ಬುಧವಾರ, ಅಕ್ಟೋಬರ್ 28, 2020
24 °C
ವಿಶ್ವ ಸುದ್ದಿ ದಿನ

ಅನುಭವ ಮಂಟಪ: ಪತ್ರಿಕೋದ್ಯಮ ನನಗೇಕೆ ಮುಖ್ಯ

ತಾಸ್ಮಿನ್‌ ಚೂ Updated:

ಅಕ್ಷರ ಗಾತ್ರ : | |

ಕೋವಿಡ್‌ ಸಾಂಕ್ರಾಮಿಕದ ನಡುವೆ ಕೂತು ಸುದ್ದಿ ಬರೆಯಬೇಕಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಕಳೆದ ಆರು ವಾರಗಳಿಂದ ನಾನು ವಿದ್ಯಾರ್ಥಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ಪತ್ರಿಕೋದ್ಯಮಕ್ಕೆ ಸಂಬಂಧವೇ ಇಲ್ಲದವರನ್ನು ಪತ್ರಿಕೋದ್ಯಮಕ್ಕೆ ಪರಿಚಯಿಸುವ ಇಂಟರ್ನ್‌ಶಿಪ್‌ನ ಭಾಗವಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ.

ಯಾವ ಆಯಾಮದಿಂದ ನೋಡಿದರೂ ಪತ್ರಿಕೋದ್ಯಮದಲ್ಲಿ ನನ್ನ ಇರವು ವಿಲಕ್ಷಣವಾದುದು. ನಾನು ಪತ್ರಿಕೋದ್ಯಮದ ಶಾಲೆಯವಳಲ್ಲ. ನನ್ನ ವರದಿಗಾರಿಕೆಗಳೆಲ್ಲವೂ ಫೋನಿನ ಮೂಲಕ ನಡೆಯುತ್ತಿದ್ದವು. ಸುದ್ದಿಮನೆಯು ಝೂಮ್‌ ಆ್ಯಪ್‌ ಮೂಲಕ ನಡೆಯುತ್ತಿತ್ತು. ನನ್ನ ಸಹೋದ್ಯೋಗಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿಯನ್ನಷ್ಟೇ ನಾನು ನೇರವಾಗಿ ಭೇಟಿ ಮಾಡಿದ್ದೆ. ಎಷ್ಟೋ ಬಾರಿ ನನ್ನ ಬೆಡ್‌ರೂಂನಲ್ಲಿ ಕೂತು ಸುದ್ದಿಯ ಮೂಲಗಳ ಜತೆ ಮಾತನಾಡುವಾಗ, ‘ಇದೆಂತಹ ಕೆಲಸ’ ಎಂದು ಅನಿಸಿದ್ದಿದೆ. ಸ್ವಂತ ಊರಿನಿಂದ 600 ಕಿ.ಮೀ. ದೂರದ ಮತ್ತೊಂದು ಊರಿನಲ್ಲಿ ಪತ್ರಿಕೋದ್ಯಮದ ಕೆಲಸ ಮಾಡುತ್ತಿರುವ ಏಕೈಕ ಗಣಿತದ ವಿದ್ಯಾರ್ಥಿ ನಾನಾಗಿದ್ದೆ. ಇಷ್ಟವಿಲ್ಲದಿದ್ದರೂ ಸುದ್ದಿಗಾಗಿ ಮಾಂಟ್ರಿಯಲ್‌ ನಗರವನ್ನು ಸುತ್ತುತ್ತಿದ್ದೆ.

ವರದಿಗಾರಿಕೆ ಒಂದು ಅತ್ಯುತ್ತಮ ಒಳಗಣ್ಣು. ಪ್ರತಿಭಟನಕಾರರ ಜತೆ ಹೆಜ್ಜೆಹಾಕಿದೆ, ಅವರೊಂದಿಗೆ ಮಾತನಾಡಿದೆ, ಅವುಗಳ ಬಗ್ಗೆ ಬರೆಯುತ್ತಲೇ ಅವನ್ನು ಅರ್ಥಮಾಡಿಕೊಂಡೆ. ವರದಿಗಾರಿಕೆ ನನ್ನ ಪಾಲಿಗೆ ಒಂದು ಮುಲಾಮು. ನಾನು ಗೊಂದಲಕ್ಕೆ ಸಿಲುಕಿದಾಗ, ಸತ್ಯವನ್ನು ಹುಡುಕಲು ಆರಂಭಿಸುತ್ತಿದ್ದೆ ಮತ್ತು ಅದರ ಬಗ್ಗೆ ಬರೆಯುತ್ತಿದ್ದೆ. ಗಣಿತಶಾಸ್ತ್ರದ ಸೂತ್ರಗಳಂತೆ,  ವರದಿಗಾರಿಕೆಯೂ ಸುಲಭದ ಕೆಲಸವಲ್ಲ. ನಿಜದ ಜಗತ್ತಿನಲ್ಲಿ ಘಟನೆಗಳ ಕಾಲಗಣನೆ ಸರಿಯಾಗಿ ಇರುವುದಿಲ್ಲ. ಎಷ್ಟೋ ಬಾರಿ ಕಾರಣಗಳೇ ಗೊತ್ತಾಗುವುದಿಲ್ಲ. ಈ ಸುದ್ದಿ ಚೆನ್ನಾಗಿದೆ ಎಂದು ಹೇಳುವುದು ಸುಲಭ. ಆದರೆ ಯಾವುದು ತಪ್ಪು ಹಾಗೂ ಅದು ಏಕೆ ತಪ್ಪು, ಯಾವುದು ಸರಿ ಹಾಗೂ ಅದು ಏಕೆ ಸರಿ ಎಂದು ವಿವರಿಸುವುದು ಸುಲಭವಲ್ಲ. ಸತ್ಯವನ್ನು ಪರಿಶೀಲಿಸುವುದನ್ನು ನಾನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಲಿತೆ. ಹಲವು ಬಾರಿ ತಪ್ಪು ಮಾಡಿದ್ದೇನೆ. ನಾವು ಮಾಡಿದ ತಪ್ಪು ಸಾರ್ವಜನಿಕಗೊಳ್ಳುವುದು ಇದೆಯಲ್ಲ ಅದು ಅತ್ಯಂತ ಕಷ್ಟದ ಸಂಗತಿ. ಸತ್ಯದ ಹೊಣೆಗಾರಿಕೆಯೇ ಪತ್ರಿಕೋದ್ಯಮಕ್ಕೆ ಅಷ್ಟು ಮಹತ್ವವನ್ನು ತಂದುಕೊಟ್ಟಿದೆ.

ಕರಾರುವಕ್ಕಾದ ವರದಿಗಾರಿಕೆಯು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾನು ಹುಟ್ಟಿದ್ದು 9/11 ಘಟನೆಯ ನಾಲ್ಕು ತಿಂಗಳ ನಂತರ. ನಾನು 6 ವರ್ಷದವಳಾಗಿದ್ದಾಗ ಜಗತ್ತು ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದಾಗ ನಾನು 10ನೇ ತರಗತಿಯಲ್ಲಿ ಇದ್ದೆ, ಏನೋ ಸಂಕಟದಲ್ಲಿ ನಾನು ಪರೀಕ್ಷೆ ಬರೆಯುತ್ತಿದ್ದೆ. ನನ್ನಂತಹ ಹಲವರು ಇದನ್ನು ಕರಾರುವಕ್ಕಾಗಿ ಹೇಳಬಲ್ಲರು. ಈಗ ಕೋವಿಡ್‌ ಸಾಂಕ್ರಾಮಿಕದ ಕಾರಣ ನನ್ನ ವಿಶ್ವವಿದ್ಯಾಲಯದ ಜೀವನವೇ ಸ್ಥಗಿತವಾಗಿದೆ. ಪತ್ರಿಕೋದ್ಯಮವಿಲ್ಲದೆ ನಾನು ಈ ಇತಿಹಾಸವನ್ನು ಹೇಗೆ ನಂಬಲು ಸಾಧ್ಯವಿತ್ತು? ನನಗೆ ಈ ವಿಚಾರಗಳೆಲ್ಲಾ ತಿಳಿದದ್ದು ಪತ್ರಿಕೋದ್ಯಮದ ಮೂಲಕ, ಅದರಲ್ಲೂ ಕರಾರುವಕ್ಕಾದ ವರದಿಗಾರಿಕೆಯಿಂದ. ವರದಿಗಾರಿಕೆ ಕೇವಲ ಉದ್ಯಮವಲ್ಲ. ಅದು ಸಮಾಜಕ್ಕೆ ಪತ್ರಕರ್ತನು ಮಾಡುವ ಸೇವೆ. ರಸ್ತೆಗಳು ಹೇಗೆ ಮುಖ್ಯವೋ ಪತ್ರಕರ್ತರೂ ಅಷ್ಟೇ ಮುಖ್ಯ.

ಹಣಕಾಸಿನ ವಿಚಾರದಲ್ಲಿ ಪತ್ರಿಕೋದ್ಯಮ ಸಾಯುತ್ತಿದೆ ಎಂದು ತಜ್ಞರು ಹೇಳಬಹುದು. ಆದರೆ ಪತ್ರಿಕೋದ್ಯಮ ಸತ್ತಿಲ್ಲ. ಅದರ ಆದಾಯದ ಮೂಲಕ್ಕೆ ಧಕ್ಕೆಯಾಗಿದೆ. ಇದಕ್ಕೆ ನನ್ನ ತಲೆಮಾರಿನ ಯುವಜನರನ್ನೇ ಹೊಣೆ ಮಾಡಬೇಕಿರುವುದು ವಿಪರ್ಯಾಸ. ಬೇರೆಲ್ಲಾ ತಲೆಮಾರುಗಳಿಗಿಂತ ನಮಗೆ ಹೆಚ್ಚಿನ ಮಾಹಿತಿ ದೊರೆಯುತ್ತಿದೆ. ಆದರೆ ಪತ್ರಿಕೆಗಳನ್ನು ಓದುವುದರ ಬದಲು ನಾವು ಮೊಬೈಲ್‌ನಲ್ಲಿ ಬರಹಗಳನ್ನು, ಇನ್ಫೊಗ್ರಾಫ್‌ಗಳನ್ನು, ವಿಡಿಯೊ ಕ್ಲಿಪ್‌ಗಳನ್ನು ಟ್ವೀಟ್‌ಗಳನ್ನು ಹಂಚಿಕೊಳ್ಳುತ್ತಿದ್ದೇವೆ ಅಷ್ಟೆ. ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರಲಿ ಎಂದೇ ಕಾಯುತ್ತೇವೆ. ನನ್ನ ಯಾವ ಸ್ನೇಹಿತರೂ ಯಾವುದೇ ಪತ್ರಿಕೆಯ ಚಂದಾದಾರರಲ್ಲ. ನಮಗೆ ಎಲ್ಲವೂ ಡಿಜಿಟಲ್ ರೂಪದಲ್ಲಿ ಉಚಿತವಾಗಿ ದೊರೆಯಬೇಕು. ಎಲ್ಲರಿಗೂ ಸುದ್ದಿಗಳು ಬೇಕು. ಯಾರೂ ಸುದ್ದಿಗಾಗಿ ಹಣ ನೀಡಲು ತಯಾರಿಲ್ಲದಿದ್ದರೆ ಪತ್ರಿಕೋದ್ಯಮ ಉಳಿಯುವುದಾದರೂ ಹೇಗೆ? ಪತ್ರಿಕೋದ್ಯಮದಲ್ಲಿ ಎಷ್ಟು ಕಷ್ಟವಿದೆ ಎಂಬುದನ್ನು ನಾನು ನೋಡಿದ್ದೇನೆ. ಸ್ಥಳೀಯ ಪತ್ರಿಕೋದ್ಯಮಕ್ಕೆ/ವರದಿಗಾರಿಕೆಗೆ ನೀಡುವ ಗಮನ ಅತ್ಯಂತ ಕಡಿಮೆ ಎಂಬುದು ತಿಳಿದಾಗ ಬೇಸರವಾಗುತ್ತದೆ. ನಿಮ್ಮ ಶಾಲಾ ಮಂಡಳಿಯಲ್ಲಿನ ಸಮಸ್ಯೆಗಳ ಬಗ್ಗೆ ಯಾರು ಬರೆಯಬೇಕು? ನಿಮ್ಮ ವಸತಿಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದರೆ ಅದರ ಬಗ್ಗೆ ಬರೆಯುವವರು ಯಾರು? ಸ್ಥಳೀಯ ಪತ್ರಕರ್ತರು ಇಲ್ಲದಿದ್ದರೆ ಇವೆಲ್ಲಾ ಸಾಧ್ಯವಿಲ್ಲ.

ಆರು ವಾರಗಳ ನನ್ನ ಪತ್ರಿಕೋದ್ಯಮದ ಇಂಟರ್ನ್‌ಶಿಪ್‌ ಮುಗಿಯುವ ದಿನ ಹತ್ತಿರದಲ್ಲಿದೆ. ಆದರೆ ಪತ್ರಿಕೋದ್ಯಮದ ದೃಷ್ಟಿಕೋನವನ್ನು, ಒಳಗಣ್ಣನ್ನು ನಾನು ಉಳಿಸಿಕೊಳ್ಳುತ್ತೇನೆ. ನನ್ನ ಝೂಮ್‌ ಸುದ್ದಿಮನೆಯು, ಝೂಮ್‌ ತರಗತಿಯಾಗಿ ಬದಲಾಗಲಿದೆ. ಆದರೆ, ನಾನು ನನ್ನ ಪತ್ರಕರ್ತ ಸಹೋದ್ಯೋಗಿಗಳ ಕೆಲಸಕ್ಕೆ ಬೆಲೆ ನೀಡುತ್ತೇನೆ. ಬದುಕು ಮುಂದುವರಿಯುತ್ತಲೇ ಇರುತ್ತದೆ. ಆದರೆ ಅದನ್ನು ಕೆಲವು ವಾರಗಳ ಕಾಲ ದಾಖಲಿಸಲು ದೊರೆತ ಅವಕಾಶ, ನನಗೆ ದೊರೆತ ಉಡುಗೊರೆಯೇ ಸರಿ. 

(ಲೇಖಕಿ ಕೆನಡಾದ ಓಂಟಾರಿಯೊ ಪ್ರಾಂತದ ಹ್ಯಾಮಿಲ್ಟನ್‌ ನಿವಾಸಿ. ಒಂಟಾರಿಯೊದ ಕಿಚೆನೆರ್‌ನಲ್ಲಿನ ದಿನಪತ್ರಿಕೆ ಮತ್ತು ಸುದ್ದಿತಾಣ ‘ವಾಟರ್‌ಲೂ ರೀಜನ್ ರೆಕಾರ್ಡ್‌’ನಲ್ಲಿ ಇಂಟರ್ನಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದಾರೆ)

 

ವಿಶ್ವ ಸುದ್ದಿ ದಿನ

ವಿಶ್ವ ಸುದ್ದಿ ದಿನವನ್ನು ‘ಕೆನಡಿಯನ್ ಜರ್ನಲಿಸಮ್ ಫೌಂಡೇಶನ್’ (ಸಿಜೆಎಫ್) ಮತ್ತು ‘ವಿಶ್ವ ಸಂಪಾದಕರ ವೇದಿಕೆ’ಗಳು (ಡಬ್ಲ್ಯೂಇಎಫ್) ಗೂಗಲ್ ನ್ಯೂಸ್‌ ಇನಿಷಿಯೇಟಿವ್ ಜತೆಗೂಡಿ ಪ್ರಸ್ತುತಪಡಿಸುತ್ತಿವೆ. ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ನೂರಾರು ಪತ್ರಿಕಾ ಸಂಸ್ಥೆಗಳು ಈ ಬಳಗದಲ್ಲಿವೆ.

ಸಿಜೆಎಫ್: 1990ರಲ್ಲಿ ಸ್ಥಾಪನೆಯಾದ ಕೆನಡಿಯನ್ ಜರ್ನಲಿಸಮ್ ಫೌಂಡೇಶನ್, ಗುಣಮಟ್ಟದ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಫೆಲೊಶಿಪ್‌ಗಳನ್ನು ನೀಡುತ್ತಿದೆ. ಪ್ರತಿಷ್ಠಾನವು ಪತ್ರಿಕೋದ್ಯಮ ಶಿಕ್ಷಣ, ತರಬೇತಿ ಮತ್ತು ಸಂಶೋಧನೆಗೆ ಅವಕಾಶ ನೀಡುತ್ತಿದೆ. 

ಡಬ್ಲ್ಯೂಇಎಫ್: ಸುದ್ದಿ ಸಂಸ್ಥೆಗಳ ಸಂಪಾದಕರ ಪ್ರಮುಖ ಜಾಗತಿಕ ಮುಂಚೂಣಿ ವೇದಿಕೆಯೇ ‘ವಿಶ್ವ ಸಂಪಾದಕರ ವೇದಿಕೆ’. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂಪಾದಕೀಯ ಶ್ರೇಷ್ಠತೆಯನ್ನು ಉತ್ತೇಜಿಸುವ ಬದ್ಧತೆಯ ತಳಹದಿಯ ಮೇಲೆ ಇದನ್ನು ಕಟ್ಟಲಾಗಿದೆ. ಎರಡು ದಶಕಗಳ ಹಿಂದೆ ಸ್ಥಾಪನೆಯಾದ ವೇದಿಕೆಯು, ತರಬೇತಿ, ಹೊಸತನ ಅಳವಡಿಕೆ, ಸಮಾವೇಶ, ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಮನೆಗಳ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗುತ್ತಿದೆ. 

ವ್ಯಾನ್ ಇಫ್ರಾ: ಇದು ಪತ್ರಿಕಾ ಪ್ರಕಾಶಕರ ಜಾಗತಿಕ ಸಂಘಟನೆ. ಸ್ವತಂತ್ರ ಮಾಧ್ಯಮ ಮುನ್ನಡೆಸುವ, ಜಗತ್ತಿನೆಲ್ಲೆಡೆ ವ್ಯಾಪಿಸಿರುವ ಪತ್ರಕರ್ತರು ಹಾಗೂ ಪ್ರಕಾಶಕರ ಹಕ್ಕುಗಳ ರಕ್ಷಣೆ ಇದರ ಧ್ಯೇಯ. ಇದು ತನ್ನ ಸದಸ್ಯರಿಗೆ ಡಿಜಿಟಲ್ ಜಗತ್ತಿನಲ್ಲಿ ಹೊಸತನ, ಪರಿಣಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ. 120 ದೇಶಗಳ 18 ಸಾವಿರಕ್ಕೂ ಹೆಚ್ಚು ಪ್ರಕಾಶಕರನ್ನು ಸಂಸ್ಥೆ ಪ್ರತಿನಿಧಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು