ಭಾರತೀಯ ಮೂಲವಲ್ಲದ ಧರ್ಮಗಳಿಗೆ ಮತಾಂತರ ಆಗುವವರನ್ನು ಎಸ್ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳಿಂದ ಹೊರಗಿಡುವ ಸುಪ್ರೀಂ ಕೋರ್ಟ್ ತೀರ್ಪು ಚರ್ಚಾಸ್ಪದ. ಜಾತಿ ಮತ್ತು ಅಸ್ಪೃಶ್ಯತೆಯ ಸಮಸ್ಯೆಗಳು ಸದಾ ಜಾಗೃತವಾಗಿರುವ ದೇಶದಲ್ಲಿನ ಕಟು ವಾಸ್ತವಗಳಿಗೆ ತೀರ್ಪು ಕುರುಡಾಗಿದೆ....

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಬಿಟ್ಟು ಭಾರತೀಯ ಮೂಲವಲ್ಲದ ಇಸ್ಲಾಂ, ಕ್ರೈಸ್ತದಂತಹ ಧರ್ಮಕ್ಕೆ ಮತಾಂತರವಾದರೆ ಎಸ್ಸಿ ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳು ಸಿಗುವುದಿಲ್ಲ ಎನ್ನುವ ಸುಪ್ರೀಂ ಕೋರ್ಟ್ ತೀರ್ಪು, ಮೀಸಲಾತಿಗೆ ಸಂಬಂಧಿಸಿದಂತೆ ಸಂಚಲನ ಮೂಡಿಸುವಂತಿದೆ.

ಸುಪ್ರೀಂ ಕೋರ್ಟ್ ಈ ರೀತಿಯ ತೀರ್ಪು ನೀಡಲು ಕಾರಣ ಆಗಿರಬಹುದಾದ ವಾಸ್ತವಾಂಶಗಳು, ಮತಾಂತರಕ್ಕೂ ಮೀಸಲಾತಿಗೂ ಇರುವ ಸಂಬಂಧಗಳು ಹಾಗೂ ಸದರಿ ತೀರ್ಪಿನಿಂದಾಗಿ ಕರ್ನಾಟಕದಲ್ಲಿ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಚಿಂತಿಸಬೇಕಿದೆ. ಈ ತೀರ್ಪಿನಿಂದಾಗಿ ಮತಾಂತರಗೊಂಡವರು ಮೀಸಲಾತಿಯನ್ನಷ್ಟೇ ಕಳೆದುಕೊಳ್ಳುವುದಿಲ್ಲ; ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆಯನ್ನೂ ಕಳೆದುಕೊಳ್ಳುತ್ತಾರೆ. ಇದರಿಂದಾಗಿ, ದಲಿತ ಕ್ರೈಸ್ತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಬಹುದು. ಮತಾಂತರಗೊಂಡವರು ಈಗ ಧರ್ಮವನ್ನು ಆರಿಸಿಕೊಳ್ಳಬೇಕೋ ಅಥವಾ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಆರಿಸಿಕೊಳ್ಳಬೇಕೋ ಎಂಬ ಜಿಜ್ಞಾಸೆಗೂ ಸಿಲುಕಲಿದ್ದಾರೆ. ಈ ತೀರ್ಪು ಘರ್–ವಾಪ್ಸಿಗೆ ಅಥವಾ ತಾವು ಮತಾಂತರಗೊಂಡಿರುವುದನ್ನು ಇನ್ನಷ್ಟು ಗೋಪ್ಯವಾಗಿಡಲು ಕಾರಣವಾಗಬಹುದು.

ಕೋಲಾರದ ಚಿನ್ನದ ಗಣಿ ಪ್ರದೇಶ (ಕೆಜಿಎಫ್) ಆರಂಭದಿಂದಲೂ ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರ. ಲೋಕಸಭೆಗೂ ಇದು ಪರಿಶಿಷ್ಟ ಜಾತಿಗೆ ಸೇರಿದ ಮೀಸಲು ಕ್ಷೇತ್ರ. ದೇಶದಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿಯವರಿರುವ ಕ್ಷೇತ್ರಗಳಲ್ಲಿ ಕೆಜಿಎಫ್ ಒಂದೆಂದು ಹೇಳಲಾಗುತ್ತದೆ. ಕೆಜಿಎಫ್ನ ಮೂರನೇ ಒಂದು ಭಾಗ ಇರುವ ಪರಿಶಿಷ್ಟ ಜಾತಿಯವರಲ್ಲಿ ಬಹುತೇಕರು ಕ್ರೈಸ್ತ ಧರ್ಮ ಸ್ವೀಕರಿಸಿದ್ದಾರೆ. ಅಲ್ಲಿರುವ ಸುಮಾರು ಎರಡು ಲಕ್ಷ ಕ್ರೈಸ್ತರಲ್ಲಿ ಬಹುತೇಕರು ದಲಿತ ಹಿನ್ನೆಲೆಯವರು. ನೂರು ನೂರೈವತ್ತು ವರ್ಷಗಳ ಹಿಂದೆ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಿಂದ ಗಣಿ ಕೆಲಸಕ್ಕೆ ಬಂದ ‘ಪರಯ್ಯ’ ಎಂಬ ಅಸ್ಪೃಶ್ಯ ಜಾತಿಯ ಹಿನ್ನೆಲೆಯವರು, ಬ್ರಿಟಿಷರ ಪ್ರಭಾವದಿಂದಲೋ ಅಥವಾ ಚರ್ಚ್ಗಳ ಆಕರ್ಷಣೆಯಿಂದಲೋ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ.

ಕರ್ನಾಟಕದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರನ್ನು ಹಿಂದುಳಿದ ವರ್ಗಗಳ ಪ್ರವರ್ಗ ಒಂದರ ಪಟ್ಟಿಯಲ್ಲಿ ಗುರ್ತಿಸಲಾಗಿದೆ. ಆದರೆ, ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಕೆಜಿಎಫ್ನ ದಲಿತರು ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆದ ದಾಖಲೆಯಿಲ್ಲ. ಬದಲಿಗೆ, ಪರಿಶಿಷ್ಟ ಜಾತಿ ಪಟ್ಟಿಯ ಆಧಾರದಲ್ಲೇ ಪಡೆಯುತ್ತಾರೆ. ಹಾಗಾದರೆ, ಸದರಿ ತೀರ್ಪಿನ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ, ಕ್ರೈಸ್ತ ಮತಕ್ಕೆ ಮತಾಂತರವಾದ ದಲಿತ ಸಮುದಾಯದ ಪರಿಸ್ಥಿತಿ ಏನು? ಈ ತೀರ್ಪು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ದಲಿತ ಕ್ರೈಸ್ತರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲವೆ?

ಸಂವಿಧಾನದ ಆಶಯದಂತೆ ಮೀಸಲಾತಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರವೇ ಹೊರತು ಜಾತಿ–ಧರ್ಮಗಳಲ್ಲ. ಜಾತಿ–ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಸಂವಿಧಾನ ಎಲ್ಲೂ ಪ್ರಸ್ತಾಪಿಸುವುದಿಲ್ಲ. ಅಂಬೇಡ್ಕರ್ ಪ್ರತಿಪಾದಿಸುವಂತೆ ಪ್ರಮುಖವಾಗಿ ಪರಿಶಿಷ್ಟ ಜಾತಿಗೆ ಮೀಸಲಾತಿ ಅಥವಾ ಪ್ರಾತಿನಿಧ್ಯ ನೀಡಲು ಗಮನಿಸಬೇಕಾದುದು ಅಸ್ಪೃಶ್ಯತೆಯ ಕಳಂಕ. ಸಂವಿಧಾನದ ಪರಿಚ್ಛೇದ 341, 15(4), 16(4), 243(ಜಿ), 330, 332, ಇವು ವಿವಿಧ ಆಯಾಮಗಳಲ್ಲಿ ಮೀಸಲಾತಿಯನ್ನು ವಿಶದಪಡಿಸುತ್ತವೆ. ಸುಪ್ರೀಂ ಕೋರ್ಟ್ನ ಪ್ರಸಕ್ತ ತೀರ್ಪು ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಇದು ಉದ್ಯೋಗದಲ್ಲಿ ಬಡ್ತಿ, ಸೀನಿಯಾರಿಟಿ ನೀಡುವುದಕ್ಕೂ ಅಡ್ಡಿಯಾಗಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ಸರ್ಕಾರಿ ಯೋಜನೆಗಳನ್ನೇ ನಂಬಿ ಬದುಕುತ್ತಿರುವ ಬಡ ದಲಿತಕ್ರೈಸ್ತ ಕುಟುಂಬಗಳಿಗೆ ದೊಡ್ಡ ಹೊಡೆತ ಬೀಳಲಿದೆ.

ರಾಜಕಾರಣದ ಹಿನ್ನೆಲೆಯಲ್ಲಿ ಗಮನಿಸಿದರೆ, ಇದರ ಲಾಭ ಪಡೆಯುವುದು ಬಿಜೆಪಿ. ಆ ಪಕ್ಷದ ನಿಲುವಿಗೆ ಈ ತೀರ್ಪು ಬಲ ತುಂಬಲಿದೆ. ಧರ್ಮಾಧಾರಿತ ಮೀಸಲಾತಿ ವಿರೋಧಿಸುವ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸುವ ಬಿಜೆಪಿಯ ವಾದಕ್ಕೆ ಪ್ರಸಕ್ತ ತೀರ್ಪು ಪೂರಕವಾಗಿದೆ. ಬಹುತೇಕ ದಲಿತ ಕ್ರೈಸ್ತರು ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ದಲಿತ ವೋಟ್ಬ್ಯಾಂಕ್ ನೆಚ್ಚಿಕೊಂಡಿರುವ ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆತಂಕಕಾರಿ ತೀರ್ಪಿದು. ತಮಿಳುನಾಡು, ಕೇರಳ, ಅಸ್ಸಾಂನ ಚುನಾವಣೆಗಳ ಮೇಲೂ ತೀರ್ಪು ಪರಿಣಾಮ ಬೀರಲಿದೆ. ಚುನಾವಣೆ ಸಂದರ್ಭದಲ್ಲೇ ತೀರ್ಪು ಪ್ರಕಟವಾಗಿರುವುದು ಕೆಲವರಿಗೆ ಅಚ್ಚರಿ ತಂದಿದೆ.

ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 50ರ ಮಿತಿಗಿಂತ ಹೆಚ್ಚಿಸಿರುವ 2022ರ ಕಾಯ್ದೆಯನ್ನು ಪ್ರಶ್ನಿಸಿರುವ ಪ್ರಕರಣಗಳು ಹೈಕೋರ್ಟ್ನಲ್ಲಿ ಬಾಕಿಯಿವೆ. ಸುಪ್ರೀಂ ಕೋರ್ಟ್ನ ತೀರ್ಪು ಆ ಪ್ರಕರಣಗಳ ಮೇಲೆ ನೇರ ಪರಿಣಾಮ ಬೀರದಿದ್ದರೂ, ಜಾತಿ ಪ್ರಮಾಣಪತ್ರಗಳ ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರಿ ಇಲಾಖೆಗಳಿಗೆ ದಾರಿ ಮಾಡಿಕೊಡಲಿದೆ. ಯಾರಾದರೂ ಮತಾಂತರಗೊಂಡಿದ್ದರೆ, ಜಾತಿ ಪ್ರಮಾಣಪತ್ರ ಪಡೆಯುವ ಸಮಯದಲ್ಲಿ ಅವರ ಧರ್ಮ ಯಾವುದಿತ್ತು ಎಂಬುದನ್ನು ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ.

ನ್ಯಾಯಮೂರ್ತಿ ನಾಗಮೋಹನದಾಸ್ ವರದಿ, ನ್ಯಾಯಮೂರ್ತಿ ಭಕ್ತವತ್ಸಲ ವರದಿ, ನ್ಯಾಯಮೂರ್ತಿ ಸುಭಾಶ್ ಆಡಿ ವರದಿ, ಮಾಧುಸ್ವಾಮಿ ಸಮಿತಿಯ ವರದಿ, ನ್ಯಾಯಮೂರ್ತಿ ಸದಾಶಿವ ವರದಿಗಳ ಮೇಲೂ ಈ ತೀರ್ಪು ಪರೋಕ್ಷವಾಗಿಯಾದರೂ ಪರಿಣಾಮ ಬೀರದಿರದು.

ಜಾತಿ ಶೋಷಣೆ ಮತ್ತು ಅಸ್ಪೃಶ್ಯತೆಯ ಕಾರಣಕ್ಕೆ ದಲಿತರು ಇತರೆ ಧರ್ಮಗಳತ್ತ ಹೋಗುತ್ತಾರೆ. ಕೆಲವರು ಅಪಾದಿಸುವಂತೆ, ಚರ್ಚ್ಗಳು ಒಡ್ಡುವ ಆಮಿಷವೂ ಮತಾಂತರಕ್ಕೆ ಕಾರಣವಿರಬಹುದು. ಆದರೆ, ಮತಾಂತರಕ್ಕೆ ಪ್ರಮುಖ ಕಾರಣ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಎನ್ನುವುದು ನಿರ್ವಿವಾದ. ನಿರಂತರವಾಗಿ ನಡೆಯುವ ಜಾತಿ ತಾರತಮ್ಯ, ಅಸ್ಪೃಶ್ಯತೆ, ಅವಮಾನ, ನೋವು ಮತ್ತು ಯಾತನೆಗಳಿಂದ ಬಹುತೇಕ ಕೆಳಜಾತಿಗಳವರು ತಾವು ಇದ್ದ ಧರ್ಮ ಬಿಟ್ಟು ಅನ್ಯಧರ್ಮದ ಕಡೆ ಹೊರಳುತ್ತಾರೆ. ದುರಂತವೆಂದರೆ, ಅವರು ಜಾತಿಯಿಂದ ತಪ್ಪಿಸಿಕೊಳ್ಳಲು ಜಾತಿ ಆಧಾರಿತ ಧರ್ಮ ಬಿಟ್ಟು ಜಾತಿಯೇ ಇಲ್ಲದ ಧರ್ಮಕ್ಕೆ ಹೋದರೂ, ಜಾತಿ ಎಂಬುದು ಅವರನ್ನು ಬಿಡುವುದಿಲ್ಲ. ಈಗಲೂ ಕ್ರೈಸ್ತ ಸಮುದಾಯಕ್ಕೆ ಮತಾಂತರವಾದ ಹೊಲೆಯರು, ಮಾದಿಗರು, ಬೋವಿಗಳು, ಕೊರಮರು, ಗೊಲ್ಲರು, ಗಾಣಿಗರು, ಉಪ್ಪಾರರು, ತಿಗಳರು, ಬಲಜಿಗರು, ಕುರುಬರೇ ಮುಂತಾದವರು ಕ್ರೈಸ್ತ ಧರ್ಮದ ಅನುಯಾಯಿಗಳಾಗಿದ್ದರೂ, ವಿವಾಹ ಸಂಬಂಧಗಳನ್ನು ತಂತಮ್ಮ ಜಾತಿಗಳಲ್ಲೇ ಮಾಡಿಕೊಳ್ಳುತ್ತಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಚರ್ಚ್ಗಳ ಪ್ರವೇಶ ಮುಕ್ತವಾಗಿರುವುದು ಬಿಟ್ಟರೆ, ಮಿಕ್ಕಂತೆ ಅವರು ಅವರ ಜಾತಿಯ ಕಳಂಕಗಳಿಂದ ಮುಕ್ತವಾಗುವ ಪರಿಸ್ಥಿತಿಯೇ ಇಲ್ಲ. ಈ ವಾಸ್ತವವನ್ನು ತೀರ್ಪು ಬರೆದ ನ್ಯಾಯಮೂರ್ತಿಗಳಾದ ಪ್ರಶಾಂತ ಕುಮಾರ ಮಿಶ್ರಾ, ಎನ್.ವಿ. ಆಂಜಾರಿಯಾ ಹಾಗೂ ಮನಮೋಹನ್ ಅವರಿಗೆ ಮನವರಿಕೆ ಮಾಡುವಲ್ಲಿ ಬಿಜೆಪಿ ಸರ್ಕಾರವನ್ನು ಪ್ರತಿನಿಧಿಸುವ ವಕೀಲರಿಗೆ ಸಾಧ್ಯವಾದಂತಿಲ್ಲ.

2007ರಲ್ಲಿ ಪ್ರಕಟವಾದ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗವು ‘ಧರ್ಮಕ್ಕೂ ಎಸ್ಸಿ ಸ್ಥಾನಮಾನಕ್ಕೂ ಸಂಬಂಧ ಕಲ್ಪಿಸುವುದು ಬೇಡ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ದಲಿತರಿಗೂ ಎಸ್ಸಿ ಸ್ಥಾನಮಾನ ಕೊಡಿ’ ಎಂದು ಶಿಫಾರಸು ಮಾಡಿತ್ತು. ಆದರೆ, ದೋಷಪೂರಿತ ವರದಿ ಎಂಬ ನೆಪ ಒಡ್ಡಿ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಅದರ ಬದಲಾಗಿ 2022ರಲ್ಲಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆಯೋಗವನ್ನು ರಚಿಸಿ, ಇದರ ಬಗ್ಗೆ ಮರುಪರಿಶೀಲನೆ ನಡೆಸಲು ಹೊರಟಿತು. ಸಂವಿಧಾನದ ಚೌಕಟ್ಟಿನಲ್ಲಿ ಮತಾಂತರಗೊಂಡವರಿಗೆ ಎಸ್ಸಿ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸತತವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಇರುವುದನ್ನು ಇಲ್ಲಿ ಗಮನಿಸಬೇಕು. ಈ ವಿಚಾರದಲ್ಲಿ 1950ರ ಸಂವಿಧಾನದ ಪರಿಶಿಷ್ಟ ಜಾತಿಯ ಆದೇಶವನ್ನು ಕೋರ್ಟ್ ಉಲ್ಲೇಖಿಸಿದೆ. ಆ ಆದೇಶದ ಪ್ಯಾರಾಗ್ರಾಫ್ 3ರ ಪ್ರಕಾರ, ಹಿಂದೂ, ಸಿಖ್ ಮತ್ತು ಬೌದ್ಧ ಹೊರತುಪಡಿಸಿ ಬೇರೆ ಧರ್ಮವನ್ನು ಪಾಲಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ, ಹುಟ್ಟಿನಿಂದ ಎಸ್ಸಿ ಆಗಿದ್ದರೂ, ಮತಾಂತರಗೊಂಡ ಮರುಕ್ಷಣವೇ ಮೀಸಲಾತಿಯೊಂದಿಗೆ ಜಾತಿ ದೌರ್ಜನ್ಯದಿಂದ ಪಾರಾಗಲು ಪಡೆಯಬಹುದಾದ ರಕ್ಷಣೆಗಳು ರದ್ದಾಗುತ್ತವೆ.

ಒಬ್ಬ ವ್ಯಕ್ತಿ ಏಕಕಾಲದಲ್ಲಿ ಬೇರೆ ಧರ್ಮವನ್ನು ಪಾಲಿಸುತ್ತಾ, ಎಸ್ಸಿ ಸ್ಥಾನಮಾನ ಅನುಭವಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಜಾತಿಪದ್ಧತಿಯನ್ನು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಂತೆಯೇ ಮಾನ್ಯ ಮಾಡದ ಬೌದ್ಧ ಮತ್ತು ಸಿಖ್ ಧರ್ಮಕ್ಕೆ ರಿಯಾಯಿತಿ ಕೊಟ್ಟ ಕಾರಣಗಳನ್ನು ತೀರ್ಪು ವಿಶ್ಲೇಷಿಸಿದಂತಿಲ್ಲ. ಈ ದೇಶದಲ್ಲಿ ಯಾವುದೇ ಧರ್ಮಕ್ಕೆ ಹೋದರೂ ಜಾತಿ ಬೆನ್ನುಬಿಡುವುದಿಲ್ಲ. ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ ಸೇರಿದಂತೆ ಭಾರತದಲ್ಲಿರುವ ಎಲ್ಲಾ ಧರ್ಮಗಳಲ್ಲೂ ಜಾತಿಗಳು ಇದ್ದೇ ಇವೆ ಮತ್ತವು ಸದಾ ಜಾಗೃತವಾಗಿರುತ್ತವೆ. ಸುಪ್ರೀಂ ಕೋರ್ಟ್ನ ತೀರ್ಪು, ಜಾತಿ ಮತ್ತು ಅಸ್ಪೃಶ್ಯತೆಗಳೇ ತಾಂಡವವಾಡುವ ದೇಶದಲ್ಲಿನ ಕಟು ವಾಸ್ತವಗಳಿಗೆ ಬೆನ್ನುಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.