ನಿಮ್ಮ ಹಳೆಯ, ಹಾಳಾದ ಫೋನನ್ನು ಮನೆಯ ಕಿಟಕಿಯಿಂದ ಹೊರಗೆಸೆಯುವುದನ್ನು ಊಹಿಸಿಕೊಳ್ಳಿ. ಆ ಫೋನ್ ನೆಲದ ಮೇಲೆ ಬೀಳುವ ಬದಲು, ಶಾಶ್ವತವಾಗಿ ಗಾಳಿಯಲ್ಲಿ ತೇಲುತ್ತಿರುವುದನ್ನು ಕಲ್ಪಿಸಿ. ಇದು ಬಹಳ ವಿಚಿತ್ರವಾಗಿ ಭಾಸವಾಗುತ್ತಿದೆ ಅಲ್ಲವೇ? ನಮ್ಮ ತಲೆಗಳ ಮೇಲೆ, ನೂರಾರು ಕಿಲೋಮೀಟರ್ ಎತ್ತರದಲ್ಲಿ ಬಹುತೇಕ ಇಂತಹದ್ದೇ ವಿದ್ಯಮಾನ ನಡೆಯುತ್ತಿದೆ. ಆದರೆ, ನಮ್ಮ ತಲೆಗಳ ಮೇಲಿನ ಬಾಹ್ಯಾಕಾಶದಲ್ಲಿ, ಫೋನ್ಗಳ ಬದಲು, ಕಾರ್ಯಾಚರಣೆ ನಿಲ್ಲಿಸಿರುವ ಹಳೆಯ ಉಪಗ್ರಹಗಳು ಮತ್ತು ರಾಕೆಟ್ಗಳ ಬಿಡಿಭಾಗಗಳು ಮೌನವಾಗಿ ಸುತ್ತುತ್ತಿವೆ. ಈ ತೊಂದರೆ ದಿನೇ ದಿನೇ ದೊಡ್ಡದಾಗುತ್ತಿದ್ದು, ಇದಕ್ಕೆ ಭಾರತವೂ ಕೊಡುಗೆ ನೀಡಿದೆ.

ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಅವರು, ಭಾರತಕ್ಕೆ ಸಂಬಂಧಿಸಿದ, ಗುರುತಿಸಬಹುದಾದ 129 ತುಣುಕು ಬಾಹ್ಯಾಕಾಶ ತ್ಯಾಜ್ಯಗಳು ಭೂಮಿಯ ಪರಿಭ್ರಮಣೆ ನಡೆಸುತ್ತಿವೆ ಎಂದಿದ್ದಾರೆ. ಅವುಗಳ ಪೈಕಿ, 49 ಹಳೆಯದಾದ, ಕಾರ್ಯಾಚರಣೆ ನಿಲ್ಲಿಸಿರುವ ಉಪಗ್ರಹಗಳಾಗಿವೆ. ಅವುಗಳನ್ನು ಒಂದು ಕಾಲದಲ್ಲಿ ವಿವಿಧ ಉದ್ದೇಶಗಳಿಗಾಗಿ ಪ್ರಯೋಗಿಸಿದ್ದು, ಈಗ ಅವು ತಮ್ಮ ಕಾರ್ಯಾಚರಣೆ ಪೂರ್ಣಗೊಳಿಸಿ, ಸುಮ್ಮನೇ ಬಾಹ್ಯಾಕಾಶದಲ್ಲಿ ಉಳಿದಿವೆ. ಅವುಗಳನ್ನು ಚಲಾಯಿಸಲು ಯಾವುದೇ ಮಾರ್ಗವಿಲ್ಲ. ಅವುಗಳಿಗೆ ಶಕ್ತಿಯೂ ಉಳಿದಿಲ್ಲ, ಮತ್ತು ಅವುಗಳಿಂದ ಇನ್ನು ಯಾವ ಪ್ರಯೋಜನವೂ ಆಗುವುದಿಲ್ಲ. ಅವುಗಳನ್ನು ಅತ್ಯಂತ ನಿಬಿಡವಾದ ರಸ್ತೆಯಲ್ಲಿ ಪರಿತ್ಯಜಿಸಿ ಹೋಗಿರುವ ವಾಹನಗಳಿಗೆ ಹೋಲಿಸಬಹುದು. ಆದರೆ, ಅಲ್ಲಿ ಅವುಗಳನ್ನು ನಿರ್ವಹಿಸಲು ಯಾವುದೇ ಸಂಚಾರಿ ಪೊಲೀಸರೂ ಇಲ್ಲ.

ಈ 49 ಮೃತ ಉಪಗ್ರಹಗಳ ಪೈಕಿ, 23 ಭೂಮಿಯ ಕೆಳ ಕಕ್ಷೆಯಲ್ಲಿ ಅಥವಾ ಎಲ್ಇಒ ನಲ್ಲಿವೆ. ಈ ಪ್ರದೇಶ ಭೂಮಿಯ ಮೇಲ್ಮೈಯಿಂದ ಅಂದಾಜು 200ರಿಂದ 2,000 ಕಿಲೋಮೀಟರ್ ಎತ್ತರದ ತನಕ ವ್ಯಾಪಿಸಿದೆ. ಬಹುತೇಕ ಸಂವಹನ ಮತ್ತು ಹವಾಮಾನ ಉಪಗ್ರಹಗಳು ಈ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಇನ್ನುಳಿದ 26 ಉಪಗ್ರಹಗಳು ಭೂಸ್ಥಿರ ಕಕ್ಷೆ ಅಥವಾ ಜಿಇಒನಲ್ಲಿದ್ದು, ಭೂಮಧ್ಯ ರೇಖೆಯಿಂದ ಅಂದಾಜು 36,000 ಕಿಲೋಮೀಟರ್ ಎತ್ತರದಲ್ಲಿವೆ. ಇಲ್ಲಿ ಉಪಗ್ರಹಗಳು ಭೂಮಿಯ ಮೇಲಿನ ಒಂದೇ ಸ್ಥಳಕ್ಕೆ ಸ್ಥಿರವಾಗಿ ನೆಲೆಸಿರುತ್ತವೆ. ಸಾಮಾನ್ಯವಾಗಿ ಇದನ್ನು ಟಿವಿ ಪ್ರಸಾರ ನಡೆಸಲು ಮತ್ತು ಹವಾಮಾನ ಮುನ್ಸೂಚನೆ ನೀಡಲು ಬಳಸಲಾಗುತ್ತದೆ. ಇವೆರಡೂ ಪ್ರದೇಶಗಳಲ್ಲಿ ಮೃತ ಉಪಗ್ರಹಗಳನ್ನು ಹೊಂದುವುದು ಗಂಭೀರ ಕಳವಳದ ವಿಚಾರವಾಗಿದ್ದು, ಇವು ಬಾಹ್ಯಾಕಾಶದಲ್ಲೇ ಅತ್ಯಂತ ಸಕ್ರಿಯ ಮತ್ತು ನಿಬಿಡ ಪ್ರದೇಶಗಳಾಗಿವೆ.

ಇನ್ನುಳಿದ 80 ಬಾಹ್ಯಾಕಾಶ ತ್ಯಾಜ್ಯ ತುಣುಕುಗಳ ಪೈಕಿ 40 ಭಾರತದ ಪಿಎಸ್ಎಲ್ವಿ ರಾಕೆಟ್ ಬಿಡಿಭಾಗಗಳಾಗಿವೆ. 4 ಜಿಎಸ್ಎಲ್ವಿ ತುಣುಕುಗಳಾದರೆ, 3 ಹೆಚ್ಚು ತೂಕದ ಎಲ್ವಿಎಂ-3 ರಾಕೆಟ್ನ ಭಾಗಗಳಾಗಿವೆ. ಇದರೊಡನೆ, ಕಕ್ಷೆಯಿಂದ ಕುಸಿದ ಪಿಎಸ್ಎಲ್ವಿ-ಸಿ3 ರಾಕೆಟ್ ಹಂತದ 33 ತುಣುಕುಗಳೂ ಬಾಹ್ಯಾಕಾಶದಲ್ಲಿ ಉಳಿದಿವೆ. ಇವೆಲ್ಲ ಬಾಹ್ಯಾಕಾಶ ತ್ಯಾಜ್ಯಗಳು ವಿಭಿನ್ನ ಗಾತ್ರ, ಮತ್ತು ಆಕಾರಗಳಲ್ಲಿ ಇರುವುದರಿಂದ, ಅವುಗಳನ್ನು ನಿಖರವಾಗಿ ಗಮನಿಸುವುದು ಕಷ್ಟಕರವಾಗಿ, ಅವು ಅತ್ಯಂತ ಅಪಾಯಕಾರಿಯಾಗುತ್ತವೆ.

ಆದರೆ, ಬಾಹ್ಯಾಕಾಶದ ತ್ಯಾಜ್ಯದ ಕುರಿತು ಭೂಮಿಯಲ್ಲಿರುವ ಸಾಮಾನ್ಯ ಮಾನವರಾದ ನಾವು ನೀವು ಏಕೆ ಚಿಂತೆ ಮಾಡಬೇಕು? ಬಾಹ್ಯಾಕಾಶ ತ್ಯಾಜ್ಯಗಳು ಪ್ರತಿ ಸೆಕೆಂಡಿಗೆ ತಲಾ 10 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುತ್ತವೆ. ಅಂದರೆ, ಪ್ರತಿ ಗಂಟೆಗೆ 36,000 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತವೆ! ಈ ಅಸಾಧಾರಣ ವೇಗದಲ್ಲಿ, ಒಂದು ಸಣ್ಣ ಸ್ಕ್ರೂ ಅಥವಾ ಪೈಂಟಿನ ತುಣುಕೂ ಸಹ ಕಾರ್ಯಾಚರಿಸುತ್ತಿರುವ ಉಪಗ್ರಹದ ಮೂಲಕ ಗುಂಡಿನ ರೀತಿಯಲ್ಲಿ ತೂರಿ ಹೋಗಬಲ್ಲದು. ಒಂದು ಕಾರ್ಯಾಚರಿಸುವ ಉಪಗ್ರಹ ಹೀಗೆ ಹಾನಿಗೊಳಗಾದರೆ, ಅಥವಾ ನಾಶವಾದರೆ, ಅದರ ಪರಿಣಾಮವಾಗಿ ಇನ್ನಷ್ಟು ಬಾಹ್ಯಾಕಾಶ ತ್ಯಾಜ್ಯಗಳು ಸೃಷ್ಟಿಯಾಗುತ್ತವೆ. ಇದರಿಂದ ಇನ್ನಷ್ಟು ಉಪಗ್ರಹಗಳಿಗೆ ಅಪಾಯ ಉಂಟಾಗಬಹುದು. ಈ ಸರಣಿ ಪ್ರಕ್ರಿಯೆಯನ್ನು ಕೆಸ್ಲರ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದನ್ನು ಏನಾದರೂ ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಆಗ ಎಲ್ಲ ಕಕ್ಷೆಗಳೂ ಬಳಕೆಗೆ ಯೋಗ್ಯವಲ್ಲದಂತಾಗುತ್ತವೆ. ಹಾಗಾದರೆ, ನಮ್ಮ ಫೋನಿನಲ್ಲಿ ಜಿಪಿಎಸ್ ಸಂಕೇತಗಳು ಬರುವದಿಲ್ಲ, ಟಿವಿಯಲ್ಲಿ ಹವಾಮಾನ ಮುನ್ಸೂಚನೆ ಲಭಿಸುವುದಿಲ್ಲ, ಉಪಗ್ರಹ ಅಂತರ್ಜಾಲ ಸೇವೆ ಲಭಿಸುವುದಿಲ್ಲ. ಪ್ರತಿದಿನವೂ ಲಕ್ಷಾಂತರ ಭಾರತೀಯರು ಇವುಗಳನ್ನು ಅವಲಂಬಿಸಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ, ಭಾರತ ಸರ್ಕಾರ 2024ರಲ್ಲಿ ಡೆಬ್ರಿಸ್ ಫ್ರೀ ಸ್ಪೇಸ್ ಮಿಷನ್ ಅಥವಾ ಡಿಎಫ್ಎಸ್ಎಂ ಅನ್ನು ಜಾರಿಗೆ ತಂದಿತು. ಇದು 2030ರ ವೇಳೆಗೆ ಭಾರತದ ಬಾಹ್ಯಾಕಾಶ ಚಟುವಟಿಕೆಗಳಿಂದ ಶೂನ್ಯ ಬಾಹ್ಯಾಕಾಶ ತ್ಯಾಜ್ಯ ಉಂಟುಮಾಡುವ ದಿಟ್ಟವಾದ ಗುರಿಯನ್ನು ಹೊಂದಿದೆ. ಇದು ಬೆಳೆಯುತ್ತಿರುವ ಭಾರತದ ಬಾಹ್ಯಾಕಾಶ ವಲಯದಡಿ ಕಾರ್ಯಾಚರಿಸುವ ಸರ್ಕಾರಿ ಮತ್ತು ಖಾಸಗಿ ಯೋಜನೆಗಳು ಎರಡಕ್ಕೂ ಅನ್ವಯವಾಗುತ್ತದೆ. ಇಸ್ರೋ ಈಗಾಗಲೇ ನೂತನ ವಿನ್ಯಾಸ ನಿಯಮಗಳನ್ನು ರೂಪಿಸುತ್ತಿದ್ದು, ಇದರ ಅನ್ವಯ ರಾಕೆಟ್ಗಳು ಮತ್ತು ಉಪಗ್ರಹಗಳು ಕಡ್ಡಾಯವಾಗಿ ಹೆಚ್ಚುವರಿ ಇಂಧನ ಒಯ್ಯಲೇಬೇಕು. ಉಪಗ್ರಹದ ಆಯುಷ್ಯ ಮುಗಿದ ಬಳಿಕ, ಈ ಹೆಚ್ಚುವರಿ ಇಂಧನ ಅದನ್ನು ತ್ಯಾಜ್ಯ ಕಕ್ಷೆಗೆ ತಳ್ಳಲು ಅಥವಾ ಭೂಮಿಯ ವಾತಾವರಣದತ್ತ ಸಾಗಿಸಲು ಬಳಕೆಯಾಗುತ್ತದೆ. ಭೂಮಿಯತ್ತ ಬಂದ ತ್ಯಾಜ್ಯ ಸುರಕ್ಷಿತವಾಗಿ ದಹಿಸುತ್ತದೆ. ಇದು ನಿಮ್ಮ ಕೆಲಸವಾದ ನಂತರ ನೀವೇ ಸ್ವಚ್ಛಗೊಳಿಸಿ ಎನ್ನುವ ಸರಳ ನಿಯಮದಡಿ ಕಾರ್ಯಾಚರಿಸುತ್ತದೆ.

ಈ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹೆಜ್ಜೆ 2025ರ ಆರಂಭದಲ್ಲಿ ನಡೆಯಿತು. ಆಗ ಭಾರತ ಯಶಸ್ವಿಯಾಗಿ ಸ್ಪೇಡೆಕ್ಸ್ ಯೋಜನೆಯನ್ನು ಪ್ರದರ್ಶಿಸಿತು. ಈ ಯೋಜನೆಯಡಿ, ಎರಡು ಸಣ್ಣ ಉಪಗ್ರಹಗಳು ಕಕ್ಷೆಯಲ್ಲೇ ಸ್ವಯಂಚಾಲಿತವಾಗಿ ಒಂದಕ್ಕೊಂದು ಡಾಕಿಂಗ್ (ಜೋಡಣೆ) ನಡೆಸಿ, ಬಳಿಕ ಪ್ರತ್ಯೇಕಗೊಂಡವು. ಆ ಕ್ಷಣದಲ್ಲಿ ಮಾನವರು ಅವುಗಳನ್ನು ನೇರವಾಗಿ ನಿಯಂತ್ರಿಸುತ್ತಿರಲಿಲ್ಲ. ಇದೊಂದು ಮಹತ್ವದ ತಂತ್ರಜ್ಞಾನವಾಗಿದ್ದು, ಭವಿಷ್ಯದ ತ್ಯಾಜ್ಯ ನಿವಾರಣಾ ಯೋಜನೆಗಳಲ್ಲಿ ಬಾಹ್ಯಾಕಾಶ ನೌಕೆಗಳು ಮಾನವರನ್ನು ಹೊಂದಿರದೆ, ತಾವೇ ಮೃತ ಉಪಗ್ರಹಗಳ ಬಳಿ ಸಾರಿ, ಅವುಗಳನ್ನು ಹಿಡಿದು, ಅವುಗಳನ್ನು ಬೇರೆಡೆಗೆ ಸಾಗಿಸಬೇಕು. ಇದನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲುತ್ತಿರುವ ರೋಬಾಟ್ ಒಂದಕ್ಕೆ ಅದೇ ರೀತಿ ಚಲಿಸುತ್ತಿರುವ ಚೆಂಡನ್ನು ಹಿಡಿಯಲು ಕಲಿಸುವುದಕ್ಕೆ ಹೋಲಿಸಬಹುದು.

ವಿಜ್ಞಾನಿಗಳು ಕೈ ಚಾಚಿ, ಬಾಹ್ಯಾಕಾಶ ತ್ಯಾಜ್ಯಗಳನ್ನು ಹಿಡಿಯಬಲ್ಲ ರೊಬಾಟಿಕ್ ಕೈಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅದರೊಡನೆ, ತ್ಯಾಜ್ಯಗಳನ್ನು ಭೂಮಿಯತ್ತ ಎಳೆದು, ಅವುಗಳು ವಾತಾವರಣದಲ್ಲಿ ಉರಿದು ಹೋಗುವಂತೆ ಮಾಡುವ ವ್ಯವಸ್ಥೆಗಳನ್ನೂ ತಯಾರಿಸುತ್ತಿದ್ದಾರೆ. ಇದೇ ವೇಳೆ, ಭಾರತದ ಸ್ವಂತ ಬಾಹ್ಯಾಕಾಶ ಕಣ್ಗಾವಲು ವ್ಯವಸ್ಥೆಯಾದ ಪ್ರಾಜೆಕ್ಟ್ ನೇತ್ರಾ ಇವೆಲ್ಲ ತೇಲುತ್ತಿರುವ ವಸ್ತುಗಳ ಮೇಲೆ ನಿರಂತರವಾಗಿ ದೃಷ್ಟಿ ಇಟ್ಟಿದ್ದು, ಸಕ್ರಿಯ ಉಪಗ್ರಹಗಳ ನಿರ್ವಾಹಕರಿಗೆ ಅಪಾಯದ ಮುನ್ಸೂಚನೆ ನೀಡುತ್ತದೆ. ಇದು ಬಾಹ್ಯಾಕಾಶದ ದಟ್ಟಣೆಗೆ ಭಾರತದ ರೇಡಾರ್ ವ್ಯವಸ್ಥೆಯಾಗಿದೆ.

ಭಾರತದ ಮುಂದಿನ ಹಾದಿ ಅಷ್ಟೇನೂ ಸುಲಭವಾಗಿಲ್ಲ. 2030ಕ್ಕೆ ಇನ್ನು ಕೆಲವು ವರ್ಷಗಳು ಮಾತ್ರವೇ ಉಳಿದಿದ್ದು, ಭಾರತ ನೈಜ ಕ್ರಮಕ್ಕಾಗಿ ತಕ್ಷಣವೇ ಯೋಜನೆಗಳನ್ನು ರೂಪಿಸಬೇಕು. ಭಾರತದ ಪ್ರತಿಯೊಂದು ಉಡಾವಣೆಯೂ ಕಟ್ಟುನಿಟ್ಟಿನ ಬಾಹ್ಯಾಕಾಶ ತ್ಯಾಜ್ಯ ಮುಕ್ತ ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಂದು ಹಳೆಯ ಉಪಗ್ರಹದ ಲೆಕ್ಕವನ್ನೂ ಇಡಬೇಕು. ಇದಕ್ಕಾಗಿ ಅಂತಾರಾಷ್ಟ್ರೀಯ ಸಹಕಾರವೂ ಅತ್ಯಂತ ಮುಖ್ಯವಾಗಿದೆ. ಏಕೆಂದರೆ, ಬಾಹ್ಯಾಕಾಶ ಕೇವಲ ಯಾವುದೋ ಒಂದು ದೇಶದ ಸ್ವತ್ತಲ್ಲ.

ಭಾರತ ಇಂದು ಜಗತ್ತಿಗೆ ತಾನು ಚಂದ್ರನನ್ನು ತಲುಪಬಲ್ಲೆ, ಸೂರ್ಯನ ಅಧ್ಯಯನ ನಡೆಸಬಲ್ಲೆ ಎಂದು ಸಾಬೀತುಪಡಿಸಿದೆ. ಈಗ ನಮ್ಮ ಮುಂದಿರುವ ದೊಡ್ಡ ಪರೀಕ್ಷೆ ಎಂದರೆ, ಭಾರತ ನಮ್ಮ ನಂತರದ ತಲೆಮಾರುಗಳಿಗಾಗಿ ಬಾಹ್ಯಾಕಾಶವನ್ನು ಸ್ವಚ್ಛವಾಗಿಯೇ ಇಡಬಲ್ಲದೇ ಎನ್ನುವುದಾಗಿದೆ. ಯಾಕೆಂದರೆ, ನಮ್ಮ ನದಿಗಳು ಮತ್ತು ಅರಣ್ಯಗಳ ರೀತಿಯಲ್ಲೇ ಬಾಹ್ಯಾಕಾಶವೂ ಸಹ ಮಲಿನಗೊಳಿಸಬಾರದ ಆಸ್ತಿಯಾಗಿದ್ದು, ಅದು ನಮ್ಮ ತಲೆಮಾರಿಗೆ ಮಾತ್ರ ಸೀಮಿತವಲ್ಲ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.