ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಂಪನ್ಮೂಲ ಮತ್ತು ಒಕ್ಕೂಟ ವ್ಯವಸ್ಥೆ

ಕೇಂದ್ರ ಸರ್ಕಾರಕ್ಕೆ ವರಮಾನ ಹೆಚ್ಚು, ರಾಜ್ಯಗಳಿಗೆ ಹೊರೆ ಹೆಚ್ಚು
Published 29 ಮೇ 2023, 22:09 IST
Last Updated 29 ಮೇ 2023, 22:09 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಈಗ ರಾಜ್ಯದ ಚುಕ್ಕಾಣಿ ಹಿಡಿದಿದೆ. ಪಕ್ಷದ ‘ಗ್ಯಾರಂಟಿ’ಗಳ ಸುತ್ತ ತೀವ್ರ ಚರ್ಚೆ ನಡೆಯುತ್ತಿದೆ. ಇಂತಹ ಭರವಸೆಗಳು ಹೊಸವೇನಲ್ಲ. ಎಲ್ಲ ಪಕ್ಷಗಳೂ ಬೇರೆ ಬೇರೆ ಬಗೆಯ ಭರವಸೆಗಳನ್ನು ನೀಡುತ್ತಲೇ ಬಂದಿವೆ. ಕೆಲವನ್ನು ಫ್ರೀಬಿ ಅಂತಲೋ ರೇವ್ಡಿ ಅಂತಲೋ ಜರಿಯಲಾಗುತ್ತದೆ, ಮತ್ತೆ ಕೆಲವನ್ನು ಜನಕಲ್ಯಾಣ ಕಾರ್ಯಕ್ರಮಗಳು ಅಂತ ಸಮರ್ಥಿಸಲಾಗುತ್ತದೆ. ಯಾವುದು ಫ್ರೀಬಿ, ಯಾವುದು ಜನಕಲ್ಯಾಣ ಕಾರ್ಯಕ್ರಮ ಅಂತ ನಿರ್ಧರಿಸುವುದು ಹೇಗೆ? ಇಂತಹ ಕಾರ್ಯಕ್ರಮಗಳನ್ನು ರೇವ್ಡಿ ಅಂತ ಕರೆದ ಪ್ರಧಾನ ಮಂತ್ರಿಯವರೇ ಹೆಣ್ಣುಮಕ್ಕಳಿಗೆ ಪುಕ್ಕಟೆ ಸ್ಕೂಟರ್ ವಿತರಿಸುವ ಎಐಎಡಿಎಂಕೆ ಯೋಜನೆಯನ್ನು ಉದ್ಘಾಟಿಸಿ, ಇದು ತಮ್ಮ ಕನಸಿನ ಯೋಜನೆಯೆಂದು ಬಣ್ಣಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ‘ಶಾಸಕರಿಗೆ ಸಿಗುತ್ತಿರುವ ಪುಕ್ಕಟೆ ವಿದ್ಯುತ್, ವೈದ್ಯಕೀಯ, ಶಿಕ್ಷಣದಂತಹ ಸೌಲಭ್ಯಗಳನ್ನು ನಾನು ಸಾಮಾನ್ಯ ಜನರಿಗೂ ಸಿಗುವಂತೆ ಮಾಡಿದ್ದೇನೆ. ಬಿಲಿಯನೇರುಗಳಿಗೆ ತೆರಿಗೆ ಕಡಿತ, ಸಾಲ ಮನ್ನಾ ಮಾಡಿದರೆ ಅದನ್ನು ಆರ್ಥಿಕತೆಗೆ ನೀಡುವ ಉತ್ತೇಜನ ಅಂತ ಹೊಗಳುತ್ತಾರೆ. ಬಡವರಿಗೆ ಕೊಡುವ ನೆರವಿನಿಂದ ಆರ್ಥಿಕತೆ ದಿವಾಳಿಯಾಗುತ್ತದೆ ಅನ್ನುತ್ತಾರೆ. ಹೀಗೆ ಯೋಚಿಸುವುದರಲ್ಲೇ ಸಮಸ್ಯೆಯಿದೆ’ ಎನ್ನುತ್ತಾರೆ.

ಸರಿ, ಹಣ ಎಲ್ಲಿಂದ ತರುತ್ತೀರಿ ಅಂದರೆ, ‘ಬೇರೆಯವರಂತೆ ನಾನು ವಿಮಾನ ಕೊಳ್ಳುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ. ಆ ದುಡ್ಡಿನಲ್ಲಿ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತೇನೆ’ ಅನ್ನುತ್ತಾರೆ. ರಾಜ್ಯಗಳಿಗೆ ಕೇಂದ್ರವು ನ್ಯಾಯಯುತವಾಗಿ ಕೊಡಬೇಕಾದ ಹಣವನ್ನು ಕೊಟ್ಟರೆ ಯಾವ ರಾಜ್ಯಗಳಿಗೂ ಹಣದ ಸಮಸ್ಯೆಯಿಲ್ಲ ಅನ್ನುವುದು ಅವರ ವಾದ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ್ದ ವಿಶೇಷ ಅನುದಾನ 5,495 ಲಕ್ಷ ಕೋಟಿಯನ್ನು ಬಿಡುಗಡೆ ಮಾಡದೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಆರೋಪಿಸಿದ್ದಾರೆ.

ರಾಜ್ಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದದ್ದು ಸಿಗಬೇಕು ಹಾಗೂ ರಾಜ್ಯದ ಹಣಕಾಸು ವ್ಯವಹಾರದಲ್ಲಿ ಕೇಂದ್ರವು ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಅನ್ನುವುದು ಬಹುತೇಕ ರಾಜ್ಯಗಳ ಅಭಿಪ್ರಾಯ. ತಮಿಳುನಾಡಿನ ಹಣಕಾಸು ಸಚಿವರಾಗಿದ್ದ ಪಿಟಿಆರ್ ತ್ಯಾಗರಾಜನ್, ‘ರಾಜ್ಯದಲ್ಲಿ ಹಣವನ್ನು ಯಾವುದಕ್ಕೆ, ಎಷ್ಟು ಖರ್ಚು ಮಾಡಬೇಕು ಎನ್ನುವುದನ್ನು ಶಾಸಕಾಂಗ ನಿರ್ಧರಿಸುತ್ತದೆ. ಇದು ನಮ್ಮ ಸಂವಿಧಾನಾತ್ಮಕ ಹಕ್ಕು. ಕೇಂದ್ರವಾಗಲಿ, ಪ್ರಧಾನಮಂತ್ರಿಯವರಾಗಲಿ, ಸಂಸದರಾಗಲಿ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಹಾಗೆಯೇ ರಾಷ್ಟ್ರದ ಬಜೆಟ್ಟನ್ನು ಸಂಸತ್ತು ನಿರ್ಧರಿಸುತ್ತದೆ. ಜನ ನಮ್ಮ ಸರ್ಕಾರಕ್ಕೆ ಜವಾಬ್ದಾರಿ ನೀಡಿದ್ದಾರೆ. ನಾವು ಸರಿಯಾಗಿ ಖರ್ಚು ಮಾಡುತ್ತಿದ್ದೇವೋ ಇಲ್ಲವೋ ಅನ್ನುವುದನ್ನು ಜನ ನಿರ್ಧರಿಸುತ್ತಾರೆ. ತಮಿಳುನಾಡಿನ ಆರ್ಥಿಕತೆ ಬಹುತೇಕ ವಿಷಯಗಳಲ್ಲಿ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಭಾರತದ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಲು ವಿಫಲವಾಗಿರುವ, ಆ ಕ್ಷೇತ್ರದಲ್ಲಿ ಪರಿಣತಿಯೇ ಇಲ್ಲದ ಪ್ರಧಾನಿಯವರು ನಮಗೇಕೆ ಸಲಹೆ ಕೊಡಬೇಕು’ ಎಂದು ಖಾರವಾಗಿಯೇ ಕೇಳುತ್ತಾರೆ.

ಅಂದರೆ, ಮುಖ್ಯವಾಗಿ ಚರ್ಚೆ ನಡೆಯುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆ ಕುರಿತಂತೆ. ಕೇಂದ್ರದ ಕೇಂದ್ರೀಕರಣ ಪ್ರವೃತ್ತಿ ಕುರಿತಂತೆ. ಉದಾಹರಣೆಗೆ, ರಾಜ್ಯಗಳು ಎಷ್ಟು ಸಾಲ ಮಾಡಬಹುದು, ಎಷ್ಟು ಕೊರತೆ ಇರಬಹುದು ಅನ್ನುವುದು ರಾಜ್ಯಗಳ ನಿರ್ಧಾರಕ್ಕೆ ಬಿಟ್ಟ ವಿಷಯಗಳಾಗಿದ್ದವು. ಆದರೆ ಈಗ ಕೇಂದ್ರವು ಸಂವಿಧಾನದ 293(3) ವಿಧಿಯನ್ನು ಬಳಸಿಕೊಂಡು ರಾಜ್ಯಗಳನ್ನು ನಿಯಂತ್ರಿಸುತ್ತಿದೆ ಎನ್ನಲಾಗಿದೆ. ಆ ನಿಬಂಧನೆಯ ಪ್ರಕಾರ, ಯಾವುದಾದರೂ ರಾಜ್ಯವು ಕೇಂದ್ರದ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಲ್ಲಿ ಕೇಂದ್ರದ ಅನುಮತಿ ಪಡೆಯದೇ ‘ಯಾವುದೇ ಸಾಲವನ್ನು’ ಪಡೆಯುವಂತಿಲ್ಲ. ಸಮಸ್ಯೆಯೆಂದರೆ, ಜಾಗತಿಕ ಬ್ಯಾಂಕ್, ಎಡಿಬಿಯಂತಹ ಸಂಸ್ಥೆಗಳಿಂದ ಪಡೆದ ಸಾಲವೂ ಕೇಂದ್ರದ ಮೂಲಕವೇ ಬರುವುದರಿಂದ ಅದನ್ನೂ ಕೇಂದ್ರದ ಸಾಲವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ರಾಜ್ಯಗಳು ನಿರಂತರವಾಗಿ ಸಾಲಗಾರರಾಗಿ ಕೇಂದ್ರದ ನಿಯಂತ್ರಣದಲ್ಲೇ ಉಳಿದಿರುತ್ತವೆ.

ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ (ಎಫ್‍ಆರ್‌ಬಿಎಂ) ಕಾಯ್ದೆಯ ಪ್ರಕಾರ, ವಿತ್ತೀಯ ಕೊರತೆ ಶೇಕಡ 3ಕ್ಕಿಂತ ಕಡಿಮೆ ಇರಬೇಕು. ಆದರೆ ಕೇಂದ್ರ ಸಂಸತ್ತಿನಲ್ಲಿ ತಿದ್ದುಪಡಿ ತಂದು ಮಿತಿಯನ್ನು ವಿಸ್ತರಿಸಿಕೊಳ್ಳಬಹುದು. ಹಿಂದಿನ ವರ್ಷ ಕೇಂದ್ರದ ವಿತ್ತೀಯ ಕೊರತೆ ಶೇಕಡ 7ರ ಆಸುಪಾಸಿನಲ್ಲಿತ್ತು. ಆದರೆ ರಾಜ್ಯಗಳಿಗೆ ಈ ಸವಲತ್ತು ಇಲ್ಲ. ಶಾಸಕಾಂಗ ಸಭೆಯಲ್ಲಿ ಅದಕ್ಕೆ ಅನುಮತಿ ಸಿಕ್ಕರೂ ಅದಕ್ಕೆ ರಾಜ್ಯಪಾಲರ ಅನುಮೋದನೆ ಬೇಕು. ರಾಜ್ಯಪಾಲರ ಅನುಮತಿ ಸಿಕ್ಕರೂ 293(3) ವಿಧಿಯನ್ನು ಉಲ್ಲೇಖಿಸಿ ಕೇಂದ್ರ ಅದಕ್ಕೆ ಅಡ್ಡಿ ಮಾಡಬಹುದು.

ರಾಜ್ಯ ಸರ್ಕಾರಗಳಿಗೆ ಇನ್ನೊಂದು ಮುಖ್ಯ ತಕರಾರಿದೆ. ತೆರಿಗೆ ಸಂಗ್ರಹದ ಬಹುಪಾಲು ಅಧಿಕಾರವಿರುವುದು ಕೇಂದ್ರಕ್ಕೆ. ಆದರೆ ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು. ತೆರಿಗೆಯ ಸಿಂಹಪಾಲು ಹೋಗುವುದು ಕೇಂದ್ರಕ್ಕೆ, ಆದರೆ ಹೆಚ್ಚಿನ ಖರ್ಚು ಮಾಡುವುದು ರಾಜ್ಯ ಸರ್ಕಾರಗಳು. 15ನೇ ಹಣಕಾಸು ಆಯೋಗದ ವರದಿಯ ಪ್ರಕಾರ, ಒಟ್ಟು ತೆರಿಗೆಯಲ್ಲಿ ಕೇಂದ್ರಕ್ಕೆ ಹೋಗಿದ್ದು ಶೇ 62.7ರಷ್ಟು. ರಾಜ್ಯಗಳಿಗೆ ಸಿಕ್ಕಿದ್ದು ಬರೀ ಶೇ 37.3ರಷ್ಟು.

ಕೇಂದ್ರ ಹಾಗೂ ರಾಜ್ಯಗಳ ಅಧಿಕಾರ ಮತ್ತು ಜವಾಬ್ದಾರಿಯಲ್ಲಿ ಬಹಳಷ್ಟು ಅಸಮತೋಲನವಿದೆ. ಹಾಗಾಗಿಯೇ ಕೇಂದ್ರವು ರಾಜ್ಯಗಳ ಜೊತೆ ತೆರಿಗೆಯನ್ನು ಹಂಚಿಕೊಳ್ಳಬೇಕೆಂದು ಸಂವಿಧಾನ ತಿಳಿಸುತ್ತದೆ. ರಾಜ್ಯಕ್ಕೆ ಸಿಗುತ್ತಿರುವ ಪಾಲನ್ನು ಹೆಚ್ಚಿಸಲು ಹಣಕಾಸು ಆಯೋಗ ಪ್ರಯತ್ನಿಸುತ್ತಿದೆ. ಈಗ ಸದ್ಯಕ್ಕೆ ಕೇಂದ್ರ ಒಟ್ಟು ಸಂಗ್ರಹದಲ್ಲಿ ಶೇಕಡ 42ರಷ್ಟನ್ನು ಹಂಚಿಕೊಳ್ಳಬೇಕು. ಆದರೆ ರಾಜ್ಯಗಳಿಗೆ ಎಂದೂ ಈ ಪ್ರಮಾಣದಲ್ಲಿ ಹಣ ಬಂದಿಲ್ಲ. ಅದು ಶೇ 29ರ ಆಸುಪಾಸಿನಲ್ಲೇ ಇದೆ. ರಾಜ್ಯ ಸರ್ಕಾರಗಳನ್ನು ವಂಚಿಸುವುದಕ್ಕೆ ಕೇಂದ್ರ ಸರ್ಕಾರ ಹೆಚ್ಚೆಚ್ಚು ಉಪತೆರಿಗೆ (ಸರ್‌ಚಾರ್ಚ್) ಹಾಗೂ ಸೆಸ್ (ಮೇಲ್‍ತೆರಿಗೆ) ಹಾಕುತ್ತಿದೆ. ಇದನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ. ಹಾಗಾಗಿ ರಾಜ್ಯಗಳಿಗೆ ಬರಬೇಕಾದ ಪಾಲು ಕಡಿಮೆಯಾಗುತ್ತಿದೆ. ಅಷ್ಟೇಅಲ್ಲ, ರಾಜ್ಯ ಸರ್ಕಾರಗಳನ್ನು ಸಂಪರ್ಕಿಸದೆ ಕೇಂದ್ರವು ದಿಢೀರನೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದು ನೋಟು ರದ್ದತಿ ಇರಬಹುದು ಅಥವಾ ಕೋವಿಡ್ ಲಾಕ್‍ಡೌನ್ ಇರಬಹುದು. ಆದರೆ ಅದರ ಪರಿಣಾಮವನ್ನು ನಿರ್ವಹಿಸಬೇಕಾದದ್ದು ರಾಜ್ಯ ಸರ್ಕಾರಗಳು.

ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆಯೂ ರಾಜ್ಯಗಳಿಗೆ ಅತೃಪ್ತಿ ಇದೆ. ಯಾಕೆಂದರೆ ಎಲ್ಲ ರಾಜ್ಯಗಳಿಗೂ ಸಮಪಾಲು ಸಿಗುತ್ತಿಲ್ಲ. ಉದಾಹರಣೆಗೆ, ತಾವು ಕೇಂದ್ರಕ್ಕೆ ಕೊಡುವ ಒಂದು ರೂಪಾಯಿಗೆ ಪ್ರತಿಯಾಗಿ ಉತ್ತರ ಪ್ರದೇಶ 2.73 ರೂಪಾಯಿಯನ್ನು, ಬಿಹಾರ 7.06 ರೂಪಾಯಿಯನ್ನು ಪಡೆಯುತ್ತವೆ. ಆದರೆ ಕರ್ನಾಟಕ ಪಡೆಯುವುದು ಬರೀ 15 ಪೈಸೆ. ಎಲ್ಲ ರಾಜ್ಯಗಳಲ್ಲೂ ಸಮಾನವಾದ ಬೆಳವಣಿಗೆಯಾಗಬೇಕು ಅನ್ನುವ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ. ರಾಜ್ಯಗಳ ಜನಸಂಖ್ಯೆ, ತಲಾ ಆದಾಯ, ತೆರಿಗೆ ಸಂಗ್ರಹದಂತಹವುಗಳನ್ನು ಆಧರಿಸಿ ತೆರಿಗೆ ಹಣವನ್ನು ವಿತರಿಸಲಾಗುತ್ತದೆ. ಹಾಗಾಗಿಯೇ ಉತ್ತರ ಪ್ರದೇಶಕ್ಕೆ ಶೇ 17.9, ಬಿಹಾರಕ್ಕೆ ಶೇ 10, ಕರ್ನಾಟಕಕ್ಕೆ ಶೇ 3.65ರಷ್ಟು ಸಿಗುತ್ತದೆ.

ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ತೆರಿಗೆಯನ್ನು ಬಿಟ್ಟುಕೊಡಬೇಕು ಎನ್ನುವುದಕ್ಕೆ ಯಾರದೂ ತಕರಾರಿಲ್ಲ. ಆದರೆ ಆ ರಾಜ್ಯಗಳಲ್ಲಿ ಪ್ರಗತಿಯೇ ಅಗುತ್ತಿಲ್ಲ. ಹಣ ಪೋಲಾಗುತ್ತಿದೆ. ಆದರೂ ವರ್ಷದಿಂದ ವರ್ಷಕ್ಕೆ ಅವುಗಳಿಗೆ ಸಿಗುತ್ತಿರುವ ಪಾಲು ಹೆಚ್ಚುತ್ತಲೇ ಇದೆ. ದಕ್ಷಿಣದ ರಾಜ್ಯಗಳಿಗೆ ಸಿಗುತ್ತಿರುವ ಪಾಲು ಕಡಿಮೆಯಾಗುತ್ತಿದೆ. ಇದು ದಕ್ಷಿಣದ ರಾಜ್ಯಗಳ ಅತೃಪ್ತಿಗೆ ಕಾರಣ.

ಆರ್ಥಿಕ ಪ್ರಗತಿಗೆ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ ರಾಜ್ಯಗಳಿಗೆ ಸಂಪನ್ಮೂಲದ ಅವಶ್ಯಕತೆ ಇದೆ. ಜೊತೆಗೆ ಕೇಂದ್ರವು ಒಕ್ಕೂಟ ವ್ಯವಸ್ಥೆಯಿಂದ ಹೆಚ್ಚೆಚ್ಚು ದೂರ ಸರಿದು ರಾಜ್ಯಗಳಿಗೆ ಸಂಬಂಧಿಸಿದ ಕೃಷಿ, ಶಿಕ್ಷಣದಂತಹ ವಿಷಯಗಳಲ್ಲೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ನಿರ್ಧಾರಗಳನ್ನು ಜಾರಿಗೊಳಿಸುವ ಜವಾಬ್ದಾರಿ ರಾಜ್ಯಗಳದ್ದೇ ಆಗಿರುವುದರಿಂದ ರಾಜ್ಯಗಳ ಹೊರೆ ಜಾಸ್ತಿಯಾಗುತ್ತಿದೆ. ಅಂದರೆ ರಾಜಕೀಯ, ಆರ್ಥಿಕ ಹಾಗೂ ಹಣಕಾಸಿನ ಅಧಿಕಾರ ಕೇಂದ್ರೀಕೃತವಾಗುತ್ತಿದೆ. ಆದರೆ ಜವಾಬ್ದಾರಿ ಹಾಗೂ ಹೊಣೆಗಾರಿಕೆ ವಿಕೇಂದ್ರೀಕರಣಗೊಳ್ಳುತ್ತಿದೆ. ಹಾಗಾಗಿ ಇಂದು ರಾಜ್ಯಗಳು ಸಂಪನ್ಮೂಲವನ್ನು ಕ್ರೋಡೀಕರಿಸಿಕೊಳ್ಳಲು ಹೆಣಗಾಡುತ್ತಲೇ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಕ್ಕೂ ಹೋರಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT