ಜಗತ್ತಿಗೆ ತತ್ವಜ್ಞಾನದ ಬೆಳಕನ್ನು ಚೆಲ್ಲಿದ ಸಾಕ್ರೆಟೀಸ್‌ನನ್ನು ನೋಡಲಿಕ್ಕೆ ಒಬ್ಬ ಬಂದ. ಅವನ ಕೋರಿಕೆ ವಿಚಿತ್ರವಾಗಿತ್ತು. ‘ಎಲ್ಲವನ್ನೂ ಬಲ್ಲ ನೀನು ನನಗೆ ಗೆಲ್ಲುವುದನ್ನು ಹೇಳಿಕೊಡು. ಯಶಸ್ಸು ನನ್ನ ಬುಟ್ಟಿಯಲ್ಲಿ ಮಲಗಿರಬೇಕು. ನಾನು ಬೇಕೆಂದಾಗ ಅದು ನನ್ನ ಬಗಲಲ್ಲಿ ನಿಲ್ಲಬೇಕು’ ಎಂದು ಕೇಳಿದ. ಸಾಕ್ರೆಟೀಸ್ ನಕ್ಕು, ‘ಹೌದಾ ಇಷ್ಟೇನಾ? ಇದನ್ನು ನಾನು ನಿನಗೆ ಹೇಳಿಕೊಡಬಲ್ಲೆ. ನಾಳೆ ನದಿ ತೀರದಲ್ಲಿ ಸಿಗು’ ಎಂದ.
ಆ ವ್ಯಕ್ತಿ ಹೊರಟ ನಂತರ ಸಾಕ್ರೆಟೀಸ್‌ನ ಶಿಷ್ಯ, ‘ಹೇಳು ಗುರುವೇ ಗೆಲುವಿನ ರಹಸ್ಯವನ್ನು ಹೇಗೆ ಬೋಧಿಸುತ್ತೀಯಾ? ಇಷ್ಟು ವರ್ಷಗಳು ನಾನು ನಿನ್ನ ಜೊತೆಯಲ್ಲೇ ಇದ್ದೇನೆ. ನನಗೆ ಹೇಳಿಕೊಡದೇ ಇರುವುದನ್ನು ಅವನಿಗೆ ಹೇಳಿಕೊಡುವುದರಲ್ಲಿ ನ್ಯಾಯವಿದೆಯೇ’ ಎಂದು ಕೇಳಿದ.
ಸಾಕ್ರೆಟೀಸ್ ನಗುತ್ತಾ, ‘ಹೇಳಿಕೊಡುವ ಸಮಯ ಈಗ ಬಂದಿದೆ. ನೋಡುತ್ತಿರು ನಾನು ಅವನಿಗೆ ಹೇಳುವೆ. ಸಾಧ್ಯವಾದರೆ ನೀನೂ ತಿಳಿದುಕೋ’ ಎಂದ.
ರಾತ್ರಿಯಿಡೀ ಗೆಲುವಿನ ಕನಸನ್ನು ಕಾಣುತ್ತಾ ಇದ್ದ ವ್ಯಕ್ತಿಯು, ಬೆಳಕು ಹಾಯುವುದಕ್ಕೂ ಮುಂಚೆಯೇ ಸಾಕ್ರೆಟೀಸ್‌ಗಾಗಿ ಕಾಯುತ್ತಾ ನದಿ ತಟದಲ್ಲಿ ಕುಳಿತ. ಸಾಕ್ರೆಟೀಸ್ ಬಂದಾಗ ಉದ್ವೇಗದಿಂದ, ‘ನಾನು ಬಂದು ಬಹಳ ಹೊತ್ತಾಯಿತು ನೀನೇಕೆ ತಡಮಾಡಿದೆ’ ಎಂದೆಲ್ಲಾ ಕೂಗಾಡಿದ. ಸಾಕ್ರೆಟೀಸ್ ಅವನನ್ನು ನೋಡಿ ನಗುತ್ತಾ, ತನ್ನ ಪಾಡಿಗೆ ತಾನು ಸ್ನಾನಕ್ಕೆ ನದಿಗೆ ಇಳಿದ. ಸಾಕ್ರೆಟೀಸ್ ತನಗೆ ಬೋಧನೆ ಮಾಡದೆ ತನ್ನ ಪಾಡಿಗೆ ತಾನು ಕೆಲಸಕ್ಕೆ ತೊಡಗಿದ್ದರಿಂದ ಕುಪಿತಗೊಂಡ ಆ ವ್ಯಕ್ತಿ, ‘ಆಡಿದ ಮಾತಿನ ಮೇಲೆ ನಿನಗೆ ಗಮನವೇ ಇಲ್ಲ’ ಎಂದ. ಆಗ ನೀರಲ್ಲಿ ನಿಂತು ಸಾಕ್ರೆಟೀಸ್ ಬಾ ಎಂದು ಆತನನ್ನು ಕರೆದ. ಹತ್ತಿರ ಬಂದ ಅವನ ಕುತ್ತಿಗೆ ಹಿಡಿದು ನೀರಲ್ಲಿ ಮುಳುಗಿಸಿದ. ಅವನು ನೀರಲ್ಲಿ ಉಸಿರಿಗಾಗಿ ಹೋರಾಟ ಮಾಡಿ ಮೇಲೆದ್ದು, ‘ನೀನೂ ಬೇಡ. ನಿನ್ನಾ ಗೆಲುವಿನ ಸೂತ್ರವೂ ಬೇಡ’ ಎಂದು ಬೈದು ಅಲ್ಲಿಂದ ಹೊರಟ.
ಆಗ ಸಾಕ್ರೆಟೀಸ್ ನಗುತ್ತಾ ತನ್ನ ಶಿಷ್ಯನಿಗೆ, ‘ಅವನಿಗೆ ನಾನು ಪಾಠ ಹೇಳಿಕೊಟ್ಟಿದ್ದು ಅರ್ಥ ಆಗಲಿಲ್ಲ’ ಎನ್ನುತ್ತಾನೆ. ಶಿಷ್ಯನಿಗೆ ಅಚ್ಚರಿ. ‘ಅವನಿಗೆ ನೀವು ಪಾಠ ಹೇಳಿದಿರಾ’ ಎಂದು ಅಚ್ಚರಿಯಲ್ಲಿ ಕೇಳುತ್ತಾನೆ. ‘ಇಷ್ಟು ವರ್ಷ ನನ್ನ ಜೊತೆಯಲ್ಲಿದ್ದೀನಿ ಎಂದೆಯಲ್ಲ ನಿನಗೂ ಅರ್ಥವಾಗಲಿಲ್ಲವೇ’ ಎಂದ ಸಾಕ್ರೆಟೀಸ್, ‘ಅವನು ನೀರಿನಲ್ಲಿ ಮುಳುಗಿದಾಗ ಜೀವ ಉಳಿಸಿಕೊಳ್ಳಲಿಕ್ಕೆ ಹೋರಾಟ ಮಾಡಿದನಲ್ಲಾ, ಹಾಗೆ ಗೆಲ್ಲಬೇಕು ಎನ್ನುವುದೂ ಜೀವನ್ಮರಣದ ಪ್ರಶ್ನೆ ಆದಾಗ ಮಾತ್ರ ಅದು ನಮಗೆ ದಕ್ಕುತ್ತದೆ’ ಎಂದ.
ಸಾಕ್ರೆಟೀಸ್ ಯಾಕೆ ದೊಡ್ಡ ತತ್ವಜ್ಞಾನಿ ಎನ್ನುವುದು ಶಿಷ್ಯನಿಗೆ ಅರ್ಥವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.