ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ‘ನಾವು ಶೇ 17ರಷ್ಟಿದ್ದೇವೆ, ಶೇ 8.5 ಮೀಸಲಾತಿ ಬೇಕು’

Last Updated 2 ಮಾರ್ಚ್ 2021, 1:58 IST
ಅಕ್ಷರ ಗಾತ್ರ

ಹೆಚ್ಚು ಮೀಸಲಾತಿ ಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಪ್ರಬಲ ಸಮುದಾಯಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಪ್ರಭಾವಿ ಒಕ್ಕಲಿಗ ಸಮುದಾಯವು ಈ ಗುಂಪಿಗೆ ಇತ್ತೀಚಿನ ಸೇರ್ಪಡೆ. ಒಕ್ಕಲಿಗರಲ್ಲಿರುವ ಎಲ್ಲ 115 ಉಪ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬುದು ಈ ಸಮುದಾಯದ ಆಗ್ರಹ. ಈ ಸಮುದಾಯದ ಇಬ್ಬರು ನಾಯಕರು ತಮ್ಮ ಬೇಡಿಕೆಯ ಹಿಂದಿನ ತರ್ಕವನ್ನು ಬಿಚ್ಚಿಟ್ಟಿದ್ದಾರೆ

ಆಡಿಟರ್‌ ನಾಗರಾಜ್‌ ಯಲಚವಾಡಿ

ಪ್ರಧಾನ ಸಂಚಾಲಕ, ರಾಜ್ಯ ಒಕ್ಕಲಿಗ ಮೀಸಲಾತಿ
ಹೋರಾಟ ಸಮಿತಿ

l ಒಕ್ಕಲಿಗರ ಮೀಸಲಾತಿ ಬೇಡಿಕೆ ಈಗ ಪ್ರಸ್ತುತವೇ?

1918ರಲ್ಲಿ ಕೆ.ಎಚ್‌. ರಾಮಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾಗ ಹಳೆ ಮೈಸೂರು ಭಾಗದಲ್ಲಿ ನೆಲೆಸಿದ್ದ ಶೇ 90ರಷ್ಟು ಜನರು ಒಕ್ಕಲುತನವನ್ನೇ ಅವಲಂಬಿಸಿದ್ದರು. ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆದ್ಯತೆ ಇರಲಿಲ್ಲ. ಅವರ ಪ್ರಸ್ತಾವನೆಯಂತೆ ಮೈಸೂರು ರಾಜರು ಮಿಲ್ಲರ್‌ ಆಯೋಗ ರಚಿಸಿದ್ದರು. ಆ ವರದಿಯಂತೆ, ಅಂದು ನಮ್ಮವರು ಶೇ 23, ಲಿಂಗಾಯತರುಶೇ 13, ವ್ಯಾಪಾರಿಗಳು ಶೇ 1, ಇತರೆಲ್ಲ ಶ್ರಮಿಕರುಶೇ 41, ಬ್ರಾಹ್ಮಣರು ಶೇ 2, ಪರಿಶಿಷ್ಟರು ಶೇ 20ರಷ್ಟು ಇದ್ದರು. ಆದರೆ, ನಮ್ಮವರ ಉದ್ಯೋಗ ಪ್ರಮಾಣ ಶೇ 1.58ರಷ್ಟು ಮಾತ್ರವಿತ್ತು. ಶೇ 2ರಷ್ಟಿದ್ದವರುಶೇ 70ರಷ್ಟು ಉದ್ಯೋಗಗಳನ್ನು ಪಡೆದುಕೊಂಡಿದ್ದರು. ಕರ್ನಾಟಕ ಏಕೀಕರಣದ ಬಳಿಕ ರಚನೆಯಾದ ನಾಗನಗೌಡ ಆಯೋಗ‌ ಒಕ್ಕಲಿಗರಲ್ಲಿ 115 ಉಪ ಜಾತಿ ಇರುವುದನ್ನು ಪಟ್ಟಿ ಮಾಡಿತ್ತು. ನಂತರ, ಹಾವನೂರು ಆಯೋಗ, ನಮ್ಮನ್ನು ಹಿಂದುಳಿದ ಸಮುದಾಯವೆಂದು ಗುರುತಿಸಿ ಶೇ 11ರಷ್ಟು ಮೀಸಲಾತಿಗೆ ಶಿಫಾರಸು ಮಾಡಿತ್ತು. 10 ವರ್ಷಗಳ ಬಳಿಕ ವೆಂಕಟಸ್ವಾಮಿ ಆಯೋಗ ರಚನೆಯಾದರೂ ಮಾಹಿತಿ ಕೊರತೆಯಿಂದ ಸಮರ್ಪಕ ವರದಿ ನೀಡಿರಲಿಲ್ಲ. ನಂತರ ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲಿ ನಾವು ಮುಂದುವರಿದ ಜನಾಂಗವೆಂದು ಗುರುತಿಸಿದ್ದರಿಂದ ಮೀಸಲಾತಿ ಇಲ್ಲದಾಯಿತು. ಆಗ ಸಮುದಾಯದ 10 ಲಕ್ಷಕ್ಕೂ ಹೆಚ್ಚು ಮಂದಿ ರಾಜ್ಯ ಒಕ್ಕಲಿಗರ ಸಂಘ, ಬಾಲ ಗಂಗಾಧರನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದರಿಂದ ನಮಗೆ ಶೇ 4ರಷ್ಟು ಮೀಸಲಾತಿ ಸಿಕ್ಕಿದೆ. ವೀರಪ್ಪ ಮೊಯಿಲಿ ಸಚಿವ ಸಂಪುಟವು ಸಮುದಾಯಕ್ಕೆಶೇ 9ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದ್ದರೂ ರಾಜಕೀಯ ಏರುಪೇರುಗಳಿಂದ ಜಾರಿಯಾಗಿಲ್ಲ. ಬೇರೆ ಸಮುದಾಯಗಳೂ ನಮ್ಮ ಜೊತೆ ಇರುವುದರಿಂದ ಒಕ್ಕಲಿಗರಿಗೆ ಶೇ 2.5ರಿಂದ ಶೇ 3ರಷ್ಟು ಮೀಸಲಾತಿ ಮಾತ್ರ ಸಿಕ್ಕಿದೆ. ಆದರೆ, ನಮ್ಮ ಜನಸಂಖ್ಯೆ ಶೇ 17ರಷ್ಟಿದೆ. ಸಂವಿಧಾನದ ಪ್ರಕಾರ ನಮಗೆ ಶೇ 8.5ರಿಂದ ಶೇ10ರಷ್ಟು ಮೀಸಲಾತಿ ಸಿಗಬೇಕಿದೆ.ಈಕಾರಣಕ್ಕೆ,ಸಮುದಾಯಕ್ಕೆಮಾರ್ಗದರ್ಶಕರಾದಆದಿಚುಂಚನಗಿರಿಮಠದನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೇಡಿಕೆ ಮುಂದಿಟ್ಟಿದ್ದೇವೆ.

l ರಾಜಕೀಯ ಪ್ರಾತಿನಿಧ್ಯ ಕೆಲವೇ ಉಪ ಪಂಗಡಗಳಿಗೆ ಸಿಕ್ಕಿದೆ. ಯಾಕೆ ಹೀಗೆ?

ಮೇಲ್ನೋಟಕ್ಕೆ ಹಾಗೆ ಅನಿಸಿದರೂ ವಾಸ್ತವ ಹಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ರಾಜಕೀಯವಾಗಿ ನಿರ್ಣಾಯಕ ಆಗಿದ್ದಾರೆ. ಎಲ್ಲ ಸರ್ಕಾರಗಳಲ್ಲಿ ಸಮುದಾಯದಿಂದ ಆಯ್ಕೆಯಾದವರು ಇದ್ದರು ಮತ್ತು ಈಗಲೂ ಇದ್ದಾರೆ. ವಿವಿಧ ಪಕ್ಷಗಳಲ್ಲಿಯೂ ಆಯಕಟ್ಟಿನ ಸ್ಥಾನಗಳಲ್ಲಿ ಇದ್ದಾರೆ. ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲೂ ರಾಜಕೀಯ ಪ್ರಾತಿನಿಧ್ಯ ಪಡೆದುಕೊಂಡ ಉಪಜಾತಿಗಳಿವೆ. ಆದರೆ, ವಲಸೆ ಬಂದ ಸಣ್ಣ ಸಣ್ಣ ಸಮುದಾಯಗಳು ವಂಚಿತವಾಗಿವೆ ಎನ್ನುವುದು ನಿಜ. ಈಗ ಎಲ್ಲ ಜಿಲ್ಲೆಗಳಿಂದ ರಾಜಕೀಯ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಯ ಮಾಹಿತಿ ಪಡೆಯುತ್ತಿದ್ದೇವೆ. ಸಾಮಾಜಿಕ ಸ್ಥಿತಿಗತಿಯನ್ನೂ ಅಧ್ಯಯನ ಮಾಡುತ್ತೇವೆ.

l ಆರ್ಥಿಕವಾಗಿ ಹಿಂದುಳಿದವರಿಗೆ (ಇಡಬ್ಲ್ಯುಎಸ್‌)ಕೇಂದ್ರ ಸರ್ಕಾರವು ಶೇ 10ರಷ್ಟು ಮೀಸಲಾತಿ ಘೋಷಿಸಿದೆ. ಅದರಡಿಯಲ್ಲಿ ಒಕ್ಕಲಿಗರೂ ಮೀಸಲಾತಿ ಪಡೆಯಬಹುದಲ್ಲ?

ಶೇ 80ರಷ್ಟು ಒಕ್ಕಲಿಗರು ಗ್ರಾಮೀಣ ಪ್ರದೇಶಗಳಲ್ಲಿದ್ದು, ಬಹುತೇಕರು ಕೃಷಿಯನ್ನು ಅವಲಂಬಿಸಿದ್ದಾರೆ. ಶೇ 20ರಷ್ಟು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿದ್ದಾರೆ. ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿರುವ ಅವರನ್ನು ಆರ್ಥಿಕವಾಗಿ ಸದೃಢರು ಎಂದು ಹೇಳುವ ಹಾಗಿಲ್ಲ. ಕೇಂದ್ರದ ಶೇ 10ರಷ್ಟು ಮೀಸಲಾತಿ ಸೌಲಭ್ಯದಿಂದ ನಗರ ಪ್ರದೇಶದ ಒಕ್ಕಲಿಗ ಸಮುದಾಯ ವಂಚಿತವಾಗಿದೆ. ಒಕ್ಕಲಿಗ ಮತ್ತು ಅದರ ಉಪ ಜಾತಿಗಳು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಆದರೆ, ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಒಕ್ಕಲಿಗ (ಗ್ರಾಮಾಂತರ ಒಕ್ಕಲಿಗ) ಮಾತ್ರ ನಮೂದಾಗಿದೆ. ಈ ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯದ ಸರ್ಪ ಒಕ್ಕಲಿಗ, ಹಳ್ಳಿಕಾರ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್‌ ಒಕ್ಕಲಿಗ, ದಾಸ ಒಕ್ಕಲಿಗ, ರೆಡ್ಡಿ ಒಕ್ಕಲಿಗ ಮತ್ತು ಮರಸು ಒಕ್ಕಲಿಗ ಪಂಗಡಗಳು ಸೇರಿವೆ. ಆದರೆ, ‘ಒಕ್ಕಲಿಗ’ ಎಂದು ಮಾತ್ರ ನಮೂದಿಸಿರುವ ನಗರ ಪ್ರದೇಶದ ಒಕ್ಕಲಿಗರು ಕೇಂದ್ರದ ಈ ಮೀಸಲಾತಿ ಪಡೆಯಲು ಸಾಧ್ಯವಾಗುತ್ತಿಲ್ಲ.

l ಒಕ್ಕಲಿಗರ ಸಂಖ್ಯೆ ಶೇ 17ರಷ್ಟು ಎಂದು ಹೇಳುತ್ತೀರಿ. ಎಲ್ಲಿಂದ ಸಿಕ್ಕಿತು ಈ ಸಂಖ್ಯೆ, ಸಮೀಕ್ಷೆ ಮಾಡಿಸಿದ್ದೀರಾ?

12–13 ಜಿಲ್ಲೆಗಳಲ್ಲಿ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜಿಲ್ಲೆಗಳಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ ನಮ್ಮ ಜನಸಂಖ್ಯೆ 95 ಲಕ್ಷದಿಂದ 1 ಕೋಟಿ ಇದೆ. ಹಿಂದಿನ ಸರ್ಕಾರ ನಾಮಕಾವಸ್ಥೆ ಜಾತಿಗಣತಿ ಮಾಡಿದೆ. ವೈಜ್ಞಾನಿಕವಾಗಿ ಆಗಿಲ್ಲ. ನನ್ನ ಮನೆ, ಊರಿಗೆ ಸಮೀಕ್ಷೆಗೆ ಬಂದಿಲ್ಲ. ನಮ್ಮೂರಲ್ಲಿ ಶೇ 90ರಷ್ಟು ಒಕ್ಕಲಿಗರಿದ್ದೇವೆ. ಎಲ್ಲರೂ ರೈತಾಪಿ ವರ್ಗದವರು. ಈ ವರದಿಯ ಹಿಂದೆ ರಾಜಕೀಯ ಪಿತೂರಿ ಇದೆ. ಒಂದು ಸಮುದಾಯಕ್ಕೆ ಮಹತ್ವ ಕೊಡುವ ಉದ್ದೇಶದಿಂದ ವರದಿ ಸಿದ್ಧಪಡಿಸಲಾಗಿದೆ. ಕಾಂತರಾಜ ಆಯೋಗದ ಈ ವರದಿಯನ್ನು ತಡೆಹಿಡಿಯಬೇಕು ಎನ್ನುವುದು ನಮ್ಮ ಬೇಡಿಕೆಯಲ್ಲಿದೆ. ಹೊಸತಾಗಿ ಜಾತಿಗಣತಿ ಮಾಡಬೇಕು.

l ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹೋರಾಟ ಹೇಗೆ?

ಎಲ್ಲ ಕಡೆ ನಮ್ಮ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ರಾಜಕೀಯವಾಗಿ ಹೋರಾಟ ಮಾಡಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುವ ಬದಲು, ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ಮೀಸಲಾತಿ ಪ್ರಮಾಣ ಹೆಚ್ಚಿಸುವ ವಿಚಾರದಲ್ಲಿ ರಾಜ್ಯ– ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ರಾಜಕೀಯ ಪ್ರತಿನಿಧಿಗಳು ಒತ್ತಡ ಹೇರಬೇಕು. ಅದು ಸಾಧ್ಯವಾಗದೇ ಇದ್ದರೆ, ಶಾಸಕರು, ಸಚಿವರಿಗೆ ಬುದ್ದಿ ಕಲಿಸುವ ಕಾಲವೂ ಬರಬಹುದು.

l ಯಾವುದೇ ಸರ್ಕಾರ ಬಂದರೂ ಒಕ್ಕಲಿಗ ಸಮುದಾಯವರು ಪ್ರಮುಖ ಸ್ಥಾನಗಳಲ್ಲಿರುತ್ತಾರೆ. ಸಂಸದರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಕೇಂದ್ರದ ಮೇಲೆ ಒತ್ತಡ ಹಾಕಬಹುದಲ್ವಾ?

ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ, ಸಚಿವರು ನಮ್ಮ ಬೇಡಿಕೆಯ ಮನವಿ ಪಡೆದುಕೊಂಡಿದ್ದಾರೆ. ಅವರು ಸ್ಪಂದಿಸುವ ನಿರೀಕ್ಷೆ ಇದೆ. ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂದು ಯೋಚನೆ ಮಾಡುತ್ತೇವೆ. ಕೇಂದ್ರದ ಮೇಲೂ ಒತ್ತಡ ತರುತ್ತೇವೆ. ಹಿಂದೆ ಬಾಲಗಂಗಾಧರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ಶೇ 4ರಷ್ಟು ಮೀಸಲಾತಿ ಸಿಕ್ಕಿದೆ. ಆದರೆ, ನಮ್ಮ ಜೊತೆ ಬೇರೆ ಸಮುದಾಯಗಳನ್ನೂ ಸೇರಿಸಿರುವುದರಿಂದ ಹೆಚ್ಚೆಂದರೆ ಶೇ 3ರಷ್ಟು ಸಿಗಬಹುದು. ಅಂದರೆ, ಶೇ 15ರಿಂದ ಶೇ 17ರಷ್ಟು ಜನಸಂಖ್ಯೆ ಇರುವ ಸಮುದಾಯಕ್ಕೆ ಶೇ 3ರಷ್ಟು ಮೀಸಲಾತಿ ಅಷ್ಟೆ. 115 ಪಂಗಡಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಆಧರಿಸಿ ಕೆಲವು ಪಂಗಡಗಳನ್ನು 2ಎ, ಪ್ರವರ್ಗ 1 ಮತ್ತು 3ಬಿಗೆ ಸೇರಿಸಲಾಗಿದೆ. ರಾಜ್ಯದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ (ಒಬಿಸಿ) ಕೇವಲ 33 ಪಂಗಡಗಳು ಮಾತ್ರ ಸೇರಿವೆ. ಒಕ್ಕಲಿಗ ಸಮುದಾಯದ ಎಲ್ಲ 115 ಪಂಗಡಗಳನ್ನು ಸೇರಿಸಿಲ್ಲ.

ಸಂದರ್ಶನ– ರಾಜೇಶ‌ ರೈ ಚಟ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT