ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬಸವಣ್ಣನ ನಾಡಲ್ಲಿ ಅಭಿವ್ಯಕ್ತಿಗೆ ಕಡಿವಾಣ!

ಅಭಿವ್ಯಕ್ತಿ ಸ್ವಾತಂತ್ರ್ಯದ ಮೊಟಕಿನ ಪ್ರಶ್ನೆಯನ್ನು ನಮ್ಮ ಶಾಸಕರು ಗಂಭೀರವಾಗಿ ಚರ್ಚಿಸುವರೇ?
Last Updated 22 ನವೆಂಬರ್ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಒಂದು ಫೋನ್ ಕೈಯಲ್ಲಿದ್ದರೆ ಏನು ಬೇಕಾದರೂ ಪ್ರಕಟಿಸಬಲ್ಲ ಈ ಡಿಜಿಟಲ್ ಯುಗದಲ್ಲಿ, ಸರ್ಕಾರಿ ನೌಕರರ ಅಭಿವ್ಯಕ್ತಿಯನ್ನು ನಿಯಂತ್ರಿಸಲೆತ್ನಿಸುವ ಕರಡು ಅಧಿಸೂಚನೆಗೆ ರಾಜ್ಯ ಸರ್ಕಾರ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಈ ಕರಡುವಿಗೆ ನೌಕರ ಸಂಘಟನೆಗಳು, ವಿಶ್ವವಿದ್ಯಾಲಯಗಳು, ಚಿಂತಕರು ಆಕ್ಷೇಪಣೆಗಳನ್ನು ಸೂಚಿಸಿದ್ದಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಕುರಿತು ಸದನದಲ್ಲಿ ಸಮಗ್ರ ಚರ್ಚೆಯಾಗಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಡಿ. 7ರಿಂದ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗಬಹುದೆಂದು ಪ್ರಜ್ಞಾವಂತರು ನಿರೀಕ್ಷಿಸುತ್ತಿದ್ದಾರೆ.

20 ವರ್ಷಗಳ ಕೆಳಗೆ ಇದೇ ವಿಷಯ ಕುರಿತು ವಿಧಾನ ಪರಿಷತ್ತಿನಲ್ಲಿ ನಡೆದ ಗಂಭೀರ ಚರ್ಚೆ ಹಲವರಿಗೆ ನೆನಪಿರಬಹುದು. ಆ ಚರ್ಚೆಗೊಂದು ಹಿನ್ನೆಲೆಯಿತ್ತು. ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ 2000ನೆಯ ಇಸವಿಯ ಆಸುಪಾಸಿನಲ್ಲಿ ದಾವಣಗೆರೆ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಉದಯೋನ್ಮುಖ ಚಿತ್ರನಟರೊಬ್ಬರು ಮುಖ್ಯಮಂತ್ರಿಯವರನ್ನು ಎದುರುಗೊಳ್ಳಲು ಹೋಗದೆ ಶೂಟಿಂಗಿಗೆ ತೆರಳಿದ್ದರು. ಮುಖ್ಯಮಂತ್ರಿಗೆ ಸಿಟ್ಟು ಬಂತು. ಇದಾದ ಕೆಲವೇ ತಿಂಗಳಲ್ಲಿ ಸರ್ಕಾರಿ ನೌಕರರ ನಡವಳಿಕೆಯ ನಿಯಂತ್ರಣ ಕುರಿತ ಸರ್ಕಾರಿ ಆದೇಶವೊಂದು ಹೊರಬಿದ್ದಿತು. ಆಗ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯ ಈ ಸುತ್ತೋಲೆಯನ್ನು ಕಟುವಾಗಿ ಟೀಕಿಸಿದರು: ‘ಸರ್ಕಾರಿ ನೌಕರರು ಸಿನಿಮಾದಲ್ಲಿ, ದೂರದರ್ಶನದಲ್ಲಿ, ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು; ನಟಿಸಬಾರದು; ಲೇಖನ ಬರೆಯಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕು… ಎನ್ನುವ ಈ ಆದೇಶದ ವೈಖರಿ ಗಮನಿಸಿದರೆ ತುರ್ತುಪರಿಸ್ಥಿತಿಯನ್ನು ತರುವ ಕೆಲಸ ಶುರುವಾಗಿದೆಯೇನೋ ಎಂಬ ಭಾವನೆ ಬರುತ್ತದೆ. ಈ ಆದೇಶವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ’.

ಈ ಆಗ್ರಹದ ಜೊತೆಗೇ ಕನ್ನಡದ ದೊಡ್ಡ ಲೇಖಕರಾದ ಮಾಸ್ತಿ, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿಯವರಿಂದ ಹಿಡಿದು ಆಗ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಎಚ್.ಎಲ್.ನಾಗೇಗೌಡರವರೆಗೆ ಸಾವಿರಾರು ಜನ ಲೇಖಕ, ಲೇಖಕಿಯರು ಸರ್ಕಾರಿ ನೌಕರರಾಗಿದ್ದವರು ಎಂಬ ಅಂಕಿಅಂಶಗಳನ್ನೂ ಸಿದ್ಧಲಿಂಗಯ್ಯನವರು ಕೊಟ್ಟರು. ಈ ಚರ್ಚೆಯಲ್ಲಿ ಭಾಗಿಯಾದ ಹಿರಿಯ ಸಚಿವ ಕೆ.ಎಚ್.ರಂಗನಾಥ್ ಹೇಳಿದ ಮಾತುಗಳನ್ನು ಇಂದು ಎಲ್ಲ ಸಚಿವರೂ ಅತ್ಯಗತ್ಯವಾಗಿ ಮನನ ಮಾಡಿಕೊಳ್ಳಬೇಕು: ‘ಸರ್ಕಾರವು ಸಾಹಿತಿಗಳ ಬಗ್ಗೆ ಆ ರೀತಿ ಸುತ್ತೋಲೆ ಹೊರಡಿಸಬೇಕೆಂದು ಆದೇಶ ಕೊಟ್ಟಿರುವ ನೆನಪು ನನಗೆ ಇಲ್ಲ… ಏನು ಬರೆಯುತ್ತೀರೋ ಅದನ್ನು ನಮಗೆ ತೋರಿಸಿ ಎಂದು ಬರಹಗಾರರಿಗೆ ಹೇಳುವುದು ಸರಿಯಲ್ಲ… ಹೇಳಿ, ಕೇಳಿ ಬರೆಯುವಂತಹ ಬರವಣಿಗೆ ಬರವಣಿಗೆಯಾಗುವುದೇ ಇಲ್ಲ. ತನ್ನಿಂದ ತಾನು ಏನು ಉದ್ಭವವಾಗುತ್ತದೋ ಅದನ್ನು ಸಾಹಿತಿಗಳು ಬರೆಯುತ್ತಾರೆ. ಅದು ಸರಿಯೋ ತಪ್ಪೋ ಎನ್ನುವುದು ನಂತರದ ವಿಚಾರ. ಅದನ್ನು ತಿಳಿದವರು, ಪ್ರಜ್ಞಾವಂತರು ಹೇಳುತ್ತಾರೆ. ಆದ್ದರಿಂದ ಸಾಹಿತ್ಯಕ್ಕೆ ಅಡ್ಡಿ ಆತಂಕ ಇರಬಾರದು. ಆ ಸುತ್ತೋಲೆಯನ್ನು ತರಿಸಿಕೊಂಡು ನೋಡುತ್ತೇನೆ’. ಇಂಥ ಆರೋಗ್ಯಕರ ನಿಲುವನ್ನು ಪ್ರಕಟಿಸಿದ ರಂಗನಾಥ್ ಕೂಡ ಸರ್ಕಾರಿ ನೌಕರರರಾಗಿಯೂ ಅತ್ಯುತ್ತಮ ಸಾಹಿತಿಗಳಾಗಿದ್ದವರ ಪಟ್ಟಿಯನ್ನು ಕೊಟ್ಟರು.

ಈ ಚರ್ಚೆಯ ನಂತರವೂ ಆದೇಶ ಹಾಗೇ ಉಳಿಯಿತು. ಆದರೆ ಇಂಥ ಗಂಭೀರ ಚರ್ಚೆಗಳ ಫಲವಾಗಿ ಕೃಷ್ಣ ನೇತೃತ್ವದ ಸರ್ಕಾರ ಹಾಗೂ ಆನಂತರದ ಸರ್ಕಾರಗಳು ಈ ಆದೇಶವನ್ನೇನೂ ಅಕ್ಷರಶಃ ಜಾರಿಗೆ ತರಲಿಲ್ಲ. ಆದರೂ ಕೆಲವು ‘ಕಿರುಕುಳಜೀವಿ’ ಅಧಿಕಾರಿಗಳು, ‘ಮೂಕರ್ಜಿ ಲೇಖಕರು’ ಆಗಾಗ್ಗೆ ಲೇಖಕ ಲೇಖಕಿಯರಿಗೆ, ಹವ್ಯಾಸಿ ಸಂಗೀತಗಾರ್ತಿಯರಿಗೆ, ನಟ, ನಟಿಯರಿಗೆ ಕಿರುಕುಳ ಕೊಡಲು ಈ ಆದೇಶವನ್ನು ದುರ್ಬಳಕೆ ಮಾಡಿಕೊಂಡಿದ್ದ ಉದಾಹರಣೆಗಳಿದ್ದವು.

ಸಿದ್ದರಾಮಯ್ಯನವರು ತಮ್ಮ ಪತ್ರದಲ್ಲಿ, ಒಂದೆಡೆ ಜ್ಞಾನವಿಜ್ಞಾನಗಳ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯವನ್ನು ಸೂಚಿಸುವ ಸರ್ಕಾರದ ಕರಡು, ಮತ್ತೊಂದೆಡೆ ಸರ್ಕಾರಿ ನೌಕರರ ಜ್ಞಾನ ಪ್ರಸಾರದ ಹಕ್ಕಿನ ಮೇಲೆ ನಿಯಂತ್ರಣ ಸಾಧಿಸಬಯಸುವ ಫ್ಯಾಸಿಸ್ಟ್ ಮನೋಭಾವವನ್ನು ಟೀಕಿಸಿದ್ದಾರೆ. ಕಾನೂನಿನ ಮೂಲಕ ವಿದ್ಯಾವಂತರ ಬಾಯಿ ಮುಚ್ಚಿಸಲು ವಸಾಹತುಶಾಹಿ ಕಾಲದಿಂದಲೂ ನಡೆದಿರುವ ಇಂಥ ಮಸಲತ್ತುಗಳನ್ನು ‘ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ. ಎಸ್.ಟಿ. ನೌಕರರ ಸಮನ್ವಯ ಸಮಿತಿ’ ಸರ್ಕಾರಕ್ಕೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಎತ್ತಿ ತೋರಿಸಿದೆ. ಬ್ರಿಟಿಷರ ಕಾಲದಲ್ಲಿ ಬುದ್ಧಿವಂತರು ಸರ್ಕಾರದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕರಿಗೆ ಹೇಳಬಾರದು, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಬಾರದು ಎಂದು ಮಾಡಿದ್ದ ಕುಟಿಲ ಕಾನೂನಿಗೆ ಇನ್ನಷ್ಟು ಹಲ್ಲುಉಗುರುಗಳನ್ನು ಸೇರಿಸುವ ಕೆಲಸ ಸ್ವತಂತ್ರ ಭಾರತದಲ್ಲಿ ನಡೆಯುತ್ತಲೇ ಇದೆ. ಅದರ ಮುಂದುವರಿಕೆಯಾಗಿಯೂ ಈ ಕರಡು ಬಂದಿದೆ.

ಇಲ್ಲಿರುವ ‘ಕಾನೂನಿನ ಮೂಲಕ ಸ್ಥಾಪಿಸಲಾದ ಸರ್ಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಉರುಳಿಸುವ ಯಾವುದೇ ಉದ್ದೇಶ ಹೊಂದಿರುವ ಚಳವಳಿಯಲ್ಲಿ ಅಥವಾ ಚಟುವಟಿಕೆಯಲ್ಲಿ ಅವನ ಕುಟುಂಬದ ಯಾವುದೇ ಸದಸ್ಯನೂ ಭಾಗವಹಿಸದಂತೆ ಅಥವಾ ಇನ್ನಾವುದೇ ರೀತಿಯಿಂದ ನೆರವಾಗುವುದನ್ನು ತಡೆಗಟ್ಟಲು ಪ್ರಯತ್ನಿಸುವುದು ಸರ್ಕಾರಿ ನೌಕರನ ಕರ್ತವ್ಯವಾಗಿರತಕ್ಕದ್ದು’ ಎಂಬ ನಿರ್ದೇಶನವನ್ನು ಗಮನಿಸಿ: ಸರ್ಕಾರಿ ನೌಕರನೊಬ್ಬನ ಪತ್ನಿ, ಮಗ, ಮಗಳು, ತಂದೆ, ತಾಯಿಯು ಶಾಸಕರಾಗಿ ಪಕ್ಷಾಂತರ ಮಾಡಿ ಸರ್ಕಾರವನ್ನು ಉರುಳಿಸಿದರೆ? ಅಥವಾ ಅವರು ಪತ್ರಕರ್ತರಾಗಿ, ಸಂಘಟನೆಗಳ ನಾಯಕರಾಗಿ ಸರ್ಕಾರವನ್ನು ಟೀಕಿಸುವುದನ್ನು ಕೂಡ ಸರ್ಕಾರವನ್ನು ಉರುಳಿಸುವ ಸಂಚಿನಂತೆಯೇ ವ್ಯಾಖ್ಯಾನಿಸಬಹುದಲ್ಲವೆ!

ತಾವು ಆರಿಸಿದ ಸರ್ಕಾರಗಳ ವಿಮರ್ಶೆ ಮತದಾರರ ಮೂಲಭೂತ ಹಕ್ಕುಗಳಲ್ಲೊಂದು. ಸರ್ಕಾರದ ಯೋಜನಾ ಇಲಾಖೆಯಲ್ಲಿರುವ ಆರ್ಥಿಕ ತಜ್ಞ, ಅರ್ಥಶಾಸ್ತ್ರದ ಅಧ್ಯಾಪಕಿ ಅಥವಾ ಯಾವುದೇ ಸರ್ಕಾರಿ ನೌಕರರು ರಾಜ್ಯ ಬಜೆಟ್ಟಿನ ಲೋಪದೋಷಗಳನ್ನು ಯಾಕೆ ತೋರಿಸಬಾರದು? ‘ಸಾಹಿತ್ಯ’ ಎಂದರೆ ಕತೆ, ಕವನ ಎಂದು ಈ ಕರಡು ಬರೆದ ಬರಡು ಲೇಖಕರಿಗೆ ಹೇಳಿದವರಾರು? ಸಮಾಜದ ಹಿತವನ್ನು ಬಯಸುವ ಎಲ್ಲ ಬರವಣಿಗೆಯೂ ಸಾಹಿತ್ಯವೇ. ಹೊಣೆಯರಿತ ಮಾತು, ಬರಹಗಳನ್ನು ಬಳಸುವವರ ಸ್ವಾತಂತ್ರ್ಯವನ್ನು ಕಸಿಯುವುದು ಎಲ್ಲ ಸರ್ವಾಧಿಕಾರಗಳ ಮೊದಲ ಘಟ್ಟ.

ಮತ್ತೊಂದು ವಿಪರ್ಯಾಸವನ್ನು ಗಮನಿಸಿ: ಸರ್ಕಾರಿ ಉದ್ಯೋಗಗಳಿಗೆ ಸಂದರ್ಶನ ನಡೆಸಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂದು ಹೇಳುವ ಸರ್ಕಾರಗಳು ತಾವೇ ಆಯ್ಕೆ ಮಾಡಿಕೊಂಡ ಬುದ್ಧಿವಂತರು ಸರ್ಕಾರದ ವಿಮರ್ಶೆಯನ್ನು ಮಾಡಬಾರದು ಎಂದರೇನರ್ಥ? ಹಾಗಾದರೆ ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯುವುದು ಖಾಸಗಿ ವಲಯದಲ್ಲಿರುವವರ ಹಕ್ಕೇ?

ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ನ್ಯಾಯ, ಲಿಂಗಭೇದ, ಭ್ರಷ್ಟಾಚಾರ, ವ್ಯಕ್ತಿ ಸ್ವಾತಂತ್ರ್ಯಹರಣ, ರೈತ, ದಲಿತ ಹಕ್ಕೊತ್ತಾಯಗಳ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಭಾಗವಹಿಸುವ ನೌಕರರ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲೆತ್ನಿಸಿದೆ. ಸರ್ಕಾರಿ ನೌಕರರು ತಮ್ಮ ಪ್ರಕಟಣೆಗಳಿಗೆ ಪೂರ್ವಾನುಮತಿ ಪಡೆಯಬೇಕೆಂಬ ಸೂಚನೆಯಲ್ಲಂತೂ ಸರ್ಕಾರಿ ನೌಕರರ ದನಿಯನ್ನು ಹೊಸಕಿ ಹಾಕುವ ಹುನ್ನಾರ ಸ್ಪಷ್ಟವಾಗಿದೆ. ಚಳವಳಿಗಾರರ ಹಠಾತ್ ಬಂಧನ, ಭೂಸುಧಾರಣೆಯಂಥ ಪ್ರಗತಿಪರ ಕಾಯ್ದೆಗಳಿಗೆ ತರಾತುರಿಯ ತಿದ್ದುಪಡಿಗಳ ಈ ಕಾಲದಲ್ಲಿ ಇವೆಲ್ಲದರ ಮುಂದುವರಿಕೆಯಂತೆ ಈ ಕರಡು ಹೊರಬಂದಿದೆ. ಸುಪ್ರೀಂ ಕೋರ್ಟಿನ ತೀರ್ಪು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಅದರ ವಿಮರ್ಶೆಗಳು ಪ್ರಕಟವಾಗುತ್ತಿರುವ ಈ ಕಾಲದಲ್ಲಿ, ಆರೂವರೆ ಕೋಟಿಗೂ ಹೆಚ್ಚು ಜನಸಂಖ್ಯೆಯುಳ್ಳ ಕರ್ನಾಟಕದಲ್ಲಿ ಐದೂಕಾಲು ಲಕ್ಷದಷ್ಟಿರುವ ಸರ್ಕಾರಿ ನೌಕರರ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಕಾನೂನನ್ನು ಜಾರಿ ಮಾಡಬಯಸುವ ಸರ್ವಾಧಿಕಾರಿ ಕ್ರೌರ್ಯ ಕಣ್ಣಿಗೆ ರಾಚುವಂತಿದೆ.

‘ಆನು ಒಲಿದಂತೆ ಹಾಡುವೆ’ ಎಂದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ವಚನ ಚಳವಳಿಯ ಮೂಲಕ ಕ್ರಾಂತಿಕಾರಕ ಬದಲಾವಣೆ ತಂದ ಬಸವಣ್ಣನ ನಾಡಿನಲ್ಲಿ ಇಂಥ ಬರ್ಬರ ನಿಯಂತ್ರಣ ಹುಟ್ಟುತ್ತಿರುವುದು ಕನ್ನಡನಾಡಿಗೇ ಅವಮಾನ. ಸಿದ್ದರಾಮಯ್ಯನವರು ಹೇಳಿರುವಂತೆ ಈ ಕುರಿತು ಸದನದಲ್ಲಿ ಸಮಗ್ರ ಚರ್ಚೆ, ವಿಶ್ಲೇಷಣೆಗಳಾಗುವ ತನಕ ಈ ಕರಡನ್ನು ತಡೆಹಿಡಿಯುವುದು ಅತ್ಯಗತ್ಯ.

ನಟರಾಜ್ ಹುಳಿಯಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT