ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಕೇಶವ ಎಚ್. ಕೊರ್ಸೆ ಲೇಖನ: ಮರ ಎಣಿಸುತ್ತಲೇ ಕಾಡು ಕಳೆದವರು!

ಅರಣ್ಯ, ಸರ್ಕಾರಿ ಭೂಮಿ ಹಾಗೂ ಖಾಸಗಿ ಜಮೀನು- ಎಲ್ಲೆಡೆಯೂ ಹಸಿರುಕವಚ ಕುಗ್ಗುತ್ತಿದೆ
Last Updated 8 ಫೆಬ್ರುವರಿ 2022, 22:15 IST
ಅಕ್ಷರ ಗಾತ್ರ

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧೀನದ ‘ಅರಣ್ಯ ಮೋಜಣಿ ಸಂಸ್ಥೆ’ಯು ಎರಡು ವರ್ಷಗಳಿಗೊಮ್ಮೆ ಅಧಿಕೃತವಾಗಿ ಪ್ರಕಟಿಸುವ ‘ಭಾರತ ಅರಣ್ಯ ಪರಿಸ್ಥಿತಿ ವರದಿ’ಯ ಹೊಸ ಆವೃತ್ತಿಯು ಕಳೆದ ಡಿಸೆಂಬರ್ ಅಂತ್ಯಕ್ಕೆ ಹೊರಬಂದಿದೆ. ರಾಜ್ಯದಲ್ಲಿ ಈಗ ಶೇ 20.19ರಷ್ಟು ಅರಣ್ಯ ಹೊದಿಕೆಯಿದ್ದು, ಕಳೆದ ಎರಡು ವರ್ಷಗಳಲ್ಲಿ ಅದು ಸುಮಾರು 155 ಚದರ ಕಿ.ಮೀ. ಹೆಚ್ಚಾಗಿದೆಯೆಂದೂ ಈ ವರದಿ ಹೇಳಿದೆ. ಅರಣ್ಯ- ಪರಿಸರ ಪರಿಸ್ಥಿತಿಯು ಸುಧಾರಿಸುತ್ತಿದ್ದು, ‘ಎಲ್ಲವೂ ಚೆನ್ನಾಗಿದೆ’ ಎಂಬ ಭಾವನೆ ಉಕ್ಕಿಸುವಂತಿದೆ ಈ ವರದಿ!

ಆದರೆ, ದೇಶಕ್ಕೆ ಪ್ರಸ್ತುತ ಬೇಕಾದದ್ದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಹುಸಿ ಶ್ಲಾಘನೆಯಲ್ಲವಲ್ಲ. ನಿಖರವಾದ ಮಾಹಿತಿ ಹಾಗೂ ವಸ್ತುನಿಷ್ಠ ವಿಶ್ಲೇಷಣೆಯ ಮೂಲಕ ವಾಸ್ತವಕ್ಕೆ ಕನ್ನಡಿ ಹಿಡಿಯಬೇಕಾದ ನೈಜ ವರದಿಯ ಅಗತ್ಯವಿದೆ. ಸಂಕೀರ್ಣವಾದ ದೂರ ಸಂವೇದಿ ತಂತ್ರಜ್ಞಾನ ಹಾಗೂ ದೇಶದೆಲ್ಲೆಡೆಯಿಂದ ಕ್ರೋಡೀಕರಿಸಿದ ಅಗಾಧ ಮಾಹಿತಿಗಳ ಆಧಾರದಲ್ಲಿ, ನೂರಾರು ತಜ್ಞರು ವರ್ಷಾನುಕಾಲ ಶ್ರಮವಹಿಸಿ ರೂಪಿ ಸುವ ಈ ಬಗೆಯ ಇನ್ನೊಂದು ವರದಿ ತಯಾರಿಸಲು ಬೇರೆಯವರಿಗೆ ಸಾಧ್ಯವಿಲ್ಲ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದೀರ್ಘಾವಧಿ ನೀತಿಗಳು, ವಿವಿಧ ಯೋಜನೆಗಳು ಮತ್ತು ಹವಾಮಾನ ಬದಲಾವಣೆಯಂಥ ವಿಷಯಗಳಲ್ಲಿ ನೀತಿ ರೂಪಿಸುವ ಜಾಗತಿಕ ಸಂಸ್ಥೆ ಹಾಗೂ ಒಪ್ಪಂದಗಳು ಎಲ್ಲವೂ ಈ ವರದಿಯ ಮಾಹಿತಿಗಳನ್ನೇ ಆಶ್ರಯಿಸುವುದು. ಆದರೆ, ಈ ವರದಿಯನ್ನು ಪರಿಶೀಲಿಸಿ ದರೆ, ಅದು ಬಿಚ್ಚಿಡುವ ಸತ್ಯಕ್ಕಿಂತಲೂ ಮುಚ್ಚಿಡುವ ಗುಟ್ಟೇ ಹೆಚ್ಚೆಂದು ಅರಿವಾಗದಿರದು! ಹಾಗಿದ್ದಲ್ಲಿ, ಅಂಥ ವರದಿಯ ಆಧಾರದಲ್ಲಿ ರೂಪಿಸುವ ಭವಿಷ್ಯದ ಅರಣ್ಯ ಸಂರಕ್ಷಣೆಯ ನೀತಿ ಹಾಗೂ ಯೋಜನೆಗಳು ಅದೆಷ್ಟು ಪರಿಣಾಮಕಾರಿಯಾದಾವು?

ಈ ವರದಿಯ ಟೊಳ್ಳುತನ ಅರಿಯಲು, ಇದರಲ್ಲಿನ ಎರಡು ಗಂಭೀರ ನ್ಯೂನತೆಗಳನ್ನು ಉದಾಹರಣೆಯಾಗಿ ಉಲ್ಲೇಖಿಸಬಹುದಾಗಿದೆ. ವರದಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಅರಣ್ಯವು ಕೊಂಚ ವಿಸ್ತರಣೆಯಾಗಿದೆ. ಆದರೆ, ಈ ತೋರಿಕೆಯ ಹೆಚ್ಚಳವು ಅಡಿಕೆ, ತೆಂಗು, ಕಾಫಿ, ರಬ್ಬರ್, ಅಕೇಶಿಯಾ ನೆಡುತೋಪುಗಳ ವಿಸ್ತರಣೆಯಿಂದಾಗಿದ್ದು ಎಂಬ ಸಂಗತಿ ಖಚಿತವಾಗಿ ಹೊರಹೊಮ್ಮಿದರೂ, ಅದನ್ನು ಸ್ಪಷ್ಟ ಮಾತಿನಲ್ಲಿ ತೆರೆದಿಡದೆ ಮರೆಮಾಚಲು ಯತ್ನಿಸಲಾಗಿದೆ! ಇನ್ನು, ನಾಡಿನಲ್ಲಿ ಶೇ 19.96ರಷ್ಟು ಅರಣ್ಯಭೂಮಿಯಿದೆ ಎಂದು ಹಲವು ದಶಕಗಳಿಂದ ಈ ವರದಿಯ ಆವೃತ್ತಿಗಳು ಹೇಳುತ್ತಿವೆ. ಕಳೆದ ಮೂರು ದಶಕಗಳಲ್ಲಾದ ವ್ಯಾಪಕ ಅರಣ್ಯಭೂಮಿ ಅತಿಕ್ರಮಣವನ್ನು ಪರಿಗಣಿಸದೆ, ಹಳೆಯ ಸರ್ಕಾರಿ ದಾಖಲೆಗಳನ್ನೇ ಮಂಡಿಸುತ್ತಿರುವುದರ ಫಲಶ್ರುತಿ ಇದು.

ವರ್ತಮಾನದ ತಳಮಟ್ಟದ ಪರಿಸ್ಥಿತಿ ಅವಲೋಕಿಸಿದರೆ, ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಅರಣ್ಯಭೂಮಿ ಶೇ 12ಕ್ಕಿಂತಲೂ ಕೆಳಕ್ಕೆ ಕುಸಿದಿರ ಬಹುದೇನೋ!

ಹಾಗಾದರೆ, ಈ ಅಧಿಕೃತ ಸರ್ಕಾರಿ ವರದಿಯ ಮಿತಿಗಳು ಕೇವಲ ಆಕಸ್ಮಿಕವೇ? ಇಲ್ಲ, ಸಾಧ್ಯವಿಲ್ಲ. ಜನ ಮಾನಸದೆದುರು ಕಹಿಸತ್ಯವನ್ನು ಬಿಚ್ಚಿಡಲು ಸಾಧ್ಯವಾಗದೆ, ಪ್ರಯತ್ನಪೂರ್ವಕವಾಗಿ ಅದಕ್ಕೆ ಸಿಹಿಲೇಪ ಬಳಿಯಲು ಪ್ರಯತ್ನಿಸಿರುವುದು ಪುಟಪುಟಗಳಲ್ಲೂ ತೋರುತ್ತದೆ. ಅರಣ್ಯಭೂಮಿ, ಸರ್ಕಾರಿ ಕಂದಾಯಭೂಮಿ ಹಾಗೂ ಕೃಷಿ ಜಮೀನು- ಈ ಮೂರೂ ಬಗೆಯ ನೆಲದಲ್ಲೂ ಅರಣ್ಯ ಸಂರಕ್ಷಣೆ ಹಾಗೂ ವನೀಕರಣದ ಪ್ರಯತ್ನಗಳು ವ್ಯವಸ್ಥಿತವಾಗಿ ವಿಫಲವಾಗುತ್ತಿರುವುದನ್ನು ಹಲವು ಸ್ವತಂತ್ರ ವೈಜ್ಞಾನಿಕ ಅಧ್ಯಯನಗಳು ಸಾಬೀತುಪಡಿಸುತ್ತಲೇ ಇವೆ. ಆ ಸಮಸ್ಯೆಗಳ ಹಿಂದಿನ ಮೂಲಕಾರಣಗಳನ್ನು ಗುರುತಿಸಿ, ಪರಿಹಾರ ಮಾರ್ಗಗಳನ್ನು ಸೂಚಿಸಲು ಈ ವರದಿಯು ಪ್ರಯತ್ನಿಸಬೇಕಿತ್ತು. ಆದರೆ, ಆ ಬಗೆಯ ಪ್ರಯತ್ನಗಳೇ ವರದಿಯಲ್ಲಿ ಇರದಿರುವುದು ಖೇದಕರ. ಈ ಸಂದರ್ಭದಲ್ಲಿ, ಅರಣ್ಯ ಪರಿಸ್ಥಿತಿ ಕುರಿತು ಗಮನಿಸಲೇಬೇಕಾದ ಮೂರು ಪ್ರಮುಖ ಸವಾಲುಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ಮೊದಲಿನದು, ನೈಜ ಅರಣ್ಯಗಳ ವ್ಯಾಪ್ತಿಯ ವೇಗದ ಕುಸಿತದ ಕುರಿತಾಗಿ. ನಗರೀಕರಣ, ಅಭಿವೃದ್ಧಿ ಯೋಜನೆಗಳು, ಗಣಿಗಾರಿಕೆ- ಇವಕ್ಕೆಲ್ಲ ಅರಣ್ಯವು ಬಲಿಯಾಗುತ್ತಲೇ ಇದೆಯಲ್ಲವೇ? ಅರಣ್ಯೇತರ ಉದ್ದೇಶಕ್ಕೆ ಕಾಡನ್ನು ಬಿಟ್ಟುಕೊಡುವ ಮುಂಚೆ ಅದರ ಆಗುಹೋಗುಗಳನ್ನು ಪರಾಮರ್ಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಲೆಂದೇ ರಚಿಸಿರುವ ಸಾಂವಿಧಾನಿಕ ಅಧಿಕಾರವುಳ್ಳ ಸ್ವತಂತ್ರ ತಜ್ಞ ಸಮಿತಿಗಳು ಹಾಗೂ ವಿಸ್ತೃತವಾದ ಪ್ರಕ್ರಿಯೆಗಳಿವೆ. ಆದರೆ, ವರ್ಷದಿಂದ ವರ್ಷಕ್ಕೆ ಸರ್ಕಾರವು ಅವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ, ಅರಣ್ಯ ಪರಿವರ್ತನೆ ಎಂಬುದು ಈಗ ಹೇಗೂ ಮಾಡಲೇಬೇಕಾದ ಕೇವಲ ಅಧಿಕಾರಶಾಹಿ ಪ್ರಕ್ರಿಯೆಯಾಗಿ ಬದಲಾಗಿದೆ.

ಅಭಿವೃದ್ಧಿ ಯೋಜನೆಗಳಿಗಾಗಿ ನಷ್ಟವಾದ ಕಾಡಿಗೆ ಬದಲಾಗಿ ಬೆಳೆಸಬೇಕಾದ ‘ಬದಲಿ ಅರಣ್ಯ’ ಯೋಜನೆಗಳಂತೂ ದಾಖಲೆಗಳಲ್ಲೇ ಬಂದಿಯಾಗುತ್ತಿವೆ. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ನಿಧಿಯೂ (Compensatory Afforestation Fund) ಇದೆ! ಆದರೆ, ಕನಿಷ್ಠ ಕಳೆದ ಎರಡು ದಶಕಗಳಲ್ಲಿ ಬೆಳೆಸಿದ ಈ ಬಗೆಯ ಬದಲೀ ಅರಣ್ಯಗಳಾದರೂ ಎಷ್ಟು ಹಾಗೂ ಎಲ್ಲಿವೆ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ! ‘ಭಾರತ ಅರಣ್ಯ ಪರಿಸ್ಥಿತಿ ವರದಿ’ಯೂ ಇಂಥದ್ದೊಂದು ಮಹತ್ವದ ಅಂಶವನ್ನು ಗುರುತಿಸದಿದ್ದರೆ, ಇನ್ನಾರು ಹೇಳ ಬೇಕು?

ಎರಡನೆಯದು, ನಾಡಿನಲ್ಲಿ ಅಳಿದುಳಿದಿರುವ ಅರಣ್ಯವೂ ಛಿದ್ರವಾಗುತ್ತಿರುವ ಅಪಾಯದ ಕುರಿತು. ಕಾಡನ್ನು ಸೀಳುವ ಅಭಿವೃದ್ಧಿ ಹೆಸರಿನ ವಿವಿಧ ಕಾಮಗಾರಿ ಗಳು, ಅಕ್ರಮ ಗಣಿಗಾರಿಕೆ, ವ್ಯಾಪಕವಾದ ಅರಣ್ಯಭೂಮಿ ಅತಿಕ್ರಮಣ– ಇವೆಲ್ಲವುಗಳ ಪರಿಣಾಮವಾಗಿ, ಪಶ್ಚಿಮ ಘಟ್ಟಗಳೂ ಸೇರಿದಂತೆ ನಾಡಿನ ಕಾಡೆಲ್ಲ ಛಿದ್ರವಾಗುತ್ತಿದೆ. ಪ್ರದೇಶವೊಂದರ ಪರಿಸರದ ಸಮಗ್ರ ನಿರ್ವಹಣೆ ಮಾಡದೆ, ಅಭಿವೃದ್ಧಿ ಕಾರ್ಯಗಳನ್ನೆಲ್ಲ ತುಂಡು ಕಾಮಗಾರಿಗಳನ್ನಾಗಿ ಪರಿವರ್ತಿಸುತ್ತಿರುವ ಸರ್ಕಾರಿ ನೀತಿಯೇ ಇದಕ್ಕೆ ಕಾರಣ. ಹೀಗಾಗಿ, ತುಣುಕು ಗಳಾಗುತ್ತಿರುವ ಕಾಡಿನ ಪಾರಿಸರಿಕ ಸೇವಾ ಸಾಮರ್ಥ್ಯವೇ ಕುಗ್ಗುತ್ತಿದೆ. ಕೆರೆ-ತೊರೆಗಳು ಒಣಗಿ, ಜಲಮೂಲಗಳು ಬತ್ತಿ, ಕಾಡಿನ ಪುನಶ್ಚೇತನ ತಗ್ಗಿ, ಆವಾಸಸ್ಥಾನ ಹಾಗೂ ಆಹಾರ ಮೂಲಗಳು ಕುಸಿದು ಕಾಡುಪ್ರಾಣಿಗಳು ನಾಡಿಗೆ ದಾಂಗುಡಿಯಿಡುತ್ತಿವೆ. ಹಳ್ಳಿಗರಿಗೆ ಮೇವು-ಉರುವಲಿನಂಥ ಅಗತ್ಯ ಸೇವೆ ನೀಡುವ ಗೋಮಾಳದಂಥ ಸಮುದಾಯ ಭೂಮಿಯನ್ನಾದರೂ ಹಸಿರಾಗಿಸಿ ಉಳಿಸಿಕೊಳ್ಳುವ ಬದಲು, ಸರ್ಕಾರವೇ ಅದನ್ನು ಖಾಸಗಿಯವರಿಗೆ ಹಂಚುವ ಅಪಾಯಕಾರಿ ಮಾರ್ಗ ಬೇರೆ ತುಳಿಯುತ್ತಿದೆ! ಈ ಅಪಾಯಕಾರಿ ಬೆಳವಣಿಗೆಗಳ ಕುರಿತಂತೆಲ್ಲ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ‘ಭಾರತ ಅರಣ್ಯ ಪರಿಸ್ಥಿತಿ’ ವರದಿಗೆ ಇರಬೇಕಿತ್ತಲ್ಲವೇ?

ಕೊನೆಯದಾಗಿ, ಸರ್ಕಾರಿ ಅರಣ್ಯೀಕರಣ ಯೋಜನೆ ಗಳ ಕುರಿತು. ಕನಿಷ್ಠ ಶೇ 33ರಷ್ಟಾದರೂ ಅರಣ್ಯದ ಹೊದಿಕೆ ಸಾಧಿಸಬೇಕೆಂಬ ‘ರಾಷ್ಟ್ರೀಯ ಅರಣ್ಯ ನೀತಿಯ (1988)’ ಉದ್ದೇಶ ಸಾಧಿಸಲು, ಅಪಾರ ವೆಚ್ಚದಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದೇನೋ ನಿಜ. ಆದರೆ, ಅಧಿಕಾರಶಾಹಿಯ ಜಡತ್ವ, ಭ್ರಷ್ಟಾಚಾರ ಹಾಗೂ ಜನಸಹಭಾಗಿತ್ವದ ಕೊರತೆಯಿಂದಾಗಿ ಅವೆಲ್ಲವೂ ಸೋಲುತ್ತಿವೆ. ‘ಕೃಷಿ ಪ್ರೋತ್ಸಾಹ ಯೋಜನೆ’ ಹಾಗೂ ‘ಬಿದಿರು ಮಿಶನ್’ ಯೋಜನೆಗಳು ಜಾರಿಗೆ ಬಂದು ದಶಕವಾದರೂ ವಿಫಲ ವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ರೈತರೇನೋ ತಮ್ಮ ಹೊಲ-ಗದ್ದೆಗಳಂಚಿನಲ್ಲಿ ಕೃಷಿ-ಅರಣ್ಯ ತತ್ವದ ಆಧಾರದಲ್ಲಿ ಮರ ಬೆಳೆಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ‘ಕರ್ನಾಟಕ ಮರ ಸಂರಕ್ಷಣೆ ಕಾಯ್ದೆ (1976)’ ಹೆಸರಿನಲ್ಲಿ ಅಧಿಕಾರಶಾಹಿಯಿಂದಾಗುತ್ತಿರುವ ಶೋಷಣೆಗೆ ಕೃಷಿ ಸಮುದಾಯವೇ ಬೆಚ್ಚಿಬೀಳುತ್ತಿದೆ! ತಳಮಟ್ಟದ ಈ ವಿದ್ಯಮಾನಗಳ ಕನಿಷ್ಠ ಅರ್ಥೈಸುವಿಕೆಯೂ ‘ಭಾರತ ಅರಣ್ಯ ಪರಿಸ್ಥಿತಿ’ ವರದಿಗೆ ಸಾಧ್ಯವಾಗಿಲ್ಲ.

ಅರಣ್ಯ ಮತ್ತು ಪರಿಸರ ಇಲಾಖೆಯು ಯೋಜನೆಗಳು ಹಾಗೂ ಅನುದಾನದ ಲೆಕ್ಕದಲ್ಲಿ ಮುಳುಗಿದೆ. ನಾಶವಾಗು ತ್ತಿರುವ ಅರಣ್ಯ ಪ್ರದೇಶ ಹಾಗೂ ಮರಗಳ ಕುರಿತಂತೆಲ್ಲ, ಸರ್ಕಾರಿ ಕಡತಗಳಲ್ಲಿ ತನಿಖೆ ಹಾಗೂ ಲೆಕ್ಕವೂ ಸಾಗಿದೆ! ಆದರೆ, ನೈಜ ಅರಣ್ಯ ಮಾತ್ರ ವೇಗವಾಗಿ ಕರಗುತ್ತ, ಭವಿಷ್ಯದ ಬದುಕು ಅಪಾಯಕ್ಕೀಡಾಗುತ್ತಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತುಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT