ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಭಾರತಕ್ಕೆ ಬೆಂಚ್‌ ಶಕ್ತಿಯೇ ಸವಾಲು

ಭಾರತ ಕ್ರಿಕೆಟ್ ತಂಡದ ಯುವ ಮತ್ತು ಅನುಭವಿ ಆಟಗಾರರಲ್ಲಿ ಸಮತೋಲನ ಸಾಧಿಸುವ ಸವಾಲಿದೆ
Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ನಲ್ಲಿ ಈಗ ಆಡುತ್ತಿರುವ ವೇಗದ ಬೌಲರ್‌ಗಳಲ್ಲಿ ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್ಸನ್ ಮತ್ತು ಜೋಫ್ರಾ ಆರ್ಚರ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಇವರ ಸ್ವಿಂಗ್ ಮತ್ತು ಬಿರುಸಿನ ಬೌನ್ಸರ್‌ಗಳನ್ನು ಎದುರಿಸಲು ವಿಶ್ವದ ಎಲ್ಲ ಕ್ರಿಕೆಟ್ ತಂಡಗಳ ಬ್ಯಾಟ್ಸ್‌ಮನ್‌ಗಳೂ ವಿಶೇಷ ತಯಾರಿ ನಡೆಸುತ್ತಾರೆ.

ಆದರೆ, ಭಾರತದ ಚಿಗುರುಮೀಸೆಯ ಹುಡುಗ ರಿಷಭ್ ಪಂತ್ ಈ ಇಬ್ಬರೂ ಬೌಲರ್‌ಗಳಿಗೆ ಈಚೆಗೆ ಸಿಂಹಸ್ವಪ್ನವಾಗಿಬಿಟ್ಟಿದ್ದಾರೆ. ಮೊಟೇರಾದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಟಿ20 ಪಂದ್ಯದಲ್ಲಿ ಜೋಫ್ರಾ ಆರ್ಚರ್‌ ವೇಗದ ಎಸೆತಗಳನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್‌ಗೆ ಎತ್ತಿದ ರಿಷಭ್ ಅಚ್ಚರಿ ಮೂಡಿಸಿದ್ದಾರೆ. ರಿಷಭ್‌ಗೆ ಇಂತಹ ದಿಟ್ಟತನ ಬಂದಿದ್ದು ಹೇಗೆ? ಇದರ ಹಿಂದೆ ಭಾರತ ತಂಡದ ಇವತ್ತಿನ ಬೆಂಚ್‌ ಶಕ್ತಿಯ ಪ್ರಭಾವ ಇರಬಹುದೇ?

ರಾಷ್ಟ್ರೀಯ ತಂಡದ ಕಾಯ್ದಿಟ್ಟ ಆಟಗಾರರ ಪಟ್ಟಿಯಲ್ಲಿ ಇಂದು ನಾಮುಂದು, ತಾಮುಂದು ಎಂದು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಹಲವರು ಸಾಲುಗಟ್ಟಿದ್ದಾರೆ. ತಂಡದಲ್ಲಿರುವ ಅನುಭವಿ ಆಟಗಾರ ಗಾಯ ಗೊಂಡಾಗ ಅಥವಾ ವೈಯಕ್ತಿಕ ಕಾರಣಗಳಿಗೆ ರಜೆ ತೆಗೆದುಕೊಂಡಾಗ ಸಿಗುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಯುವಪ್ರತಿಭೆಗಳ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಬೇರೆ ದೇಶಗಳು ಹೊಟ್ಟೆಕಿಚ್ಚು ಪಡುವಷ್ಟು ಬೆಂಚ್‌ ಶಕ್ತಿ ಬೆಳೆದಿದೆ.

ಇದು ತಂಡದಲ್ಲಿ ಆಂತರಿಕ ಪೈಪೋಟಿಯನ್ನೂ ಹೆಚ್ಚಿಸಿದೆ. ಆದ್ದರಿಂದಲೇ ಹೊಸ ಕೌಶಲಗಳೊಂದಿಗೆ ಛಾಪು ಮೂಡಿಸುವ ಹಂಬಲ ಆಟಗಾರರಲ್ಲಿ ಹೆಚ್ಚಾಗುತ್ತಿದೆ. ಇದು ಕೂಡ ರಿಷಭ್ ರಿವರ್ಸ್‌ ಸ್ವೀಪ್ ಹಿಂದಿರುವ ಕಾರಣವೆನ್ನುವುದು ನಿಸ್ಸಂಶಯ. ಏಕೆಂದರೆ, ರಿಷಭ್ ವಿಫಲರಾದರೆ, ವಿಕೆಟ್‌ ಕೀಪಿಂಗ್– ಬ್ಯಾಟಿಂಗ್ ಮಾಡಲು ಕೆ.ಎಲ್. ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಸಿದ್ಧರಾಗಿದ್ದಾರೆ. ಇದು ಕೀಪಿಂಗ್‌ಗೆ ಮಾತ್ರವಲ್ಲ ಎಲ್ಲ ವಿಭಾಗಗಳಿಗೂ ಅನ್ವಯಿಸುತ್ತದೆ.

ಭಾರತ ತಂಡದ ಆರಂಭಿಕ ಬ್ಯಾಟಿಂಗ್ ಕಳೆದ ಟೆಸ್ಟ್ ಮತ್ತು ಸೀಮಿತ ಓವರ್‌ಗಳಲ್ಲಿ ಅಸ್ಥಿರತೆಯನ್ನು ಅನು ಭವಿಸಿದೆ. ಅದಕ್ಕಾಗಿಯೇ ಶುಭಮನ್ ಗಿಲ್, ಇಶಾನ್ ಕಿಶನ್‌ ಬೆಳಕಿಗೆ ಬಂದಿದ್ದಾರೆ. ರೋಹಿತ್, ಮಯಂಕ್ ಅಗರವಾಲ್, ಶಿಖರ್ ಧವನ್, ಕೆ.ಎಲ್.ರಾಹುಲ್, ಉಮೇಶ್ ಯಾದವ್ ಅವರಂತಹ ಅನುಭವಿಗಳು ಕೆಲವು ಪಂದ್ಯಗಳಲ್ಲಿ ಬೆಂಚ್‌ನಲ್ಲಿರಬೇಕಾಯಿತು. ಇತ್ತೀಚಿನ ದಿನಗಳಲ್ಲಿ ಸೀನಿಯರ್ ಆಟಗಾರರೂ ಯುವ ಆಟಗಾರರೊಂದಿಗೆ ಬೆಂಚ್ ಹಂಚಿಕೊಳ್ಳುತ್ತಿರುವುದು ವಿಶೇಷ. ಈ ಬೆಳವಣಿಗೆಯಿಂದ ತಂಡಕ್ಕೆ ನಿಜಕ್ಕೂ ಲಾಭವಾಗುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಆದರೆ ಇದರ ಇನ್ನೊಂದು ಮುಖವನ್ನು ವಿಶ್ಲೇಷಿ ಸುವುದು ಕೂಡ ಅಗತ್ಯ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡು ಹೊರಬಿದ್ದಿದ್ದ ರವೀಂದ್ರ ಜಡೇಜ, ಹನುಮವಿಹಾರಿ ಅವರು ಚೇತರಿಸಿಕೊಂಡ ಮೇಲೆ ತಂಡಕ್ಕೆ ಮರಳುತ್ತಾರೆ. ಆಗ ಅವರ ಬದಲಿಗೆ ಚೆನ್ನಾಗಿ ಆಡಿದ್ದ ಯುವ ಆಟಗಾರರು ಮತ್ತೆ ಕಣದಿಂದ ಹೊರಗುಳಿಯುತ್ತಾರೆ. ಇದು ಸರಿಯೇ? ಹಾಗಿದ್ದರೆ, ಇದನ್ನು ಸರಿದೂಗಿಸಲು ಏನು ಮಾಡಬಹುದು? ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಮಾದರಿಯಲ್ಲಿ ಭಾರತದಲ್ಲಿಯೂ ಟೆಸ್ಟ್ ಮತ್ತು ಸೀಮಿತ ಓವರ್‌ಗಳಿಗೆ ಪ್ರತ್ಯೇಕ ತಂಡಗಳನ್ನು ಮಾಡುವ ಅಗತ್ಯವಿದೆಯೇ?

ಈ ದಿಸೆಯಲ್ಲಿ ಒಂದು ಪ್ರಯೋಗ ಮಾಡಲು ಬಿಸಿಸಿಐ ಯೋಚಿಸುತ್ತಿದೆ. ಜೂನ್‌ನಲ್ಲಿ ಸೌತಾಂಪ್ಟನ್‌ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡಲು ವಿರಾಟ್ ಕೊಹ್ಲಿ ಬಳಗವು ತೆರಳಲಿದೆ. ಆದ್ದರಿಂದ ಅದೇ ತಿಂಗಳು ಆಯೋಜನೆ ಗೊಳ್ಳಬಹುದಾದ (ಇನ್ನೂ ದಿನಾಂಕ ಪ್ರಕಟವಾಗಿಲ್ಲ) ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಎರಡನೇ ತಂಡವನ್ನು ಸಿದ್ಧಗೊಳಿಸುತ್ತಿದೆಯಂತೆ. ಆ ತಂಡದಲ್ಲಿ ಪ್ರಮುಖ ಆಟಗಾರರು ಇರುವುದಿಲ್ಲ. ಬದಲಿಗೆ ಯುವ ತಂಡವು ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಪ್ರಯೋಗ ಯಶಸ್ವಿಯಾದರೆ, ಕೊರೊನಾ ಕಾಲದ ಬಯೋಬಬಲ್ ಒತ್ತಡಗಳನ್ನು ನಿಭಾಯಿಸಲು ಸಹಕಾರಿಯಾಗಬಹುದು.

ಇನ್ನೊಂದು ಕಡೆ ಹೊಸ ಹುಡುಗರ ಮಿಂಚಿನಾಟದ ಭರಾಟೆಯಲ್ಲಿ ಕೆಲವು ಅರ್ಹರು ಅವಕಾಶವಂಚಿತರಾಗಬಹುದು. ಇದಕ್ಕೆ ಕರ್ನಾಟಕದ ಮನೀಷ್ ಪಾಂಡೆ ಉತ್ತಮ ಉದಾಹರಣೆ. ಭಾರತ ತಂಡವನ್ನು 2015ರಿಂದಲೇ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರು ಪ್ರತಿನಿಧಿಸುತ್ತಿದ್ದಾರೆ. ಕೆಲವು ಪಂದ್ಯಗಳಲ್ಲಿ ಜಯದ ರೂವಾರಿಯೂ ಆಗಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲೂ ಅವರ ಸಾಧನೆ ಉತ್ತಮವಾಗಿದೆ. ಆದರೆ ಇದುವರೆಗೆ ಅವರಿಗೆ ಟೆಸ್ಟ್‌ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಗುಜರಾತ್‌ನ ಪ್ರಿಯಾಂಕ್ ಪಾಂಚಾಲ್ ಅವರ ಪ್ರತಿಭೆಗೂ ತಕ್ಕ ಮನ್ನಣೆ ಸಿಕ್ಕಿಲ್ಲ. ಹೋದ ಐಪಿಎಲ್‌ನಲ್ಲಿ ಮಿಂಚಿದ್ದ ರಾಹುಲ್ ತೆವಾಟಿಯಾ, ರಾಹುಲ್ ಚಾಹರ್ ಈಗ ರಾಷ್ಟ್ರೀಯ ತಂಡದಲ್ಲಿದ್ದಾರೆ. ಈ ವಿಷಯದಲ್ಲಿ ಎಚ್ಚರ ವಹಿಸುವ ಅವಶ್ಯಕತೆ ಮಂಡಳಿಗೆ ಖಂಡಿತವಾಗಿಯೂ ಇದೆ. ಏಕೆಂದರೆ, ಪ್ರತಿಭೆಗಳಿಗೆ ಅವಕಾಶ ನೀಡುವುದು ಉತ್ತಮ ವಿಚಾರವೇನೋ ಹೌದು. ಆದರೆ, ಹೊಸ ನೀರಿನಲ್ಲಿ ಅನುಭವ ಮತ್ತು ಸಾಧನೆಯು ಕೊಚ್ಚಿಹೋಗಲು ಬಿಡುವುದು ಸೂಕ್ತವಲ್ಲ.

ಮತ್ತೊಂದೆಡೆ, ಈಗ ಬರುತ್ತಿರುವ ಆಟಗಾರರು ಈ ಹಿಂದೆ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರಸಿಂಗ್ ಧೋನಿ, ರಾಹುಲ್ ದ್ರಾವಿಡ್, ಜಹೀರ್ ಖಾನ್ ಅವರಂತೆ ಬಹಳಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯುವುದು ಸಾಧ್ಯವಿಲ್ಲವೆನಿಸುತ್ತದೆ. ಒಂದೊಮ್ಮೆ ಸಚಿನ್ ರನ್‌ಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮೀರಿ ನಿಲ್ಲಬಹುದು. ಆದರೆ ಕೊಹ್ಲಿಯ ಆ ದಾಖಲೆಯನ್ನು ಮೀರಬೇಕಾದರೆ ಯುವ ಆಟಗಾರರು ತಮ್ಮ ಮನೋದೈಹಿಕ ಸಾಮರ್ಥ್ಯದ ಮಟ್ಟವನ್ನು ಬಹಳಷ್ಟು ಹೆಚ್ಚಿಸಿಕೊಳ್ಳಬೇಕು. ಹೈಜಂಪ್‌ ಕ್ರೀಡೆಯಲ್ಲಿ ಪ್ರತಿಯೊಂದು ಜಿಗಿತದ ನಂತರ ಅರ್ಹತಾ ಬಾರ್‌ ಅನ್ನು ಎತ್ತರಿಸುವ ಮಾದರಿಯಲ್ಲಿ ಸಾಧನೆಯ ಮಟ್ಟವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತ ಸಾಗಬೇಕು. ಇಲ್ಲದಿದ್ದರೆ ಈ ಪೈಪೋಟಿಯಲ್ಲಿ ದೀರ್ಘ ಕಾಲ ಸ್ಥಾನ ಪಡೆಯುವುದು ಕಷ್ಟ.

ಗಿರೀಶ ದೊಡ್ಡಮನಿ
ಗಿರೀಶ ದೊಡ್ಡಮನಿ

ಪ್ರತಿವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ದೇಶಿ ಟೂರ್ನಿಗಳಿಂದ ಹಲವಾರು ಯುವ ಆಟ ಗಾರರು ಬೆಳಕಿಗೆ ಬರುತ್ತಿದ್ದಾರೆ. ಅದರಿಂದಾಗಿ ಈ ಸ್ಪರ್ಧೆ ಏರ್ಪಟ್ಟಿದೆ. ಜೂನಿಯರ್ ಹಂತದ ರಾಷ್ಟ್ರೀಯ ತಂಡಗಳಿಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾಗ ಹಾಕಿದ್ದ ಅಡಿಪಾಯವೂ ಇದಕ್ಕೆ ಕಾರಣ. ಮಹೇಂದ್ರಸಿಂಗ್ ಧೋನಿ ನಾಯಕರಾಗಿದ್ದಾಗ ಯುವ ಆಟಗಾರರಿಗೆ ಸ್ಥಾನ ನೀಡಲು ಹಿಂಜರಿಯಲಿಲ್ಲ. ಟೀಕೆಗಳಿಗೆ ಜಗ್ಗಲಿಲ್ಲ. ವಿರಾಟ್ ಕೂಡ ಅದೇ ಜಾಡಿನಲ್ಲಿ ಮುಂದುವರಿದಿದ್ದಾರೆ.

‘ಕ್ರಿಕೆಟ್‌ ಆಡಳಿತದ ಆಯಕಟ್ಟಿನ ಸ್ಥಾನಗಳಲ್ಲಿ ಸೂಕ್ತ ವ್ಯಕ್ತಿಗಳನ್ನು ಕೂರಿಸಿದಾಗ ಇಂತಹ ಬದಲಾವಣೆ ಸಾಧ್ಯ’ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಈಚೆಗೆ ಶ್ಲಾಘಿಸಿದ್ದರು. ತಮ್ಮ ದೇಶದ ಕ್ರಿಕೆಟ್ ಮಂಡಳಿಗೆ ಪರೋಕ್ಷವಾಗಿ ಬುದ್ಧಿವಾದ ಹೇಳಿದ್ದರು. ಪಾಕ್ ಅಷ್ಟೇ ಏಕೆ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳಲ್ಲಿ ಹೊಸ ಪ್ರತಿಭೆಗಳ ಹರಿವು ಕಡಿಮೆಯಾಗಿದೆ. ನಿವೃತ್ತಿ ಘೋಷಿಸಿದ ನಂತರವೂ ಎಬಿ ಡಿವಿಲಿಯರ್ಸ್‌ ಅವರನ್ನು ತಂಡಕ್ಕೆ ಮರಳಿ ಕರೆಸುವ ಪ್ರಯತ್ನ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. 1996ರ ವಿಶ್ವಕಪ್ ವಿಜೇತ ಲಂಕಾ ತಂಡವನ್ನು ಮರಳಿಕಟ್ಟಲು ಹರಸಾಹಸವೇ ನಡೆಯುತ್ತಿದೆ. ಆದರೆ ನಮ್ಮ ದೇಶದಲ್ಲಿ ಹರಿದುಬರುತ್ತಿರುವ ಪ್ರತಿಭಾನ್ವಿತ ಆಟಗಾರರ ಪ್ರವಾಹವನ್ನು ಸೂಕ್ತವಾಗಿ ನಿರ್ವಹಿಸಲು ಬಿಸಿಸಿಐ ಏನು ಹೆಜ್ಜೆಗಳನ್ನು ಇಡಲಿದೆ ಎಂಬ ಕುತೂಹಲ ಈಗ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT