ಜಗದ ಕರುಣೆಯೆ ಮೈದಳೆದು ಬಂದವ ಬುದ್ಧ. ರೋಹಿಣಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಹುಟ್ಟಿದ ಕೋಲಿ ಹಾಗೂ ಶಾಕ್ಯರ ನಡುವಿನ ಯುದ್ಧವನ್ನು ತಡೆಯಲು, ಕಿರೀಟ ಸಿಂಹಾಸನಗಳ ಹಂಗನ್ನು ತೊರೆದು ಕಾಡಿಗೆ ನಡೆದವ. ಇದೇ ಸಿಂಹಾಸನಗಳ ಅಧಿಕಾರಕ್ಕಾಗಿ ಯುದ್ಧಗಳನ್ನು ಸೃಷ್ಟಿಸುತ್ತಿರುವ ಪ್ರತಿಷ್ಠೆಯ ಪ್ರಭುಗಳಿಗೆ, ‘ಇಂದಿನ ತುರ್ತು – ಯುದ್ಧ ಅಲ್ಲ, ಬುದ್ಧ’ ಎಂಬ ಸತ್ಯ ಅರಿವಾಗುತ್ತಿಲ್ಲ. ನಿರಂತರ ಯುದ್ಧಗಳ ಮೂಲಕ ಲಕ್ಷಾಂತರ ಜೀವಗಳನ್ನು ಕೊಂದು ‘ಚಂಡಾಶೋಕ’ ಎಂದು ಹೆಸರಾಗಿದ್ದ ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ನಂತರ ಬದಲಾಗಲು ಪ್ರೇರಣೆ ನೀಡಿದ್ದು ಬುದ್ಧನ ಮಹಾಕರುಣೆ. ಅಂಗುಲಿಮಾಲನಂತಹ ಕ್ರೂರಿಯ ಹೃದಯವನ್ನು ಪರಿವರ್ತಿಸಿದ್ದು ಬುದ್ಧನ ಮೈತ್ರೀಭಾವ.

ಈ ಲೋಕದಲ್ಲಿ ಯಾವುದೂ ಬೇರೆ ಬೇರೆ ಅಲ್ಲ. ಎಲ್ಲವೂ ಪರಸ್ಪರ ಅವಲಂಬಿ. ವಿಶ್ವವೇ ಒಂದು ಸರಪಳಿ, ಅದು ಎಂದಿಗೂ ತುಂಡಾಗುವುದಿಲ್ಲ ಎನ್ನುವುದು ಬುದ್ಧ ತೋರಿದ ಅರಿವು. ಜಾತಿಯಿಲ್ಲ, ಅಸಮಾನತೆಯಿಲ್ಲ, ಶ್ರೇಷ್ಠತೆಯಿಲ್ಲ, ಕನಿಷ್ಠತೆಯಿಲ್ಲ, ಎಲ್ಲರೂ ಸಮಾನರು ಎಂಬ ಸಾಮಾಜಿಕ ಸಮಾನತೆಯ ದೃಷ್ಟಿಕೋನ ಆತನದು. ತಳ ಸಮುದಾಯದ ಉಪಾಲಿ, ಸುನೀತ, ಸುಪ್ರಿಯ, ಸುಮಂಗಲ – ಯಾರೂ ಆತನಿಗೆ ಅನ್ಯರಲ್ಲ. ಅರಸನ ಆತಿಥ್ಯಕ್ಕಿಂತ ಬಡವ ಚುಂದ, ವೇಶ್ಯೆ ಆಮ್ರಪಾಲಿಯವರಂತಹ ಸಾಮಾನ್ಯರ ಒಡನಾಟದಲ್ಲಿ ಸಂತೃಪ್ತಿ ಕಂಡವ. ‘ಬಡತನಕ್ಕಿಂತ ದೊಡ್ಡ ಶಾಪವಿಲ್ಲ, ಹಸಿವಿಗಿಂತ ಹಿರಿದಾದ ರೋಗವಿಲ್ಲ’ ಎನ್ನುವ ಬುದ್ಧನ ಸಾಮಾಜಿಕ ಮೀಮಾಂಸೆಗೆ ಎಣೆಯುಂಟೆ? ಈ ಲೋಕದ ಕೊನೆಯ ಜೀವಿಗೆ ಮುಕ್ತಿ ದೊರೆಯುವ ತನಕ ನನಗೂ ನಿರ್ವಾಣ ಬೇಡ ಎಂದ ಆತನ ಮಹಾಕರುಣೆಗೆ ಕೊನೆಯೆಲ್ಲಿ?

ಬುದ್ಧ ಜನಸಾಮಾನ್ಯರ, ವೃದ್ಧರ, ರೋಗಿಗಳ ಸೇವೆಯಲ್ಲಿ ಸಾರ್ಥಕತೆ ಕಾಣುತ್ತಿದ್ದ. ಕುಷ್ಠ ರೋಗಿಗಳ ಗಾಯಗಳನ್ನು ಒರೆಸಿ ಶುಚಿಗೊಳಿಸಿದ್ದ. ಕ್ರಿಸ್ತ ಅನುಸರಿಸಿದ್ದೂ ಇದೇ ದಾರಿಯನ್ನು. ಬುದ್ಧನಂತೆ ಯೇಸುವೂ ಎಲ್ಲ ಬಗೆಯ ಹಿಂಸೆಯ ವಿರುದ್ಧವಾಗಿದ್ದ.

ಸತ್ಯಾನ್ವೇಷಣೆಯ ಮೂಲಕ, ತೆರೆದ ಹೃದಯದಿಂದ ಮಾತ್ರ ನಿಜವಾದ ಸತ್ಯದ ಗ್ರಹಿಕೆ ಆಗುವುದನ್ನು ಬುದ್ಧ ಮನಗಂಡ. ‘ಸತ್ಯವನ್ನಲ್ಲದೆ ಬೇರೇನನ್ನೂ ಒಪ್ಪದಿರು. ಪ್ರಶ್ನಿಸು ಹಾಗೂ ಪರೀಕ್ಷಿಸು. ಯಾವುದನ್ನೂ ಹಾಗೆಯೇ ಕಣ್ಮುಚ್ಚಿ ಒಪ್ಪದಿರು’ ಎಂದ ಆತ, ಕಿಸಾಗೌತಮಿಗೆ ಸಾವಿನ ಸತ್ಯವನ್ನು ಪ್ರಾಯೋಗಿಕವಾಗಿಯೇ ಅರ್ಥೈಸಿದ ರೀತಿ ವಿಶಿಷ್ಟವಾದುದು.

ಇಂದಿನ ಮತ–ಧರ್ಮಗಳು ವಿಜ್ಞಾನದ ಸತ್ಯಾನ್ವೇಷಣೆಯ ಪ್ರಭೆಗೆ ಹೆದರಿ ಅದನ್ನು ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸುತ್ತಿವೆ. ಬೌದ್ಧ, ಜೈನಧರ್ಮಗಳು ಆ ಕಾಲಕ್ಕೆ ಪ್ರತಿಪಾದಿಸಿದ್ದ ವಿಕಾಸವಾದವನ್ನು ಇಂದಿಗೂ ಮತ–ಧರ್ಮಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಜಗತ್ತನ್ನು ಯಾರೂ ಸೃಷ್ಟಿಸಲಿಲ್ಲ. ಸೃಷ್ಟಿಕರ್ತ ಎಂಬ ಒಂದು ಶಕ್ತಿ ಇಲ್ಲ. ಈ ಜಗತ್ತು ಹಿಂದೆಯೂ ಇತ್ತು, ಇಂದಿಗೂ ಇದೆ, ಮುಂದೆಯೂ ಇರುತ್ತದೆ ಎನ್ನುವ ಬುದ್ಧನ ಮಾತು ಡಾರ್ವಿನ್ನನ ವಿಕಾಸವಾದದ ಮೂಲಕ ವೈಜ್ಞಾನಿಕ ಮಾನ್ಯತೆ ಪಡೆದುಕೊಂಡಿತು. ವಿಚಿತ್ರವೆಂದರೆ, ಈ ಕಾಲಕ್ಕೂ ವಿಕಾಸವಾದದ ಪಠ್ಯವನ್ನು ವಿಜ್ಞಾನ ಪಠ್ಯದಿಂದ ನಿರ್ಬಂಧಿಸಿದ ಮತ–ಧರ್ಮಗಳಿವೆ. ಬಾವಿಯ ಕಪ್ಪೆಯ ನೆನಪಾಗುತ್ತಿದೆಯೆ?

ಬುದ್ಧ ಏಕಕಾಲಕ್ಕೆ ವೈದ್ಯನೂ ಹೌದು, ಸಾಮಾಜಿಕ ಹೋರಾಟಗಾರನೂ ಹೌದು. ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸಿದ, ಅವರ ನೋವಿಗೆ ಮಿಡಿದ, ಅವರ ಹಕ್ಕುಗಳ ಪರವಾಗಿ ಮೊದಲ ಸಲ ದನಿಯೆತ್ತಿದ ಮಹಾ ಪ್ರಜಾಪ್ರಭುತ್ವವಾದಿಯೂ ಹೌದು. ಬುದ್ಧ ವಿಜ್ಞಾನಕ್ಕೆ ವಿರುದ್ಧವಾದುದನ್ನು ಏನನ್ನೂ ಹೇಳಿಲ್ಲ. ಮಾತ್ರವಲ್ಲ, ಆತನ ಚಿಂತನೆಗಳು ಆಧುನಿಕವೂ ವೈಚಾರಿಕವೂ ಹಾಗೂ ಆಧ್ಯಾತ್ಮಿಕವೂ ಆಗಿರುವುದನ್ನು ಗಮನಿಸಬಹುದು. ಹೀಗಾಗಿ ಇಂದಿನ ಕಾಲದಲ್ಲಿ ವಿಜ್ಞಾನಕ್ಕೆ ಸಂಪೂರ್ಣವಾಗಿ ತೆರೆದುಕೊಂಡ ಜಗತ್ತಿನ ಏಕೈಕ ಧರ್ಮ ಭೌದ್ಧಧರ್ಮ ಎಂದು ರಸೆಲ್ ಮೊದಲಾದವರು ಹೇಳಿರುವುದು ಸರಿಯಾಗಿದೆ.

ನಿರಂತರ ಬದಲಾಗುತ್ತಿರುವ ಲೋಕಪ್ರವಾಹದಲ್ಲಿ ಧಾರ್ಮಿಕ ನಿಯಮಗಳನ್ನು ಹೇರುವುದು ಕಾಲಕ್ಕೆ ವಿರುದ್ಧವಾದುದು. ನಿಯಮಗಳೇ ನಿರ್ಬಂಧಗಳಾಗಿ, ಪ್ರಭುತ್ವದ ಕೈಯಲ್ಲಿ ಅಸ್ತ್ರಗಳಾಗಿ ಬಳಕೆಯಾಗುತ್ತಿರುವ ಈ ಹೊತ್ತು, ಧಾರ್ಮಿಕ ನಿಯಮಗಳಿಗಿಂತ ಪ್ರಜಾಪ್ರಭುತ್ವದ ಆಶಯಗಳು ಮುನ್ನೆಲೆಗೆ ಬರಬೇಕಾಗಿದೆ. ಪರಿವರ್ತನೆಯೇ ಜಗದ ನಿಯಮವಾಗಿರುವ ಲೋಕದಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತದೆ.

ಬದಲಾಗುತ್ತಿರುವ ಈ ಲೋಕದಲ್ಲಿ ನಾವೂ ಬದಲಾಗುವುದು, ಕಾಲಗತಿಯೊಂದಿಗೆ ಹೆಜ್ಜೆ ಹಾಕುವುದು ಅನಿವಾರ್ಯ ಎಂಬುದನ್ನು ಬುದ್ಧ ಸೂಚಿಸುತ್ತಾನೆ. ಯಾವುದು ಈ ಕಾಲಕ್ಕೆ ಬೇಡವೋ ಅದನ್ನು ನಿನ್ನ ಧರ್ಮಗ್ರಂಥದಿಂದ ತೆಗೆದುಬಿಡು. ಯಾವುದು ಬೇಕಾಗಬಹುದೋ ಅದನ್ನು ಸೇರಿಸಲು ಹಿಂಜರಿಯದಿರು ಎನ್ನುತ್ತಾನೆ. ಹೀಗಾಗಿ ಬುದ್ಧನ ಧರ್ಮ ಆಗಿಹೋದ ಧರ್ಮವಾಗಿರದೆ, ಅದು ಕಾಲಗತಿಯೊಂದಿಗೆ ನಿರಂತರವಾಗಿ ಚಲಿಸುತ್ತಿರುವ ಧರ್ಮವಾಗಿದೆ. ಎಲ್ಲರ, ಎಲ್ಲ ಕಾಲದ ಧರ್ಮವಾಗಿದೆ. ‘ನಾನು ನಿಮಗೆ ಮಾರ್ಗದರ್ಶಿ ಮಾತ್ರ. ನಿಮಗೆ ನೀವೇ ಬುದ್ಧರಾಗಬೇಕು. ನಿಮ್ಮೊಳಗಿನ ಬುದ್ಧತ್ವವನ್ನು ನೀವೇ ಕಂಡುಕೊಳ್ಳಿ’ ಎನ್ನುವುದು ಬುದ್ಧನ ಮಾತು.

ಬುದ್ಧ ವ್ಯಕ್ತಿಯಾಗಿ ಉಳಿಯದೆ ಲೋಕದೃಷ್ಟಿಯಾಗಿ, ಆಧುನಿಕ ಮನೋಧರ್ಮವಾಗಿ ಬದಲಾಗಿರುವುದನ್ನು ಗಮನಿಸಬಹುದು. ಬುದ್ಧತ್ವ ಎಂಬುದು ನಿರಂತರ ಎಚ್ಚರದ ಪ್ರಜ್ಞೆಯಾಗಬೇಕು. ಆದ್ದರಿಂದಲೇ ಪಾಲಿ ಕೃತಿಯೊಂದು, ‘ಸೂರ್ಯ ಹಗಲಿನಲ್ಲಿ ಮಾತ್ರ ಉರಿಯುತ್ತಾನೆ. ಚಂದ್ರ ರಾತ್ರಿಯಲ್ಲಿ ಮಾತ್ರ ಬೆಳಗುತ್ತಾನೆ. ಆದರೆ ಬುದ್ಧ ಅಥವಾ ಬುದ್ಧ ತತ್ತ್ವಎಂಬುದು ಹಗಲೂ ರಾತ್ರಿಯೂ ಶೋಭಿಸುತ್ತದೆ’ ಎಂದಿದೆ.

ಆಧುನಿಕತೆ ಸೃಷ್ಟಿಸಿರುವ ಇಂದಿನ ತಳಮಳ, ಖಿನ್ನತೆಗಳಿಗೆ ಮಿತಿಯಿಲ್ಲದ ದುರಾಸೆ, ವ್ಯಾಮೋಹಗಳೆ ಕಾರಣ. ಈ ತೊಳಲಾಟಗಳಿಗೆಲ್ಲ ಧ್ಯಾನಮಾರ್ಗದ ಮೂಲಕ ಮನಸ್ಸನ್ನು ನಿಯಂತ್ರಿಸುವುದರಿಂದ ಸಂತೃಪ್ತ ಜೀವನ ನಡೆಸುವ ಮಾರ್ಗಗಳನ್ನು ತೋರಿಸಿದ್ದಾನೆ. ಪ್ರಾರ್ಥನೆ, ಭಕ್ತಿಗಳೆಂಬ ಹುಸಿ ತೋರಿಕೆಯ ಮಾರ್ಗಗಳಿಂದ ನಮಗೆ ಬಿಡುಗಡೆ ಸಾಧ್ಯವಿಲ್ಲ. ಇವುಗಳು ಸೃಷ್ಟಿಸಿರುವ ಧಾರ್ಮಿಕಹಿಂಸೆಯನ್ನು ಅನುಭವಿಸುತ್ತಿರುವ ಈ ಕಾಲದಲ್ಲಿ ಬುದ್ಧನ ಧ್ಯಾನ ಮಾರ್ಗ ಉತ್ತಮ. ಅಂತರಂಗದ ಯಾನಕ್ಕೆ ನೆರವಾಗುವ ಬುದ್ಧನ ಧ್ಯಾನಮಾರ್ಗದ ಅನುಸರಣೆ ಅಪೇಕ್ಷಣೀಯ.

ಇಂದಿನ ಮತ ಸಿದ್ಧಾಂತವಾದಿಗಳು ಸೃಷ್ಟಿಸಿರುವ ಸಾಮಾಜಿಕ, ಧಾರ್ಮಿಕ ಸಂಕಟಗಳಿಗೆಲ್ಲ ಬುದ್ಧನ ಮಧ್ಯಮಮಾರ್ಗ ಅದ್ಭುತ ಪರಿಹಾರಗಳನ್ನು ಸೂಚಿಸಬಲ್ಲದು. ‘ನಿಮ್ಮೆಲ್ಲ ಅತಿರೇಕಗಳನ್ನು ತೊರೆದು ಸತ್ಯವನ್ನು ಒಪ್ಪಿಕೊಳ್ಳಿ. ನಾನು ಅತಿಯಾದ ಭೋಗದಲ್ಲೂ ತೊಡಗಲಿಲ್ಲ. ಅತಿಯಾದ ತಪಸ್ಸನ್ನೂ ಮಾಡಲಿಲ್ಲ. ಈ ಎರಡರ ನಡುವೆ ಉತ್ತಮೋತ್ತಮ ಮಾರ್ಗವನ್ನು (ಮಧ್ಯಮಮಾರ್ಗ) ಕಂಡುಕೊಂಡೆ’ ಎನ್ನುತ್ತಾನೆ ಬುದ್ಧ. ವರ್ತಮಾನದ ಅನೇಕ ಸಮಸ್ಯೆ, ಸವಾಲುಗಳಿಗೆ ಬುದ್ಧ ಹೇಳುವ ಮಧ್ಯಮಮಾರ್ಗವು ಪರಿಹಾರ ನೀಡಬಲ್ಲದು.

ನಮ್ಮೆಲ್ಲ ಕಷ್ಟಗಳಿಗೆ ನಾವೇ ಹೊಣೆ, ಬೇರಾರೂ ಅಲ್ಲ. ನಮ್ಮ ದುಃಖಗಳಿಗೆ, ನಮ್ಮ ಅಜ್ಞಾನ ಅವಿದ್ಯೆಗಳೇ ಕಾರಣವಾಗಿರುವುದರಿಂದ ಸರಿಯಾದ ಜ್ಞಾನಮಾರ್ಗವನ್ನು ಅನುಸರಿಸುವುದು ಅಗತ್ಯ. ಮತ–ಧರ್ಮಗಳ ಹೆಸರಲ್ಲಿ ಸಮಾಜದಲ್ಲಿ ವಿಚಿತ್ರ ಭಯವನ್ನು ಬಿತ್ತಲಾಗುತ್ತಿದೆ. ಪುರಾಣ ಪುಣ್ಯಕಥೆಗಳು ಪಾಪ–ಪುಣ್ಯಗಳ ಹೆಸರಲ್ಲಿ ಭಯವನ್ನು ಸೃಷ್ಟಿಸಿ ಪ್ರಶ್ನಿಸುವ ಮನೋಭಾವವನ್ನೇ ಹತ್ತಿಕ್ಕಲಾಗುತ್ತಿದೆ. ನಮ್ಮೆಲ್ಲ ಅಜ್ಞಾನಕ್ಕೆ ಮೂಲವಾಗಿರುವ ಈ ಭಯವನ್ನು ಕಳೆದುಕೊಳ್ಳಲು ಬುದ್ಧ ಕರೆಕೊಡುತ್ತಾನೆ. ನಿರ್ಭಯವಾಗುವುದನ್ನು ಕಲಿಯಿರಿ ಎನ್ನುವ ಬುದ್ಧ, ಸ್ವತಃ ಅಮಾವಾಸ್ಯೆಯ ರಾತ್ರಿಗಳನ್ನು ಸ್ಮಶಾನಗಳಲ್ಲಿ ಮಲಗಿ ಕಳೆಯುತ್ತಾನೆ. ನಮ್ಮ ಭಯಕ್ಕೆ ಕಾರಣವಾಗುವ ಯಾವ ಶಕ್ತಿಗಳನ್ನೂ ನಾನು ನೋಡಲಿಲ್ಲ ಎನ್ನುತ್ತಾನೆ. ಇಂತಹ ಕ್ಷುದ್ರ ಸಂಗತಿಗಳನ್ನೇ ಬಂಡವಾಳವಾಗಿಸಿಕೊಂಡು ಉದರ ಪೋಷಣೆ ಮಾಡುವವರಿಗೆ ಬುದ್ಧ ಹೇಳುವ ಸಂಗತಿಗಳು ಅಪಥ್ಯ ಎನಿಸುತ್ತವೆ.

ಸುಮಾರು ಒಂದು ಸಾವಿರ ವರ್ಷಗಳ ಕಾಲ ಭಾರತದ ವಿವೇಕವಾಗಿ ಈ ದೇಶವನ್ನು ಮುನ್ನಡೆಸಿದ್ದ ಬೌದ್ಧ ಧರ್ಮ ಕಾಲಾಂತರದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮತಾಚಾರಗಳನ್ನು ಸಂಭ್ರಮಿಸುವ ಮನಃಸ್ಥಿತಿಯಿಂದಾಗಿ ಹಿನ್ನೆಲೆಗೆ ಸರಿಯುವಂತಾಯಿತು. ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ ಬಿ.ಆರ್. ಅಂಬೇಡ್ಕರ್ ಅವರ ಮೂಲಕ ಮತ್ತೆ ಬುದ್ಧತತ್ತ್ವ ಈ ನೆಲದಲ್ಲಿ ಚಿಗುರೊಡೆದು ಬೋಧಿಸತ್ವವಾಗಿ ಬೆಳೆಯುತ್ತಿರುವುದು ಭರವಸೆಯನ್ನು ಚಿಗುರಿಸುತ್ತಿದೆ. ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆ ಎಷ್ಟು ಪ್ರಮುಖವೋ ಅಷ್ಟೇ ಮುಖ್ಯವಾದುದು, ಭಾರತದಲ್ಲಿ ಕಳೆದುಹೋಗಿದ್ದ ಅತ್ಯಂತ ಪ್ರಜಾಸತ್ತಾತ್ಮಕ ಹಾಗೂ ಮಾನವೀಯ ಧರ್ಮವೊಂದನ್ನು ಅವರು ಹುಡುಕಿ, ಸ್ವೀಕರಿಸಿದ್ದು; ಕಾಯಕಜೀವಿಗಳು, ದಮನಿತರು, ಮಹಿಳೆಯರು, ಮುಂತಾದ ದಮನಿತ ಸಮಾಜಕ್ಕೆ ಬೇಕಾದ ಧರ್ಮವೊಂದಕ್ಕೆ ಮರುಜೀವ ನೀಡಿದ್ದು ಹಾಗೂ ಅವರ ಬದುಕಿನ ಘನತೆಯನ್ನು ಎತ್ತರಿಸಿದ್ದು.

ಹಿಂದೂಧರ್ಮವನ್ನು ತೊರೆದು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಹೋದಾಗ ‘ಇದು ಮತಾಂತರ ಅಲ್ಲ. ನಾನೀಗ ನನ್ನ ಮನೆಗೆ ವಾಪಾಸಾಗಿದ್ದೇನೆ’ ಎಂದು ಅಂಬೇಡ್ಕರ್ ಹೇಳಿದ್ದರು. ಅವರ ಮಾತಿನ ಹಿಂದೆ, ಭಾರತದ ಕಳೆದುಹೋದ ಒಂದು ಸಾಮಾಜಿಕ ಚರಿತ್ರೆಯ ಸಂಕಥನವೇ ಇದೆ. ಪ್ರಜಾಪ್ರಭುತ್ವದ ಕೊಂಬೆಗಳು ಕವಲೊಡೆದದ್ದೇ ಬುದ್ಧನಿಂದ. ಬೌದ್ಧಧರ್ಮದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಮಾನವೀಯತೆ ಮೊದಲಾದ ಜೀವದ್ರವ್ಯಗಳಿಂದಲೇ ನಮ್ಮ ಸಂವಿಧಾನ ರೂಪುತಳೆದಿದೆ ಎಂಬುದನ್ನು ಮರೆಯಲಾಗದು. ದೇವರೇ ಸತ್ಯ ಎನ್ನುವ ಕಾಲಘಟ್ಟದಿಂದ ಸತ್ಯವೇ ದೇವರು ಎನ್ನುವ ಹಂತಕ್ಕೆ ಬಂದು ತಲಪಲು ಸಾಧ್ಯವಾಗುವುದಾದರೆ, ನಮ್ಮೊಳಗಿನ ಬುದ್ಧನನ್ನು ನಾವು ಬದುಕಿಸಿಕೊಳ್ಳಲು ಸಾಧ್ಯವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.