ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಇಮ್ರಾನ್ ಖಾನ್ ಬಂಧನದ ಸುತ್ತಮುತ್ತ– ಲಂಡನ್ ಪ್ಲ್ಯಾನ್ ಮತ್ತು ಮಿ.ಕ್ಲೀನ್?!

ಸರ್ಕಾರ, ಸೇನೆಯನ್ನು ಏಕಕಾಲಕ್ಕೆ ಎದುರು ಹಾಕಿಕೊಂಡು ತೊಡೆತಟ್ಟಿದ್ದಾರೆ ಇಮ್ರಾನ್‌
Published 18 ಮೇ 2023, 20:46 IST
Last Updated 18 ಮೇ 2023, 20:46 IST
ಅಕ್ಷರ ಗಾತ್ರ

ಪಾಕಿಸ್ತಾನದ ಮಟ್ಟಿಗೆ ಇದು ವಿಶೇಷ ಸಂಗತಿಯಲ್ಲ. ಪಾಕಿಸ್ತಾನದ ಹಲವು ಮಾಜಿ ಪ್ರಧಾನಿಗಳು ವಿವಿಧ ಆರೋಪಗಳನ್ನು ಹೊತ್ತು ವಿಚಾರಣೆ ಎದುರಿಸಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಾರೆ. ಸ್ಥಾನ ತೊರೆಯುತ್ತಿದ್ದಂತೆಯೇ ವಿದೇಶಕ್ಕೆ ಪಲಾಯನ ಮಾಡುವುದು ಪಾಕಿಸ್ತಾನದಲ್ಲಿ ಒಂದು ವಾಡಿಕೆಯೇ ಆಗಿಹೋಗಿದೆ.

ನವಾಜ್ ಷರೀಫ್ ಅವರ ಮೇಲೆ ಆರೋಪಗಳು ಬರುತ್ತಿದ್ದಂತೆ, ಅವರು ಇಂಗ್ಲೆಂಡಿಗೆ ಪಲಾಯನ ಮಾಡಿದ್ದರು. ಇಡೀ ದೇಶವನ್ನು ತನ್ನ ಅಂಕೆಗೆ ತೆಗೆದುಕೊಂಡಿದ್ದ, ಭಾರತದ ಮೇಲೆ ಯುದ್ಧ ಸಾರಿದ್ದ ಪರ್ವೇಜ್ ಮುಷರಫ್ ಕೊನೆಗಾಲದಲ್ಲಿ ಸೌದಿ ಅರೇಬಿಯಾವನ್ನು ನೆಚ್ಚಿಕೊಳ್ಳಬೇಕಾಯಿತು. ಬೆನಜೀರ್ ಭುಟ್ಟೊ, ಆಸಿಫ್ ಅಲಿ ಜರ್ದಾರಿ ಅವರ ನಸೀಬು ಭಿನ್ನವಾಗಿಯೇನೂ ಇರಲಿಲ್ಲ.

ಇದೀಗ ಇಮ್ರಾನ್ ಖಾನ್‌ ಅಂತಹುದೇ ಆರೋಪ ಎದುರಿಸುತ್ತಿದ್ದಾರೆ. ಅವರು ದೇಶ ತೊರೆದಿಲ್ಲ. ಸರ್ಕಾರ ಮತ್ತು ಸೇನೆಯನ್ನು ಏಕಕಾಲಕ್ಕೆ ಎದುರು ಹಾಕಿಕೊಂಡು ತೊಡೆತಟ್ಟಿ ನಿಂತಿದ್ದಾರೆ. ಪರಿಣಾಮವಾಗಿ, ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಪಾಕಿಸ್ತಾನ ಅರಾಜಕತೆಯ ಬೀಡಾಗಿದೆ.

ಹೋದ ವಾರ ಇಮ್ರಾನ್ ತಮ್ಮ ಮೇಲಿನ ಮೊಕದ್ದಮೆಗಳ ಕುರಿತ ವಿಚಾರಣೆಗೆಂದು ಇಸ್ಲಾಮಾಬಾದ್ ಹೈಕೋರ್ಟಿಗೆ ಆಗಮಿಸಿದ ವೇಳೆ ಅವರನ್ನು ನಾಟಕೀಯ ರೀತಿಯಲ್ಲಿ ಬಂಧಿಸಲಾಯಿತು. ಪಾಕಿಸ್ತಾನದ ಅರೆಸೇನಾ ಪಡೆಯ ಕಮಾಂಡೊಗಳು ಇಮ್ರಾನ್ ಅವರು ಇದ್ದ ಕೊಠಡಿಗೆ ನುಗ್ಗಿ, ವಕೀಲರನ್ನು, ಭದ್ರತಾ ಸಿಬ್ಬಂದಿಯನ್ನು ದೂಡಿ ಅವರನ್ನು ಬಲವಂತದಿಂದ ಎಳೆದೊಯ್ದರು.

ಇಮ್ರಾನ್ ಬಂಧನದ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಅವರ ಪಕ್ಷವಾದ ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌– ಎ– ಇನ್ಸಾಫ್‌) ಕಾರ್ಯಕರ್ತರು ರಸ್ತೆಗಿಳಿದರು. ಸಿಕ್ಕ ಕಡೆ ಕಲ್ಲು ತೂರಿದರು. ಕರಾಚಿಯಲ್ಲಿ ಹಲವು ಬಸ್ಸುಗಳನ್ನು ಸುಡಲಾಯಿತು. ಲಾಹೋರಿನಲ್ಲಿ ಸೇನಾ ಕಮಾಂಡರ್ ವಸತಿಗೃಹಕ್ಕೆ ಬೆಂಕಿ ಹಚ್ಚಲಾಯಿತು. ಪೆಶಾವರದ ರೇಡಿಯೊ ಪಾಕಿಸ್ತಾನದ ಕಟ್ಟಡ ಅಗ್ನಿಗೆ ಆಹುತಿಯಾಯಿತು. ಐಎಸ್ಐಗೆ ಸೇರಿದ ಕಚೇರಿಗಳನ್ನೂ ಪ್ರತಿಭಟನಾಕಾರರು ಬಿಡಲಿಲ್ಲ. ಪ್ರತಿಭಟನೆಯ ವೇಳೆ ಹನ್ನೊಂದು ಜನ ಪ್ರಾಣತೆತ್ತರು.
ಅಲ್ ಖಾದಿರ್ ಟ್ರಸ್ಟ್ ಮೊಕದ್ದಮೆಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಕಾರಣ ನೀಡಿತು. ಎರಡು ದಿನಗಳ ಬಳಿಕ ಪಾಕಿಸ್ತಾನದ ಸುಪ್ರೀಂ ಕೋರ್ಟ್‌, ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದು ಕಾನೂನಾತ್ಮಕವಲ್ಲ ಎಂದು ಅವರನ್ನು ಬಿಡುಗಡೆ ಮಾಡಿತು.

ಆದರೆ ಇಷ್ಟಕ್ಕೇ ಎಲ್ಲವೂ ಮುಗಿಯುತ್ತದೆಯೇ? ಇದು ಪಾಕಿಸ್ತಾನದಲ್ಲಿ ಚುನಾವಣಾ ವರ್ಷವಾಗಿರುವುದರಿಂದ ಕಾವು ಬೇಗ ಆರುವುದಿಲ್ಲ. 2016ರಲ್ಲಿ ಪನಾಮ ಪೇಪರ್ಸ್ ಬಿಡುಗಡೆಯಾದಾಗ, ನವಾಜ್ ಷರೀಫ್ ಸಹೋದರರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಇಮ್ರಾನ್ ಖಾನ್ ತಮ್ಮ ಎದುರಾಳಿಗಳನ್ನು ಕಳ್ಳರು, ದರೋಡೆಕೋರರು ಎಂದು ಕರೆಯುತ್ತಾ ತಮ್ಮನ್ನು ‘ಮಿಸ್ಟರ್ ಕ್ಲೀನ್’ ಎಂಬಂತೆ ಬಿಂಬಿಸಿಕೊಂಡಿದ್ದರು. ಪಾಕಿಸ್ತಾನವನ್ನು ಭ್ರಷ್ಟಾಚಾರಮುಕ್ತ ಮಾಡಿ ಹೊಸ ಎತ್ತರಕ್ಕೆ ಕೊಂಡೊಯ್ಯುವ ಭರವಸೆಯನ್ನು ಜನರಲ್ಲಿ ತುಂಬಿದ್ದರು.

ಇದೀಗ ಇಮ್ರಾನ್ ಖಾನ್ ಅವರ ‘ಮಿಸ್ಟರ್ ಕ್ಲೀನ್’ ಮುಖವಾಡವನ್ನು ಕಳಚಬೇಕು ಎಂದು, ಲಂಡನ್‌ನಲ್ಲಿ ಕುಳಿತಿರುವ ನವಾಜ್ ಷರೀಫ್ ಅವರು ತೀರ್ಮಾನಿಸಿದಂತೆ ಕಾಣುತ್ತಿದೆ. ಅದಕ್ಕೆ ಪೂರಕವಾಗಿ ಅಲ್ ಖಾದಿರ್ ಟ್ರಸ್ಟ್ ಪ್ರಕರಣ ಷರೀಫ್‌ದ್ವಯರಿಗೆ ಅಸ್ತ್ರವಾಗಿ ಸಿಕ್ಕಿದೆ. ಹಿಂದಿನ ಜೂನ್‌ನಲ್ಲಿ ಬಿಡುಗಡೆಗೊಂಡಿದ್ದ ಆಡಿಯೊ ಟೇಪ್ ಒಂದು ಪಾಕಿಸ್ತಾನದಲ್ಲಿ ಬಹಳ ಸದ್ದು ಮಾಡಿತ್ತು. ಇಮ್ರಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರ ಪತ್ನಿ ಸರ್ಕಾರದಿಂದ ಕೆಲಸ ಮಾಡಿಸಿಕೊಡಲು ಐದು ಕ್ಯಾರೆಟ್ ವಜ್ರದ ಉಂಗುರವನ್ನು ಉಡುಗೊರೆಯಾಗಿ ಕೇಳಿದ್ದರು ಎಂದು ಬಹರಿಯಾ ಟೌನ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಮಖ್ಯಸ್ಥ ಮಲಿಕ್ ರಿಯಾಸ್ ಅವರ ಮಗಳು ತನ್ನ ತಂದೆಗೆ ಹೇಳಿದ್ದ ಸಂಭಾಷಣೆ ಆಡಿಯೊದಲ್ಲಿ ಇತ್ತು.

ಅದರ ಬೆನ್ನಲ್ಲೇ ಪಾಕಿಸ್ತಾನದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಐವತ್ತು ಸಾವಿರ ಕೋಟಿ ರೂಪಾಯಿ ಕಾಳಧನವನ್ನು ಕಾನೂನುಬದ್ಧಗೊಳಿಸಲು ಇಮ್ರಾನ್ ಖಾನ್ ಮತ್ತು ಅವರ ಪತ್ನಿ, ಹಣ ಮತ್ತು ಜಮೀನನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂತು. ನೂರಾರು ಎಕರೆ ಜಾಗವನ್ನು ಅಲ್ ಖಾದಿರ್ ಟ್ರಸ್ಟ್‌ಗೆ ದಾನದ ರೂಪದಲ್ಲಿ ನೀಡಲಾಗಿದೆ. ಈ ಟ್ರಸ್ಟ್‌ನಲ್ಲಿರುವ ಟ್ರಸ್ಟಿಗಳು ಎಂದರೆ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಮಾತ್ರ. ಹಾಗಾಗಿ ಇಮ್ರಾನ್ ಖಾನ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈಗ ಸರ್ಕಾರ ಅದೇ ಪ್ರಕರಣವನ್ನು ಇಮ್ರಾನ್ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ.

ಹಾಗಾದರೆ ಇಮ್ರಾನ್ ಇತರ ನಾಯಕರಂತೆ ದೇಶ ಬಿಡಬೇಕಾದ ಸಂದರ್ಭ ಬರಬಹುದೇ? ಪಾಕಿಸ್ತಾನದ ಮಟ್ಟಿಗೆ ಇಂದಿಗೂ ಇಮ್ರಾನ್ ಖಾನ್ ಬಹಳ ಜನಪ್ರಿಯ ನಾಯಕ. ಇಮ್ರಾನ್ ಪರ ಪ್ರತಿಭಟನೆಗೆ ಇಳಿದವರು ಬರೀ ಸರ್ಕಾರದ ವಿರುದ್ಧ ಪ್ರತಿಭಟಿಸಲಿಲ್ಲ. ಸೇನೆಯ ವಿರುದ್ಧವೂ ತಿರುಗಿಬಿದ್ದಿರುವುದು ಅಚ್ಚರಿ. ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ವಾಸವಾಗಿರುವ ಪಾಕಿಸ್ತಾನ ಸೇನೆಯ ಮಾಜಿ ಅಧಿಕಾರಿಗಳು ಪಿಟಿಐ ಕಾರ್ಯಕರ್ತರನ್ನು ಪ್ರತಿಭಟನೆಗೆ ಉತ್ತೇಜಿಸಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಇಮ್ರಾನ್ ಖಾನ್ ಸುಪ್ರೀಂ ಕೋರ್ಟ್‌ ಅನ್ನು ಪ್ರವೇಶಿಸಿದಾಗ, ನ್ಯಾಯಮೂರ್ತಿಗಳು ಇಮ್ರಾನ್ ಖಾನ್ ಅವರಿಗೆ ‘ನೈಸ್ ಟು ಸೀ ಯು’ ಎಂದದ್ದು ಎಷ್ಟು ಸರಿ ಎಂಬ ಚರ್ಚೆ ಪಾಕಿಸ್ತಾನದಲ್ಲಿ ನಡೆಯುತ್ತಿದೆ.

ಇಮ್ರಾನ್ ಖಾನ್ ಅವರಿಗೆ ಪಿಟಿಐ ಕಾರ್ಯಕರ್ತರ ಜೊತೆಗೆ, ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ನಿವೃತ್ತ ಸೇನಾಧಿಕಾರಿಗಳ ಬೆಂಬಲವೂ ಇದ್ದಂತೆ ಕಾಣುತ್ತಿದೆ. ಅಭೂತಪೂರ್ವ ಜನಪ್ರಿಯತೆ ಮತ್ತು ಸಾಂಸ್ಥಿಕ ಬೆಂಬಲ ಗಳಿಸಿಕೊಂಡಿರುವ ಇಮ್ರಾನ್, ಪ್ರಬಲ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ರಾಜಕೀಯ ಭ್ರಷ್ಟಾಚಾರ ಮತ್ತು ಸೇನೆಯ ಸರ್ವಾಧಿಕಾರದಿಂದ ಬಸವಳಿದಿರುವ ಪಾಕಿಸ್ತಾನದ ಒಂದು ವರ್ಗ ಇಮ್ರಾನ್ ಅವರ ಜೊತೆಗೆ ನಿಂತಿದೆ ಮತ್ತು ಇಮ್ರಾನ್ ಅವರನ್ನು ಬೆಂಬಲಿಸುವುದೆಂದರೆ ಮಾಡು ಇಲ್ಲವೇ ಮಡಿ ಹೋರಾಟ ಎಂದು ಪರಿಗಣಿಸಿದಂತೆ ಕಾಣುತ್ತಿದೆ. ಇಷ್ಟರ ಮೇಲೆ ಇಮ್ರಾನ್ ಪದೇ ಪದೇ ‘ಪಶ್ಚಿಮ ಪಾಕಿಸ್ತಾನದಲ್ಲಿ ಏನಾಯಿತು ನೆನಪಿಸಿಕೊಳ್ಳಿ’ ಎಂದು ಬಾಂಗ್ಲಾ ವಿಮೋಚನಾ ಹೋರಾಟವನ್ನು ನೆನಪಿಸುತ್ತಿದ್ದಾರೆ. ಈ ಕಾರಣದಿಂದಲೇ ಸೇನೆ, ಇಮ್ರಾನ್ ವಿಷಯದಲ್ಲಿ ಬಹಳಷ್ಟು ಸಂಯಮ ಪ್ರದರ್ಶಿಸುತ್ತಿದೆ.

ತಮ್ಮ ಬಂಧನದ ವಿಷಯವನ್ನು ಇಮ್ರಾನ್ ಇಲ್ಲಿಗೇ ಬಿಡುವಂತೆ ಕಾಣುತ್ತಿಲ್ಲ. ‘ಭಯೋತ್ಪಾದಕನನ್ನು ಸೆರೆ ಹಿಡಿಯುವಂತೆ ಬಂಧಿಸಲಾಯಿತು. ನನ್ನನ್ನು ಬಂಧಿಸಿ ಜೈಲಿಗಟ್ಟಬೇಕು ಇಲ್ಲವೇ ಇಲ್ಲವಾಗಿಸಬೇಕು. ಅದರ ಹೊರತು ಪ್ರತಿಪಕ್ಷಕ್ಕೆ ಚುನಾವಣೆ ಗೆಲ್ಲಲು ಅವಕಾಶಗಳಿಲ್ಲ. ಎಲ್ಲವೂ ‘ಲಂಡನ್ ಪ‍್ಲ್ಯಾನ್’ನಂತೆಯೇ ನಡೆಯುತ್ತಿದೆ ಎಂದು ಇಮ್ರಾನ್ ಹೇಳುತ್ತಿದ್ದಾರೆ. ಸೇನೆಯ ಬೆಂಬಲದೊಂದಿಗೆ ಹನ್ನೆರಡು ಪಕ್ಷಗಳ ಒಕ್ಕೂಟ ತಮ್ಮ ವಿರುದ್ಧ ಸ್ಪರ್ಧಿಸಿದರೂ ಜನ ಪಿಟಿಐ ಪಕ್ಷವನ್ನೇ ಬೆಂಬಲಿಸುತ್ತಾರೆ ಎಂಬ ಅತಿವಿಶ್ವಾಸ ಇಮ್ರಾನ್ ಅವರಲ್ಲಿ ಇದ್ದಂತಿದೆ.

ಇಮ್ರಾನ್ ಖಾನ್ ಸುಪ್ರೀಂ ಕೋರ್ಟ್‌ನ ಎದುರು ಹಾಜರಾದಾಗ, ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರು ‘ರಾಜಕೀಯ ದ್ವೇಷ ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ ದೇಶದ ಸ್ಥಿರತೆಗೆ ಜನರನ್ನು ಒಗ್ಗೂಡಿಸಬಲ್ಲ ರಾಜಕೀಯ ಮುತ್ಸದ್ದಿಯ ಅಗತ್ಯ ಪಾಕಿಸ್ತಾನಕ್ಕಿದೆ’ ಎಂದು ಇಮ್ರಾನ್ ಸಮ್ಮುಖದಲ್ಲೇ ಹೇಳಿದ್ದು ವರದಿಯಾಗಿದೆ. ವಿಪರ್ಯಾಸ ನೋಡಿ, ಪಾಕಿಸ್ತಾನದ ಜನತೆ ಅಂತಹ ರಾಜಕೀಯ ಮುತ್ಸದ್ದಿಯನ್ನು ಇದುವರೆಗೂ ಕಂಡಿಲ್ಲ. ಅಸಲಿಗೆ ಪಾಕ್ ಸೇನೆ ಅಂತಹ ರಾಜಕೀಯ ನಾಯಕನನ್ನು ಅಪೇಕ್ಷಿಸುವುದೂ ಇಲ್ಲ, ಬೆಳೆಯಗೊಡುವುದೂ ಇಲ್ಲ. ಇಮ್ರಾನ್ ಖಾನ್ ‘ಮಿಸ್ಟರ್ ಕ್ಲೀನ್’ ಆಗಿ ಉಳಿಯುತ್ತಾರೋ ಅವರು ದೇಶ ತೊರೆಯುವ ಪರಿಸ್ಥಿತಿ ಬರುತ್ತದೋ ಇಮ್ರಾನ್, ಷರೀಫ್ ಮತ್ತು ಸೇನೆ ನಡುವಿನ ಈ ರಾಜಕೀಯ ಗುದ್ದಾಟ ಪಾಕಿಸ್ತಾನದಲ್ಲಿ ಅಂತರ್ಯುದ್ಧಕ್ಕೆ ಕಾರಣವಾಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT