ಗುರುವಾರ , ಸೆಪ್ಟೆಂಬರ್ 23, 2021
24 °C
ಶಿಕ್ಷಣದಲ್ಲಿನ ಅಸಮಾನತೆಯ ಸಮಸ್ಯೆಯನ್ನು ಈ ದೇಶ ವಿಶಿಷ್ಟವಾಗಿ ನಿಭಾಯಿಸಲು ಶುರುಮಾಡಿದೆ

ವಿಶ್ಲೇಷಣೆ | ಚೀನಾದಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಅಂಕುಶವೇಕೆ?

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಈ ಬಾರಿಯ ‘ಗುರುಪೂರ್ಣಿಮೆ’ಯ ದಿನ ವಾಟ್ಸ್‌ಆ್ಯಪ್‌ನಲ್ಲಿ ಒಂದು ಮರಾಠಿ ಕವನ ವೈರಲ್ ಆಯಿತು. ಅದು ಒಬ್ಬಳು ಹಳ್ಳಿಯ ಹುಡುಗಿಯ ನೋವಿನ ಅಭಿವ್ಯಕ್ತಿ. ಲಾಕ್‌ಡೌನ್ ಹೊತ್ತಿನಲ್ಲಿ ಶಾಲೆಗಳೆಲ್ಲ ಮುಚ್ಚಿದ್ದರಿಂದ ಕೋಟ್ಯಂತರ ವಿದ್ಯಾರ್ಥಿಗಳು ಅನುಭವಿಸಿದ ಬವಣೆಯೇ ಅವಳದು ಕೂಡ. ಆದರೆ ಬಡತನದಿಂದಾದ ಅವಳ ವೇದನೆ ಹೆಚ್ಚಿನದು. ಅವಳು ತನ್ನ ಮೆಚ್ಚಿನ ಶಿಕ್ಷಕಿಗೆ ಹೇಳುತ್ತಾಳೆ– ‘ನಾನು ಇಂದು ನಿಮ್ಮನ್ನು ಭೇಟಿಯಾಗಿ ನಮಸ್ಕರಿಸಲು ಬರಲಾರೆ, ಕ್ಷಮಿಸಬೇಕು. ಕೊರೊನಾದಿಂದಾಗಿ ನನ್ನ ಅಪ್ಪ ತೀರಿಕೊಂಡರು. ಕುಟುಂಬದ ಹೊಟ್ಟೆಪಾಡಿಗಾಗಿ ನಾನೀಗ ಹಳ್ಳಿ ಬಿಟ್ಟು ಕೆಲಸ ಹುಡುಕುತ್ತ ಪಟ್ಟಣಕ್ಕೆ ಬಂದಿದ್ದೇನೆ. ಶಿಕ್ಷಣ ನಿಂತು ಹೋಗಿದೆ. ಫೋನ್ ಕೂಡ ಇಲ್ಲದ ನನಗೆ ಆನ್‌ಲೈನ್ ಶಿಕ್ಷಣ ನಿಲುಕದು. ಆದರೆ ಒಂದು ದಿನ ನಿಮ್ಮ ಕ್ಲಾಸಿನಲ್ಲಿ ಮತ್ತೊಮ್ಮೆ ಕೂಡುವ ಹಂಬಲವಿದೆ’. ಈ ಕವನ ಓದಿ ನನಗೆ ಕಣ್ಣೀರು ಬಂತು.

ನಾನು ಲಾಕ್‌ಡೌನ್‌ ಸಂದರ್ಭದಲ್ಲಿ, ಬೈಜು ಕಂಪನಿಯು ಶಾರೂಖ್ ಖಾನ್ ಅವರನ್ನು ನೇಮಿಸಿ ಕೊಂಡು ಸಿದ್ಧಪಡಿಸಿದ್ದ ಜಾಹೀರಾತನ್ನು ನೆನಪಿಸಿಕೊಂಡೆ. ಈ ಜಾಹೀರಾತಿಗಾಗಿ ಆನ್‌ಲೈನ್‌ ಶಿಕ್ಷಣ ಕಂಪನಿಯು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಿರಬಹುದು. ‘ಬೈಜು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ನಿಮ್ಮ ಬೆಳವಣಿಗೆ ಖಚಿತ’ ಎಂದು ಶಾರೂಖ್ ಇದರಲ್ಲಿ ಹೇಳುತ್ತಾರೆ. ಈ ಕಂಪನಿಯನ್ನು ಹತ್ತು ವರ್ಷಗಳ ಹಿಂದೆ ಬೈಜು ರವೀಂದ್ರನ್ ಸ್ಥಾಪಿಸಿದರು. ಇದರ ಮಾರುಕಟ್ಟೆ ಮೌಲ್ಯ ಈಗ ₹ 1.22 ಲಕ್ಷ ಕೋಟಿಯನ್ನು ದಾಟಿದೆ (ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶಾಲಾ ಶಿಕ್ಷಣಕ್ಕಾಗಿ ನಿಗದಿ ಮಾಡಿರುವ ವಾರ್ಷಿಕ ಮೊತ್ತ
₹ 54,873 ಕೋಟಿಗಿಂತ ಹೆಚ್ಚು). ರವೀಂದ್ರನ್ ಅವರ ವೈಯಕ್ತಿಕ ಸಂಪತ್ತಿನ ಮೌಲ್ಯ ₹ 18 ಸಾವಿರ ಕೋಟಿಗೆ ತಲುಪಿದೆ. ಬೈಜು ಈಗ 40 ಸಾವಿರ ಚಂದಾದಾರರನ್ನು ಹೊಂದಿದೆ. ಭಾರಿ ಪ್ರಮಾಣದ ಜಾಹೀರಾತು, ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರು ಮಾತ್ರ ಭರಿಸಬಹುದಾದ ಶುಲ್ಕ ಪಡೆಯುವ ಮೂಲಕ ಇವೆಲ್ಲ ಸಾಧ್ಯವಾಗಿವೆ.

ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಹಲವು ಕಂಪನಿಗಳು ಹುಟ್ಟಿಕೊಂಡಿವೆ. ಇವನ್ನೆಲ್ಲ ದೇಶದ ಮುಖ್ಯವಾಹಿನಿಯ ಮಾಧ್ಯಮಗಳು ‘ಭಾರತದ ನವೋದ್ಯಮಗಳ, ಯುವ ಕೋಟ್ಯಧಿಪತಿಗಳ ಯಶೋಗಾಥೆ’ ಎಂದು ಹೊಗಳುತ್ತಿವೆ.

‘ನಮ್ಮ ಮಕ್ಕಳಿಗೆ ಅತ್ಯುತ್ತಮ ಕಲಿಕಾ ಮಾರ್ಗವನ್ನು ತೋರುತ್ತಿರುವ ಬೈಜು ಮತ್ತು ಅದರಂತಹ ಇತರ ಕಂಪನಿ ಗಳ ಬಗ್ಗೆ ನಿಮಗೇಕೆ ತಕರಾರು’ ಎಂದು ಕೆಲವರು ಖಂಡಿತ ಪ್ರಶ್ನಿಸುತ್ತಾರೆ. ಇದು ಒಳ್ಳೆಯ ಪ್ರಶ್ನೆಯೇ. ಭಾರತದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮದ ಮೂಲಕ ಉನ್ನತ ಗುಣಮಟ್ಟದ ಶಿಕ್ಷಣ ಸಿಗುವುದನ್ನು ಸ್ವಾಗತಿಸ ಬೇಕು. ಆದರೆ ಬೇಸರದ ಸಂಗತಿ ಇದು: ಇಂತಹ ಪ್ರಶ್ನೆಗಳನ್ನು ಕೇಳುತ್ತಿರುವವರಿಗೆ ಎರಡು ಬಗೆಯ ವಿದ್ಯಾರ್ಥಿ ಸಮೂಹಗಳ ಬಗ್ಗೆ ಗೊತ್ತಿಲ್ಲ ಅಥವಾ ಅಂಥವರ ಬಗ್ಗೆ ಅವರಿಗೆ ಕಾಳಜಿ ಇಲ್ಲ.

ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸಿಸುವ, ಒಂದು ಸ್ಮಾರ್ಟ್‌ಫೋನ್‌ ಕೂಡ ಇಲ್ಲದ ಮಕ್ಕಳದ್ದು ಒಂದು ಗುಂಪು. ಝಗಮಗಿಸುವ ಕಲಿಕಾ ಆ್ಯಪ್‌ಗಳ ಶುಲ್ಕವನ್ನು ಎಂದಿಗೂ ಭರಿಸಲಾಗದ ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳ ಮಕ್ಕಳದ್ದು ಇನ್ನೊಂದು ಗುಂಪು. ಈ ಕಲಿಕಾ ಆ್ಯಪ್‌ಗಳಲ್ಲಿ ಬೋಧನೆಯ ಮಾಧ್ಯಮವು ಇಂಗ್ಲಿಷ್‌. ಕನ್ನಡ ಮತ್ತು ಭಾರತದ ಇತರ ಭಾಷೆಗಳಲ್ಲಿ ಶಿಕ್ಷಣ ನೀಡುವ ವಿಚಾರದಲ್ಲಿ ಬೇರೂರಿರುವ ತಾರತಮ್ಯವು, ಆನ್‌ಲೈನ್‌ ಜಗತ್ತಿನಲ್ಲಿ ಇನ್ನಷ್ಟು ಶಕ್ತಿಯುತವಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಡಿಜಿಟಲ್ ತಾರತಮ್ಯವನ್ನು ನಾವೆಲ್ಲ ನೋಡಿದ್ದೇವಲ್ಲವೇ? ಶಾಲೆಗಳು ಮುಚ್ಚಿವೆ, ಬಡ ಹಾಗೂ ಮಧ್ಯಮ ವರ್ಗಗಳ ಕೋಟ್ಯಂತರ ವಿದ್ಯಾರ್ಥಿಗಳು ಹಿಂದಕ್ಕೆ ಹೋಗಿದ್ದಾರೆ, ಶ್ರೀಮಂತ ವರ್ಗಗಳ ಮಕ್ಕಳು ಪ್ರಗತಿ ಸಾಧಿಸಿದ್ದಾರೆ. ನಾವು ಬಯಸುವುದು ಈ ಬಗೆಯ ಭಾರತವನ್ನೇ?

ಶಿಕ್ಷಣದಲ್ಲಿನ ಅಸಮಾನತೆಯು ಸಾಮಾಜಿಕ–ಆರ್ಥಿಕ ತರತಮವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಮಾತು ವಿಶ್ವದ ಅತ್ಯಂತ ಸಂಪದ್ಭರಿತ ದೇಶವಾದ ಅಮೆರಿಕದಲ್ಲೂ ಸತ್ಯ, ಅತ್ಯಂತ ಶ್ರೀಮಂತ ರಾಷ್ಟ್ರವಾಗುವ ಸ್ಪರ್ಧೆಯಲ್ಲಿರುವ ಚೀನಾದಲ್ಲೂ ಸತ್ಯ. ಆದರೆ, ಈ ಸಮಸ್ಯೆಯನ್ನು ವಿಶಿಷ್ಟವಾಗಿ ನಿಭಾಯಿಸಲು ಚೀನಾ ಶುರುಮಾಡಿದೆ. ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಕಂಪನಿಗಳು, ‘ಲಾಭದ ಉದ್ದೇಶವಿಲ್ಲದ ಕಂಪನಿಗಳಾಗಿ’ ಬದಲಾಗಲು ಒತ್ತಡ ತರುವಂತಹ ನಿಯಮಾವಳಿಯನ್ನು ಚೀನಾ ಸರ್ಕಾರ ಈಚೆಗೆ ಹೊರಡಿಸಿದೆ. ಇಂತಹ ಕಂಪನಿಗಳು ಚೀನಾದಲ್ಲಿ, ಭಾರತದಲ್ಲಿ ಇರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇವೆ ಎಂಬುದನ್ನು ಗಮನಿಸಬೇಕು. ಈ ನಿಯಮಾವಳಿ ರೂಪಿಸಿರುವ ಸುದ್ದಿ ಬಹಿರಂಗವಾದ ತಕ್ಷಣ ಈ ಕಂಪನಿಗಳ ಷೇರು ಬೆಲೆ ಕುಸಿಯಿತು.

ಬೆಳೆಯುತ್ತಿರುವ ಖಾಸಗಿ ಶಿಕ್ಷಣ ಉದ್ಯಮದ ಮೇಲೆ ಚೀನಾ ಈ ಕಠಿಣ ಕ್ರಮ ಜರುಗಿಸಿದ್ದು ಏಕೆ? ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಮಾಡಿದ ಎರಡು ಪ್ರಮುಖ ಭಾಷಣಗಳಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ‘ಚೀನಿ ಗುಣವಿರುವ ಸಮಾಜವಾದಿ ಶಿಕ್ಷಣ’ವನ್ನು ಬೆಳೆಸುವ ಬಗ್ಗೆ 2018ರಲ್ಲಿ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾಡಿದ ಭಾಷಣ ಹಾಗೂ ದೇಶದ ಅತ್ಯುನ್ನತ ಶಾಸನ ಸಭೆಯಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಮಾಡಿದ ಭಾಷಣ ಉತ್ತರ ನೀಡುತ್ತವೆ. ಭಾರಿ ಶುಲ್ಕ ಪಡೆಯುವ ಟ್ಯೂಷನ್ ವಲಯ ವನ್ನು ಜಿನ್‌ಪಿಂಗ್ ಅವರು ದೀರ್ಘಕಾಲೀನ ಕಾಯಿಲೆ ಎಂದು ಟೀಕಿಸಿದ್ದರು. ಕಾಯಿಲೆಯನ್ನು ಗುಣಪಡಿಸಬೇಕು ಎಂದಿದ್ದರು.

ಒಳ್ಳೆಯ ಉದ್ಯೋಗಕ್ಕೆ ಇರುವ ಕಠಿಣ ಸ್ಪರ್ಧೆಯ ಕಾರಣದಿಂದಾಗಿ ಚೀನಾದ ಪಾಲಕರು ತಮ್ಮ ಮಕ್ಕಳನ್ನು ಶಾಲೆಯ ಅವಧಿಯ ನಂತರದ ಟ್ಯೂಷನ್‌ಗಳಿಗೆ ಸೇರಿಸಲು ಬಯಸುತ್ತಿದ್ದಾರೆ. ಇವುಗಳಿಗೆ ಕೊಡಬೇಕಿರುವ ಶುಲ್ಕವು ಕೆಲವು ಸಂದರ್ಭಗಳಲ್ಲಿ ಇಡೀ ಕುಟುಂಬದ ವಾರ್ಷಿಕ ಖರ್ಚುಗಳ ಶೇಕಡ 30ರಷ್ಟು ಆಗುತ್ತಿದೆ! ಇದು ಚೀನಿ ಸಮಾಜದಲ್ಲಿನ ಅಸಮಾನತೆ ಯನ್ನು ತೀವ್ರವಾಗಿ ಹೆಚ್ಚಿಸುತ್ತಿದೆ.

ಎಲ್ಲ ಶಾಲೆಗಳಲ್ಲಿಯೂ ಸುಧಾರಿತ ಸೌಲಭ್ಯಗಳು ಇರುವ ಶಿಕ್ಷಣ ವ್ಯವಸ್ಥೆ ಬೇಕು ಎಂದು ಜಿನ್‌ಪಿಂಗ್ ಹೇಳಿದ್ದರು. ಅಂತಹ ವ್ಯವಸ್ಥೆ ಇದ್ದಾಗ, ಮಕ್ಕಳು ಜ್ಞಾನ ಅರಸುತ್ತ, ಜವಾಬ್ದಾರಿಯ ಮನೋಭಾವವನ್ನು ಬೆಳೆಸಿಕೊಳ್ಳುತ್ತ, ಸೃಜನಶೀಲ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳುತ್ತ, ಶಾಲೆಯಲ್ಲಿ ತಾವು ಕಳೆಯುವ ಸಮಯವನ್ನು ಬಹಳ ಅಮೂಲ್ಯವಾಗಿಸಿಕೊಳ್ಳಬಹುದು.

ಅಲ್ಲದೆ, ಶಾಲೆಯ ನಂತರದ ಅವಧಿಯನ್ನು ಕ್ರೀಡೆಗಳು, ಸೌಂದರ್ಯ ಪ್ರಜ್ಞೆ, ಕಠಿಣ ಪರಿಶ್ರಮದ ಮನೋಭಾವದ ಬಗ್ಗೆ ಪ್ರೀತಿ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬಹುದು ಎಂದೂ ಅವರು ಹೇಳಿದ್ದರು. ‘ಮಕ್ಕಳ ಬಾಲ್ಯ ಸಂತಸಮಯವಾಗಿ ಇರಲಿ ಎಂದು ಪಾಲಕರು ಬಯಸುತ್ತಾರೆ. ಆದರೆ, ಅಂಕಗಳ ಸ್ಪರ್ಧೆಯಲ್ಲಿ ತಮ್ಮ ಮಕ್ಕಳು ಆರಂಭದಲ್ಲಿಯೇ ಸೋತುಬಿಡುತ್ತಾರೆ ಎಂಬ ಭಯ ಕೂಡ ಅವರಲ್ಲಿದೆ. ಇದನ್ನು ಪರಿಹರಿಸಬೇಕು’ ಎಂದು ಜಿನ್‌ಪಿಂಗ್ ಹೇಳಿದ್ದರು.

ಬಂಡವಾಳದ ಅಸ್ತವ್ಯಸ್ತ ವಿಸ್ತರಣೆಯನ್ನು ವಿರೋಧಿಸಿ ಅವರು ಮಾತನಾಡಿದ್ದಾರೆ. ಅಂದರೆ, ರಾಷ್ಟ್ರದ ಆರ್ಥಿಕ ಸಂಪನ್ಮೂಲವು ಜನಸಾಮಾನ್ಯರ ಅಗತ್ಯ ಗಳನ್ನು ಈಡೇರಿಸುವ ರೀತಿಯಲ್ಲಿ ಬಳಕೆಯಾಗಬೇಕು. ಶಿಕ್ಷಣವು ಲಾಭದ ಉದ್ದೇಶದ ಉದ್ದಿಮೆಯಾಗಬಾರದು. ‘ಸರಸ್ವತಿ’ಯ ಒಲಿಯುವಿಕೆಯು ‘ಲಕ್ಷ್ಮಿ’ಯನ್ನು ಆಧರಿಸಿ ಇರಬಾರದು. ಚೀನಾದಲ್ಲಿನ ಹೊಸ ನಿಯಮಗಳ ಅನ್ವಯ, ಮಕ್ಕಳಿಗೆ ಮನೆಗೆಲಸದ ಹೊರೆಯನ್ನು ತಗ್ಗಿಸ ಬೇಕು, ಶಾಲಾ ಅವಧಿಯಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆನ್‌ಲೈನ್‌ ಮೂಲಕ ಸಿಗುವ ಉಚಿತ ಕಲಿಕಾ ಸೇವೆಗಳನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇಂತಹ ಉದ್ದಿಮೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ಸರ್ಕಾರ ನಿರ್ಬಂಧಿಸಲಿದೆ.

ಇವನ್ನೆಲ್ಲ ಓದಿದ ನಂತರ ನನ್ನ ಮನಸ್ಸು ಮರಾಠಿಯಲ್ಲಿರುವ ಆ ವಾಟ್ಸ್‌ಆ್ಯಪ್‌ ಕವನದ ಕಡೆ ಹೊರಳಿತು. ನಮ್ಮ ರಾಜಕಾರಣಿಗಳು ಮತ್ತು ನೀತಿ ನಿರೂಪಕರಿಗೆ ಆ ಹಳ್ಳಿ ಹುಡುಗಿಯ ಆಕ್ರೋಶಕ್ಕೆ ಕಿವಿಗೊಡುವ ಮನಸ್ಸಿದೆಯೇ? ‘ಆನ್‌ಲೈನ್‌ ಶಿಕ್ಷಣ ನನಗೆ ನಿಲುಕುತ್ತಿಲ್ಲ; ಅದನ್ನು ನಾನು ಭರಿಸುವುದು ಹೇಗೆ?’. ರಾಜಕಾರಣಿಗಳು, ನೀತಿ ನಿರೂಪಕರಿಗೆ ಮುಂದಡಿ ಇರಿಸುವ ಬದ್ಧತೆ ಇದೆಯೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು