ನೀಟ್ ಪರೀಕ್ಷೆ ನಡೆಸುವಲ್ಲಿನ ವೈಫಲ್ಯವು ಆಡಳಿತಾತ್ಮಕ ಲೋಪವಷ್ಟೇ ಅಲ್ಲ. ಅದು, ಯಾವುದೇ ಕ್ಷೇತ್ರ ಅತಿಯಾದ ಕೇಂದ್ರೀಕರಣಕ್ಕೆ ಒಳಗಾದಾಗ ಸಂಭವಿಸಬಹುದಾದ ಅಪಾಯದ ಸಂಕೇತ. ನೀಟ್ನಂತಹ ಪರೀಕ್ಷಾವ್ಯವಸ್ಥೆಯು ಕೋಚಿಂಗ್ ದಂಧೆಗೆ ಪೂರಕವಾಗಿದ್ದು, ಮಾನವೀಯ ಸಾಧ್ಯತೆಗಳಿಂದ ಶಿಕ್ಷಣವನ್ನು ವಿಮುಖಗೊಳಿಸುತ್ತದೆ....

ದೇಶದಾದ್ಯಂತ ಪ್ರವೇಶ ಪರೀಕ್ಷೆಗಳನ್ನು ಒಂದೇ ವ್ಯವಸ್ಥೆಯಡಿ ನಡೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2017ರಲ್ಲಿ ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ಯನ್ನು (ಎನ್ಟಿಎ) ಸ್ಥಾಪಿಸಿತು. ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಇದನ್ನು ನೀತಿಯನ್ನಾಗಿಸುವ ಮೂಲಕ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಜಾರಿಗೊಳಿಸಿತು. ಭಾಷೆ, ಸಾಮಾಜಿಕ ಮತ್ತು ಪ್ರಾದೇಶಿಕ ವೈವಿಧ್ಯಗಳನ್ನು ಪರಿಗಣಿಸದೆ ಒಂದೇ ಮಾದರಿಯ ಪರೀಕ್ಷೆಗಳನ್ನು ಹೇರುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬ ಟೀಕೆಗಳನ್ನು ಲೆಕ್ಕಿಸದೆ ‘ಒಂದು ಭಾಷೆ, ಒಂದು ದೇಶ, ಒಂದು ಪರೀಕ್ಷೆ’ ಎಂಬ ತನ್ನ ರಾಜಕೀಯ ಅಜೆಂಡಾವನ್ನು ಸರ್ಕಾರ ಜಾರಿಗೊಳಿಸಿತು. ವೈದ್ಯಕೀಯ ಪ್ರವೇಶ
ಕ್ಕಾಗಿ ರೂಪುಗೊಂಡ ರಾಷ್ಟ್ರೀಯ ‘ನೀಟ್’ ಪರೀಕ್ಷೆಯು ರಾಜ್ಯಮಟ್ಟದಲ್ಲಿದ್ದ ವೈವಿಧ್ಯಮಯ ಪ್ರವೇಶ ಪರೀಕ್ಷಾ ವ್ಯವಸ್ಥೆಗಳನ್ನು ಅನೂರ್ಜಿತಗೊಳಿಸಿತು.

ನೀಟ್–2026 ಪರೀಕ್ಷೆ ರದ್ದಾದ ಘಟನೆಯು ಭಾರತದ ಶಿಕ್ಷಣ ವ್ಯವಸ್ಥೆಯ ಆಳವಾದ ಸಾಂಸ್ಥಿಕ ಬಿಕ್ಕಟ್ಟು ಹಾಗೂ ಅನಾರೋಗ್ಯಕರ ಶಿಕ್ಷಣ ಮಾರುಕಟ್ಟೆಯ ಸ್ಪರ್ಧೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ಆರೋಪ
ಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿದ ಕ್ರಮವು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಮತ್ತು ಶೈಕ್ಷಣಿಕ ಆಘಾತ
ಉಂಟುಮಾಡಿದೆ. ವೈದ್ಯಕೀಯ ಶಿಕ್ಷಣದ ಕನಸು ಗಳನ್ನು ಸಾಕಾರಗೊಳಿಸಲು ವರ್ಷಗಳ ಕಾಲ ಪಟ್ಟ ಕಠಿಣ ಪರಿಶ್ರಮ, ಅಪಾರ ಆರ್ಥಿಕ ವೆಚ್ಚ, ನಿರಂತರ ಸ್ಪರ್ಧಾತ್ಮಕ ಒತ್ತಡ ವಿದ್ಯಾರ್ಥಿಗಳ ಬದುಕನ್ನು ಮರುಪರೀಕ್ಷೆಯ ಅನಿಶ್ಚಿತತೆಗೆ ದೂಡಿದೆ. ಈ ವೈಫಲ್ಯ ‘ಎನ್ಟಿಎ’ಯ ಆಡಳಿತಾತ್ಮಕ ಅಥವಾ ಕಾನೂನು ಬಿಗಿ
ಭದ್ರತೆಯ ವೈಫಲ್ಯ ಮಾತ್ರವಲ್ಲ; ಅದು, ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ಅತಿಯಾದ ಕೇಂದ್ರೀಕರಣದ ಜೊತೆಗೆ ಅನಿಯಂತ್ರಿತ ಕೋಚಿಂಗ್ ದಂಧೆ ಆಧಾರಿತ ಸ್ಪರ್ಧಾತ್ಮಕ ಪ್ರಮಾಣೀಕೃತ ಪರೀಕ್ಷೆಗಳಿಗೆ ಜೋತು ಬಿದ್ದು ಶಿಕ್ಷಣವನ್ನು ಲಾಭದಾಯಕ ಉದ್ದಿಮೆಯನ್ನಾಗಿಸಿರುವ ವ್ಯವಸ್ಥೆಯ ವೈಫಲ್ಯವೂ ಆಗಿದೆ.

ಸ್ವಾತಂತ್ರ್ಯಾನಂತರ ಭಾರತೀಯ ಶಿಕ್ಷಣ ಚಿಂತನೆ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ರಾಷ್ಟ್ರ ನಿರ್ಮಾಣದ ಮೌಲ್ಯ
ಗಳಿಂದ ಪ್ರಭಾವಿತವಾಗಿತ್ತು. ವ್ಯಾಪಕ ಅಧ್ಯಯನದ ಮೂಲಕ ಶಿಕ್ಷಣವನ್ನು ಸಮಗ್ರವಾಗಿ ವಿಶ್ಲೇಷಿಸಿದ ಮೊದಲ ಶಿಕ್ಷಣ ಆಯೋಗ (ಕೊಥಾರಿ ಆಯೋಗ, 1966), ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ ಮತ್ತು ಪ್ರಜಾಪ್ರಭುತ್ವವನ್ನು ಬಲವರ್ಧನೆಗೊಳಿಸುವ ಸಾಧನವನ್ನಾಗಿ ಪರಿಗಣಿಸಿತು. ನೆರೆಹೊರೆ ತತ್ತ್ವದ ಸಮಾನ ಶಾಲಾ ವ್ಯವಸ್ಥೆ, ಪ್ರಾದೇಶಿಕ ಅಸಮಾನತೆ ನಿವಾರಣೆ, ಗುಣಾತ್ಮಕ ಶಿಕ್ಷಣ, ಜಿಡಿಪಿಯ ಶೇ 6ರಷ್ಟು ಹೂಡಿಕೆ ಮತ್ತು ಸಾರ್ವಜನಿಕ ಶಿಕ್ಷಣದ ಬಲವರ್ಧನೆ ಪ್ರಮುಖ
ಆಶಯಗಳಾಗಿದ್ದವು. ಶಿಕ್ಷಣವನ್ನು ಮಾನವಹಕ್ಕು ಮತ್ತು ಸರ್ಕಾರದ ಜವಾಬ್ದಾರಿಯಾಗಿ ನೋಡಲಾಯಿತು. ಆದರೆ, 1980ರ ದಶಕದ ಅಂತ್ಯಕ್ಕೆ ಪ್ರಾರಂಭವಾದ ಆರ್ಥಿಕ ಉದಾರೀಕರಣದ ನಂತರ ಶಿಕ್ಷಣ ಕ್ಷೇತ್ರ ಮಾರುಕಟ್ಟೆಗೆ ತೆರೆದುಕೊಂಡಿತು.

ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣದ ಹೊಸ ಸಂಕಥನ ನ್ಯಾಯಾಲಯಗಳ ಮೇಲೂ ಪ್ರಭಾವ ಬೀರಿತು. ಭಾರತದಲ್ಲಿ ಶಿಕ್ಷಣದ ಅಧಿಕೃತ ವ್ಯಾಪಾರೀಕರಣಕ್ಕೆ ನ್ಯಾಯಾಂಗದ ಹಲವು ಪ್ರಮುಖ ತೀರ್ಪುಗಳು ನೆಲೆ ಒದಗಿಸಿದವು. ಸಂವಿಧಾನದ ಮೂಲ ಆಶಯಗಳ ರಕ್ಷಣೆ ಮಾಡಬೇಕಿದ್ದ ನ್ಯಾಯಾಲಯಗಳು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆಯನ್ನು ಸಂವಿಧಾನದ ವಿಧಿ 19(1)ಜಿ) ಅಡಿಯಲ್ಲಿ ‘ವೃತ್ತಿ/ಉದ್ಯೋಗ’ ಎಂದು ವ್ಯಾಖ್ಯಾನಿಸಿದವು (ಟಿಎಂಎಪೈ ಫೌಂಡೇಶನ್ 2002; ಇಸ್ಲಾಮಿಕ್ ಅಕಾಡೆಮಿ 2003; ಪಿ.ಎ. ಇನಾಮದಾರ್ 2005; ಮಾಡರ್ನ್ ಡೆಂಟಲ್ ಕಾಲೇಜು 2016). ಸಮಾಧಾನದ ಸಂಗತಿಯೆಂದರೆ, ನ್ಯಾಯಾಲಯಗಳು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಹಾಗೂ ನಿರ್ವಹಣೆ ಉದ್ಯೋಗ ಎಂದು ಹೇಳುತ್ತಲೇ, ಶಿಕ್ಷಣವನ್ನು ಅಬಾಧಿತ ‘ವ್ಯಾಪಾರ’ ಅಥವಾ ಲಾಭದಾಯಕ ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಲು ನಿರಾಕರಿಸಿದವು. ಖಾಸಗಿ ಅನುದಾನರಹಿತ ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸ್ವಾಯತ್ತತೆ ಇರಬೇಕೆಂದರೂ, ಪ್ರವೇಶ ಮತ್ತು ಶುಲ್ಕದಲ್ಲಿ ಪಾರದರ್ಶಕತೆ, ಪ್ರತಿಭೆ ಮತ್ತು ಶಿಕ್ಷಣದ ಹೆಸರಿನಲ್ಲಿ ಶೋಷಣೆಯ ನಿಯಂತ್ರಣ ಅಗತ್ಯವೆಂದು ಒತ್ತಿ ಹೇಳಿದವು. ಶಿಕ್ಷಣ ವೃತ್ತಿಯಾಗಬಹುದು, ಆದರೆ ಅದನ್ನು ನಿಯಂತ್ರಣರಹಿತ ವ್ಯಾಪಾರ ಅಥವಾ ಲಾಭದಾಯಕ ಉದ್ಯಮವನ್ನಾಗಿ ಮಾಡಲಾಗದು ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿದವು.

ಸಂವಿಧಾನದ ಮೂಲಭೂತ ಹಕ್ಕುಗಳನ್ನು ರಾಜ್ಯ ನಿರ್ದೇಶಕಗಳ ಜೊತೆಗೆ ಸಮೀಕರಿಸಿದ ಸುಪ್ರೀಂ ಕೋರ್ಟ್ ಕೇಶವಾನಂದ ಭಾರತಿ (1973) ಮತ್ತು ಮಿನರ್ವ ಮಿಲ್ಸ್ನ (1980) ತೀರ್ಪುಗಳಲ್ಲಿ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ತ್ವಗಳಿಗೆ ಪರಸ್ಪರ ವಿರೋಧವಿಲ್ಲ, ಅವು ಸಂವಿಧಾನದ ‘ಸಾಮಾಜಿಕ ಕ್ರಾಂತಿ’ಯ ಗುರಿಯನ್ನು ಸಾಧಿಸುವ ಪೂರಕ ಅಂಶಗಳು ಎಂದು ಹೇಳಿತು.

ನ್ಯಾಯಾಲಯಗಳು ಸಾಂವಿಧಾನಿಕ ನೆಲೆಯಲ್ಲಿ ಶಿಕ್ಷಣ ಕ್ಷೇತ್ರ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕೆಂಬುದನ್ನು ಒತ್ತಿಹೇಳಿದರೂ, ಕೇಂದ್ರ
ಮತ್ತು ರಾಜ್ಯ ಸರ್ಕಾರಗಳು ಈ ತತ್ತ್ವಗಳನ್ನು ಸಮಗ್ರವಾಗಿ ಅಳವಡಿಸಿಕೊಂಡು ನೀತಿಗಳನ್ನು ರೂಪಿಸಲು ವಿಫಲವಾದವು. ಒಂದೆಡೆ, ಶಿಕ್ಷಣದ ಮೇಲಿನ ಹೂಡಿಕೆ ಕುಸಿಯುತ್ತಾ ಸಾರ್ವಜನಿಕ ಶಿಕ್ಷಣ ದುರ್ಬಲವಾಗತೊಡಗಿತು; ಮತ್ತೊಂದೆಡೆ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ ನಾಗಾಲೋಟದಿಂದ ಸಾಗಿತು. ಭಾರತದ ಶಿಕ್ಷಣ ಕ್ಷೇತ್ರ ಇಂದು ವಿಶ್ವದ ಅತಿದೊಡ್ಡ ಖಾಸಗಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ವರದಿಯ ಪ್ರಕಾರ, 2030ರ ವೇಳೆಗೆ ಭಾರತದ ಶಿಕ್ಷಣ ಮಾರುಕಟ್ಟೆ ಸುಮಾರು 313 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ (29.95 ಲಕ್ಷ ಕೋಟಿ ರೂಪಾಯಿಗಳು) ತಲಪುವ ಸಾಧ್ಯತೆ ಇದೆ.

ವಿವಿಧ ಮಾರುಕಟ್ಟೆ ಅಧ್ಯಯನಗಳ ಪ್ರಕಾರ, 2024ರಲ್ಲಿ ಭಾರತದ ಕೋಚಿಂಗ್ ಉದ್ಯಮದಮೌಲ್ಯವು ಸುಮಾರು ₹58,000 ಕೋಟಿಗಳಷ್ಟಿದ್ದು, 2028ರ ವೇಳೆಗೆ ಅದು ₹1.3 ಲಕ್ಷ ಕೋಟಿಯನ್ನು ಮೀರುವ ಸಾಧ್ಯತೆ ಇದೆ. ಈ ಉದ್ಯಮವು ವರ್ಷಕ್ಕೆ
ಸುಮಾರು ಶೇ 10–12ರ ವೃದ್ಧಿದರದಲ್ಲಿ ಬೆಳೆಯುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಣೆಗಳು ಸೂಚಿಸುತ್ತವೆ. ಈ ಅನಿರ್ಬಂಧಿತ ವ್ಯಾಪಾರೀಕರಣವು ಪಾಲಕರ ಅಸಹಾಯಕತೆ, ವಿದ್ಯಾರ್ಥಿಗಳ ಆತಂಕ, ನಿರುದ್ಯೋಗ, ಸಾಮಾಜಿಕ ಅಸುರಕ್ಷತೆಯನ್ನು ಬಳಸಿಕೊಳ್ಳುತ್ತಿವೆ. ಸರ್ಕಾರಗಳ ನಿರ್ಲಿಪ್ತತೆಯಿಂದಾಗಿ ಖಾಸಗಿ ಸಂಸ್ಥೆಗಳು ಶಿಕ್ಷಣವನ್ನು ದೊಡ್ಡ ವಾಣಿಜ್ಯ ಮಾರುಕಟ್ಟೆಯಾಗಿ ಪರಿವರ್ತಿಸಿ ಅಧಿಕ ಲಾಭಗಳಿಸಲಾರಂಭಿಸಿವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಮೂಲ ಈ ಕೋಚಿಂಗ್ ದಂಧೆಯ ಲಾಭಕೋರ ವ್ಯವಸ್ಥೆಯ ಒಳಸುಳಿಯಲ್ಲಿದೆ.

ಭಾರತದ ಬಹುತೇಕ ನಗರಗಳಲ್ಲಿ ಶಾಲೆಗಳು ‘ಡಮ್ಮಿ ಶಾಲೆ’ಗಳಾಗಿ ರೂಪಾಂತರಗೊಂಡಿವೆ. ಕೋಚಿಂಗ್ ವ್ಯವಸ್ಥೆ ಭಾರತದ ಶಾಲಾ ಶಿಕ್ಷಣದ ಮೂಲ ಉದ್ದೇಶ ಹಾಗೂ ಸ್ವರೂಪವನ್ನೇ ಬದಲಾಯಿಸಿದೆ. ಶಿಕ್ಷಣವೆಂದರೆ ಕಲಿಕೆ, ಸಾಮಾಜೀಕ
ರಣ, ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜದನಿರ್ಮಾಣ ಎಂಬ ಮೂಲ ಕಲ್ಪನೆಯನ್ನು ಬದಲಾಯಿಸಿ, ಶಿಕ್ಷಣವನ್ನು ತರಬೇತಿ, ಪರೀಕ್ಷೆ, ವೈಯಕ್ತಿಕ ಸಾಧನೆ, ಅಧಿಕ ಗಳಿಕೆ ಹಾಗೂ ಒಬ್ಬರನ್ನು ಸೋಲಿಸಿಮತ್ತೊಬ್ಬರು ಗೆಲ್ಲುವ ಅನಾರೋಗ್ಯಕರ ಸ್ಪರ್ಧೆಯನ್ನಾಗಿ ಪರಿವರ್ತಿಸಿದೆ.

ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಕೋಚಿಂಗ್ ಉದ್ಯಮಕ್ಕೆ ದೊಡ್ಡ ಮಾರುಕಟ್ಟೆಯನ್ನು ನಿರ್ಮಿಸುತ್ತದೆ. ಪರೀಕ್ಷೆಗಳ ಮಾದರಿ ಮತ್ತು ಸ್ವರೂಪ ಪ್ರಮಾಣೀಕೃತವಾಗಿರುವುದರಿಂದ ಕೋಚಿಂಗ್ ಸಂಸ್ಥೆಗಳು ಪ್ರಶ್ನೆಗಳ ಬ್ಯಾಂಕ್, ಮಾದರಿ ಪರೀಕ್ಷೆ, ತಂತ್ರಾಧಾರಿತ ತರಬೇತಿ ಮತ್ತು ಪುನರಾವರ್ತಿತ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತವೆ. ಈ ವ್ಯವಸ್ಥೆಯೊಳಗೆ ದೊಡ್ಡ ಪ್ರಮಾಣದ
ಮಧ್ಯವರ್ತಿಗಳು, ಅಂತರರಾಜ್ಯ ಅಕ್ರಮ ಜಾಲಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳಂತಹ ಅಕ್ರಮ ಚಟುವಟಿಕೆಗಳು ಬೆಳೆಯಲು ಅನುಕೂಲಕರ ವಾತಾ
ವರಣ ನಿರ್ಮಾಣವಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ಸೋರಿಕೆಗಳು ಬರೀ ವೈಯಕ್ತಿಕ ಅಪರಾಧಗಳಾಗಿರದೆ, ಶಿಕ್ಷಣದ ವ್ಯಾಪಾರೀಕರಣ ಮತ್ತು ಅತಿಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆಯ ರಾಚನಿಕ ಪರಿಣಾಮಗಳಾಗಿವೆ. ಒಂದು ಬಗೆಯ ಮಾಫಿಯಾ ಕೇಂದ್ರಗಳಾಗಿವೆ.

ನೀಟ್ ಬಿಕ್ಕಟ್ಟು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಅತಿಯಾದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಂದ್ರೀಕರಣದ ಮೂಲಕ ಮಾರುಕಟ್ಟೆಕೇಂದ್ರಿತ ಪರಿವರ್ತನೆಯ ಸಂಕೇತವಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಮರ್ಪಕವಾಗಿ ಬಲಪಡಿಸದೆ, ಗ್ರಾಮೀಣ–ನಗರ, ವರ್ಗ, ಲಿಂಗ, ಭಾಷಾ ಮತ್ತು ಪ್ರಾದೇಶಿಕ ಅಸಮಾನತೆಗಳನ್ನು ನಿವಾರಿಸದೆ, ಕೇಂದ್ರೀಕೃತ ಪ್ರವೇಶ ಪರೀಕ್ಷೆಗಳ ಮೂಲಕ ‘ಪ್ರತಿಭೆ’ಯನ್ನು ಅಳೆಯುವ ಹಾಗೂ ಆಯ್ಕೆ ಮಾಡುವ ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯ
ಗಳಿಗೆ ವಿರುದ್ಧವಾಗಿದೆ. ಇಂತಹ ವ್ಯವಸ್ಥೆ ಶಿಕ್ಷಣವನ್ನು ಹಕ್ಕಾಗಿ ಕಾಣುವುದಕ್ಕಿಂತ ಸ್ಪರ್ಧಾತ್ಮಕ ಮಾರುಕಟ್ಟೆಯ ವಸ್ತುವಾಗಿ ಮತ್ತು ವೈಯುಕ್ತಿಕ ಲಾಭದ ಸಾಧನವನ್ನಾಗಿ ಪರಿವರ್ತಿಸುತ್ತದೆ. ಶಿಕ್ಷಣವನ್ನು ಸಾರ್ವಜನಿಕ ಒಳಿತಿನ ಮತ್ತು ಸಾಮಾಜಿಕ ನ್ಯಾಯದ ಸಾಧನವಾಗಿ ಪುನರ್ವ್ಯಾಖ್ಯಾನಿಸುವುದು ತುರ್ತು ಅಗತ್ಯವಾಗಿದೆ. ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವುದು, ಪ್ರಾದೇಶಿಕ ಹಾಗೂ ಭಾಷಾ ವೈವಿಧ್ಯವನ್ನು ಗೌರವಿಸುವುದು, ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಉದ್ಯಮಗಳ ಮೇಲಿನ ಕಟ್ಟುನಿಟ್ಟಿನ ನಿಯಂತ್ರಣವನ್ನು ಜಾರಿಗೊಳಿಸುವುದು ಸಂವಿಧಾನದ ದೃಷ್ಟಿಯಿಂದ ನಿರ್ಣಾಯಕವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.