ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಈಗ ಎಂಥ ರಾಷ್ಟ್ರೀಯತೆ ಬೇಕು?

ಹೊಸ ಸವಾಲುಗಳಿಗೆ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಲಪಡಿಸುವುದರಲ್ಲೇ ಪರಿಹಾರ ಹುದುಗಿದೆ
Last Updated 1 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಪ್ರಪಂಚದ ಕೆಲವು ದೇಶಗಳಲ್ಲಿ ಉಗ್ರ ರಾಷ್ಟ್ರೀಯತೆಯ ವಾದ ಮತ್ತು ಸರ್ವಾಧಿಕಾರಿ ಧೋರಣೆಯ ನಾಯಕತ್ವಕ್ಕೆ ಬೆಂಬಲ ಅನ್ನುವುದು ಒಮ್ಮೆಲೆ ಮುನ್ನೆಲೆಗೆ ಬರತೊಡಗಿದೆ. ಎರಡು ವಿಶ್ವಯುದ್ಧಗಳು ತಂದ ಎಣಿಸಲಾಗದ ಸಾವು, ನೋವು ಕಂಡ ಮೇಲೆ ವಿಶ್ವಸಂಸ್ಥೆಯಡಿ ದೇಶಗಳೆಲ್ಲವನ್ನೂ ಒಂದು ವೇದಿಕೆಯಡಿ ತಂದು ಜಾಗತಿಕ ರಾಜಕಾರಣದ ಬಿಕ್ಕಟ್ಟುಗಳನ್ನು ಸಾಧ್ಯವಾದಷ್ಟು ಮಾತುಕತೆಯ ಮೂಲಕವೇ ಬಗೆಹರಿಸುವ ಪರಿಹಾರ ಸೂತ್ರವೊಂದನ್ನು ರೂಪಿಸಿಕೊಳ್ಳಲಾಯಿತು. ಹಲವು ಕೊರತೆಗಳಿದ್ದರೂ ‘ಪ್ರಜಾಪ್ರಭುತ್ವವೇ ದೇಶವೊಂದರ ಸಮಸ್ಯೆಗಳಿಗೆ ನ್ಯಾಯಯುತವಾದ ಪರಿಹಾರ ಒದಗಿಸಬಲ್ಲದು’ ಅನ್ನುವ ನಂಬಿಕೆ ಆಳವಾಗಿ ಬೇರೂರುತ್ತಿದೆ ಅಂದುಕೊಳ್ಳುವಾಗಲೇ ಅದಕ್ಕೆ ವಿರುದ್ಧವಾದ ಚಲನೆಯಂತೆ ಹಲವು ದೇಶಗಳಲ್ಲಿ ಉಗ್ರ ರಾಷ್ಟ್ರೀಯತೆಯ ವಾದ ಮತ್ತೆ ತಲೆ ಎತ್ತುತ್ತಿದೆ.

ಕಳೆದ ಮೂವತ್ತು-ನಲವತ್ತು ವರ್ಷಗಳ ಆರ್ಥಿಕ ನೆಲೆಯ ಜಾಗತೀಕರಣವು ದೇಶಗಳ ಗಡಿಗಳನ್ನು ಬಹುಮಟ್ಟಿಗೆ ಅಪ್ರಸ್ತುತಗೊಳಿಸುತ್ತಿದೆ. ಅಭಿವೃದ್ಧಿಯ ವೇಗದಲ್ಲೇ ಪರಿಸರ ನಾಶವೂ ಜಗದೆಲ್ಲೆಡೆ ಆಗುತ್ತಿದೆ. ಅದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರಿಕೆಯು ಆಹಾರ ಭದ್ರತೆಗೆ ಸವಾಲು ಒಡ್ಡುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನದಲ್ಲಾಗುತ್ತಿರುವ ನಾಗಾಲೋಟದ ಬದಲಾವಣೆಗಳು ಮನುಷ್ಯನ ಜೀವನವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಮರುರೂಪಿಸುವ ಕಾಲಘಟ್ಟ ಬರುತ್ತಿದೆ. ಮನುಕುಲದ ಮುಂದೆ ಇಂತಹ ಶತಮಾನದ ಬಿಕ್ಕಟ್ಟುಗಳು ಎದುರಾಗುತ್ತಿರುವಾಗ ಇವುಗಳಿಗೆ ಪರಿಹಾರ ಸೂಚಿಸುವ ಶಕ್ತಿ ‘ನನ್ನ ದೇಶವೇ ಶ್ರೇಷ್ಠ’ ಅನ್ನುವ ಇಂದಿನ ರಾಷ್ಟ್ರೀಯತೆಯ ಪರಿಕಲ್ಪನೆಗೆ ಇದೆಯೇ? ಹಾಗಿದ್ದರೆ 21ನೇ ಶತಮಾನದ ರಾಷ್ಟ್ರೀಯತೆ ಹೇಗಿರಬೇಕಿದೆ?

ರಾಷ್ಟ್ರೀಯತೆಯ ಹುಟ್ಟು, ಬೆಳವಣಿಗೆ ಬಗ್ಗೆ ಓದುವಾಗ ಇತಿಹಾಸತಜ್ಞ ಹಾಗೂ ರಾಜಕೀಯ ವಿಜ್ಞಾನಿ ಬೆನೆಡಿಕ್ಟ್ ಆಂಡರ್ಸನ್ ಪ್ರತಿಪಾದಿಸಿದ ‘ಇಮ್ಯಾಜಿನ್ಡ್ ಕಮ್ಯೂನಿಟಿಸ್’ ಅನ್ನುವ ವಾದವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ. ಆತನ ಪ್ರಕಾರ ರಾಷ್ಟ್ರ ಅನ್ನುವುದು ಒಂದು ಕಲ್ಪಿತ ಸಮುದಾಯ. ಎಷ್ಟು ಪುಟ್ಟದೇಶವಾದರೂ ಅಲ್ಲಿನ ಒಬ್ಬನಿಗೆ ಉಳಿದ ಎಲ್ಲ ಸದಸ್ಯರ ವೈಯಕ್ತಿಕ ಪರಿಚಯ ಇರುವುದು ಸಾಧ್ಯವಿಲ್ಲ. ಹೀಗಿದ್ದಾಗಲೂ ಆ ದೇಶದವರೆಲ್ಲ ಒಂದೇ ಅಂದುಕೊಳ್ಳಬೇಕೆಂದರೆ ಅದು ಕಲ್ಪನೆಯಿಂದಷ್ಟೇ ಸಾಧ್ಯ. ಪುರಾಣ ಇಲ್ಲವೇ ಇತಿಹಾಸದ ಯಾವುದೋ ಒಂದು ನೆಲೆಯಲ್ಲಿ ಒಂದು ಭೌತಿಕ ಗಡಿಯಿರುವ ರಾಷ್ಟ್ರ ಅನ್ನುವ ಕಲ್ಪನೆಯನ್ನು ಕಟ್ಟಿ, ಮುದ್ರಣ ಮತ್ತು ಸಮೂಹ ಮಾಧ್ಯಮಗಳ ಮೂಲಕ ಅದನ್ನು ಪಸರಿಸಿ, ಜನಸಾಮಾನ್ಯರಲ್ಲಿ ಈ ಗಡಿಯೊಳಗಿನವರೆಲ್ಲ ನಮ್ಮವರು, ಅದರಾಚೆಯವರೆಲ್ಲ ಹೊರಗಿನವರು ಎಂದು ನಂಬಿಸುತ್ತ, ಯುರೋಪಿನಲ್ಲಿ ಹುಟ್ಟಿ ಅಲ್ಲಿಂದ ಜಗತ್ತಿಗೆಲ್ಲ ಹರಡಿದ್ದು ಇಂದಿರುವ ‘ರಾಷ್ಟ್ರ’ ಅನ್ನುವ ಪರಿಕಲ್ಪನೆ.

ಈ ಪರಿಕಲ್ಪನೆಯು 18ನೆಯ ಶತಮಾನದಿಂದ ಈಚೆಗೆ ವ್ಯಾಪಕವಾಗಿ ಎಲ್ಲೆಡೆ ಹರಡಲು ಬಹಳ ದೊಡ್ಡ ಕೊಡುಗೆ ಕೊಟ್ಟದ್ದು ಮುದ್ರಣ ತಂತ್ರಜ್ಞಾನ. ಕಲ್ಪಿತ ಸಮುದಾಯವಾದ ರಾಷ್ಟ್ರವೊಂದರಲ್ಲಿ ಆ ಕಲ್ಪನೆಯನ್ನು ವ್ಯಾಪಕವಾಗಿ ಬಿತ್ತಿ, ಬೆಳೆಸುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಜಗತ್ತಿನೆಲ್ಲೆಡೆ ಕಾಣಬಹುದು. ಹೀಗೆ ಹುಟ್ಟಿದ ರಾಷ್ಟ್ರ ಅನ್ನುವ ಪರಿಕಲ್ಪನೆಯು ಪ್ರಜಾಪ್ರಭುತ್ವದಡಿ ಗಟ್ಟಿಗೊಂಡಲ್ಲೆಲ್ಲ ಅದು ಜನರ ನಡುವೆ ಸಹಕಾರ ಹೆಚ್ಚಿಸಿ, ಏಳಿಗೆ ಸಾಧಿಸಲು ದಾರಿ ಮಾಡಿಕೊಟ್ಟರೆ, ಸರ್ವಾಧಿಕಾರಿ ಧೋರಣೆಯ ನಾಯಕತ್ವದ ದೇಶಗಳಲ್ಲಿ ಜನರನ್ನು ಶೋಷಿಸುವ ಒಂದು ಸಾಧನವೂ ಆಯಿತು.

ರಾಷ್ಟ್ರೀಯತೆಯ ವಾದ ಎಲ್ಲೆ ಮೀರಿದಾಗ ಏನಾಗುತ್ತದೆ ಅನ್ನುವುದನ್ನು ನಾವು 20ನೆಯ ಶತಮಾನದ ಮೊದಲ ಭಾಗದಲ್ಲಿ ಎರಡು ವಿಶ್ವಯುದ್ಧಗಳು ಮತ್ತು ಅವು ತಂದ ಅಪಾರ ಸಾವು, ನೋವಿನಲ್ಲಿ ಕಂಡಿದ್ದೇವೆ. ಅವು ಕಲಿಸಿದ ಪಾಠ ಕಳೆದ ಏಳು ದಶಕಗಳ ಅವಧಿಯುದ್ದಕ್ಕೂ ನಮ್ಮನ್ನು ಎಚ್ಚರಿಸುತ್ತಲೇ ಇದೆ. ಈ ಅವಧಿಯಲ್ಲಿ ಮನುಷ್ಯನ ಸರಾಸರಿ ಜೀವಿತಾವಧಿ ಹೆಚ್ಚಿರುವುದು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಶಿಕ್ಷಣದ ವಿಷಯಗಳಲ್ಲಿ ಅಪಾರ ಪ್ರಗತಿಯಾಗಿರುವುದನ್ನು ಕಾಣಬಹುದು. ಇವೆಲ್ಲದರ ನಡುವೆಯೇ ಈಗ ಮತ್ತೆ ಉಗ್ರ ರಾಷ್ಟ್ರೀಯತೆಯ ವಾದ ಪ್ರಪಂಚದ ಹಲವೆಡೆ ಮುನ್ನೆಲೆಗೆ ಬರುತ್ತಿದೆ. ಜಾಗತೀಕರಣದ ಕಾರಣದಿಂದ ಆಗುತ್ತಿರುವ ಅನಿಯಂತ್ರಿತ ವಲಸೆ, ಪರಿಸರದಲ್ಲಿನ ವ್ಯಾಪಕ ಬದಲಾವಣೆ ತರುತ್ತಿರುವ ಅನಿಶ್ಚಿತತೆ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿ ಕಟ್ಟಲಾಗುತ್ತಿರುವ ಸತ್ಯೋತ್ತರ ಜಗತ್ತು ಇತ್ಯಾದಿಗಳು ಇವುಗಳಿಗೆ ಕಾರಣಗಳಾಗಿರಬಹುದು. ಕಾರಣಗಳೇನೇ ಇದ್ದರೂ 21ನೆಯ ಶತಮಾನಕ್ಕೆ ಯಾವ ಮಾದರಿಯ ರಾಷ್ಟ್ರೀಯತೆ ಬೇಕು ಅನ್ನುವ ಕುರಿತು ಮನುಕುಲ ಈಗ ಚಿಂತಿಸಬೇಕಿದೆ.

ಈ ಕುರಿತು ಚಿಂತಿಸುತ್ತಿರುವ ಇತಿಹಾಸ ತಜ್ಞರಲ್ಲಿ ಪ್ರಮುಖರು ಇಸ್ರೇಲಿನ ಯುವಲ್ ನೋವಾ ಹರಾರಿ. 20-21-22ನೇ ಶತಮಾನದ ಕುರಿತು ಹಲವು ಒಳನೋಟಗಳುಳ್ಳ ಪುಸ್ತಕಗಳನ್ನು ಬರೆದಿರುವ ಅವರ ಪ್ರಕಾರ ದೇಶ-ದೇಶಗಳ ನಡುವೆ ಸಹಕಾರದ ಹಾದಿಯನ್ನೇ ಕೇಂದ್ರವಾಗಿರಿಸಿಕೊಳ್ಳುವ ಹೊಸತೊಂದು ರಾಷ್ಟ್ರೀಯತೆಯತ್ತ ಹೊರಳದೇ ಈ ಹೊತ್ತಿನ ಜಾಗತಿಕ ಸ್ವರೂಪದ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರ ಕಟ್ಟುವುದು ಅಸಾಧ್ಯ. ಇನ್ನೊಂದು ಅಣು ಯುದ್ಧವಾದರೆ ಅದು ಇಡೀ ಜಗತ್ತಿನ ಆಹಾರ ಭದ್ರತೆಯನ್ನು ನಾಶ ಮಾಡಬಹುದು. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಯಿಂದ ಪ್ರಪಂಚದೆಲ್ಲೆಡೆ ಹೊತ್ತಲ್ಲದ ಹೊತ್ತಲ್ಲಿ ಬರ ಮತ್ತು ನೆರೆ ಸಾಮಾನ್ಯವಾಗುತ್ತಿವೆ. ಭೂಮಿಯ ತಾಪಮಾನ ಒಂದು ಡಿಗ್ರಿ ಏರಿದರೆ ಕಡಲ ದಂಡೆಯ ಹಲವು ಮಹಾನಗರಗಳು ಸಮುದ್ರದಡಿ ಜಾರಲಿವೆ. ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಅಭಿವೃದ್ಧಿಯಾಗುತ್ತ ಹೋದಂತೆ ಆಟೊಮೇಷನ್ ಅನ್ನುವುದು ಜಗತ್ತಿನಲ್ಲಿ ಈಗಿರುವ ಕೋಟಿಗಟ್ಟಲೆ ಉದ್ಯೋಗಗಳನ್ನು ಇನ್ನಿಲ್ಲವಾಗಿಸಬಹುದು, ಅವು ಹಲವು ದೇಶಗಳಲ್ಲಿ ಅರಾಜಕತೆಗೂ, ಅಲ್ಲಿಂದ ಸಿರಿವಂತ ದೇಶಗಳಿಗೆ ತಡೆಯಿಲ್ಲದ ವಲಸೆಗೂ ಕಾರಣವಾಗಬಹುದು. ಯುದ್ಧ ಸಾಧನವಾಗಿ ಕಿಲ್ಲರ್ ರೋಬಾಟ್ಸ್ ತರದ ಸರಿ-ತಪ್ಪಿನ ವಿವೇಕ ಇಲ್ಲದ ರೋಬೊ ಯೋಧರು ಮುಂದಿನ ದಿನಗಳಲ್ಲಿ ಹೊಸ ಸಾಮ್ರಾಜ್ಯಶಾಹಿಯ ಸ್ಥಾಪನೆಗೆ ಕಾರಣವಾಗಬಹುದು. ಇವೆಲ್ಲ ಒಂದು ತೂಕವಾದರೆ ಬಯೊಟೆಕ್ನಾಲಜಿಯಲ್ಲಿ ಆಗುತ್ತಿರುವ ಬದಲಾವಣೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ಬದಲಾಯಿಸಿ ನೈಸರ್ಗಿಕ ಆಯ್ಕೆಯ ಜಾಗದಲ್ಲಿ ಬುದ್ಧಿವಂತಿಕೆ ವಿನ್ಯಾಸ ಬಂದು ಕೂರುವಂತಹ ಬದಲಾವಣೆಗಳು ನಡೆಯಬಹುದು. ಇಂತಹ ಹಲವು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಬಿಕ್ಕಟ್ಟುಗಳನ್ನು ಮನುಕುಲ ನಿಭಾಯಿಸಲು ಈ ಹೊತ್ತಿನ ರಾಷ್ಟ್ರೀಯತೆಯ ವಾದದ ಕೈಯಲ್ಲಿ ಸಾಧ್ಯವಿಲ್ಲ, ಅದಕ್ಕೆ ಜಾಗತಿಕ ಸಹಕಾರದ ಸುತ್ತ ಹೆಣೆಯಲಾದ ಹೊಸ ರಾಷ್ಟ್ರೀಯತೆಯ ವಾದದ ಅಗತ್ಯವಿದೆ ಅನ್ನುವುದು ಅವರ ಅನಿಸಿಕೆ.

ತೆರೆದ ಮನದಿಂದ ನೋಡುವುದಾದರೆ ಅವರ ಮಾತುಗಳಲ್ಲಿ ಆಳವಾದ ವಿವೇಕವಿದೆ. ಅವರು ಜಾಗತಿಕ ಸಹಕಾರವನ್ನು ದೇಶ-ದೇಶಗಳ ನಡುವಿನ ವಿಚಾರವಾಗಿ ಪ್ರತಿಪಾದಿಸಿದ್ದರೂ ಅವು ದೇಶದೊಳಗಿನ ವಿಚಾರಗಳಿಗೂ ಅನ್ವಯವಾಗುತ್ತವೆ ಅನ್ನಲು ಅಡ್ಡಿಯಿಲ್ಲ. ಯಾಕೆಂದರೆ ಈ ಬಿಕ್ಕಟ್ಟುಗಳು ಕೇವಲ ದೇಶ-ದೇಶಗಳ ಗಡಿಯ ಸಾರ್ವಭೌಮತ್ವದ ಸುತ್ತಲಿನದ್ದಲ್ಲ. ಇವು ಅದಕ್ಕೂ ಮಿಗಿಲಾದದ್ದು. ಇಲ್ಲಿ ಪರಿಹಾರ ರೂಪಿಸುವ ಕೆಲಸದಲ್ಲಿ ಒಳಗೊಳ್ಳುವಿಕೆಯೆನ್ನುವುದನ್ನು ಹಲವು ಮಟ್ಟಗಳಲ್ಲಿ ಸಾಧ್ಯವಾಗಿಸಬೇಕಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಜಗತ್ತಿನ ಆರರಲ್ಲಿ ಒಂದು ಭಾಗ ಜನಸಂಖ್ಯೆ ನೆಲೆಗೊಂಡಿದೆ. ಮೇಲೆ ಚರ್ಚಿಸಿದ ಶತಮಾನದ ಕೆಲ ಹೊಸ ಸವಾಲುಗಳು ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತನ್ನ ಪರಿಣಾಮ ತೋರಬಹುದು. ಬೇರೆ ಬೇರೆ ರಾಜ್ಯಗಳು ಇದಕ್ಕೆ ಬೇರೆ ಬೇರೆಯಾದ ರೀತಿಯಲ್ಲಿ ಸ್ಪಂದಿಸಬೇಕಾಗಬಹುದು. ಹಾಗೆ ಸ್ಪಂದಿಸಲು ಅವುಗಳಿಗೆ ಒಂದು ಮಟ್ಟಿಗಿನ ಆರ್ಥಿಕ ಮತ್ತು ರಾಜಕೀಯವಾದ ಸ್ವಾಯತ್ತೆ ಇರಬೇಕಾಗುತ್ತದೆ. ಇದನ್ನು ಸಹಕಾರದ ಹಾದಿಯಲ್ಲಿ ಪರಿಣಾಮಕಾರಿಯಾಗಿ ಸಾಧ್ಯವಾಗಿಸಬೇಕೆಂದರೆ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದೇ ದಾರಿ. ರಾಜ್ಯಗಳನ್ನು ಹಾಗೆ ಸಬಲಗೊಳಿಸಿದಷ್ಟೂ ದೇಶವೂ ಬಲಗೊಳ್ಳುವುದು. ಎಲ್ಲವನ್ನೂ ದೆಹಲಿಯಿಂದಲೇ ನಿರ್ಧರಿಸುತ್ತೇವೆ ಅಂತ ಹೊರಡುವ ಮನಃಸ್ಥಿತಿಯಿಂದಂತೂ ಈ ಹೊಸ ಸವಾಲುಗಳಿಗೆ ಪರಿಹಾರ ಕಲ್ಪಿಸುವುದು ಸಾಧ್ಯವಾಗದು. ಅದೇ ಈ ಹೊತ್ತಿನ ತಿಳಿವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT