ಕೆಲವೊಂದು ಬಾರಿ ಕೇವಲ ಒಂದು ಯೋಜನೆ ಒಂದು ಸಂಪೂರ್ಣ ಪ್ರದೇಶದ ಕಥೆಯನ್ನೇ ಬದಲಾಯಿಸಬಲ್ಲದು. ಭಾರತದ ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಯೂ ಸಹ ಇಂತಹದ್ದೇ ಒಂದು ಯೋಜನೆಯಾಗಿದೆ. 10 ಬಿಲಿಯನ್ ಡಾಲರ್ ಮೌಲ್ಯದ ಈ ಬೃಹತ್ ಯೋಜನೆ ಭಾರತದ ದಕ್ಷಿಣದ ತುದಿಯ ದ್ವೀಪವನ್ನು ಒಂದು ಪ್ರಮುಖ ಔದ್ಯಮಿಕ ಮತ್ತು ಮಿಲಿಟರಿ ನೆಲೆಯಾಗಿಸುವ ಉದ್ದೇಶ ಹೊಂದಿದ್ದು, ಈ ಯೋಜನೆ ಸಂಪೂರ್ಣ ಇಂಡೋ - ಪೆಸಿಫಿಕ್ ಪ್ರದೇಶದ ಮೇಲಿನ ಅಧಿಕಾರದ ಸಮತೋಲನವನ್ನೇ ಬದಲಾಯಿಸಬಲ್ಲದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಯೋಜನೆ ಯಾಕೆ ಇಷ್ಟೊಂದು ಮಹತ್ತರವಾದುದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲಿಗೆ ಭೂಪಟದತ್ತ ಒಮ್ಮೆ ಗಮನ ಹರಿಸಬೇಕು. ಗ್ರೇಟ್ ನಿಕೋಬಾರ್ ದ್ವೀಪ ಜಗತ್ತಿನ ಅತ್ಯಂತ ನಿಬಿಡವಾದ ಸಮುದ್ರ ಮಾರ್ಗಗಳಲ್ಲಿ ಒಂದಾದ ಮಲಾಕ್ಕಾ ಜಲಸಂಧಿಯ ಸನಿಹದಲ್ಲಿದೆ. ಮಲಾಕ್ಕಾ ಜಲಸಂಧಿ ಎನ್ನುವುದು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರದ ನಡುವಿನ ಕಿರಿದಾದ ದ್ವಾರದಂತಿದೆ. ಪೂರ್ವ ಏಷ್ಯಾಗೆ ತೈಲ, ಅನಿಲ, ಮತ್ತು ಸರಕುಗಳನ್ನು ಒಯ್ಯುವ ಬಹುತೇಕ ಎಲ್ಲ ಹಡಗುಗಳೂ ಈ ದ್ವಾರದ ಮೂಲಕವೇ ಸಾಗಬೇಕಿದೆ. ಪೂರ್ವ ಏಷ್ಯಾ ದೇಶಗಳು, ಅದರಲ್ಲೂ ಚೀನಾ ಈ ಮಾರ್ಗದ ಮೇಲೆ ಅತಿಯಾದ ಅವಲಂಬನೆ ಹೊಂದಿದ್ದು, ಅದರ ತೈಲ ಮತ್ತು ವ್ಯಾಪಾರದ ಒಂದು ಬಹುದೊಡ್ಡ ಭಾಗ ಇದರ ಮೂಲಕವೇ ನಡೆಯುತ್ತದೆ. ಈ ಅವಲಂಬನೆ ಚೀನಾ ಪಾಲಿಗೆ ಅತ್ಯಂತ ಆತಂಕಕಾರಿಯಾಗಿದ್ದು, ಇದನ್ನು ಕಾರ್ಯತಂತ್ರಜ್ಞರು 'ಮಲಾಕ್ಕಾ ಗೊಂದಲ' ಎಂದು ಕರೆಯುತ್ತಾರೆ.

ಈಗ, ಭಾರತ ಈ ದ್ವಾರದ ಮೆಟ್ಟಿಲಲ್ಲೇ ಇರುವುದನ್ನು ಕಲ್ಪಿಸಿಕೊಳ್ಳಿ. ಗ್ರೇಟ್ ನಿಕೋಬಾರ್ ದ್ವೀಪವೂ ಭಾರತಕ್ಕೆ ಇಂತಹದ್ದೇ ಅವಕಾಶ ಕಲ್ಪಿಸುತ್ತದೆ. ಈ ದ್ವೀಪವನ್ನು ಅಭಿವೃದ್ಧಿ ಪಡಿಸುವುದರಿಂದ, ಭಾರತಕ್ಕೆ ಈ ಮುಖ್ಯ ಜಲಮಾರ್ಗದ ಮೂಲಕ ನಡೆಯುವ ಹಡಗುಗಳ ಸಂಚಾರವನ್ನು ಗಮನಿಸಲು ಮತ್ತು ಅಗತ್ಯ ಬಿದ್ದರೆ ಅದರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಆದರೆ, ಚೀನಾ ಪಾಲಿಗೆ ಇದು ಒಳ್ಳೆಯ ಸುದ್ದಿಯಲ್ಲ. ಚೀನಾದ ಸಂಪೂರ್ಣ ವ್ಯಾಪಾರ ಜೀವನಾಡಿಯನ್ನೇ ಒಂದಷ್ಟು ದೂರದಿಂದ ಭಾರತ ಗಮನಿಸುತ್ತಿರಬಹುದು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಬಹುತೇಕ 700 ಕಿಲೋಮೀಟರ್ ವ್ಯಾಪಿಸಿದ್ದು, ಇದು ಮಲಾಕ್ಕಾ ಜಲಸಂಧಿಯ ಪ್ರವೇಶದ ಬಳಿ ಇರುವ ನೈಸರ್ಗಿಕ ಗೋಡೆಯಂತಿದೆ. ರಕ್ಷಣಾ ತಜ್ಞರಂತೂ ಬಹಳಷ್ಟು ಬಾರಿ ಈ ದ್ವೀಪಗಳು ಭಾರತದ ಪಾಲಿಗೆ 'ನೈಸರ್ಗಿಕ ವಿಮಾನ ವಾಹಕ ನೌಕೆ'ಯಂತಿದೆ ಎಂದು ಬಣ್ಣಿಸುವುದಿದೆ. ಈ ದ್ವೀಪ ಸಮೂಹದ ಕೊನೆಯ ದ್ವೀಪವಾದ ಗ್ರೇಟ್ ನಿಕೋಬಾರ್, ಸಿಂಗಾಪುರ, ಮಲೇಷ್ಯಾದ ಪೋರ್ಟ್ ಕ್ಲಾಂಗ್ ಮತ್ತು ಶ್ರೀಲಂಕಾದ ಕೊಲಂಬೋಗಳಿಂದ ಸಮಾನ ದೂರದಲ್ಲಿದೆ. ಅಂದರೆ, ಭಾರತ ಈ ಮೂರು ವಿದೇಶೀ ಬಂದರುಗಳೊಡನೆ ಸ್ಪರ್ಧಿಸಿ, ಸರಕು ಸಾಗಾಣಿಕೆಗಾಗಿ ಅವುಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬಹುದು.

ಈ ಯೋಜನೆಯ ಪ್ರಯೋಜನಗಳು ಕೇವಲ ಮಿಲಿಟರಿಗೆ ಸೀಮಿತವಾಗಿಲ್ಲ. ಪ್ರಸ್ತುತ ಯೋಜನೆಯಡಿ ಒಂದು ಪ್ರಮುಖ ಬಂದರು, ಒಂದು ವಿಮಾನ ನಿಲ್ದಾಣ, ಒಂದು ವಿದ್ಯುತ್ ಘಟಕ, ಮತ್ತು ಸಂಪೂರ್ಣ ನಗರವನ್ನು ದ್ವೀಪದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದು ಬಾರಿ ಇವೆಲ್ಲ ಸಿದ್ಧಗೊಂಡರೆ, ದ್ವೀಪ ಅಂತಾರಾಷ್ಟ್ರೀಯ ಸರಕು ಸಾಗಾಣಿಕೆಯನ್ನು ಆಕರ್ಷಿಸಿ, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿ, ಈ ಪ್ರದೇಶಕ್ಕೆ ಉತ್ತಮ ರಸ್ತೆ, ಸಮುದ್ರ ಮತ್ತು ವಾಯು ಸಂಪರ್ಕವನ್ನು ಕಲ್ಪಿಸಲಿದೆ. ಅದರೊಡನೆ, ಈ ಪ್ರದೇಶ ಒಂದು ಪ್ರಮುಖ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಕೇಂದ್ರವಾಗಿ, ಒಂದು ಪ್ರಮುಖ ಸಾಗರ ಶಕ್ತಿಯಾಗಬೇಕು ಎನ್ನುವ ಭಾರತದ ದೀರ್ಘಾವಧಿಯ ಕನಸಿಗೆ ಬೆಂಬಲ ನೀಡಬಹುದು.

ಇದರೊಡನೆ ಇಲ್ಲೊಂದು ದೊಡ್ಡ ಚಿತ್ರವೂ ಇದೆ. ಚೀನಾ ಭಾರತದ ಸುತ್ತಲೂ ವಿವಿಧ ದೇಶಗಳಲ್ಲಿ ಬಂದರುಗಳು ಮತ್ತು ನೆಲೆಗಳನ್ನು ನಿರ್ಮಿಸುತ್ತಾ ಸಾಗಿದ್ದು, ಇದನ್ನು 'ಸ್ಟ್ರಿಂಗ್ಸ್ ಆಫ್ ಪರ್ಲ್ಸ್' (ಮುತ್ತಿನ ಹಾರ) ಕಾರ್ಯತಂತ್ರ ಎಂದು ಕರೆಯಲಾಗಿದೆ. ಆದ್ದರಿಂದ, ಭಾರತವೂ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ವೃದ್ಧಿಸಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ಗ್ರೇಟ್ ನಿಕೋಬಾರ್ ಯೋಜನೆಯ ಮೂಲಕ, ಭಾರತ ಚೀನಾದ ಕಾರ್ಯತಂತ್ರಕ್ಕೆ ತನ್ನದೇ ಆದ ಒಂದು ಪ್ರಬಲ ನೆಲೆಯನ್ನು ಚೀನಾಗೆ ಸುಲಭವಾಗಿ ಪ್ರತಿರೋಧಿಸಲು ಸಾಧ್ಯವಿಲ್ಲದ ಸ್ಥಳದಲ್ಲಿ ನಿರ್ಮಿಸಿ ಉತ್ತರಿಸಲಿದೆ.

ಹಾಗೆಂದು ಈ ಯೋಜನೆ ಸುಗಮವಾಗಿ ಸಾಗುತ್ತಿಲ್ಲ. ಪರಿಸರವಾದಿ ಸಂಘಟನೆಗಳು ಈ ಯೋಜನೆಯಿಂದ ಮಳೆಕಾಡುಗಳು, ಹವಳ ದಿಬ್ಬಗಳು, ಮತ್ತು ದ್ವೀಪದ ಆದಿವಾಸಿ ಸಮುದಾಯಗಳ ಮೇಲಾಗುವ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿವೆ. ಈ ವಿಚಾರಗಳನ್ನು ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್) ಯೋಜನೆಗೆ ಕಟ್ಟುನಿಟ್ಟಿನ ಷರತ್ತುಗಳೊಡನೆ ಅನುಮತಿ ನೀಡಿದೆ. ಸರ್ಕಾರಕ್ಕೆ ಗ್ರೇಟ್ ನಿಕೋಬಾರ್ ಯೋಜನೆ ಕೈಗೆತ್ತಿಕೊಳ್ಳುವಾಗ ಜೀವ ವೈವಿಧ್ಯವನ್ನು ರಕ್ಷಿಸುವಂತೆ ಮತ್ತು ಸ್ಥಳೀಯ ಬುಡಕಟ್ಟು ಜನಾಂಗಗಳ ಹಕ್ಕುಗಳನ್ನು ರಕ್ಷಿಸುವಂತೆ ಸೂಚನೆ ನೀಡಿದೆ.

ಸಂಡೇ ಗಾರ್ಡಿಯನ್ ಪತ್ರಿಕೆಯಲ್ಲಿ ಹಿಂಡಾಲ್ ಸೇನ್ ಗುಪ್ತಾ ಅವರ ವರದಿಯ ಪ್ರಕಾರ, ಈ ಯೋಜನೆ ಭಾರತಕ್ಕೆ ಇಂಡೋ - ಪೆಸಿಫಿಕ್ ಪ್ರದೇಶದ ಪ್ರಮುಖ ಸಮುದ್ರ ಮಾರ್ಗಗಳ ಮೇಲೆ ಬಿಗಿಯಾದ ನಿಯಂತ್ರಣ ಒದಗಿಸಿ, ಚೀನಾದ ಸಾಗರ ಕಾರ್ಯತಂತ್ರಕ್ಕೆ ಗಂಭೀರವಾದ ಸವಾಲೊಡ್ಡಬಹುದು. ಸರಳವಾಗಿ ಹೇಳುವುದಾದರೆ, ಮುಂದೆ ಇನ್ನೊಂದು ಬಿಕ್ಕಟ್ಟು ತಲೆದೋರಿದರೆ, ಭಾರತ ಸರಿಯಾದ ಸಮಯದಲ್ಲಿ ಸರಿಯಾದ ಹೆಜ್ಜೆ ಇಟ್ಟರೆ, ಚೀನಾಗೆ ಭಾರತ ಉಸಿರುಗಟ್ಟಿಸಬಹುದು.

ಇದರ ಸಂದೇಶ ಬಹಳ ಸ್ಪಷ್ಟವಾಗಿದೆ. ಗ್ರೇಟ್ ನಿಕೋಬಾರ್ ಯೋಜನೆ ದೂರದ ದ್ವೀಪವೊಂದರಲ್ಲಿ ಕೇವಲ ರಸ್ತೆಗಳು ಮತ್ತು ಬಂದರುಗಳ ನಿರ್ಮಾಣಕ್ಕೆ ಸೀಮಿತವಲ್ಲ. ಈ ಯೋಜನೆ ಜಾಗತಿಕ ವ್ಯಾಪಾರ ಮತ್ತು ಭದ್ರತೆಯಲ್ಲಿ ಭಾರತ ಸರಿಯಾದ ಸ್ಥಾನ ಹೊಂದುವಂತೆ ಮಾಡಲಿದೆ. ಇದು ಭಾರತದ ಸುತ್ತಲಿನ ಸಮುದ್ರಗಳು ಸುರಕ್ಷಿತ, ಮುಕ್ತ, ಮತ್ತು ನಮ್ಮ ಕಣ್ಗಾವಲಿನಲ್ಲೇ ಇರುವುದನ್ನು ಖಾತ್ರಿಪಡಿಸಲಿದೆ. ಒಂದು ವೇಳೆ ಸಮರ್ಥವಾಗಿ ಜಾರಿಗೆ ಬಂದರೆ, ಗ್ರೇಟ್ ನಿಕೋಬಾರ್ ಯೋಜನೆ ಕಳೆದ ಹಲವಾರು ದಶಕಗಳಲ್ಲಿ ಭಾರತ ಕೈಗೊಂಡ ಅತ್ಯಂತ ದಿಟ್ಟ ಹೆಜ್ಜೆಗಳಲ್ಲಿ ಒಂದೆನಿಸಲಿದೆ. ಒಂದು ಸಣ್ಣ ದ್ವೀಪವನ್ನು ಭಾರತ ಭೌಗೋಳಿಕ ರಾಜಕಾರಣದಲ್ಲಿ ತನ್ನ ಅತಿದೊಡ್ಡ ಆಸ್ತಿಯನ್ನಾಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.