ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅಂತರ್ಜಲಕ್ಕೂ ಯುರೇನಿಯಂ ಲಗ್ಗೆ

ರಾಜ್ಯದ ಹಲವು ಭಾಗಗಳಲ್ಲಿ ಇದು ಪತ್ತೆಯಾಗಿರುವುದು ಎಚ್ಚರಿಕೆಯ ಗಂಟೆ
Last Updated 3 ಜನವರಿ 2022, 19:31 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ ಮತ್ತೆ ಅದನ್ನೇ ಹೇಳುತ್ತಿದೆ- ಜಗತ್ತಿನಲ್ಲಿ ಎಲ್ಲ ದೇಶದ, ಎಲ್ಲ ಪ್ರಜೆಗಳಿಗೂ ದಿನವಹಿ ಸ್ವಂತಕ್ಕೆ ಮತ್ತು ಗೃಹಬಳಕೆಗೆ ಕನಿಷ್ಠ 50ರಿಂದ 100 ಲೀಟರ್ ನೀರು ಪೂರೈಸುವುದು ಆಯಾ ದೇಶದ ಕರ್ತವ್ಯ. ಅಷ್ಟು ಪ್ರಮಾಣದ ನೀರು ಬಳಸುವ ಹಕ್ಕು ಅವರಿಗಿದೆ. 2010ರ ಮಹಾ ಅಧಿವೇಶನದಲ್ಲಿ ಈ ನಿರ್ಣಯ ಅಂಗೀಕಾರ ವಾದರೂ ಜಾಗತಿಕ ಪರಿಸ್ಥಿತಿಯೇನೂ ಬದಲಾಗಿಲ್ಲ. ಜಗತ್ತಿನ 220 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಈಗಲೂ ಮರೀಚಿಕೆ.

ವಿಶ್ವಸಂಸ್ಥೆ ಕಳೆದ ವರ್ಷ ಈ ಕುರಿತು ಕಳವಳವನ್ನೂ ವ್ಯಕ್ತಪಡಿಸಿತು. ಮುಂದೆ ದೇಶ– ದೇಶಗಳ ನಡುವೆ ಯುದ್ಧವಾದರೆ ಅದು ತನ್ನ ಶಕ್ತಿಯನ್ನು ಪ್ರದರ್ಶಿಸಲು ಅಲ್ಲ, ಬದಲು ನೀರಿಗಾಗಿ ಎಂಬ ಸತ್ಯವನ್ನು ಈಗ ಎಲ್ಲ ದೇಶಗಳೂ ಮನಗಂಡಿವೆ. ಇಡೀ ಭೂಮಿಯಲ್ಲಿ ಲಭ್ಯವಿರುವ ಅಂತರ್ಜಲದ ಶೇ 25ರಷ್ಟು ಭಾಗವನ್ನು ಭಾರತವೊಂದೇ ಬಳಸಿ ಅಂತರ್ಜಲ ಭಂಡಾರವನ್ನು ಬರಿದು ಮಾಡುತ್ತಿದೆ ಎಂಬ ಆರೋಪವೂ ಇದೆ.

ಭೂಮಿಯಲ್ಲಿ ಲಭ್ಯವಿರುವ ನೀರೆಲ್ಲವೂ ಕುಡಿಯಲು ಯೋಗ್ಯವಾದ ನೀರೇ ಆಗಿದ್ದರೆ ಈ ಹೊತ್ತಿಗೆ ಅರ್ಧ ಸಾಗರವೇ ಖಾಲಿಯಾಗುತ್ತಿತ್ತು. ಪರಿಶುದ್ಧ ನೀರೆಂಬುದೇ ಇಲ್ಲ. ಹಲವು ಲವಣಗಳು ನೀರಿನಲ್ಲಿ ಕರಗಿ ಕುಡಿಯಲು ಯೋಗ್ಯವಲ್ಲ ಎನ್ನಿಸಿದೆ. ಕುಡಿಯಲು ಯೋಗ್ಯವಾದ ನೀರು ಭೂಮಂಡಲದಲ್ಲಿರುವ ನೀರಿನ ಶೇ 0.03 ಭಾಗ ಮಾತ್ರ. ಅಂದರೆ ಇಡೀ ಭೂಮಿಯ ನೀರು 100 ಲೀಟರ್ ಎಂದುಕೊಂಡರೆ, ಕುಡಿಯಲು ಲಭ್ಯವಿರುವ ನೀರು ಅರ್ಧ ಚಮಚ ಮಾತ್ರ.

ನೀರಿನ ಕೊರತೆಯನ್ನು ಭಾರತ ಸದಾ ಅನುಭವಿಸುತ್ತಿದೆ. ಗೃಹಬಳಕೆಯ ಮುಕ್ಕಾಲುಪಾಲು, ನೀರಾವರಿಯ ಅರ್ಧಪಾಲು ನೀರಿನ ಬೇಡಿಕೆಗೆ ಅಂತರ್ಜಲವೇ ಈಗಲೂ ಆಸರೆ. ಪಂಜಾಬಿನಂಥ ಅತಿ ಕೃಷಿಗೆ ಒಳಪಟ್ಟ ರಾಜ್ಯವು ಅಂತರ್ಜಲವನ್ನು ಮೀರೆಳೆತ ಮಾಡಿ
ತನ್ನ ಭಂಡಾರವನ್ನು ಹೆಚ್ಚುಕಡಿಮೆ ಖಾಲಿ ಮಾಡಿ ಕೊಂಡಿದೆ.

ಕಬ್ಬು ಮತ್ತು ಭತ್ತ ದೊಡ್ಡ ಪ್ರಮಾಣದ ನೀರನ್ನು ಬೇಡುತ್ತವೆ. ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಎರಡು ಮೀಟರ್ ಕುಸಿಯುತ್ತಿದೆ. ಇದು ಸಮಸ್ಯೆಯ ಒಂದು ಮುಖ ಅಷ್ಟೇ. ಅಂತರ್ಜಲ ಈಗ ಕುಡಿಯುವ ನೀರಿನ ಆಕರವಾಗಿ ಉಳಿದಿಲ್ಲ. ಹಿಮಾಲಯ ತನ್ನ ಸಂಚಯನವನ್ನು ಹೊತ್ತು ತರುವಾಗ ಇಡೀ ಗಂಗಾ, ಬ್ರಹ್ಮಪುತ್ರಾ ನದಿಯ ಪಾತ್ರದಲ್ಲಿ ಮೆಕ್ಕಲು ಮಣ್ಣಿನಲ್ಲಿ ಆರ್ಸೆನಿಕ್ ಎಂಬ ವಿಷಕಾರಿ ಧಾತುವನ್ನು ಸೇರಿಸಿಬಿಟ್ಟಿದೆ. ಅದು ಕೊಳವೆ ಬಾವಿಗಳಲ್ಲಿ ಇಣುಕಿ, ವಿಶೇಷವಾಗಿ ಜಾರ್ಖಂಡ್, ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಮತ್ತು ಅತ್ತ ಬಾಂಗ್ಲಾ ದೇಶದಲ್ಲಿ ನೀರು ಕುಡಿದವರನ್ನೇ ಮುಕ್ಕುತ್ತಿದೆ. ಇಲ್ಲೆಲ್ಲ ಪ್ರತೀ ಲೀಟರಿಗೆ 50 ಮಿಲಿಗ್ರಾಂ ಆರ್ಸೆನಿಕ್ ಪ್ರಮಾಣ ಜಮೆಯಾಗಿ ಸಹ್ಯ ಮಿತಿಯನ್ನು ಎಂದೋ ದಾಟಿಬಿಟ್ಟಿದೆ. ಇದು ವಿಶ್ವಸಂಸ್ಥೆಯ ಗಮನ ಸೆಳೆಯುವ ಮಟ್ಟಕ್ಕೂ ಹೋಗಿದೆ.

ಫ್ಲೋರೈಡ್ ಬೆರೆತ ನೀರು ಕುಡಿದವರ ಮೂಳೆಗಳನ್ನು ಸೊಟ್ಟಗೆ ಮಾಡಿ, ಹಲ್ಲನ್ನು ಕಿಲುಬುಗಟ್ಟಿಸಿ, ಫ್ಲೋರೋಸಿಸ್ ಎಂಬ ರೋಗಕ್ಕೆ ಕಾರಣವಾಗಿದೆ. ಅತ್ತ, ಮಣಿಪುರದಿಂದ ಹಿಡಿದು ದಕ್ಷಿಣದಲ್ಲಿ ಕಾಂಚೀಪುರದವರೆಗೆ ಇದರ ಸಾಮ್ರಾಜ್ಯ ವಿಸ್ತರಿಸಿದೆ. ಗದಗಿನ ಭಾಗದ ಮುಂಡರಗಿ, ತುಮಕೂರು ಜಿಲ್ಲೆಯ ಪಾವಗಡದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಬೆರೆತು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.

ಇದೀಗ ವಿಶ್ವಸಂಸ್ಥೆಯು ಜಗತ್ತಿನ ಬಹು ಭಾಗಗಳಲ್ಲಿ ಈ ಸಮಸ್ಯೆ ಇರುವುದನ್ನು ಗಮನಿಸಿ, ಅದಕ್ಕೊಂದು ಮಿತಿಯನ್ನೂ ಸೂಚಿಸಿದೆ. ಕುಡಿಯುವ ಒಂದು ಲೀಟರ್ ನೀರಿನಲ್ಲಿ ಒಂದೂವರೆ ಮಿಲಿಗ್ರಾಂ ಫ್ಲೋರೈಡ್ ಇದ್ದರೆ ಅದು ಸಹ್ಯ ಎಂದಿದೆ. ಆದರೆ ಇಂಥ ಜಾಗಗಳಲ್ಲಿ ನೀರಿನ ಆಕರಗಳನ್ನು ಹುಡುಕುವುದೆಲ್ಲಿ? ಫ್ಲೋರೈಡನ್ನು ನೀರಿನಿಂದ ತೊಡೆದುಹಾಕಿ ಕುಡಿಯಲು ಯೋಗ್ಯವಾಗಿಸಲು ಹತ್ತಾರು ತಂತ್ರಗಳು ಪ್ರಯೋಗವಾದವು.

ಈಗ ಇನ್ನೊಂದು ಮಾಲಿನ್ಯದ ಭೂತ ಎದುರಾಗಿದೆ. ಅದು ಯುರೇನಿಯಂ ಎಂಬ ಧಾತು ಅಂತರ್ಜಲವನ್ನು ಸೇರಿರುವುದು. ವಾಸ್ತವವಾಗಿ ಬಾಂಬುಗಳ ತಯಾರಿಕೆಗೆ ಬಳಕೆಯಾಗುವ, ಸದಾ ವಿಕಿರಣ ಸೂಸುವ ಈ ಖನಿಜವು ಮೆಲ್ಲನೆ ನೆಲದಾಳಕ್ಕೂ ಇಳಿದು ಕುಡಿಯುವ ನೀರಿಗೂ ಲಗ್ಗೆ ಹಾಕಿದೆ. ಈ ಆಘಾತಕಾರಿ ಸುದ್ದಿಯನ್ನು ಸ್ವತಃ ಕೇಂದ್ರ ಅಂತರ್ಜಲ ಮಂಡಳಿ ವರದಿ ಮಾಡಿದೆ. ಯುರೇನಿಯಂ ಎಂಬ ಧಾತು ಗ್ರಾನೈಟ್ ಶಿಲೆಗಳಲ್ಲಿ ಮತ್ತು ಶಿಥಿಲವಾದ ಮಣ್ಣಿನಲ್ಲಿ ಸಹಜವಾಗಿ ಬೆರೆತಿರುತ್ತದೆ. ಇದು ಯಾವುದೋ ಮಾರ್ಗ ಅನುಸರಿಸಿ ಮನುಷ್ಯನ ಶರೀರ ಪ್ರವೇಶಿಸಿದರೂ ಅದನ್ನು ಹೊರಹಾಕುವ ತಂತ್ರವನ್ನು ಶರೀರ ರೂಪಿಸಿಕೊಂಡಿದೆ. ಆದರೆ ಮಿತಿಮೀರಿದರೆ ಯುರೇನಿಯಂ ಶರೀರದಲ್ಲಿ ಜಮೆಯಾಗುತ್ತದೆ. ಅದು ಮೊದಲು ಮೂತ್ರಪಿಂಡದ ಮೇಲೆ ಲಗ್ಗೆ ಹಾಕುತ್ತದೆ. ವಾಸ್ತವವಾಗಿ ಯುರೇನಿಯಂ ಸೂಸುವ ವಿಕಿರಣಕ್ಕಿಂತ ಹೆಚ್ಚು ಆತಂಕ ತಂದಿರುವುದು ಈ ಸಂಗತಿ.

ಇದು ಜಾಗತಿಕ ಸಮಸ್ಯೆಯಾದ್ದರಿಂದ ವಿಶ್ವಸಂಸ್ಥೆ ಇದಕ್ಕೂ ಒಂದು ಮಿತಿಯನ್ನು ಗುರುತಿಸಿದೆ. ಒಂದು ಲೀಟರು ನೀರಿನಲ್ಲಿ 30 ಮಿಲಿಗ್ರಾಂ ಪ್ರಮಾಣ ಇದ್ದರೆ ಚಿಂತಿಸಬೇಡಿ ಎನ್ನುತ್ತಿದೆ. ಅದು 60 ಮಿಲಿಗ್ರಾಂ ದಾಟಿದರೆ ಕ್ಯಾನ್ಸರ್ ತರುವ ಅಪಾಯ ಹೆಚ್ಚು ಎಂದು ಭಾರತದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ಎಚ್ಚರಿಕೆ ಕೊಟ್ಟಿದೆ.

ಕರ್ನಾಟಕ ಸೇರಿದಂತೆ ಭಾರತದ 18 ರಾಜ್ಯಗಳಲ್ಲಿ ಅಂತರ್ಜಲದಲ್ಲಿ ಯುರೇನಿಯಂ ಪ್ರಮಾಣ ಸುರಕ್ಷತೆಯ ಮಿತಿ ದಾಟಿದೆ ಎಂದು ವರದಿಗಳು ಬಂದಿವೆ. ಇಡೀ ದೇಶದಾದ್ಯಂತ 14,377 ಬೇರೆ ಬೇರೆ ಭಾಗಗಳಿಂದ ಸಂಗ್ರಹಿಸಿದ ಅಂತರ್ಜಲ ಮಾದರಿಯನ್ನು ಪರೀಕ್ಷಿಸಿದ ನಂತರ ಈ ಆಘಾತಕಾರಿ ಅಂಶ ಹೊರಬಿದ್ದಿದೆ. ಮೂಲ ಯಾವುದು? ಯುರೇನಿಯಂ ಗ್ರಾನೈಟ್ ಶಿಲೆಯ ಮೂಲದಿಂದಷ್ಟೇ ಬರುವುದಿಲ್ಲ. ಯುರೇನಿಯಂ ನಿಕ್ಷೇಪವಿರುವ ಜಾಗಗಳಲ್ಲಿ ನೀರು ಹರಿದಾಗ, ಆ ನೀರು ಅಂತರ್ಜಲಕ್ಕೆ ಜಿನುಗುತ್ತದೆ. ಹಾಗೆಯೇ ಲಿಗ್ನೈಟ್ ಎಂಬ ಕಲ್ಲಿದ್ದಲನ್ನು ಭಾರತ ಧಾರಾಳವಾಗಿ ಉರಿಸುತ್ತಿದೆ. ಅದರಿಂದಲೂ ಯುರೇನಿಯಂ ಬಿಡುಗಡೆ ಯಾಗುತ್ತದೆ. ನ್ಯೂಕ್ಲಿಯರ್ ಕೈಗಾರಿಕೆಗಳ ತ್ಯಾಜ್ಯದಲ್ಲೂ ಯುರೇನಿಯಂ ಇರುತ್ತದೆ. ಇವೆಲ್ಲಕ್ಕಿಂತ ಹೆಚ್ಚು ಆತಂಕ ತಂದಿರುವುದು ಕೃಷಿಗಾಗಿ ಬಳಸುವ ಫಾಸ್ಫೇಟ್ ರಸ
ಗೊಬ್ಬರದಲ್ಲಿರುವ ಯುರೇನಿಯಂ. ಈ ಮೂಲವು ನೈಸರ್ಗಿಕ ಮೂಲಕ್ಕಿಂತಲೂ ಬಹುಬೇಗ ಅಂತರ್ಜಲ
ವನ್ನು ಮಲಿನಗೊಳಿಸುತ್ತದೆ.

ವಿಶೇಷವೆಂದರೆ, ಯುರೇನಿಯಂ ಸ್ವಭಾವತಃ ಮೀನುಗಳಲ್ಲಾಗಲೀ ತರಕಾರಿಗಳಲ್ಲಾಗಲೀ ಸಂಚಯ ಗೊಂಡಿರುವುದಿಲ್ಲ. ಅದನ್ನು ತಿಂದರೂ ಮಲ, ಮೂತ್ರ ಗಳಲ್ಲಿ ಹೊರಹೋಗಿಬಿಡುತ್ತದೆ. ಯುರೇನಿಯಂ ಇರುವ ಫಾಸ್ಫೇಟನ್ನು ಒಂದು ಮಟ್ಟದಲ್ಲಿ ಗಿಡ, ಮರಗಳು ಎಳೆದುಕೊಂಡು ಬೇರಿನಲ್ಲಿ ಸಂಚಯಿಸುತ್ತವೆ. ಮಿತಿ ಮೀರಿದಾಗಲೇ ದೇಹ ಇದನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಯುರೇನಿಯಂ ಖನಿಜ ರೇಡಾನ್ ಧಾತು ವಾಗಿ ಪರಿವರ್ತನೆಯಾಗುತ್ತದೆ. ದೀರ್ಘಕಾಲ ಅದಿರುವ ನೀರನ್ನು ಸೇವಿಸಿದರೆ ರಕ್ತಪರಿಚಲನೆಯಲ್ಲಿ ಸೇರಿ ಅದು ಶರೀರಕ್ಕೆ, ವಿಶೇಷವಾಗಿ ಮೂತ್ರಪಿಂಡಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ ಎನ್ನುವುದು ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯ ಫಲಿತಾಂಶ.

ಈಗಿನ ಸಮೀಕ್ಷೆ ಗಮನಿಸಿದರೆ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಸಹನೀಯ ಮಿತಿಗಿಂತ ಹತ್ತು ಪಟ್ಟು ಹೆಚ್ಚು ಯುರೇನಿಯಂ ಅಂತರ್ಜಲದಲ್ಲಿ ಬೆರೆತಿರುವುದು ಪತ್ತೆಯಾಗಿದೆ. ಕರ್ನಾಟಕದಲ್ಲೂ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಳ್ಳಾರಿ, ಕಲಬುರಗಿ, ಕೋಲಾರ, ಮಂಡ್ಯ, ರಾಯಚೂರು, ತುಮಕೂರು ಜಿಲ್ಲೆ ಗಳ ಹಲವು ಭಾಗಗಳಲ್ಲಿ ಅಂತರ್ಜಲದಲ್ಲಿ ಮಿತಿಮೀರಿದ ಯುರೇನಿಯಂ ಇರುವುದು ಪತ್ತೆಯಾಗಿದೆ.

ಕೇಂದ್ರ ಅಂತರ್ಜಲ ಮಂಡಳಿ ಇನ್ನೊಂದು ಅಂಶವನ್ನು ತೆರೆದಿಟ್ಟಿದೆ. ಕೃಷಿಗಾಗಿ ಬಳಸುವ ಒಂದು ಕಿಲೊಗ್ರಾಂ ಫಾಸ್ಫೇಟ್ ರಸಗೊಬ್ಬರದಲ್ಲಿ ಒಂದು ಮಿಲಿಗ್ರಾಂನಿಂದ ಹಿಡಿದು 68 ಮಿಲಿಗ್ರಾಂವರೆಗೆ ಯುರೇನಿಯಂ ಪ್ರಮಾಣವಿದೆ. ಬಹುಶಃ ಅಂತರ್ಜಲದಲ್ಲಿ ಹೆಚ್ಚು ಸೇರಿರುವುದು ಈ ಮೂಲದಿಂದಲೇ ಎಂಬುದು ಎಚ್ಚರಿಕೆಯ ಗಂಟೆಯಾಗಿದೆ.

–ಟಿ.ಆರ್.ಅನಂತರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT