ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮುಕ್ತ ಮಾರುಕಟ್ಟೆಗೆ ಪರ್ಯಾಯ ಯಾವುದು?

Last Updated 18 ಮಾರ್ಚ್ 2022, 21:15 IST
ಅಕ್ಷರ ಗಾತ್ರ

ಅಮೆರಿಕದ ಹೆಚ್ಚಿನ ಜನರ ಪಾಲಿಗೆ ವೇತನದ ಮೊತ್ತ ಹೆಚ್ಚೂಕಡಿಮೆ ಒಂದೇ ಮಟ್ಟದಲ್ಲಿ ಉಳಿದು ದಶಕಗಳು ಸಂದಿವೆ. ಅಸಮಾನತೆಯು ತೀವ್ರ ಮಟ್ಟದಲ್ಲಿ ಏರಿಕೆ ಆಗಿದೆ. ಜಾಗತೀಕರಣ ಮತ್ತು ತಂತ್ರಜ್ಞಾನವು ಕೆಲವರನ್ನು ಶ್ರೀಮಂತಗೊಳಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಉದ್ಯೋಗ ನಷ್ಟಕ್ಕೆ ಅವು ಇಂಬು ಕೊಟ್ಟಿವೆ. ಸಮುದಾಯಗಳನ್ನು ಬಡವಾಗಿಸಿವೆ.

ಮುಕ್ತ ಮಾರುಕಟ್ಟೆಗಳು, ಮುಕ್ತ ವ್ಯಾಪಾರ ಮತ್ತು ಸರ್ಕಾರದ ಪಾತ್ರವು ಮಾರುಕಟ್ಟೆಯಲ್ಲಿ ಹೆಚ್ಚಿರಬಾರದು ಎಂದು ಹೇಳುವ ಚಿಂತನಾ ಕ್ರಮದಿಂದ ಹುಟ್ಟಿಕೊಂಡ ಸರ್ಕಾರದ ನೀತಿಗಳು, ಕಾರ್ಪೊರೇಟ್ ಆಚರಣೆಗಳು ಈ ಸಮಸ್ಯೆಗಳಿಗೆ ಒಂದಿಷ್ಟು ಕೊಡುಗೆ ನೀಡಿವೆ ಎಂದು ಹಲವು ಅರ್ಥಶಾಸ್ತ್ರಜ್ಞರು ವಾದಿಸುತ್ತಿದ್ದಾರೆ. ಅರ್ಥವ್ಯವಸ್ಥೆಯನ್ನು ಈಗ ಹೊಸ ಆಲೋಚನೆಗಳು ಮುನ್ನಡೆಸಬೇಕು ಎಂದು ಒಂದಿಷ್ಟು ಜನ ದಾನಿಗಳು ಹಾಗೂ ಅಕಾಡೆಮಿಕ್‌ ವಲಯದ ಪ್ರಮುಖರು ಪ್ರತಿಪಾದಿಸುತ್ತಿದ್ದಾರೆ. ದಿ ವಿಲಿಯಂ ಆ್ಯಂಡ್ ಫ್ಲೋರಾ ಹ್ಯೂಲೆಟ್ ಫೌಂಡೇಷನ್ ಮತ್ತು ಒಮಿದ್ಯಾರ್ ನೆಟ್‌ವರ್ಕ್‌ ಈಚೆಗೆ, ಪರ್ಯಾಯ ಆರ್ಥಿಕ ವ್ಯವಸ್ಥೆಗಳ ಬಗ್ಗೆ ಸಂಶೋಧನೆಗೆ 41 ಮಿಲಿಯನ್ ಡಾಲರ್‌ಗೂ (ಸುಮಾರು ₹ 312 ಕೋಟಿ) ಹೆಚ್ಚು ಹಣ ಒದಗಿಸುವುದಾಗಿ ಘೋಷಿಸಿವೆ.

‘ನವ ಉದಾರವಾದವು ಸತ್ತಿದೆ. ಆದರೆ, ಅದಕ್ಕೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆಯನ್ನು ನಾವು ಬೆಳೆಸಿಲ್ಲ’ ಎಂದು ಹೇಳುತ್ತಾರೆ ಹ್ಯೂಲೆಟ್ ಪ್ರತಿಷ್ಠಾನದ ಅಧ್ಯಕ್ಷ ಲ್ಯಾರಿ ಕ್ರೇಮರ್. ಸಂಶೋಧನಾ ಕಾರ್ಯ ಕ್ರಮಗಳನ್ನು ಆರಂಭಿಸಲು ಮೊದಲ ಹಂತದಲ್ಲಿ ಅನು ದಾನ ಪಡೆದುಕೊಂಡ ಸಂಸ್ಥೆಗಳ ಸಾಲಿನಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದ ಕೆನಡಿ ಸ್ಕೂಲ್, ಹೋವಾರ್ಡ್ ವಿಶ್ವವಿದ್ಯಾಲಯ, ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಸಾಂತಾ ಫೆ ಇನ್‌ಸ್ಟಿಟ್ಯೂಟ್ ಸೇರಿವೆ.

ಫೋರ್ಡ್ ಪ್ರತಿಷ್ಠಾನ ಹಾಗೂ ಓಪನ್ ಸೊಸೈಟಿ ಪ್ರತಿಷ್ಠಾನ ಕೂಡ ಈ ಕಾರ್ಯಕ್ರಮಗಳಲ್ಲಿ ತಾವು ಕೈಜೋಡಿಸುವುದಾಗಿ ಘೋಷಿಸಿವೆ. ಇದೇ ವರ್ಷದಲ್ಲಿ ವಿದೇಶಗಳಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಅನುದಾನ ನೀಡುವುದಾಗಿ ಹೇಳಿವೆ ಎಂದು ಕ್ರೇಮರ್ ತಿಳಿಸಿದರು. ಸಂಶೋಧನಾ ಕೇಂದ್ರಗಳಿಗೆ ಜಾಗ ಒದಗಿಸಲು, ವಿದ್ವಾಂಸರನ್ನು ಒಂದೆಡೆ ಸೇರಿಸಲು ಮತ್ತು ಬೇರೆ ಬೇರೆ ಜ್ಞಾನಶಾಖೆಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಕರೆತರಲು, ಅವರು ಸಂಶೋಧನೆಯ ಮೂಲಕ ಕಂಡುಕೊಂಡಿದ್ದನ್ನು ಪಸರಿಸಲು ಈ ವಿಶ್ವವಿದ್ಯಾಲಯಗಳು ಒಪ್ಪಿಕೊಂಡಿವೆ.

ಇನ್ನೂ ಬೇರೆ ಬೇರೆ ದಾನಿಗಳು ಹಾಗೂ ವಿಶ್ವ ವಿದ್ಯಾಲಯಗಳಿಂದಲೂ ಇದೇ ಬಗೆಯ ಸ್ಪಂದನ ದೊರೆ ಯುವ ಭರವಸೆ ಇದೆ. ‘ಹೊಸ ಬೆಳೆಗೆ ಅಗತ್ಯವಿರುವ ನೀರು ಮತ್ತು ಗೊಬ್ಬರ ಪೂರೈಸುವುದು ನಮ್ಮ ಕೆಲಸ’ ಎಂದು ಕ್ರೇಮರ್ ಹೇಳಿದರು.

ಸಾರ್ವಜನಿಕ ನೀತಿಗಳು ಮತ್ತು ಸಾರ್ವಜನಿಕ ಚರ್ಚೆಗಳಿಗೆ ಅಗತ್ಯವಿರುವ ಚೌಕಟ್ಟನ್ನು ಹೊಸ ಆಲೋಚನೆಗಳ ಮೂಲಕ ರೂಪಿಸಬಹುದು ಎಂಬ ನಂಬಿಕೆ ಈ ಸಂಶೋಧನೆಯ ಯತ್ನಗಳ ಹಿಂದೆ ಇದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯ ದೃಷ್ಟಿಕೋನವನ್ನು 1960, 1970ರ ದಶಕದಲ್ಲಿ ಬಹಳ ಗಟ್ಟಿಯಾಗಿ ಪ್ರಚುರಪಡಿಸಲಾಯಿತು. ಷಿಕಾಗೊ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರು ಹೀಗೆ ಪ್ರಚುರಪಡಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿ ಇದ್ದರು.

1980ರ ದಶಕದಲ್ಲಿ ಅಮೆರಿಕದ ರೊನಾಲ್ಡ್ ರೇಗನ್ ನೇತೃತ್ವದ ಸರ್ಕಾರ, ಬ್ರಿಟನ್ನಿನ ಮಾರ್ಗರೇಟ್ ಥ್ಯಾಚರ್ ನೇತೃತ್ವದ ಸರ್ಕಾರ ಮುಕ್ತ ಮನಸ್ಸಿನಿಂದ ನವ–ಉದಾರವಾದಿ ವ್ಯವಸ್ಥೆಯನ್ನು ಅಪ್ಪಿಕೊಂಡವು. ಮುಕ್ತ ವ್ಯಾಪಾರ ಒಪ್ಪಂದ, ಹಣಕಾಸಿನ ನಿಯಂತ್ರಣ ಸಡಿಲಿಕೆಯ ವಿಚಾರಗಳಲ್ಲಿ ಬಿಲ್ ಕ್ಲಿಂಟನ್ ಆಡಳಿತ ಅವಧಿಯಲ್ಲಿಯೂ ಇದೇ ತತ್ವವು ಪ್ರಭಾವ ಬೀರಿತು. ಆದರೆ ಜೋ ಬೈಡನ್ ಆಡಳಿತದಲ್ಲಿ ಪರಿಸ್ಥಿತಿ ಹೀಗಿಲ್ಲ.

ಮಾರುಕಟ್ಟೆಗಳ ವಿವೇಚನೆಗೆ ಎಲ್ಲವನ್ನೂ ಬಿಡುವುದರ ಹಿಂದಿನ ವಿವೇಕವನ್ನು ಈಚಿನ ವರ್ಷ ಗಳಲ್ಲಿ ಪ್ರಮುಖ ಅರ್ಥಶಾಸ್ತ್ರಜ್ಞರ ಪೈಕಿ ಹಲವರು ಪ್ರಶ್ನಿಸುತ್ತಿದ್ದಾರೆ. ಅರ್ಥಶಾಸ್ತ್ರಜ್ಞರು ಅಸಮಾನತೆಯ ಬಗ್ಗೆ ಸಂಶೋಧನೆಯನ್ನು ಹೆಚ್ಚಿಸಿದ್ದಾರೆ. ಈಗ ಅನುದಾನ ಪಡೆಯಲಿರುವ ವಿಶ್ವವಿದ್ಯಾಲಯಗಳ ಗಮನ ಕೂಡ ಇದರ ಮೇಲೆಯೇ ಇರಲಿದೆ. ‘ಆರ್ಥಿಕ ಪ್ರಗತಿಯ ಗುರಿಯು ಅಸಮಾನತೆಯನ್ನು ತಗ್ಗಿಸುವುದಾಗಿರಬೇಕು’ ಎಂದು ಕೆನಡಿ ಸ್ಕೂಲ್‌ನ ಅರ್ಥಶಾಸ್ತ್ರಜ್ಞ ಡ್ಯಾನಿ ರೋಡ್ರಿಕ್ ಹೇಳುತ್ತಾರೆ. ಅನುದಾನಕ್ಕೆ ಆಯ್ಕೆಯಾಗಿರುವ ಸಂಸ್ಥೆ ಗಳೆಲ್ಲವೂ ಮಾರುಕಟ್ಟೆಯ ಬಗ್ಗೆ ಆಸಕ್ತಿ ಹೊಂದಿರುವವು. ‘ಮಾರುಕಟ್ಟೆಗಳ ವ್ಯಾಪ್ತಿ ಅಗಾಧ. ಆದರೆ, ಮಾರುಕಟ್ಟೆಗಳು ಬಹಳ ಸ್ವಾಯತ್ತವಾಗಿ ಕೆಲಸ ಮಾಡುತ್ತವೆ; ಎಲ್ಲವನ್ನೂ ಮಾರುಕಟ್ಟೆಗಳ ವಿವೇಚನೆಗೆ ಬಿಟ್ಟುಬಿಡಬೇಕು ಎಂಬ ಆಲೋಚನೆಯಿಂದ ನಾವು ಹೊರಬರಬೇಕು’ ಎಂದು ಎಂಐಟಿಯಲ್ಲಿ ಕಾರ್ಮಿಕ ಅರ್ಥಶಾಸ್ತ್ರಜ್ಞ ಆಗಿರುವ ಡೇವಿಡ್ ಆಟರ್ ಪ್ರತಿಪಾದಿಸುತ್ತಾರೆ.

ಕಾಲೇಜು ಪದವಿ ಇಲ್ಲದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಅವರು ಹೆಚ್ಚಿನ ವೇತನ ಪಡೆಯುವ ಸ್ಥಾನಕ್ಕೆ ಏರಬೇಕಾದರೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಎಂಐಟಿಯ ಯೋಜನೆಯು ಗಮನ ನೀಡಲಿದೆ. ಒಬ್ಬ ಕಾರ್ಮಿಕನ ಜಾಗಕ್ಕೆ ಇನ್ನೊಬ್ಬ ಕಾರ್ಮಿಕನನ್ನು ತಂದು ಕೂರಿಸುವ ಬದಲು, ಮೊದಲು ಇದ್ದ ಕಾರ್ಮಿಕನ ಉತ್ಪಾದಕತೆಯನ್ನು ಹೆಚ್ಚಿಸುವ ಮಾರ್ಗದ ಬಗ್ಗೆಯೂ ಇದು ಗಮನಹರಿಸಲಿದೆ.

ಸಂಶೋಧನೆಗೆ ಆಯ್ಕೆಯಾಗಿರುವ ಪ್ರತೀ ಕೇಂದ್ರವೂ ಬೇರೆ ಬೇರೆ ಮಾರ್ಗಗಳಲ್ಲಿ ಮುನ್ನಡೆಯಲಿದೆ. ಹೋವಾರ್ಡ್‌ನಲ್ಲಿನ ಸಂಶೋಧನೆಯು ಜನಾಂಗೀಯ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆ ಬಗ್ಗೆ ಪರಿಶೀಲನೆ ನಡೆಸಲಿದೆ.

ಜಾನ್‌ ಹಾಪ್ಕಿನ್ಸ್ ಕೇಂದ್ರವು ನವ ಉದಾರವಾದದ ಬೆಳವಣಿಗೆ ಹಾಗೂ ಪ್ರಸರಣ ಮತ್ತು ಅದರಿಂದ ಕಲಿತ ಪಾಠಗಳ ಬಗ್ಗೆ ಗಮನ ನೀಡಲಿದೆ. ಸಾಂತಾ ಫೆ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಹೊಸ ಆರ್ಥಿಕ ಮಾದರಿಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಈ ಕಾರ್ಯಕ್ಕೆ ಹ್ಯೂಲೆಟ್ ಕಂಪನಿಯು ₹ 266 ಕೋಟಿ ಅನುದಾನವನ್ನು ನಾಲ್ಕು ವಿಶ್ವವಿದ್ಯಾಲಯಗಳಿಗೆ ಒದಗಿಸಲಿದೆ. ಒಮಿದ್ಯಾರ್ ನೆಟ್‌ವರ್ಕ್‌ ಕಡೆಯಿಂದ ಸಾಂತಾ ಫೆ ಇನ್‌ಸ್ಟಿಟ್ಯೂಟ್‌ಗೆ ಒಟ್ಟು ₹ 49 ಕೋಟಿ ಅನುದಾನ ದೊರೆಯಲಿದೆ.

ಹ್ಯೂಲೆಟ್‌ ಪ್ರತಿಷ್ಠಾನವನ್ನು 1966ರಲ್ಲಿ, ಹ್ಯೂಲೆಟ್ ಪ್ಯಾಕರ್ಡ್‌ ಕಂಪನಿ ಸಹಸಂಸ್ಥಾಪಕರಲ್ಲಿ ಒಬ್ಬರು ಮತ್ತು ಅವರ ಪತ್ನಿ ಜೊತೆಯಾಗಿ ಆರಂಭಿಸಿದರು. ಅದು ಈಗ ಅಮೆರಿಕದಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಅನುದಾನ ನೀಡುವ ಸಂಸ್ಥೆಗಳಲ್ಲಿ ಒಂದು. ಇ–ಬೇ ಸ್ಥಾಪಕ ಪಿಯೆರ್ ಒಮಿದ್ಯಾರ್ ಮತ್ತು ಅವರ ಪತ್ನಿ ಪಾಮ್ 2004ರಲ್ಲಿ ಒಮಿದ್ಯಾರ್ ನೆಟ್‌ವರ್ಕ್‌ ಆರಂಭಿಸಿದರು. ಇದರಲ್ಲಿ ಒಂದು ಪ್ರತಿಷ್ಠಾನ ಹಾಗೂ ಒಂದು ಹೂಡಿಕೆ ವಿಭಾಗ ಇವೆ.

ಈ ಎರಡೂ ಪ್ರತಿಷ್ಠಾನಗಳು ಎಡಪಂಥದ ಜೊತೆ ಒಲವು ಹೊಂದಿರುವ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಏಕೆಂದರೆ, ಇವು ಹವಾಮಾನ ಬದಲಾವಣೆ, ಲಿಂಗ ಸಮಾನತೆ, ಆರ್ಥಿಕ ನೆಲೆಗಳಲ್ಲಿ ಸಮಾನತೆಯಂತಹ ವಿಚಾರಗಳಿಗೆ ಬೆಂಬಲ ನೀಡುತ್ತ ಬಂದಿವೆ. ‘ಸಾಂಪ್ರದಾಯಿಕ ಆರ್ಥಿಕ ಚಿಂತನೆಗಳ ಚಲಾವಣೆಯ ಅವಧಿ ಮುಗಿದಿದೆ ಎಂಬ ವಿಚಾರದಲ್ಲಿ ಬಹುತೇಕರು ಸಹಮತ ಹೊಂದಿದ್ದಾರೆ ಎಂಬುದು ನನ್ನ ಭಾವನೆ’ ಎಂದು ಹೇಳುತ್ತಾರೆ ಒಮಿದ್ಯಾರ್‌ ನೆಟ್‌ವರ್ಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೈಕ್ ಕುಬ್‌ಜಾನ್‌ಸ್ಕಿ.

-ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT