ಕರ್ನಾಟಕ ಎಂಬ ಹೆಸರಾಗಿ 50 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಈ ಹೆಸರಿನೊಂದಿಗೆ ಸೇರಿಕೊಂಡಿರುವ ರಾಜಕೀಯ ಸಿದ್ಧಾಂತಗಳನ್ನು ಮೆಲುಕು ಹಾಕಿಕೊಳ್ಳುವುದು ಅಗತ್ಯ. ಈ ಸಿದ್ಧಾಂತಗಳ ಜಾಡು ಹಿಡಿದು ಸಾಗಲು ಏಕೈಕ ಮೂಲವೇನೂ ಇಲ್ಲ. ಹಾಗಿದ್ದರೂ ರಾಜ್ಯದ ಅತ್ಯಂತ ಗೌರವಾನ್ವಿತ ರಾಜಕೀಯ ನಾಯಕರು ಮತ್ತು ಜನಪ್ರತಿನಿಧಿಗಳು, ಮಹತ್ವದ ಚಿಂತಕರು ಮತ್ತು ಲೇಖಕರ ಅಭಿವ್ಯಕ್ತಿಗಳು, ಸರ್ಕಾರದ ಘೋಷಣೆಗಳು, ಈ ಪ್ರದೇಶದ ಸಾರ್ವಜನಿಕ ಸಂಸ್ಕೃತಿಯ ನಿಯಂತ್ರಕ ನಿಯಮಗಳ ಮೂಲಕ ಈ ಸಿದ್ಧಾಂತಗಳನ್ನು ಪರಿಶೀಲನೆಗೆ ಒಳಪಡಿಸಬಹುದು. ಈ ಹಿಂದೆ ಇದ್ದ ಮೈಸೂರು ಎಂಬ ಹೆಸರಿನ ಜೊತೆಗೆ ಒಂದಷ್ಟು ಭಾವನಾತ್ಮಕವಾದ ನಂಟು ಇತ್ತು. ಆದರೆ, ಹೆಸರು ಬದಲಾವಣೆಗೆ ಅಂತಹ ವಿರೋಧ ಏನೂ ಬಂದಿರಲಿಲ್ಲ. ಕರ್ನಾಟಕ ಎಂಬ ಹೆಸರಿನ ಜೊತೆಗೆ ತಳಕು ಹಾಕಿಕೊಂಡಿರುವ ಸಿದ್ಧಾಂತಗಳನ್ನು ಕೆಲವೊಮ್ಮೆ ಬಹಿರಂಗವಾಗಿಯೇ ಹೇಳಲಾಗಿದ್ದರೂ ಬಹುಪಾಲು ಅದನ್ನು ಲಘುವಾಗಿ ಪರಿಗಣಿಸಿದ್ದೇ ಹೆಚ್ಚು. ಇದು ವಿವಾದರಹಿತವಾದುದೂ ಆಗಿರಲಿಲ್ಲ: ಅದರ ಮೂಲ ಅರ್ಥ ಮತ್ತು ಇತರ ಸಿದ್ಧಾಂತಗಳಿಗೆ ಸಂಬಂಧಿಸಿ ಈ ಹೆಸರು ಯಾವ ರೀತಿ ಸಮರ್ಪಕ ಎಂಬ ವಿಚಾರದಲ್ಲಿ ಕೆಲವರು ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಮುಕ್ತವಾದ ಸಮಾಲೋಚನೆಗಳ ಮೂಲಕ ಹಲವು ಸಮಸ್ಯೆಗಳನ್ನು ಕ್ರಮೇಣ ಪರಿಹರಿಸಿಕೊಳ್ಳಲಾಗಿದೆ ಅಥವಾ ಅವುಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಮಾರ್ಗಗಳನ್ನು ಹುಡುಕಿಕೊಳ್ಳಬಹುದು ಎಂದು ನಂಬಿದ್ದೇವೆ.

ಭಾರತ ಎಂಬ ಒಕ್ಕೂಟದೊಳಗೆ ಈ ರಾಜ್ಯಕ್ಕೆ ಇರುವ ಭಿನ್ನತೆಗಳ ಗುರುತಿಸುವಿಕೆ: ಈ ಪ್ರದೇಶದ ಮೂರು ವ್ಯತ್ಯಾಸಗಳನ್ನು ಸುಲಭವಾಗಿಯೇ ಗುರುತಿಸಬಹುದು. ನೆರೆಯ ರಾಜ್ಯಗಳೊಂದಿಗೆ ಹೋಲಿಕೆಯಲ್ಲಿ ಇರುವ ವೈಶಿಷ್ಟ್ಯ, ದೇಶದ ಒಟ್ಟಿಗೆ ಇರುವ ವಿಶಿಷ್ಟ ಅಸ್ಮಿತೆ ಮತ್ತು ಈ ಪ್ರದೇಶದ ಜೊತೆ ಹಾಸುಹೊಕ್ಕಾಗಿರುವ ಮತ್ತು ಇತರರಿಂತ ಭಿನ್ನವಾಗಿ ಕಾಣಿಸುವ ಬಹುತ್ವ. ಅಕ್ಕಪಕ್ಕದ ಪ್ರದೇಶಗಳಾದ, ಮುಖ್ಯವಾಗಿ ತಮಿಳು, ಮಲಯಾಳ, ತೆಲುಗು ಮತ್ತು ಮರಾಠಿ ಮಾತನಾಡುವ ಪ್ರದೇಶಗಳ ಜೊತೆಗಿನ ವ್ಯತ್ಯಾಸವನ್ನು ಗುರುತಿಸಿದರೂ ನಿರ್ಲಕ್ಷಿಸಲಾಗದ ಪ್ರಮಾಣದಲ್ಲಿ ಸಮಾನ ಅಂಶಗಳೂ ಇವೆ. ಗಡಿ ಪ್ರದೇಶಗಳಲ್ಲಿ ಈ ಭಿನ್ನತೆಯು ಅಸ್ಪಷ್ಟ ಮತ್ತು ಮಸುಕು ಮಸುಕಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಪ್ರದೇಶದ ವಿಶಿಷ್ಟ ಅಸ್ಮಿತೆಯನ್ನು ಎತ್ತಿ ಹಿಡಿದರೂ ದೇಶದ ಜೊತೆಗೆ ಇರುವ ಸಮಾನ ಸಾಂಸ್ಕೃತಿಕ ಮತ್ತು ಚಾರಿತ್ರಿಕ ನಂಟು, ಸ್ವಾತಂತ್ರ್ಯ ಚಳವಳಿಯ ಸಿದ್ಧಾಂತಗಳು, ಸಾಂವಿಧಾನಿಕ ತತ್ವಗಳನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ. ಬಹುತ್ವ ಹಾಸುಹೊಕ್ಕಾಗಿರುವುದರ ಜೊತೆಗೆ ಈ ಸಾಂಸ್ಕೃತಿಕ ಪ್ರದೇಶವು ಹಲವು ಅಸಮಾನ ರಾಜಕೀಯ ಮತ್ತು ಆರ್ಥಿಕ ತುಣುಕುಗಳಿಂದ ಕೂಡಿದೆ ಹಾಗೂ ಇವೆಲ್ಲವುಗಳನ್ನೂ ಒಟ್ಟಾಗಿ ಬಂಧಿಸುವ ಒಂದು ತಂತುವನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲಿ ಗಹನವಾದ ಆಂತರಿಕ ಭಿನ್ನತೆಗಳೂ ಇವೆ– ಭಾಷೆ, ನಂಬಿಕೆಗಳು, ಸಾಂಸ್ಕೃತಿಕ ನಂಟು ಎಲ್ಲವೂ ಬಹುತ್ವದೊಳಗೆ ಸೇರಿಕೊಂಡಿವೆ; ಇವೆಲ್ಲವುಗಳ ಜೊತೆಗಿನ ಅನುಸಂಧಾನ ಹೇಗೆ ಎಂಬ ಕುರಿತು ಅಂತಹ ಒಮ್ಮತವೇನೂ ಇಲ್ಲ. ಈ ಭಿನ್ನತೆಗಳು ಇರುವ ಕಾರಣದಿಂದಾಗಿಯೇ ಆಂತರಿಕವಾಗಿ, ಅಕ್ಕಪಕ್ಕದವರ ಜೊತೆಗೆ ಮತ್ತು ಈ ದೇಶದ ಜೊತೆಗೆ ಈ ಪ್ರದೇಶವು ಹೊಂದಿರುವ ನಂಟು ಸಂಕೀರ್ಣವಾದುದೇ ಆಗಿದೆ. ಇದು ಸುಮ್ಮನೆ ದಕ್ಕಿದ್ದು ಅಲ್ಲ, ಬದಲಿಗೆ, ಅದನ್ನು ಸ್ವಪ್ರಯತ್ನದಿಂದ ರೂಪಿಸಿಕೊಳ್ಳಲಾಗಿದೆ.

ರಾಷ್ಟ್ರೀಯತೆ ಎಂಬ ಸಂಕೀರ್ಣ ಚಿಂತನೆ: ದೇಶದ ಬೇರೆ ಕೆಲವು ನಿರ್ದಿಷ್ಟ ಭಾಗಗಳ ರೀತಿಯಲ್ಲಿ ಕರ್ನಾಟಕದಲ್ಲಿ ಯಾರೂ ಭಾರತದ ರಾಷ್ಟ್ರೀಯ ಏಕತೆಯನ್ನು ಪ್ರಶ್ನಿಸಿಲ್ಲ ಅಥವಾ ಕನ್ನಡ ಅಥವಾ ಕರ್ನಾಟಕದ ಪ್ರತ್ಯೇಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿಲ್ಲ. ಹಿಂದಿ ಭಾಷೆಗೆ ಹೆಚ್ಚಿನ ಮನ್ನಣೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದ್ದರೂ ಅದು ವ್ಯಾಪಕವಾದ ಪ್ರತಿರೋಧವಾಗಲಿಲ್ಲ. ಕರ್ನಾಟಕ ಸಂಗೀತದ ರೀತಿಯಲ್ಲಿಯೇ ಹಿಂದೂಸ್ಥಾನಿ ಸಂಗೀತವೂ ಇಲ್ಲಿ ಸಮೃದ್ಧವಾಗಿ ಬೆಳೆದಿದೆ. ತೀರಾ ಇತ್ತೀಚಿನವರೆಗೆ, ನೌಕರಿ ಮತ್ತು ನಿವೃತ್ತಿಗೆ ಬಲು ಬೇಡಿಕೆಯ ನಗರವಾಗಿ ಬೆಂಗಳೂರು ಇತ್ತು. ಕೇಂದ್ರ ಸರ್ಕಾರವು ಬೆನ್ನ ಮೇಲೆ ಸವಾರಿ ಮಾಡಲು ಬಂದಾಗಲೆಲ್ಲ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ನೆಹರೂ ಅವರು ಮುಖ್ಯಮಂತ್ರಿಗಳು ತಮ್ಮ ಅಧೀನದಲ್ಲಿ ಇರುವವರು ಎಂಬ ಅರ್ಥದಲ್ಲಿ ಪತ್ರ ಬರೆಯುವುದು ತಮಗೆ ಹಿಡಿಸುತ್ತಿರಲಿಲ್ಲ ಎಂದು ಎಸ್. ನಿಜಲಿಂಗಪ್ಪ ಅವರು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಇಂದಿರಾ ಗಾಂಧಿ ಅವರ ಸ್ವೇಚ್ಛೆಯ ನಡವಳಿಕೆಯು ದೇವರಾಜ ಅರಸು ಅವರಿಗೆ ಹಿಡಿಸುತ್ತಿರಲಿಲ್ಲ. ರಾಷ್ಟ್ರೀಯತೆ ಎಂಬುದು ಎಲ್ಲವನ್ನೂ ಏಕರೂಪಗೊಳಿಸುವ ಪ್ರಯತ್ನವಲ್ಲ, ಬದಲಿಗೆ ಸಹಭಾಗಿಯಾಗಿದ್ದು ಪರಸ್ಪರ ಒಪ್ಪಿಗೆ ಮತ್ತು ಬೆಂಬಲವನ್ನು ಪ್ರತಿಫಲಿಸುವ ಸಂಬಂಧ ಎಂದು ಗ್ರಹಿಸಲಾಗಿದೆ. ತನ್ನ ಸಾಹಿತ್ಯಕ ಪರಂಪರೆ, ಶಿಲ್ಪಕಲೆ ಮತ್ತು ವಾಸ್ತುಶಿಲ್ಪ, ಧಾರ್ಮಿಕ ಸಾಧನೆಗಳು, ರಾಜಕೀಯ ಪರಂಪರೆ–ಚಾಲುಕ್ಯ, ಹೊಯ್ಸಳ, ಅದಿಲ್ ಶಾಹಿ, ಬಹಮನಿ ಅಥವಾ ವಿಜಯ ನಗರ– ಯಾವುದೇ ಇರಲಿ ಇತರ ಯಾವುದಕ್ಕೂ ಕೀಳಲ್ಲ ಎಂದೇ ಕರ್ನಾಟಕ ಭಾವಿಸಿದೆ. ಮೈಸೂರು ಅರಸರ ಆಳ್ವಿಕೆಯಲ್ಲಿ ರಾಜ್ಯವು ಮಾಡಿದ ಸಾಧನೆಯ ಕುರಿತು ಹೆಮ್ಮೆಯೇ ಇದೆ. ಅದು ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ, ಶಾಸನಾತ್ಮಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಅದೇ ರೀತಿಯ ಸಾಧನೆಗಳು ಆಗಿವೆ.

ಸಾಮಾಜಿಕ ಸಮಾನತೆ: ಕರ್ನಾಟಕದ ರಾಜಕೀಯ ಸಂವಾದವು ಸಾಮಾಜಿಕ ಸಮಾನತೆಯ ಚಿಂತನೆಗಳಿಂದ ತುಂಬಿದೆ. ಆದರೆ, ರಾಜಕೀಯ ನಡವಳಿಕೆಯಲ್ಲಿ ಇದೇ ಸ್ಫೂರ್ತಿ ಪ್ರತಿಫಲಿಸಿದೆ ಎಂದೇನಿಲ್ಲ. ಸಾಮಾಜಿಕ ಸಮಾನತೆಯು ಹಲವೆಡೆ ಅಭಿವ್ಯಕ್ತಿಗೊಂಡಿರುವುದನ್ನು ಗಮನಿಸಬಹುದು: ಮಿಲ್ಲರ್ ಆಯೋಗದ ವರದಿ (1918) ಅದಕ್ಕೆ ಒಂದು ಉದಾಹರಣೆ. 20ನೇ ಶತಮಾನದ ಆರಂಭದಲ್ಲಿ ಸಂಗ್ರಹಿಸಲಾದ ವಚನಗಳಲ್ಲಿ ಬಸವೇಶ್ವರ ಮತ್ತು ಇತರ ವಚನಕಾರರು ಸಾಮಾಜಿಕ ಸಮಾನತೆಗೆ ನೀಡಿದ ಕರೆ ಎದ್ದು ಕಾಣುತ್ತಿದೆ. ಫ.ಗು.ಹಳಕಟ್ಟಿ ಅವರು ಸಂಗ್ರಹಿಸಿದ ವಚನಗಳು ಮತ್ತು ಅದಿಲ್ ಶಾಹಿ ಕಾಲದ ಶಾಸನಗಳು ಸಂಪ್ರದಾಯಬದ್ಧತೆ ಮತ್ತು ಸಾಮಾಜಿಕ ಶ್ರೇಣೀಕರಣದ ವಿರುದ್ಧ ಕರೆ ಕೊಟ್ಟಿದ್ದವು. ಕಿತ್ತೂರು ಕರ್ನಾಟಕದಲ್ಲಿ ಜ್ಯೋತಿಬಾ ಫುಲೆ, ಹೈದರಾಬಾದ್ ಕರ್ನಾಟಕದಲ್ಲಿ ಆರ್ಯ ಸಮಾಜದ ಪ್ರಭಾವ ದಟ್ಟವಾಗಿತ್ತು. ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಚಳವಳಿಯು ಕರ್ನಾಟಕವು ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿತು. ಕರ್ನಾಟಕದ ಜನಪದ ಸಾಹಿತ್ಯವು ದೇಶದಲ್ಲಿಯೇ ಅತ್ಯಂತ ಸಮೃದ್ಧವಾದುದು ಮತ್ತು ಅಲ್ಲಿಯೂ ಸಾಮಾಜಿಕ ಸಮಾನತೆಯ ಮೌಲ್ಯ ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಮಾನದಂಡ ಬೇಕು ಎಂದು ಪ್ರತಿಪಾದಿಸಿದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಸಮಾನತೆಯನ್ನು ತನ್ನ ನೆಲೆಗಟ್ಟಾಗಿ ಮಾಡಿಕೊಂಡಿದೆ. ಸಾಮಾಜಿಕ ಸಮಾನತೆಯ ಈ ಕಳಕಳಿಯು ಜಾತಿಗಳಿಂದಾಗಿ ಕೆಳಕ್ಕೆ ಕುಸಿಯುವಂತಾಯಿತು; ಪ್ರಬಲ ಜಾತಿಗಳ ಜನರು ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳದೇ ಇದ್ದಿದ್ದರೆ ಕರ್ನಾಟಕವು ಸರ್ವ ಸಮಾನತೆಯ ವಿಶಿಷ್ಟ ಹಾದಿಯಲ್ಲಿ ಸಾಗಬಹುದಿತ್ತು.

ಪ್ರತಿರೋಧ: ಪ್ರತಿರೋಧದ ಧ್ವನಿ ಕರ್ನಾಟಕದಲ್ಲಿ ಸದಾ ಸಮೃದ್ಧವಾಗಿಯೇ ಇತ್ತು ಮತ್ತು ಅದು ಸಾಮಾಜಿಕ ಚಳವಳಿಗಳಿಗೆ ಕಾರಣವೂ ಆಗಿದೆ. ಹಾಗಿದ್ದರೂ ಈ ಪ್ರತಿರೋಧವು ಕ್ರಾಂತಿಕಾರಕ ಪರ್ಯಾಯಗಳನ್ನು ನೀಡುವ ಸಾಮರ್ಥ್ಯವನ್ನು ತೋರಿದ್ದು ಕಡಿಮೆ. ರಾಜ್ಯವು ರೈತರ ಚಳವಳಿಗಳು, ಜಾತಿ ವಿರೋಧಿ ಪ್ರತಿಭಟನೆಗಳು, ವಿದ್ಯಾರ್ಥಿಗಳ ಸಂಘರ್ಷ, ಪ್ರಾದೇಶಿಕ ಸಮಸ್ಯೆಗಳು ಮತ್ತು ಬಂಡಾಯದಂತಹ ಸಾಹಿತ್ಯ ಚಳವಳಿಗಳನ್ನು ಕಂಡಿದೆ. ಕೆಲವು ಬದಲಾವಣೆಗಳಿಗೆ ಇವು ಕಾರಣವಾಗಿವೆ. ಆದರೆ, ಕ್ರಾಂತಿಕಾರಕ ಬದಲಾವಣೆ ಮಾತ್ರ ಸಾಧ್ಯವಾಗಿಲ್ಲ.

ಪ್ರಜಾಪ್ರಭುತ್ವ, ಗಣರಾಜ್ಯವಾದ, ಜಾತ್ಯತೀತತೆ ಅಥವಾ ಲಿಂಗತ್ವ ಸಮಾನತೆಯಂತಹ ವಿಚಾರಗಳು ಪ್ರಬಲವಾದ ಅಭಿವ್ಯಕ್ತಿಯನ್ನು ರಾಜ್ಯದಲ್ಲಿ ಪಡೆದಿಲ್ಲ. ಲಿಂಗತ್ವ ಸಂವೇದನಾಶೀಲತೆಯ ಕುರಿತು ಹೇಳುವುದಾದರೆ, ಅಕ್ಕಮಹಾದೇವಿ ಬಹಳ ಪ್ರಬಲವಾಗಿ ಆರಂಭಿಸಿದ ಸ್ತ್ರೀ ಸ್ವಾತಂತ್ರ್ಯದ ಸಂಭ್ರಮವು ಕ್ರಮೇಣ ತನ್ನ ಶಕ್ತಿ ಕಳೆದುಕೊಂಡಿತು. ಕಾರ್ಕಳದ ಪಂಡಿತ ರಮಾಬಾಯಿ ಮತ್ತು ಮಂಗಳೂರಿನ ಕಮಲಾದೇವಿ ಚಟ್ಟೋಪಾಧ್ಯಾಯ ಅಂಥವರ ಹೆಸರುಗಳು ನಮ್ಮ ನೆನಪಿನಿಂದಲೇ ಮಾಸಿಹೋಗಿವೆ.

ಲೇಖಕ: ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.