ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸ್ವಾತಂತ್ರ್ಯ ಚಳವಳಿಯ ಅಸಲಿ ಸಂದೇಶ

ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹೊಸಿಲಲ್ಲಿರುವ ದೇಶವು ತನ್ನ ಪ್ರಬುದ್ಧತೆಯನ್ನು ಜಗತ್ತಿಗೆ ಬಿಂಬಿಸಲು ಸಕಾಲ
Last Updated 16 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹೊಸಿಲಲ್ಲಿರುವ ದೇಶವು ತನ್ನ ಪ್ರಬುದ್ಧತೆಯನ್ನು ಜಗತ್ತಿಗೆ ಬಿಂಬಿಸಲು ಸಕಾಲ.

ಭಾರತ ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷ ತಲುಪಲಿರುವ ವರ್ಷಾಚರಣೆಯ ಗಡಿಬಿಡಿ ಶುರುವಾಗ ತೊಡಗಿದೆ. ಸರ್ಕಾರಿ ಆಚರಣೆಗಳು ಆಳುವವರ ಸ್ವಾರ್ಥಕ್ಕೆ ಬಳಕೆ ಆಗುವುದರಿಂದ ಇಂಥ ಆಚರಣೆಗಳ ಬಗ್ಗೆ ಜನ ಸಿನಿಕರಾಗಿದ್ದಾರೆ. ಆದ್ದರಿಂದಲೇ ಸರ್ಕಾರಗಳ ಹೊರಗೆ ಸ್ವತಂತ್ರ ವೇದಿಕೆಗಳು ಸ್ವಾತಂತ್ರ್ಯ ಚಳವಳಿಯ ನಿಜವಾದ ಅರ್ಥವನ್ನು ಜನರಿಗೆ ತಿಳಿಸಿಹೇಳಬೇಕಾಗಿದೆ; ಭಾರತೀಯ ಸ್ವಾತಂತ್ರ್ಯ ಚಳವಳಿಯು ಸಮಾಜ ಸುಧಾರಣಾ ಚಳವಳಿಯಾಗಿ, ಆಧುನಿಕ ಭಾರತದ ನಿರ್ಮಾಣದ ಉತ್ಸಾಹವಾಗಿ ವಿಕಾಸಗೊಂಡ ಬಗೆಯನ್ನು ಒತ್ತಿ ಹೇಳಬೇಕಾಗಿದೆ. ಭಾರತದ ಸ್ವಾತಂತ್ರ್ಯ ಚಳವಳಿಯ ಇಂಥ ಆದರ್ಶಗಳು ಇನ್ನಿತರ ದೇಶಗಳ ಸ್ವಾತಂತ್ರ್ಯ ಚಳವಳಿಗಳಲ್ಲಿರಲಿಲ್ಲ; ಇದು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹಿರಿಮೆ ಎಂಬುದನ್ನು ಭಾರತೀಯರು ಮೊದಲು ಅರಿಯಬೇಕು.

ಮೊದಮೊದಲು ಖಚಿತ ಕೇಂದ್ರವಿಲ್ಲದೆ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯು ಗಾಂಧೀಜಿ ಬರುವತನಕ ಬಹುತೇಕ ಮನವಿ ಹಾಗೂ ಹಕ್ಕೊತ್ತಾಯ ಗಳ ಚಳವಳಿಯಾಗಿದ್ದುದನ್ನು ಅಂಬೇಡ್ಕರ್ ಗುರುತಿಸು ತ್ತಾರೆ. ಆರಂಭದಲ್ಲಿ ನೀಲಿ ಬೆಳೆಗಾರರ ಹೋರಾಟ, ಅಹಮದಾಬಾದಿನ ಗಿರಣಿ ಕಾರ್ಮಿಕರ ಹೋರಾಟ, ನಂತರ ಖೇಡಾ ರೈತರ ಹೋರಾಟದಲ್ಲಿ ಭಾಗಿಯಾದ ಗಾಂಧೀಜಿ, ಸ್ವಾತಂತ್ರ್ಯ ಚಳವಳಿಯನ್ನು ಸಮಾಜ ಪರಿವರ್ತನೆಯ ಜೊತೆಗೆ ಬೆಸೆದರು; ಗ್ರಾಮಭಾರತವನ್ನು ಕಟ್ಟಲೆತ್ನಿಸಿದರು. ಕಮ್ಯುನಿಸ್ಟರು ಸ್ವಾತಂತ್ರ್ಯ ಚಳವಳಿಗೆ ದುಡಿಯುವ ವರ್ಗದ ಚಳವಳಿಯ ಚಹರೆಯನ್ನು ತರಲೆತ್ನಿಸಿದರು. ದಲಿತರಿಗೆ ನಿಷಿದ್ಧವಾಗಿದ್ದ ಮಹಾಡ್ ಕೆರೆಯ ನೀರನ್ನು ಅಂಬೇಡ್ಕರ್ ಮುಟ್ಟಿ, ಮನುಸ್ಮೃತಿಯನ್ನು ಸುಟ್ಟು, ದಲಿತರ ಸ್ವಾತಂತ್ರ್ಯ ಹೋರಾಟವನ್ನು ಉದ್ಘಾಟಿಸಿದರು. ಆನಂತರ ಗಾಂಧೀಜಿ ‘ಹರಿಜನ ಪ್ರವಾಸ’ದ ಮೂಲಕ ಜಾತೀಯ ಮನಸ್ಸನ್ನು ಬದಲಿಸ ಲೆತ್ನಿಸಿದರು. ಅತ್ತ ನೆಹರೂ ಆಧುನಿಕ- ಜಾತ್ಯತೀತ ಭಾರತವನ್ನು ರೂಪಿಸಲೆತ್ನಿಸುತ್ತಿದ್ದರು; ಸಮಾಜ ವಾದಿಗಳು ಸರ್ವಸಮಾನತೆಯ ಚಿಂತನೆಗಳನ್ನು, ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳನ್ನು, ರೈತಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಮಿಶನರಿಗಳು ಹಾಗೂ ವಸಾಹತು ಸರ್ಕಾರದ ನಿರ್ಧಾರಗಳಿಂದ ಎಲ್ಲ ಜಾತಿಗಳಿಗೂ, ಅದರಲ್ಲೂ ಮುಖ್ಯವಾಗಿ ಸ್ತ್ರೀಯರಿಗೆ ಶಿಕ್ಷಣ ದೊರಕತೊಡಗಿತು. ಜಾತಿ, ಮತಗಳ ಸಂಕುಚಿತತೆಯಿಂದ ಹೊರಬಂದು ಯೋಚಿಸುವ ಸ್ವತಂತ್ರ ಮನಸ್ಸಿನ ‘ವ್ಯಕ್ತಿ’ಗಳು ರೂಪುಗೊಳ್ಳತೊಡಗಿದರು. ಇದರ ನಡುವೆಯೂ, ಧರ್ಮದ ಹೆಸರಿನಲ್ಲಿ ದೇಶ ಒಡೆಯುತ್ತಿದ್ದ ಮೂಲಭೂತವಾದಿಗಳು ಇಂಥ ಬೆಳವಣಿಗೆಗಳ ಒಳ್ಳೆಯ ಬೆಳೆಯನ್ನು ನಾಶ ಮಾಡಲೆತ್ನಿಸುತ್ತಾ, ದೇಶವನ್ನು ಹಿಂದುಹಿಂದಕ್ಕೆ ಕೊಂಡೊಯ್ಯಲೆತ್ನಿಸುತ್ತಿದ್ದರು.

ಸ್ವಾತಂತ್ರ್ಯಾನಂತರದ ವಿಚಿತ್ರ ಬೆಳವಣಿಗೆಯೊಂದನ್ನು ಗಮನಿಸಿ: ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ದೇಶ ವಿಭಜನೆಯನ್ನೇ ಗುರಿಯಾಗಿಸಿಕೊಂಡಿದ್ದ ಮನಸ್ಸುಗಳು ವಿಭಜನೆಯನ್ನೇ ಮುಂದುವರಿಸಿದವು. ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ಮುಳುಗೆದ್ದು, ಸ್ವಾತಂತ್ರ್ಯದ ಕಲ್ಪನೆಯನ್ನು ವಿಸ್ತರಿಸುವ ಚಿಂತನೆ-ಚಟುವಟಿಕೆಗಳಲ್ಲಿ ತೊಡಗಿದ್ದ ವೇದಿಕೆಗಳು, ಪಕ್ಷಗಳು ತಾವು ನಡೆದುಬಂದ ಹಾದಿಯ ಸ್ಫೂರ್ತಿಮೂಲವನ್ನೇ ಮರೆತಂತಿವೆ. 136 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ಇಂದಿನ ಬಹುತೇಕ ನಾಯಕರಿಗೆ, ಕಾರ್ಯಕರ್ತರಿಗೆ ತಮ್ಮ ಪಕ್ಷ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿತ್ತೆಂಬ ಹೆಮ್ಮೆಯಾಗಲೀ ಪ್ರಜ್ಞೆಯಾಗಲೀ ಇದ್ದಂತಿಲ್ಲ!
ಸ್ವಾತಂತ್ರ್ಯಾನಂತರ ಸತತವಾಗಿ ಅಧಿಕಾರ ಹಿಡಿಯುತ್ತಾ ಬಂದ ಕಾಂಗ್ರೆಸ್ ಪಕ್ಷವು ಗಾಂಧೀಘಟ್ಟದ ಕಾಂಗ್ರೆಸ್ಸಿನಲ್ಲಿ ಸ್ವಾತಂತ್ರ್ಯ ಚಳವಳಿಯೂ, ಸಮಾಜ ಬದಲಾವಣೆಯೂ ಬೆರೆತಿದ್ದನ್ನೇ ಮರೆಯುತ್ತಾ ಜಡವಾಗತೊಡಗಿತು.

ಆದರೂ ಎಪ್ಪತ್ತರ ದಶಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಕ್ರಾಂತಿಕಾರಕ ಹಾವನೂರ್ ವರದಿಯನ್ನು ಹಾಗೂ ಭೂಸುಧಾರಣೆಯ ಮಾದರಿಯನ್ನು ಕೊಟ್ಟ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸ್ವಾತಂತ್ರ್ಯ ಚಳವಳಿಯ ಅರ್ಥವನ್ನು ವಿಸ್ತರಿಸಿತು. ಅದಕ್ಕೂ ಮೊದಲು ನೆಹರೂ ಯುಗದಲ್ಲೇ ಭೂಮಿಯ ಪ್ರಶ್ನೆಯನ್ನು ಕೈಗೆತ್ತಿ ಕೊಂಡಿದ್ದ ಗಾಂಧೀ ಶಿಷ್ಯ ವಿನೋಬಾ ಭಾವೆ ಅವರು ಭೂದಾನ ಹಾಗೂ ಸರ್ವೋದಯ ಚಳವಳಿಯನ್ನು ಮುನ್ನಡೆಸಿದ್ದರು. ತಮ್ಮ ತಾರುಣ್ಯದ ಮಾರ್ಕ್ಸಿಸ್ಟ್ ನೋಟ- ಸ್ವಾತಂತ್ರ್ಯ ಚಳವಳಿಯ ಕಾಂಗ್ರೆಸ್ ಸ್ಪಿರಿಟ್- ಸಮಾಜವಾದಿ ಚಿಂತನೆ ಮೂರನ್ನೂ ಬೆರೆಸಿ ನವನಿರ್ಮಾಣ ಕ್ರಾಂತಿಗೆ ಕರೆ ಕೊಟ್ಟ ಜಯಪ್ರಕಾಶ ನಾರಾಯಣ್, ಕಾಂಗ್ರೆಸ್ ನೇತೃತ್ವದ ಸರ್ಕಾರ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಹರಣಗೊಂಡ ವ್ಯಕ್ತಿಸ್ವಾತಂತ್ರ್ಯವನ್ನು ಮರಳಿ ಗಳಿಸಿಕೊಟ್ಟರು.

ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ದಲಿತ ವಿಮೋಚನೆಗಾಗಿ ಹೋರಾಡುತ್ತಾ ಬಂದಿರುವ ದಲಿತ ಸಂಘಟನೆಗಳು, ಅಸ್ಪೃಶ್ಯತೆ ಹಾಗೂ ಜಾತಿಪದ್ಧತಿಯ ದಮನವನ್ನು ಹಿಮ್ಮೆಟ್ಟಿಸುತ್ತಾ, ಜಾತ್ಯತೀತ ಭಾರತ ನಿರ್ಮಾಣದ ಕನಸನ್ನು ಕಾಯ್ದುಕೊಂಡು ಬಂದಿವೆ. ಇಲ್ಲಿ ಸ್ವಾತಂತ್ರ್ಯ ಚಳವಳಿಯ ಚೈತನ್ಯ ಸುಲಭವಾಗಿ ಅಳಿಯುವುದಿಲ್ಲವೆಂಬುದನ್ನು ಎಲ್ಲ ಕಾಲದ ಜನತಾ ಚಳವಳಿಗಳೂ ತೋರಿಸಿವೆ. ಭಾರತದಲ್ಲಿ ನಾಲ್ಕು ತಿಂಗಳಿಂದ ನಡೆಯು ತ್ತಿರುವ ರೈತ ಚಳವಳಿ ಈ ಶತಮಾನದ ಭಾರತೀಯ ಸ್ವಾತಂತ್ರ್ಯ ಚಳವಳಿಯ ಸ್ವರೂಪವನ್ನು ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದಕ್ಕೆ ಕಾರಣ, ರೈತ ಚಳವಳಿಗೆ ಅಹಿಂಸಾ ಮಾರ್ಗ ಹಾಗೂ ಗುರಿಗಳ ಬಗೆಗೆ ಇರುವ ಸ್ಪಷ್ಟತೆ. ಚಳವಳಿಯೊಳಗೆ ನುಗ್ಗಿ ಗೊಂದಲ ಎಬ್ಬಿಸಿದ ಪ್ರಾಯೋಜಿತ ಶಕ್ತಿಗಳನ್ನು ರೈತರು ಹಿಮ್ಮೆಟ್ಟಿಸಿದ ರೀತಿಯಲ್ಲೂ ಚಳವಳಿಯ ಗಟ್ಟಿತನ ಎದ್ದು ಕಾಣುತ್ತದೆ. ಈ ಹಿಂದೆ ರೈತ ಚಳವಳಿಯನ್ನು ಗಂಭೀರವಾಗಿ ಪರಿಗಣಿ ಸದಿದ್ದ ಎಡಪಂಥೀಯ ಪಕ್ಷಗಳು ಕೂಡ ದೇಶದ ಜೀವನ್ಮರಣದ ಸಮಸ್ಯೆಗಳನ್ನು ಎತ್ತುತ್ತಿರುವ ರೈತ ಚಳವಳಿಯ ಶಕ್ತಿಯನ್ನು ಅರಿತಂತಿವೆ.

ಸ್ವಾತಂತ್ರ್ಯ ಚಳವಳಿ ಹುಟ್ಟಿಸಿದ್ದ ಸದ್ಭಾವನೆಯ ಸಂದೇಶ, ಸ್ವಾತಂತ್ರ್ಯ ಬಂದ ಮೊದಲ ದಶಕಗಳಲ್ಲಿ ದೇಶ ಭಾಷೆಗಳ ಸಾಹಿತ್ಯ, ರಾಜಕಾರಣ, ರಂಗಭೂಮಿ, ಪತ್ರಿಕೋದ್ಯಮ, ಸಿನಿಮಾಗಳ ಮೂಲಕವೂ ಹಬ್ಬಿ ಸಹನೆ, ಎಲ್ಲ ಧರ್ಮಗಳ ಸಹಬಾಳ್ವೆಗಳ ಅಗತ್ಯ, ಮಹತ್ವ ಜನರಿಗೆ ಅರ್ಥವಾಗತೊಡಗಿತ್ತು. ಕರ್ನಾಟಕದಲ್ಲಿ ಸ್ವಾತಂತ್ರ್ಯದ ಹೊಸ ಅರ್ಥಗಳನ್ನು ಕುವೆಂಪು, ಕಾರಂತ, ಬಸವರಾಜ ಕಟ್ಟೀಮನಿಯವರಂಥವರು ಹಬ್ಬಿಸಿದಂತೆಯೇ ನಂತರದ ಸ್ತ್ರೀವಾದಿ ಲೇಖಕಿಯರೂ ಹಬ್ಬಿಸಿದ್ದಾರೆ; ‘ಯಾರಿಗೆ ಬಂತು? ಎಲ್ಲಿಗೆ ಬಂತು? ನಲವತ್ತೇಳರ ಸ್ವಾತಂತ್ರ್ಯ’ ಎಂಬ ಪ್ರಶ್ನೆ ಕರ್ನಾಟಕದ ಪ್ರತಿಭಟನಾ ಪ್ರಜ್ಞೆಯ ಭಾಗವಾಗಿಬಿಟ್ಟಿದೆ. ಸ್ವಾತಂತ್ರ್ಯ- ಸಮಾನತೆ- ಸಾಮಾಜಿಕ ನ್ಯಾಯ ಈ ಮೂರನ್ನೂ ಬೆಸೆದ ಚಿಂತನೆ ಈ ಕಾಲದಲ್ಲೂ ಗಟ್ಟಿಯಾಗಿಯೇ ಬೆಳೆಯುತ್ತಿದೆ. ದಲಿತ ಚಿಂತನೆ- ದಲಿತ ಚಳವಳಿ ಹಾಗೂ ಸ್ತ್ರೀವಾದಿ ಚಿಂತನೆಗಳು ಸ್ವಾತಂತ್ರ್ಯಾನಂತರದ ಕೇವಲ ಐವತ್ತು ವರ್ಷಗಳಲ್ಲಿ ಸಾವಿರಾರು ವರ್ಷಗಳ ಸನಾತನ ದಮನವನ್ನು ಹಿಮ್ಮೆಟ್ಟಿಸಲೆತ್ನಿಸಿವೆ.

ಇಷ್ಟೇ ಮುಖ್ಯವಾಗಿ, ಶ್ರಮಜೀವಿ ವರ್ಗಗಳು, ಕಾಳಜಿ, ಬದ್ಧತೆಗಳಿಂದ ಜ್ಞಾನಸೃಷ್ಟಿಯಲ್ಲಿ ತೊಡಗಿರುವ ಕೆಲವಾದರೂ ಅಕಡೆಮಿಕ್ ಹಾಗೂ ವಿಜ್ಞಾನ ವಲಯ ಗಳು ದೇಶದ ವಿಕಾಸಕ್ಕಾಗಿ ಕೊಡುಗೆ ನೀಡುತ್ತಲೇ ಇವೆ. ಸಿಟ್ಟಿಗೆದ್ದ ಜನ ಕಾಲಕಾಲಕ್ಕೆ ಕೆಟ್ಟ ಸರ್ಕಾರಗಳನ್ನು ಕಿತ್ತೊಗೆದಿದ್ದಾರೆ. ಜೊತೆಗೆ, ಇಂಥ ಆರೋಗ್ಯಕರ ಬೆಳವಣಿಗೆಗಳನ್ನು ಹೊಸಕಿಹಾಕಿ ಜನರ ಸ್ವಾತಂತ್ರ್ಯಹರಣ ಮಾಡುವ ಮಾರ್ಕೆಟ್ ಶಕ್ತಿಗಳು, ಕಂದಾಚಾರಿ ರಾಜಕೀಯ ಪಕ್ಷಗಳು- ಗುಂಪುಗಳ ಸಂಚೂ ಹೆಚ್ಚುತ್ತಿದೆ.

ನಟರಾಜ್ ಹುಳಿಯಾರ್‌
ನಟರಾಜ್ ಹುಳಿಯಾರ್‌

ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹೊಸಿಲಲ್ಲಿರುವ ದೇಶವೊಂದು ತನ್ನ ಮಾಗುವಿಕೆಯನ್ನು, ಪ್ರಬುದ್ಧತೆಯನ್ನು ಜಗತ್ತಿಗೆ ಬಿಂಬಿಸಲು ಇದು ಸಕಾಲ: ಬುದ್ಧ, ಗಾಂಧೀಜಿಯ ನಾಡು ಹಿಂಸಾಮಯ ಲೋಕಕ್ಕೆ ಅಹಿಂಸೆಯ ಮಹತ್ವವನ್ನು ವಿವರಿಸುತ್ತಾ, ತಾನೂ ಹಾಗೇ ನಡೆದುಕೊಳ್ಳಬೇಕಲ್ಲವೇ? ಸಾವಿರಾರು ವರ್ಷಗಳಿಂದ ಬಗೆಬಗೆಯ ಸಾಮಾಜಿಕ ಭೇದಗಳು ಬೇರೂರಿರುವ ಕಡೆಗಳಲ್ಲೆಲ್ಲ ಅಂಬೇಡ್ಕರ್ ಭಾರತ ಸಾಮಾಜಿಕ ನ್ಯಾಯದ ಹಾದಿ ತೋರಿಸುತ್ತಲೇ ಇರಬೇಕಲ್ಲವೇ? ಬ್ರಿಟಿಷ್ ಸರ್ಕಾರ ಜನತೆಯ ಚಳವಳಿಗಳನ್ನು ಬಗ್ಗುಬಡಿಯಲು ಬಳಸಿದ ಕುತಂತ್ರಗಳನ್ನು ಸ್ವದೇಶಿ ಸರ್ಕಾರಗಳೂ ಬಳಸುತ್ತಿರುವ ಕ್ರೌರ್ಯವನ್ನು ಸ್ವತಂತ್ರ ಭಾರತದ ಪ್ರಜೆಗಳು ನಿತ್ಯ ವಿರೋಧಿಸುತ್ತಲೇ ಇರಬೇಕಲ್ಲವೇ?

ಇವೆಲ್ಲದರ ಹಿನ್ನೆಲೆಯಲ್ಲಿ, ‘ಸ್ವಾತಂತ್ರ್ಯ-75’ರ ಆಚರಣೆ ಒಣ ಬಡಿವಾರವಾಗದಿರಲಿ; ಇದು 75 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯದ ಅರ್ಥವನ್ನು ವಿಸ್ತರಿಸಿರುವ ರೀತಿಯನ್ನು ಆಳವಾಗಿ ಚರ್ಚಿಸುವ ಸಂದರ್ಭವಾಗಲಿ; ಹಿರಿಯರಿಗೂ, ಕಿರಿಯರಿಗೂ ಸ್ವಾತಂತ್ರ್ಯದ ನಿಜವಾದ ಅರಿವನ್ನು ಹುಟ್ಟಿಸುವ ಅನನ್ಯ ಘಟ್ಟವಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT