ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಲೇಖನ: ಮುಚ್ಚಿಟ್ಟ ಚರಿತ್ರೆಗಳ ಬಿಚ್ಚಿಟ್ಟ ಕಥನ

ಮೌಲ್ಯಗಳ ಹೆಸರಿನಲ್ಲಿ ಹಿಂಸೆಯನ್ನೂ ಆಗಾಗ ಉತ್ಪಾದಿಸಿ ದಿಟವನ್ನು ಮರೆಮಾಚಲಾಗುತ್ತದೆ
Last Updated 26 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ
ಸಬಿತಾ ಬನ್ನಾಡಿ
ಸಬಿತಾ ಬನ್ನಾಡಿ
ADVERTISEMENT

1919ರ ಏಪ್ರಿಲ್ 13ರಂದು ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವನ್ನು ಮುಚ್ಚಿಡಲು ಡೈಯರ್, ಪತ್ರಿಕಾ ನಿಷೇಧವೂ ಸೇರಿ ಹಲವು ಶಾಸನ ತಂದ. ಪ್ರಕಟಿಸಿದ ಸಂಪಾದಕರನ್ನು ದೇಶದ್ರೋಹದ ಕಾಯ್ದೆಯಡಿ ಸೆರೆಮನೆಗೆ ತಳ್ಳಿದ. ಹಾಗಿದ್ದೂ ಜೂನ್ ಹೊತ್ತಿಗೆ ದೇಶಕ್ಕೆ ಅದು ತಿಳಿಯಿತು. ಸುದ್ದಿ ತಿಳಿದ ಗಾಂಧಿ, ಪಂಜಾಬ್‍ಗೆ ತೆರಳಲು ಹೊರಟಾಗ ಪ್ರವೇಶ ನಿರಾಕರಿಸಲಾಯಿತು. ಅಂದಿನಂತೆಯೇ ನಡೆದದ್ದನ್ನು ಮುಚ್ಚಿಡುವ, ಅದನ್ನು ಸಮರ್ಥಿಸುವ ಆಟವಿನ್ನೂ ಮುಂದುವರಿದಿದೆ.

ಗುಡ್ಡಕ್ಕೆ ಗುಡ್ಡ ಅಡ್ಡ ಇರುತ್ತೆ ಎನ್ನುವುದು ಲೋಕ ರೂಢಿಯ ಮಾತು. ಆದರೆ ಗುಡ್ಡಕ್ಕೆ ಗುಡ್ಡವನ್ನೇ ಅಡ್ಡ ನಿಲ್ಲಿಸಿ ಹಿಂದಿರುವುದನ್ನೇ ಮರೆ ಮಾಡಲಾಗುತ್ತದೆ ಎನ್ನುವುದು ಕಂಡೂ ಕಾಣದ ಮಾತು. ಬಹುಶಃ ಪ್ರತೀ ದಿನದ ‘ಫ್ಯಾಕ್ಟ್ ಚೆಕ್’ ಎಂಬ ಪ್ರಕಟಣೆ ಮುಂದೊಂದು ದಿನ ಇವತ್ತಿನ ಕಾಲಮಾನವು ಸುಳ್ಳುಗಳ ನಡುವೆ ಏದುಸಿರು ಬಿಡುತ್ತಿದ್ದುದಕ್ಕೆ, ಹಿಂದಿನ ಶಾಸನಗಳಷ್ಟೇ ಮಹತ್ವದ ದಾಖಲೆಯಾಗಿ ಒದಗಿಬರುತ್ತದೋ ಏನೋ!

ಒಂದೆಡೆ ನೇರ ಹತ್ಯಾಕಾಂಡಗಳು ನಡೆಯುತ್ತವೆ. ಇನ್ನೊಂದೆಡೆ ಮೌಲ್ಯಗಳನ್ನೇ ತಮಗೆ ಬೇಕಾದಂತೆ ತಿರುಚಿ ಎದುರಾಳಿಗಳನ್ನು ಮೌನವಾಗಿಸುವ ಕ್ರೌರ್ಯ ಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಅವುಗಳನ್ನು ಮಾಡಿದವರು ಎಲ್ಲ ಸವಲತ್ತುಗಳನ್ನೂ ಮನ್ನಣೆ
ಗಳನ್ನೂ ಶೋಷಿತರ ಕಣ್ಣಮುಂದೆಯೇ ಅನುಭವಿಸುತ್ತಿರುತ್ತಾರೆ. ಎದುರಾಳಿಗಳು ತಮ್ಮದೇ ದೇಶದ ಒಡನಾಡಿಗಳೂ ತಮ್ಮದೇ ಕುಟುಂಬದ ಸಹಜೀವಿಗಳೂ ಆಗಿರಬಹುದಾದುದು ಮನುಷ್ಯನ ಹೀನತೆಯ ಆತ್ಯಂತಿಕ ಸ್ಥಿತಿಯೂ ಆಗಿದೆ. ಇನ್ನು ಎದುರಾಳಿಗಳು ಅನ್ಯದೇಶದವರಾದರೆ ನಡೆಯುವ ಹಿಂಸೆಗೆ ಉನ್ಮಾದದ ಒಮ್ಮತವೂ ಸೇರಿಕೊಳ್ಳುತ್ತದೆ. ಹಿಂಸಾ ಮನಃಸ್ಥಿತಿಯನ್ನು ಆಗಾಗ ಬೇರೆ ಬೇರೆ ಮೌಲ್ಯಗಳ ಹೆಸರಿನಲ್ಲಿ ಉತ್ಪಾದಿಸಲಾಗುತ್ತದೆ. ರಾಜನನ್ನೇ ಪ್ರತ್ಯಕ್ಷ ದೇವತೆಯೆಂಬಂತೆ ನಂಬಿಸಿ, ಅವನಿಗಾಗಿ ಸಾಯುವುದನ್ನು ‘ಮೌಲ್ಯ’ವಾಗಿಸಲಾಗಿತ್ತು ಎಂಬುದನ್ನೇ ನೆನಪಿಸಿಕೊಂಡರೂ ಈ ಎಲ್ಲಾ‘ರಾಜಕಾರಣ’ಗಳು ಸ್ಪಷ್ಟಗೊಳ್ಳುತ್ತವೆ.

ಯುದ್ಧವನ್ನೇ ಆದರ್ಶವಾಗಿಸಿದಾಗ, ಯುದ್ಧದ ಭಾಗವಾಗಿ ಶತ್ರುದೇಶದ ಹೆಂಗಸರನ್ನು ಹೊತ್ತೊಯ್ಯುವುದನ್ನು ಸೈನಿಕರ ಹಕ್ಕಾಗಿಸಲಾಗುತ್ತದೆ. ಅಲ್ಲಿ ಹೆಣ್ಣು ಕೇವಲ ‘ಮೌನಿ’. ಇದು ಕೆಲವೊಮ್ಮೆ ದೇಶೀಯರ ನಡುವೆಯೂ ಸಂಭವಿಸಬಹುದು. ನಾನು ಹೀಗೆ ಹೇಳುವಾಗಲೇ ಹಲವರ ಮನಸ್ಸಿನ ಪರದೆಯ ಮೇಲೆ ಅಸ್ಸಾಂ ರೈಫಲ್ಸ್‌ನ ಕೆಲವು ಸೈನಿಕರ ಅತ್ಯಾಚಾರದ ವಿರುದ್ಧ ಮಣಿಪುರದ ಹೆಂಗಸರು ಮಾಡಿದ ಪ್ರತಿಭಟನೆ ನೆನಪಿಗೆ ಬರಬಹುದು. ಮನೆಮಂದಿಯ ಕಣ್ಣೆದುರೇ ಎಗ್ಗಿಲ್ಲದೆ ನಡೆಯುತ್ತಿದ್ದ ಅತ್ಯಾಚಾರಗಳಿಂದ ರೋಸಿಹೋದ ಹೆಂಗಸರು ಮೌನ ಮುರಿದರು. 2004ರ ಜುಲೈ 15ರಂದು ಹನ್ನೆರಡು ಜನ ತಾಯಂದಿರು ಬೆತ್ತಲಾಗಿ ‘ಇಂಡಿಯನ್ ಆರ್ಮಿ ರೇಪ್ ಅಸ್’ ಎಂಬ ಬ್ಯಾನರ್ ಅಡ್ಡ ಹಿಡಿದು ಇಂಫಾಲಾದಕಾಂಗ್ಲಾಫೋರ್ಟ್‌ನಲ್ಲಿ ಕಾಣಿಸಿಕೊಂಡರು. ಅಂದೇನೋ ಅದು ದೇಶದ ಜನರ ಗಮನ ಸೆಳೆಯಿತು. ಆದರೆ ಒಂದು ವೇಳೆ ಸೈನಿಕರ ವಿರುದ್ಧ ಮಾತಾಡುವುದೇ ಅಪರಾಧಎಂಬ ರೀತಿಯ ವಾತಾವರಣವು ಸೃಷ್ಟಿಯಾಗಿದ್ದಲ್ಲಿ ಇದೆಲ್ಲವನ್ನೂ ಮರೆಯಾಗಿಸಿ, ಪ್ರತಿಭಟಿಸಿದವರನ್ನೇ ಅಪರಾಧಿಗಳನ್ನಾಗಿಸಲಾಗುತ್ತದೆ! ಅಂತಹ ಸಂದರ್ಭದಲ್ಲಿ ಮಾತಾಡಿದರೆ ತಲೆದಂಡ ಆಗುವುದು ಬದಿಗಿರಲಿ, ಆ ಮಾತುಗಳನ್ನು ನಂಬದೇ ಇರುವ ಜನಮಾನಸದ ಜಾಯಮಾನವನ್ನು ಅರಗಿಸಿಕೊಳ್ಳುವುದು ಮಾತ್ರ ಗುಂಡೇಟಿಗಿಂತಲೂ ಕಠಿಣವಾದುದು.

ಇಂತಹ ಹಲವು ಮೌನಗಳು ಬಯಲಾದುದು ಚರಿತ್ರೆಯಲ್ಲಿ ಜಾಗವಿಲ್ಲದವರು ಆತ್ಮಚರಿತ್ರೆ ಬರೆಯಲು ತೊಡಗಿದಾಗ. ಈ ದೃಷ್ಟಿಯಿಂದ ಆತ್ಮಚರಿತ್ರೆಗಳನ್ನು ನಾನು ‘ಮಹತ್ವದ ಘಟನೆ’ ಎಂದೇ ಭಾವಿಸುತ್ತೇನೆ. ಡಚ್ ಮೂಲದ ಯಾನ್ ರಫ್-ಓ ಹರ್ನ್ ತಮ್ಮ ಆತ್ಮಚರಿತ್ರೆಗೆ ‘ಅರೆ ಶತಮಾನದ ಮೌನ’ ಎಂದೇ ಹೆಸರಿಟ್ಟಿದ್ದಾರೆ. ಜಪಾನ್ ದೇಶ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂಡೊನೇಷ್ಯಾ
ವನ್ನು ಆಕ್ರಮಿಸಿಕೊಂಡಾಗ ಆ ಸೈನಿಕರು ಡಚ್ ಹೆಂಗಸರ ಮೇಲೆ ಮಾಡಿದ ಆಕ್ರಮಣ ಈಕೆ ಬಾಯಿಬಿಡುವ ತನಕ ಚರಿತ್ರೆಯಲ್ಲಿ ಹುಗಿದುಹೋಗಿತ್ತು.

ಅಣುಬಾಂಬ್ ದಾಳಿಯ ನಂತರ ಜಗತ್ತಿನಲ್ಲಿ ತನ್ನ ಬಿಂಬವನ್ನು ಬದಲಿಸಿಕೊಂಡು ಜಪಾನ್ ಮತ್ತೆ ಬಲಾಢ್ಯ ದೇಶವಾಗಿ ಬೆಳೆದದ್ದನ್ನು ನೋಡುತ್ತಿದ್ದ ಯಾನ್ ಸಂಗಡಿಗರಿಗೆ ಯುದ್ಧ ಮುಗಿದ ಮೇಲೂ ಬಾಯಿಬಿಡಲಾಗದ್ದಕ್ಕೆ ಕಾರಣಗಳೇನು? ಇಂತಹ ಸೂಕ್ಷ್ಮಗಳನ್ನು ಅರಿಯದೇ ಜಗತ್ತು ಎಂದೂ ಸುಂದರ ತೋಟವಾಗಿ ಬದಲಾಗಲು ಸಾಧ್ಯವಿಲ್ಲ. ಯಾನ್‌ರಂತೆಯೇ ಮುಗ್ಧ, ಕುಟುಂಬದೊಳಗೆ ಸುರಕ್ಷಿತ ಚಂದದ ಬದುಕು ಬಾಳುತ್ತಿದ್ದ ಡಚ್ ಹೆಂಗಸರು, ಮಕ್ಕಳನ್ನು ಕೈದಿಗಳನ್ನಾಗಿ ಅತ್ಯಂತ ದುಸ್ತರ, ಅವಮಾನಿತ ವಾತಾವರಣದಲ್ಲಿ ಸಾವು ಬದುಕಿನ ನಡುವೆ ದೂಕಲಾಗಿತ್ತು. ಅದನ್ನು ಅರಗಿಸಿಕೊಳ್ಳಲಾಗದೇ ಹೊಟ್ಟೆಗಿಲ್ಲದೇ ಬಡವಾಗಿದ್ದ ಸನ್ನಿವೇಶ ದಲ್ಲಿ ಬದುಕುತ್ತಿದ್ದವರಲ್ಲಿ, ಹದಿನೆಂಟು– ಮೂವತ್ತರ ಒಳಗಿನ ಹೆಣ್ಣುಮಕ್ಕಳನ್ನು ಪ್ರತ್ಯೇಕಿಸಿ ಜಪಾನ್ ಸೈನಿಕರ ದೈಹಿಕ ತೃಷೆ ನೀಗಿಸಲು ತಳ್ಳಲಾಯಿತು. ದಿನವೊಂದರಲ್ಲಿ ಮೂವತ್ತರಿಂದ ಐವತ್ತು ಜನ ಅತ್ಯಾಚಾರವೆಸಗುವುದಲ್ಲದೆ, ಆ ಹೆಣ್ಣುಮಕ್ಕಳನ್ನು ವೇಶ್ಯೆಯರು ಎಂದು ಕರೆಯ ಲಾಯಿತು! ಅವರುಗಳಿಗೆ ಬಲವಂತದ ಗರ್ಭಪಾತಗಳನ್ನೂ ಮಾಡಲಾಯಿತು. ಮೂರು ತಿಂಗಳ ನಂತರ ಇದ್ದಕ್ಕಿದ್ದಂತೆ ಇದನ್ನು ನಿಲ್ಲಿಸಿ, ಬಾಯಿಬಿಟ್ಟರೆ ನಿಮ್ಮನ್ನೂ ಕುಟುಂಬದವರನ್ನೂ ಕೊಲ್ಲಲಾಗುವುದು ಎಂಬ ಬೆದರಿಕೆ ಒಡ್ಡಿ ಮತ್ತೆ ಹಳೆಯ ಶಿಬಿರಗಳಿಗೆ ಕಳಿಸಲಾಯಿತು. ಅವರಲ್ಲಿ ಕೆಲವರು ಇದನ್ನು ತಮ್ಮ ತಾಯಂದಿರಿಗೆ ಹೇಳಿದರೂ ಕೇಳಿಸಿಕೊಳ್ಳಲೇ ಹೆದರಿದ ಅವರು ಮತ್ತೆಂದೂ ಆ ವಿಷಯ ಎತ್ತಲೇ ಇಲ್ಲ.

ಯಾನ್ ಇವೆಲ್ಲವನ್ನೂ ತಾವು ಮದುವೆಯಾಗುವ ಮುನ್ನವೇ ಟಾಮ್‍ಗೆ ಹೇಳಿದ್ದರು. ಆತನೂ ಮುಂದೆ ಆ ವಿಷಯ ಎತ್ತದೇ ಅವಳೊಂದಿಗೆ ಅತ್ಯಂತ ಪ್ರೀತಿ, ಆತ್ಮೀಯತೆ, ಘನತೆಯಿಂದ ಬದುಕಿದರು. ತಮ್ಮೊಳಗೆ ಕೊರೆಯುತ್ತಲೇ ಇದ್ದ, ಈ ಅನ್ಯಾಯವನ್ನು ಹೊರ ಹಾಕಲೇಬೇಕು ಎಂಬ ಒತ್ತಡ ತುಡಿಯುತ್ತಲೇ ಇದ್ದು, ತಮ್ಮ ಮಕ್ಕಳು ಇದನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕದಿಂದಲೇ, ಒಂದು ದಿನ ಅದನ್ನು ಬರೆದು ಮಗಳಿಗೆ ಕೊಡುತ್ತಾರೆ. ಮಕ್ಕಳ ಬೆಂಬಲದಿಂದ ಅವರು ಎಲ್ಲವನ್ನೂ ಸಾರ್ವಜನಿಕಗೊಳಿಸಲು ಸಾಧ್ಯವಾಗು
ತ್ತದೆ. ಜಪಾನ್ ಇಂತಹ ಹೀನ ಕೃತ್ಯಕ್ಕೆ ಆ ಹೆಂಗಸರ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯವು ಮುನ್ನೆಲೆಗೆ ಬರುತ್ತದೆ. ಹೀಗಿದ್ದೂ ಇಂದಿಗೂ ಆ ಸನ್ನಿವೇಶದಲ್ಲಿ ಸಿಕ್ಕಿದ ಎಷ್ಟೋ ಹೆಂಗಸರು ತಮ್ಮನ್ನು ಮರೆಮಾಚಿಕೊಂಡೇ ಬದುಕಿದ್ದಾರೆ. ಯಾಕೆಂದರೆ, ತಾವು ಮಾಡದ ತಪ್ಪಿಗೆ ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡಗಳನ್ನು ಎದುರಿಸುವುದು ಇನ್ನೊಂದು ಘೋರ ಹಿಂಸೆ. ಯಾನ್ ಮುಂದೆ ಭೇಟಿ ಮಾಡಿದ ಆ ಕಾಲದ ಸೈನಿಕನೊಬ್ಬ, ತಾನೀಗ ಪಶ್ಚಾತ್ತಾಪ ದಲ್ಲಿ ಬೇಯುತ್ತಿದ್ದರೂ ಅಂದು ಅದೆಲ್ಲವೂ ಶೌರ್ಯ ಎಂದೇ ತಮ್ಮನ್ನು ನಂಬಿಸಲಾಗಿತ್ತು ಎನ್ನುತ್ತಾನೆ. ಕೇವಲ ನಂಬಿಸುವ ಮೂಲಕ ಎಲ್ಲ ಗುಡ್ಡದಂತಹ ತಪ್ಪುಗಳೂ ಕಡ್ಡಿಯಾಗಿಬಿಡುವ ವೈಚಿತ್ರ್ಯವಿದು.

ಇದು ಕೇವಲ ಹೊರಗಿನವರೊಂದಿಗೆ ನಡೆಯುತ್ತ ದೆಯೇ? ನಂಬಿ ಕೈಹಿಡಿದ ಗಂಡನೂ ಕ್ರೌರ್ಯದ ಯಾವೆಲ್ಲ ತುದಿಗೂ ಹೋಗಬಲ್ಲ. ಹೆಂಡತಿಯೆಂದರೆ ತಾನು ಎಷ್ಟು ಬೇಕಾದರೂ ಹಿಂಸಿಸಬಲ್ಲ ಸೊತ್ತು ಎಂಬ ನಂಬಿಕೆಯಿಂದ! ಡಾ. ವಿಜಯಾ ಅವರು ಬರೆದ ‘ಕುದಿ ಎಸರು’ ಕೂಡಾ ಹೀಗೇ ಇನ್ನೊಂದು ರೀತಿಯ ಅರೆಶತಮಾನದ ಮೌನದ ಮುರಿಯುವಿಕೆಯೇ. ದಾಂಪತ್ಯದೊಳಗೆ ಅತ್ಯಾಚಾರ ಎನ್ನುವುದು ನಮ್ಮ ಸಂಸ್ಕೃತಿಯೇ ಅಲ್ಲ ಎಂದು ವಾದಿಸುವ ಎಲ್ಲರಿಗೂ ಓದಿಸಲೇಬೇಕಾದ ಕೃತಿಯಿದು. ಸಂಸ್ಕೃತಿಯೆಂಬ ಕಲ್ಪಿತ ಸಂಗತಿಯನ್ನೇ ದೊಡ್ಡದಾಗಿಸಿ, ಜೀವಗಳು ನಲುಗುವುದನ್ನು ಕ್ಷುಲ್ಲಕಗೊಳಿಸುವ ಅಮಾನು ಷತೆಯ ಪ್ರತೀಕವಿದು. ವಿದ್ಯೆ, ಜಾತಿ ಇತ್ಯಾದಿಗಳಲ್ಲಿ
ಮೇಲೆನಿಸಿಕೊಂಡವರೆಲ್ಲ ಸುಸಂಸ್ಕೃತರು ಎಂಬ ಇನ್ನೊಂದು ಸ್ಥಾಪಿತ ಸುಳ್ಳು ಇಲ್ಲಿ ಬಯಲಾಗುತ್ತದೆ.

ಚರಿತ್ರೆಯಲ್ಲಿ ಹೂತಿಟ್ಟದ್ದು, ವರ್ತಮಾನದಲ್ಲಿ ಮರೆ ಯಾಗಿಸಿದ್ದು, ಭವಿಷ್ಯದಲ್ಲಾದರೂ ತೆರೆದುಕೊಳ್ಳದೇ ಇರದು. ತಮ್ಮವರಿಂದಲೇ ಅಟ್ಟಿಸಿಕೊಂಡು ಅವಿತಿದ್ದ ಶರಣರ ವಚನಗಳು ಮುನ್ನೂರು ವರ್ಷಗಳ ನಂತರ ವಾದರೂ ಮಾತಾಡಿದ ಪವಾಡದಂತೆ! ಮೌನ ಮಾತಾಗ ಬೇಕಾದ ತುರ್ತು ಎಲ್ಲ ವರ್ತಮಾನದಲ್ಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT