ನಾಲ್ವಡಿ ಎಂಬುದು ಬರಿ ಹೆಸರಲ್ಲ. ಆಧುನಿಕ ಮೈಸೂರಿನ ದೊಡ್ಡ ಐಕಾನ್. ಕವಿಗಳಿಗೆ, ಚರಿತ್ರೆಕಾರರಿಗೆ, ಆಡಳಿತಗಾರರಿಗೆ, ಶೋಷಿತ ಸಮುದಾಯಗಳಿಗೆ ನಾಲ್ವಡಿಯವರು ನೀಡಿದ, ನೀಡುತ್ತಿರುವ ಪ್ರೇರಣೆ ಬಹುದೊಡ್ಡದು. ಜೂನ್ 4 ರಂದು ನಾಲ್ವಡಿ ಜಯಂತಿ. ಅವರ ಕುರಿತ ಒಂದು ಜನಪ್ರಿಯ ಹಾಡಿನ ಸುತ್ತಮುತ್ತ...

'ಮರೆಯೋದುಂಟೆ ಮೈಸೂರು ದೊರೆಯಾ... ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯಾ’ ...ಈಗ ಈ ಹಾಡನ್ನು ಕೇಳದ ಮೈಸೂರಿಗರೇ ಇಲ್ಲವೇನೋ.

ಹಾಗೆ ಹಾಡು ಮೈಸೂರಿನ ಜನರ ಮನೆ–ಮನದೊಳಗೆ ನೆಲೆ ನಿಂತುಬಿಟ್ಟಿದೆ. ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಹಾಡಿಲ್ಲದೆ ಆರಂಭವಾಗುವುದಿಲ್ಲ. ಶಾಲೆ, ಕಾಲೇಜುಗಳಲ್ಲಿ, ರಂಗತರಬೇತಿ ಶಿಬಿರಗಳಲ್ಲಿ ಈ ಹಾಡಿನ ಮೂಲಕವೇ ಮಕ್ಕಳಿಗೆ ನಾಲ್ವಡಿಯವರ ಬದುಕು- ಆಡಳಿತ-ಕೊಡುಗೆಗಳ ಪರಿಚಯವನ್ನು ಮಾಡಿಕೊಡುವ ಪರಿಪಾಠವೂ ಉಂಟು.

ಆಧುನಿಕ ಮೈಸೂರಿನ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಅಭಿವೃದ್ಧಿಯ ಚರಿತ್ರೆಯನ್ನೂ, ನಾಲ್ವಡಿಯರ ಕೊಡುಗೆಗಳನ್ನೂ ಏಕಕಾಲದಲ್ಲಿ ಮುಕ್ತಕಂಠದಿಂದ ಶ್ಲಾಘಿಸುವ ಹಾಡನ್ನು ಬರೆದು, ಸಂಗೀತ ಸಂಯೋಜಿಸಿದ ಕೆ.ಆರ್.ನಗರದ ಹನಸೋಗೆ ಸೋಮಶೇಖರ್ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮೂಲತಃ ಚಿತ್ರಕಲಾವಿದರು. ಈ ಹಾಡಿನ ಕಾರಣಕ್ಕೆ ಅವರ ಹೆಸರಿನೊಂದಿಗೆ ಅವರ ಊರಾದ ಹನಸೋಗೆಯೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ನಾಲ್ವಡಿಯವರ ಸಾಧನೆ ಹಾಗೂ ಆ ಹಾಡಿನ ಶಕ್ತಿ ಎರಡೂ ಅದಕ್ಕೆ ಕಾರಣವಿರಬಹುದು. ಹಾಡಿದವರ ಮಧುರ ಕಂಠ, ಅಭಿಮಾನವೂ ಅದರಲ್ಲಿ ಸೇರಿದೆ. ಹಾಡು ತೇಲಿ ಬರುತ್ತಲೇ ಎದೆಯೊಳಗಿಳಿಸಿಕೊಂಡ ನಾಲ್ವಡಿಯವರ ಅಭಿಮಾನಿಗಳನ್ನು ಮರೆಯೋದುಂಟೆ?

ಸೋಮಶೇಖರ್ ಅವರೇ ಸಂದರ್ಶನವೊಂದರಲ್ಲಿ ಹೇಳಿರುವಂತೆ, ಅದು ಚಿಕ್ಕ ಚರ್ಮವಾದ್ಯವಾದ ದಮ್ಮಡಿಯನ್ನು ಹಿಡಿದುಕೊಂಡು ಅರ್ಧಗಂಟೆಯಲ್ಲಿ ಕಟ್ಟಿದ ಹಾಡು ಎಂಬುದನ್ನು ನಾವು ನೀವೆಲ್ಲರೂ ನಂಬಲೇಬೇಕು. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ವಿನೂತನ ಎನ್ನಿಸುವಂಥ ಭಾವತರಂಗಗಳನ್ನು ಅದು ಕೇಳುಗರೆದೆಯಲ್ಲಿ ಹೊಮ್ಮಿಸುತ್ತಲೇ ಇದೆ. ‘ಹಾಡು ಹಳೆಯದಾದರೇನೂ ಭಾವ ನವನವೀನ’ ಎಂಬಂತೆ. ಇಂಥ ಹಾಡುಗಳು ಹೆಚ್ಚೇನಿಲ್ಲ.

ಕಾನ್ಶೀರಾಂ ಬಂದರು..!

ಈ ಹಾಡಿನ ರಚನೆಗೆ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶೀರಾಂ ಅವರೇ ಪ್ರೇರಣೆಯಾಗಿದ್ದರು ಎಂಬುದು ಕುತೂಹಲಕರ ಸಂಗತಿ. ಎಲ್ಲಿಯ ಉತ್ತರ ಪ್ರದೇಶ? ಎಲ್ಲಿಯ ಮೈಸೂರು ಸಂಸ್ಥಾನ? ಎಲ್ಲಿಯ ಕಾನ್ಶೀರಾಂ? ಆದರೆ ಅವರಿಗೆ ನಾಲ್ವಡಿಯವರ ಸುಧಾರಣಾವಾದಿ ಆಡಳಿತದ ಸ್ಪಷ್ಟ ಅರಿವು ಇತ್ತು ಎಂಬುದಕ್ಕೆ ಈ ಸಂಗತಿಯನ್ನೊಂದು ಉತ್ತಮ ನಿದರ್ಶನವನ್ನಾಗಿಯೂ ನೋಡಬಹುದು. ಒಂದು ಸಂಘಟನೆಯಾಗಿ‘ಬಹುಜನ‘ ಎಂಬುದು ರೂಪುಗೊಳ್ಳುವ ಮೊದಲೇ ನಾಲ್ವಡಿ ಬಹುನೆಲೆಯಲ್ಲಿ ಬಹುಜನರ ಬದುಕು ಬದಲಿಸುವಂಥ ಸಾಕಷ್ಟು ಕೆಲಸ ಮಾಡಿದ್ದರು.

ಎರಡೂವರೆ ದಶಕದ ಹಿಂದಿನ ಮೈಸೂರಿನಲ್ಲಿ ಬಹುಜನ ಚಳವಳಿ ಉತ್ತುಂಗಕ್ಕೆ ಏರುತ್ತಿದ್ದ ದಿನಗಳು ಅವು. ಹಿಂದುಳಿದ ವರ್ಗಗಳು (SC/ST/OBC) ಮತ್ತು ಅಲ್ಪಸಂಖ್ಯಾತ ನೌಕರರ ಒಕ್ಕೂಟವಾದ BAMCEF ಮೂಲಕ ಕಾನ್ಶಿರಾಂ ಅವರು ಮೈಸೂರಿನಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿ, ಜಾಗೃತಿ ಸಭೆಗಳನ್ನು ನಡೆಸಲು ಬರುತ್ತಿದ್ದರು. ‘ಬಹುಜನ’ ಪರಿಕಲ್ಪನೆಯು ವಿದ್ಯಾರ್ಥಿಗಳ ಮೈಮನದಾಳಕ್ಕೆ ಇಳಿಯುತ್ತಿತ್ತು.

ಅಂಥದ್ದೊಂದು ಸಭೆಯಲ್ಲಿ ಮೀಸಲಾತಿ ಚಳವಳಿಯ ಇತಿಹಾಸದ ಬಗ್ಗೆ ಮಾತನಾಡುತ್ತಾ, ‘ಬಾಬಾ ಸಾಹೇಬರೊಂದಿಗೆ ನಿಕಟ ಸಂಪರ್ಕ ಹೊಂದಿ, ಇಲ್ಲಿನ ಜನರಿಗೆ ಮೀಸಲಾತಿಯನ್ನು ಕೊಟ್ಟಂಥ ಪ್ರಸಿದ್ಧ ರಾಜರೊಬ್ಬರು ನಿಮ್ಮೂರಲ್ಲೇ ಇದ್ದರು. ಅವರ ಬಗ್ಗೆ ಅಧ್ಯಯನ ಮಾಡಿ’ ಎಂದು ಹೇಳಿದ್ದರು. ಆ ರಾಜರ ಹೆಸರು ಮಾತ್ರ ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ.

ಶಾಹು ಮಹಾರಾಜರ ಹೋಲಿಕೆ...

ಆದರೆ ಅವರು ಮಹಾರಾಷ್ಟ್ರದ ಶಾಹು ಮಹಾರಾಜರೊಂದಿಗೆ ಹೋಲಿಸಿ ಉಲ್ಲೇಖಿಸಿದ್ದು ವಿಶೇಷವಾಗಿತ್ತು. ದಾರ್ಶನಿಕ ಸಮಾಜ ಸುಧಾಕರಾಗಿ ಶಾಹು ಅವರು 19ನೇ ಶತಮಾನದಲ್ಲಿ ಕೈಗೊಂಡ ಸುಧಾರಣವಾದಿ ಕ್ರಮಗಳು ಅವರ ಕಣ್ಮುಂದೆ ಇದ್ದವು. ಅದನ್ನು ಅನುಸರಿಸಿದಂತೆ ನಾಲ್ವಡಿಯವರ ಆಡಳಿತ ಅವರಿಗೆ ಕಂಡಿದ್ದಿರಬಹುದು. ಆದರೆ, ಮೈಸೂರಿನ ತರುಣ ವಿದ್ಯಾರ್ಥಿಗಳಲ್ಲಿ ಮಾತ್ರ ಒಂದು ಕುತೂಹಲ. ಅಂಥ ರಾಜರು ಯಾರಿದ್ದಾರೆ ಇಲ್ಲಿ, ಮೈಸೂರಲ್ಲಿ?

‘ಅಲ್ಲಿವರೆಗೂ ಅವರು ಯಾರೆಂದು ನಮಗೆ ಗೊತ್ತೇ ಇಲ್ಲ. ಹುಡುಕುತ್ತಾ ಹೋದಾಗ ಅವರು ನಾಲ್ವಡಿ ಪ್ರಭುಗಳೆಂದು ಗೊತ್ತಾಯಿತು. ಲೈಬ್ರರಿಗೆ ಹೋದರೆ ನಾಲ್ವಡಿ ಬಗ್ಗೆ ಪುಸ್ತಕವೇ ಇಲ್ಲ. ಇಪ್ಪತ್ತು ಪುಟದ ಸಣ್ಣ ಕೈಪಿಡಿಗಳು ಸಿಕ್ಕವು. ‘ಕೆರೆಯಂ ಕಟ್ಟಿಸು’ ಎಂಬುದರಲ್ಲೂ ವಿಶ್ವೇಶ್ವರಯ್ಯನವರ ಬಗ್ಗೆ ಇತ್ತು. ‘ಕೃಷ್ಣರಾಜ ಭೂಪ ಮನೆಮನೆಯ ದೀಪ’ ಪುಸ್ತಕದಲ್ಲೂ ಹೆಚ್ಚಿನ ವಿವರಗಳಿರಲಿಲ್ಲ. ಒಟ್ಟಾರೆ ವಿಶ್ವೇಶ್ವರಯ್ಯನವರ ಚರಿತ್ರೆಯ ಒಳಗೆ ನಾಲ್ವಡಿ ಸಿಕ್ಕಿದರು’. ಇದು ಕವಿ ಹನಸೋಗೆಯವರ ವಿಷಾದ ನೆನಪು.

1970ರ ದಶಕದಲ್ಲಿ ಬಂದ ‘ಬಂಗಾರದ ಮನುಷ್ಯ’ ಸಿನಿಮಾದ ಹಾಡು ’ಆಗದು ಎಂದು, ಕೈಲಾಗದು ಎಂದು, ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ’- ಕನ್ನಡಿಗರೆಲ್ಲರೂ ಗುನುಗುವ ಇನ್ನೊಂದು ಹಾಡು. ಆ ಹಾಡಿನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರೊಬ್ಬರೇ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದರೆಂದು ಬಣ್ಣಿಸಲಾಗಿದೆ. ಅಲ್ಲಿ ನಾಲ್ವಡಿಯವರ ಉಲ್ಲೇಖ ಬರುವುದಿಲ್ಲ.

ನಲವತ್ತು ವರ್ಷದ ಜನಪರ ಆಡಳಿತ...

ಈಗ ಕವಿಯ ಮಾತು ಕೇಳಿ; ಆಳವಾಗಿ ಅಧ್ಯಯನ ಮಾಡಿದಾಗ ಗೊತ್ತಾಯಿತು. ನಾಲ್ವಡಿಯವರದ್ದು ನಲವತ್ತು ವರ್ಷದ ಜನಪರ ಆಡಳಿತ ಎಂಬ ಕಲ್ಪನೆಯೇ ನಮಗಿರಲಿಲ್ಲ. ಎಲ್ಲ ರಾಜರಂತೆ ಅವರೂ ಕೂಡ ಒಬ್ಬ ರಾಜರೆಂದಷ್ಟೇ ತಿಳಿದುಕೊಂಡಿದ್ದೆವು. ಓದುತ್ತಾ ಹೋದಂತೆ, ಇವರು ಆ ರೀತಿಯ ರಾಜರಲ್ಲ ಎಂದು ಗೊತ್ತಾಯಿತು. ಕೆಆರ್ ಸರ್ಕಲ್ನಲ್ಲಿ ದಿನವೂ ಓಡಾಡುತ್ತಿದ್ದರೂ ಅವರ ಪ್ರತಿಮೆಯ ಕಡೆಗೆ ನೋಡುತ್ತಿರಲಿಲ್ಲ. ರಾಜರು ಯಾರಾದರೇನಂತೆ ರಾಗಿ ಬೀಸೋದು ತಪ್ಪಲ್ಲ ಎಂಬಂತಿದ್ದೆವು. ರಾಜರೆಲ್ಲರೂ ಸ್ವಾರ್ಥಿಗಳು ಎಂಬುದು ನಮ್ಮ ಲೆಕ್ಕ. ಅಂಥ ತಪ್ಪು ತಿಳಿವಳಿಕೆಗಳನ್ನು ಮೀರಿಕೊಂಡ ಮೇಲೆ ಬರೆದ ಹಾಡು ಅದು’

ಹಾಡು ಎಲ್ಲ ಕಡೆಯೂ ಉಳಿಯುತ್ತದೆ. ಪುಸ್ತಕಗಳು ಕೇವಲ ಓದುವವರಿಗಷ್ಟೇ ತೆರೆದುಕೊಳ್ಳುವ ಲೋಕ. ಅದೇ ಕಾರಣಕ್ಕೆ, ಬಹುಜನರಿಗಾಗಿ ದುಡಿದ ನಾಲ್ವಡಿಯೂ ಹಾಡಾಗಿ ಮೂಡಿ ಬಂದರು.

ತಮಾಷೆಯ ಸಂಗತಿ ಎಂದರೆ, ನಾಲ್ವಡಿ ಕುರಿತು ಮಹಿಳೆಯರೂ ಹಾಡಲಿ ಎಂಬ ಕಾರಣಕ್ಕೆ ಇದೇ ಸೋಮಶೇಖರ್ ಒಂದು ಡ್ಯೂಯೆಟ್ ಸಾಂಗ್–ಯುಗಳ ಗೀತೆಯನ್ನೂ ಬರೆದಿದ್ದರು!

ಬನಾರಸ್ನಲ್ಲೂ ಹಾಡಿನ ಅನುರಣನ!

ಉತ್ತರ ಪ್ರದೇಶಕ್ಕೂ ಮೈಸೂರಿಗೂ ಎಲ್ಲಿಂದೆಲ್ಲಿಯ ನಂಟು ಎಂದು ಆರಂಭದಲ್ಲಿ ಕೇಳಿದೆ. ಅದಕ್ಕೆ ಉತ್ತರ ಇಲ್ಲಿದೆ. ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ 1916ರಲ್ಲಿ ಸ್ಥಾಪನೆಯಾದಾಗ ನಾಲ್ವಡಿ ಅದರ ಮೊದಲ ಕುಲಪತಿಯಾಗಿದ್ದರು.

2016ರಲ್ಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ನಡೆದಾಗ ಮೈಸೂರಿನ ಗಾಯಕರ ತಂಡ ಅಲ್ಲಿಗೆ ತೆರಳಿ, 'ಮರೆಯೋದುಂಟೆ...'ಹಾಡನ್ನು ಹಾಡಿದ್ದರು. ಸೋಮಶೇಖರ್ ಅವರಿಗೆ ಅಲ್ಲಿಂದ ಲೈವ್ ಕೇಳಿಸಿದ್ದರು!

ಮಹಾರಾಷ್ಟ್ರ, ಕೇರಳದಲ್ಲೂ ಈ ಹಾಡು ಇದೇ ರೀತಿ ಸದ್ದು ಮಾಡಿದೆ. ನಾಲ್ವಡಿ ಕುರಿತ ಹಾಡು ಗಡಿ ದಾಟಿದ ಬಗೆ ಇದು.

ಮೈಸೂರು ರಾಜ್ಯದ ದೊರೆಯೇ...

ಇದೇ ವೇಳೆ, ’ಮೈಸೂರು ರಾಜ್ಯದ ದೊರೆಯೇ, ರಣಧೀರ ನಾಯ್ಕನೇ’...ಎಂಬ ಇನ್ನೊಂದು ಹಾಡೂ ನೆನಪಾಗುತ್ತಿದೆ. ಕೆಲವು ದಶಕಗಳ ಮುಂಚೆಯೇ ಪ್ರೊ.ಸಿ.ವೀರಣ್ಣ ಅವರು ಬರೆದ ಈ ಹಾಡನ್ನು ಗೂಗಲ್ ಜೆಮಿನಿ ಎಐ ’ಇದೊಂದು ಜನಪ್ರಿಯ ಜಾನಪದ ಗೀತೆ’ ಎಂದೇ ಬಣ್ಣಿಸುತ್ತಿದೆ!

ಆದರೆ ಈ ಗೀತೆಯನ್ನು ಬರೆದವರು, ’ಕನ್ನಡ ಸಾಹಿತ್ಯ- ಚಾರಿತ್ರಿಕ ಬೆಳವಣಿಗೆ’ ಸಂಪುಟಗಳ ಮೂಲಕ ಪ್ರಸಿದ್ಧರಾದ ಪ್ರೊ.ಸಿ.ವೀರಣ್ಣ. ಬಿ.ವಿ.ಕಾರಂತರ ಸಂಗೀತ ಸಂಯೋಜನೆಯಲ್ಲಿ ಇಂದಿಗೂ ಹಚ್ಚ ಹಸಿರಾಗಿ ರಣಧೀರ ನರಸರಾಜ ಕಂಠೀರವನ ವೀರಚರಿತ್ರೆಯನ್ನು ಕಾಣಿಸುವ ಇದು, ಭಾಷಾ ವಿದ್ವಾಂಸ ಪ್ರೊ.ಕೆ.ವಿ.ನಾರಾಯಣ ಅವರ ’ಹುತ್ತವ ಬಡಿದರೆ’ ನಾಟಕದ್ದು. ಅದನ್ನು ನಿರ್ದೇಶಿಸಿದವರು ಪ್ರಸನ್ನ. ನಾಟಕದ ಪ್ರಭಾವ ಬೀರಿ ಈ ಹಾಡು ಜನಪ್ರಿಯವಾಗಿರುವುದು ವಿಶೇಷ.

ಕನ್ನಡ ರಂಗಭೂಮಿಯ ಕ್ಲಾಸಿಕ್ ನಾಟಕಗಳಲ್ಲಿ ಒಂದಾದ ಈ ನಾಟಕದ ಮೂಲಕವೇ 1975ರಲ್ಲಿ ಕರ್ನಾಟಕ ಸಾಂಸ್ಕೃತಿಕ ಸಂಘಟನೆ–ರಂಗತಂಡ 'ಸಮುದಾಯ’ದ ಉದ್ಘಾಟನೆಯೂ ಆಯಿತು ಎಂಬುದೂ ದಾಖಲೆಯೇ. ಹೆಚ್ಚು ಕಡಿಮೆ ಈ ಹಾಡಿಗೂ 50 ವರ್ಷ. ಅದರ ಸಹೋದರನಂತೆ ಕಾಣುವ 'ಮರೆಯೋದುಂಟೆ' ಹಾಡಿಗೆ ಮುಂದಿನ ವರ್ಷಕ್ಕೆ 25 ತುಂಬುತ್ತದೆ! ಎರಡೂ ಹಾಡುಗಳನ್ನು ಬರೆದವರು ಚರಿತ್ರೆಯ ವಿದ್ಯಾರ್ಥಿಗಳೇ!

ರಂಗಭೂಮಿ, ಸಿನಿಮಾಗಳಲ್ಲಿ ಬಳಕೆಯಾದರೂ, ಮನರಂಜನೆಯ ವ್ಯಾಪ್ತಿ ಮೀರಿ ಈ ಹಾಡುಗಳು ಸ್ವತಂತ್ರವಾಗಿ, ಇತಿಹಾಸದ ನಿರೂಪಣೆಯ 'ಹಾಡು ಮಾದರಿ'ಗಳಾಗಿ ನಾಡಿನ ಜನರ ಮನದಲ್ಲಿ ನೆಲೆ ನಿಂತಿವೆ. ನಿರೂಪಣೆಯಲ್ಲಿರುವ ದಿಟ-ಸಟೆಗಳ ಕುರಿತು ಚರಿತ್ರೆಕಾರರ ಆಕ್ಷೇಪಣೆಗಳೇನೇ ಇದ್ದರೂ...!

(ಜೂನ್ 4ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ನಾಲ್ವಡಿ ಜಯಂತಿಯನ್ನು ಆಚರಿಸಲಾಗುತ್ತಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.