ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಹೆಸರು ನಾವೇಕೆ ಬದಲಿಸಬೇಕು?

ಹೆಸರು ಇರಿಸುವ ವಿಚಾರದಲ್ಲಿ ತರ್ಕಹೀನವಾಗಿ ವರ್ತಿಸಿದ್ದರ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಲಿ
Last Updated 23 ಆಗಸ್ಟ್ 2021, 22:00 IST
ಅಕ್ಷರ ಗಾತ್ರ

ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ‘ರಾಜೀವ್ ಗಾಂಧಿ ಖೇಲ್ ರತ್ನ’ದ ಹೆಸರನ್ನು ‘ಮೇಜರ್ ಧ್ಯಾನ್ ಚಂದ್‌ ಖೇಲ್ ರತ್ನ’ ಎಂದು ಬದಲಾಯಿಸಿದ್ದನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತಿದೆ. ಧ್ಯಾನ್ ಚಂದ್ ಅವರು ದಂತಕಥೆಯಾಗಿ ಬೆಳೆದುನಿಂತ ಹಾಕಿ ಆಟಗಾರ. ಈಚೆಗೆ ಮುಕ್ತಾಯವಾದ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶದ ಮಹಿಳೆಯರ ಮತ್ತು ಪುರುಷರ ಹಾಕಿ ತಂಡವು ಅದ್ಭುತ ಸಾಧನೆ ತೋರಿದ ನಂತರದಲ್ಲಿ ಪ್ರಶಸ್ತಿಯ ಹೆಸರು ಬದಲಾವಣೆಯ ಘೋಷಣೆಯನ್ನು ಸರ್ಕಾರ ಮಾಡಿತು. ಮೇಜರ್ ಧ್ಯಾನ್ ಚಂದ್ ಅವರು ದೇಶದ ಕ್ರೀಡಾಲೋಕದ ಅತಿದೊಡ್ಡ ಹೀರೊಗಳಲ್ಲಿ ಒಬ್ಬರು. ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. 1928ರ ಒಲಿಂಪಿಕ್ಸ್‌
ನಲ್ಲಿ ದೇಶದ ಹಾಕಿ ತಂಡವು ಚಿನ್ನ ಗೆದ್ದಾಗ ಅತಿಹೆಚ್ಚಿನ ಸಂಖ್ಯೆಯಲ್ಲಿ ಗೋಲು ಬಾರಿಸಿದ್ದವರು ಧ್ಯಾನ್ ಚಂದ್.

ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸಿದ್ದಕ್ಕೆ ಇಷ್ಟೊಂದು ಸಿಟ್ಟಾಗುವ ಬದಲು ಕಾಂಗ್ರೆಸ್ ಪಕ್ಷವು ತಾನು ಅಧಿಕಾರದಲ್ಲಿ ಇದ್ದಾಗ ಎಷ್ಟು ತರ್ಕಹೀನವಾಗಿ ವರ್ತಿಸಿದ್ದೆ, ತಾನು ತೆಗೆದುಕೊಂಡ ನಿರ್ಧಾರಗಳು ಹೇಗಿದ್ದವು ಎಂಬ ಬಗ್ಗೆ ಅವಲೋಕನ ನಡೆಸಬೇಕು. ಅದರಲ್ಲೂ ಮುಖ್ಯವಾಗಿ ರಾಷ್ಟ್ರಮಟ್ಟದ ಪ್ರತೀ ಯೋಜನೆ, ಸಂಸ್ಥೆ, ಪ್ರಶಸ್ತಿ, ಫೆಲೊಶಿಪ್‌ಗಳಿಗೆ ನೆಹರೂ– ಗಾಂಧಿ ಕುಟುಂಬದ ಮೂವರು ವ್ಯಕ್ತಿಗಳ– ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ – ಹೆಸರನ್ನು ಇರಿಸಿದ್ದರ ಬಗ್ಗೆ ಅವಲೋಕನ ನಡೆಸಬೇಕು. ಈ ಕುಟುಂಬವೇ ಕಾಂಗ್ರೆಸ್ಸಿನ ಮಾಲೀಕತ್ವ ಹೊಂದಿದೆ, ಪಕ್ಷವನ್ನು ನಿಯಂತ್ರಿಸುತ್ತಿದೆ.

ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಿಸಿದ್ದಕ್ಕಾಗಿ ಪಕ್ಷವು ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ, ಪ್ರತೀ ಯೋಜನೆ, ‍ಪ್ರಶಸ್ತಿಗೆ ಒಂದು ಕುಟುಂಬದ ಸದಸ್ಯರ ಹೆಸರನ್ನು ಇತ್ತಿದ್ದರ ಹಿಂದಿನ ವಿಪರೀತ ಬುದ್ಧಿಯನ್ನು ಹಾಗೂ ದುರಹಂಕಾರವನ್ನು ಬಯಲುಗೊಳಿಸಬೇಕಾಗಿದೆ. ನಮ್ಮ ಅರಿವಿಗೆ ಬಂದಿರುವಂತೆ, ನೆಹರೂ, ಇಂದಿರಾ ಹಾಗೂ ರಾಜೀವ್ ಅವರಿಗೆ ಕ್ರೀಡೆಯ ಜೊತೆ ದೊಡ್ಡ ನಂಟು ಇರಲಿಲ್ಲ. ಹೀಗಿದ್ದರೂ, ಬಹಳಷ್ಟು ಕ್ರೀಡಾಕೂಟಗಳಿಗೆ ಮತ್ತು ಕ್ರೀಡಾ ಟ್ರೋಫಿಗಳಿಗೆ ಅವರ ಹೆಸರು ಇರಿಸಲಾಗಿದೆ. ರಾಜೀವ್ ಗಾಂಧಿ ಅವರ ಹೆಸರು ಹೊತ್ತಿರುವ ಕೆಲವು ಕ್ರೀಡಾಕೂಟಗಳ ಉದಾಹರಣೆ ಇಲ್ಲಿದೆ. ಬಹುತೇಕ ಎಲ್ಲ ಬಗೆಯ ಕ್ರೀಡೆಗಳಿಗೂ ಅವರ ಹೆಸರು ಬಳಸಿಕೊಳ್ಳಲಾಗಿದೆ.

ರಾಜೀವ್ ಗಾಂಧಿ ಗೋಲ್ಡ್ ಕಪ್ ಕಬಡ್ಡಿ ಪಂದ್ಯಾಟ; ರಾಜೀವ್ ಗಾಂಧಿ ಫೆಡರೇಶನ್ ಕಪ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌; ರಾಜೀವ್ ಗಾಂಧಿ ಮೆಮೋರಿಯಲ್ ರೋಲರ್ ಸ್ಕೇಟಿಂಗ್ ಚಾಂ‍ಪಿಯನ್‌ಶಿಪ್‌; ರಾಜೀವ್ ಗಾಂಧಿ ಸ್ಮಾರಕ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌; ಅಖಿಲ ಭಾರತ ರಾಜೀವ್ ಗಾಂಧಿ ಬ್ಯಾಸ್ಕೆಟ್‌ಬಾಲ್‌ (ಹೆಣ್ಣುಮಕ್ಕಳ) ಪಂದ್ಯಾಟ; ರಾಜೀವ್ ಗಾಂಧಿ ದೋಣಿ ಸ್ಪರ್ಧೆ, ಕೇರಳ; ರಾಜೀವ್ ಗಾಂಧಿ ರೋಡ್ ರೇಸ್, ನವದೆಹಲಿ; ಅಖಿಲ ಭಾರತ ರಾಜೀವ್ ಗಾಂಧಿ ಕುಸ್ತಿ ಗೋಲ್ಡ್ ಕಪ್... ಇವು ಉದಾಹರಣೆ ಮಾತ್ರ. ಇಲ್ಲಿ ಸ್ಥಳಾವಕಾಶದ ಮಿತಿಯ ಕಾರಣದಿಂದಾಗಿ ಹಲವು ಟ್ರೋಫಿಗಳ ಹೆಸರು ಉಲ್ಲೇಖಿಸಿಲ್ಲ.

ರಾಷ್ಟ್ರಮಟ್ಟದ ಪ್ರಮುಖ ಕ್ರೀಡಾಕೂಟಗಳ ವಿಚಾರ ದಲ್ಲಿ ಇಂದಿರಾ ಗಾಂಧಿ ಹಾಗೂ ಜವಾಹರಲಾಲ್ ನೆಹರೂ ಅವರ ಹೆಸರು ಕೂಡ ಪ್ರಮುಖವಾಗಿ ಕಾಣಿಸುತ್ತವೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ಮಹಿಳಾ ಹಾಕಿ ಗೋಲ್ಡ್ ಕಪ್ ಕ್ರೀಡಾಕೂಟ; ಇಂದಿರಾ ಗಾಂಧಿ ದೋಣಿ ಸ್ಪರ್ಧೆ, ಕೇರಳ; ನೆಹರೂ ಕಪ್– ಅಂತರರಾಷ್ಟ್ರೀಯ ಫುಟ್‌ಬಾಲ್‌ ಕ್ರೀಡಾಕೂಟ; ಜವಾಹರಲಾಲ್ ನೆಹರೂ ಹಾಕಿ ಕ್ರೀಡಾಕೂಟ ಇವು ಕೆಲವು ಉದಾಹರಣೆಗಳು. ಕಾಂಗ್ರೆಸ್ ಪಕ್ಷವು ಇದನ್ನು ಕ್ರೀಡಾಕೂಟಗಳಿಗೆ, ಟ್ರೋಫಿಗಳಿಗೆ ಸೀಮಿತಗೊಳಿಸಿಲ್ಲ. ಇದು ರಾಷ್ಟ್ರ ರಾಜಧಾನಿಯ ಪ್ರಮುಖ ಕ್ರೀಡಾಂಗಣಗಳಿಗೂ ವಿಸ್ತರಣೆ ಆಗಿದೆ. ಜವಾಹರಲಾಲ್ ನೆಹರೂ ಕ್ರೀಡಾಂಗಣ, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣ ಇದಕ್ಕೆ ಉದಾಹರಣೆ. ಇಂತಹ ಹೆಸರು ಹಲವಿವೆ.

ಕೊನೆಯ ಬಾರಿ ಲೆಕ್ಕಹಾಕಿದ್ದ ಸಂದರ್ಭದಲ್ಲಿ ದೇಶದ 26 ಕ್ರೀಡಾಕೂಟಗಳು, 17 ಕ್ರೀಡಾಂಗಣಗಳಿಗೆ ನೆಹರೂ–ಗಾಂಧಿ ಕುಟುಂಬದ ಈ ಮೂವರ ಹೆಸರು ಇರಿಸಲಾಗಿತ್ತು. ದೇಶದ ಕ್ರೀಡಾಲೋಕದ ತಾರೆಗಳನ್ನೂ, ಇತರ ಖ್ಯಾತ ವ್ಯಕ್ತಿಗಳನ್ನೂ ನಿರ್ಲಕ್ಷಿಸ
ಲಾಗಿತ್ತು. ಇದು ಕ್ರೀಡೆಗೆ ಮಾತ್ರ ಸೀಮಿತ ಆಗಿಲ್ಲ. ಈ ಲೇಖಕ ಮೊದಲ ಬಾರಿ ಪಟ್ಟಿ ಮಾಡಿದ್ದಾಗ, ಸರ್ಕಾರದ ಒಟ್ಟು 450 ಯೋಜನೆಗಳು, ಕಟ್ಟಡಗಳು, ಫೆಲೋಶಿಪ್‌ಗಳು ಕಾಂಗ್ರೆಸ್ ಪಕ್ಷದ ಈ ಮೂವರು ಐಕಾನ್‌ಗಳ ಹೆಸರು ಹೊತ್ತಿದ್ದವು. ವಿಮಾನ ನಿಲ್ದಾಣಗಳು, ಬಂದರುಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಇದರಲ್ಲಿ ಸೇರಿವೆ. ಅತ್ಯಂತ ಎತ್ತರದ ಸ್ಥಳಗಳು, ಭೌಗೋಳಿಕ ಗುರುತುಗಳು ಕೂಡ ಈ ಹೆಸರುಗಳಿಂದ ಹೊರತಾಗಿಲ್ಲ. ಈ ಕುಟುಂಬದ ಸದಸ್ಯರನ್ನು ಹೊರತುಪಡಿಸಿದರೆ ಬೇರೆ ಯಾರೂ ಲೆಕ್ಕಕ್ಕೇ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಹಾಗೂ ದೇಶದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರಾದ ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ. ಬಿ.ಆರ್.ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಸಿಂಹ ರಾವ್ ಅವರ ಹೆಸರನ್ನೂ ನಿರ್ಲಕ್ಷಿಸ ಲಾಗಿದೆ.

ಹೆಸರು ಇರಿಸಿರುವ ಈ ಕಾಯಕದಲ್ಲಿ ಪಕ್ಷವು ಕಾಲಾನಂತರದಲ್ಲಿ ಯಾವುದು ಯುಕ್ತ, ಯಾವುದು ಯುಕ್ತವಲ್ಲ ಎಂಬ ಅರಿವನ್ನೂ ಕಳೆದುಕೊಂಡಿತು. ಹೆಸರು ಇರಿಸುವುದಕ್ಕೆ ತರ್ಕವೇ ಇರುತ್ತಿರಲಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಫೆಲೊಶಿಪ್‌ಗೆ ರಾಜೀವ್ ಗಾಂಧಿ ಅವರ ಹೆಸರು ಇರಿಸಲಾಯಿತು; ಡಾ. ಅಂಬೇಡ್ಕರ್ ಅವರ ಹೆಸರನ್ನಲ್ಲ.

ಹೈದರಾಬಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಎನ್.ಟಿ. ರಾಮರಾವ್ ಎಂದು ಇದ್ದಿದ್ದನ್ನು ರಾಜೀವ್ ಗಾಂಧಿ ಎಂದು ಬದಲಿಸಲಾಯಿತು. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಕುಸಿದಿರುವುದಕ್ಕೆ ಒಂದು ಕಾರಣ ಏನಿರಬಹುದು ಎಂಬುದರ ಚಿತ್ರಣವನ್ನು ಇದು ನಿಮಗೆ ನೀಡಬಹುದು. ಅದೃಷ್ಟವಶಾತ್, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇದರಿಂದ ತಪ್ಪಿಸಿಕೊಂಡಿತು. ಈ ವಿಮಾನ ನಿಲ್ದಾಣಕ್ಕೆ ನಗರದ ನಿರ್ಮಾತೃ ಕೆಂಪೇಗೌಡರ ಹೆಸರನ್ನು ಇರಿಸಿದ್ದು ಸೂಕ್ತವಾಗಿದೆ.

ಕಾಂಗ್ರೆಸ್ ಪಕ್ಷವು ತೀರಾ ಅಸಹ್ಯಕರ ರೀತಿಯಲ್ಲಿ ಹೆಸರುಗಳನ್ನು ಇರಿಸಿತು. ತಪ್ಪು ಸರಿಪಡಿಸುವ ಕೆಲಸ ಈಗ ಶುರುವಾಗಿದ್ದು, ಇದು ವೇಗ ಪಡೆದುಕೊಳ್ಳಬೇಕಿದೆ. ಈ ಕೆಳಗಿನ ಕಾರಣಗಳಿಗಾಗಿ, ತಪ್ಪು ಸರಿ ಪಡಿಸುವ ಕೆಲಸ ಆಗಬೇಕಿದೆ: ಮೊದಲನೆಯದು, ಭಾರತವು ರಾಜನ ಆಡಳಿತ ಇರುವ ದೇಶವಲ್ಲ. ರಾಜನ ಆಡಳಿತದ ದೇಶಗಳಲ್ಲಿ ಮಾತ್ರ ಯೋಜನೆಗಳು, ಸಂಸ್ಥೆಗಳನ್ನು ರಾಜನ ಹೆಸರಿನಲ್ಲಿ ಅಥವಾ ಅವನ ಕುಟುಂಬದ ಸದಸ್ಯರ ಹೆಸರಿನಲ್ಲಿ ರೂಪಿಸಲಾಗುತ್ತದೆ. ಬ್ರಿಟನ್ನಿನಲ್ಲಿ ಇಂತಹ ಸಂಸ್ಥೆಗಳು ಹೇರಳವಾಗಿವೆ. ಭಾರತವು ಪ್ರಜಾತಂತ್ರ ಗಣರಾಜ್ಯ. ನಮ್ಮ ದೇಶದ ಮುಖ್ಯಸ್ಥರನ್ನು ನಾವು ಚುನಾಯಿಸುತ್ತೇವೆ.

ಎರಡನೆಯದಾಗಿ, ದೇಶದಲ್ಲಿ ಪ್ರಮುಖವಾದ ಎಲ್ಲವುಗಳಿಗೂ ಒಂದೇ ಕುಟುಂಬದವರ ಹೆಸರು ಇರಿಸು ವುದರಿಂದ ಇತರರ ಕೊಡುಗೆಗಳನ್ನು ಗುರುತಿಸದಂತೆ ಆಗುತ್ತದೆ. ಎಲ್ಲವುಗಳಿಗೂ ತಮ್ಮ ಹೆಸರನ್ನೇ ಇರಿಸಬೇಕು ಎಂಬ ಬಯಕೆಯ ಕಾರಣದಿಂದಾಗಿ ನೆಹರೂ–ಗಾಂಧಿಗಳು ನಮ್ಮ ದೇಶವನ್ನು ‘ಕೃತಘ್ನ’ವಾಗಿಸಿದ್ದಾರೆ. ನಾವು ದೇಶಕ್ಕಾಗಿ ದೊಡ್ಡ ತ್ಯಾಗ ಮಾಡಿರುವ ನಮ್ಮ ಶಿಕ್ಷಕರು, ಕೃಷಿಕರು, ವಿಜ್ಞಾನಿಗಳು, ವೈದ್ಯರು, ನ್ಯಾಯಮೂರ್ತಿಗಳು ಹಾಗೂ ಬೇರೆ ಬೇರೆ ರಂಗಗಳ ಹಿರಿಯರನ್ನು ಸರಿಯಾಗಿ ಗುರುತಿಸಿಲ್ಲ. ಮೂರನೆಯದಾಗಿ, ನಮ್ಮದು ವಿಶ್ವದ ಅತ್ಯಂತ ವೈವಿಧ್ಯಮಯ ದೇಶ; ಇಲ್ಲಿನ ಪ್ರತೀ ಸಮುದಾಯವೂ ದೇಶದ ಪ್ರಗತಿಗಾಗಿ ಕೆಲಸ ಮಾಡಿದೆ. ದೇಶದ ವಿವಿಧ ಸಂಸ್ಥೆಗಳಿಗೆ, ವಿವಿಧ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ಹೆಸರು ಇರಿಸಿದರೆ, ನಾವು ನಮ್ಮ ಜನರಿಗೆ ನಮ್ಮ ಸಾಮಾಜಿಕ ವಾಸ್ತವವನ್ನು ನೆನಪಿಸಿಕೊಟ್ಟಂತೆ ಆಗುತ್ತದೆ, ಬೇರೆ ಬೇರೆ ಹಿನ್ನೆಲೆಗಳ ಜನರ ದೊಡ್ಡ ಕೊಡುಗೆಗಳನ್ನು ತಿಳಿಸಿದಂತೆ ಆಗುತ್ತದೆ.

ಹೆಸರುಗಳನ್ನು ಸರಿಪಡಿಸುವ ವಿಚಾರದಲ್ಲಿ ಹಿಂಜರಿಕೆ ಇರಬಾರದು. ಇದು ರಾಷ್ಟ್ರೀಯ ಭಾವೈಕ್ಯಕ್ಕೆ ಕೊಡುಗೆ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT