ಕರ್ನಾಟಕ ತೆರೆಮರೆಯಲ್ಲೇ ನಿಂತಿರುವಾಗ, ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳು ನಾಗಾಲೋಟದಿಂದ ಮುಂದೋಡುತ್ತಿವೆ. ಸುವರ್ಣಾವಕಾಶಗಳು ಕರ್ನಾಟಕದ ಗಡಿಯಿಂದಾಚೆ ಒಂದೊಂದಾಗಿ ಸಾಗಿ ಹೋಗುವುದನ್ನು ರಾಜ್ಯ ಮೌನವಾಗಿಯೇ ನೋಡುತ್ತಿದೆ. ಕೇವಲ ಈ ವಾರವಷ್ಟೇ ರೋಲ್ಸ್ ರಾಯ್ಸ್ ಮತ್ತು ಎಚ್ಎಎಲ್ ಸಂಸ್ಥೆಗಳ ಜಂಟಿ ಉದ್ಯಮವಾದ ಇಂಟರ್ನ್ಯಾಷನಲ್ ಏರೋಸ್ಪೇಸ್ ಮ್ಯಾನುಫಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಅಥವಾ ಐಎಎಂಪಿಎಲ್ ತಮಿಳುನಾಡಿನ ಹೊಸೂರಿನಲ್ಲಿ ತನ್ನ ಇನ್ನಷ್ಟು ಬೃಹತ್ತಾದ, 12 ಎಕರೆಗಳಷ್ಟು ದೊಡ್ಡ ಕಾರ್ಖಾನೆಯನ್ನು ಆರಂಭಿಸಿತು. ಇದಕ್ಕಾಗಿ ಹೊಸದಾಗಿ ಅಂದಾಜು 30 ಮಿಲಿಯನ್ ಪೌಂಡ್ಗಳಷ್ಟು (ಅಂದಾಜು 320 ಕೋಟಿ ರೂಪಾಯಿ) ಹೂಡಿಕೆ ನಡೆಸಲಾಗಿತ್ತು. ಇದು ಅಲ್ಲಿ ರೋಲ್ಸ್ ರಾಯ್ಸ್ ನಡೆಸುತ್ತಿರುವ ಮೂರನೇ ಸಹ ಮಾಲೀಕತ್ವದ ಏರೋ ಇಂಜಿನ್ ಘಟಕವಾಗಿದೆ. ಈ ಆಧುನಿಕ ಘಟಕದೊಳಗೆ ಕುಶಲ ವೃತ್ತಿಪರರು ಸಣ್ಣದಾದ, ಆದರೆ ಅತ್ಯಂತ ಶಕ್ತಿಶಾಲಿಯಾದ ಕಂಪ್ರೆಸರ್ಗಳು ಮತ್ತು ಟರ್ಬೈನ್ ಬಿಡಿಭಾಗಗಳನ್ನು ನಿರ್ಮಿಸುತ್ತಿದ್ದಾರೆ. ಕಂಪ್ರೆಸರ್ ಎನ್ನುವುದು ಗಾಳಿಯನ್ನು ಗಟ್ಟಿಯಾಗಿ ಒತ್ತಿ ಹಿಡಿದರೆ, ಟರ್ಬೈನ್ ಮಿಂಚಿನ ವೇಗದಲ್ಲಿ ಸುತ್ತಿ, ವಿಮಾನವನ್ನು ಮುಂದಕ್ಕೆ ತಳ್ಳುತ್ತದೆ. ಈ ಬಿಡಿಭಾಗಗಳು ನಿಜಕ್ಕೂ ನಾಗರಿಕ ಮತ್ತು ಯುದ್ಧ ವಿಮಾನಗಳ ಹೃದಯ ಬಡಿತವನ್ನೇ ರೂಪಿಸುತ್ತವೆ.

ಇದರಲ್ಲಿ ಕನ್ನಡಿಗರು ದುಃಖ ಪಡುವಂತದ್ದೇನಿದೆ? ಏನೆಂದರೆ, ಹೊಸೂರು ನಮ್ಮ ರಾಜಧಾನಿ ಬೆಂಗಳೂರಿನಿಂದ ಕೇವಲ ಒಂದು ಗಂಟೆ ಪ್ರಯಾಣದ ದೂರದಲ್ಲಿದೆ. ಸಾವಿರಾರು ಇಂಜಿನಿಯರ್ಗಳು, ತಂತ್ರಜ್ಞರು, ಮತ್ತು ಕಾರ್ಮಿಕರು ಪ್ರತಿದಿನವೂ ನಮ್ಮ ನಗರದಿಂದ ಅಲ್ಲಿಗೆ ತೆರಳುತ್ತಿದ್ದಾರೆ. ಹೊಸೂರಿನ ಕಾರ್ಖಾನೆ ಬೆಂಗಳೂರಿನ ರಸ್ತೆಗಳು, ಮಾರ್ಗಗಳು, ವಸತಿ ಗೃಹಗಳು, ಕಾಲೇಜುಗಳು, ಆಸ್ಪತ್ರೆಗಳು, ಮತ್ತು ಪ್ರತಿಭೆಗಳನ್ನು ಬಳಸುತ್ತಿದೆ. ಆದರೆ, ತೆರಿಗೆ, ಉದ್ಯೋಗ, ಜಿಎಸ್ಟಿ ಮತ್ತು ದೀರ್ಘಾವಧಿಯ ಪ್ರಗತಿ ತಮಿಳುನಾಡಿನ ಜೇಬಿಗೆ ಸೇರುತ್ತಿದೆ. ನಾವು ಮೌನವಾಗಿಯೇ ಬೇರೊಬ್ಬರ ಯಶೋಗಾಥೆಗೆ ಮುನ್ನುಡಿ ಬರೆಯುತ್ತಾ ಕೂತಿದ್ದೇವೆ.

ಇನ್ನು ಆಂಧ್ರ ಪ್ರದೇಶವೂ ಒಂದು ದೊಡ್ಡ ಉದ್ಯಮವನ್ನು ತನ್ನತ್ತ ಸೆಳೆದಿದೆ. ಭಾರತದ ಮುಂದಿನ ಕನಸಿನ ಯಂತ್ರ, ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಅಥವಾ ಎಎಂಸಿಎ ಎನ್ನುವ ನಮ್ಮ ಸ್ವಂತ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವನ್ನು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ಜೋಡಿಸಲಾಗುತ್ತದೆ. ಆಂಧ್ರ ಪ್ರದೇಶದ ಸಚಿವ ಸಂಪುಟ ಇದಕ್ಕಾಗಿ ಡಿಆರ್ಡಿಒಗೆ 600 ಎಕರೆಗಳಷ್ಟು ಭೂಮಿಯನ್ನು ಉಚಿತವಾಗಿ ನೀಡಿದೆ. ಒಟ್ಟು 1 ಲಕ್ಷ ಕೋಟಿ ರೂಪಾಯಿಗಳಷ್ಟು ಭಾರೀ ಹೂಡಿಕೆಯಲ್ಲಿ, ಅಂದಾಜು 140 ಎಎಂಸಿಎ ವಿಮಾನಗಳ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ. ಈ ಘಟಕದ ಶಂಕುಸ್ಥಾಪನೆ ಮೇ 15ರಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಉಪಸ್ಥಿತಿಯಲ್ಲಿ ನೆರವೇರಲಿದೆ. ಈ ಯೋಜನೆಗೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್, ಲಾರ್ಸನ್ ಆ್ಯಂಡ್ ಟೂಬ್ರೊ, ಮತ್ತು ಭಾರತ್ ಫೋರ್ಜ್ನಂತಹ ದೊಡ್ಡ ಸಂಸ್ಥೆಗಳು ಕೈಜೋಡಿಸಲಿವೆ. ಇದರ ಮೊದಲ ಮಾದರಿ 2027ರಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಗಳಿದ್ದು, 2028ರಲ್ಲಿ ತನ್ನ ಮೊದಲ ಹಾರಾಟ ಕೈಗೊಳ್ಳಲಿದೆ. ಎಎಂಸಿಎ 2034ರ ವೇಳೆಗೆ ಭಾರತೀಯ ವಾಯುಪಡೆಯನ್ನು ಸೇರುವ ಗುರಿ ಹೊಂದಿದೆ.

ಯಾಕೆ ಇಂತಹ ಯೋಜನೆಗಳೆಲ್ಲ ಬೇರೆ ರಾಜ್ಯಗಳಿಗೆ ತೆರಳುತ್ತಿವೆ? ಏಕೆಂದರೆ, ಆ ರಾಜ್ಯಗಳ ಮುಖ್ಯಮಂತ್ರಿಗಳು ಬಹಳ ಜಾಗರೂಕರಾಗಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕಳೆದ ವರ್ಷ ಯುಕೆಗೆ ತೆರಳಿ, ಸ್ವತಃ ರೋಲ್ಸ್ ರಾಯ್ಸ್ ವಿಸ್ತರಣೆ ಒಪ್ಪಂದ ಖಾತ್ರಿಪಡಿಸಿಕೊಂಡು ಬಂದಿದ್ದರು. ತಮಿಳುನಾಡು ಇಂತಹ ಯೋಜನೆಗಳಿಗೆ ಕ್ಷಿಪ್ರ ಅನುಮೋದನೆ, ಆಕರ್ಷಕ ಪ್ರೋತ್ಸಾಹ ಧನ, ನಿರಂತರ ವಿದ್ಯುತ್ ಪೂರೈಕೆ, ಸುಗಮ ರಸ್ತೆಗಳು, ಮತ್ತು ಉದ್ಯಮ ಸ್ನೇಹಿ ಮನೋಭಾವವನ್ನು ಒದಗಿಸುತ್ತದೆ. ಇನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹನ್ನೊಂದು ತಿಂಗಳಿಗೂ ಹೆಚ್ಚು ಕಾಲ ಎಎಂಸಿಎ ಯೋಜನೆಯ ಬೆನ್ನತ್ತಿದ್ದರು. ಕೊನೆಗೂ ಕೇಂದ್ರ ಸರ್ಕಾರದ ಜೊತೆಗೆ ಬಿರುಸಾದ ಲಾಬಿ ನಡೆಸಿ, ಅದನ್ನು ಗೆದ್ದುಕೊಂಡಿದ್ದಾರೆ. ಪುಟ್ಟಪರ್ತಿಯ ಶಾಂತ ಏರ್ಸ್ಟ್ರಿಪ್, ಮುಕ್ತ ವಾಯು ಪ್ರದೇಶ ಮತ್ತು ಬೆಂಗಳೂರಿನ ಎಡಿಎಗೆ ಸಾಮೀಪ್ಯದ ಕಾರಣಗಳಿಂದ ಅದನ್ನು ಯೋಜನೆಯ ತಾಣವಾಗಿ ಆರಿಸಲಾಗಿದೆ. ದುರದೃಷ್ಟವಶಾತ್ ಕರ್ನಾಟಕದ ನಾಯಕತ್ವ ಮಾತ್ರ ಇಂತಹ ಯೋಜನೆಗಳನ್ನು ಹೊಂದುವಲ್ಲಿ ಯಾವುದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.

ರೋಲ್ಸ್ ರಾಯ್ಸ್ ಸಂಸ್ಥೆಯ ಹಿರಿಯ ನಾಯಕರಾದ ಶಶಿ ಮುಕುಂದನ್ ಅವರು ಹೊಸೂರು ಘಟಕವನ್ನು ಒಂದು ಜಗತ್ತಿನಾದ್ಯಂತ ಒಂದು ಮಾದರಿ ಕಾರ್ಖಾನೆ ಎಂದಿದ್ದು, ಮುಂದಿನ ವರ್ಷಗಳಲ್ಲಿ ಕಂಪನಿ ಭಾರತದಿಂದ ಹತ್ತು ಪಟ್ಟು ಹೆಚ್ಚು ಉತ್ಪನ್ನಗಳನ್ನು ಹೊಂದಲಿದೆ ಎಂದು ಖಾತ್ರಿಪಡಿಸಿದ್ದಾರೆ. ಐಎಎಂಪಿಎಲ್ ಭಾರತೀಯ ವಾಯುಪಡೆಯ ಜಗ್ವಾರ್ ಯುದ್ಧ ವಿಮಾನಗಳು ಮತ್ತು ಹಾಕ್ ತರಬೇತಿ ವಿಮಾನಗಳಿಗೆ ಬೆಂಬಲ ಒದಗಿಸಲಿದ್ದು, ನಮ್ಮ ಆತ್ಮನಿರ್ಭರ ಭಾರತದ ಕನಸಿಗೆ ಶಕ್ತಿ ತುಂಬಲಿದೆ. ಇಷ್ಟೆಲ್ಲ ಆಗುತ್ತಿರುವಾಗ, ದಶಕಗಳ ಕಾಲ ಭಾರತದ ಏರೋಸ್ಪೇಸ್ ರಾಜಧಾನಿಯಾಗಿ ಮೆರೆದಿದ್ದ ಬೆಂಗಳೂರು ಮೌನವಾಗಿಯೇ ತನ್ನ ಕಿರೀಟ ಕಳೆದುಕೊಳ್ಳುತ್ತಿದೆ.

ಈ ನೋವು ಸಾಮಾನ್ಯ ಕನ್ನಡಿಗ ಕುಟುಂಬಗಳನ್ನೂ ತಟ್ಟುತ್ತಿದೆ. ಮಧ್ಯಮ ವರ್ಗದ ಕುಟುಂಬಗಳ ಆದಾಯ ಹೆಚ್ಚಿಸಬಹುದಾಗಿದ್ದ ಸಾವಿರಾರು ಉನ್ನತ ಸಂಬಳದ ಉದ್ಯೋಗಗಳು ಕರ್ನಾಟಕದ ಗಡಿಗಳಾಚೆ ಹೋಗುತ್ತಿವೆ. ಕರ್ನಾಟಕದ ಕಾಲೇಜುಗಳಲ್ಲಿ ಓದು ಮುಗಿಸುವ ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಹತ್ತಿರದಲ್ಲೇ ಕೆಲಸ ಮಾಡುವ ಕನಸು ಕಾಣುತ್ತಾರೆಯೇ ಹೊರತು ಎಲ್ಲೋ ಸಾಕಷ್ಟು ದೂರದ ಊರುಗಳಲ್ಲಲ್ಲ. ದೊಡ್ಡ ಕಾರ್ಖಾನೆಗಳು ಬೇರೆಲ್ಲೋ ಆರಂಭಗೊಂಡಾಗ, ಚಹಾ ಅಂಗಡಿಗಳು, ಹೊಟೆಲ್ಗಳು, ಕ್ಯಾಬ್ ಚಾಲಕರು, ಮನೆ ಬಾಡಿಗೆಗೆ ನೀಡುವ ಮಾಲೀಕರು, ಹಾಸ್ಟೆಲ್ಗಳು, ಎಲ್ಲರೂ ಅವಕಾಶ ಕಳೆದುಕೊಳ್ಳುತ್ತಾರೆ. ಉತ್ತಮ ಶಾಲೆ ಮತ್ತು ಆಸ್ಪತ್ರೆಗಳಿಗೆ ಹಣ ಒದಗಿಸಬಹುದಾಗಿದ್ದ ದೊಡ್ಡ ಆದಾಯವನ್ನೂ ಇದರಿಂದ ರಾಜ್ಯ ಕಳೆದುಕೊಳ್ಳುತ್ತದೆ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಅಪಾಯ ತಿಳಿದಿದೆ. ಒಂದರ ನಂತರ ಒಂದರಂತೆ ಯೋಜನೆಗಳು ರಾಜ್ಯದಿಂದ ಹೊರ ಸಾಗುವಾಗ, ಗೃಹ ಲಕ್ಷ್ಮಿ, ಶಕ್ತಿ ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ, ಮತ್ತಿತರ ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ಬರಬೇಕು? ಆದರೆ, ನಮ್ಮ ರಾಜ್ಯದ ರಾಜಕೀಯ ಶಕ್ತಿ ಕೇವಲ ಜಾತಿ ಲೆಕ್ಕಾಚಾರ, ಹಳೆಯ ಓಟ್ ಬ್ಯಾಂಕ್ ಆಟದಲ್ಲೇ ತೊಡಗಿದೆ. ಹೂಡಿಕೆಗಳನ್ನು ಸೆಳೆಯುವ, ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಆಸಕ್ತಿಯೂ ಸರ್ಕಾರಕ್ಕಿಲ್ಲ. ನಿಧಾನಗತಿಯ ಭೂ ಪರವಾನಗಿ, ಊಹಿಸಲೂ ಸಾಧ್ಯವಿಲ್ಲದಂತಹ ನಿಯಮಗಳು, ದುರ್ಬಲ ಪ್ರೋತ್ಸಾಹ ಧನಗಳು, ಮತ್ತು ರಾಜಕೀಯ ಕಿತ್ತಾಟಗಳು ಕಂಪನಿಗಳನ್ನು ಮೌನವಾಗಿಯೇ ಕರ್ನಾಟಕದಿಂದ ದೂರ ತಳ್ಳುತ್ತಿವೆ.

ಹಾಗೆಂದು ಕರ್ನಾಟಕದ ಬಳಿ ಇಂದಿಗೂ ಎಚ್ಎಎಲ್, ಇಸ್ರೋ, ಬಿಇಎಲ್, ಡಿಆರ್ಡಿಒ ಪ್ರಯೋಗಾಲಯಗಳು, ಉನ್ನತ ಇಂಜಿನಿಯರಿಂಗ್ ಕಾಲೇಜುಗಳು, ಜಾಗತಿಕ ಗುಣಮಟ್ಟದ ಖಾಸಗಿ ಕಂಪನಿಗಳಂತಹ ಸರಿಸಾಟಿಯಿಲ್ಲದ ಶಕ್ತಿಗಳಿವೆ. ಆದರೆ, ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರೆ, ಈ ಶಕ್ತಿಗಳು ಮೇಲ್ನೋಟಕ್ಕಷ್ಟೇ ಸೀಮಿತವಾಗಿರುತ್ತವೆ. ಕರ್ನಾಟಕ ಸರ್ಕಾರ ತಕ್ಷಣವೇ ಎಚ್ಚರಗೊಳ್ಳುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಉದ್ಯಮಗಳಿಗೆ ಕ್ಷಿಪ್ರ ಅನುಮೋದನೆಗಳು, ಸಿದ್ಧ ಔದ್ಯಮಿಕ ಭೂಮಿ, ಉತ್ತಮ ಪ್ರೋತ್ಸಾಹ ಧನ, ಸ್ಥಿರ ರಾಜಕಾರಣಗಳಿದ್ದರೆ, 'ಕರ್ನಾಟಕ ಮುಕ್ತ, ಸಿದ್ಧವಾಗಿದ್ದು, ನಿಮ್ಮನ್ನು ಸ್ವಾಗತಿಸುತ್ತಿದೆ' ಎನ್ನುವ ಸಂದೇಶ ಜಾಗತಿಕ ಹೂಡಿಕೆದಾರಿಗೆ ರವಾನೆಯಾಗುತ್ತದೆ.

ಪ್ರತಿಯೊಬ್ಬ ಕನ್ನಡಿಗ ಕುಟುಂಬಕ್ಕೂ ಜಾಗತಿಕ ದೈತ್ಯ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವುದು ಹೆಮ್ಮೆ ತರುತ್ತದೆ. ನಮ್ಮ ಯುವ ಜನರಿಗೆ ಮನೆಯಲ್ಲೇ ನೈಜ ಅವಕಾಶಗಳು ಲಭಿಸಬೇಕು. ಭಾರತದ ಪ್ರಬಲ ಆಕಾಶಗಳಿಗೆ ಎಲ್ಲ ರಾಜ್ಯಗಳ ನೆರವೂ ಬೇಕು. ಕರ್ನಾಟಕ ಈಗಲೇ ಕ್ರಮ ಕೈಗೊಂಡು, ಇನ್ನಷ್ಟು ಕನಸುಗಳು ನಮ್ಮ ರಾಜ್ಯದಿಂದ ಹೊರಗೆ ಶಾಶ್ವತವಾಗಿ ಹಾರದಂತೆ ತಡೆಗಟ್ಟಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.