ಲಿಂಗಾಧಾರಿತ ತಾರತಮ್ಯ, ಅಸಮಾನತೆಗಳು ಸಮಾಜದಲ್ಲಿ ಆಳವಾಗಿ ಬೇರೂರಿವೆ. ಅವುಗಳಿಂದಾಗಿ ಹೆಣ್ಣುಮಕ್ಕಳು ಮತ್ತೆ ಮತ್ತೆ ಸಂಕಷ್ಟ, ದೌರ್ಜನ್ಯ, ಹಿಂಸೆ, ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಅಂಥ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು, ದೌರ್ಜನ್ಯ ನಡೆಯದಂತೆ ತಡೆಯುವುದು, ಸಂಕಷ್ಟಕ್ಕೆ
ಒಳಗಾದವರಿಗೆ ತಕ್ಷಣದ ಸಾಂತ್ವನ, ಆಪ್ತಸಮಾಲೋಚನೆ, ಕಾನೂನು ನೆರವು, ಆರ್ಥಿಕ ಬೆಂಬಲ ನೀಡಿ ಮಹಿಳೆ ಧೃತಿಗೆಡದಂತೆ, ಬದುಕಿನಿಂದ ವಿಮುಖಗೊಳ್ಳದಂತೆ ಅನುಪಾಲನೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಎಲ್ಲ ಉದ್ದೇಶಗಳನ್ನು ಮೂಲಮಟ್ಟದಲ್ಲಿ ಮತ್ತು ವಿಕೇಂದ್ರೀಕೃತವಾಗಿ ಪೂರೈಸುವ ಒಂದು ಸಾಧನವಾಗಿ ‘ಸಾಂತ್ವನ ಕೇಂದ್ರ’ಗಳು ಕಾರ್ಯನಿರ್ವಹಿಸುತ್ತಿವೆ.

ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ‘ಸಾಂತ್ವನ’ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಇಲಾಖೆಯು ಸ್ವಯಂ ನಿರ್ವಹಿಸಲು ಸಾಧ್ಯವಿಲ್ಲವೆಂದು, ಸ್ವಯಂಸೇವಾ ಸಂಸ್ಥೆಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿಯೂ 181 ಸಹಾಯವಾಣಿ ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ ಸಂಕಷ್ಟಕ್ಕೊಳಗಾದ ಮಹಿಳೆಯರಿಂದ ಶುಲ್ಕರಹಿತ ಕರೆಗಳನ್ನು ಸ್ವೀಕರಿಸಿ, ತಕ್ಷಣವೇ ನೆರವು ನೀಡಲಾಗುತ್ತಿದೆ. ಈ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾ 25 ವರ್ಷಗಳೇ ಸಂದಿವೆ.

ಹೆಣ್ಣುಮಕ್ಕಳ ಮೇಲಾಗುವ ವರದಕ್ಷಿಣೆ ಹಿಂಸೆ, ಕೌಟುಂಬಿಕ ದೌರ್ಜನ್ಯ–ವ್ಯಾಜ್ಯ, ವಿವಾಹೇತರ ಸಂಬಂಧದ ಕಲಹ, ಕುಡುಕ ಗಂಡನಿಂದ ಕಿರುಕುಳ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಗಳಿಗೆ ಆಪ್ತಸಮಾಲೋಚನೆ, ಸಾಂತ್ವನ, ತಾತ್ಕಾಲಿಕ ಆಶ್ರಯ, ಕಾನೂನಿನ ಸಹಾಯ, ತಳಹಂತದಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಪೊಲೀಸ್ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ‘ಸಾಂತ್ವನ’ ಯೋಜನೆಯನ್ನು ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2000–2001ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಯಿತು. ಅದೊಂದು ಪರಿಣಾಮಕಾರಿ ಯೋಜನೆಯೆಂದು ಮನವರಿಕೆಯಾದ ನಂತರ 2007–2008ರಿಂದ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಸಾಂತ್ವನ ಕೇಂದ್ರಗಳು ಸ್ಥಾಪನೆಯಾಗಿ, ಒಟ್ಟು 194 ಕೇಂದ್ರಗಳು ಕಾರ್ಯನಿರ್ವಹಿಸುತ್ತಾ ಬಂದವು.

ಇತ್ತೀಚಿನ ವರ್ಷಗಳಲ್ಲಿ ಸಾಂತ್ವನ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನಗಳು ಸರ್ಕಾರ
ದಿಂದ ನಡೆಯುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ, ಹೆಣ್ಣುಮಕ್ಕಳಿಗಾಗಿ ವಿವಿಧ ಯೋಜನೆಗಳು, ಸವಲತ್ತುಗಳು, ಕಾರ್ಯಕ್ರಮಗಳು ಜಾರಿಯಲ್ಲಿವೆ. ಆದರೆ, ಸಂಕಷ್ಟಕ್ಕೆ ಸಿಲುಕಿ, ಸಹಾಯಕ್ಕಾಗಿ ಇಲಾಖೆಯನ್ನು ಸಂಪರ್ಕಿಸುವ ಮಹಿಳೆಯರೊಂದಿಗೆ ಗಂಟೆಗಟ್ಟಲೆ ಮಾತುಕತೆ, ಮಧ್ಯಸ್ಥಿಕೆ ನಡೆಸಿ, ಸೂಕ್ತ ಮಾರ್ಗದರ್ಶನ, ಬೆಂಬಲ ಮತ್ತು ದಾರಿ ತೋರಲು ಯಾವ ಸಶಕ್ತ ಉಪಕ್ರಮವೂ ಇಲ್ಲ. ಸಾಂತ್ವನ ಕೇಂದ್ರಗಳು ಈ ಕೆಲಸವನ್ನು ಸಮರ್ಥವಾಗಿ ಮಾಡುತ್ತಾ ಬಂದಿವೆ.

2021ರಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಮೊದಲ ಬಾರಿಗೆ 71 ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಯಿತು. ಅದು ಕೋವಿಡ್ ಸೋಂಕು ತೀವ್ರವಾಗಿದ್ದ ಸಂದರ್ಭ. ಆರ್ಥಿಕ ಕೊರತೆ ಮತ್ತು ಜಿಲ್ಲೆಗಳಲ್ಲಿ ‘ಸಖಿ’ ಒನ್ ಸ್ಟಾಪ್ ಸೆಂಟರ್, ಸ್ವಾಧಾರ ಕೇಂದ್ರ, ರಾಜ್ಯದ ಹಲವೆಡೆ ಮಹಿಳಾನಿಲಯಗಳು ಇಂತಹುದೇ ಕಾರ್ಯ ನಿರ್ವಹಿಸುತ್ತಿರುವುದರಿಂದ ‘ಸಾಂತ್ವನ’ ಕೇಂದ್ರಗಳು ಅನುಪಯುಕ್ತವೆಂಬ ಕುಂಟುನೆಪ ನೀಡಲಾಗಿತ್ತು. ಸರ್ಕಾರದ ಆದೇಶ ಜಾರಿಗೆ ಬಂದಿದ್ದರೆ ಆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ 300ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನಿರುದ್ಯೋಗಿಗಳಾಗುತ್ತಿದ್ದರು. ಅದನ್ನು ತಪ್ಪಿಸಲು ನಿರಂತರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಯ್ತು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಆರ್ಥಿಕ ಕೊರತೆಯ ನೆಪವೊಡ್ಡಿ, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸದಂತೆ’ ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದೆಲ್ಲದರ ಪರಿಣಾಮ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ, ಅಷ್ಟರಲ್ಲಿ ಕೆಲವು ತಾಲ್ಲೂಕುಗಳಲ್ಲಿ ಸಾಂತ್ವನ ಕೇಂದ್ರಗಳು ಮುಚ್ಚಿಹೋಗಿದ್ದವು. ಪ್ರಸ್ತುತ ರಾಜ್ಯದಲ್ಲಿ 176 ಸಾಂತ್ವನ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

2024ರಲ್ಲಿಯೂ ಹಣದ ಕೊರತೆಯಿಂದಾಗಿ ಸಾಂತ್ವನ ಕೇಂದ್ರಗಳನ್ನು ಸೆಪ್ಟೆಂಬರ್ 2025ರೊಳಗೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ ಹೊರಬಿತ್ತು. ವಿಪರ್ಯಾಸವೆಂದರೆ, ಸಾಂತ್ವನ ಕೇಂದ್ರಗಳನ್ನು ಮುಚ್ಚಬಾರದೆಂದು ಅಂದು ಪತ್ರ ಬರೆದಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿ!

ಪ್ರಸ್ತುತ, ಪ್ರತಿ ಸಾಂತ್ವನ ಕೇಂದ್ರದಲ್ಲಿ ನಾಲ್ಕು ಸಿಬ್ಬಂದಿಯಷ್ಟೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ನಾಲ್ಕು ತಿಂಗಳಿಗೊಮ್ಮೆ ಗೌರವಧನ ಬಿಡುಗಡೆಯಾಗುತ್ತಿದೆ. ಒಂದು ಕೇಂದ್ರಕ್ಕೆ, ತಿಂಗಳಿಗೆ 55ರಿಂದ 60 ಸಾವಿರ ರೂಪಾಯಿಗಳನ್ನಷ್ಟೇ ಸರ್ಕಾರ ವೆಚ್ಚ ಮಾಡುತ್ತಿದೆ. ಕೇಂದ್ರದ ಹೆಚ್ಚುವರಿ ಖರ್ಚುಗಳನ್ನು ಸ್ವಯಂಸೇವಾ ಸಂಸ್ಥೆಗಳು ಭರಿಸುತ್ತಿವೆ. ನಾಡಿನ ಸಂಕಷ್ಟದಲ್ಲಿರುವ ಮಹಿಳೆಯರ ಸಮಸ್ಯೆಗೆ ಪರಿಹಾರ ಒದಗಿಸಲು ಇಷ್ಟು ಹಣ ವಿನಿಯೋಗಿಸುವುದೂ ಘನ ಸರ್ಕಾರಕ್ಕೆ ಕಷ್ಟವೇ?

ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವಂತೆ 2024ರಲ್ಲೂ ಮಹಿಳಾ ಸಮುದಾಯದಿಂದ, ಹೋರಾಟಗಾರರಿಂದ ಹಾಗೂ ಕೆಲವು ಜನಪ್ರತಿನಿಧಿಗಳಿಂದ ಒತ್ತಡ ಹೇರಲಾಯ್ತು. ನಂತರ ಇಲಾಖೆಯ ಉನ್ನತಾಧಿಕಾರಿಗಳು, ಆಯಾ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸ್ಥಳೀಯವಾಗಿ ಸಾಂತ್ವನ ಕೇಂದ್ರ ಬೇಕೋ ಬೇಡವೋ ನಿರ್ಧರಿಸಿ ತಿಳಿಸಲು ಪತ್ರ ಬರೆದಿದ್ದರು. ಅದರಂತೆ 23 ಜಿಲ್ಲೆಗಳಿಂದ ‘ಸಾಂತ್ವನ ಕೇಂದ್ರಗಳು ಬೇಕು’ ಎಂಬ ಶಿಫಾರಸು ಹೋದ ನಂತರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳು ಕೇಂದ್ರಗಳ ಮುಂದುವರಿಕೆಗೆ ಆದೇಶಿಸಿದ್ದರು. ಆದರೆ, ಆರ್ಥಿಕ ಇಲಾಖೆಯ ಶಿಫಾರಸಿನಂತೆ ಈಗ ಮತ್ತೆ 2026–27ರೊಳಗೆ 23 ಜಿಲ್ಲಾ ಸಾಂತ್ವನ ಕೇಂದ್ರಗಳನ್ನು ಮುಚ್ಚಿ, ಅವಶ್ಯಕತೆ ಇರುವ ತಾಲ್ಲೂಕು ಕೇಂದ್ರಕ್ಕೆ ಅವನ್ನು ಸ್ಥಳಾಂತರ ಮಾಡಲು ಆದೇಶಿಸಿದೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ದಶಕಗಳಿಂದ ಸ್ಥಾಪನೆಗೊಂಡು ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗಿದು ಆಗದ ಕೆಲಸ. ಜೊತೆಗೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಈಗಾಗಲೇ ಸಾಂತ್ವನ ಕೇಂದ್ರಗಳಿದ್ದರೆ ಏನು ಮಾಡಬೇಕೆಂದು ಆದೇಶ ತಿಳಿಸಿಲ್ಲ. ಮುಂದುವರಿಸಲು ಆಗದಿದ್ದರೆ ಒಳ್ಳೆಯದೇ ಆಯ್ತು, ಶಾಶ್ವತವಾಗಿ ಮುಚ್ಚಿಬಿಡಲಿ ಎಂಬುದೇ ಸರ್ಕಾರದ ಧೋರಣೆ ಆಗಿರುವಂತಿದೆ.

ಕೇಂದ್ರ ಸರ್ಕಾರದಿಂದ 2012ರಲ್ಲಿ ಹೊರಡಿಸಲಾದ ಆದೇಶದಂತೆ, ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ರೂಪಿಸಲಾಗಿರುವ ‘ಸಖಿ ಒನ್ ಸ್ಟಾಪ್ ಸೆಂಟರ್’ನಂತೆಯೇ ಇರುವುದರಿಂದ, ‘ಸಾಂತ್ವನ ಕೇಂದ್ರ’ಗಳು ಅನಗತ್ಯ ಎಂದು ಹೇಳಲಾಗುತ್ತಿದೆ. ಆದರೆ, ಸಖಿ ಕೇಂದ್ರಗಳು– ವಿವಿಧ ರೀತಿಯ ಹಿಂಸೆ, ಅತ್ಯಾಚಾರ, ಲೈಂಗಿಕ ಕಿರುಕುಳ, ನಾಪತ್ತೆ–ಅಪಹರಣ–ಕಳ್ಳಸಾಗಣೆ, ಸೈಬರ್ ಅಪರಾಧ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ... ಇವುಗಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುವ ಮಹಿಳೆ ಮತ್ತು ಮಕ್ಕಳ ಸಂಬಂಧಿತವಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳೆಲ್ಲ ಕಾನೂನಿನ ಕಕ್ಷೆಗೆ ನೇರವಾಗಿ ಒಳಪಡುವುದರಿಂದ ಸಂತ್ರಸ್ತರಿಗೆ ಒಂದೇ ಸೂರಿನಡಿ ಆಪ್ತಸಮಾಲೋಚನೆ, ಚಿಕಿತ್ಸೆ, ಕಾನೂನು, ಪೊಲೀಸ್ ಮತ್ತು ಪರಿಹಾರದ ತುರ್ತು ಸೇವೆ ಒದಗಿಸುವುದು ಸುಲಭವಾಗುತ್ತದೆ.

ಸಾಂತ್ವನ ಕೇಂದ್ರಕ್ಕೆ ಬರುವ ಹೆಚ್ಚಿನವರು ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೆಟ್ಟಿಲೇರದೆಯೇ ಕೌಟುಂಬಿಕ ಸಮಸ್ಯೆಯನ್ನು ಮಧ್ಯಸ್ಥಿಕೆ, ಮಾತುಕತೆ, ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಿಕೊಳ್ಳಲು ಬಯಸುತ್ತಾರೆ. ಹೀಗಾಗಿ, ಸಾಂತ್ವನ ಕೇಂದ್ರಗಳು ಬಹುಮುಖ್ಯವಾಗಿ ಸಶಕ್ತವಾದ ಮಧ್ಯಸ್ಥಿಕೆ ಮತ್ತು ಅನುಪಾಲನಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ತೀವ್ರ ರೀತಿಯ ಸಮಸ್ಯೆ ಇದ್ದು, ‘ಸಾಂತ್ವನ’ದಲ್ಲಿ ಬಗೆಹರಿಸಲಾಗದಿದ್ದರೆ, ಆ ಕೇಂದ್ರದವರೇ ತಮ್ಮ ಬಳಿಗೆ ನೆರವು ಕೋರಿ ಬಂದವರನ್ನು ಸಖಿ ಒನ್ ಸ್ಟಾಪ್ ಸೆಂಟರ್, ಪೊಲೀಸ್, ಕಾನೂನು ನೆರವಿಗೆ ಕರೆದೊಯ್ಯುತ್ತಾರೆ. ನಿರ್ಗತಿಕ ಅಥವಾ ಪರಿತ್ಯಕ್ತ ಮಹಿಳೆಯರಾಗಿದ್ದರೆ ಅವರನ್ನು ಸ್ವಾಧಾರ ಮತ್ತು ರಾಜ್ಯ ಮಹಿಳಾನಿಲಯಗಳಿಗೆ ಸೇರ್ಪಡೆಗೊಳಿಸುತ್ತಾರೆ. ಇದಲ್ಲದೇ ಸಾಂತ್ವನದವರು ತಮ್ಮ ತಾಲ್ಲೂಕಿನ ವ್ಯಾಪ್ತಿಯ ಹಳ್ಳಿಗಳ ಮಹಿಳೆಯರು, ಸ್ವಸಹಾಯ–ಸ್ತ್ರೀಶಕ್ತಿ ಸಂಘಗಳಿಗೆ ಇಲಾಖೆಯಿಂದ ಮಹಿಳಾ ಸಂಬಂಧಿತವಾಗಿ ಇರುವ ಯೋಜನೆಗಳು, ಅನುಕೂಲಗಳು, ಕಾನೂನಿನ ನೆರವು, ಮಹಿಳಾ ಸಹಾಯವಾಣಿಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ಬಹುಮುಖ್ಯವಾಗಿ ಸಾಂತ್ವನ ಕೇಂದ್ರಗಳು ಸಂತ್ರಸ್ತರಿಗೆ ಮೊದಲ ಹಂತದ ಮಾರ್ಗದರ್ಶನ, ಆಪ್ತಸಮಾಲೋಚನೆ, ಮಧ್ಯಸ್ಥಿಕೆಯನ್ನು ನಿರ್ವಹಿಸುವ ಸಮನ್ವಯ ಘಟಕಗಳಾಗಿ, ಕಲ್ಯಾಣ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಇನ್ನಷ್ಟು ಸ್ಪಷ್ಟವಾಗಿ ಮತ್ತು ನಿಖರವಾಗಿ ಈ ದಿಕ್ಕಿನೆಡೆಗೆ ಕೆಲಸ ಮಾಡಲೂ ಈ ಸಿಬ್ಬಂದಿಗೆ ಪೂರಕ ತರಬೇತಿ, ಮಾರ್ಗದರ್ಶನ ಮತ್ತು ಜವಾಬ್ದಾರಿಯನ್ನು ಸರ್ಕಾರ ನೀಡಬೇಕಿದೆ.

ಜಿಲ್ಲಾಮಟ್ಟದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಕಲಹ, ಮಹಿಳೆಯರ ಸಂಕೀರ್ಣ ಸಮಸ್ಯೆಗಳನ್ನು ನಿಯಂತ್ರಿಸಲು ಸರ್ಕಾರವು ತಾಯ್ತನದ ಪಾತ್ರ ವಹಿಸಿ, ಸಶಕ್ತವಾಗಿ ಸೇವೆ ಒದಗಿಸುವ ಸಾಂತ್ವನ ಕೇಂದ್ರದಂತಹ ಯೋಜನೆ, ನೆಲೆಗಳನ್ನು ಇನ್ನಷ್ಟು ಸ್ಥಾಪಿಸಬೇಕು. ಹಾಗೂ ಉಳಿಕೆ ಇರುವ ಜಿಲ್ಲೆ, ತಾಲ್ಲೂಕುಗಳಲ್ಲೂ ಸಾಂತ್ವನ ಕೇಂದ್ರಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು. ಪ್ರಸ್ತುತ, ಜಿಲ್ಲಾ ಕೇಂದ್ರಗಳಲ್ಲಿ ಇರುವ ‘ಸಾಂತ್ವನ’ ವ್ಯವಸ್ಥೆಯನ್ನು ಯಾವ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂಬುದು ರಾಜ್ಯದ ಹೆಣ್ಣುಸಂಕುಲದ ಒಕ್ಕೊರಲ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.