ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಆರ್.‌ಅನಂತರಾಮು ಲೇಖನ: ಹಾರುಬೂದಿಯ ಹಾರಾಟಕ್ಕೆ ಕಡಿವಾಣ

ಕಲ್ಲಿದ್ದಲು ಸ್ಥಾವರದ ಹಾರುಬೂದಿಗೇನೋ ಕಿಮ್ಮತ್ತು ಬಂತು. ಆದರೆ ಕಾರ್ಬನ್‌ ಡೈ ಆಕ್ಸೈಡ್‌ಗೆ?
Last Updated 10 ಫೆಬ್ರುವರಿ 2022, 21:45 IST
ಅಕ್ಷರ ಗಾತ್ರ

ಭಾರತದ ಶೇಕಡ 70ರಷ್ಟು ಭಾಗ ವಿದ್ಯುತ್‌ಉತ್ಪಾದನೆಯಾಗುತ್ತಿರುವುದು ಕಲ್ಲಿದ್ದಲು ಬಳಸುವ ಉಷ್ಣಸ್ಥಾವರಗಳಿಂದ ಎಂದು ಇದೀಗ ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿಯು ಸಮೀಕ್ಷಾ ವರದಿಯನ್ನು ನೀಡಿದೆ. ಆದರೆ ಇದು ಪ್ರಗತಿಯ ಅಳತೆಗೋಲಾಗ
ಬೇಕಿಲ್ಲ. ಬದಲು ಕಳವಳದ ಸಂಗತಿ. ವಿದ್ಯುತ್‌ ಬೇಕು, ಎರಡು ಮಾತಿಲ್ಲ. ಇದಕ್ಕಾಗಿಯೇ ದೇಶದಲ್ಲಿ 191 ಉಷ್ಣ
ಸ್ಥಾವರ ಘಟಕಗಳು ಹಗಲಿರುಳು ಕಾರ್ಯಶೀಲವಾಗಿವೆ.

ಈ ಮೂಲದಿಂದ 2.13 ಲಕ್ಷ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇದಕ್ಕಾಗಿ ಬಳಕೆಯಾಗುತ್ತಿರುವ ಕಲ್ಲಿದ್ದಲು 6,720 ಲಕ್ಷ ಟನ್ನು. ಸಾಮಾನ್ಯವಾಗಿ ಪರಿಸರ ಚಿಂತಕರ ಹೊರತು ಉಳಿದವರಿಗೆ ಇದರ ಹಿಂದಿರುವ ಮತ್ತೊಂದು ಸತ್ಯ ತಿಳಿಯದು. ಪ್ರತೀ ಟನ್ನು ಕಲ್ಲಿದ್ದಲು ಉರಿಸಿದಾಗಲೆಲ್ಲ ವಾಯುಗೋಳಕ್ಕೆ ಅದರ ಎರಡರಷ್ಟು ಪ್ರಮಾಣದ ಕಾರ್ಬನ್‌ ಡೈ ಆಕ್ಸೈಡ್‌ ಸೇರುತ್ತದೆ. ದೊಡ್ಡ ಮೊತ್ತದ ಸಲ್ಫರ್‌ ಡೈ ಆಕ್ಸೈಡ್‌ ಮತ್ತು ಕಾರ್ಬನ್‌ ಕಣ ಜೊತೆಗೂಡಿ ‘ಮಾಲಿನ್ಯಸ್ನೇಹಿ’ಯಾಗಿ ಮನುಷ್ಯರ ಬದುಕನ್ನೇ ಅಲ್ಲಾಡಿಸುತ್ತಿವೆ. ಈಗ ಅದೇ ಲೆಕ್ಕವನ್ನು ಇನ್ನೊಂದು ಕೋನದಲ್ಲಿ ನೋಡಿದಾಗ, 6,720 ಲಕ್ಷ ಟನ್ನು ಕಲ್ಲಿದ್ದಲು ಉರಿಸಿದಾಗ ಅದರಿಂದ 2,220 ಲಕ್ಷ ಟನ್ನು ಹಾರುಬೂದಿ ಉತ್ಪಾದನೆಯಾಗುತ್ತದೆ. ಇದರ ನಿರ್ವಹಣೆ ಹೇಗೆ ಎಂದು ಹಸಿರು ನ್ಯಾಯಮಂಡಳಿ ಕೇಳುತ್ತಿದೆ.

ಕಲ್ಲಿದ್ದಲು ಉರಿಸಿದಾಗಲೆಲ್ಲ ಹೊರಬೀಳುವ ಹಾರುಬೂದಿಯನ್ನು ತಡೆಯಲು ಸದ್ಯಕ್ಕೆ ಯಾವ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ. ಬೂದಿ ಹಾರಾಡದಂತೆ, ಸುತ್ತಣ ಫಲವತ್ತು ಭೂಮಿ ಹಾಳಾಗದಂತೆ, ಜಲಮೂಲ ಮಾಲಿನ್ಯವಾಗದಂತೆ ನಿರ್ವಹಿಸುವ ಹೊಣೆ ಸ್ಥಾವರಗಳ ಆಡಳಿತ ವರ್ಗಕ್ಕೆ ಸೇರಿದ್ದು. ‘ಕಾನೂನು ಇರುವುದೇ ಮುರಿಯಲೆಂದು’ ಎಂದು ಉಷ್ಣಸ್ಥಾವರಗಳನ್ನುನಿರ್ವಹಿಸುವವರು ವರ್ತಿಸಿದ್ದರಿಂದಲೇ ಹಸಿರು ನ್ಯಾಯಮಂಡಳಿಯು ಕಾನೂನನ್ನು ಬಿಗಿಗೊಳಿಸಬೇಕಾಯಿತು.

ಇದಕ್ಕೊಂದು ಗಾಸಿಗೊಳಿಸುವ ಹಿನ್ನೆಲೆಯೂ ಇದೆ. ಸಾಮಾನ್ಯವಾಗಿ ಯಾವುದೇ ಉಷ್ಣಸ್ಥಾವರದಲ್ಲಿಉತ್ಪತ್ತಿಯಾಗುವ ಬೂದಿಯನ್ನು ಕೆಸರು ಮಾಡಿ, ಹತ್ತಿರದಲ್ಲೇ ನಿರ್ಮಿಸಿದ ಏರಿ ಒಡ್ಡುಗಳಲ್ಲಿ ಸಂಗ್ರಹಿಸುವುದುಂಟು. ಎಲ್ಲ ಸ್ಥಾವರಗಳಲ್ಲೂ ಇದು ಕಡ್ಡಾಯ. ಇದೇನೂ ದೊಡ್ಡ ತಂತ್ರಜ್ಞಾನ ಬೇಡುವುದಿಲ್ಲ. ಆದರೆ ಕಟ್ಟೆಗಳೂ ತುಂಬಿಬರುತ್ತವೆ. 2000ದಲ್ಲಿ ಮಧ್ಯಪ್ರದೇಶದ ಸಿಂಗ್ರೋಲಿ ಎಂಬ ಬಳಿ ಬೂದಿಕಟ್ಟೆಯ ಏರು ಒಡೆದು ಮಳೆಗಾಲದಲ್ಲಿ ನದಿಯಾಗಿ ಹರಿದಾಗ, ಮಕ್ಕಳೂ ಸೇರಿದಂತೆ ಆರು ಮಂದಿ ಸತ್ತರು. ಬೆಳೆದು ನಿಂತಿದ್ದ ಬೆಳೆಯೆಲ್ಲ ನಾಶವಾಗಿ ಹಲವು ಕೋಟಿ ರೂಪಾಯಿಗಳ ನಷ್ಟವಾಯಿತು. ನ್ಯಾಯಮಂಡಳಿಯು ಪ್ರವೇಶಿಸಲೇಬೇಕಾಯಿತು. ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಸಿಕ್ಕಿತು. ಆದರೆ ಬೂದಿಯ ನಿರ್ವಹಣೆಗೆ ಪರಿಹಾರಇರಲಿಲ್ಲ. ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಹೋಯಿತು. ತತ್‌ಕ್ಷಣ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಮಿತಿ ರಚಿಸಬೇಕು, ಬೂದಿಯನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿ ಮಾಡುತ್ತೀರಿ ಎಂಬ ನೀಲನಕ್ಷೆಯನ್ನುಕೊಡಬೇಕು ಎಂದು ಕೇಳಿದೆ. ಹಾಲಿ, ಭಾರತದ ಎಲ್ಲ ಸ್ಥಾವರಗಳಿಂದ ಸಂಚಯನವಾಗಿರುವ ಬೂದಿ 16.70 ಕೋಟಿ ಟನ್ನು. ಒಟ್ಟಿಗೇ ರಾಶಿ ಹಾಕಿದರೆ ಬಹುಶಃ ನಂದಿಬೆಟ್ಟದಷ್ಟು ಎತ್ತರವಾಗಬಹುದು. ಇದೇ ಜನವರಿಯಲ್ಲಿ ನ್ಯಾಯಮಂಡಳಿ ನೋಟಿಸ್‌ ಜಾರಿ ಮಾಡಿದೆ. ಸ್ಥಾವರಗಳ ಆಡಳಿತವರ್ಗ ಉಪೇಕ್ಷಿಸಿದರೆ ಕೋಟ್ಯಂತರ ರೂಪಾಯಿ ಜುಲ್ಮಾನೆ ತೆರಬೇಕಾಗಬಹುದು.

ಸದ್ಯದಲ್ಲಿ ಭಾರತ ಅಡಕತ್ತರಿಗೆ ಸಿಕ್ಕಿಹಾಕಿಕೊಂಡಿದೆ. ನಮ್ಮಲ್ಲಿ 34,400 ಕೋಟಿ ಟನ್ನು ಕಲ್ಲಿದ್ದಲು ಭೂಒಡಲಿ
ನಲ್ಲಿದೆ. ಇದನ್ನು ಅಮೂಲ್ಯ ಸಂಪತ್ತೆಂದು ಭಾವಿಸಿ ಬೀಗಬೇಕಾಗಿಲ್ಲ. ಏಕೆಂದರೆ ಪ್ಯಾರಿಸ್‌ನಲ್ಲಿ ನಡೆದ ಒಪ್ಪಂದಕ್ಕೆ ಭಾರತ ಬದ್ಧವಾಗಲೇಬೇಕು. ಮುಂದಿನ 30 ವರ್ಷಗಳ ಒಳಗಾಗಿ ವಾಯುಗೋಳದ ಉಷ್ಣತೆಯನ್ನು 1 ಡಿಗ್ರಿ ಸೆ. ಕಡಿಮೆಗೊಳಿಸಲೇಬೇಕು. ಆದರೆ ಹೆಚ್ಚು ಗೊಂದಲವಿರುವುದು ಇರುವ 191 ಉಷ್ಣ ವಿದ್ಯುತ್‌ ಸ್ಥಾವರ ಘಟಕಗಳನ್ನು ಹಂತಹಂತವಾಗಿ ಮುಚ್ಚಿ, ಆ ಜಾಗದಲ್ಲಿ ನವೀಕರಿಸಬಹುದಾದ ಶಕ್ತಿಮೂಲ ತರುವ ಯೋಜನೆಯಲ್ಲಿ. ಇದು ಸುಲಭದ ಮಾತಲ್ಲ. ಉಷ್ಣಸ್ಥಾವರಗಳ ಮೇಲೆ ಭಾರತ ವಿಪರೀತವಾಗಿ ಅವಲಂಬಿಸಿದೆ. ಕಳೆದ ಅಕ್ಟೋಬರ್‌ನಲ್ಲೇ ಕಲ್ಲಿದ್ದಲು ಪೂರೈಕೆಯ ಬಗ್ಗೆ ದೇಶದಾದ್ಯಂತ ಚರ್ಚೆಯಾಗಿತ್ತು. ಭಾರತದ ಮುಕ್ಕಾಲು ಪಾಲು ಉಷ್ಣಸ್ಥಾವರಗಳಲ್ಲಿ ಕಲ್ಲಿದ್ದಲ ಸಂಗ್ರಹ ಒಂದು ವಾರಕ್ಕಷ್ಟೇ ಸಾಕಾಗುತ್ತಿತ್ತು. ಒಂದೆಡೆ ಕೋವಿಡ್‌ ಲಗ್ಗೆ, ಇನ್ನೊಂದು ಕಡೆ ಅತಿವೃಷ್ಟಿ, ಕಲ್ಲಿದ್ದಲ ಗಣಿಗಾರಿಕೆ ಗಣನೀಯವಾಗಿ ಕುಸಿದಿತ್ತು. ಇದರ ಜೊತೆಗೆ ಆರು ದೇಶಗಳಿಂದ ಭಾರತ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಅವೂ ಏಕಾಏಕಿ ಕಲ್ಲಿದ್ದಲ ಬೆಲೆಯನ್ನು ಶೇ 50ರಷ್ಟು ಏರಿಸಿದವು. ಪರಿಣಾಮ, ದೇಶದಾದ್ಯಂತ ವಿದ್ಯುತ್‌ ಪೂರೈಕೆಯ ಬಗ್ಗೆ ಕಳವಳ ಶುರುವಾಯಿತು. ಭಾರತ ಶೇ 22ರಷ್ಟು ಭಾಗ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ. ಎಂಥ ಸ್ಥಿತಿ!

ರಾಜಸ್ಥಾನವು ಉಷ್ಣಸ್ಥಾವರಗಳ ಮೇಲೆ ₹ 40,000 ಕೋಟಿ ಬಂಡವಾಳ ಹಾಕಿದೆ. 4,300 ಮೆಗಾವಾಟ್‌ ಶಕ್ತಿ ಅದರ ಉತ್ಪಾದನೆಯ ಗುರಿ. ಆದರೆ ರಾಜ್ಯದಲ್ಲಿ ಕಲ್ಲಿದ್ದಲು ಸಂಪನ್ಮೂಲವಿಲ್ಲ. ಛತ್ತೀಸಗಡವನ್ನು ಅವಲಂಬಿಸಬೇಕು. ಅಲ್ಲಿ ಪರಿಸರ ಕಾನೂನನ್ನು ಪರಿಪಾಲಿಸುವಲ್ಲಿ ಎಲ್ಲವೂ ಗೊಂದಲ. ಹೀಗಾಗಿ ಅದು ಒಪ್ಪಂದವನ್ನು ಪೂರೈಸಲಾಗಲಿಲ್ಲ. ಪರಿಣಾಮ, ರಾಜಸ್ಥಾನ ದಿನಕ್ಕೆ 14 ಗಂಟೆ ವಿದ್ಯುತ್‌ ಕಡಿತವನ್ನು ಎದುರಿಸಬೇಕಾಯಿತು. ಕೊನೆಗೆ ಕೇಂದ್ರವೇ ದಿನಕ್ಕೆ 28,000 ಟನ್ನು ಕಲ್ಲಿದ್ದಲನ್ನು ಒದಗಿಸಿ ರಾಜಸ್ಥಾನದ ಸಂಕಷ್ಟವನ್ನು ನಿವಾರಿಸಬೇಕಾಯಿತು. ಕಲ್ಲಿದ್ದಲು ಅವಲಂಬನೆಯಿಂದ ಆದ ಫಜೀತಿ ಇದು. ಕಲ್ಲಿದ್ದಲಿಗೆ ಇಷ್ಟೆಲ್ಲ ಮಹತ್ವವಿದ್ದಾಗ ಪೂರೈಕೆ, ಬಳಕೆಯಲ್ಲಿ ಹಾರಾಟ, ಚೀರಾಟ, ದೂರು ಇರುವಾಗ ಬೂದಿಯ ಉತ್ಪಾದನೆ ಹೇಗೆ ಸ್ಥಗಿತವಾದೀತು? ‘ನಮಗೆ ಕರೆಂಟ್‌ ಬೇಕು, ಬೂದಿ ಸಮಸ್ಯೆಯನ್ನು ನೀವು ಪರಿಹಾರ ಮಾಡಿ’ ಎಂಬುದು ಎಲ್ಲ ರಾಜ್ಯಗಳಂತೆ ರಾಜಸ್ಥಾನದ ನಿಲುವು ಕೂಡ.

ಹಾರುಬೂದಿಯೇನೂ ಗೊಬ್ಬರಕ್ಕೆ ಬರುವುದಿಲ್ಲ. ಹಾಗಿದ್ದಿದ್ದರೆ ಒಂದು ಕೆ.ಜಿ. ಬೂದಿಯೂ ಸ್ಥಾವರದಲ್ಲಿ ಉಳಿಯುತ್ತಿರಲಿಲ್ಲ. ಜನ ಮುಗಿಬಿದ್ದು ಬಾಚಿಬಿಡುತ್ತಿದ್ದರು. ನಿಸರ್ಗ ಈ ವಿಚಾರದಲ್ಲಿ ರಿಯಾಯಿತಿಯನ್ನೇನೂ ತೋರಿಲ್ಲ. ಕಲ್ಲಿದ್ದಲು ಉರಿದಾಗ ವಿಷಕಾರಿ ಭಾರಧಾತುಗಳು ಕೆಳಸ್ತರದ ಬೂದಿಯಲ್ಲಿರುತ್ತವೆ. ಮೇಲು ಸ್ತರದಲ್ಲೂ ಹೆಚ್ಚಿನ ಪಾಲು ಸಿಲಿಕ ಮತ್ತು ಅಲ್ಯುಮಿನಿಯಂ ಬೆರೆತಿರುತ್ತದೆ. ಇವೇನೂ ನೀರಿನಲ್ಲಿ ಕರಗುವುದಿಲ್ಲ. ಸೂಕ್ಷ್ಮ ಕಣಗಳಾಗಿ ಗಾಳಿಯಲ್ಲಿ ಹಾರುತ್ತವೆ. ಸಮಸ್ಯೆಯ ಮೂಲ ಇರುವುದೇ ಇಲ್ಲಿ. ಆದರೆ ಎಂಜಿನಿಯರ್‌ಗಳು ಬಹುಬೇಗ ಬೂದಿಯ ಗುಣವನ್ನು ಅರ್ಥಮಾಡಿಕೊಂಡರು. ಕಾಂಕ್ರೀಟಿಗೆ ಬಳಸಿದರೆ ಇನ್ನಷ್ಟು ದೃಢತೆ ಬರುತ್ತದೆ ಎನ್ನುವುದನ್ನು ಕಂಡುಕೊಂಡರು. ಇಟ್ಟಿಗೆ ರೂಪದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟರು. ಹಾಗೆಯೇ ಮನೆಗಳ ಹಾಸುಗಳಲ್ಲೂ ಚಪ್ಪಡಿಯಾಗಿ ಇವು ಉಪಯುಕ್ತ ಎನ್ನುವುದನ್ನು ತಿಳಿಸಿದರು. ಈ ಕಾರಣದಿಂದಾಗಿಯೇ ದೇಶದಲ್ಲಿ ವಾರ್ಷಿಕ 6,720 ಲಕ್ಷ ಟನ್ನು ಕಲ್ಲಿದ್ದಲನ್ನುಉರಿಸಿ, ಅದರಿಂದ ಬಂದ 2,220 ಲಕ್ಷ ಟನ್ನು ಬೂದಿಯಲ್ಲಿ ಶೇ 92 ಭಾಗ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಅಷ್ಟರಮಟ್ಟಿಗೆ ಹಾರುಬೂದಿಯ ಅವಾಂತರಕಡಿಮೆಯಾಗಿದೆ.

1,720 ಮೆಗಾವಾಟ್‌ ಸಾಮರ್ಥ್ಯದ ರಾಯಚೂರು ಉಷ್ಣಸ್ಥಾವರ ಪ್ರತಿವರ್ಷ 15 ಲಕ್ಷ ಟನ್ನು ಬೂದಿಯನ್ನು ಉತ್ಪಾದಿಸುತ್ತಿದೆ. ಈಗ ಬೂದಿಗೆ ಬೇಡಿಕೆ ಹೆಚ್ಚಾಗಿದೆ. 93 ಕಂಪನಿಗಳು ಗುತ್ತಿಗೆ ತೆಗೆದುಕೊಂಡಿವೆ. ಬೂದಿ ಈಗ ಈ ಸ್ಥಾವರದ ಮಟ್ಟಿಗೆ ಆದಾಯದ ಬಾಬತ್ತು ಕೂಡ. ಇಲ್ಲಿನ ಬೂದಿಯನ್ನು ಪಡೆಯಲು ರಾಜಕೀಯ ಧುರೀಣರ ಶಿಫಾರಸುಗಳಿಗೂ ಗುತ್ತಿಗೆದಾರರುಮೊರೆಹೋಗಿದ್ದಾರೆ.

ನಾವು ನೆನಪಿನಲ್ಲಿಡಲೇಬೇಕು. ನೂರು ಟನ್ನು ಕಲ್ಲಿದ್ದಲು ಉರಿದಾಗ, 35 ಟನ್ನು ಹಾರುಬೂದಿ ಉತ್ಪಾದನೆಯಾಗುತ್ತದೆ. ಬೂದಿಗೇನೋ ಕಿಮ್ಮತ್ತು ಬಂತು. ಆದರೆ ಜಗತ್ತು ವಾರ್ಷಿಕ 370 ಕೋಟಿ ಟನ್ನು ಕಾರ್ಬನ್‌ ಡೈ ಆಕ್ಸೈಡನ್ನು ಇಂಥ ಸ್ಥಾವರಗಳಿಂದ ಉತ್ಪತ್ತಿ ಮಾಡುತ್ತಿದೆ! ಅದಕ್ಕೆಲ್ಲಿ ಗಿರಾಕಿಗಳು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT