ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಇರಾನ್ ತನ್ನ 'ನ್ಯೂಕ್ಲಿಯರ್ ಡಸ್ಟ್' ಅನ್ನು ಅಮೆರಿಕಗೆ ಹಸ್ತಾಂತರಿಸಲು ಸಿದ್ಧವಾಗಿದೆ ಎಂದು ಹೇಳಿಕೆ ನೀಡಿದರು. ಟ್ರಂಪ್ ಹೇಳಿಕೆ ಎಲ್ಲರಿಗೂ ಆಶ್ಚರ್ಯ ಉಂಟುಮಾಡಿತ್ತು. ಟ್ರಂಪ್ ಆಡಿದ ಮಾತು ಬಹಳ ವಿಚಿತ್ರವಾಗಿ, ಒಂದು ರೀತಿಯಲ್ಲಿ ಕಾವ್ಯಾತ್ಮಕವಾಗಿಯೂ ಭಾಸವಾಗಿತ್ತು! ಆದರೆ ಮೇಲ್ನೋಟಕ್ಕೆ ಸರಳವಾಗಿ ಕಾಣುವ ಟ್ರಂಪ್ ಹೇಳಿಕೆಯ ಹಿಂದೆ, ಜಗತ್ತಿನ ಅತ್ಯಂತ ಅಪಾಯಕಾರಿ ವಸ್ತುಗಳಲ್ಲಿ ಒಂದೆನಿಸಿರುವುದೂ ಇದೆ! ಅದುವೇ ಅತ್ಯಂತ ಹೆಚ್ಚಿನ ಮಟ್ಟಕ್ಕೆ ಸಂವರ್ಧಿಸಿದ ಯುರೇನಿಯಂ.

ಹಾಗಾದರೆ ಈ 'ನ್ಯೂಕ್ಲಿಯರ್ ಡಸ್ಟ್' ಎನ್ನುವುದು ನಿಜಕ್ಕೂ ಏನು? ಸಾಮಾನ್ಯ ಧೂಳಿನ ರೀತಿಯಲ್ಲಿ ಇಷ್ಟೊಂದು ಶಕ್ತಿಶಾಲಿ ವಸ್ತುವನ್ನು ಒಂದೆಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಲು ಸಾಧ್ಯವೇ?

ನ್ಯೂಕ್ಲಿಯರ್ ಡಸ್ಟ್ ಎಂದರೆ ನಿಜಕ್ಕೂ ಏನು?

ಇರಾನ್ ಬಳಿ ಇರುವ ಸಂವರ್ಧಿಯ ಯುರೇನಿಯಂ ಸಂಗ್ರಹವನ್ನೇ ಟ್ರಂಪ್ 'ನ್ಯೂಕ್ಲಿಯರ್ ಡಸ್ಟ್' ಎಂಬುದಾಗಿ ಕರೆದಿದ್ದಾರೆ. ಇದೇ ವಸ್ತುವನ್ನು ಪರಮಾಣು ಬಾಂಬಿಗೆ ಇಂಧನವಾಗಿ ಬಳಸಬಹುದು. ಕಳೆದ ಜೂನ್ ತಿಂಗಳಲ್ಲಿ ಅಮೆರಿಕದ ಬಿ-2 ಬಾಂಬರ್ ವಿಮಾನಗಳು ಇರಾನಿನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕವೂ, ನೆಲದಾಳದಲ್ಲಿ ಎಲ್ಲೋ ಯುರೇನಿಯಂ ಅನ್ನು ಸುರಕ್ಷಿತವಾಗಿ ಬಚ್ಚಿಟ್ಟಿದೆ ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.

ತನ್ನ ಸಹಜ ರೂಪದಲ್ಲಿ ಯುರೇನಿಯಂ ಒಂದು ತೂಕವುಳ್ಳ ಲೋಹವಾಗಿದ್ದು, ಸಾಮಾನ್ಯವಾಗಿ ಕಲ್ಲುಗಳ ಒಳಗೆ ಲಭಿಸುತ್ತದೆ. ಆದರೆ, ಇದನ್ನು ಪರಮಾಣು ಇಂಧನ ಅಥವಾ ಆಯುಧಗಳಿಗೆ ಬಳಸುವಂತೆ ಮಾಡಬೇಕಾದರೆ, ಅದನ್ನು 'ಸೆಂಟ್ರಿಫ್ಯೂಜ್'ಗಳು ಎಂದು ಕರೆಯುವ ವಿಶೇಷ ಯಂತ್ರಗಳ ಮೂಲಕ ಸಂಸ್ಕರಿಸಬೇಕಾಗುತ್ತದೆ. ಈ ಯಂತ್ರಗಳು ಯುರೇನಿಯಂ ಅನ್ನು ಅತ್ಯಂತ ಹೆಚ್ಚಿನ ವೇಗದಲ್ಲಿ ಸುತ್ತಿಸಿ, ಬಳಿಕ ಅದನ್ನು ಹೆಚ್ಚು ಶುದ್ಧವಾದ, ಹೆಚ್ಚು ಶಕ್ತಿಶಾಲಿ ರೂಪಕ್ಕೆ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯನ್ನೇ 'ಸಂವರ್ಧನೆ' ಎಂದು ಕರೆಯಲಾಗುತ್ತದೆ.

ಅಮೆರಿಕ ಮತ್ತು ಇಸ್ರೇಲಿನ ವಾಯು ದಾಳಿಗಳಿಗೆ ಮುನ್ನ, ಇರಾನ್ ಬಳಿ 60% ತನಕ ಪುಷ್ಟೀಕರಿಸಿದ 400 ಕೆಜಿಗೂ ಹೆಚ್ಚಿನ ಯುರೇನಿಯಂ ಸಂಗ್ರಹ ಇತ್ತು ಎನ್ನಲಾಗಿತ್ತು. ಇನ್ನು ಬಹುತೇಕ 200 ಕೆಜಿ ಯುರೇನಿಯಂ ಅನ್ನು 20% ತನಕ ಸಂವರ್ಧಿಸಲಾಗಿತ್ತು. ಒಂದು ಪರಮಾಣು ಬಾಂಬ್ ನಿರ್ಮಿಸಬೇಕಾದರೆ, ಇದನ್ನು ಇನ್ನೂ ಕೊಂಚ ಸಂವರ್ಧಿಸಿದರೆ ಸಾಕಾಗುತ್ತದೆ. ಅಂದರೆ, 90% ಶುದ್ಧತೆಗೆ ಸಂವರ್ಧಿಸಿದರೆ ಅದನ್ನು ಬಾಂಬ್ ತಯಾರಿಸಲು ಬಳಸಬಹುದು.

ಇದನ್ನು 'ಡಸ್ಟ್' ಎನ್ನುವುದೇಕೆ?

'ಡಸ್ಟ್' ಎನ್ನುವ ಪದ ಯುರೇನಿಯಂಗೆ ಇರುವ ವೈಜ್ಞಾನಿಕ ಹೆಸರೇನಲ್ಲ. ಈ ಉತ್ಪನ್ನ ಎಷ್ಟು ನುಣುಪಾದ, ಪುಡಿಯ ರೂಪದಲ್ಲಿ ಇರುತ್ತದೆ ಎನ್ನುವುದನ್ನು ಸೂಚಿಸಲು ಟ್ರಂಪ್ ಡಸ್ಟ್ ಎನ್ನುವ ಪದ ಬಳಸಿದ್ದಾರೆ. ಸಂವರ್ಧಿತ ಯುರೇನಿಯಂ ಅನ್ನು ಸಾಮಾನ್ಯವಾಗಿ ಯುರೇನಿಯಂ ಹೆಕ್ಸಾಫ್ಲೋರೈಡ್ ಎನ್ನುವ ಅನಿಲದ ರೂಪದಲ್ಲಿ ಅಥವಾ ಘನ ಪೌಡರ್ ರೂಪದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಇದು ಪುಡಿಯ ರೂಪದಲ್ಲಿ ಅಥವಾ ಸಣ್ಣ ಹರಳುಗಳ ರೂಪದಲ್ಲಿ ಇದ್ದಾಗ, ಇದು ಬಹುತೇಕ ಬೂದು ಅಥವಾ ಹಳದಿ ಬಣ್ಣದ ಧೂಳಿನಂತೆಯೇ ಕಾಣಬಹುದು. ಆದ್ದರಿಂದಲೇ ಡಸ್ಟ್ ಎನ್ನುವ ಪದ ಇದಕ್ಕೆ ಸೂಕ್ತವಾಗಿ ಹೊಂದುತ್ತದೆ. ಹಾಗೆಂದು ಇದು ನಿರಪಾಯಕರ ವಸ್ತು ಖಂಡಿತಾ ಅಲ್ಲ!

ಒಂದು ಮುಷ್ಟಿಯಷ್ಟು ಈ 'ಧೂಳು' ಹಲವು ನಗರಗಳಿಗೆ ಬೆಳಕು ನೀಡಲು ಸಾಕಾಗುತ್ತದೆ. ಒಂದು ವೇಳೆ ತಪ್ಪು ಕೈಗಳಿಗೆ ಇದು ಸೇರಿದರೆ, ಆ ನಗರಗಳನ್ನು ನಾಶಪಡಿಸಲೂ ಅಷ್ಟೇ ಪ್ರಮಾಣದ ಪುಡಿ ಸಾಕಾಗುತ್ತದೆ!

ಇಂತಹ ಉತ್ಪನ್ನವನ್ನು ಸಾಗಿಸುವುದು ಹೇಗೆ?

ಯುರೇನಿಯಂ ವಿಚಾರಗಳು ಗಂಭೀರವಾಗುತ್ತಾ ಸಾಗುವುದೇ ಇಲ್ಲಿಂದ. ಸಂವರ್ಧಿತ ಯುರೇನಿಯಂ ಅನ್ನು ಯಾವುದೋ ಸಾಮಾನ್ಯ ವಸ್ತುವಿನ ರೀತಿಯಲ್ಲಿ ಚೀಲಕ್ಕೆ ತುಂಬಿಸಿಕೊಂಡು ಸಾಗಿಸಲು ಸಾಧ್ಯವಿಲ್ಲ. ಇದನ್ನು ಬಲವಾದ, ಮುಚ್ಚಿಟ್ಟ ಲೋಹದ ಸಿಲಿಂಡರ್ಗಳ ಒಳಗೆ ಸಂಗ್ರಹಿಸಿ ಇಡಲಾಗುತ್ತದೆ. ಇವುಗಳನ್ನು ಸೋರಿಕೆ ತಡೆಗಟ್ಟಲು ಮತ್ತು ವಿಕಿರಣಗಳಿಗೆ ತೆರೆಯುವುದನ್ನು ತಡೆಗಟ್ಟುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸಿಲಿಂಡರ್ಗಳು ದಪ್ಪನೆಯ, ತೂಕದ ವಸ್ತುಗಳಾಗಿವೆ.

ಯುರೇನಿಯಂ ಅನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಸಲುವಾಗಿ ದೇಶಗಳು ವಿಶೇಷ ಸಾಗಾಣಿಕಾ ಟ್ರಕ್ಗಳು, ಸಶಸ್ತ್ರ ವಾಹನಗಳು, ಅಥವಾ ಸಾಗಾಣಿಕಾ ವಿಮಾನಗಳನ್ನು ಬಳಸುತ್ತವೆ. ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ) ಜಾರಿಗೆ ತಂದಿರುವ ಕಟ್ಟುನಿಟ್ಟಿನ ಅಂತಾರಾಷ್ಟ್ರೀಯ ನಿಯಮಗಳ ಅನುಸಾರ, ಯುರೇನಿಯಂ ಸಾಗಾಣಿಕೆಗೆ ಅತ್ಯಂತ ಬಲವಾದ ಭದ್ರತೆ, ಟ್ರ್ಯಾಕಿಂಗ್ ವ್ಯವಸ್ಥೆಗಳು, ಮತ್ತು ನುರಿತ ತಂಡಗಳ ಅಗತ್ಯವಿದೆ. ಇವುಗಳ ಸಾಗಾಣಿಕೆ ನಡೆಸುವಾಗ ಸಾಮಾನ್ಯವಾಗಿ ಸಶಸ್ತ್ರ ಯೋಧರೂ ಜೊತೆಯಾಗುತ್ತಾರೆ.

ಒಂದು ವೇಳೆ ಇರಾನ್ ಈ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಗೆ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದರೆ, ಆಗ ಅಮೆರಿಕ ಮತ್ತು ಐಎಇಎ ತಂಡಗಳು ಹಾನಿಗೊಳಗಾದ ಸುರಂಗಗಳ ಮೂಲಕ ಇನ್ನಷ್ಟು ಆಳಕ್ಕೆ ಅಗೆದು, ಜಾಗರೂಕವಾಗಿ ಯುರೇನಿಯಂ ಸಂಗ್ರಹಿಸಿ, ಪ್ರಮಾಣೀಕೃತ ಸಂಗ್ರಾಹಕಗಳಲ್ಲಿ ಅದನ್ನು ಮುಚ್ಚಿಡಬೇಕು. ಬಳಿಕ ಅತ್ಯಂತ ಹೆಚ್ಚಿನ ರಕ್ಷಣೆಯೊಡನೆ ಅದನ್ನು ಸಾಗಿಸಬೇಕು. ಈ ಪ್ರಕ್ರಿಯೆಗೆ ಹಲವಾರು ತಿಂಗಳುಗಳು, ಅಥವಾ ವರ್ಷಗಳೇ ಬೇಕಾಗಬಹುದು.

ಈ 'ಡಸ್ಟ್' ಎಲ್ಲಿ ಬಚ್ಚಿಡಲಾಗಿದೆ?

ಐಎಇಎ ಮುಖ್ಯಸ್ಥ ರಫೇಲ್ ಗ್ರಾಸಿ ಅವರ ಪ್ರಕಾರ, ಇರಾನಿನ ಪರಮಾಣು ಉತ್ಪನ್ನಗಳನ್ನು ಎರಡು ಪ್ರಮುಖ ಸ್ಥಳಗಳಲ್ಲಿ ಇಡಲಾಗಿದೆ. ಒಂದು ಇಸ್ಫಹಾನ್ ಬಳಿಯ ಭೂಗರ್ಭದ ಸುರಂಗದಲ್ಲಿ ಇರಿಸಿದ್ದರೆ, ಇನ್ನೊಂದು ಜಾಗ ನತಾಂಜ಼್ ಬಳಿಯ ಸಂಗ್ರಹಾಗಾರವಾಗಿದೆ. ಇರಾನಿನ ಯುರೇನಿಯಂ ಸಂಗ್ರಹದ ಒಂದು ದೊಡ್ಡ ಭಾಗವನ್ನು ಒಂದು ಪರ್ವತದ ಕೆಳಗೆ ಬಹಳ ಆಳವಾಗಿ ಬಚ್ಚಿಡಲಾಗಿದ್ದು, ಅಮೆರಿಕ ವಾಯು ದಾಳಿಯಲ್ಲಿ ಅದನ್ನೂ ಗುರಿಯಾಗಿಸಲಾಗಿತ್ತು. ಹೀಗೆ ಬಾಂಬ್ ದಾಳಿಗಳ ನಂತರವೂ, ಕೆಲವು ಸೆಂಟ್ರಿಫ್ಯೂಜ್ಗಳು ಇನ್ನೂ ಕಾರ್ಯಾಚರಿಸುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ತನಗೆ ಬೇಕಾದರೆ ಇರಾನ್ ಹೊಸದಾದ ನೆಲದಾಳದ ವ್ಯವಸ್ಥೆಗಳನ್ನು ನಿರ್ಮಿಸಬಲ್ಲದು ಎಂದು ಅವರು ಹೇಳಿದ್ದಾರೆ.

ಈ ವಿಚಾರ ಜಗತ್ತಿಗೆ ಏಕೆ ಮುಖ್ಯ?

ಇರಾನ್ ಆರಂಭದಿಂದಲೂ ತನ್ನ ಪರಮಾಣು ಯೋಜನೆ ಶಾಂತಿಯುತ ಬಳಕೆಗೆ, ಅದರಲ್ಲೂ ವಿದ್ಯುತ್ ಶಕ್ತಿ ಉತ್ಪಾದನೆಗೆ ಎಂದು ಹೇಳುತ್ತಲೇ ಬಂದಿದೆ. ಆದರೆ, ಇರಾನಿನಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಅಣು ಸ್ಥಾವರ ಬುಶೆಹೆರ್ನಲ್ಲಿದ್ದು, ಅದು ಇರಾನಿನ ವಿದ್ಯುತ್ ಶಕ್ತಿಯ ಕೇವಲ 1% ಮಾತ್ರವೇ ಉತ್ಪಾದಿಸುತ್ತಿದೆ. ಆದ್ದರಿಂದ, ಬಹಳಷ್ಟು ತಜ್ಞರು ಇರಾನಿನ ಶಾಂತಿಯುತ ಬಳಕೆಯ ಉದ್ದೇಶದ ಕುರಿತು ಅನುಮಾನ ವ್ಯಕ್ತಪಡಿಸುತ್ತಾರೆ.

ಒಂದು ವೇಳೆ ಇರಾನ್ ನಿಜಕ್ಕೂ ತನ್ನ 'ನ್ಯೂಕ್ಲಿಯರ್ ಡಸ್ಟ್' ಹಸ್ತಾಂತರಿಸಿದರೆ, ಅದು ನಿಜಕ್ಕೂ ಶಾಂತಿಯತ್ತ ಒಂದು ಬಹುದೊಡ್ಡ ಹೆಜ್ಜೆಯಾಗಲಿದೆ. ಆದರೆ, ಇರಾನ್ ತನ್ನ ಸೆಂಟ್ರಿಫ್ಯೂಜ್ಗಳನ್ನು ಇಟ್ಟುಕೊಳ್ಳುವ ಮತ್ತು ಯುರೇನಿಯಂ ಸಂವರ್ಧನೆ ನಡೆಸುವ ಜ್ಞಾನವನ್ನು ಹೊಂದಿರುವ ತನಕವೂ ಪರಮಾಣು ಶಸ್ತ್ರಾಸ್ತ್ರಗಳ ಭಯ ಸಂಪೂರ್ಣವಾಗಿ ಮರೆಯಾಗಲು ಸಾಧ್ಯವಿಲ್ಲ.

ಸರಳವಾಗಿ ಹೇಳುವುದಾದರೆ, 'ಪರಮಾಣು ಧೂಳು' ಎನ್ನುವ ಪದ ಬಹಳ ಸಣ್ಣ ವಸ್ತುವನ್ನು ಸೂಚಿಸುವಂತೆ ಭಾಸವಾದರೂ, ಜಾಗತಿಕ ಶಾಂತಿಯ ಮೇಲೆ ಅದು ಬೀರಬಲ್ಲ ಪರಿಣಾಮ ಬಹಳ ದೊಡ್ಡದಾಗಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.