ಶನಿವಾರ, ಅಕ್ಟೋಬರ್ 1, 2022
20 °C

ಅಮೃತ ಹೊನಲು: ನೈಜ ಸ್ವಾತಂತ್ರ್ಯ ಎಂದರೇನು? ಅದರ ಅರ್ಥ ಹೇಳಲೇನು?

ಸುಂದರ್‌ ಸರುಕ್ಕೈ Updated:

ಅಕ್ಷರ ಗಾತ್ರ : | |

ಹೌದು, ನಮ್ಮ ಸ್ವತಂತ್ರ ಭಾರತಕ್ಕೆ ಈಗ ಭರ್ತಿ 75 ವರ್ಷ! ಅಮೃತ ಮಹೋತ್ಸವದ ತಿಟ್ಹತ್ತಿ ತಿರುಗಿ ನೋಡಿದರೆ ಸಂಭ್ರಮ, ವಿಷಾದ ಒಟ್ಟೊಟ್ಟಿಗೇ ಆಗುತ್ತವೆ. ಏಳೂವರೆ ದಶಕಗಳ ಪಯಣದ ಹಿನ್ನೋಟದ ಜತೆಗೆ ದೇಶದ ಭವಿಷ್ಯದ ಚಿಂತನೆಗಳು ಪುರವಣಿಯ ಈ ವಾರದ ವಿಶೇಷ...

ಸಾಮಾನ್ಯವಾಗಿ ಸ್ವಾವಲಂಬನೆಯನ್ನು (Independence) ಸ್ವಾತಂತ್ರ್ಯದೊಂದಿಗೆ (Freedom) ಸಮೀಕರಿಸುತ್ತಾ ಜನ ಗೊಂದಲಕ್ಕೆ ಬೀಳುತ್ತಾರೆ. ಭಾರತವು 1947ರಲ್ಲಿ ಸ್ವಾವಲಂಬನೆಯನ್ನೇನೋ ಸಾಧಿಸಿದೆ. ಆದರೆ, ಅದು ಸ್ವತಂತ್ರಗೊಂಡಿದೆಯೇ? ಸ್ವಾವಲಂಬನೆ ಮತ್ತು ಸ್ವಾತಂತ್ರ್ಯದ ನಡುವೆ ಬಹು ಸೂಕ್ಷ್ಮ ಹಾಗೂ ಅಷ್ಟೇ ಮುಖ್ಯ ವ್ಯತ್ಯಾಸವಿದೆ. ಸ್ವಾವಲಂಬನೆ ಎನ್ನುವುದು ಇನ್ನೊಬ್ಬರ ಅವಲಂಬನೆಯಿಂದ ಸಂಪೂರ್ಣವಾಗಿ ಮುಕ್ತರಾಗುವುದು. ಆದರೆ, ಸ್ವಾತಂತ್ರ್ಯದ ಅರ್ಥ ಇನ್ನೂ ವಿಶಾಲವಾಗಿದೆ. ಮುಕ್ತ ಅಥವಾ ಸ್ವತಂತ್ರರಾಗುವುದರಲ್ಲಿ ಎರಡು ವಿಧ: ಒಂದು, ನಿರ್ಬಂಧಗಳು ಮತ್ತು ಅವಲಂಬನೆಯಿಂದ ಮುಕ್ತರಾಗುವುದು (freedom-from). ಇನ್ನೊಂದು, ನಾವು ಬಯಸಿದ್ದನ್ನು ಮಾಡಲು ಸ್ವತಂತ್ರರಾಗುವುದು (freedom-towards). ನಿರ್ಬಂಧಗಳಿಂದ ಬಿಡುಗಡೆ ಹೊಂದಿದ ಮಾತ್ರಕ್ಕೆ ನಾವು ಪರಿಪೂರ್ಣ ಸ್ವಾತಂತ್ರ್ಯ ಪಡೆದಂತಲ್ಲ. ಬಯಸಿದ್ದನ್ನು ಮಾಡುವ ಮುಕ್ತ ಅವಕಾಶದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಿಕೊಂಡರಷ್ಟೇ ನಾವು ನೈಜ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯ.

ಇಷ್ಟಾಗಿಯೂ, ರಾಷ್ಟ್ರದ ಸ್ವಾತಂತ್ರ್ಯವು ವ್ಯಕ್ತಿಗತ ಸ್ವಾತಂತ್ರ್ಯಕ್ಕಿಂತ ಭಿನ್ನ ಎನ್ನುವುದನ್ನು ಇಲ್ಲಿ ಒತ್ತಿ ಹೇಳಬೇಕು. ಯಾವುದೇ ವ್ಯಕ್ತಿಯೊಬ್ಬ ಸ್ವತಂತ್ರಗೊಂಡ ಮಾತ್ರಕ್ಕೆ ಆತ/ಅವಳು ಮನಬಂದಂತೆ ನಡೆದುಕೊಳ್ಳುವಂತಿಲ್ಲ. ಉದಾಹರಣೆಗೆ, ನಾವು ಕರ ಪಾವತಿಸುವುದನ್ನು ನಿರಾಕರಿಸುವಂತಿಲ್ಲ ಅಥವಾ ಯಾರದ್ದೋ ಹಣವನ್ನು ದೋಚುವಂತೆಯೂ ಇಲ್ಲ. ಆದರೆ, ಅದೇ ಕಾಲಕ್ಕೆ ನಾವು ಹಲವು ಕ್ರಿಯೆಗಳನ್ನು ಮುಕ್ತರಾಗಿ ಮಾಡಬಹುದು. ಸ್ವಾತಂತ್ರ್ಯವೆಂದರೆ ಆಯ್ಕೆಯ ಅವಕಾಶ ಎಂದು ಹೆಚ್ಚಿನವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನು ಶಾಪಿಂಗ್‌ ಉದಾಹರಣೆ ಮೂಲಕ ನೋಡಬಹುದು. ಅಲ್ಲಿ ಖರೀದಿಸಲು ಹೆಚ್ಚಿನ ಆಯ್ಕೆಗಳಿವೆ ಎಂದರೆ, ನಾವು ಬಯಸಿದ್ದನ್ನು ಕೊಳ್ಳುವ ಸ್ವಾತಂತ್ರ್ಯ ನಮಗಿದೆ ಎಂದು ನಾವು ಪರಿಭಾವಿಸುತ್ತೇವೆ.

ಆದರೆ, ಸ್ವತಂತ್ರರಾಗುವುದೆಂದರೆ ಗ್ರಾಹಕನ ಆಯ್ಕೆಯ ಅವಕಾಶಕ್ಕಿಂತ ಹೆಚ್ಚಿನದು. ನೀವು ಬಯಸಿದ್ದನ್ನು ಯಾವುದೇ ಭಯವಿಲ್ಲದೆ ಮಾಡುವ ಸಾಮರ್ಥ್ಯ ಅದು. ಯಾವ ದೇಶದ ಬೀದಿಗಳಲ್ಲಿ ಮಹಿಳೆಯು ಒಬ್ಬಂಟಿಯಾಗಿ ಮಧ್ಯರಾತ್ರಿಯೂ ಓಡಾಡಲು ಸಾಧ್ಯವೋ, ಯಾವ ದೇಶದ ಮಗುವೊಂದು ಯಾವುದೇ ಭಯವಿಲ್ಲದೆ ರಸ್ತೆ ದಾಟಲು ಸಾಧ್ಯವೋ, ಯಾವ ದೇಶದಲ್ಲಿ ಪ್ರಜೆಗಳು ಆಹಾರ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯ ಆತಂಕವನ್ನು ಅನುಭವಿಸುವುದಿಲ್ಲವೋ ಅದೇ ಮುಕ್ತ ರಾಷ್ಟ್ರ. ಭಯ ಮುಕ್ತ ಎನ್ನುವುದು ಹೆಚ್ಚಾಗಿ ರಾಜಕೀಯ ಸ್ವಾತಂತ್ರ್ಯದ ವ್ಯಾಖ್ಯಾನ. ನೆಲದ ಕಾನೂನು ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಿ ಯಾವುದೇ ಕ್ರಿಯೆಯನ್ನು ನಡೆಸಲು ಪ್ರಜೆಗಳು ಮುಕ್ತರಾಗಿರುವ ವಾತಾವರಣ ನಿರ್ಮಾಣವಾದರೆ ಆಗ ದೇಶ ನಿಜವಾಗಿಯೂ ಸ್ವತಂತ್ರವಾದಂತೆ.

ರಾಷ್ಟ್ರದ ಸ್ವಾವಲಂಬನೆಯನ್ನು, ಅದರ ಆಯ್ಕೆಯ ಸ್ವಾತಂತ್ರ್ಯ ಎಂದು ಪರಿಭಾವಿಸಬೇಕಿಲ್ಲ. ಇದೇನು ದೇಶ ತನ್ನ ಮನಬಂದಂತೆ ನಡೆದುಕೊಳ್ಳಲು ಸಿಕ್ಕ ಮುಕ್ತ ಅವಕಾಶವೂ ಅಲ್ಲ. ಸಾಮಾನ್ಯವಾಗಿ ದೇಶ ಮತ್ತು ಅಧಿಕಾರದಲ್ಲಿರುವ ಸರ್ಕಾರ ಎರಡನ್ನೂ ಸಮೀಕರಿಸುವ ತಪ್ಪನ್ನು ನಾವು ಮಾಡುತ್ತೇವೆ. ದೇಶದ ಸ್ವಾತಂತ್ರ್ಯವು ಅಧಿಕಾರ ನಡೆಸುವ ಸರ್ಕಾರಕ್ಕೆ ಸ್ವೇಚ್ಛಾಚಾರದಿಂದ ನಡೆದುಕೊಳ್ಳಲು ಕೊಟ್ಟ ಅಧಿಕಾರವೇನಲ್ಲ. ಹಾಗಾದರೆ ದೇಶದ ಸ್ವಾತಂತ್ರ್ಯದ ನಿಜವಾದ ಸ್ವರೂಪ ಏನು?

ಸ್ವತಂತ್ರ ರಾಷ್ಟ್ರದಲ್ಲಿ ಸರ್ಕಾರದ ಮೂಲಭೂತ ಕಾರ್ಯವೇನೆಂದರೆ ತನ್ನ ನಾಗರಿಕರಿಗೆ ನೈಜ ಸ್ವಾತಂತ್ರ್ಯವನ್ನು ಒದಗಿಸುವುದು. ಹೌದು, ಮುಕ್ತ ಸಮಾಜ ನಿರ್ಮಾಣದ ಆಶಯ ಈಡೇರಿಸಲು ಅದೊಂದೇ ದಾರಿ. ಹಾಗಾದರೆ ಸರ್ಕಾರವೊಂದು ತನ್ನ ಪ್ರಜೆಗಳಿಗೆ ಯಾವ ರೀತಿಯ ಸ್ವಾತಂತ್ರ್ಯವನ್ನು ಒದಗಿಸಬಲ್ಲದು? ಬಡತನದ ರೇಖೆಗಿಂತ ಕೆಳಗಿರುವ ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತರನ್ನಾಗಿ ಮಾಡುವುದು, ಅವರಿಗೆ ಹೊಟ್ಟೆತುಂಬಾ ಊಟ, ಕುಡಿಯಲು ಶುದ್ಧ ನೀರು ಸಿಗುವಂತೆ ನೋಡಿಕೊಳ್ಳುವುದು, ಮಕ್ಕಳು ಶಾಲೆಗೆ ಹೋಗಿ, ಕಲಿಕೆಯ ಆನಂದವನ್ನು ಆಸ್ವಾದಿಸುವ ಅವಕಾಶ ನೀಡುವುದು, ಪ್ರತಿಯೊಬ್ಬ ಪ್ರಜೆಗೆ ಸಕಲ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವುದು ಮತ್ತು ಎಲ್ಲರೂ ಭಯಮುಕ್ತರಾಗಿ ಬದುಕುವಂತಹ ವಾತಾವರಣ ನಿರ್ಮಿಸುವುದು – ಇವು ಸರ್ಕಾರವೊಂದು ತನ್ನ ಪ್ರಜೆಗಳಿಗೆ ನೀಡಬೇಕಾದ ಮೂಲಭೂತ ಸ್ವಾತಂತ್ರ್ಯಗಳು. ಬ್ರಿಟಿಷ್‌ ಆಡಳಿತದಿಂದ ಮುಕ್ತವಾಗಿದ್ದೊಂದೇ ಸ್ವಾತಂತ್ರ್ಯ ಎಂದು ವ್ಯಾಖ್ಯಾನಿಸುವುದಲ್ಲ.

ಕಳೆದ 75 ವರ್ಷಗಳಲ್ಲಿ ನಾವು ಸ್ವಾತಂತ್ರ್ಯವನ್ನು ಹೇಗೆ ಅನುಭವಿಸಿದ್ದೇವೆ ಮತ್ತು ಯಾವೆಲ್ಲ ಸ್ವಾತಂತ್ರ್ಯವನ್ನು ನಮ್ಮ ಜನ ಹೊಂದಿದ್ದಾರೆ? ತುಲನಾತ್ಮಕವಾಗಿ ಹೇಳುವುದಾದರೆ, ನಮ್ಮ ರಾಜಕೀಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೇನೋ ನಮಗೀಗ ಇದೆ. ಆ ಅರ್ಥದಲ್ಲಿ, ಪ್ರಜಾಪ್ರಭುತ್ವದ ಉಳಿವು ನಮ್ಮಲ್ಲಿರುವ ಒಂದು ಸಕಾರಾತ್ಮಕವಾದ ಸ್ವಾತಂತ್ರ್ಯವಾಗಿದೆ. ಇನ್ನೊಂದು ನಿಟ್ಟಿನಲ್ಲಿ, ಸಮಾಜದ ಪ್ರಬಲರ ಲಾಭಕ್ಕಾಗಿಯೇ ಸ್ವಾತಂತ್ರ್ಯ ಬಳಕೆಯಾಗುತ್ತಿರುವಂತೆ ತೋರುತ್ತಿದೆ. ರಾಷ್ಟ್ರದ ಸ್ವಾತಂತ್ರ್ಯ ಎನ್ನುವುದು ಅಂಥವರ ಪಾಲಿಗೆ ವೈಯಕ್ತಿಕವಾಗಿ ದಕ್ಕಿದ ವಿಶೇಷಾಧಿಕಾರ ಎನಿಸಿಬಿಟ್ಟಿದೆ.

1922 ಮತ್ತು 2022

ನಿಜಕ್ಕೂ 75 ವರ್ಷಗಳ ಈ ಸ್ವಾತಂತ್ರ್ಯವನ್ನು ಹೇಗೆ ಅರ್ಥೈಸುವುದು? ಒಂದು ಕಲ್ಪನೆಯ ಮೂಲಕ ಇದನ್ನು ತುಂಬಾ ಸೊಗಸಾಗಿ ಅರ್ಥೈಸಿಕೊಳ್ಳಬಹುದು. ಬ್ರಿಟಿಷ್‌ ಆಳ್ವಿಕೆಯ ಭಾರತದ ಭಾಗವಾಗಿದ್ದ ಕರ್ನಾಟಕದಲ್ಲಿ ನೀವು 1922ರಲ್ಲಿ ಜೀವಿಸಿದ್ದಿರಿ ಎಂದು ಕಲ್ಪಿಸಿಕೊಳ್ಳಿ. 1922ರ ನಿಮ್ಮ ದೈನಂದಿನ ಜೀವನವು 2022ರ ದೈನಂದಿನ ಬದುಕಿಗಿಂತ ಹೆಚ್ಚಿನ ವ್ಯತ್ಯಾಸವೇನೂ ಇದ್ದಿರಲಾರದು. ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ನೀವು ಈಗ ಮಾಡುತ್ತಿರುವ ಹಲವು ಕ್ರಿಯೆಗಳನ್ನು ಆಗಲು ಮಾಡಿರುತ್ತಿದ್ದಿರಿ. ನಿಮ್ಮ ದೈನಂದಿನ ಆಹಾರ ಕ್ರಮವಾಗಲಿ, ಮಾತನಾಡುವ ಭಾಷೆಯಾಗಲಿ ಅಥವಾ ನಿಮ್ಮ ಆಸೆ–ಆಕಾಂಕ್ಷೆಗಳಾಗಲಿ ಈಗಿನಕ್ಕಿಂತ ಆಗ ಅಷ್ಟೊಂದು ಬದಲಾವಣೆಗಳು ಇರುತ್ತಿರಲಿಲ್ಲ. ಹಲವು ಹಬ್ಬಗಳನ್ನು ಆಗಲೂ ಈಗಿನಂತೆಯೇ ಆಚರಿಸುತ್ತಿದ್ದಿರಿ. ಆಗಿನ ಸಂದರ್ಭಕ್ಕೂ ಈಗಿನ ಸನ್ನಿವೇಶಕ್ಕೂ ನಡುವೆ ಇರುವ ಮಹತ್ತರ ಬದಲಾವಣೆಯೆಂದರೆ ತಂತ್ರಜ್ಞಾನದ ಗ್ಯಾಜೆಟ್‌ಗಳಿಗೆ ನೀವು ಈಗಿನಂತೆ ಆಗ ಆತುಕೊಂಡಿರುತ್ತಿರಲಿಲ್ಲ.

ಈ ರೀತಿಯಾಗಿ 1922ರಲ್ಲಿ ನೀವು ಕಾಲ ಕಳೆಯುತ್ತಿದ್ದಿರಿ. ದೇಶದ ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿದ್ದ ಜನ ಸಹ
ಹೀಗೇ ಕಾಲ ಕಳೆಯುತ್ತಿದ್ದರು. ಪ್ರಾಯಶಃ ಭಾರತವನ್ನು ಆಗಯಾರು ‘ಆಳುತ್ತಿದ್ದಾರೆ’ ಎಂದು ತಲೆಕೆಡಿಸಿಕೊಳ್ಳುವ ಗೋಜಿಗೂ ಅವರು ಹೋಗಿರುತ್ತಿರಲಿಲ್ಲ. ಒಂದುವೇಳೆ ಬ್ರಿಟಿಷರ ಆಳ್ವಿಕೆಯಿದೆ ಎಂದು ಅವರಿಗೆ ಗೊತ್ತಾಗಿದ್ದರೂ ಅಷ್ಟು ಮಾಹಿತಿಯಿಂದ ಅವರಿಗೆ ಏನು ಅರ್ಥವಾಗಿರುತ್ತಿತ್ತು? ಪ್ರಜೆಗಳ ದೈನಂದಿನ ಸಾಂಸ್ಕೃತಿಕ ಜೀವನದ ಮೇಲೆ ಆಡಳಿತದ ಪ್ರಭಾವ ಏನೂ ಇಲ್ಲದಿದ್ದರೆ ನಿಜಕ್ಕೂ ತಮ್ಮನ್ನು ಆಳುತ್ತಿರುವುದು ಯಾರು ಎಂದು ಅವರು ತಲೆ ಕೆಡಿಸಿಕೊಳ್ಳಲು ಸಾಧ್ಯವೇ? ಈ ವಿಷಯ ಚೆನ್ನಾಗಿ ಗೊತ್ತಿದ್ದಿದ್ದರಿಂದಲೇ ಬ್ರಿಟಿಷರು ಇಲ್ಲಿನ ಜನರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೈ ಹಾಕಲಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಜನರನ್ನು ಒತ್ತಾಯಿಸುವ ಗೋಜಿಗೂ ಅವರು ಹೋಗಲಿಲ್ಲ.

ಅದರ ಬದಲು ಶಿಕ್ಷಣದ ರೂಪದಲ್ಲಿ, ಭಾಷೆ ಮತ್ತು ಪಠ್ಯವನ್ನು ಅದರಲ್ಲಿ ಅಳವಡಿಸಿಕೊಳ್ಳುವ ರೂಪದಲ್ಲಿ ಬೇರೆಯದೇ ಆದ ನವಿರಾದ ಹಾದಿಯನ್ನು ಅವರು ಕಂಡುಕೊಂಡಿದ್ದರು.

1922ರಲ್ಲಿ ನೀವೊಂದು ವೇಳೆ ರಾಜಕೀಯವಾಗಿ ಕ್ರಿಯಾಶೀಲರಾಗಿದ್ದರೆ ಆಗಮಾತ್ರ ನಿಮ್ಮ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಆಗ ನೀವು ಬ್ರಿಟಿಷ್‌ ಸರ್ಕಾರದ ನೀತಿ, ನಿಲುವುಗಳನ್ನು ಟೀಕಿಸುವುದನ್ನು ಅಥವಾ ಅವರ ಕ್ರಮಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ಬಿಡುತ್ತಿರಲಿಲ್ಲ. ಹೀಗಾಗಿ, ತಮ್ಮ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ ಪ್ರಜೆಗಳನ್ನು ಬಂಧಿಸಲು ಮತ್ತು ಅವರಿಗೆ ಕಿರುಕುಳ ನೀಡಲು ಬ್ರಿಟಿಷರು ‘ದೇಶದ್ರೋಹ ಕಾನೂನು’ ರೂಪಿಸಿದ್ದರು. ನಿತ್ಯದ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ಸಾಮಾನ್ಯ ಪ್ರಜೆಗಳಿಗೆ ಈ ಕಾನೂನಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ, ಲಕ್ಷಾಂತರ ಸಾಮಾನ್ಯ ಜನ ಮತ್ತು ಮುಖಂಡರ ನಿರಂತರ ಪ್ರತಿಭಟನೆ ಮತ್ತು ಆಂದೋಲನದ ಫಲಶ್ರುತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಯಿತು.

ನಾವೀಗ 2022ರಲ್ಲಿದ್ದೇವೆ. ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಲ್ಲಿ ಪರಿಸ್ಥಿತಿ ಏನಾದರೂ ಬದಲಾಗಿದೆಯೇ? 1922ರಲ್ಲಿ ಇದ್ದಂತೆಯೇ ಈಗಲೂ ಸರ್ಕಾರದ ನೀತಿ, ನಿಲುವುಗಳನ್ನು ಟೀಕಿಸುವುದು ಅಪಾಯಕಾರಿ ಎಂಬ ವಾತಾವರಣವೇ ಇಲ್ಲವೇ? 1922ರಲ್ಲಿ ದೆಹಲಿಯಲ್ಲಿದ್ದ ಬ್ರಿಟಿಷ್‌ ಆಡಳಿತಗಾರರನ್ನು ಕಾಣುವುದು ಹೇಗೆ ಸಾಧ್ಯವಿರಲಿಲ್ಲವೋ ಹಾಗೆಯೇ ಈಗಲೂ ದೆಹಲಿಯಲ್ಲಿ ಕುಳಿತು ನಮ್ಮನ್ನು ಆಳುತ್ತಿರುವವರ ಸಮೀಪ ಹೋಗುವುದು ಕೂಡ ಅಸಾಧ್ಯವೇ ಆಗಿದೆ.

ಸಮಾಜದ ಎಲ್ಲ ಹಂತಗಳಲ್ಲಿ, ಪ್ರಾಯಶಃ 1922ಕ್ಕಿಂತ ಹೆಚ್ಚಾಗಿ, 2022ರಲ್ಲಿ ಭಯ ಆವರಿಸಿದೆ. ಪೋಷಕರಲ್ಲಿ, ಶಾಲೆಗಳಲ್ಲಿ, ಉದ್ಯೋಗದ ಸ್ಥಳಗಳಲ್ಲಿ, ಸಾರ್ವಜನಿಕ ತಾಣಗಳಲ್ಲಿ ಭಯದ ಉಪಸ್ಥಿತಿಯನ್ನು ಕಾಣಬಹುದಾಗಿದೆ. ನಮ್ಮ ಶಾಲಾ–ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ‘ರಾಜಕೀಯ’ಕ್ಕೆ ಸಂಬಂಧಿಸಿದ್ದನ್ನು ಮಾತನಾಡಲು ಭೀತಿಯಿಂದ ಹಿಂಜರಿಯುತ್ತಿದ್ದಾರೆ. ಹವಾಮಾನ ಬದಲಾವಣೆಗೆ ಕಾರಣವಾದ ಅಂಶಗಳ ವಿರುದ್ಧ ಪ್ರತಿಭಟಿಸಲು ಸಹ ಅವರು ಹೆದರುತ್ತಿದ್ದಾರೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕರು ಮೂಕರಾಗಿ ದೀರ್ಘ ಸಮಯವೇ ಆಗಿದೆ. ಆದರೆ, ಅವರೆಂದಿಗೂ 2022ರಂತೆ ಮೌನಕ್ಕೆ ಶರಣಾಗಿರಲಿಲ್ಲ. ಸರ್ಕಾರ ಬಯಸದ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಏನನ್ನೂ ಬರೆಯಬಾರದು ಎಂದು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಯಾವುದನ್ನು ವರದಿ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿಷಯವಾಗಿ ಮಾಧ್ಯಮವೂ ಭೀತಿಯಿಂದ ಯೋಚಿಸುವಂತಹ ವಾತಾವರಣ ನಿರ್ಮಾಣವಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ಮುಸ್ಲಿಮನೂ –ಆತ ಕೂಡ ನನ್ನ, ನಿಮ್ಮಂತಹ ಸಾಮಾನ್ಯ ಪ್ರಜೆ– ನಿತ್ಯದ ಜೀವನವನ್ನು ಹೇಗೆ ಭೀತಿಯಿಂದ ಕಳೆಯುವಂತಾಗಿದೆ ಎಂಬ ವಿಷಯವಾಗಿಯೇ ಮಾತನಾಡುತ್ತಿದ್ದಾನೆ. ಭಾರತದಲ್ಲಿ ಈಗ ತಮಗೂ ತಮ್ಮ ಮಕ್ಕಳಿಗೂ ಏನು ಕಾದಿದೆಯೋ ಎಂಬ ಭೀತಿ ಆ ಸಮುದಾಯವನ್ನು ಆವರಿಸಿದೆ.

ಸರ್ಕಾರದ ವಿರುದ್ಧದ ಟೀಕೆಗೆ 1922ಕ್ಕಿಂತ ಈಗಿನ ಪ್ರತೀಕಾರದ ಕ್ರಮ ಕ್ರೂರವಾಗಿದೆಯೇ? 2022ರ ಭಯದ ವಾತಾವರಣ ಇನ್ನೂ ತೀವ್ರವಾಗಿದೆಯೇ? ಪ್ರಜೆಗಳನ್ನು ಬಂಧಿಸುವ ದೆಹಲಿ ಇಲ್ಲವೆ ರಾಜ್ಯದ ರಾಜಧಾನಿಗಳಲ್ಲಿರುವ ಸರ್ಕಾರಗಳು, 1922ರಲ್ಲಿದ್ದಂತೆ ‘ವಿದೇಶಿ’ ಸರ್ಕಾರ ಅಲ್ಲವೆನ್ನುವುದು ಈ ಭೀತಿ ಇನ್ನೂ ಹೆಚ್ಚಲು ಕಾರಣವೇ? ಸರ್ಕಾರದ ಜತೆಗೆ ಪಕ್ಷದ ಸದಸ್ಯರ ರೂಪದ ‘ನಾಗರಿಕ ಸೇನೆ’ ಆಗಿನ ಬ್ರಿಟಿಷ್‌ ಸರ್ಕಾರಕ್ಕಿಂತ ಕ್ರೂರವಾಗಿ ನಡೆದುಕೊಳ್ಳುವ ರೀತಿ ಕಳವಳ ಮೂಡಿಸಿದೆಯೇ?

ಹಾಗಾದರೆ, ಎಲ್ಲಿಗೆ ಬಂತು, ಯಾರಿಗೆ ಬಂತು 75ರ ಸ್ವಾತಂತ್ರ್ಯ?

****

ಲೇಖಕ: ಚಿಂತಕ, ಮಕ್ಕಳಿಗಾಗಿ ತತ್ವಚಿಂತನೆ ಕೃತಿಯ ಲೇಖಕ. ಅವರ The Social Life of Democracy ಪ್ರಕಟಣೆಯ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು