–ಡಾ. ಕಲೀಮ್ ಉಲ್ಲಾ
ತರಗತಿಯಲ್ಲಿ ಸುಮ್ಮನೆ ಕೂತು ಬಿಡುವುದು ಅವಳಿಗಿಷ್ಟ. ಯಾವತ್ತೂ ಮುಖ ನೆರಿಗೆ ಮಾಡಿಕೊಂಡಿರುವ ಆಕೆಯಲ್ಲಿ ಈ ಹದಿವಯಸ್ಸಿನಲ್ಲಿ ಇರಬೇಕಾದ ತುಂಟತನ, ನಗು, ನಾಚಿಕೆ, ಕೀಟಲೆ, ಹಾಸ್ಯಗಳು ಇಲ್ಲದ್ದಕ್ಕೆ ಕಾರಣ ಗೊತ್ತಾಗುತ್ತಿರಲಿಲ್ಲ. ಒಮ್ಮೆ ತಾಯಿ ಕುರಿತ ವಿಷಯ ಬಂದಾಗ ನಾನು ಒಂದಿಷ್ಟು ಭಾವುಕವಾಗಿ ಪಾಠ ಮಾಡಿಬಿಟ್ಟೆ. ಆಗ ಆಕೆ ದಳದಳ ಅತ್ತದ್ದು ನಿಜ. ನಂತರ ಕರೆದು ಮಾತಾಡಿಸಿದಾಗ ಮೌನವೇ ಉತ್ತರ.
ಮತ್ತೆ ಕಂಬನಿಯ ಮುಂದುವರಿಕೆ. ಸರಿ ಇರಲಿ ಬಿಡು ಕಂದ. ನಿನಗೆ ಹೇಳಬೇಕು ಅನಿಸಿದರೆ ಮಾತ್ರ ಹೇಳು ಪರವಾಗಿಲ್ಲ. ಆದರೆ ಈ ವಯಸ್ಸಿನಲ್ಲಿ ನಗುವೇ ಇಲ್ಲದೆ ಯಾಕೆ ಹೀಗೆ ಇರುತ್ತೀಯ? ನನಗಂತೂ ಅರ್ಥವಾಗುತ್ತಿಲ್ಲ. ಏನು ನಿನ್ನ ಕಷ್ಟ ಎಂದು ವಿಚಾರಿಸಿದೆ. ಮತ್ತೆ ಮಾತಿಲ್ಲ. ನಾನು ಸುಮ್ಮನಾದೆ. ಅವಳು ಓದಿನಲ್ಲಿ ಜಾಣೆ. ಹೇಳಿದ ಕೆಲಸಗಳನ್ನು ಚಾಚು ತಪ್ಪದೆ ಮಾಡುತ್ತಿದ್ದಳು. ಒಳ್ಳೆಯ ಅಂಕಗಳನ್ನೂ ಪಡೆಯುತ್ತಿದ್ದಳು. ಆದರೆ ನಗು ಮಾತ್ರ ನಾಪತ್ತೆ. ಅವಳ ಓರಗೆಯ ಮಕ್ಕಳೆಲ್ಲಾ ನಲಿದು ಕುಣಿದು ಕುಪ್ಪಳಿಸಿ ಇವಳು ಮಾತ್ರ ಬಿಟ್ಟ ಕಣ್ಣು ಬಿಟ್ಟಂತೆ. ಅಲುಗಾಡದೆ ಕುಳಿತ ಹಣತೆಯಂತೆ.
ಕೊಂಚ ನಂಬಿಕೆ ಮೂಡಿದ ಮತ್ತೊಂದು ದಿನ ತಾನಾಗಿಯೇ ಬಂದು ನಿಂತಳು. ಹೇಳು ಪರ್ವಾಗಿಲ್ಲ ಎಂದೆ. ನಾನು ಯಾರ ಕರುಣೆಯನ್ನೂ ಗಿಟ್ಟಿಸಿಕೊಳ್ಳಲು ಇದನ್ನು ಹೇಳುತ್ತಿಲ್ಲ. ಮತ್ತೊಬ್ಬರು ತೋರಿಸುವ ಅನುಕಂಪ ನನ್ನ ಮನಸ್ಸನ್ನು ಸುಡುತ್ತದೆ. ಪರಿಸ್ಥಿತಿ ಏನೇ ಇರಲಿ ಇದರಿಂದ ನಾನು ಕಡಿಮೆ ಎಂದು ಯಾರಿಗೂ ಅನ್ನಿಸಬಾರದು ಎಂದಳು.
ಅಪರೂಪಕ್ಕೆ ಮಾತಾಡುವವರ ಚಮತ್ಕಾರವೇ ಇದು. ಇವರ ಮಾತನ್ನು ಅರಗಿಸಿಕೊಳ್ಳುವುದೇ ಕಷ್ಟ. ಕಬ್ಬಿಣದ ಚಾಣದಷ್ಟು ಮೊನಚು ಮತ್ತು ಪ್ರಬುದ್ಧ. ಈ ವಯಸ್ಸಿನ ಮಗು ಮಾತಾಡುವ ಪರಿ ಇದಲ್ಲ ಎಂದೆನಿಸಿತು. ಒಳಗೊಳಗೇ ಬೆಂದ ಜೀವದ ಭಾಷೆಗೆ ಅದೆಷ್ಟು ಶಕ್ತಿ! ಅದೆಂಥ ಹಿಡಿತ. ನನ್ನದೇನು ತಪ್ಪಿಲ್ಲದೆ ನಾನು ದುಃಖಿತಳು. ಕೂಸಿದ್ದಾಗಲೇ ಅವ್ವ ಅಪ್ಪನ ಕಳಕೊಂಡೆ. ಹಳ್ಳಿ ಜನ ದಿನಕ್ಕೊಬ್ಬರು ಊಟ ಹಾಕಿ ಸಾಕಿದರು. ಓದಿಸಿದರು. ಕೆಲವರು ಜರೆದರು; ಹಲವರು ಮುದ್ದಿಸಿದರು. ಊರ ಹಿರೀಕರೊಬ್ಬರು ಇನ್ನು ನೀ ಇಲ್ಲಿರುವುದು ಬೇಡವೆಂದು ಅನಾಥಶ್ರಮಕ್ಕೆ ಸೇರಿಸಿದರು ಎಂದು ಹೆಚ್ಚು ದೃಢವಾಗಿ ನಿಂತಳು.
ನೀನು ಇಷ್ಟೊಂದು ಪ್ರೌಢವಾಗಿ ಇರುವುದೇ ಸರಿ. ಧೈರ್ಯವಾಗಿ ಇರುವುದು ಕೂಡ ಹೆಮ್ಮೆ. ಆದರೆ ಈ ವಯಸ್ಸಿನಲ್ಲಿ ಸಿಗುವ ಸಣ್ಣ ಸಣ್ಣ ಸಂತೋಷಗಳನ್ನು ನೀನು ಅರ್ಥವಿಲ್ಲದೆ ಕಳೆದುಕೊಳುತ್ತಿದ್ದೀಯ. ಸ್ನೇಹಿತರಿಂದ ಯಾವತ್ತೂ ದೂರವಿರಬೇಡ. ಪದೇ ಪದೇ ನಾನು ಅನಾಥ ಎಂದು ನೆನಪು ಮಾಡಿ ಕೊರಗುವುದು ನಿಲ್ಲಿಸು. ನೋಡು ನಾನು ನಿನ್ನಂತೆಯೇ ಅನಾಥ. ಆದರೆ ನಿನಗೆ ಹಾಗೆ ಅನ್ನಿಸುತ್ತಿದೆಯಾ? ಎಂದು ಕೇಳಿದೆ. ತನ್ನಂತವರೇ ಹಲವರು ಸುತ್ತಲೂ ಇದ್ದಾರೆ ಎಂಬುದು ಕೂಡ ಆಕೆಗೆ ಗೊತ್ತಿರಲಿಲ್ಲ. ಈ ಜಗತ್ತಿನಲ್ಲಿ ನಾನೊಬ್ಬಳೇ ಹೀಗೆ ಎಂದು ಆಕೆ ಭಾವಿಸಿದ್ದಳು. ಅವಳ ಅನಾಥಾಶ್ರಮದಲ್ಲಿ ಇದ್ದ ಕೆಲವರಿಗೆ ತಾಯಿ ಇರಲಿಲ್ಲ. ಹಲವರಿಗೆ ತಂದೆ ಇರಲಿಲ್ಲ. ಅಮ್ಮ ಅಪ್ಪ ಇಬ್ಬರೂ ಇಲ್ಲದ ಮಕ್ಕಳನ್ನು ಅವಳು ನೋಡಿಯೂ ಇರಲಿಲ್ಲ. ಪರರ ಅನುಕಂಪ ಅವಳಿಗೆ ಹಿಂಸೆ ಅನಿಸುತ್ತಿತ್ತು.
ಸ್ವಾಭಿಮಾನಿಯಾಗಿರು. ಆದರೆ ನಿನ್ನೊಳಗಿರುವ ನಗುವನ್ನು ನಾಶ ಮಾಡಿಕೊಳ್ಳಬೇಡ. ಪ್ರೀತಿಯ ಕೊರತೆ ಕಂಡ ನಾವೇ ಈ ಜಗತ್ತನ್ನು ಹೆಚ್ಚು ಪ್ರೀತಿಸಬೇಕು. ಅಪರಿಮಿತ ಗೆಳೆಯರನ್ನು ಸಂಪಾದಿಸಬೇಕು. ಹುಡುಕಿದರೆ ಕಳೆದು ಹೋದ ಅವ್ವ ಅಪ್ಪ ಖಂಡಿತಾ ಎಲ್ಲರಲ್ಲೂ ಇಷ್ಟಿಷ್ಟೇ ಸಿಗುತ್ತಾರೆ ಎಂದೆ. ಅವಳು ಸುಮ್ಮನೆ ನನ್ನ ದಿಟ್ಟಿಸಿದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.