗಾಗಿದ್ದಾರೆ!

ಸರ್ಕಾರಿ ಕ್ಷೇತ್ರ ಹಾಗೂ ಖಾಸಗಿ ವಲಯಗಳೆರಡೂ ನಿತ್ಯಜೀವನಕ್ಕೆ ಅವಶ್ಯವಿರುವ ತಂತ್ರಜ್ಞಾನಗಳನ್ನು ತಮ್ಮದೇ ರೀತಿಯಲ್ಲಿ ಜನರಿಂದ ದೂರವಿರಿಸಲು ಪ್ರಯತ್ನಿಸುತ್ತಿರುವಂತಿವೆ. ಜನರನ್ನು ಸದಾ ತಮ್ಮ ಅವಲಂಬಿಗಳನ್ನಾಗಿಸುವುದರಲ್ಲೇ ಅವುಗಳ ಅಸ್ತಿತ್ವ ಅಡಗಿದೆಯಲ್ಲವೇ? ಹಾಗಾದರೆ, ಜನಸಾಮಾನ್ಯರ ಅಗತ್ಯದ ತಂತ್ರಜ್ಞಾನ ಎಂದರೇನು? ಅದು ಯಾವುದು? ಇದಕ್ಕೆ ಸರಳವಾಗಿ ಉತ್ತರಿಸಬೇಕೆಂದರೆ, ‘ದೇಶಕಾಲಕ್ಕೆ ಅನುಗುಣವಾಗಿ ಸಮುದಾಯಗಳೇ ತಮ್ಮ ಆದ್ಯತೆಗಳನ್ನು ಕಂಡುಕೊಂಡು ಅಳವಡಿಸಿಕೊಳ್ಳುವ ತಂತ್ರಜ್ಞಾನ’ ಎನ್ನಬಹುದು. ಅದಕ್ಕೆ ಅಗತ್ಯವಾದ ಪೂರಕ ಆವರಣವನ್ನು ನಿರ್ಮಿಸುವ ಜವಾಬ್ದಾರಿಯು ಸರ್ಕಾರ ಹಾಗೂ ಖಾಸಗಿ ಕ್ಷೇತ್ರಗಳದ್ದಾಗಬೇಕು.ಗಾಂಧೀಜಿಯ ಸ್ವದೇಶಿ ಕಲ್ಪನೆಯ ಮೂಲದ್ರವ್ಯ ಅದು. ತಂತ್ರಜ್ಞಾನವನ್ನು ಈ ರೀತಿಯಲ್ಲಿ ಸಮಾಜಮುಖಿಯಾಗಿಸಲು ಯತ್ನಿಸಿ, ಅದರ ವಿಧಿ-ವಿಧಾನಗಳ ಕುರಿತೂ ಚಿಂತಿಸಿದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಇ.ಎಫ್. ಶುಮೇಕರ್ ತರಹದ ಚಿಂತಕರ ಶ್ರಮದ ಫಲವಾಗಿ, ಅದು ‘ಸೂಕ್ತ-ತಂತ್ರಜ್ಞಾನ’ (Appropriate Technology) ಎಂದೇ ಪ್ರಚಲಿತವಾಯಿತು. ಭಾರತದಲ್ಲಿ ಸಹ ಸ್ವಾತಂತ್ರ್ಯ ಬಂದಮೇಲೆ ಈ ಬಗೆಯ ‘ಸೂಕ್ತ-ತಂತ್ರಜ್ಞಾನ’ಗಳ ಅಭಿವೃದ್ಧಿ ಹಾಗೂ ಅಳವಡಿಕೆಯ ವ್ಯಾಪಕ ಪ್ರಯತ್ನಗಳಾದವು. ಎ.ಕೆ.ಎನ್. ರೆಡ್ಡಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಸ್ಥಾಪಿಸಿದ ‘ಅಸ್ತ್ರ’ ಕೇಂದ್ರವು ಈ ನಿಟ್ಟಿನಲ್ಲಿ ಕೈಗೊಂಡ ಸಂಶೋಧನೆ ಹಾಗೂ ವಿಸ್ತರಣೆ ಕಾರ್ಯಗಳು ಜಾಗತಿಕ ಮೌಲ್ಯವನ್ನು ಹೊಂದಿದ್ದಂತಹವು. ಸಗಣಿಯಿಂದ ಗೋಬರ್ ಗ್ಯಾಸ್ ತಯಾರಿಸುವ ಯಂತ್ರ, ಸೌರಒಲೆ, ಕಡಿಮೆ ಕಟ್ಟಿಗೆ ಬಳಸುವ ಹೊಗೆರಹಿತ ಒಲೆ, ಬೀಜದಿಂದ ಸಿಪ್ಪೆ ಬಿಡಿಸುವ ಯಂತ್ರ, ಕಸದಿಂದ ವಿದ್ಯುತ್ ಉತ್ಪಾದನೆ ಇತ್ಯಾದಿ. ದೇಶದಾದ್ಯಂತ ಕೋಟ್ಯಂತರ ಕುಟುಂಬಗಳ ಬದುಕನ್ನು ಬದಲಾಯಿಸಿದ ಮೌನಕ್ರಾಂತಿಯದು.

ಹಾಗಾದರೆ, ಈ ‘ಸೂಕ್ತ-ತಂತ್ರಜ್ಞಾನ’ಗಳ ಸ್ವರೂಪವೇನು? ಇದನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು. ಮೊದಲಿನದು, ಅದರ ಮೂಲದ ಕುರಿತು. ‘ಗೋಬರ್-ಅನಿಲ’ವನ್ನೇ ಒಮ್ಮೆ ಗಮನಿಸಿ. ಸಗಣಿಯಲ್ಲಿನ ಸೂಕ್ಷ್ಮಾಣು ಜೀವಿಗಳು ಆಮ್ಲಜನಕರಹಿತ ಸ್ಥಿತಿಯಲ್ಲಿ ಉತ್ಪಾದಿಸುವ ಮಿಥೇನ್ ಅನಿಲ ಅಧಾರಿತ ಈ ಇಂಧನವು ಆಧುನಿಕ ಜೀವವಿಜ್ಞಾನದ ಕಾಣ್ಕೆ. ಮಲೆನಾಡು ಅಥವಾ ಕರಾವಳಿಯ ಹಳ್ಳಿಗಳಲ್ಲಿ ನದಿ-ತೊರೆಗಳಿಗೆ ಅಡ್ಡಲಾಗಿ ಸ್ಥಳೀಯರೇ ನಿರ್ಮಿಸುವ ಒಡ್ಡುಗಳು, ಲಾಗಾಯ್ತಿನಿಂದಲೂ ಬೇಸಿಗೆಯಲ್ಲಿ ನೀರು ಪೂರೈಸುವ ಒಂದು ಯಶಸ್ವೀ ತಂತ್ರ. ಪಾರಂಪರಿಕ ಜ್ಞಾನದ ಕೊಡುಗೆಯದು. ಹಳ್ಳಿ-ನಗರವಾಸಿಗಳ ವರ್ತಮಾನದ ಬದುಕಿನ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಲು, ಪ್ರಾಚೀನ ಹಾಗೂ ಅರ್ವಾಚೀನ ಜ್ಞಾನ ಮೂಲಗಳೆರಡನ್ನೂ ಸೂಕ್ತವಾಗಿ ಒಗ್ಗಿಸಿಕೊಳ್ಳುವುದೇ ಇಲ್ಲಿರುವ ಮೂಲಸೂತ್ರ.

ಎರಡನೆಯದು, ಇದರ ಲಭ್ಯತೆ ಹಾಗೂ ನಿರ್ವಹಣೆ ಕುರಿತಾಗಿ. ‘ಸೂಕ್ತ-ತಂತ್ರಜ್ಞಾನ’ಗಳು ಸುಲಭವಾಗಿ ಜನರ ಕೈಗೆಟುಕಬೇಕು. ಕಡಿಮೆ ಕಟ್ಟಿಗೆ ಬೇಡುವ ಸುಧಾರಿತ ಒಲೆಗಳು ಇದಕ್ಕೆ ಒಳ್ಳೆಯ ಉದಾಹರಣೆ. ಕಡಿಮೆ ವೆಚ್ಚ ಹಾಗೂ ಸರಳ ತಂತ್ರಗಳ ಈ ಒಲೆಗಳು, ಗ್ರಾಮೀಣ ಕುಟುಂಬಗಳ ಉರುವಲು ಕಟ್ಟಿಗೆ ಅವಲಂಬನೆಯನ್ನು ಕಡಿಮೆ ಮಾಡಬಲ್ಲವು. ಜೊತೆಗೆ, ಮನೆಗಳನ್ನು ಹೊಗೆ ರಹಿತವಾಗಿಸಿ ಕುಟುಂಬದ ಆರೋಗ್ಯವನ್ನೂ ಕಾಯಬಲ್ಲವು. ಇವುಗಳ ಸ್ಥಾಪನೆ ಹಾಗೂ ನಿರ್ವಹಣೆಯು ತರಬೇತಿ ಪಡೆದ ಸ್ಥಳೀಯ ಕುಶಲ ಕರ್ಮಿಗಳಿಂದಲೇ ಸಾಧ್ಯ. ಎಂಬತ್ತರ ದಶಕದಲ್ಲಿ ಕೊಳವೆಬಾವಿಗಳ ಮೂಲಕ ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಬವಣೆ ನೀಗಿಸಿದ ನಜೀರ್‌ ಸಾಬ್‌ ಅವರ ಸಾಧನೆಯಲ್ಲಿ, ಕೊಳವೆಬಾವಿಗಳಿಗೆ ಅಳವಡಿಸಿದ ಸರಳ ಕೈ-ಪಂಪುಗಳ ಕೊಡುಗೆ ಮಹತ್ವದ್ದಾಗಿತ್ತಲ್ಲವೇ? ಸರಳ ತಂತ್ರಜ್ಞಾನವನ್ನು ತಳಮಟ್ಟದಲ್ಲಿ ಅರ್ಥಪೂರ್ಣವಾಗಿ ಅಳವಡಿಸಿದ ಯಶೋಗಾಥೆಗಳಿವು.

ಕೊನೆಯದಾಗಿ, ಇವುಗಳ ಸುಸ್ಥಿರತೆ ಮತ್ತು ಸರ್ವಸ್ಪರ್ಶಿ ಗುಣ. ಇವು ಪರಿಸರ ಸುರಕ್ಷತೆ ಪಾಲಿಸಬೇಕು ಹಾಗೂ ಬಡವ-ಬಲ್ಲಿದರೆನದೆ ಸರ್ವರಿಗೂ ಲಭ್ಯವಾಗಬೇಕು. ಕೇರಳವನ್ನು ಕರ್ಮಭೂಮಿಯನ್ನಾಗಿಸಿಕೊಂಡ ಬ್ರಿಟಿಷ್‌ ಮೂಲದ ವಾಸ್ತುಶಿಲ್ಪಿ ಲಾರಿ ಬೇಕರ್, ಸ್ಥಳೀಯ ಮಣ್ಣಿನಿಂದಲೇ ಗುಣಮಟ್ಟದ ಇಟ್ಟಿಗೆ ತಯಾರಿಸುವ ವಿಧಾನ ಅಭಿವೃದ್ಧಿಪಡಿಸಿ, ಕಟ್ಟಡ ವಿನ್ಯಾಸ ಹಾಗೂ ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಕಾಣಿಕೆ ಅದ್ಭುತವಾದುದು. ಈ ಇಟ್ಟಿಗೆ ಬಳಸಿ ನಿರ್ಮಿಸಿದ ಕಟ್ಟಡಗಳ ತಾಪಮಾನವು ಸಿಮೆಂಟ್ ಇಟ್ಟಿಗೆ ಮನೆಗಳಿಗಿಂತ ಕಡಿಮೆಯಿದ್ದು ಹಿತವಾದ ಪರಿಸರ ನಿರ್ಮಿಸಬಲ್ಲವು. ನಿರ್ಮಾಣ ವೆಚ್ಚ ಅಲ್ಪವಾದ್ದರಿಂದ, ಎಲ್ಲರ ಕೈಗೆಟುಕಬಲ್ಲದು ಕೂಡ. ನಮ್ಮಂಥ ಉಷ್ಣವಲಯದ ದೇಶಕ್ಕೆ ಹೇಳಿಮಾಡಿಸಿದ ತಂತ್ರಜ್ಞಾನವಿದು!

ಡಾ. ಕೇಶವ ಎಚ್. ಕೊರ್ಸೆ
ಡಾ. ಕೇಶವ ಎಚ್. ಕೊರ್ಸೆ

ಆದರೆ, ‘ಅಭಿವೃದ್ಧಿ’ಯನ್ನೇ ಸ್ವಂತ ಲಾಭದ ಉದ್ಯಮವಾಗಿಸಿಕೊಳ್ಳುತ್ತಿರುವ ಇಂದಿನ ಆಡಳಿತ ವ್ಯವಸ್ಥೆಗಳು ಹಾಗೂ ಖಾಸಗಿ ಉದ್ಯಮ ವಲಯಗಳಿಗೆ ಇದು ಬೇಕಿರುವಂತಿಲ್ಲ. ಇದಕ್ಕೆ ಬಹಳಷ್ಟು ಪುರಾವೆಗಳು ದೊರಕುತ್ತವೆ. ಮಲೆನಾಡು-ಕರಾವಳಿಯಲ್ಲಿ ರೈತರು ನಿರ್ಮಿಸುವ ಸರಳ ಒಡ್ಡುಗಳ ಸಂಗತಿಯನ್ನೇ ನೋಡಿ. ಅದಕ್ಕೆ ಹಳ್ಳಿಗರಿಗೆ ಬೇಕಾದ್ದು ಸರ್ಕಾರದ ಇನಿತು ಸಹಾಯಹಸ್ತ ಮಾತ್ರ. ಆದರೆ, ಸಣ್ಣ ನೀರಾವರಿ ಇಲಾಖೆಯು ಅದನ್ನು ಮಾಡದೆ, ರೈತ ಕಲ್ಯಾಣದ ಹೆಸರಿನಲ್ಲಿ ಕಾಂಕ್ರೀಟ್ ಅಣೆಕಟ್ಟುಗಳನ್ನು ಕಟ್ಟುವ ‘ಪಶ್ಚಿಮವಾಹಿನಿ ಯೋಜನೆ’ ಕೈಗೊಳ್ಳುತ್ತಿದೆ. ಇದು, ಸಾವಿರಾರು ಕೋಟಿ ಹಣ ಬೇಡುವ ಯೋಜನೆ. ಸರಳ ಒಡ್ಡು ಕಟ್ಟುವ ರೈತರ ಕೌಶಲವನ್ನೇ ಇದು ನುಂಗಿಹಾಕುತ್ತದೆ! ಸೂಕ್ತ ತಂತ್ರಜ್ಞಾನದಿಂದ ಜನರನ್ನು ದೂರವಿರಿಸುವ ಅವಿವೇಕಕ್ಕೆ ತಾಜಾ ಉದಾಹರಣೆಯಿದು.
ಕನಿಷ್ಠ ಹಣ ಹಾಗೂ ಗರಿಷ್ಠ ಜನಸಹಭಾಗಿತ್ವವಿರುವ ‘ಸೂಕ್ತ-ತಂತ್ರಜ್ಞಾನ’ಗಳಿಗೆ ಸಮಾಜವು ಈಗಲಾದರೂ ಒತ್ತಾಸೆಯಾಗಿ ನಿಲ್ಲಬೇಕಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT