ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ‘ಪ್ರಕೃತಿ’ ಪದವನ್ನು ಮನುಷ್ಯನ ದೇಹಕ್ಕೂ ನಿಸರ್ಗಕ್ಕೂ ಸಂವಾದಿಯಾಗಿ ಬಳಸಲಾಗುತ್ತದೆ. ‘ಅಂವ ತನ್ನ ಪ್ರಕೃತಿ ಭಾಳ ಚೊಲೊ ಇಟ್ಕಂಡಾನ ನೋಡು...’ ಅಂದರೆ, ಆತ ತನ್ನ ದೇಹಾರೋಗ್ಯ ಚೆನ್ನಾಗಿ ಕಾಪಾಡಿಕೊಂಡಿದ್ದಾನೆ ಎಂದೇ ಅರ್ಥ. ಎಷ್ಟೊಂದು ‘ಮೌಲ್ಯಗರ್ಭಿತ’ ಹೋಲಿಕೆ! ನಮ್ಮ ಹಳೆಯ ತಲೆಮಾರಿನ ಜನಪದರು ಮನುಷ್ಯನ ದೇಹ
ಮತ್ತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು, ಪರಸ್ಪರ
ಸಂಬಂಧವನ್ನು, ಅವಲಂಬನೆಯನ್ನು ಬಹಳ ಚೆನ್ನಾಗಿ ಅರಿತಿದ್ದರು ಎಂಬುದಕ್ಕೆ ಇಂಥ ಸಣ್ಣಪುಟ್ಟ ಸಹಜ ನಡವಳಿಕೆಗಳು ಬಹುದೊಡ್ಡ ರುಜುವಾತು ಒದಗಿಸುತ್ತವೆ.

ಅಚ್ಚರಿಯ ಸಂಗತಿಯೆಂದರೆ, ಮನುಷ್ಯ ಮತ್ತು ಪ್ರಕೃತಿ ಕುರಿತ ನಮ್ಮ ನೆಲಮೂಲ ತಿಳಿವಳಿಕೆ ಜಾಗತಿಕ ಮಾನ್ಯತೆ ಹಾಗೂ ಪ್ರಸ್ತುತತೆ ಹೊಂದಿರುವುದು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಹವಾಮಾನ ಬದಲಾವಣೆ ಕುರಿತ ‘ಅಂತರ್ ಸರ್ಕಾರಿ ಸಮಿತಿ’ (Intergovernmental Panel on Climate Change) ಘೋಷಿಸಿದಂತೆ, ‘ನಮ್ಮ ಗ್ರಹ ಮತ್ತು ಜನರ ಭವಿಷ್ಯದ ಯೋಗಕ್ಷೇಮವನ್ನು ರೂಪಿಸುವ ಸವಾಲುಗಳು ಪರಸ್ಪರ ಸಂಬಂಧ ಹೊಂದಿವೆ. ಈ ಸಮಿತಿಯು ಹವಾಮಾನ ಬದಲಾವಣೆ ಕುರಿತ ಜಾಗತಿಕ ಬೆಳವಣಿಗೆಗಳನ್ನು ವೈಜ್ಞಾನಿಕ ತಳಹದಿ ಯಲ್ಲಿ ಅಧ್ಯಯನ ಮಾಡುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಇನ್ನೂ ಅಚ್ಚರಿ ಮತ್ತು ಆತಂಕಕಾರಿ ಸಂಗತಿಯೆಂದರೆ, ಮನುಷ್ಯ ಸಮುದಾಯ ಪ್ರಕೃತಿಯ ಸುಸ್ಥಿರತೆಗೆ ಅಪಾಯ ತರುವ ಹಾದಿಯಲ್ಲಿ ಸಾಕಷ್ಟು ದೂರ ಸಾಗಿಬಂದಿರುವುದು. ಈ ದಾರಿಯಲ್ಲಿ ಇನ್ನಷ್ಟು ದೂರ ನಡೆಸುತ್ತಾ ಡೆಡ್ ಎಂಡ್ ತಲಪಿಸಲು ಆಧುನಿಕ ಬದುಕಿನ ಶೈಲಿಗಳು, ಧೋರಣೆಗಳು ಮತ್ತು ತಾತ್ಕಾಲಿಕ ಸಂತೃಪ್ತಿಗಳು ತುದಿಗಾಲ ಮೇಲೆ ನಿಂತಿವೆ. ಹವಾಮಾನ ವೈಪರೀತ್ಯದ ಪರಿಣಾಮಗಳು ನಮ್ಮ ಅನುಭವಕ್ಕೆ ಬಂದಾಗ, ಸಂದರ್ಭಾನುಸಾರ ವಿಸ್ಮಯ ಎಂಬಂತೆ ಪ್ರತಿಕ್ರಿಯಿಸುತ್ತಿದ್ದೇವೆ. ನೈಜ ಕಾರಣಗಳು ಅರಿವಿಗೆ ನಿಲುಕಿದರೂ ಮರೆವೆಯ ಕಪಾಟಿನಲ್ಲಿ ಮುಚ್ಚಿಟ್ಟು ಡೆಡ್ ಎಂಡ್ ದಾರಿಯಲ್ಲಿ ಮುಂದಡಿ ಇಡುವುದನ್ನು ರೂಢಿಸಿಕೊಂಡುಬಿಟ್ಟಿದ್ದೇವೆ.

‘ಅಬ್ಬಾ...! ಎಂಥಾ ಸೆಕೆ, ಬೆವರು ಬಸಿಯುತ್ತಿದೆ’ ಎಂದು ಬಿಸಿಲಿಗೆ; ‘ಅಯ್ಯೋ...! ಕೊಚ್ಚಿಕೊಂಡು ಹೋಗುವ ಮಳೆ’ ಎಂದು ಮಳೆರಾಯನಿಗೆ ಹಿಡಿಶಾಪ ಹಾಕುವುದನ್ನು ಎಲ್ಲೆಡೆ ಕಾಣುತ್ತೇವೆ. ಅಂತೆಯೇ ‘ವರುಣನ ಆರ್ಭಟಕ್ಕೆ ಜೀವ ಬಲಿ’ ಎಂದೋ, ‘ರಣ ಬಿಸಿಲಿಗೆ ತತ್ತರಿಸಿದ ಜನ’ ಎಂದೋ ಬಿತ್ತರಿಸುವ ಸುದ್ದಿವಾಹಿನಿಗಳ ಅರಚಾಟವೂ ಸಾಮಾನ್ಯ. ಆದರೆ ಇಂತಹ ಹವಾಮಾನ ವೈಪರೀತ್ಯಕ್ಕೆ ‘ನನ್ನ’ ಕಾಣಿಕೆ ಏನು ಎಂದು ಮನಸ್ಸನ್ನು ಕೇಳಿಕೊಳ್ಳುವ ವ್ಯಕ್ತಿ, ಈ ಅನಾಹುತಕಾರಿ ವಿದ್ಯಮಾನಕ್ಕೆ ‘ನಮ್ಮ’ ಕೊಡುಗೆ ಎಷ್ಟು ಎಂದು ಪ್ರಶ್ನಿಸಿಕೊಳ್ಳುವ ಸಮುದಾಯ ವಿರಳಾತಿ ವಿರಳ.

ಕಳೆದ ಒಂದೇ ತಿಂಗಳಲ್ಲಿ ಅತಿಯಾದ ಬಿಸಿಲು ಮತ್ತು ಅಕಾಲಿಕ ಆಲಿಕಲ್ಲು ಮಳೆ ಉಂಟು ಮಾಡಿದ ಗೊಂದಲ ಗಮನಿಸಿದರೆ ಮೇಲಿನ ಮಾತುಗಳ ತಿರುಳು ಹೆಚ್ಚು ಸ್ಪಷ್ಟವಾಗಿ ಗೋಚರಿಸಬಹುದು. ಋತುಮಾನಕ್ಕೆ ತಕ್ಕಂತೆ ಬಿಸಿಲು, ಮಳೆ, ಚಳಿ ಬಂದುಹೋಗುವುದು ಸಹಜ. ಮುಂಗಾರುಪೂರ್ವ ಮಳೆಯಲ್ಲಿ ಆಲಿಕಲ್ಲು ಬೀಳುವುದೂ ಅಪರೂಪ ವೇನಲ್ಲ. ಆದರೆ ಇವೆಲ್ಲವೂ ವಿಪರೀತಕ್ಕೆ ತಲಪಿರು
ವುದು ವಿಶೇಷ ಮಾತ್ರವಲ್ಲ, ಆಪತ್ತಿನ ಮುನ್ಸೂಚನೆ ಗಳು ಕೂಡ. ಮೊನ್ನೆಯ ಮಳೆಯಲ್ಲಿ ಸುರಿದ ರಾಶಿ ರಾಶಿ ಆಲಿಕಲ್ಲು ಹಿಂದಿನಂತೆ ಸಂಭ್ರಮ ಹೊತ್ತು ತಂದವೆಂದು ಭಾವಿಸಿದರೆ ತಪ್ಪಾಗುತ್ತದೆ.

ಇದೀಗ ಹವಾಮಾನ ವೈಪರೀತ್ಯದ ದುಷ್ಪರಿ ಣಾಮಗಳು ದೂರದ ಮಾರಿಯಾಗಿ ಉಳಿದಿಲ್ಲ; ನಮ್ಮೆಲ್ಲರ ಮನೆ ಬಾಗಿಲಿಗೇ ಬಂದು ನಿಂತಿರುವ, ನಾವೇ ಆಹ್ವಾನಿಸಿಕೊಂಡಿರುವ ಅತಿಥಿಗಳು! ಹದ ಗೆಡುತ್ತಿರುವ ಮಾನವನ ಮತ್ತು ಪ್ರಕೃತಿಯ ಆರೋಗ್ಯ ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಇವೆ. ಗಾಳಿ, ನೀರು ಮತ್ತು ಭೂಮಿ ಮನುಷ್ಯನಿರ್ಮಿತ ಮಾಲಿನ್ಯದಿಂದ ನಲುಗುತ್ತಿವೆ. ಹವಾಮಾನ ವೈಪರೀತ್ಯ ತಂದೊಡ್ಡಿರುವ ಅಪಾಯಕ್ಕೆ ಯಾವ ಜಾತಿ, ಧರ್ಮ, ವರ್ಗ, ದೇಶ ಹೊರತಲ್ಲ ಎಂಬುದು ಗಮನಾರ್ಹ.

ಹಾರ್ವರ್ಡ್ ವಿಶ್ವವಿದ್ಯಾಲಯದ ‘ಸಲಾಟಾ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಅಂಡ್ ಸಸ್ಟೇನೆಬಿಲಿಟಿ’ ವಿಭಾಗವು ಕಳೆದ ಏಪ್ರಿಲ್ ತಿಂಗಳಿನಲ್ಲಿ ಪ್ರಕಟಿಸಿರುವ ‘ಭಾರತದ ತೀವ್ರ ತಾಪಮಾನ ಕುರಿತ ವಿಮರ್ಶಾತ್ಮಕ ನೋಟಗಳು’ ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿರುವ ವಾಸ್ತವಾಂಶಗಳು ಗಮನಾರ್ಹವಾಗಿವೆ. 2047ರ ಹೊತ್ತಿಗೆ ಹವಾಮಾನ ವೈಪರೀತ್ಯ ತಾಳಿಕೊಳ್ಳುವಂತೆ ಭಾರತವನ್ನು ಸಜ್ಜುಗೊಳಿಸುವ ಸಾಧ್ಯತೆಗಳನ್ನು ಕುರಿತು ಚರ್ಚಿಸಲು ಮಾರ್ಚ್ 2025ರಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಫಲವಾಗಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ.

ಹವಾಮಾನಶಾಸ್ತ್ರ, ಸಾರ್ವಜನಿಕ ಆರೋಗ್ಯ, ಔಷಧ, ಕಾರ್ಮಿಕ, ವಾಣಿಜ್ಯ, ಕೃಷಿ ಮತ್ತು ನಗರ
ಯೋಜನೆಯ ತಜ್ಞರು ಭಾಗವಹಿಸಿದ್ದ ಕಾರ್ಯಾಗಾರ ದಲ್ಲಿ ಉಪಖಂಡ ಎದುರಿಸುತ್ತಿರುವ ಹವಾಮಾನ ಸಂಬಂಧಿತ ಸವಾಲುಗಳನ್ನು ಪರಿಶೀಲಿಸಲಾಗಿದೆ. ದೇಶದ ಕೃಷಿಕ್ಷೇತ್ರ, ಜನಾರೋಗ್ಯ, ವಸತಿ ಪ್ರದೇಶ ಮತ್ತು ಕಾರ್ಮಿಕರ ಮೇಲೆ ಶಾಖದ ಅಲ್ಪಾವಧಿ ಮತ್ತು ದೀರ್ಘಾವಧಿ ಪ್ರಭಾವವನ್ನು ಪರಿಶೀಲಿಸಲಾಗಿದೆ. ಮುಂಬರುವ ದಶಕಗಳಲ್ಲಿ ಭಾರತದ ಎದುರು ತೆರೆದುಕೊಳ್ಳುವ ಹವಾಮಾನ ಸಂಬಂಧಿ ಸಮಸ್ಯೆಗಳು ಮತ್ತು ಪರಿಹಾರಗಳ ಅವಲೋಕನ ನಡೆದಿರುವುದು ಮಹತ್ವದ ಬೆಳೆವಣಿಗೆ.

ತಾಪಮಾನ ಏರಿಕೆ ನಮ್ಮೆದುರು ಹೂಂಕರಿಸುತ್ತಿ ರುವ ಕಟು ವಾಸ್ತವ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ ಎಷ್ಟು ಡಿಗ್ರಿಯನ್ನು ತೀವ್ರ ತಾಪಮಾನ
ಎಂದು ಪರಿಗಣಿಸುವುದು? ಮಾನವನ ಆರೋಗ್ಯ, ಅಗತ್ಯ ವ್ಯವಸ್ಥೆಗಳ ಸಂಯೋಜನೆ, ಸುರಕ್ಷತಾ ಕ್ರಮ
ಗಳನ್ನು ಯೋಜಿಸಲು, ತಾಪಮಾನ ಕ್ರಿಯಾಯೋಜನೆ ಗಳನ್ನು ಸಕ್ರಿಯಗೊಳಿಸಲು ‘ತೀವ್ರ ತಾಪಮಾನ’ ಎಂಬ ಸಾಪೇಕ್ಷ ಪದದ ವ್ಯಾಖ್ಯಾನ ಬಹಳ ಮುಖ್ಯ.

ವಿಜ್ಞಾನವು ಸಾಮಾನ್ಯವಾಗಿ 35 ಡಿಗ್ರಿ ವೆಟ್–ಬಲ್ಬ್ ತಾಪಮಾನವನ್ನು ಬದುಕುಳಿಯುವ ಮಿತಿ ಎಂದು ಉಲ್ಲೇಖಿಸುತ್ತದೆಯಾದರೂ, ವಾಸ್ತವದಲ್ಲಿ ಇದು ಅತ್ಯಂತ ಸಂಕೀರ್ಣ ಸಂಗತಿ. ಮನುಷ್ಯರ ಆರೋಗ್ಯದ ಮೇಲಿನ ವ್ಯತಿರಿಕ್ತ ಪರಿಣಾಮಗಳು ಈ ಮಿತಿಗಿಂತ ಬಹಳ ಮುಂಚೆಯೇ ಆರಂಭವಾಗುತ್ತವೆ. ಶಾಖವು ಹೃದಯರಕ್ತನಾಳದ ಒತ್ತಡ, ಮೂತ್ರಪಿಂಡದ ಗಾಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಜವಾದ ಪ್ರಶ್ನೆ ‘ಎಷ್ಟು ಬಿಸಿಲು ತುಂಬಾ ಬಿಸಿ?’ ಎಂಬುದು ಅಲ್ಲ; ಯಾರಿಗೆ ಮತ್ತು ಯಾವುದರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದರ ಮೇಲೆ ‘ತೀವ್ರ ತಾಪಮಾನ’ ನಿರ್ಧಾರವಾಗುತ್ತದೆ.

ಒಬ್ಬ ನಿರ್ಮಾಣ ಕೆಲಸಗಾರ, ಕೊಳೆಗೇರಿಯಲ್ಲಿ ರುವ ವೃದ್ಧ ವ್ಯಕ್ತಿ ಮತ್ತು ಕಚೇರಿ ಕೆಲಸಗಾರ ಸಂಪೂರ್ಣವಾಗಿ ವಿಭಿನ್ನ ಶಾಖದ ಪರಿಣಾಮಗಳನ್ನು ಅನುಭವಿಸುತ್ತಾರೆ. ಭಾರತದಲ್ಲಿ ಸುಮಾರು 38 ಕೋಟಿ ಕಾರ್ಮಿಕರು ಶಾಖಕ್ಕೆ ಒಡ್ಡಿಕೊಳ್ಳುವ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾರೆ. 2030ರ ವೇಳೆಗೆ 20 ಕೋಟಿ ಜನರು ಮಾರಕ ಶಾಖದ ಪರಿಣಾಮಕ್ಕೆ ಈಡಾಗುವ ಸಾಧ್ಯತೆ ಇದೆ. ಸಾರ್ವಜನಿಕ ನೀತಿನಿರೂಪಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆಗೆ ಈಡಾಗುವುದು ಅಸಂಘಟಿತ ವಲಯ. ಅದರಂತೆ ಭಾರತದ ಕಾರ್ಮಿಕ ಸಮುದಾಯ ತಾಪಮಾನ ಏರಿಕೆ ಬಿಕ್ಕಟ್ಟಿನ ಪರಿಣಾಮವನ್ನು ಅತಿಯಾಗಿ ಅನುಭವಿಸುತ್ತದೆ. ದೇಶದಲ್ಲಿ ಸುಮಾರು
ಶೇ 90 ಕಾರ್ಮಿಕರು ಅನೌಪಚಾರಿಕ ವಲಯದಲ್ಲಿ ಬರುತ್ತಾರೆ. ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನು ಗಳು, ಸೌಲಭ್ಯಗಳು ಅವರಿಗೆ ಅನ್ವಯಿಸುವುದೇ ಇಲ್ಲ. ಪರಿಣಾಮವಾಗಿ, ಕಾರ್ಮಿಕರು ತಾಪಮಾನದ ಅಪಾಯ ಮತ್ತು ಹೊಂದಿಕೊಳ್ಳುವ ತಾಪತ್ರಯ ಎರಡೂ ಸವಾಲನ್ನು ಸ್ವೀಕರಿಸಬೇಕಾಗಿದೆ.

1980ರಿಂದ ಭಾರತದಲ್ಲಿ ಕಂಡುಬರುವ ತಾಪಮಾನ ಏರಿಕೆಯ ಪ್ರವೃತ್ತಿಗಳನ್ನು ದೆಹಲಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪೀಟರ್ ಹ್ಯೂಬರ್ಸ್ ಅವಲೋಕಿಸಿದ್ದಾರೆ. ಅವರು ಗುರುತಿಸಿದಂತೆ, ವಾತಾವರಣದಲ್ಲಿ ತೇಲುತ್ತಿರುವ ಸೂಕ್ಷ್ಮ ಕಣಗಳು ಮತ್ತು ನೀರಾವರಿ ಕಾರಣದಿಂದ ಉತ್ತರ ಭಾರತವು ನಿರೀಕ್ಷೆಗಿಂತ ಕಡಿಮೆ ತಾಪಮಾನ ಏರಿಕೆ ದಾಖಲಿಸುತ್ತಿರುವುದು ಕುತೂಹಲಕಾರಿಯಾಗಿದೆ. ಹಾಗಾಗಿ ತಾಪಮಾನ ಏರಿಕೆಯ ಗತಿ ಅಳೆಯಲು ಹಳೆಯ ದಾಖಲೆಗಳು ಯಥಾವತ್ ಅನ್ವಯಿಸಲಾರವು. ಇನ್ನೊಬ್ಬ ತಜ್ಞ ಲ್ಯೂಕಸ್ ವರ್ಗಾಸ್ ಅವರು ವ್ಯವಸಾಯ ಕಾರ್ಯಗಳ ಮೇಲೆ ವಾತಾವರಣದ ಪರಿಣಾಮಗಳನ್ನು ಅಭ್ಯಸಿಸುತ್ತಾ, ಮಳೆ ಮುನ್ಸೂಚನೆ ತಂತ್ರಜ್ಞಾನದ ಪ್ರಗತಿಯ ಹೊರತಾಗಿಯೂ ಕಾರ್ಯರೂಪದಲ್ಲಿ ಹೆಚ್ಚಿನ ಪ್ರಯೋಜನ ಆಗದಿರುವುದನ್ನು ವಿಶ್ಲೇಷಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಬೆಳೆಚಕ್ರಗಳು, ಉತ್ಪಾದಕತೆ ಮತ್ತು ಆದಾಯವನ್ನು ಪ್ರಭಾವಿಸುವ ಸಾಮರ್ಥ್ಯ ಹೊಂದಿರುವ ಅತೀವ ತಾಪಮಾನ ಒಡ್ಡುವ ಸವಾಲು
ಗಳು ಬಹು ಆಯಾಮಗಳನ್ನು ಹೊಂದಿವೆ. ನಗರ
ಗಳು ತೀವ್ರ ಶಾಖದ ವಾತಾವರಣಕ್ಕೆ ಸಿದ್ಧವಾಗುವಂತೆ ‘ಶಾಖ ಕ್ರಿಯಾ ಯೋಜನೆ’ (ಹೀಟ್ ಆಕ್ಷನ್ ಪ್ಲಾನ್) ರೂಪಿಸಲು ಅಂತರರಾಷ್ಟ್ರೀಯ ಸಂಸ್ಥೆಗಳು
ಲಕ್ಷಾಂತರ ಡಾಲರ್ಗಳನ್ನು ಹೂಡಿಕೆ ಮಾಡುತ್ತಿವೆ. ಸದುದ್ದೇಶದ ಈ ಪ್ರಯತ್ನಗಳು ಜಾರಿಯಲ್ಲಿ ದಾರಿತಪ್ಪಿವೆ ಎಂದು ತಜ್ಞರು ವಾದಿಸುತ್ತಾರೆ. ‘ಶಾಖ ಕ್ರಿಯಾ ಯೋಜನೆ’ಗಳೇ ಅಂತಿಮ ಪರಿಹಾರವೆಂದು ಭಾವಿಸದೇ, ಅವುಗಳನ್ನು ಮಾರ್ಗಸೂಚಿಗಳಾಗಿ ಬಳಸಿಕೊಂಡು ವಿಶಾಲ ತಳಹದಿಯ ಕಾರ್ಯಕ್ರಮ ಗಳನ್ನು ರೂಪಿಸಬೇಕೆಂಬುದು ಅವರ ಅಭಿಮತ.

ಹವಾಮಾನ ಬದಲಾವಣೆ ಎಂಬುದು ವ್ಯಕ್ತಿ ಮತ್ತು ವ್ಯವಸ್ಥೆ ಒಟ್ಟಾಗಿ ನಿರ್ವಹಿಸಬೇಕಾದ ಬಿಕ್ಕಟ್ಟು ಎಂಬುದನ್ನು ಎಲ್ಲರೂ ಅರಗಿಸಿಕೊಳ್ಳಬೇಕಿದೆ ಹಾಗೂ ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.