ಸೌಂದರ್ಯ ನೋಡಿ ನೆಟ್ಟ ಹೂಗಿಡದ ಬಳ್ಳಿಯೊಂದು ಇಂದು ತೋಟವನ್ನೆಲ್ಲ ಆಕ್ರಮಿಸಿಕೊಂಡಿದೆ. ಕಳೆಗಿಡಗಳನ್ನು ಮಾತ್ರವಲ್ಲ, ಔಷಧಿ ಗಿಡಗಳನ್ನೂ ನೆಲಸಮ ಮಾಡಿದೆ. ಈಗ ಏನು ಮಾಡಿದರೂ ಅದನ್ನು ನಾಶಮಾಡಲು ಆಗುತ್ತಿಲ್ಲ.

ವೇಷ ನವನವೀನವಾಗಿದ್ದರೂ ಆಕ್ರಮಣ ಎನ್ನುವುದು ಯಾವ್ಯಾವ ರೀತಿಯಲ್ಲಿರುತ್ತದಲ್ಲ ಎಂದು ಅಚ್ಚರಿಯಾಗುತ್ತದೆ. ಜೊತೆಗೆ ಈ ಆಕ್ರಮಣಗಳ ಕಾರಣ ಮತ್ತು ಪರಿಣಾಮಗಳು ಅದೇ ಹಳೆಯವೇ ಆಗಿರುತ್ತದೆ. ನೂರಿನ್ನೂರು ವರ್ಷಗಳ ಹೋರಾಟದಿಂದ ಬಿಡುಗಡೆ ಪಡೆದುಕೊಂಡ ಫಲಾನುಭವಿಗಳು ಐವತ್ತು ಅರವತ್ತು ವರ್ಷಗಳಲ್ಲೇ ಮಹಾಮರೆವೆಗೆ ತುತ್ತಾಗಿಬಿಡುವುದು ಇನ್ನೊಂದು ವೈಚಿತ್ರ್ಯ. ಸಂಪತ್ತಿನ ಮೇಲಿನ ಹಿಡಿತ ಬಿಗಿಯಾಗಲು ಯಾವ ಮಾಯಾವೇಷದಲ್ಲಿ ಬಂದು ಯಾವಾಗ ಕುತ್ತಿಗೆ ಹಿಡಿದಿದ್ದಾರೆ ಎಂದೇ ತಿಳಿಯದ ರೀತಿಯಲ್ಲಿ ನಮ್ಮ ಬೆನ್ನ ಹಿಂದೆ ನೆರಳಿನಂತೆ ದಾಳಿಕೋರರು ನಿಂತಿರುತ್ತಾರೆ. ಅವರು ಎಲ್ಲ ಖದೀಮತನವನ್ನೂ ‘ಅದಿರೋದೇ ಹಾಗೆ’ ಎಂಬಂತೆ ತೆಳುಗೊಳಿಸುತ್ತಾ ಹೋಗುತ್ತಾರೆ.

ನಾವಿವತ್ತು ಇಂಟರ್ನೆಟ್, ಎಐ ಅನ್ನು ಒಂದೆಡೆ ಪ್ರೀತಿಸುತ್ತಾ, ಇನ್ನೊಂದೆಡೆ ದೂಷಿಸುತ್ತಾ ಇದ್ದೇವಲ್ಲ, ಇದನ್ನು ಆಗುಮಾಡಿದವರು ಯಾರು? ಯಾಕೆ? ಇದನ್ನು ಅನಿವಾರ್ಯಗೊಳಿಸಿದ್ದು ಹೇಗೆ? ಎಲ್ಲಿ? ಇದರ ಮೂಲಕ ಜಗತ್ತಿನ ಮನುಷ್ಯರೆಲ್ಲಾ ಹತ್ತಿರವಾಗುತ್ತಾರೆ ಎನ್ನುತ್ತಲೇ ಮನುಷ್ಯ ಸಂಬಂಧಗಳು ದೂರವಾಗಿರುವುದು ಯಾವ ಮಾಯಕದಲ್ಲಿ? ಇದರ ಹಿಂದಿರುವುದು ಯಂತ್ರತಂತ್ರಗಳೆ? ಕುತಂತ್ರಗಳೆ? ಇವುಗಳನ್ನು ಮನುಷ್ಯರ ವಿರುದ್ಧ ನಿಯಂತ್ರಿಸುತ್ತಿರುವವರು ಇವುಗಳ ಮೂಲಕ ಮತ್ತೆ ಚಲಾವಣೆಗೆ ತರುತ್ತಿರುವುದು ಅದೇ ದ್ವೇಷಾಧಾರಿತ, ತಾರತಮ್ಯವನ್ನೇ ತಳಪಾಯವಾಗಿಸಿಕೊಂಡಿರುವ, ಗುಲಾಮರ ಸೃಷ್ಟಿಯೇ ಪರಮ ಧ್ಯೇಯವಾದ ಪ್ರಪಂಚವನ್ನೇ ಅಲ್ಲವೇ? ಕರುಣೆ, ಮೈತ್ರಿಗಳನ್ನು ಹನನ ಮಾಡುವ ಮೂಲಕ, ಮೂರ್ಖರನ್ನು ಪ್ರಾಜ್ಞರೆಂಬಂತೆ ಬಿಂಬಿಸುವ ಮೂಲಕ, ದಾಳಿಕೋರರನ್ನು ನಾಯಕರೆಂಬಂತೆ ಹೊತ್ತುಕೊಳ್ಳುವ ಮೂಲಕ ಹತಾರುಗಳನ್ನು ಹರಿತಗೊಳಿಸಲಾಗುತ್ತದೆ. ಸರಳತೆಎಂದಿಗೂ ಆಕರ್ಷಕವಾದುದಲ್ಲ. ಗುಲಾಮಿತನದಿಂದ ಬಿಡುಗಡೆಗೊಂಡವರಿಗೂ ದೌಲತ್ತಿನ ಹಪಹಪಿ ಹುಟ್ಟಿಸಿಬಿಟ್ಟರೆ ಆಕ್ರಮಣ ಸುಲಭ.

ಇಪ್ಪತ್ತೊಂದನೇ ಶತಮಾನದ ಕಾಲು ದಶಕಗಳು ಮುಗಿದ ಈ ಹೊತ್ತಿನಲ್ಲಿ ಕಾಮ, ಮದ ಮತ್ತು ಮತ್ಸರಗಳೇ ಮೌಲ್ಯಗಳು ಎಂಬುದನ್ನು ದಾಟಿಸಿಯಾಗಿದೆ. ನಂಜು ಯಾವ್ಯಾವ ರೂಪದಲ್ಲಿ ಯಾರ್ಯಾರನ್ನು ಆವರಿಸಿಕೊಂಡಿದೆ ಎಂದು ಹೇಳಲಾಗುವುದಿಲ್ಲ. ಬೆಂಗಳೂರಿನಲ್ಲಿ ಹೋದ ತಿಂಗಳು ನಡೆದ ಒಂದು ಘಟನೆ ನನ್ನನ್ನು ಈಗಲೂ ಕಾಡುತ್ತಿದೆ. ಯುವತಿಯೊಬ್ಬಳು ಪ್ರೇಮ ನಿವೇದನೆಯ ಹೆಸರಿನಲ್ಲಿ ಯುವಕನ ಕೈಕಾಲು ಕಟ್ಟಿ ಪೆಟ್ರೋಲ್ ಸುರಿದುಸುಟ್ಟು ಹಾಕಿದಳು. ಅವಳಿಗೆ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು? ಇದು ಯಾಕೆ ಹೀಗಾಯಿತು? ಜಗತ್ತಿನ ಯಾವ ಭಾಗದಲ್ಲೂ ಈ ರೀತಿಯ ಪ್ರೇಮನಿವೇದನೆ ಅಧಿಕೃತವಾಗಿ ಇಲ್ಲ. ಆಕೆ ನಂಬಿಸಿದಳು. ಅವ ಮೂರ್ಖ, ನಂಬಿದ. ಅವ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದವಳು ಅವನನ್ನೂ ಕೊಂದು ಸಾಯೋಣ ಅಂದುಕೊಂಡಿದ್ದಳಂತೆ. ಅವನ ‘ಕೇಂದ್ರ’ ಬಿಟ್ಟು ಅವಳಿಗೆ ಇನ್ನೊಂದು ಪ್ರಪಂಚ ಯಾಕೆ ಕಾಣಲಿಲ್ಲ?

ಗಂಡು ಹೆಣ್ಣಿಗೆ ವಿಧಿಸಿದ್ದ ಗುಲಾಮಿತನದಿಂದ ಬಿಡುಗಡೆ ಬಯಸಿ ಮಾಡಿದ ಹೋರಾಟ ಎಂದೂ ಪ್ರತಿಹಿಂಸೆಯನ್ನು ಪ್ರತಿಪಾದಿಸಲಿಲ್ಲ. ಅವನನ್ನು ಮಾನವೀಯಗೊಳಿಸು ಎಂದಷ್ಟೇ ಹೇಳಿತ್ತು. ಆದರೆ, ಆ ಚಿಂತನೆಗಳ ಸಾರವನ್ನೇ ನಾವು ಮಕ್ಕಳಿಗೆ ದಾಟಿಸುತ್ತಿಲ್ಲ. ಬಿಡುಗಡೆಯೆಂದರೆ ಸ್ವಚ್ಛಂದ ಕಾಮದ ಮೆರೆದಾಟ ಎಂಬ ಮಂಕು ತುಂಬಿಕೊಂಡು ಯುವಕ, ಯುವತಿಯರು ಹಳ್ಳಕ್ಕೆ ಬೀಳುತ್ತಿದ್ದಾರೆ. ಇನ್ನೊಂದೆಡೆ, ರಾಜಕೀಯವೆಂದರೆ ಮನಸ್ಸುಗಳನ್ನು ಕಟ್ಟುವುದಲ್ಲ, ದಿನದ ಇಪ್ಪತ್ತನಾಲ್ಕು ಗಂಟೆಯೂ ವಿರೋಧಿಸುವವರನ್ನು ‘ಶತ್ರು’ಗಳನ್ನಾಗಿಸಿ ಹಣಿಯುವುದು ಎಂಬಂತಾಗಿ, ಮನುಷ್ಯರು ಪರಸ್ಪರರನ್ನು ಪ್ರೀತಿಸುವುದು, ಗೌರವಿಸುವುದು ಎಂಬುದೆಲ್ಲಾ ಮೂಲೆಗುಂಪಾಗಿ, ಲಾಭಕ್ಕಾಗಿ ಜೊತೆಗಿರುವುದು ಎಂಬಷ್ಟಕ್ಕೆ ಕೆಳಗಿಳಿಸಿದೆ.

ನಾವು ಎಷ್ಟೆಲ್ಲ ಹಿಂಸೆಗೆ ಒಳಗಾದರೂ ಅಹಿಂಸಾತ್ಮಕ ಹೋರಾಟ ಮಾಡಿದೆವೇ ಹೊರತು ಎಂದೂ ಶೋಷಕರನ್ನು ಕೊಲ್ಲಲಿಲ್ಲ, ಆಕ್ರಮಿಸಲಿಲ್ಲ ಎಂದು ದೇವನೂರ ಮಹಾದೇವರಾದಿಯಾಗಿ ಕನ್ನಡದ ಹಲವು ದಲಿತ ಸಾಹಿತಿಗಳು ಹೆಮ್ಮೆಯಿಂದ ಹೇಳುವುದನ್ನು ಕೇಳಿದ್ದೇನೆ. ಆದರೆ, ಅಹಿಂಸಾತ್ಮಕ ಹೋರಾಟ ಮಾಡುವವರನ್ನೆಲ್ಲ ‘ನಗರ ನಕ್ಸಲರು’ ಎಂದು ಕರೆದು ಅಮಾನ್ಯ ಮಾಡುವ ಕ್ಷುಲ್ಲಕ ಜೀವಿಗಳು ಇಂದು ಹೀರೊಗಳಾದರೆ, ಮನೆ ಮನೆಯೂ ಕುಲುಮೆಗಳಾಗಿ ‘ಮಣಿಪುರ’ಗಳಾಗದೇ ಇರುತ್ತವೆಯೆ?

1822ರಿಂದ 1913ರ ತನಕ ಜೀವಿಸಿದ್ದ ಹ್ಯಾರಿಯೆಟ್ ಟಬ್ಮ್ಯಾನ್ ಗುಲಾಮಗಿರಿಯ ವಿರುದ್ಧ ಹೋರಾಡಿದ ಅಸಾಮಾನ್ಯ ಕಪ್ಪು ಮಹಿಳೆ. ಯಜಮಾನ ತನ್ನನ್ನು ಮಾರಾಟ ಮಾಡಲು ಹೊರಟಾಗ ರಾತ್ರೋರಾತ್ರಿ ತೊಂಬತ್ತು ಮೈಲಿ ಕಾಲ್ನಡಿಗೆಯಲ್ಲಿ ಕ್ರಮಿಸಿ, ಸಿಕ್ಕಿಹಾಕಿಕೊಳ್ಳುವ ಸಂದರ್ಭದಲ್ಲಿ ನದಿಗೆ ಧುಮುಕಿ ಜೀವ ಉಳಿಸಿಕೊಂಡು ಪರಾರಿಯಾದವಳು. ನಿರಕ್ಷರಿಯಾಗಿದ್ದ ಆಕೆ ‘ಸ್ವಾತಂತ್ರ್ಯ, ಇಲ್ಲವೇ ಸಾವು’ ಎಂಬ ನೆಲೆಯಲ್ಲಿ ಅತ್ಯಂತ ದಿಟ್ಟವಾಗಿ, ಯೋಜಿತವಾಗಿ, ಒಂಟಿಯಾಗಿ ಹೋಗಿ ಗುಲಾಮರಿಗೆ ಧೈರ್ಯ ತುಂಬಿ ಓಡಿಸಿಕೊಂಡು ಫ್ರೀಲ್ಯಾಂಡ್ ಅನ್ನಿಸಿಕೊಂಡ ಪೆನ್ಸಿಲ್ವೇನಿಯಾ, ಕೆನಡಾಗಳಿಗೆ ಕರೆತರುತ್ತಿದ್ದಳು. ತನ್ನ ರಕ್ಷಣೆಗಾಗಿ ಪಿಸ್ತೂಲೊಂದನ್ನು ಇಟ್ಟುಕೊಳ್ಳುತ್ತಿದ್ದಳು. ಗುಲಾಮರ ಬಿಡುಗಡೆಗಾಗಿ ಹೋರಾಡುವ ಗುಂಪು ಇವಳನ್ನು ಗುರ್ತಿಸಿ ತಮ್ಮೊಂದಿಗೆ ಮುಂಚೂಣಿಯಲ್ಲಿ ಇಟ್ಟುಕೊಂಡಿತ್ತು. 1863ರ ಹೊತ್ತಿಗೆ ಸಭೆಯೊಂದರಲ್ಲಿ ‘ಗುಲಾಮರನ್ನು ಈಗ ಕರೆತರುವುದು ಅಪಾಯಕಾರಿ, 600 ಮೈಲಿ ದೂರದಲ್ಲಿದ್ದಾರೆ. ಅದಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು, ಈಗ ನಡೆಯುತ್ತಿರುವ ಸಿವಿಲ್ ವಾರ್ ಮುಗಿಯಬೇಕು’ ಎಂದಾಗ ಸಿಡಿದೆದ್ದು ಆಕೆ ಹೇಳುವ ಮಾತುಗಳು ಗಮನಾರ್ಹ. ‘ಇಲ್ಲಿರುವ ನೀವೆಲ್ಲ ಸ್ವತಂತ್ರ ಶಿಶುಗಳಾಗಿ ಜನಿಸಿದವರು. ನಿಮಗೆ ಹುಟ್ಟುವಾಗಲೇ ಗುಲಾಮರಾದವರ ಬದುಕಿನ ಕಚ್ಚಾ ಅನುಭವವಿಲ್ಲ. ಹುಟ್ಟುವಾಗಲೇ ಸ್ವತಂತ್ರರಾದ ನಿಮಗೆ ಬದುಕಿನ ಕಂಫರ್ಟ್ಗಳು ಅಭ್ಯಾಸವಾಗಿ ಹೋಗಿದೆ. ನಿಮಗೆ ಸುಂದರ ಮನೆಗಳು, ಹೆಂಡತಿಯರು, ಮಕ್ಕಳು ಇದ್ದಾರೆ. ನನಗಿನ್ನೂ ನೆನಪಿದೆ. ಪುಟ್ಟ ಮಕ್ಕಳು ಕೆಲಸ ಸರಿ ಮಾಡುತ್ತಿಲ್ಲ ಎಂದು ಹೊಡೆಸಿಕೊಳ್ಳುವುದು, ಮೈನೆರೆಯುತ್ತಿದ್ದಂತೆಯೇ ಹುಡುಗಿಯರು ಮೀಸಲು ಮುರಿಸಿಕೊಳ್ಳಲು ಅತ್ಯಾಚಾರಕ್ಕೊಳಗಾಗುವುದು, ಅಣ್ಣತಮ್ಮಂದಿರು ಚಾಟಿ ಏಟಿನಿಂದ ನರಳುವುದು, ಹಸುಗೂಸುಗಳಿಂದ ಬೇರ್ಪಡಿಸಿಕೊಂಡು ಅಕ್ಕತಂಗಿಯರು ಕಣ್ಣು ಕಾಣದ ಪ್ರದೇಶಕ್ಕೆ ಮಾರಾಟವಾಗುವುದು... ನಾನು ಅವರನ್ನು ಇದರಿಂದ ಬಿಡುಗಡೆಗೊಳಿಸಲು ನನ್ನ ಕೊನೆಯ ಹನಿರಕ್ತವನ್ನೂ ಕೊಡಬಲ್ಲೆ’ ಎಂದವಳು ಮತ್ತೆ ಹೊರಟು, ಕಾಂಬ್ಹೀ ರಿವರ್ ರೈಡ್ ಆಯೋಜಿಸಿ 700 ಗುಲಾಮರನ್ನು ಮುಕ್ತಿಗೊಳಿಸಿದಳು. ಈ ಹಂತದಲ್ಲಿ ಆಕೆಯ ಹಳೆಯ ಯಜಮಾನ ಅವಳನ್ನು ಜೀವಂತವಾಗಿ ಹಿಡಿಯಲು ಹುಡುಕುತ್ತಿದ್ದಾಗ, ಕಾಡಲ್ಲಿ ಅವನೇ ಅವಳಿಗೆ ಸೆರೆ ಸಿಕ್ಕುತ್ತಾನೆ. ಅವಳು ಅವನನ್ನು ಕೊಲ್ಲಬಹುದಾಗಿತ್ತು. ‘ಈಗ ನಮ್ಮ ಕಾಲ ಬಂದಿದೆ’ ಎನ್ನುತ್ತ ಅವನನ್ನು ನಿಶ್ಶಸ್ತ್ರಗೊಳಿಸಿ ಬಿಟ್ಟುಬಿಡುತ್ತಾಳೆ. ಅವಳಿಗೆಬೇಕಿರುವುದು ಪ್ರತಿಹಿಂಸೆಯ ಅನುಕರಣೆ
ಯಲ್ಲ, ಬಿಡುಗಡೆಯ ಮುಕ್ತ ಹೊಸದಾರಿ. (ಹ್ಯಾರಿಯೆಟ್ ಟಬ್ಮನ್ ಹೆಸರಿನ ಸಿನಿಮಾ ಕೂಡ ಲಭ್ಯವಿದೆ.) ಇದೇ ನಿಜ ನಾಯಕತ್ವದ ಮಾದರಿ.

ಹಾಗೆಲ್ಲ ಹೋರಾಡಿ ಬಿಡುಗಡೆಯ ನವಿರು ಭಾವವನ್ನು ಕಟ್ಟಿದ ಜಗತ್ತಿನಲ್ಲೀಗ ಮತ್ತೆ ಮೂರ್ಖರ ದರ್ಬಾರು. ಹಾಗೆ ಹೋರಾಡುವುದೇ ಎಡಪಂಥವಾಗಿತ್ತು. ಅದು ಬಯಸುವುದು ಸರ್ವರ ಉದಯವಾಗಿತ್ತು. ಆದರೀಗ ಅದಕ್ಕೆ ವಿರುದ್ಧವಾದ ಬಲಪಂಥವನ್ನು ಬಲಗೊಳಿಸಲಾಗುತ್ತಿದೆ. ಬಲಪಂಥವೆಂದರೆ ಖಾಸಗೀಕರಣದ ಮಹಾಪರ್ವ. ಇದು ಕೊನೆಗೂ ಎಂತಹ ಲೋಕ ನಿರ್ಮಾಣ ಮಾಡಬಹುದು? ಫ್ರಾನ್ಸ್ ನಿರ್ಮಿತ ‘ಕಿಕಾ’ ಸಿನಿಮಾವು ಇದರ ದಿವ್ಯದರ್ಶನ ಮಾಡಿಸಿದಾಗ ನಾನು ಅವಾಕ್ಕಾದೆ. ನಮ್ಮ ನಡುವೆಯೇ ಇವೆಲ್ಲವೂ ಇದೆಯೇ ಎಂದು ಆಘಾತವಾಗುವಂತಿದೆ ಬದುಕಿನ ಓಟ. ಫ್ರಾನ್ಸ್ನ ಸುಶಿಕ್ಷಿತ ಮಧ್ಯಮವರ್ಗಕ್ಕೆ ಸೇರಿದ ಒಬ್ಬಾಕೆ ವಿಚ್ಛೇದನದ ನಂತರ ಮಗಳು ಮತ್ತು ತನಗಾಗಿ ಒಂದು ಪುಟ್ಟ ಬಾಡಿಗೆ ಮನೆಗಾಗಿ ಹುಡುಕಾಟ ಮಾಡುತ್ತಿರುತ್ತಾಳೆ. ದುಬಾರಿ ಮುಂಗಡ ಹಣ ಹೊಂದಿಸಲು ಹಲವು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಾಳೆ. ಆದರೂ ಸಾಕಾಗುವುದಿಲ್ಲ. ಒಮ್ಮೆ ಒಬ್ಬಳು ಕ್ಲೈಂಟ್, ಹಣ ಹೊಂದಿಸಲು ತನ್ನ ಬಳಸಿದ ಒಳ ಉಡುಪನ್ನು ಒಗೆಯದೇ ಸೇಲ್ ಮಾಡ್ತೀನಿ ಅಂದಾಗ ಇವಳಿಗೆ ಶಾಕ್ ಆಗುತ್ತೆ. ಈಗ ಕಷ್ಟ ಕಾಲದಲ್ಲಿ ಅದು ನೆನಪಾಗಿ ಇಂಟರ್ನೆಟ್ ಮೂಲಕ ಆ ವ್ಯಕ್ತಿಯ ಸಂಪರ್ಕಕ್ಕೆ ಬರುತ್ತಾ ತೆರೆದುಕೊಳ್ಳುವ ಅದರ ವ್ಯಾಪ್ತಿಯಿಂದ ದಂಗಾಗುತ್ತಾಳೆ. ವಿಪರೀತ ದುಡ್ಡಿದ್ದರೂ ನೆಮ್ಮದಿ ಇಲ್ಲದ ಕೆಲವರು, ತನ್ನನ್ನು ಕೆಟ್ಟಾ ಕೊಳಕು ಬಯ್ಯಬೇಕು, ನಾನು ನಿನ್ನ ಬೂಟು ನೆಕ್ಕುವಂತೆ ನೀನು ನನ್ನನ್ನು ಪೀಡಿಸಬೇಕು, ನನ್ನ ಚರ್ಮ ಕೀಳುವಂತೆ ಚಾಟಿಯಲ್ಲಿ ಹೊಡೆಯಬೇಕು... ಹೀಗೆ ಹಿಂಸೆ, ಅವಮಾನ ಹೆಚ್ಚು ಮಾಡಿದಷ್ಟೂ ಅವಳಿಗೆ ಅವರು ಕೊಡುವ ಮೊತ್ತ ಹೆಚ್ಚುತ್ತಾ ಹೋಗುತ್ತದೆ! ದುಡ್ಡಿಗಾಗಿ ಮನಸ್ಸು ಕಲ್ಲಾಗಿಸಿಕೊಂಡು ಇದನ್ನೆಲ್ಲಾ ಮಾಡುವ ಅವಳು ತನಗೆ ಬೇಕಾದಷ್ಟು ಹಣ ಹೊಂದಿಕೆಯಾದಾಗ ಅದನ್ನು ಅಲ್ಲಿಗೇ ನಿಲ್ಲಿಸುತ್ತಾಳೆ. ಆದರೆ, ತನ್ನ ಗೆಳತಿಗೆ ಹೇಳಿ ಚಾಟಿಯಿಂದ ಹೊಡೆಸಿಕೊಳ್ಳುತ್ತಾಳೆ. ಓಹ್! ಇದು ನಿಜವೇ? ಅಂದರೆ ಇದು ಸುಳ್ಳಾಗಿರಲಿಕ್ಕಿಲ್ಲ. ಹೌದು, ಹಗೆತನ, ಕಾಮ, ಮದ, ಮತ್ಸರ, ತಾರತಮ್ಯದ ಅಮಲುಗಳ ವ್ಯವಸ್ಥೆಯ ಪೋಷಣೆ ಮಾಡಿದರೆ ಇದಕ್ಕಿಂತ ಉನ್ನತ ಬದುಕು ಸಿಗಲಿಕ್ಕಿಲ್ಲ. ನೆನಪಿಡಿ, ಮೇಲ್ನೋಟಕ್ಕೆ ಆಕೆ ಬದುಕುತ್ತಿರುವ ಸಮಾಜ ಮಹಾನ್ ಸಭ್ಯ, ಸ್ವಚ್ಛ, ಸುಂದರ. ಅಭಿವೃದ್ಧಿಯಿಂದ ಹೊಳೆಯುತ್ತಿರುವ ಬಿಳಿ ಚರ್ಮದವರ ಆಗರ. ಮತ್ತು ನಮಗೆ ಅದೇ ಸಾಧಿಸಬೇಕಾದ ಆದರ್ಶ!

ನಮಗೆ ಬಡತನದ ಗುಡಿಸಲಾದರೂ ಇರಲಿ, ಅಲ್ಲಿ ಪ್ರೀತಿ ಮಮತೆಯ ಹಣತೆ ಬೆಳಗಲಿ. ನಿಮ್ಮ ಅಭಿವೃದ್ಧಿಯ ಅಗ್ನಿಕುಂಡದ ಮುಖವಾಡಕ್ಕಿಷ್ಟು ಬೆಂಕಿ ಬೀಳಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.