ಎಐ ಜಗತ್ತಿನಲ್ಲಿ ವಾಸ್ತವ ವಿಚಾರಗಳು ಅತಿಯಾದ ಗದ್ದಲ ಮತ್ತು ಉತ್ಸಾಹದ ನಡುವೆ ಹಲವು ಬಾರಿ ಮುಚ್ಚಿ ಹೋಗಿಬಿಡುತ್ತವೆ. ಆದ್ದರಿಂದ, ವಾಸ್ತವವಾಗಿ ಏನಾಗಿದೆ ಎನ್ನುವುದನ್ನು ಅರಿಯುವ ಮೂಲಕ ಈ ಲೇಖನವನ್ನು ಆರಂಭಿಸೋಣ. ಈ ತಿಂಗಳ ಆರಂಭದಲ್ಲಿ, ಜಗತ್ತಿನ ಪ್ರಮುಖ ಎಐ ಕಂಪನಿಗಳಲ್ಲಿ ಒಂದಾದ ಅಂಥ್ರಾಪಿಕ್ 'ಮೈಥೋಸ್' ಎನ್ನುವ ಹೊಸದೊಂದು ಎಐ ಮಾಡೆಲ್ ಅನ್ನು ಘೋಷಿಸಿತು. ಎಐ ಉದ್ಯಮದಲ್ಲಿ, ಸಾಮಾನ್ಯವಾಗಿ ಎಲ್ಲ ಕಂಪನಿಗಳೂ ಸ್ಪರ್ಧೆಗೆ ಇಳಿದವರಂತೆ ಬಹಳ ಬೇಗನೆ ತಮ್ಮ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತವೆ. ಆದರೆ, ಅಂಥ್ರಾಪಿಕ್ ಮಾತ್ರ ಬಹಳ ಅಪರೂಪದ ನಡೆಯೊಂದನ್ನು ಪ್ರದರ್ಶಿಸಿತು. ಅಂಥ್ರಾಪಿಕ್ ತಾನು ಮೈಥೋಸ್ ಮಾಡೆಲ್ ಅನ್ನು ಬಿಡುಗಡೆಗೊಳಿಸುವುದಿಲ್ಲ ಎಂದು ನಿರ್ಧರಿಸಿತು!

ಇದಕ್ಕೆ ನೈಜ ಕಾರಣ ನಾವು ಸಾಮಾನ್ಯವಾಗಿ ಎಐ ಸಂವಾದಗಳಲ್ಲಿ ಕೇಳುವಂತಹ 'ಎಐ ಸುರಕ್ಷತೆ' ಅಲ್ಲ. ಇದು ಅದನ್ನೂ ಮೀರಿದ, ಬಹಳ ಗಂಭೀರವಾದ ವಿಚಾರವಾಗಿತ್ತು. ಅಂಥ್ರಾಪಿಕ್ ಪ್ರಕಾರ, ಮೈಥೋಸ್ ಸಾಫ್ಟ್ವೇರ್ ಒಳಗೆ ಬಚ್ಚಿಟ್ಟುಕೊಂಡಿರುವ ದೌರ್ಬಲ್ಯಗಳನ್ನು ಪತ್ತೆಹಚ್ಚಬಲ್ಲದು. ಈ ದೌರ್ಬಲ್ಯಗಳನ್ನು 'ಜೀ಼ರೋ ಡೇಸ್' ಎಂದು ಕರೆಯಲಾಗುತ್ತದೆ. ಹಾಗೆಂದರೇನು? ಜೀ಼ರೋ ಡೇಸ್ ಎಂದರೆ, ಇಲ್ಲಿಯ ತನಕ ಯಾರಿಗೂ ತಿಳಿಯದ, ಸಾಫ್ಟ್ವೇರ್ ಅನ್ನು ಅಭಿವೃದ್ಧಿ ಪಡಿಸಿರುವ ಕಂಪನಿಗೂ ತಿಳಿದಿರದ ದೌರ್ಬಲ್ಯಗಳು. ಒಂದು ಬಾರಿ ಮೈಥೋಸ್ ಈ ದೋಷಗಳನ್ನು ಪತ್ತೆಹಚ್ಚಿದರೆ, ಅದು ಸಿಸ್ಟಮ್ಗಳ ಒಳಗೆ ಪ್ರವೇಶಿಸಬಲ್ಲದು. ಅದರೊಡನೆ, ಸಣ್ಣಪುಟ್ಟ ದಾಳಿಗಳನ್ನು ಒಗ್ಗೂಡಿಸಿ, ಸಿಸ್ಟಮ್ಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬಲ್ಲದು. ನಾವು ಇಲ್ಲಿ ಮಾತನಾಡುತ್ತಿರುವ ಸಿಸ್ಟಮ್ಗಳಾದರೂ ಯಾವುವು? ವಿಂಡೋಸ್ನಂತಹ ಆಪರೇಟಿಂಗ್ ಸಿಸ್ಟಮ್ಗಳು, ಕ್ರೋಮ್ನಂತಹ ವೆಬ್ ಬ್ರೌಸರ್ಗಳು, ಮತ್ತು ನಮ್ಮ ದೈನಂದಿನ ಜೀವನದಲ್ಲಿ ಬಳಕೆಯಾಗುವ ಡಿಜಿಟಲ್ ವ್ಯವಸ್ಥೆಗಳು!

ಇಲ್ಲಿನ ಆತಂಕಕಾರಿ ಅಂಶವೆಂದರೆ, ಮೈಥೋಸ್ಗೆ ಮಾರ್ಗದರ್ಶನ ನೀಡಲು ಮಾನವ ಸಹಾಯದ ಅಗತ್ಯವೇ ಇಲ್ಲ. ಅದು ತನ್ನ ಪಾಡಿಗೆ ತಾನು ಕಾರ್ಯಾಚರಿಸುತ್ತದೆ. ಅದು ತನ್ನದೇ ಆದ ಕೋಡ್ ಬರೆಯುತ್ತದೆ, ನಿಧಾನವಾಗಿ ಹೆಚ್ಚು ಹೆಚ್ಚು ಪ್ರವೇಶ ಗಳಿಸುತ್ತದೆ, ಮತ್ತು ಪ್ರತಿಯೊಂದು ಹೆಜ್ಜೆಯನ್ನೂ ತಾನೇ ಆಲೋಚಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಓರ್ವ ನುರಿತ ಕಳ್ಳ ಯಾವುದೇ ಕಟ್ಟಡದ ಒಳಗೆ ಪ್ರವೇಶಿಸಿ, ಅಲ್ಲಿನ ಪ್ರತಿಯೊಂದು ದುರ್ಬಲ ಬೀಗಗಳನ್ನು ಗುರುತಿಸಿ, ಪ್ರತಿಯೊಂದು ಬಾಗಿಲನ್ನೂ ತೆರೆದು, ಪ್ರತಿ ಕೋಣೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಖಾಲಿ ಮಾಡುವುದನ್ನು ಊಹಿಸಿ. ಆತನಿಗೆ ಇಷ್ಟೆಲ್ಲ ಮಾಡುವಾಗ ಯಾರೊಬ್ಬರ ಸಹಾಯ, ನಿರ್ದೇಶನದ ಅಗತ್ಯ ಇಲ್ಲದೆಯೇ ಕಾರ್ಯಾಚರಿಸುವುದನ್ನು ಕಲ್ಪಿಸಿ. ಮೈಥೋಸ್ ಸಹ ಬಹುತೇಕ ಇಂತಹದ್ದೇ ಸಾಮರ್ಥ್ಯ ಹೊಂದಿದೆ.

ಹಾಗೆಂದು ಇಷ್ಟರಮಟ್ಟಿನ ಅಭಿವೃದ್ಧಿ ರಾತ್ರೋರಾತ್ರಿ ನಡೆದಿರುವುದಲ್ಲ. ಕೆಲವು ತಿಂಗಳುಗಳ ಹಿಂದೆ, ಅಂಥ್ರಾಪಿಕ್ ಕಂಪನಿಯ ಹಳೆಯ ಮಾಡೆಲ್ಗಳು ಸಾಫ್ಟ್ವೇರ್ ದೋಷಗಳನ್ನು (ಬಗ್ಸ್) ಪತ್ತೆಹಚ್ಚಲು ಸೂಕ್ತವಾಗಿಯೇ ಇದ್ದವು. ಆದರೆ, ಅವು ಈ ಬಗ್ಗಳನ್ನು ಬಳಸಿಕೊಂಡು ಸಿಸ್ಟಮ್ಗಳ ಮೇಲೆ ದಾಳಿ ನಡೆಸುವಷ್ಟು ಶಕ್ತವಾಗಿರಲಿಲ್ಲ. ಪರೀಕ್ಷೆಗಳಲ್ಲಿ ಹಳೆಯ ಮಾಡೆಲ್ಗಳು ಒಂದು ದೌರ್ಬಲ್ಯವನ್ನು ನೈಜವಾಗಿ ಕಾರ್ಯಾಚರಿಸುವ 'ಹ್ಯಾಕ್' ರೀತಿಯಲ್ಲಿ ಬಳಸುವುದು ಬಹಳ ಅಪರೂಪವಾಗಿತ್ತು. ಆದರೆ, ಮೈಥೋಸ್ ಬಹಳ ಸ್ಪಷ್ಟವಾಗಿಯೇ ಆ ರೇಖೆಯನ್ನು ದಾಟಿಬಿಟ್ಟಿದೆ. ಪರೀಕ್ಷೆಗಳಲ್ಲಿ ಅದು ಹಲವು ಬಾರಿ ಕಾರ್ಯಾಚರಿಸಬಲ್ಲ ದಾಳಿಗಳನ್ನು ಸಂಘಟಿಸಿತು!

ಯುಕೆ ಎಐ ಸೆಕ್ಯುರಿಟಿ ಇನ್ಸ್ಟಿಟ್ಯೂಟ್ ಸಹ ಸ್ವತಂತ್ರವಾಗಿ ಮೈಥೋಸ್ ಅನ್ನು ಪರೀಕ್ಷೆಗೆ ಒಳಪಡಿಸಿತು. ಈ ಮಾಡೆಲ್ ಸಾಮಾನ್ಯವಾಗಿ ತಜ್ಞ ಮಾನವರ ಸಹಾಯ ಬೇಕಾಗುವ ಸೈಬರ್ ಸೆಕ್ಯುರಿಟಿ ಸಮಸ್ಯೆಗಳನ್ನು ಪರಿಹರಿಸಿತು. ಎಲ್ಲಕ್ಕಿಂತ ಮುಖ್ಯವಾಗಿ, ಇದು ಹಲವು ಹೆಜ್ಜೆಗಳ ದಾಳಿ ಸಂಘಟಿಸುವ ಹೊಸದಾದ ತನ್ನ ಸಾಮರ್ಥ್ಯವನ್ನೂ ಪ್ರದರ್ಶಿಸಿತು. ಅಂದರೆ, ಮೈಥೋಸ್ ದೌರ್ಬಲ್ಯಗಳನ್ನು ಪತ್ತೆಹಚ್ಚಿ, ಮುಂದಿನ ಹೆಜ್ಜೆಯನ್ನು ಯೋಜಿಸಿ, ತಾನು ಗಮನಿಸಿರುವುದಕ್ಕೆ ಹೊಂದಿಕೊಂಡು, ಇನ್ನೂ ಇನ್ನೂ ಆಳಕ್ಕೆ ಸಾಗಬಲ್ಲದು. ಇದು ಬಹುತೇಕ ಓರ್ವ ಕುಶಲ ಮಾನವ ಹ್ಯಾಕರ್ ರೀತಿಯಲ್ಲೇ ಕಾರ್ಯಾಚರಿಸುತ್ತದಾದರೂ, ಮಾನವರಿಗಿಂತ ಬಹಳ ವೇಗವಾಗಿ ಕೆಲಸ ಮಾಡುತ್ತದೆ. ಯೋಜಿತವಾಗಿ ನಡೆಸಿದ್ದ ಒಂದು ಪರೀಕ್ಷಾ ಕಂಪನಿ ದಾಳಿ ಪ್ರಯೋಗದಲ್ಲಿ, ಮೈಥೋಸ್ ಒಂದು ಸಂಪೂರ್ಣ ಜಾಲವನ್ನು ತನ್ನ ಕೈಗೆತ್ತಿಕೊಳ್ಳಲು ಬೇಕಾದ ಎಲ್ಲ ಹೆಜ್ಜೆಗಳನ್ನೂ ಪೂರ್ಣಗೊಳಿಸಿತು. ಸಾಮಾನ್ಯವಾಗಿ ತಜ್ಞ ತಂತ್ರಜ್ಞರ ಒಂದು ತಂಡಕ್ಕೆ ಈ ಕೆಲಸ ಮಾಡಲು ಹಲವಾರು ಗಂಟೆಗಳೇ ಬೇಕಾಗಬಹುದು.

ಈ ಪರಿಸ್ಥಿತಿಯನ್ನು ಜಾಗರೂಕವಾಗಿ ನಿರ್ವಹಿಸಲು, ಅಂಥ್ರಾಪಿಕ್ 'ಪ್ರಾಜೆಕ್ಟ್ ಗ್ಲಾಸ್ವಿಂಗ್' ಎನ್ನುವ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿತು. ಇದು ಅಂದಾಜು 40 ಸಂಸ್ಥೆಗಳಿಗೆ, ಬಹುತೇಕ ಬೃಹತ್ ಅಮೆರಿಕನ್ ತಂತ್ರಜ್ಞಾನ ಕಂಪನಿಗಳಿಗೆ, ಸೀಮಿತ ಮಟ್ಟದ ಪ್ರವೇಶ ಒದಗಿಸಿತು. ಇದರಿಂದ ಆ ಕಂಪನಿಗಳಿಗೆ ತಮ್ಮ ಸ್ವಂತ ಸಾಫ್ಟ್ವೇರ್ ಒಳಗಿರುವ ದೋಷಗಳನ್ನು ಗುರುತಿಸಿ, ಆರಂಭದಲ್ಲೇ ಅವುಗಳನ್ನು ಪರಿಹರಿಸಲು ಸಾಧ್ಯವಾಗಬಹುದು ಎಂದು ಭಾವಿಸಲಾಗಿತ್ತು. ಯುಕೆ ಸರ್ಕಾರಕ್ಕೂ ಈ ಪರೀಕ್ಷೆ ನಡೆಸುವ ಅವಕಾಶ ನೀಡಲಾಗಿತ್ತು. ಬ್ಯಾಂಕ್ಗಳು ಇದನ್ನು ಗಮನಿಸಲಾರಂಭಿಸಿದವು. ಸರ್ಕಾರಗಳೂ ಈ ಕುರಿತು ಸಭೆ ನಡೆಸಲಾರಂಭಿಸಿದವು. ಮೈಥೋಸ್ ಕುರಿತು ಇದ್ದ ಕುತೂಹಲ ಈಗ ಆತಂಕದ ರೂಪ ಪಡೆದುಕೊಂಡಿತ್ತು.

ಇಷ್ಟಾದ ಬಳಿಕ, ಎಲ್ಲರೂ ಆತಂಕಗೊಂಡಿದ್ದ ಬೆಳವಣಿಗೆಗಳು ನಡೆಯಲಾರಂಭಿಸಿದವು. ಮೈಥೋಸ್ ಅಧಿಕೃತವಾಗಿ ಬಿಡುಗಡೆಗೊಳ್ಳದಿದ್ದರೂ, ಖಾಸಗಿ ಆನ್ಲೈನ್ ವೇದಿಕೆಯಲ್ಲಿನ ಒಂದು ಸಣ್ಣ ಗುಂಪು ಅದನ್ನು ಬಳಸಿಕೊಂಡಿತ್ತು ಎನ್ನುವ ವರದಿಗಳೂ ಬಂದವು. ಹಾಗೆಂದು ಇದೊಂದು ಪೂರ್ಣ ಪ್ರಮಾಣದ ಸೋರಿಕೆ ಆಗಿರಲಿಲ್ಲ. ಆದರೆ, ದೊಡ್ಡ ದೊಡ್ಡ ಸವಾಲುಗಳನ್ನು ಮೂಡಿಸಲು ಇದು ಸಾಕಷ್ಟಾಗಿತ್ತು. ಇಂತಹ ಶಕ್ತಿಶಾಲಿ ಎಐ ಮಾಡೆಲ್ಗಳು ನಿರ್ಮಾಣಗೊಂಡಿವೆ ಎಂದಾದರೆ, ಅವುಗಳನ್ನು ನಿಜಕ್ಕೂ ಮುಚ್ಚಿಡಲು ಸಾಧ್ಯವೇ ಎನ್ನುವ ಸವಾಲುಗಳು ಎದ್ದವು.

ಇಂದಿನ ಎಐ ವ್ಯವಸ್ಥೆಯಲ್ಲಿ, 'ನಿಯಂತ್ರಣ' ಎನ್ನುವುದು ಮುಖ್ಯ ಸುರಕ್ಷತಾ ಕ್ರಮವಾಗಿರುವುದರಿಂದ, ಇದು ಬಹಳ ಮುಖ್ಯವಾಗಿದೆ. ಇದಕ್ಕೆ ಪರಿಹಾರವೇನು? ಈ ಮೈಥೋಸ್ ಮಾದರಿಯನ್ನು ಬಿಡುಗಡೆಗೊಳಿಸದೆ, ಕೇವಲ ನಂಬಿಕಾರ್ಹ ಸಹಯೋಗಿಗಳೊಡನೆ ಮಾತ್ರ ಕಾರ್ಯಾಚರಿಸಬಹುದು. ಇದು ಬುದ್ಧಿವಂತಿಕೆಯ ನಡೆಯಂತೆ ತೋರುತ್ತದೆ. ಆದರೆ, ಇಂದಿನ ನಮ್ಮ ನೈಜ ಪ್ರಪಂಚದಲ್ಲಿ ಅಷ್ಟರಮಟ್ಟಿನ ನಿಯಂತ್ರಣ ಬಹುಶಃ ಸಾಧ್ಯವೇ ಇಲ್ಲವೇನೋ.

ಹಾಗೆಂದು ಮೈಥೋಸ್ ಸಂಪೂರ್ಣ ಹೊಸದಾದ ಅಪಾಯವನ್ನೇನೂ ಸೃಷ್ಟಿಸುತ್ತಿಲ್ಲ. ಇದು ಹಳೆಯ ಒಂದು ಅಪಾಯವನ್ನೇ ತನ್ನ ಕೈಗೆತ್ತಿಕೊಂಡು, ಅದನ್ನು ಇನ್ನಷ್ಟು ದೊಡ್ಡದಾಗಿಸುತ್ತಿದೆ. ಹ್ಯಾಕಿಂಗ್ ನಡೆಸಲು ಮೊದಲಿನಿಂದಲೂ ಅಪಾರ ಕೌಶಲ, ಸಮಯ ಮತ್ತು ತಾಳ್ಮೆ ಬೇಕಿತ್ತು. ಅದು ಕಷ್ಟಕರವಾಗಿರುವುದರಿಂದಲೇ ನಮ್ಮೆಲ್ಲರನ್ನೂ ಆ ಅಪಾಯದಿಂದ ರಕ್ಷಿಸಲು ಸಾಧ್ಯವಾಗಿದೆ. ಆದರೆ, ಮೈಥೋಸ್ ಹ್ಯಾಕಿಂಗ್ನಿಂದ ಈ ರಕ್ಷಣೆಯನ್ನು ಬಹಳಷ್ಟು ಕಡಿಮೆಗೊಳಿಸುತ್ತದೆ. ಸೈಬರ್ ಸುರಕ್ಷತೆ ಯಾವತ್ತೂ ನ್ಯಾಯಯುತವಾಗಿರಲಿಲ್ಲ. ಏಕೆಂದರೆ, ರಕ್ಷಿಸಬೇಕಾದವರು ಎಲ್ಲವನ್ನೂ ಕಾಪಾಡಿಕೊಳ್ಳಬೇಕಿತ್ತು. ಆದರೆ, ದಾಳಿಕೋರರಿಗೆ ಕೇವಲ ಒಂದು ಬಾಗಿಲು ತೆರೆದರೆ ಸಾಕಿತ್ತು. ಆ ಬಾಗಿಲನ್ನು ಕಂಡುಹಿಡಿಯುವುದು ಅಗ್ಗ, ಸುಲಭ ಮತ್ತು ವೇಗವಾದರೆ, ಸಮತೋಲನ ಕಡಿಮೆಯಾಗಿ, ದಾಳಿಕೋರರಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ.

ಹಾಗೆಂದು ಇದರಲ್ಲಿ ಧನಾತ್ಮಕ ವಿಚಾರಗಳೂ ಇವೆ. ರಕ್ಷಣೆಗಾಗಿ ಬಳಸಿಕೊಂಡಾಗ ಮೈಥೋಸ್ ಬಹಳಷ್ಟು ಶಕ್ತಿಶಾಲಿಯಾಗಿದೆ. ಮೊಜಿ಼ಲ್ಲಾ ಸಂಸ್ಥೆ ಇದನ್ನು ತನ್ನ ಫೈರ್ಫಾಕ್ಸ್ ಬ್ರೌಸರ್ ಮೇಲೆ ಪರೀಕ್ಷಿಸಿ, ಹಿಂದೆಂದಿಗಿಂತಲೂ ಹೆಚ್ಚಿನ ದೌರ್ಬಲ್ಯಗಳನ್ನು ಪತ್ತೆಹಚ್ಚಿತು. ಅವೆಲ್ಲ ಲೋಪಗಳನ್ನು ಸರಿಪಡಿಸಲಾಯಿತು. ಮೈಥೋಸ್ ಹೊಂದಿರುವ ರಕ್ಷಿಸುವ ಸಾಮರ್ಥ್ಯವೇ ನಾಶವನ್ನೂ ಮಾಡಬಲ್ಲದು ಎನ್ನುವುದೇ ಪರಿಸ್ಥಿತಿಯ ವ್ಯಂಗ್ಯವಾಗಿದೆ.

ಎಲ್ಲಾ ಕಡೆಗಳಲ್ಲೂ ಇಂತಹ ಸಿಸ್ಟಮ್ಗಳನ್ನು ನಿರ್ಮಿಸಲಾಗುತ್ತಿರುವ ಲಕ್ಷಣಗಳಿವೆ. ಕೆಲವೊಂದು ಚೀನೀ ಕಂಪನಿಗಳೂ ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿವೆ ಎನ್ನಲಾಗಿದೆ. ಸಣ್ಣದಾದ, ಮತ್ತು ಅಗ್ಗದ ಮಾದರಿಗಳೂ ಸಹ ಈ ಸಾಮರ್ಥ್ಯಗಳನ್ನು ಹೊಂದಲು ಪ್ರಯತ್ನಿಸುತ್ತಿವೆ. ಆದ್ದರಿಂದ, ಮೈಥೋಸ್ ಎನ್ನುವುದು ಕೇವಲ ಒಂದು ಬಾರಿ ನಿರ್ಮಾಣಗೊಂಡ ಮಾಡೆಲ್ ಎನ್ನಲು ಸಾಧ್ಯವಿಲ್ಲ. ಎಐ ವಲಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದರ ಸೂಚನೆಯನ್ನು ಬಹುಶಃ ಈ ಬೆಳವಣಿಗೆ ನೀಡುತ್ತಿದೆ.

ಸರ್ಕಾರಗಳೂ ಈಗ ನಿಧಾನವಾಗಿ ಇತ್ತ ಕ್ರಮ ಕೈಗೊಳ್ಳುತ್ತಿವೆ. ಭಾರತದಲ್ಲೂ ನಿಯಂತ್ರಕರು ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳೊಡನೆ ಸಮಾಲೋಚನೆ ನಡೆಸಿ, ಅವುಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಿವೆ. ದೋಷಗಳನ್ನು ಬಹಳ ವೇಗವಾಗಿ ಸರಿಪಡಿಸಲು ಸಾಧ್ಯವಿರುವುದರಿಂದ, ಭವಿಷ್ಯದಲ್ಲಿ ಎಐ ಸಿಸ್ಟಮ್ಗಳನ್ನು ಸುರಕ್ಷಿತವಾಗಿಸಲಿದೆ ಎಂದು ಅಂಥ್ರಾಪಿಕ್ ಅಭಿಪ್ರಾಯ ಪಟ್ಟಿದೆ. ಇದು ನಿಜವೂ ಆಗಿರಬಹುದು. ಆದರೆ, ತಂತ್ರಜ್ಞಾನ ಮುಂದಕ್ಕೆ ಚಲಿಸಿ ನಿಯಮಗಳು ಹಿಂದುಳಿಯುವ ಈ ಅವಧಿಯಲ್ಲೇ ನೈಜ ಅಪಾಯಗಳು ದಟ್ಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.