2011ರ ಜನಗಣತಿಯ ಪ್ರಕಾರ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ 40 ಭಾಷೆಗಳು ಭಾರತದಲ್ಲಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 60 ಹಾಗೂ 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 122. ಭಾರತದಲ್ಲಿರುವ ಒಟ್ಟು ತಾಯ್ನುಡಿಗಳ ಸಂಖ್ಯೆ 19,569. ಇವುಗಳಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳ ಸಂಖ್ಯೆ 22. ಈಗ ಮನ್ನಣೆ ಪಡೆಯಲು ಹೋರಾಡುತ್ತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ 99. ಈಚಿನ ಅನಧಿಕೃತ ಸುದ್ದಿಯ ಪ್ರಕಾರ, ಈ ಸಂಖ್ಯೆ 135ಕ್ಕೇರಿದೆ. ಆದರೆ, ದೇಶ ಮಾತಾಡುತ್ತಿರುವುದು ಕೇವಲ ಹಿಂದಿಯ ಬಗ್ಗೆ!

ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯನ್ನು 52,83,47,193 ಜನರು ಮಾತಾಡುತ್ತಿದ್ದು (ಶೇ 43.63), ಅದು ಹೆಚ್ಚು ಜನರು ಮಾತಾಡುವ ಭಾಷೆಯಾಗಿದೆ. ಬಂಗಾಲಿ (ಶೇ 8.3), ಮರಾಠಿ (ಶೇ 6.86), ತೆಲುಗು (ಶೇ 6.7), ತಮಿಳು (ಶೇ 5.7), ಗುಜರಾತಿ (ಶೇ 4.58), ಉರ್ದು (ಶೇ 4.19) ಮತ್ತು ಕನ್ನಡ (ಶೇ 3.61) ಸಂಖ್ಯಾದೃಷ್ಟಿಯಿಂದ ಹಿಂದಿಗಿಂತ ಬಹಳ ಕೆಳಗಿವೆ. ಸಂಸ್ಕೃತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821. ಈಗ ನಡೆಯುತ್ತಿರುವ ಜನಗಣತಿಯ ಅಂಕಿ ಅಂಶಗಳು ಲಭಿಸಿದಾಗ ಮೇಲಿನ ಅಂಕಿ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಮುಖ್ಯವಾಗಿ ಸಂಸ್ಕೃತ ಮಾತಾಡುವವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡರೆ, ಹಿಂದಿಯೇತರ ಭಾಷೆಗಳು ಅಲ್ಪ ಪ್ರಮಾಣದ ಏರಿಕೆಯನ್ನು ಕಾಣಲಿವೆ.

ಹಿಂದಿಯ ಜನಪ್ರಿಯತೆಗೆ ಅನೇಕ ಕಾರಣಗಳಿವೆ. ಅದನ್ನು ಗೃಹ ಇಲಾಖೆಯ ಅಡಿಯಲ್ಲಿ ತಂದು, ಉಳಿದ ಭಾಷೆಗಳನ್ನು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಇರಿಸಲಾಗಿದೆ. ಹಿಂದಿಗೆ ಸಂವಿಧಾನದ ಬಲವಾದ ಬೆಂಬಲವಿದ್ದು, 351ನೇ ವಿಧಿಯು ಭಾರತದ ಒಕ್ಕೂಟ ವ್ಯವಸ್ಥೆಯ ಅಭಿವ್ಯಕ್ತಿ ಮಾಧ್ಯಮವಾಗಿ ಹಿಂದಿಯನ್ನು ಉತ್ತೇಜಿಸಲು ಮತ್ತುಅಭಿವೃದ್ಧಿಪಡಿಸಲು ಕೇಂದ್ರಕ್ಕೆ ನಿರ್ದೇಶನ ನೀಡುತ್ತದೆ. ಸಂವಿಧಾನದ ವಿಧಿ 343(1)ರ ಪ್ರಕಾರ, ಸಂಸತ್ತು ಕಾನೂನಿನ ಮೂಲಕ ಕೆಲವು ಉದ್ದೇಶಗಳಿಗೆ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಬಳಸಬಹುದು.

ಐತಿಹಾಸಿಕವಾಗಿ ಹಿಂದಿಯ ಬೆಳವಣಿಗೆ ಕುತೂಹಲಕರವಾಗಿದೆ. 19ನೇ ಶತಮಾನದ ಕೊನೆಯಲ್ಲಿ ಹಿಂದಿಯು ಭಾರತದ ಉತ್ತರ ಭಾಗದಲ್ಲಿ ಜನಪ್ರಿಯವಾಗಿದ್ದ ಉರ್ದು ಮತ್ತು ಇತರ ಭಾಷೆಗಳನ್ನು ಹಿಂದಿಕ್ಕಿ ರಾಷ್ಟ್ರೀಯ ಹೋರಾಟಕ್ಕೆ ಶಕ್ತಿ ತುಂಬುವ ಭಾಷೆಯಾಗಿ ಬೆಳೆಯಿತು. ಆ ಕಾಲದ ವಿದ್ಯಾವಂತರು ಇಂಗ್ಲಿಷ್ ಕಲಿತಿದ್ದರೂ, ಸ್ಥಳೀಯ ಸಾಂಸ್ಕೃತಿಕ ಗುರುತುಗಳನ್ನು ಮರಳಿ ಪಡೆಯುವ ಉದ್ದೇಶದಿಂದ ಹಿಂದಿಯನ್ನೇ ಬಳಸತೊಡಗಿದರು. ಇದರಿಂದಾಗಿ ಹಿಂದೂ ಪುನರುಜ್ಜೀವನವಾದಿ ಚಳವಳಿಗಳಲ್ಲಿಯೂ ಹಿಂದಿ ಸೇರಿಕೊಂಡಿತು.

1875ರಲ್ಲಿ ದಯಾನಂದ ಸರಸ್ವತಿಯವರು ಸ್ಥಾಪಿಸಿದ ಆರ್ಯ ಸಮಾಜವು, ಹಿಂದಿಯನ್ನು ವೈದಿಕ ಪುನರುಜ್ಜೀವನ ಮತ್ತು ಸಾಮಾಜಿಕ ಸುಧಾರಣೆಗಳ ಕೆಲಸಗಳೊಂದಿಗೆ ಜೋಡಿಸಿತು. ಶಿಕ್ಷಣ, ಧಾರ್ಮಿಕ ಪ್ರವಚನ ಮತ್ತು ಸಮುದಾಯ ಸಂಘಟನೆಗಳಲ್ಲಿ ಹಿಂದಿಯ ಬಳಕೆ ಹೆಚ್ಚಾಯಿತು. ಈ ಹಂತದಲ್ಲಿಯೇ ಆಧುನಿಕ ಹಿಂದಿ ಸಾಹಿತ್ಯದ ಪ್ರವರ್ತಕರಾದ ಭರತೇಂದು ಹರಿಶ್ಚಂದ್ರ (1850–85) ಅವರು ವಸಾಹತುಶಾಹಿ ಆಳ್ವಿಕೆಯನ್ನು ಟೀಕಿಸುವ ಮತ್ತು ದೇವನಾಗರಿ ಲಿಪಿಯಲ್ಲಿ ಭಾಷಾ ಶುದ್ಧತೆಯನ್ನು ಒತ್ತಿ ಹೇಳುವ ಕಾವ್ಯ, ನಾಟಕಗಳು ಮತ್ತು ಪ್ರಬಂಧಗಳನ್ನು ಬರೆದು ರಾಷ್ಟ್ರೀಯ ಜಾಗೃತಿಯನ್ನು ಮೂಡಿಸುತ್ತಾ ಹಿಂದಿಯನ್ನು ಮುನ್ನಡೆಸಿದರು. ಅದರ ಪರಿಣಾಮವಾಗಿ, ಆಗ ಶಿಕ್ಷಣ ಪದ್ಧತಿಯಲ್ಲಿ ಜನಪ್ರಿಯವಾಗಿದ್ದ ಪರ್ಷಿಯನ್ ಮತ್ತು ಉರ್ದು ಭಾಷೆಗಳು ಹಿಂದೆ ಸರಿದವು. ಈ ಬೆಳವಣಿಗೆಗಳು ಮೊಘಲ್ ಯುಗದ ಭಾಷಾ ಪರಂಪರೆಗಳು ಮತ್ತು ಬ್ರಿಟಿಷರ ಕಾಲದ ಇಂಗ್ಲಿಷ್, ಎರಡಕ್ಕೂ ಪ್ರತಿರೋಧದ ಸಂಕೇತವಾಗಿ ಹಿಂದಿಯನ್ನು ಬೆಳೆಸಿದವು. ಈ ಹಂತದಲ್ಲಿ ಹಿಂದಿಯನ್ನು ಒಂದು ಪ್ರಮಾಣೀಕೃತ ಭಾಷೆಯನ್ನಾಗಿ ರೂಪಿಸಲು ಸಂಸ್ಕೃತ ಪದಗಳನ್ನು ಹೇರಳವಾಗಿ ಆಮದು ಮಾಡಿಕೊಳ್ಳಲಾಯಿತು. ಅದೇ ಸಂದರ್ಭದಲ್ಲಿ ಭರತೇಂದು ಅವರು ‘ಹಿಂದಿ–ಹಿಂದೂ–ಹಿಂದೂಸ್ತಾನ್’ ಘೋಷಣೆಯನ್ನು ಚಾಲ್ತಿಗೆ ತಂದರು. 1900ರ ಹೊತ್ತಿಗೆ ಪ್ರಮುಖ ಹಿಂದಿ ಪತ್ರಿಕೆಗಳು ಬ್ರಿಟಿಷ್ ಆಳ್ವಿಕೆಯನ್ನು ಶೋಷಕ ಎಂದು ರೂಪಿಸುವ ಧಾರಾವಾಹಿಗಳು ಮತ್ತು ಲೇಖನಗಳನ್ನು ಬಹುವಾಗಿ ಪ್ರಕಟಿಸಿದವು. ಇವೆಲ್ಲವೂ ಇಂಗ್ಲಿಷ್ ಪ್ರವೇಶಿಸಲಾಗದ ಸ್ಥಳಗಳನ್ನು ಸರಾಗವಾಗಿ ಪ್ರವೇಶಿಸಿದವು. ಮಹಾತ್ಮ ಗಾಂಧೀಜಿ ತಮ್ಮ ಅಸಹಕಾರ ಚಳವಳಿಯ (1920–22) ಸಮಯದಲ್ಲಿ ತಮ್ಮ ಬರಹಗಳು ಮತ್ತು ಭಾಷಣಗಳಲ್ಲಿ ಹಿಂದಿಯನ್ನು ಬಳಸಿದರು. ಈ ಭಾಷಾ ಆಯ್ಕೆಯು ವೈವಿಧ್ಯಮಯ ಗುಂಪುಗಳ ನಡುವೆ ಸಮನ್ವಯವನ್ನು ಸಾಧಿಸಿತು. ‘ಕರೋ ಯಾ ಮರೋ’ (ಮಾಡು ಇಲ್ಲವೇ ಮಡಿ), ‘ಭಾರತ್ ಛೋಡೋ’ ಘೋಷಣೆಗಳು ದೇಶದಾದ್ಯಂತ ಪ್ರತಿಧ್ವನಿಸಿದವು. ಹೀಗೆ ಪ್ರಾದೇಶಿಕ ಉಪಭಾಷೆಯಾಗಿದ್ದ ಭಾಷೆಯೊಂದು ರಾಷ್ಟ್ರೀಯ ಭಾಷೆಯಾಗುವತ್ತ ಹೆಜ್ಜೆ ಇಟ್ಟಿತು.

ಸ್ವಾತಂತ್ರ್ಯಾನಂತರವೂ ಹಿಂದಿ ಭಾಷಿಕರು ಹಳೆಯ ಹಾದಿಯಲ್ಲಿ ಹೆಜ್ಜೆ ಇಟ್ಟರು. ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಳ್ಳಲೇ ಇಲ್ಲ. ಸ್ವಾತಂತ್ರ್ಯಚಳವಳಿಯ ಸಮಯದಲ್ಲಿ ಹಿಂದಿಯನ್ನು ಏಕೀಕೃತ ಭಾಷೆಯಾಗಿ ಪ್ರಚಾರ ಮಾಡುವುದು ಐತಿಹಾಸಿಕ ಅಗತ್ಯ ಆಗಿರಬಹುದು. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ಅದುವೇ ಧೋರಣೆ ಮುಂದುವರಿದಾಗ ಹಿಂದಿಯೇತರ ಭಾಷಾ ಗುಂಪುಗಳು ಸಹಜವಾಗಿ ಅಸಮಾಧಾನಗೊಂಡವು. ಹಿಂದಿಯವರಿಗೆ ಹೇಗೆಹಿಂದಿ ಭಾಷೆಯು ಅಸ್ಮಿತೆಯ ಪ್ರಶ್ನೆಯೋ, ಕನ್ನಡಿಗರಿಗೆಕನ್ನಡ, ತಮಿಳರಿಗೆ ತಮಿಳು, ಮಲಯಾಳಿಗರಿಗೆ ಮಲಯಾಳ ಎಂಬಂಥ ಸರಳ ಸತ್ಯವನ್ನು ಹಿಂದಿ ಭಾಷಿಕರು ಮರೆತುಬಿಟ್ಟರು. ಹಿಂದಿಯನ್ನು ಭಾರತದ ರಾಷ್ಟ್ರೀಯ ಭಾಷೆ ಎಂದು ಘೋಷಿಸಲಾಗಿಲ್ಲವಾದರೂ, ಅಂಥ ಸುಳ್ಳುಗಳನ್ನು ಹಿಂದಿಪ್ರೇಮಿಗಳು ಹರಿಯಬಿಟ್ಟರು. 2014ರಿಂದ ಈಚೆಗೆ ಇದು ಇನ್ನೂ ಹೆಚ್ಚಾಯಿತು. ಇಂಥ ಪ್ರಚಾರಗಳ ಪರಿಣಾಮವೇ ಹಿಂದಿ ಭಾಷಿಕರ ಸಂಖ್ಯೆ ತೀವ್ರವಾಗಿ ಏರುತ್ತಿರುವುದು.

ಭಾಷೆಯನ್ನು ಹೇರುವ ಅಪಾಯಗಳನ್ನು ನಾವಿನ್ನೂ ಗಂಭೀರವಾಗಿ ಅರ್ಥಮಾಡಿಕೊಂಡಿಲ್ಲ. ಅನ್ಯಭಾಷಾ ಮಾಧ್ಯಮಗಳಲ್ಲಿನ ಶಿಕ್ಷಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತವಾಗುತ್ತದೆ ಎಂಬುದನ್ನು ಜಗತ್ತಿನ ಎಲ್ಲ ಶಿಕ್ಷಣ ತಜ್ಞರೂ ಒಪ್ಪಿಕೊಂಡಿದ್ದಾರೆ. ಅದು ಮಕ್ಕಳ ಆತ್ಮವಿಶ್ವಾಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಇತರ ಭಾಷೆಗಳು ಮತ್ತು ಉಪಭಾಷೆಗಳನ್ನು ಅಪಾಯಕ್ಕೆ ತಳ್ಳುತ್ತವೆ ಮತ್ತು ಭಾಷಾ ವೈವಿಧ್ಯವನ್ನು ಕಡಿಮೆ ಮಾಡುತ್ತದೆ. ಜನರ ಭಾಷಾಗುರುತುಗಳನ್ನು ಅಳಿಸಿ ಕಟ್ಟುವ ರಾಷ್ಟ್ರೀಯತೆಯು ಟೊಳ್ಳಾಗಿರುತ್ತದೆ.

10ನೇ ತರಗತಿಯಲ್ಲಿ ಮೂರನೇ ಭಾಷೆಯಾಗಿದ್ದ ಹಿಂದಿಯನ್ನು ಗ್ರೇಡ್ಗೆ ಬದಲಿಸಿದ ಶಿಕ್ಷಣ ಇಲಾಖೆಯ ನಿರ್ಧಾರದಿಂದ ದೇಶದ ಕಣ್ಣು ಕರ್ನಾಟಕದತ್ತ ಹೊರಳಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಕುತ್ತು ಬಂದಾಗ ಮೌನವಾಗಿದ್ದವರು ಹಿಂದಿಯ ಪರವಾಗಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಂತಹವರು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದು ವಿನಂತಿ.

1.1968ರಿಂದ ಕರ್ನಾಟಕ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ರಾಜ್ಯಕ್ಕೆ ಏನು ಲಾಭ
ವಾಗಿದೆ? 1968ರಿಂದ ದ್ವಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ತಮಿಳುನಾಡಿಗೆ ಏನು
ನಷ್ಟವಾಗಿದೆ? ಅವರಿಗೆ ಏನಾದರೂ ಲಾಭವಾಗಿದ್ದರೆ, ನಮಗೆ ನಷ್ಟವಾಗಿರಬೇಕಲ್ಲ! ಈ ಕುರಿತು ವಿಶ್ಲೇಷಣೆ ಬೇಕು.

2.ಹಿಂದಿ ಕಲಿತದ್ದರಿಂದ ಎಷ್ಟು ಕನ್ನಡಿಗರಿಗೆ ಉದ್ಯೋಗ ದೊರಕಿದೆ? ಅಂಕಿ–ಅಂಶ ಬೇಕು.

3.1968ರಿಂದಲೇ ಹಿಂದಿ ಓದುತ್ತಾ ಬಂದಿರುವ ಕನ್ನಡಿಗರು ಬ್ಯಾಂಕ್, ಅಂಚೆ ಕಚೇರಿ, ಯುಜಿಸಿ, ಎಚ್ಎಎಲ್, ಪ್ರಸಾರ ಭಾರತಿ ಮೊದಲಾದೆಡೆ ಗಳಲ್ಲಿ ಯಾಕಿಲ್ಲ? ಹಿಂದಿ ಪ್ರದೇಶಗಳಲ್ಲಿ ಅವರ ಸಂಖ್ಯೆ ಇಲ್ಲವೆಂಬಷ್ಟು ಕಡಿಮೆ ಯಾಕೆ?

4.2011ರ ಜನಗಣತಿ ಪ್ರಕಾರ ಹಿಂದಿ ಮಾತಾಡುವ ಮುಖ್ಯ ರಾಜ್ಯಗಳಲ್ಲಿರುವ ಕನ್ನಡಿಗರ ಸಂಖ್ಯೆ 25 ಸಾವಿರ ಮೀರುವುದಿಲ್ಲ (ದೆಹಲಿಯಲ್ಲಿ 11,000, ಉತ್ತರ ಪ್ರದೇಶ 6,000, ಪಂಜಾಬ್ 3,900, ಹರಿಯಾಣ 3,000 ಇತ್ಯಾದಿ). ಉದ್ಯೋಗ ಕಾರಣವಾಗಿ ಅವರೆಲ್ಲ ಅಲ್ಲಿದ್ದಾರೆ, ಹಿಂದಿ ಕಲಿತಿದ್ದಾರೆ. 25,000 ಜನರಿಗಾಗಿ ಕರ್ನಾಟಕದ ಏಳೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿ ಕಲಿತು, ಅದರಲ್ಲಿ ಸುಮಾರು 1 ಲಕ್ಷ ಮಕ್ಕಳು ಫೇಲಾಗಬೇಕೆ?

5.ಆರಂಭಿಕ ಹಂತದಲ್ಲಿ ಹಿಂದಿ ಮೂರನೇ ಭಾಷೆಯಾಗಿದ್ದು, ಪಾಸಾಗುವುದು ಕಡ್ಡಾಯ
ವಿರಲಿಲ್ಲ. ಆಮೇಲೆ ಕಡ್ಡಾಯ ಮಾಡಲಾಯಿತು. ಹಿಂದಿಯನ್ನು ಸರಾಸರಿ ಅಂಕಗಳಿಗೆ ಸೇರಿಸ
ಲಾಯಿತು. ಇದರಿಂದ ಲಕ್ಷಾಂತರ ಮಕ್ಕಳ ಎಸ್ಎಸ್ಎಲ್ಸಿ ಅಂಕಗಳ ಸರಾಸರಿಯಲ್ಲಿ ಕುಸಿತ ಉಂಟಾಯಿತು. ಹಿಂದಿ ಪ್ರೇಮಿಗಳು ಆಗ ಯಾಕೆ ಮಕ್ಕಳ ರಕ್ಷಣೆಗೆ ಬರಲಿಲ್ಲ?

6.ದೆಹಲಿ, ಗುರುಗ್ರಾಮ, ನೋಯಿಡಾ ಮತ್ತು ಫರಿದಾಬಾದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಸುಮಾರು 10 ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲಿಸುಮಾರು ನಾಲ್ಕೂವರೆ ಲಕ್ಷ ತಮಿಳರಿದ್ದಾರೆ. ಅವರು ಶಾಲೆಗಳಲ್ಲಿ ಹಿಂದಿ ಕಲಿತಿಲ್ಲ. ಹಿಂದಿ ಕಲಿತ ಕನ್ನಡಿಗರ ಸಂಖ್ಯೆ ಕೇವಲ ಒಂದು ಸಾವಿರದಷ್ಟು. ಹಾಗಾದರೆ ನಾವೆಲ್ಲಿ ತಪ್ಪಿದ್ದೇವೆ?

7.ಕಲಿತು ಮರೆಯುವುದಕ್ಕೆ ಯಾವುದೇ ಭಾಷೆಯನ್ನುಅಭ್ಯಾಸ ಮಾಡುವ ಅಗತ್ಯ ಇಲ್ಲ. ಅಗತ್ಯ ಇದ್ದವರು ಯಾವ ಭಾಷೆಯನ್ನಾದರೂ ಸ್ವತಂತ್ರವಾಗಿ ಕಲಿಯಲು ಇವತ್ತು ಅವಕಾಶ ಇದೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ದೇಶಗಳ ಗಡಿಗಳು ದುರ್ಬಲವಾಗಿವೆ. ಯುವಕರು ಜಗತ್ತನ್ನು ಸುಲಭವಾಗಿ ಸುತ್ತುತ್ತಿದ್ದಾರೆ. ಸದ್ಯ ನಮ್ಮ ಮಕ್ಕಳು ಕನ್ನಡ ಮತ್ತು ಇಂಗ್ಲಿಷ್ ಚೆನ್ನಾಗಿ ಕಲಿಯಲಿ. ಅವರ ಕಾಲುಗಳು ನೆಲದಲ್ಲಿರಲಿ. ಬಾಹುಗಳು ಆಗಸದೆತ್ತರಕೆ ಚಾಚಿಕೊಳ್ಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.