ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಪರೀಕ್ಷೆ, ಗುಣಮಟ್ಟ ಮತ್ತು ಶಿಕ್ಷಣ

ಕಲಿಕಾ ಗುಣಮಟ್ಟವನ್ನು ಅಂಕ ಆಧಾರಿತವಾಗಿ ಉಳಿಸಿಕೊಳ್ಳುವುದು ಅನಿವಾರ್ಯವೇ?
Published : 22 ಫೆಬ್ರುವರಿ 2023, 22:15 IST
ಫಾಲೋ ಮಾಡಿ
Comments

‘ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿಲ್ಲ, ಏನು ಪರಿಹಾರ?’ ಎಂದು ಕೇಳಿದರೆ, ‘ಉತ್ತೀರ್ಣವಾಗಲು ಬೇಕಾದ ಕನಿಷ್ಠ ಅಂಕಗಳನ್ನು ಕಡಿಮೆ ಮಾಡಿ’ ಎಂದು ಪರಿಹಾರವನ್ನು ಸೂಚಿಸಬಹುದಾದ ಕಾಲವಿದು. ‘ಪರೀಕ್ಷೆ’ಯು ಶಿಕ್ಷಣದ ಗುಣಮಟ್ಟಕ್ಕೊಂದು ಸವಾಲು.‌

ಒಂದೆಡೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ರ್‍ಯಾಂಕ್‌ ಪದ್ಧತಿಯನ್ನು ತೆಗೆದುಹಾಕಿ, ಅಂಕಗಳೇ ಮುಖ್ಯವಲ್ಲ ಎಂದು ಗ್ರೇಡ್ ಕೊಡುವ ಪದ್ಧತಿಯನ್ನು ಅಳವಡಿಸಲಾಯಿತು. ನಂತರ ಅದು ಅಂಕ ಮತ್ತು ಗ್ರೇಡ್ ಎರಡರ ಒದಗಣೆಯೂ ಆಗಿ ಸಾರ್ವಜನಿಕ ಪರಿಗಣನೆ ಯಲ್ಲಿ ಅಂಕಗಳು ಪ್ರಧಾನವಾದವು. ‘ಎ+’ ಶ್ರೇಣಿ ಯಲ್ಲಿದ್ದಾಗಲೂ ಅಂಕ ಸ್ವಲ್ಪ ಕಡಿಮೆಯಾಯಿತೆಂದು ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಯನ್ನು ಸಲ್ಲಿಸುತ್ತಾರೆ.

ಮರು ಮೌಲ್ಯಮಾಪನದಲ್ಲಿ ಬರುವ ಅಂಕಗಳ ಮಹತ್ವ ಮತ್ತು ಅಂಕಗಳ ಸರಾಸರಿಯಂತಹ ವ್ಯವಸ್ಥೆಯನ್ನೇ ಆಧರಿಸಿ ಗುಣಮಟ್ಟದ ಮಾನದಂಡವನ್ನು ಕಂಡುಕೊಳ್ಳಲಾಗುತ್ತದೆ. ಇದೊಂದು ರೀತಿಯಲ್ಲಿ ಶಿಕ್ಷಣದ ಆಶಯ ಮತ್ತು ಶಿಕ್ಷಣದ ಜ್ವಲಂತ ವಾಸ್ತವದ ನಡುವಿನ ಸಂಘರ್ಷವೂ ಆಗಿ, ಪರಸ್ಪರ ವಿರುದ್ಧವಾದ ಎರಡು ಧೋರಣೆಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿರುವ ವಿಡಂಬನೆಯಾಗಿದೆ.

ಈ ಸವಾಲು ಸುಮಾರು 2004ರ ಆಸುಪಾಸಿನಲ್ಲಿ ಪ್ರಾರಂಭವಾಯಿತು. ಕಡ್ಡಾಯ ಉತ್ತೀರ್ಣ ವ್ಯವಸ್ಥೆಯು ಒಂಬತ್ತನೇ ತರಗತಿಯವರೆಗೆ ಉತ್ತೀರ್ಣವಾಗುವುದರ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಯಾರೂ ಚಿಂತಿಸಬೇಕಾಗಿಲ್ಲ ಎಂಬಂತಹ ಸನ್ನಿವೇಶವನ್ನು ನಿರ್ಮಿಸಿತು. ಹೀಗಾದಾಗ ಹತ್ತನೆಯ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವುದು ಕಷ್ಟ ಎಂದಾಯಿತು. ಆಗ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ತರುವುದು, ಅದರಿಂದ ಗುಣಮಟ್ಟ ಹಾಳಾಗದಂತೆ ಈ ಪ್ರಶ್ನೆಗಳ ಸಂಖ್ಯೆಯ ಮೇಲೆ ನಿಯಂತ್ರಣ ಹೇರುವುದು, ಗ್ರೇಸ್ ಮಾರ್ಕ್... ಹೀಗೆ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ನಾನಾ ರೀತಿಯ ಸುಧಾರಣೆಗಳು ಬಂದವು.‌ ಆದರೆ ಇವು ನಿಜವಾದ ಸುಧಾರಣೆಗಳಾಗದೆ, ವಿದ್ಯಾರ್ಥಿ ಹೇಗಾದರೂ ಉತ್ತೀರ್ಣವಾಗುವಂತೆ ಮಾಡುವಂತಹ ಪರಿಷ್ಕರಣೆಗಳಾದವು.

ಇಲ್ಲಿ ಕಡ್ಡಾಯ ಉತ್ತೀರ್ಣ ವ್ಯವಸ್ಥೆಗೂ ಸರ್ವ ಶಿಕ್ಷಣ ಅಭಿಯಾನಕ್ಕೂ ಸಂಬಂಧವಿದೆ ಎಂಬುದನ್ನು ಗಮನಿಸಬೇಕು. 1912ರಲ್ಲಿ ಗೋಪಾಲಕೃಷ್ಣ ಗೋಖಲೆ ಅವರು ಮುಂಬೈ ಶಾಸನಸಭೆಯಲ್ಲಿ ಮಂಡಿಸಿದ, ಎಲ್ಲರಿಗೂ ಉಚಿತ ಕಡ್ಡಾಯ ಶಿಕ್ಷಣ ನೀಡುವ ‘ಗೋಖಲೆ ಬಿಲ್’ನ ಆಶಯವನ್ನು ಈಡೇರಿಸುವ ರೂಪವಾಗಿಯೇ ವಾಜಪೇಯಿ ನೇತೃತ್ವದ ಸರ್ಕಾರವು ಸರ್ವ ಶಿಕ್ಷಣ ಅಭಿಯಾನವನ್ನು ಜಾರಿಗೆ ತಂದಿತು.‌ ಶಿಕ್ಷಣವನ್ನು ಪಡೆಯಲೇಬೇಕು ಎಂದು ಬಂದ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಕಲಿಯಲು ಆಂತರಿಕ ಪ್ರೇರಣೆ ಇರುತ್ತದೆ. ಆದರೆ ಉಚಿತ ಕಡ್ಡಾಯ ಶಿಕ್ಷಣವಾದಾಗ ಎಲ್ಲರಿಗೂ ಆಂತರಿಕ ಪ್ರೇರಣೆ ಇರುವುದಿಲ್ಲ. ಆಗ ಅವರು ಅನುತ್ತೀರ್ಣರಾದರೆ ಶಾಲೆಯನ್ನೇ ಬಿಟ್ಟುಬಿಡುತ್ತಾರೆ.‌ ಆದ್ದರಿಂದ ಕಡ್ಡಾಯವಾಗಿ ಉತ್ತೀರ್ಣಗೊಳಿಸುವ ಮೂಲಕ ಶಾಲೆಯಲ್ಲಿ ಮಕ್ಕಳನ್ನು ಉಳಿಸಲು ಸಾಧ್ಯ ಎಂಬ ಆಶಯದ ನೆಲೆಯಲ್ಲಿ ಕಡ್ಡಾಯ ಉತ್ತೀರ್ಣವು ಸಾಕ್ಷರತೆಯ ಸಾಧನೆಗೆ ಸಹಾಯವನ್ನೇ ಮಾಡಿದೆ. ಆದರೆ ಸಮಸ್ಯೆ ಎದುರಾಗುವುದು ಸಾರ್ವತ್ರಿಕ ನೆಲೆಯಲ್ಲಿ.‌ ಸಾರ್ವತ್ರಿಕವಾಗಿ ಸುಶಿಕ್ಷಿತರ ಪ್ರಮಾಣ ಜಾಸ್ತಿಯಾಗಿದೆ. ಆದರೆ ಉತ್ತಮ ಗುಣಮಟ್ಟದ ಫಲಿತಾಂಶ ಯಾಕಿಲ್ಲ ಎಂಬ ಪ್ರಶ್ನೆ ಬರುತ್ತದೆ.

ಪರೀಕ್ಷಾ ಫಲಿತಾಂಶದ ಗುಣಮಟ್ಟ ಎನ್ನುವುದೇ ಮತ್ತೊಂದು ವಿವಾದಾತ್ಮಕ ಅಂಶ. ಭಾಷಾ ತೊಡಕಿನಿಂದಾಗಿ, ವಿಚಾರ ಜ್ಞಾನ ಇದ್ದರೂ ವಿದ್ಯಾರ್ಥಿಗೆ ಉತ್ತರಿಸಲು ಸಾಧ್ಯವಾಗದಿರಬಹುದು.‌ ಅವಧಿ ಸಾಲದೆ ಉತ್ತರಿಸಲು ಸಾಧ್ಯವಾಗದಿರಬಹುದು. ಪ್ರಶ್ನೆಪತ್ರಿಕೆ ನಿರೀಕ್ಷಿಸಿದ ರೂಪದಲ್ಲಿ ಉತ್ತರಿಸಲು ಆಗದಿರಬಹುದು. ಇದರರ್ಥ ವಿದ್ಯಾರ್ಥಿಗೆ ಜ್ಞಾನ ಇಲ್ಲ ಎಂದಲ್ಲ. ಇರುವ ಜ್ಞಾನವನ್ನು ನಿರೀಕ್ಷಿತ ರೂಪದಲ್ಲಿ ಪ್ರಕಟಿಸಲು ಆಗಲಿಲ್ಲ ಎಂದಷ್ಟೆ. ಅಂದಮೇಲೆ ಪರೀಕ್ಷಾ ಫಲಿತಾಂಶವನ್ನೇ ಕಲಿಕೆಯ ಗುಣಮಟ್ಟ ಎಂದು ಪರಿಗಣಿಸುವುದು ಹೇಗೆ ಎನ್ನುವುದು ಇಲ್ಲಿರುವ ಪ್ರಶ್ನೆ.

ಆಧುನಿಕ ಶಿಕ್ಷಣಶಾಸ್ತ್ರವು ಶಿಕ್ಷಕರನ್ನು ‘ಶಿಕ್ಷಕರು’ ಎಂದು ಗುರುತಿಸದೆ ‘ಶೈಕ್ಷಣಿಕ ಸುಗಮಕಾರರು’ ಎಂದು ಕರೆಯುತ್ತದೆ. ಮಕ್ಕಳಿಗಾಗುವ ಕಲಿಕಾ ತಡೆಗಳನ್ನು ನಿವಾರಿಸುವುದು ಇವರ ಕೆಲಸವೇ ವಿನಾ ಕಲಿಸುವುದಲ್ಲ. ‘ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ’ ಎನ್ನುವುದು ಇಲ್ಲಿರುವ ಕಲ್ಪನೆ. ಇದು ಸತ್ಯವಾಗುವುದು ತಮಗೆ ಇಷ್ಟ ಬಂದದ್ದನ್ನು ಮಕ್ಕಳು ಕಲಿತುಕೊಳ್ಳಲು ಅವಕಾಶವಿರುವ ಆದರ್ಶಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ.‌ ಅಲ್ಲಿ ಸರ್ಕಾರ ನಿಗದಿಪಡಿಸಿದ ಪಠ್ಯಕ್ಕೆ ಮಹತ್ವ ಇರುವುದಿಲ್ಲ.‌ ತಮಗೆ ಇಷ್ಟವಾದದ್ದನ್ನು ಮಕ್ಕಳು ಕಲಿಯುವಾಗ ಆಗುವ ತೊಂದರೆಯನ್ನು ನಿವಾರಿಸಲು ಶೈಕ್ಷಣಿಕ ಸುಗಮಕಾರರು ಬೇಕು. ಆದರೆ ನಮ್ಮಲ್ಲಿ ನಿರ್ದಿಷ್ಟ ಪಠ್ಯ ಇರುವುದರಿಂದ ಮಕ್ಕಳನ್ನು ಕಲಿಕೆಗೆ ತೊಡಗಿಸುವ, ಕಲಿಸುವ ಶಕ್ತಿಯೊಂದು ಇರಬೇಕಾಗುತ್ತದೆ.‌

ಶೈಕ್ಷಣಿಕ ಸುಗಮಕಾರರು ಆಗ ಶಿಕ್ಷಕ ರಾಗಲೇಬೇಕಾಗುತ್ತದೆ. ‘ಕಲಿಸುವ’ ಪರಿಕಲ್ಪನೆ ಬಂದ ಕೂಡಲೇ ಶಿಕ್ಷಣವು ಮಗುಕೇಂದ್ರಿತ ಆಗುವ ಬದಲು ಸರ್ಕಾರಕೇಂದ್ರಿತ ಆಗುತ್ತದೆ. ಆಗಲೂ ಕಲಿಕೆಗೆ ವ್ಯಾಪಕತ್ವ ಇದ್ದೇ ಇದೆ. ಪಠ್ಯದ ಸ್ವರೂಪಕ್ಕೆ ಅನುಗುಣವಾಗಿ ಕೌಶಲ, ಜ್ಞಾನ, ಮೌಲ್ಯಗಳು, ಜೀವನದೃಷ್ಟಿ... ಹೀಗೆ ಬಹುಮುಖಿ ನೆಲೆಯಲ್ಲಿ ಕಲಿಕೆ ನಡೆಯಬೇಕು. ಜಾರಿಯಲ್ಲಿರುವ ಶಿಕ್ಷಣದಲ್ಲಿ ಇವೆಲ್ಲವೂ ಕಲಿಕೆಯ ‘ಬಿ’ ವಿಭಾಗದಲ್ಲಿ ಬರುತ್ತವೆ. ಇವೆಲ್ಲಕ್ಕೂ ಗ್ರೇಡನ್ನೇ ಕೊಡಲಾಗುತ್ತದೆ, ಅಂಕಗಳಿಲ್ಲ. ಆದರೆ ಈ ಅಂಶಗಳು ವಿದ್ಯಾರ್ಥಿಯ ಸಾಮರ್ಥ್ಯದ ನಿರ್ಧರಿಸುವಿಕೆಯಲ್ಲಿ ಪರಿಗಣನೆಗೆ ಬರುವುದಿಲ್ಲ. ಪರಿಗಣನೆಗೆ ಬರುವುದು ‘ಎ’ ವಿಭಾಗದಲ್ಲಿ ನಡೆಯುವ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ. ಅಂದ ಮೇಲೆ ‘ಬಿ’ ವಿಭಾಗ ಆಟಕ್ಕುಂಟು ಲೆಕ್ಕಕ್ಕಿಲ್ಲ. ಯಾವ ವಿಚಾರದಲ್ಲೇ ಆದರೂ ಆದರ್ಶದ ಪರಿಸ್ಥಿತಿ ಯಾವತ್ತೂ ಹೀಗೆಯೇ. ಅರ್ಥಾತ್ ಅಂಕಗಳೇ ಇಂದಿಗೂ ಕಠೋರ ವಾಸ್ತವಗಳಾಗಿವೆ.

ಹಾಗಿದ್ದರೆ ಆದರ್ಶಗಳು ವಾಸ್ತವ ಆಗುವುದಿಲ್ಲವೇ? ಆಗುತ್ತವೆ. ಅದಾಗಬೇಕಾದರೆ ವ್ಯಾಪಕ ಸಿದ್ಧತೆಗಳು ಬೇಕು.‌ ಮೊದಲನೆಯದಾಗಿ, ಶಿಕ್ಷಣಶಾಸ್ತ್ರದ ಕಲಿಕಾ ಆದರ್ಶಗಳು ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಮಾಡಬೇಕು. ಇದಕ್ಕೆಲ್ಲ ಬೇಕಾದಷ್ಟು ಸಮಯ ಮತ್ತು ಸೌಲಭ್ಯಗಳನ್ನು ಶಿಕ್ಷಕರಿಗೆ ಒದಗಿಸಬೇಕು. ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ವೈಯಕ್ತಿಕ ನೆಲೆಯಲ್ಲೇ ನಿರ್ವಹಣೆ ಮಾಡಬೇಕು.‌ ಬಿಸಿಯೂಟದ ಸಾಮಗ್ರಿ ತರುವುದು, ಲೆಕ್ಕ ಬರೆಯುವಂತಹ ಕೆಲಸಗಳ ಜೊತೆಗೆ ವಿದ್ಯಾರ್ಥಿಗಳನ್ನೂ ನಿರ್ವಹಿಸಿ ಎಂದರೆ ಆಗುವುದಿಲ್ಲ.‌ ಆದ್ದರಿಂದ ಅಂಕಗಳೇ ಮುಖ್ಯ ಅಲ್ಲ ಎನ್ನುವ ಪರಿಕಲ್ಪನೆಯನ್ನು ಇರಿಸಿಕೊಂಡು ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅಗತ್ಯವಾದ ಸ್ಥಿತಿಯನ್ನು ನಿರ್ಮಿಸಲು, ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದು 20 ವರ್ಷಗಳಾದರೂ ಸಾಧ್ಯವಾಗಲಿಲ್ಲ.‌

ಕಲಿಕಾ ಗುಣಮಟ್ಟವನ್ನು ಅಂಕ ಆಧಾರಿತವಾಗಿ ಉಳಿಸಿಕೊಳ್ಳುವುದು ಅನಿವಾರ್ಯ ಎನ್ನುವುದಾದರೆ, ಪರೀಕ್ಷೆಯನ್ನು ಐಚ್ಛಿಕವಾಗಿಸಬಹುದು. ಎಲ್ಲರಿಗೂ ಎಸ್‌ಎಸ್‌ಎಲ್‌ಸಿ ಕೋರ್ಸ್ ಮುಗಿಸಿದ ಪ್ರಮಾಣಪತ್ರವನ್ನು ಶಾಲೆಯೇ ನೀಡಬೇಕು. ಪಬ್ಲಿಕ್ ಪರೀಕ್ಷೆಯನ್ನು ಕಡ್ಡಾಯ ಮಾಡಬಾರದು. ಯಾವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ತಮಗೆ ಪರೀಕ್ಷೆಯನ್ನು ಮಾಡಿ ಎಂದು ಕೇಳುತ್ತಾರೋ ಅವರಿಗೆ ಮಾತ್ರ ಮಾಡಬೇಕು.‌ ಅಥವಾ ಎಲ್ಲರಿಗೂ ಕೋರ್ಸ್ ಮುಗಿಸಿದ ಪ್ರಮಾಣಪತ್ರ ವನ್ನು ಕೊಟ್ಟು, ಮುಂದಿನ ಕಲಿಕೆಗೆ ಅವರವರು ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ಗೆ ಸಂಬಂಧಿಸಿದ ವಿಷಯದಲ್ಲಿ ಪ್ರವೇಶ ಪರೀಕ್ಷೆಯನ್ನು ಮಾಡಬೇಕು. ಅಥವಾ ಎಲ್ಲರನ್ನೂ ನಿರ್ದಿಷ್ಟ ಚೌಕಟ್ಟಿನಲ್ಲಿ ಗುಣಮಟ್ಟದ ವಿದ್ಯಾರ್ಥಿಗಳನ್ನಾಗಿ ರೂಪಿಸಿಯೇ ಕಳಿಸುತ್ತೇವೆ ಎನ್ನುವುದಾದರೆ,
ಎಸ್‌ಎಸ್‌ಎಲ್‌ಸಿಯಲ್ಲಿ 2002ಕ್ಕಿಂತ ಮೊದಲಿನ ಮಾದರಿಯ, ನೂರು ಅಂಕಗಳ ಕಠಿಣ ಪರೀಕ್ಷೆಯನ್ನೇ ಇರಿಸಿ, ‘ಅನುತ್ತೀರ್ಣರಾದವರನ್ನು ಅನುತ್ತೀರ್ಣಗೊಳಿಸುವುದೇ ಸರಿ’ ಎಂಬ ನಿಲುವಿನಲ್ಲಿ ಮೌಲ್ಯಮಾಪನ ವನ್ನು ಮಾಡಬೇಕು. ಆದರೆ ಯಾರು ಅನುತ್ತೀರ್ಣರಾಗುತ್ತಾರೋ ಅವರು ಮತ್ತೊಂದು ವರ್ಷ ತರಗತಿಗೆ ಹಾಜರಾಗಿಯೇ ಕಲಿಯಲು ಅವಕಾಶ ನೀಡಬೇಕು.

ಹೀಗೆ ಮಾಡಿದಾಗಲೂ ಒಂಬತ್ತನೇ ತರಗತಿಯವರೆಗೆ ಕಲಿಕೆ ನಡೆದಿರುತ್ತದೆ. ಈ ಸ್ಥಿತಿಯಲ್ಲಿ, ಅನುತ್ತೀರ್ಣತೆಯ ಕಾರಣಕ್ಕಾಗಿ ವಿದ್ಯಾರ್ಥಿಯು ಶಾಲೆ ಬಿಡುವುದಿದ್ದರೂ ಎಸ್‌ಎಸ್‌ಎಲ್‌ಸಿಯ ನಂತರ ಬಿಡುವ ಸಾಧ್ಯತೆ ಹೆಚ್ಚು. ಆಗ ಸಾರ್ವತ್ರಿಕ ಶಿಕ್ಷಣ ಸಾಧನೆಯ ಆಶಯಕ್ಕೇನೂ ಈಗಿರುವ ಸ್ಥಿತಿಗಿಂತ ಭಿನ್ನವಾದ ತೊಂದರೆಯಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT