ಮಂಗಳವಾರ, ಜುಲೈ 27, 2021
25 °C
ವನ್ಯಜೀವಿ ಅಧ್ಯಯನ ಮತ್ತು ಸಂರಕ್ಷಣೆಯ ಕ್ರಮಗಳು ಅವುಗಳಿಗೆ ಉರುಳಾಗಬಾರದು

ವನ್ಯಜೀವಿ ಛಾಯಾಗ್ರಹಣದ ನೈತಿಕ ಪ್ರಶ್ನೆ!

ಅಖಿಲೇಶ್‌ ಚಿಪ್ಪಳಿ Updated:

ಅಕ್ಷರ ಗಾತ್ರ : | |

Prajavani

ವನ್ಯಜೀವಿ ಅಧ್ಯಯನ ಮತ್ತು ಸಂರಕ್ಷಣೆ, ಅವುಗಳ ಜೀವನಕ್ರಮ ಅಭ್ಯಾಸದ ಜೊತೆಗೆ ಸುಂದರ ಪ್ರಾಣಿ–ಪಕ್ಷಿ–ಕೀಟಗಳ ಛಾಯಾಚಿತ್ರಗಳನ್ನು ತೆಗೆಯುವ ಹಲವು ಕ್ರಮಗಳು ಕಾಲಕಾಲಕ್ಕೆ ಟೀಕೆಗೆ ಒಳಗಾಗುತ್ತಿವೆ. ಹಾಗಂತ ಎಲ್ಲ ರೀತಿಯ ಕ್ರಮಗಳೂ ಪ್ರಶ್ನಾರ್ಹವಾಗಿವೆ ಎಂದು ಹೇಳಲು ಬರುವುದಿಲ್ಲ.

ಸೂರಕ್ಕಿಯು (ಸನ್ ಬರ್ಡ್) ತನ್ನ ಮರಿಗಳಿಗೆ ಆಹಾರ ತಿನ್ನಿಸುತ್ತಿರುವ ದೃಶ್ಯವೊಂದನ್ನು ಪರಿಚಯದ ವನ್ಯಜೀವಿ ಛಾಯಾಚಿತ್ರಕಾರರೊಬ್ಬರು ಫೇಸ್‌ಬುಕ್ಕಿನಲ್ಲಿ ಹಂಚಿಕೊಂಡಿದ್ದರು. ಅವರಿಗೆ ಫೋನ್ ಮಾಡಿ ‘ಈ ತರಹದ ಫೋಟೊ ತೆಗೆಯುವುದು ಹಕ್ಕಿಗಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಮತ್ತು ವನ್ಯಜೀವಿ ಛಾಯಾಚಿತ್ರಕಾರರ ನೈತಿಕತನವೂ ಅಲ್ಲ’ ಎಂಬ ಸಲಹೆ ನೀಡಿದೆ. ಹೊಸದಾಗಿ ವನ್ಯಜೀವಿ ಚಿತ್ರ ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದ ಅವರಿಗೆ ಈ ಸೂಕ್ಷ್ಮ ತಿಳಿದಿರಲಿಲ್ಲ. ಆಮೇಲೆ ತಿದ್ದಿಕೊಂಡರೆನ್ನಿ.

ಪ್ರಪಂಚದಲ್ಲಿ ಡ್ರೋನ್ ಯುಗ ಆರಂಭವಾದಂದಿ ನಿಂದ, ಅವುಗಳನ್ನು ಬಳಸಿ ವಿಡಿಯೊ ಚಿತ್ರೀಕರಣ ಮಾಡುವ ಗೀಳು ಎಲ್ಲೆಡೆ ಪ್ರಾರಂಭವಾಗಿದೆ. ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಂಡು ಅದ್ಭುತ ವನ್ಯಜೀವಿ ಸಾಕ್ಷ್ಯಚಿತ್ರಗಳನ್ನು ತೆಗೆದಿರುವುದನ್ನು ಅಲ್ಲಗಳೆಯಲಾಗದು. ಉದಾಹರಣೆಗೆ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಚಿತ್ರಿಸಿದ ‘ವೈಲ್ಡ್ ಕರ್ನಾಟಕ’ ಎಂಬ ಸಾಕ್ಷ್ಯಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಈ ಚಿತ್ರೀಕರಣದ ಸಂದರ್ಭದಲ್ಲಿ ಡ್ರೋನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಅದು ವಿದೇಶಿ ಕೊಕ್ಕರೆಯ ಮೇಲೆ ಬಿದ್ದು ಆ ಪಕ್ಷಿ ಸತ್ತುಹೋಯಿತು ಹಾಗೂ ಇದು ಎಲ್ಲೂ ದಾಖಲಾಗಲಿಲ್ಲ ಎಂಬುದನ್ನು ಇಲ್ಲಿ ಚರ್ಚೆಗೆ ತರುವುದು ಬೇಡ.

ರಷ್ಯಾದ ಓಕೋಟ್ಸ್ ಸಮುದ್ರದ ಪಕ್ಕದಲ್ಲಿರುವ ಹಿಮಾಚ್ಛಾದಿತ ಗುಡ್ಡವನ್ನು ಗಾಬರಿಯಿಂದ ಹತ್ತುತ್ತಿರುವ ತಾಯಿ ಕರಡಿ ಮತ್ತದರ ಮರಿಯ ವಿಡಿಯೊ ಜಾಲತಾಣದಲ್ಲಿ ಬಹಳ ಜನಪ್ರಿಯವಾಗಿತ್ತು. ವಿಪರೀತ ಜಾರಿಕೆಯಿಂದ ಕೂಡಿದ, ಕಡಿದಾದ, ದುರ್ಗಮವಾದ ಹಿಮಗುಡ್ಡವನ್ನು ತಾಯಿಯೇನೋ ಏರಿಬಿಟ್ಟಿತು. ಅದರ ಪುಟ್ಟಮರಿ ಮಾತ್ರ ಹಲವು ಪ್ರಯತ್ನಗಳ ನಂತರದಲ್ಲಿ ಹಿಮವನ್ನೇರಿ ತಾಯಿಯನ್ನು ಸೇರಿಕೊಂಡಿತು. ಸುಮಾರು ಮೂರು ನಿಮಿಷಗಳ ವಿಡಿಯೊ ನೋಡಿದಾಗ ಮೈಜುಮ್ಮೆನ್ನುತ್ತದೆ. ಹವ್ಯಾಸಿ ಛಾಯಾಗ್ರಾಹಕನೊಬ್ಬ ಡ್ರೋನ್ ಮೂಲಕ ಅತ್ಯುತ್ತಮ ವಿಡಿಯೊವನ್ನು ತೆಗೆಯುವ ಪ್ರಯತ್ನದಲ್ಲಿ ಸಂಭವಿಸಿದ ಘಟನೆಯಿದು. ಮೇಲ್ನೋಟಕ್ಕೆ ಇದೊಂದು ಸಾಟಿಯಿಲ್ಲದ ಅದ್ಭುತವಾದ ವಿಡಿಯೊ ಎಂದು ನೋಡುಗರಿಗೆ ತೋರುತ್ತದೆಯಾದರೂ, ಛಾಯಾಗ್ರಾಹಕನ ಶ್ರೇಷ್ಠತೆಯ ವ್ಯಸನಕ್ಕೆ ಕಾರಣವಾದ ಘಟನೆಯೆಂದೇ ವನ್ಯಜೀವಿ ತಜ್ಞರು ವಿಶ್ಲೇಷಿಸಿದ್ದಾರೆ.

ಹಿಮಾಚ್ಛಾದಿತ ಬೆಟ್ಟದಲ್ಲಿ ಕಲ್ಲುಬಂಡೆಗಳೂ ಇದ್ದವು. ತಾಯಿ ಕರಡಿಯು ಮರಿಯೊಂದಿಗೆ ಕಲ್ಲುಗಳನ್ನೇ ಬಳಸಿ ಬೆಟ್ಟವೇರುತ್ತಿತ್ತು. ಆ ಹೊತ್ತಿಗೆ ಡ್ರೋನ್ ಪ್ರವೇಶ ಕರಡಿಯ ಕುಟುಂಬವನ್ನು ಧೃತಿಗೆಡಿಸಿತು. ದಿಕ್ಕುತಪ್ಪಿದ ಕರಡಿ ಡ್ರೋನ್‍ನಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ಹಿಮಮುಚ್ಚಿದ ದಾರಿಯನ್ನು ಬಳಸಿತು. ದೃಢದೇಹ ಮತ್ತು ಅನುಭವದ ಕಾರಣಕ್ಕೆ ತಾಯಿ ಕರಡಿ ಕಷ್ಟದಿಂದಲೇ ಬೆಟ್ಟವೇರಿತು. ಅನುಭವವೂ ಇಲ್ಲದ, ಕಡಿಮೆ ಶಕ್ತಿ ಹೊಂದಿದ ಮರಿ ಕಷ್ಟಕ್ಕೆ ಸಿಲುಕಿತು. ಇನ್ನೇನು ಗುರಿ ಮುಟ್ಟಿತು ಎನ್ನುವ ಹೊತ್ತಿನಲ್ಲೇ ಡ್ರೋನ್ ಚಾಲಕ ಮರಿಯ ಹತ್ತಿರವೇ ಯಂತ್ರವನ್ನು ತಿರುಗಿಸುತ್ತಾನೆ. ತೀರಾ ಹತ್ತಿರಕ್ಕೆ ಬಂದ ಡ್ರೋನ್ ತನ್ನ ಮರಿಗೆ ಅಪಾಯ ಉಂಟು ಮಾಡಬಹುದು ಎನ್ನುವ ಭಯದಿಂದ, ತಾಯಿ ಕರಡಿ ಮುಂಗೈ ಬೀಸುತ್ತದೆ. ಮರಿಯು ಹಿಮವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಪ್ರಯತ್ನದಲ್ಲೇ ಪುನಃ ಪಾತಾಳಕ್ಕೆ ಜಾರುತ್ತದೆ. ಡ್ರೋನ್ ಶಬ್ದದ ಭಯದಿಂದಲೇ ಮತ್ತೆ ಚುರುಕಾಗಿ ಏರುವ ಪ್ರಯತ್ನ ಮಾಡಿ ತಾಯಿಯನ್ನು ಸೇರುವಲ್ಲಿ ಯಶಸ್ವಿಯಾಗುತ್ತದೆ. ಡ್ರೋನ್ ಚಾಲಕನ ಹುಚ್ಚಾಟದಿಂದ ಮರಿ ಹಿಮದಿಂದ ಜಾರಿಬಿದ್ದು ಸಾಯುವ ಎಲ್ಲ ಅಪಾಯವೂ ಇತ್ತು ಎಂದು ವನ್ಯಜೀವಿ ತಜ್ಞರು ವಿಶ್ಲೇಷಿಸಿದ್ದಾರೆ.

ದಕ್ಷಿಣದ ಚಿರಾಪುಂಜಿ ಎಂಬ ಖ್ಯಾತಿಯ ಆಗುಂಬೆ ದಟ್ಟ ಮಳೆಕಾಡುಗಳ ತವರು. ಈ ಗಿರಿಶಿಖರಗಳ ದಟ್ಟ ಕಾನನದಲ್ಲಿ ಪ್ರಪಂಚದಲ್ಲೇ ಅತ್ಯಪರೂಪವಾದ, ವಿಶಿಷ್ಟವಾದ ಮರಜೀವಿಯೊಂದು ವಾಸಿಸುತ್ತದೆ. ಅದೇ ಸಿಂಗಳೀಕ. ಪಶ್ಚಿಮಘಟ್ಟದ ಕೆಲವು ತಪ್ಪಲುಗಳಲ್ಲಿ ಮಾತ್ರ ಇವುಗಳ ಸಂತತಿ ಇದೆ. ಇಡೀ ಪ್ರಪಂಚದಲ್ಲಿ ಇವುಗಳ ಸಂಖ್ಯೆ ಬರೀ 3,000. ಇಂತಹ ದಟ್ಟ ಗುಡ್ಡಗಳ ನಡುವೆ ರಾಷ್ಟೀಯ ಹೆದ್ದಾರಿ 169ಎ ಹಾದು ಹೋಗುತ್ತದೆ. ಆಗುಂಬೆಯಿಂದ ಸೋಮೇಶ್ವರದವರೆಗಿನ ಹತ್ತು ಕಿಲೊ ಮೀಟರ್ ವ್ಯಾಪ್ತಿ ಬಹಳ ಅಪಾಯಕಾರಿಯಾದ ತಿರುವುಗಳುಳ್ಳ ಘಾಟಿ.

ಕಳೆದ ಐದು ವರ್ಷಗಳಿಂದ ಈ ಭಾಗದಲ್ಲಿ ಮಾನವ ಲೋಭದ ವಿದ್ಯಮಾನವೊಂದು ಪ್ರಾರಂಭವಾಯಿತು. ಕೆಲವು ವನ್ಯಜೀವಿ ಛಾಯಾಗ್ರಾಹಕರು ಮರದ ನೆತ್ತಿಯ ಮೇಲಿರುವ ಸಿಂಗಳೀಕಗಳ ಫೋಟೊಗಳಿಗೆ ಮುಗಿ ಬೀಳತೊಡಗಿದರು. ಬಹಳ ನಾಚಿಕೆ ಸ್ವಭಾವದ ಸಿಂಗಳೀಕಗಳು ಸುಲಭಕ್ಕೆ ಇವರ ಕ್ಯಾಮೆರಾ ಕಣ್ಣಿಗೆ
ಲಭ್ಯವಾಗುತ್ತಿರಲಿಲ್ಲ. ಹೇಗಾದರೂ ಮಾಡಿ ಅವುಗಳನ್ನು ಮರದ ನೆತ್ತಿಯಿಂದ ಕೆಳಗೆ ಬರುವ ಹಾಗೆ ಮಾಡಿದರೆ,  ಅವುಗಳ ಫೋಟೊ ತೆಗೆಯುವುದು ಸುಲಭ ಎಂಬ ದುಷ್ಟ ಯೋಚನೆಯೊಂದು ಬಂದಿದ್ದೇ ತಡ, ಕಾರ್ಯಗತವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಪೇಟೆಯ ರಾಸಾಯನಿಕಯುಕ್ತ ಹಣ್ಣು ಹಂಪಲು, ತರಕಾರಿಗಳು ಘಾಟಿಯ ತಿರುವುಗಳ ಬಳಿಗೆ ಬಂದು ಸಿಂಗಳೀಕಗಳಿಗೆ ಕಾದು ಕುಳಿತವು. ಮೊದ ಮೊದಲು ಮನುಷ್ಯರ ಪ್ರಯತ್ನ ಫಲಿಸಲಿಲ್ಲ. ಆನೆಯನ್ನೇ ಖೆಡ್ಡಾಕ್ಕೆ ಕೆಡವಿ ಬುದ್ಧಿ ಕಲಿಸಿದ, ಸಿಂಹದ ಬಾಯಿಯಲ್ಲಿ ತಲೆಯಿಟ್ಟು ತೋರಿಸಿ ಹಣ ಮಾಡುವ, ಹುಲಿಯನ್ನು ಬೆಕ್ಕಿನ ಮಟ್ಟಕ್ಕೆ ತಂದು ನಿಲ್ಲಿಸಿದ ನರನಿಗೆ, ಈ ವಾನರನನ್ನು ಕೆಳಗಿಳಿಸುವುದು ದೊಡ್ಡ ಮಾತೇ ಅಲ್ಲ ಬಿಡಿ.

ಸಿಂಗಳೀಕಗಳು ಮನುಷ್ಯರು ಇಟ್ಟ, ಸುಲಭದಲ್ಲಿ ಲಭ್ಯವಾಗುವ ಆಮಿಷದ ವಸ್ತುಗಳಿಗೆ ಮನಸೋತವು. ವನ್ಯಜೀವಿ ಛಾಯಾಗ್ರಾಹಕರಿಗೆ ಇದೊಂದು ಸುಸಂದರ್ಭ ವಾಯಿತು. ಮಾರುದ್ದದ ಕ್ಯಾಮೆರಾಗಳು ಲಕ್ಷಾಂತರ ಚಿತ್ರಗಳನ್ನು ತೆಗೆದವು. ಜಾಲತಾಣದಲ್ಲಿ ವಿಜೃಂಭಿಸಿದ ಸಿಂಗಳೀಕಗಳ ಛಾಯಾಚಿತ್ರಗಳು ಇನ್ನಷ್ಟು ಪ್ರವಾಸಿಗ
ರನ್ನು ಆಕರ್ಷಿಸಿದವು. ಹಣ್ಣು-ತರಕಾರಿ ಮಾರುವವರಿಗೆ ಶುಕ್ರದೆಸೆ. ಶನಿವಾರ ಮತ್ತು ಭಾನುವಾರ ಬರುವ ವೀಕೆಂಡ್ ಪ್ರವಾಸಿಗರಿಗೂ ಎಲ್ಲೂ ಕಾಣದ ಈ ಸಿಂಗಳೀಕಗಳು ಅಚ್ಚರಿ ಹುಟ್ಟಿಸಿದವು. ಪೇಟೆಯ ಹಣ್ಣು ತಿನ್ನುವ ಸಿಂಗಳೀಕಗಳು ಕುರುಕುರೆ ತಿನ್ನಲಾರವೇ? ಹೀಗೆ ಅವುಗಳ ಆರೋಗ್ಯ ಮತ್ತು ಪಚನಶಕ್ತಿಗೆ ಸವಾಲಾಗುವ ಮಾನವ ಅಂಗಡಿಯ ಎಲ್ಲಾ ವಸ್ತುಗಳಿಗೂ ದಾಸರಾದವು.

ನಾವೊಂದಿಷ್ಟು ಜನ ಈ ಕುರಿತು ಅರಣ್ಯ ಇಲಾಖೆಗೆ ತಕರಾರು ಸಲ್ಲಿಸಿದೆವು. ಅತ್ಯಪರೂಪದ ಸಿಂಗಳೀಕಗಳು ರಸ್ತೆಗೆ ಇಳಿದು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದು ಇಲಾಖೆಯವರನ್ನೂ ಆತಂಕಿತರನ್ನಾಗಿ ಮಾಡಿತ್ತು. ಫಲಿತಾಂಶವಾಗಿ ಒಂದಿಷ್ಟು ಜನ ಫಾರೆಸ್ಟರ್ ಮತ್ತು ಗಾರ್ಡ್‌ಗಳನ್ನು ನಿಯಮಿಸಿದ ಅವರು, ಸಿಂಗಳೀಕಗಳು ರಸ್ತೆಗೆ ಬಾರದಂತೆ ತಡೆಯುವುದು ಮತ್ತು ಮನುಷ್ಯರು ಅವುಗಳಿಗೆ ತಿಂಡಿ ನೀಡದಂತೆ ನೋಡಿಕೊಳ್ಳುವು
ದಕ್ಕೆ ಮುಂದಾದರು. ವನ್ಯಜೀವಿಗಳಿಗೆ, ಸಿಂಗಳೀಕಗಳಿಗೆ ಯಾರೂ ಆಹಾರ ನೀಡಬಾರದು ಎಂಬ ದೊಡ್ಡ ದೊಡ್ಡ ಫಲಕಗಳನ್ನು ಪ್ರತೀ ತಿರುವಿನಲ್ಲೂ ಅಳವಡಿಸಲಾ
ಯಿತು. ತಿಂಡಿ ನೀಡುತ್ತಿದ್ದವರಿಗೆ ದಂಡ ಹಾಕಲಾಯಿತು. ಸುಲಭದ ತುತ್ತಿಗೆ ತುತ್ತಾದ ಸಿಂಗಳೀಕಗಳು ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡು, ರಸ್ತೆಯಗುಂಟ ಸಾಗಲು ಪ್ರಾರಂಭಿಸಿದವು. ಸಿಬ್ಬಂದಿಯ ಗಸ್ತು ಆ ಕಡೆ ತಿರುಗಿ ದಾಗ, ಇವು ಮತ್ತೆ ರಸ್ತೆಗೆ ಇಳಿಯುವುದು, ಪ್ರವಾಸಿಗರು ಎಲ್ಲ ಎಚ್ಚರಿಕೆಗಳನ್ನೂ ಧಿಕ್ಕರಿಸಿ ತಿಂಡಿ ನೀಡುವುದು ಮುಂದುವರಿದಿತ್ತು. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದಿದ್ದರೆ, ಅಪರೂಪದ ಈ ಸಂತತಿ ಸ್ಥಾನಿಕವಾಗಿ ಅಳಿದುಹೋಗುವುದರಲ್ಲಿ ಸಂಶಯ ಇರಲಿಲ್ಲ.

ಇಲಾಖೆ ಮತ್ತೆ ಸಭೆ ಕರೆಯಿತು. ಗಸ್ತು ತಿರುಗುತ್ತಾ ಪ್ರವಾಸಿಗರನ್ನು ಕಾಯುವುದಕ್ಕಿಂತ, ಸಿಂಗಳೀಕಗಳ ಗುಂಪನ್ನೇ ಕಾಯುವುದು ಮತ್ತು ಅವು ನೆಲಕ್ಕೆ ಇಳಿಯದಂತೆ ನೋಡಿಕೊಳ್ಳುವುದು ಎಂಬ ಸಲಹೆಯನ್ನು ಶಿವಮೊಗ್ಗದ ವನ್ಯಜೀವಿ ತಜ್ಞ ವಿನಾಯಕ ಸಭೆಯಲ್ಲಿ ನೀಡಿದರು. ವಾಸ್ತವಕ್ಕೆ ಹತ್ತಿರವಾದ ಈ ಸಲಹೆ ಎಲ್ಲರಿಗೂ ಒಪ್ಪಿತವಾಯಿತು. ಸತತ ಒಂದು ತಿಂಗಳು ಇಲಾಖೆಯ ಸಿಬ್ಬಂದಿಯ ಅವಿರತ ಶ್ರಮದಿಂದ ಸಿಂಗಳೀಕಗಳು ಮತ್ತೆ ಕಾಡಿಗೆ ವಾಪಸ್‌ ಹೋಗಿ ತಮ್ಮ ಮೂಲ ನೆಲೆಯನ್ನು ಸೇರಿಕೊಂಡವು.

ಕಡೆಯದಾಗಿ, ಕೊರೊನಾ ಎಂಬ ಶಬ್ದ ಬಳಕೆಯಾದ ಪ್ರಮಾಣದ ಶೇ 1ರಷ್ಟಾದರೂ ಜೀವಿವೈವಿಧ್ಯ ಎಂಬ ಶಬ್ದ ಎಲ್ಲರ ಬಾಯಿಯಲ್ಲಿ ನಲಿದಿದ್ದರೆ, ಇವತ್ತು ಕೊರೊನಾ ತಂದೊಡ್ಡಿರುವ ಈ ಪರಿಸ್ಥಿತಿ ಇರುತ್ತಿರಲಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು