ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬಿಜೆಪಿ ಗೆಲುವಲ್ಲಿ ‘ಮಾಯಾ ಕೈವಾಡ’

ಉ.ಪ್ರ: ಬಿಎಸ್‌ಪಿಯ ರಾಜಕೀಯ ‘ಹತ್ಯೆ’ ಮಾಡಿ ಬಿಜೆಪಿಯನ್ನು ಮಾಯಾವತಿ ಗೆಲ್ಲಿಸಿದರೇ?
Last Updated 16 ಮಾರ್ಚ್ 2022, 22:48 IST
ಅಕ್ಷರ ಗಾತ್ರ

ಭಾರತದಲ್ಲಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಗೌರವಾರ್ಥ ನಿರ್ಮಾಣಗೊಂಡ ಅಸಂಖ್ಯ ಸ್ಮಾರಕಗಳಿವೆ. ಆದರೆ ಉತ್ತರಪ್ರದೇಶದ ರಾಜಧಾನಿ ಲಖನೌದಲ್ಲಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಕಟ್ಟಿಸಿದಷ್ಟು ಭವ್ಯ ಸ್ಮಾರಕ ಇನ್ನೆಲ್ಲಿಯೂ ಇಲ್ಲ. ಗೋಮತಿ ನದಿ ದಂಡೆಯ 108 ಎಕರೆ ಪ್ರದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಉದ್ಯಾನದಲ್ಲಿ ಅಂಬೇಡ್ಕರ್ ಮತ್ತು ದಲಿತ ನೇತಾರ ಕಾನ್ಷಿರಾಂ ಅವರ ಪ್ರತಿಮೆ ಹೊರತಾಗಿ ಮಾಯಾವತಿ ಅವರ ಬೃಹತ್ ಪ್ರತಿಮೆಯೂ ಇದೆ.

ಇದು, 1990ರ ದಶಕದ ನಂತರ ದೇಶದಲ್ಲಿ ಉದಯಿಸಿದ ದಲಿತ ಜಾಗೃತಿಯ ಪ್ರತೀಕ ಎಂದು ಗುರುತಿಸಿದರೆ, ಈ ತರಹದ ಸ್ವವೈಭವೀಕರಣವನ್ನು ಆಕ್ಷೇಪಿಸಲು ಕಾರಣವಿಲ್ಲ. ಆದರೆ ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ವಿಜಯದಲ್ಲಿ ಮಾಯಾವತಿ ಅವರ ಕೈವಾಡವನ್ನು ನೋಡಿದರೆ, ಅವರ ದಲಿತ ರಾಜಕಾರಣದ ಭವಿಷ್ಯದ ಬಗ್ಗೆ ದೊಡ್ಡ ಸಂಶಯ ಹುಟ್ಟಿಕೊಳ್ಳುತ್ತದೆ.

ಚುನಾವಣಾ ಸಮಯದಲ್ಲಿ ನಾನು ಹದಿನೈದು ದಿನ ಉತ್ತರಪ್ರದೇಶದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದೆ. ಬಿಜೆಪಿ ಮತ್ತು ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದ ನಡುವೆ ತೀವ್ರವಾದ ಪೈಪೋಟಿ ಇದ್ದುದು ಎಲ್ಲೆಡೆಯೂ ಗೋಚರಿಸುತ್ತಿತ್ತು. ಆದರೆ ಕೊನೆಯಲ್ಲಿ ಬಿಜೆಪಿಗೆ ಭಾರಿ ಬಹುಮತ ದೊರೆತಿದೆ. ಯೋಗಿ ಆದಿತ್ಯನಾಥ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಸಮಾಜವಾದಿ ಪಕ್ಷದ ಸೋಲಿನ ಹಿಂದೆ ಆ ಪಕ್ಷದ ತಪ್ಪುಗಳೂ ಇದ್ದೇ ಇವೆ. ಆದರೆ ಮಾಯಾವತಿ ಅವರು ತಾವೇ ಕಟ್ಟಿ ಬೆಳೆಸಿದ ಬಿಎಸ್‌ಪಿಯ ರಾಜಕೀಯ ‘ಹತ್ಯೆ’ ಮಾಡಿ ಬಿಜೆಪಿಯವರನ್ನು ಗೆಲ್ಲಿಸಿದ್ದಾರೆ ಎಂಬುದು ರಾಜ್ಯದಲ್ಲಿ ಅನೇಕ ವಿಶ್ಲೇಷಕರ ಸ್ಪಷ್ಟ ಅಭಿಮತವಾಗಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.

ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. 2007ರಲ್ಲಿಯಂತೂ ಅವರ ಪಕ್ಷ ಪೂರ್ಣ ಬಹುಮತ ಗಳಿಸಿ ಐದು ವರ್ಷ ಆಡಳಿತ ನಡೆಸಿತು. ಆದರೆ ಕೇವಲ ಒಂದು ದಶಕದ ಹಿಂದೆ, 403 ಸದಸ್ಯಬಲದ ವಿಧಾನಸಭೆಯಲ್ಲಿ 206 ಪ್ರತಿನಿಧಿಗಳನ್ನು ಹೊಂದಿದ್ದ ಈ ಪಕ್ಷ 2022ರಲ್ಲಿ ಒಂದು ಸೀಟು ಮಾತ್ರ ಉಳಿಸಿಕೊಂಡು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಷ್ಟು ಕೆಳಗೆ ಜಾರಿದೆ. ಇದರ ಹಿಂದಿನ ಗುಟ್ಟೇನು? ತಮ್ಮ ಬೆಂಬಲಿಗರ ಸಿಟ್ಟಿನಿಂದಾಗಿ ಮಾಯಾವತಿ ಅವರು ಇಷ್ಟು ದಯನೀಯ ಸೋಲನ್ನುಂಡರೋ ಅಥವಾ ಇಂಥ ದುಃಸ್ಥಿತಿಯನ್ನು ಮುದ್ದಾಮಾಗಿ ಸ್ವಾಗತಿಸಿಕೊಂಡರೋ? ನಿಜವಾಗಿ ನೋಡಿದರೆ ಮೊದಲಿನ ಪ್ರಶ್ನೆಗೆ ಆಧಾರವಿಲ್ಲ. ಏಕೆಂದರೆ ಜಾಟವ ಜಾತಿಗೆ ಸೇರಿದ ಅವರ ಮುಖ್ಯ ಬೆಂಬಲಿಗರು 2022ರಲ್ಲೂ ಅವರೊಂದಿಗೇ ಇದ್ದರು. ಇತರ ದಲಿತ ಹಾಗೂ ಬಹುಜನ ಸಮುದಾಯಗಳಲ್ಲೂ ಅವರಿಗೆ ಬಹಳಷ್ಟು ಬೆಂಬಲವಿದೆ. ಈ ಜನರಲ್ಲಿ ಮಾಯಾವತಿ ಅವರ ವಿರುದ್ಧ ಆಕ್ರೋಶವೇನೂ ಇರಲಿಲ್ಲ. ಹಾಗಿದ್ದರೆ ಈ ಬೆಂಬಲಿಗ ವರ್ಗ ಬಿಎಸ್‌ಪಿಗೆ ಏಕೆ ಮತ ನೀಡಲಿಲ್ಲ?

ಇದರ ಹಿಂದಿನ ತರ್ಕವನ್ನು ಶೋಧಿಸಲು ನಾವು ಎರಡು ವರ್ಷಗಳ ಹಿಂದೆ ನಡೆದ ಕೆಲವು ಘಟನೆಗಳನ್ನು ನೋಡಬೇಕಾಗುತ್ತದೆ. 2019ರ ಜುಲೈನಲ್ಲಿ ಆದಾಯ ತೆರಿಗೆ ಇಲಾಖೆಯವರು ಮಾಯಾವತಿ ಅವರ ಸಹೋದರ ಆನಂದ ಕುಮಾರ್‌ ಅವರ ಮನೆಯ ಮೇಲೆ ದಾಳಿ ಮಾಡಿ, ದೆಹಲಿ ಬಳಿಯ ನೋಯಿಡಾದಲ್ಲಿ ₹ 400 ಕೋಟಿ ಮೌಲ್ಯದ ಅವರ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದರು. ಮಾಯಾವತಿ ಅವರ ಕಾರ್ಯದರ್ಶಿಯೂ ಮಾಜಿ ಐಎಎಸ್ ಅಧಿಕಾರಿಯೂ ಆಗಿದ್ದ ನೇತ್ ರಾಮ ಅವರ ಮನೆಯ ಮೇಲೆ ಸೆಪ್ಟೆಂಬರ್‌ನಲ್ಲಿ ದಾಳಿ ಮಾಡಿ, ₹ 230 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದರು.

‘ದಲಿತರು ಶ್ರೀಮಂತರಾಗುವುದು ಬಿಜೆಪಿಗೆ ಬೇಕಿಲ್ಲ’ ಎಂದು ಮಾಯಾವತಿ ಆಗ ಗುಡುಗಿದ್ದರು. ಇನ್ನೇನು ಅವರನ್ನೂ ಆದಾಯ ತೆರಿಗೆ ಇಲಾಖೆಯವರು ತನಿಖೆಗೆ ಕರೆಯುತ್ತಾರೆ ಎಂಬ ಊಹಾಪೋಹ ಉತ್ತರಪ್ರದೇಶದಲ್ಲಿ ದಟ್ಟವಾಗಿತ್ತು. ಪಕ್ಕದ ಬಿಹಾರ ರಾಜ್ಯದ ಬಿಜೆಪಿ ವಿರೋಧಿ ಮುಖಂಡ, ಭ್ರಷ್ಟಾಚಾರದ ಹಗರಣದಿಂದಾಗಿ ಈಗ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಅವರಿಗೊದಗಿದ ಗತಿ ತಮ್ಮದೂ ಆಗಬಹುದೇನೊ ಎಂಬ ಭೀತಿ ಅವರಲ್ಲಿಯೂ ಮೂಡಿದ್ದರೆ ಅದು ಸ್ವಾಭಾವಿಕ. ಏನೇ ಇರಲಿ, ಆನಂತರ ಬಿಜೆಪಿ ವಿರುದ್ಧ ಅವರ ಆಪಾದನೆಯ ದನಿಯೂ ಬಂದಾಯಿತು ಹಾಗೂ ಆನಂದ ಕುಮಾರ್, ನೇತ್ ರಾಮ ಅವರ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾನೂನಿನ ಕ್ರಮವೂ ನಿಂತುಹೋಯಿತು. ಒಂದು ತಿಂಗಳು ಕಳೆದ ಮೇಲೆ ಮಾಯಾವತಿ ಅವರು ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯನ್ನು ಸೋಲಿಸಲು ನನ್ನ ಬಹುಜನ ಸಮಾಜ ಪಾರ್ಟಿಯು ಬಿಜೆಪಿಯನ್ನು ಬೆಂಬಲಿಸಲು ತಯಾರು’ ಎಂದು ಬಹಿರಂಗವಾಗಿ ಘೋಷಿಸಿದರು. 2022ರ ಚುನಾವಣೆಯ ಮಧ್ಯದಲ್ಲಿಯೇ ಅವರು ಬಿಜೆಪಿಯನ್ನು ಪ್ರಶಂಸಿಸಿ ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿದರಲ್ಲದೆತಮ್ಮ ಬೆಂಬಲಿಗರ ಮತಗಳನ್ನೂ ಬಿಜೆಪಿಗೆ ವರ್ಗಾವಣೆ ಮಾಡುವ ಕೆಲಸ ಮಾಡಿದರು.

ಇಷ್ಟೇ ಅಲ್ಲ, ಬಿಜೆಪಿಯವರು ಗುರುತಿಸಿದ, ಅಖಿಲೇಶ್‌ ಪರವಾಗಿದ್ದ 112 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಉಮೇದುವಾರರ ವಿರುದ್ಧ ಹಾಗೂ ಬಿಜೆಪಿಯವರೇ ಹೇಳಿಕೊಟ್ಟ, ಯಾದವ ಇಲ್ಲವೇ ಮುಸ್ಲಿಂ ಅಭ್ಯರ್ಥಿಗಳನ್ನು ಬಿಎಸ್‌ಪಿ ನಿಲ್ಲಿಸಿತು. ಈ ಎಲ್ಲ ಕ್ಷೇತ್ರಗಳಲ್ಲಿ ಬಿಎಸ್‌ಪಿ ಉಮೇದುವಾರರು ಸುಮಾರು 15- 20 ಸಾವಿರ ಮತಗಳನ್ನು ಪಡೆದಿದ್ದರಿಂದ ಸಮಾಜವಾದಿ ಪಕ್ಷ ಸೋತಿತು. ಅರ್ಥಾತ್ ಸಮಾಜವಾದಿ ಪಕ್ಷದ ಸೋಲಷ್ಟೇ ಮಾಯಾವತಿ ಅವರ ಗುರಿಯಾಗಿತ್ತು, ತಮ್ಮ ಪಕ್ಷದ ಅಧಿಕಾಧಿಕ ಅಭ್ಯರ್ಥಿಗಳ ಗೆಲುವು ಅವರ ಉದ್ದೇಶವಾಗಿರಲಿಲ್ಲ. ಅವರ ಪಕ್ಷ 2017ರಲ್ಲಿ ಒಟ್ಟು ಮತಗಳಲ್ಲಿ ಶೇ 22.23ರಷ್ಟು ಗಳಿಸಿತ್ತು. 2022ರಲ್ಲಿ ಅದು ಸುಮಾರು ಶೇ 10ರಷ್ಟು ಕೆಳಗಿಳಿದು ಶೇ 12.88 ಆಯಿತು. ಇದರ ನೇರ ಲಾಭ ಬಿಜೆಪಿಗೆ ಪ್ರಾಪ್ತವಾಯಿತು. 2017ರಲ್ಲಿ ಬಿಜೆಪಿಗೆ 312 ಸೀಟುಗಳು ದೊರೆತಿದ್ದವು. 2022ರಲ್ಲಿ ಈ ಸಂಖ್ಯೆ 57 ಸೀಟುಗಳಷ್ಟು ಕಡಿಮೆಯಾಯಿತು. ಮಾಯಾವತಿ ಅವರ ಅನುಗ್ರಹ ಪ್ರಾಪ್ತವಾಗಿರದಿದ್ದರೆ ಚುನಾವಣೆಯ ಪರಿಣಾಮ ಏನಾಗುತ್ತಿತ್ತೋ ಗೊತ್ತಿಲ್ಲ.

ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸುವ ಸಂಚು ಸುಮಾರಾಗಿ ಎಲ್ಲೆಡೆಯೂ ನಡೆಯುತ್ತಲೇ ಇರುತ್ತದೆ. ಈ ತರಹದ ಕಪಟನೀತಿ ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿದ ಒಂದು ಕಳಂಕ. ಆದರೆ ಇದಕ್ಕೂ ದೊಡ್ಡ ಕಳಂಕವೆಂದರೆ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯದಂಥ (ಇ.ಡಿ) ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ರಾಜಕೀಯ ವಿರೋಧಿಗಳನ್ನು ಹೆದರಿಸಿ ಬೆದರಿಸಿ, ಬಿಎಸ್‌ಪಿಯಂಥ ಒಂದು ದೊಡ್ಡ ಪಕ್ಷವನ್ನೇ ಡಮ್ಮಿ ಪಕ್ಷವನ್ನಾಗಿ ಪರಿವರ್ತಿಸಿ ಅಧಿಕಾರಕ್ಕೆ ಬರುವ ಸಂಚು. ರಾಜಕೀಯ ನೈತಿಕತೆಗೆ ತಿಲಾಂಜಲಿ ಕೊಟ್ಟು ಅಧಿಕಾರ ಕಾಪಾಡಿಕೊಳ್ಳುವ ಈ ಕೃತ್ಯವೂ ಭ್ರಷ್ಟಾಚಾರವಲ್ಲವೇ?

ಮಾಯಾವತಿ ಅವರ ರಾಜಕೀಯ ಯಾತ್ರೆ ‘ತಿಲಕ್ ತರಾಜು ಔರ್‌ ತಲ್ವಾರ್, ಇನಕೋ ಮಾರೋ ಜೂತೆ ಚಾರ್’ (ಸವರ್ಣ ಜಾತಿಗಳ ಸಂಕೇತಗಳಾದ ತಿಲಕ, ತಕ್ಕಡಿ ಮತ್ತು ತಲವಾರು, ಇವರುಗಳಿಗೆ ಚಪ್ಪಲಿಯಿಂದ ಹೊಡೆಯಿರಿ) ಎಂಬ ಯುದ್ಧಘೋಷದಿಂದ ಪ್ರಾರಂಭವಾಯಿತು. ಈ ಯಾತ್ರೆ ಈಗ ಶರಣಾಗತಿಯ ಹಂತಕ್ಕೆ ಬಂದು ಕೊನೆಗೊಳ್ಳಲಿದೆ. ಲಖನೌನ ಅಂಬೇಡ್ಕರ್ ಪಾರ್ಕಿನಲ್ಲಿ ಮಾಯಾವತಿ ಅವರ ಪ್ರತಿಮೆಯನ್ನು ನೋಡುತ್ತಾ ನಿಂತಾಗ, ಒಬ್ಬ ಬಲಶಾಲಿ ದಲಿತ- ಮಹಿಳಾ ನೇತಾರೆಗೆ ಹೀಗೇಕೆ ದುರ್ಗತಿ ಬಂದಿತು ಎಂಬ ಪ್ರಶ್ನೆ ನನ್ನಲ್ಲಿ ಮರುಕ ಹುಟ್ಟಿಸಿತಲ್ಲದೆ ಮೂರು ಸತ್ಯಗಳನ್ನು ಸ್ಪಷ್ಟಪಡಿಸಿತು.

ಒಂದು, ಇನ್ನು ಮುಂದೆ ಯಾವುದೇ ಸ್ವತಂತ್ರ ದಲಿತ ರಾಜಕಾರಣಕ್ಕೆ ಭಾರತದಲ್ಲಿ ಅವಕಾಶವಿಲ್ಲ. ಎರಡು, ಸ್ವಜನಲಾಭ ಮತ್ತು ಸ್ವಪ್ರತಿಷ್ಠೆಗಾಗಿ ಮಾತ್ರ ರಾಜಕಾರಣ ಮಾಡುವವರು ಕೊನೆಗೆ ಸ್ವಸಂರಕ್ಷಣೆಗಾಗಿ ಅಧಿಕಾರಸ್ಥರ ಕೈಗೊಂಬೆಗಳಾಗುತ್ತಾರೆ. ಮೂರು, ದಲಿತ- ಶೋಷಿತ ಸಮಾಜದ ಆರ್ಥಿಕ- ಸಾಮಾಜಿಕ ಉತ್ಥಾನ ಕೇವಲ ಭಾವನಾತ್ಮಕ ಹಾಗೂ ಸಾಂಕೇತಿಕ ರಾಜಕೀಯದಿಂದ ಸಾಧ್ಯವಿಲ್ಲ. ಅದಕ್ಕೆ ಮೌಲ್ಯಾಧಾರಿತ ವಿಚಾರ, ಆಚಾರಗಳ ಅಡಿಪಾಯವೂ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT