ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲೇಶ್‌ ಚಿಪ್ಪಳಿ ಬರಹ: ವನ್ಯಜೀವಿಗಳ ಕೊರಳಿಗೆ ಕುತ್ತು ಖಚಿತ

Last Updated 15 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಒಂದು ಚಿರತೆ ಅಥವಾ ಕರಡಿ ಮೃತಪಟ್ಟಾಗ ಅದನ್ನು ಸುಡದೇ ಹಾಗೆಯೇ ಬಿಟ್ಟರೆ, ಅದರ ಹಲ್ಲು, ಉಗುರು, ಚರ್ಮ ಇತ್ಯಾದಿಗಳು ವನ್ಯಜೀವಿಗಳ ಕಾಳಸಂತೆಕೋರರಿಗೆ ಸುಲಭವಾಗಿ ಲಭ್ಯವಾಗುತ್ತವೆ. ಆನೆಯ ದಂತಕ್ಕೆ ಎಷ್ಟು ಬೆಲೆಯಿದೆಯೋ ಅಷ್ಟೇ ಬೆಲೆ ಅದರ ಮೂಳೆಗೂ ಇದೆ

****

ಇದೇ ಏಪ್ರಿಲ್‌ ಆರರಂದು ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಒಂದು ಸುತ್ತೋಲೆಯನ್ನು ಹೊರಡಿಸಿತು. ವನ್ಯಜೀವಿ ತಜ್ಞರೊಬ್ಬರ ಪತ್ರವನ್ನು ಉಲ್ಲೇಖಿಸಿ ಸದರಿ ಆದೇಶವನ್ನು ಹೊರಡಿಸಲಾಗಿತ್ತು. ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸುಟ್ಟುಹಾಕುತ್ತಾರೆ. ಇದು ಸರಿಯಾದ ಕ್ರಮವಲ್ಲ. ಕಾಡು ಪ್ರಾಣಿಗಳ ಮೃತದೇಹವನ್ನು ಹಾಗೆಯೇ ಕೊಳೆಯಲು ಬಿಡಬೇಕು. ಅದು ಹದ್ದಿನಂತಹ ಜಾಡಮಾಲಿ ಪಕ್ಷಿಗಳಿಗೆ, ಹಲವು ತರಹದ ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗುತ್ತದೆ. ಪ್ರಾಣಿಗಳ ದೇಹವನ್ನು ಸುಡುವುದರಿಂದ, ಅದನ್ನೇ ಅವಲಂಬಿಸಿದ ಹಲವು ಜೀವಿಗಳು ಅಳಿದೇ ಹೋಗಬಹುದು ಎಂಬುದು ಆ ತಜ್ಞರ ವಾದವಾಗಿತ್ತು.

ಒಂದು ಸಿದ್ಧಾಂತವಾಗಿ ಮೇಲ್ನೋಟಕ್ಕೆ ಇದು ಸರಿಯೆಂದು ತೋರಬಹುದಾದರೂ, ಪ್ರಾಯೋಗಿಕವಾಗಿ ಇದು ಜಾರಿಯಾದಲ್ಲಿ ವನ್ಯಜೀವಿಗಳಿಗೆ ಕಂಟಕ ತಪ್ಪಿದ್ದಲ್ಲ. ವನ್ಯಜೀವಿಗಳ ಅಂಗಾಂಗ ಮಾರಾಟದ ವಹಿವಾಟಿನ ಮೊತ್ತ ಜಾಗತಿಕವಾಗಿ ₹1 ಲಕ್ಷ ಕೋಟಿಗೂ ಹೆಚ್ಚಿದೆ, ಮುಖ್ಯವಾಗಿ ಅಮೆರಿಕ, ಚೀನಾ ದೇಶಗಳ ಜನರ ಮೂಢನಂಬಿಕೆಯ ಉರುಳಿಗೆ ಏಷ್ಯಾದ ರಾಷ್ಟ್ರಗಳ ವನ್ಯಜೀವಿಗಳು ಬಲಿಯಾಗುತ್ತಿವೆ. ಈ ಬೃಹತ್ ಅಕ್ರಮ ವಹಿವಾಟಿನಲ್ಲಿ ಭಾರತದ್ದೂ ಸಿಂಹ ಪಾಲಿದೆ. ವನ್ಯಜೀವಿಗಳ ಯಾವ ಅಂಗಾಂಗವನ್ನೂ ಕಳ್ಳ ಸಾಗಾಣಿಕೆದಾರರು ಬಿಡುವುದಿಲ್ಲ, ಅದು ಮುಂಗುಸಿಯ ಕೂದಲಿರಬಹುದು ಅಥವಾ ಚಿಪ್ಪುಹಂದಿಯ ಚಿಪ್ಪಿರಬಹುದು; ಸುತ್ತೋಲೆಯನ್ನು ಯಥಾವತ್ ಜಾರಿ ಮಾಡಿದಲ್ಲಿ ನಿಶ್ಚಿತವಾಗಿ ವನ್ಯಜೀವಿಗಳ ಅಂಗಾಂಗ ಕಳ್ಳ ಮಾರಾಟಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಬಂಡೀಪುರ, ನಾಗರಹೊಳೆ, ಭದ್ರಾದಂತಹ ಅಭಯಾರಣ್ಯಗಳ ತೀರಾ ಒಳಭಾಗದಲ್ಲಿ ಯಾವುದಾದರೂ ಪ್ರಾಣಿಗಳು ಸತ್ತರೆ, ಅಲ್ಲಿ ನರನ ಪ್ರವೇಶ ಇಲ್ಲದಿದ್ದರೆ, ಸತ್ತ ಪ್ರಾಣಿಯನ್ನು ನಿಸರ್ಗವೇ ಮಣ್ಣಿಗೆ ಸೇರಿಸುತ್ತದೆ. ಅದಕ್ಕೆ ಯಾವ ಸುತ್ತೋಲೆಯ ಅವಶ್ಯಕತೆ ಇಲ್ಲ. ಸರ್ಕಾರಿ ಆದೇಶಗಳಾಗಲೀ ಅಥವಾ ಸುತ್ತೋಲೆಗಳಾಗಲೀ ಏಕವ್ಯಕ್ತಿಯ ಮುಖವಾಣಿಯಾಗಿ ಜಾರಿಯಾಗುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದದು. ರಾಷ್ಟ್ರೀಯ ಪ್ರಾಣಿ ಹುಲಿಯೊಂದನ್ನು ಹೊರತುಪಡಿಸಿ, ಮಿಕ್ಕೆಲ್ಲಾ ವನ್ಯಪ್ರಾಣಿಗಳ ಕಳೇಬರವನ್ನು ಹಾಗೆಯೇ ಕೊಳೆಯಲು ಅಥವಾ ಇನ್ನಿತರ ಜಾಡಮಾಲಿ ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿ ಬಿಡಬೇಕು ಎಂದು ಸುತ್ತೋಲೆ ಹೇಳುತ್ತದೆ. ಆದರೆ, ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಹುಲಿಗೆ ಅನ್ವಯವಾಗುವ ಎಲ್ಲಾ ಕಾನೂನು, ನಿಯಮಗಳು ಚಿರತೆಗೂ ಅನ್ವಯವಾಗುತ್ತವೆ. ಆದರೆ, ಚಿರತೆಯನ್ನು ಸುಡುವ ಹಾಗಿಲ್ಲ ಹಾಗೆಯೇ ಕೊಳೆಯಲು ಬಿಡಬೇಕು ಎಂದು ಸುತ್ತೋಲೆಯಲ್ಲಿ ಪೂರ್ವನಿಯೋಜಿತವಾಗಿ ತೀರ್ಮಾನಿಸಲಾಗಿದೆ.

ಕಳ್ಳಬೇಟೆಗಾರರು ವನ್ಯಜೀವಿಗಳ ಯಾವುದೊಂದು ಅಂಗವನ್ನೂ ಬಿಡದೇ ಮಾರಾಟ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಒಂದು ಚಿರತೆ ಅಥವಾ ಕರಡಿ ಮೃತಪಟ್ಟಾಗ ಅದನ್ನು ಸುಡದೇ ಹಾಗೆಯೇ ಬಿಟ್ಟರೆ, ಅದರ ಹಲ್ಲು, ಉಗುರು, ಚರ್ಮ ಇತ್ಯಾದಿಗಳು ವನ್ಯಜೀವಿಗಳ ಕಾಳಸಂತೆಕೋರರಿಗೆ ಸುಲಭವಾಗಿ ಲಭ್ಯವಾಗುತ್ತವೆ. ಆನೆಯ ದಂತಕ್ಕೆ ಎಷ್ಟು ಬೆಲೆಯಿದೆಯೋ ಅಷ್ಟೇ ಬೆಲೆ ಅದರ ಮೂಳೆಗೂ ಇದೆ. ಹಾಗೂ ಆನೆ ದೇಹ ಕೊಳೆಯಲು ಸುಮಾರು ಒಂದೂಕಾಲು ತಿಂಗಳು ಬೇಕಾಗುತ್ತದೆ. ಅಂದರೆ, ಸಂಪೂರ್ಣ ಕೊಳೆಯುವವರೆಗೂ, ಅಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ನಿಗಾ ಇರಬೇಕಾಗುತ್ತದೆ. ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಅರಣ್ಯ ಇಲಾಖೆಗೆ ಇದನ್ನು ನಿರ್ವಹಣೆ ಮಾಡಲು ಸಾಧ್ಯವೇ? ದೊಡ್ಡದೇಹಿ ಆನೆಯ ದಂತ ಮತ್ತು ಮೂಳೆಗಳು ಸುಲಭವಾಗಿ ಕಳ್ಳರ ಪಾಲಾಗುತ್ತವೆ. ಕಳ್ಳ ವಹಿವಾಟನ್ನು ಇಲಾಖೆಯೇ ಉತ್ತೇಜಿಸಿದಂತಾಗುತ್ತದೆ. ಅದು ಸ್ವಾಭಾವಿಕವಾಗಿ ಸತ್ತ ಪ್ರಾಣಿಯ ಉಗುರೋ ಅಥವಾ ಉದ್ದೇಶಪೂರ್ವಕವಾಗಿ ಕೊಂದು ತಂದ ಉಗುರೋ ಎಂಬುದನ್ನು ಪತ್ತೆಹಚ್ಚಲು ಇಲಾಖೆಗೆ ಸಾಧ್ಯವಾಗುವುದಿಲ್ಲ. ಈ ದುರ್ಬಲ ಅಂಶವು ಕಾನೂನಿನ ಕುಣಿಕೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಕಳ್ಳರಿಗೆ ಅಸ್ತ್ರವಾಗುತ್ತದೆ.

ರಾಜ್ಯದ ಯಾವುದೇ ಪ್ರದೇಶವನ್ನು ತೆಗೆದುಕೊಂಡರೂ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಮಧುರ ಭಾಂದವ್ಯ ಇರುವ ಒಂದೇ ಒಂದು ಉದಾಹರಣೆ ನಮಗೆ ಸಿಗುವುದಿಲ್ಲ. ವನ್ಯಜೀವಿ-ಮಾನವ ಸಂಘರ್ಷವಿದ್ದಂತೆ, ಸಾರ್ವಜನಿಕರು, ರಾಜಕಾರಣಿ-ಅರಣ್ಯ ಇಲಾಖೆಯ ನಡುವೆ ಬಹುದೊಡ್ಡ ಸಂಘರ್ಷವಿದೆ. ಕಂದಾಯ ಅಥವಾ ಬೇರೆ ಯಾವುದೋ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತುಟಿ ಬಿಚ್ಚದ ರಾಜಕಾರಣಿಗಳು, ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ರಾತ್ರೋರಾತ್ರಿ ನೀರಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಿದ/ಮಾಡುತ್ತಿರುವ ಅನೇಕ ಉದಾಹರಣೆಗಳಿವೆ. ವಾಸ್ತವಾಂಶ ಹೀಗಿರುವಾಗ ಕೊಳೆಯಲು ಬಿಟ್ಟ ವನ್ಯಜೀವಿ ಕಳೇಬರಗಳಿಗೆ ದುಷ್ಕರ್ಮಿಗಳು ವಿಷಪ್ರಾಶನ ಮಾಡುವ ಸಾಧ್ಯತೆ ತೀರಾ ಹೆಚ್ಚಿದೆ. ಕೊಳೆಯಲು ಬಿಟ್ಟ ಕಳೇಬರಕ್ಕೆ ಯಾರಾದರೂ ವಿಷಪ್ರಾಶನ ಮಾಡಿದಲ್ಲಿ, ಅದನ್ನು ತಿಂದ ಹುಲಿಯೋ ಅಥವಾ ಹದ್ದುಗಳ ಗುಂಪೋ ನಾಶವಾದರೆ, ಇದರ ಹೊಣೆ ಯಾರದು? ಅಸ್ಸಾಂನಲ್ಲಿ ತೀರಾ ಇತ್ತೀಚೆಗೆ ಮೂರು ಬೇರೆ ಬೇರೆ ಪ್ರಕರಣಗಳಲ್ಲಿ ಅಳಿವಿನಂಚಿನಲ್ಲಿರುವ ಇನ್ನೂರಕ್ಕೂ ಹೆಚ್ಚು ರಣಹದ್ದುಗಳ ಮಾರಣ ಹೋಮವಾಗಿದೆ. ಇದಕ್ಕೆ ಮುಖ್ಯವಾದ ಕಾರಣ, ಸತ್ತ ಕಳೇಬರಗಳ ಮೇಲೆ ಸ್ಥಳೀಯರು ವಿಷಪ್ರಾಶನ ಮಾಡಿದ್ದು ಎಂದು ವರದಿ ಹೇಳಿದೆ. ವನ್ಯಜೀವಿಗಳಿಗೆ ಕಾಯಿಲೆಗಳು ಬರುವುದು ಅಪರೂಪವಾದರೂ, ಕೆಲವೊಂದು ಬಾರಿ ವಿದ್ಯಮಾನ ಅತಿರೇಕಕ್ಕೆ ತಲುಪಿ, ಒಂದು ಪ್ರದೇಶದ ಒಂದು ಪ್ರಭೇದವೇ ವಿನಾಶದಂಚಿಗೆ ತಲುಪಿದ ಉದಾಹರಣೆಗಳಿವೆ. 1980-90ರ ದಶಕದಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಕಾಟಿಗಳಿಗೆ ದೊಡ್ಡರೋಗ (ರಿಂಡರ್ ಪೆಸ್ಟ್) ತಗುಲಿ ಸಂಪೂರ್ಣ
ನಾಶವಾಗುವ ಹಂತ ತಲುಪಿತ್ತು. ನೈಸರ್ಗಿಕವಾಗಿಯೇ ಕೊಳೆತು ಹೋಗಲಿ ಎಂಬ ಈ ಸುತ್ತೋಲೆಯನ್ನು ಜಾರಿ ಮಾಡಲು ಹೊರಟಲ್ಲಿ, ಈ ತರಹದ ಅಪಾಯಗಳನ್ನು ಎದುರಿಸಬೇಕಾಗುತ್ತದೆ.

ಈಗ, ವನ್ಯಜೀವಿಗಳಿಗೆ ಸಂಬಂಧಿಸಿ ನಡೆಯುವ ಅಪರಾಧಗಳಲ್ಲಿ ಶೇ 25ರಷ್ಟು ಮಾತ್ರ ಪತ್ತೆಯಾಗುತ್ತಿವೆ. ಅದರಲ್ಲೂ ಶೇ 5‌ರಿಂದ 10ರಷ್ಟು ಪ್ರಕರಣಗಳು ಮಾತ್ರ ಮೊಕದ್ದಮೆಯ ಹಂತಕ್ಕೆ ಹೋಗುತ್ತವೆ. ಮಾಂಸಕ್ಕಾಗಿಯೋ ಅಥವಾ ಅದರ ಅಂಗಾಂಗಗಳಿಗಾಗಿಯೋ ವನ್ಯಜೀವಿಯನ್ನು ಬೇಟೆಯಾಡುವುದು ಹಾಗೂ ಇಲಾಖೆಯ ಕಣ್ಣಿಗೆ ಸಿಕ್ಕಿಬಿದ್ದು, ಶಿಕ್ಷೆಗೊಳಗಾಗುವುದು ಶೇ 5ರಷ್ಟು ಪ್ರಕರಣಗಳಲ್ಲಿ ಮಾತ್ರ. ಬೇಟೆಗೊಳಗಾದ ವನ್ಯಪ್ರಾಣಿಗಳನ್ನು ನೈಸರ್ಗಿಕವಾಗಿಯೇ ಮರಣಹೊಂದಿದ್ದು ಎಂದು ಬಿಂಬಿಸುವ ಸಾಧ್ಯತೆಯಿದೆ. ಇನ್ನು, ಇಲಾಖೆಯ ಸಿಬ್ಬಂದಿಗಳೇ ಮರಕೊಯ್ದು ಮಾರಾಟ ಮಾಡುವುದು, ವನ್ಯಜೀವಿಗಳ ಬೇಟೆಯಾಡಿದ ಪ್ರಕರಣಗಳು ಹೊರಬರುವುದೇ ಇಲ್ಲ. ಇತ್ತೀಚೆಗೆ, ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮಪಂಚಾಯ್ತಿಯ ಮಾಜಿ ಉಪಾಧ್ಯಕ್ಷರಾದ ಕಾಂತರಾಜ್ ಎನ್ನುವವರು ಗುಂಡು ತಗುಲಿ ಪ್ರಾಣ ಕಳೆದುಕೊಂಡ ಪ್ರಕರಣ ಕಳ್ಳಬೇಟೆ ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ, ಅರಣ್ಯ ಇಲಾಖೆಯ ಗಾರ್ಡ್ ಕಳ್ಳಬೇಟೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಸಂಶಯವಿದೆ.

ವನ್ಯಜೀವಿಗಳು ಮತ್ತದರ ಆವಾಸಸ್ಥಾನಗಳಾದ ಅರಣ್ಯಗಳು, ಮರಗಿಡಬಳ್ಳಿಗಳು, ಕೆರೆ-ಸರೋವರಗಳು, ನದಿ- ತೊರೆಗಳು ಸಾರ್ವಜನಿಕ ಆಸ್ತಿ. ಯಾರೋ ಒಬ್ಬರಿಗೆ ಸೇರಿದ್ದಲ್ಲ. ಯಾವುದೇ ಪೂರ್ವಾಪರ ಯೋಚನೆಯಿಲ್ಲದೆ, ವನ್ಯಜೀವಿ ತಜ್ಞರ ಜೊತೆ ಸಮಾಲೋಚನೆಯೂ ಇಲ್ಲದೆ, ಏಕಾಏಕಿ ಸುತ್ತೋಲೆ ಹೊರಡಿಸಿರುವುದರ ಹಿಂದಿನ ಮರ್ಮವೇನು ಎಂಬುದು ಎಲ್ಲರಿಗೂ ತಿಳಿಯಬೇಕಾಗಿದೆ. ಇಪ್ಪತ್ತು ವರ್ಷಗಳ ಹಿಂದೆಯೂ ಈ ಪ್ರಸ್ತಾಪ ಅರಣ್ಯ ಇಲಾಖೆಯ ಮುಂದೆ ಬಂದಿತ್ತು. ಆಗಿನ ಅಧಿಕಾರಿಗಳು ಇದರ ಸಾಧಕ-ಭಾದಕಗಳನ್ನು ತೀರ್ಮಾನಿಸಲು, ಒಂದು ಸಮಿತಿಯನ್ನು ರಚಿಸಿದ್ದರು. ಸುದೀರ್ಘ ಚರ್ಚೆ ನಡೆದು, ಕ್ಷೇತ್ರ
ಪ್ರವಾಸ ಮಾಡಿ ಆ ಪ್ರಸ್ತಾಪವನ್ನು ಕೈಬಿಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಲೇಖನವನ್ನು ಬರೆಯುವ ಹೊತ್ತಿಗೆ ಅತ್ತ ಅರಣ್ಯ ಭವನದ ಎದುರು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ಮೂರು ಸಾವಿರ ಜನರು ತಮಗೆ ಇಲಾಖೆಯಿಂದ ಸಂಬಳವೇ ಬಂದಿಲ್ಲವೆಂದು ಧರಣಿ ಕುಳಿತಿದ್ದಾರೆ.

ಲೇಖಕ: ಪರಿಸರಪರ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT