ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹುಲಿ ಯೋಜನೆ ಮತ್ತು ದೂರಗಾಮಿ ಪರಿಣಾಮ

ಪಶ್ಚಿಮಘಟ್ಟದಲ್ಲಿ ಹುಲಿಗಳ ಸಂತತಿ ಶೀಘ್ರವಾಗಿ ಕ್ಷೀಣಿಸುತ್ತಿರುವುದಕ್ಕೆ ಕಾರಣಗಳೇನು?
Published 25 ಮೇ 2023, 0:27 IST
Last Updated 25 ಮೇ 2023, 0:27 IST
ಅಕ್ಷರ ಗಾತ್ರ

ಅಖಿಲೇಶ್‌ ಚಿಪ್ಪಳಿ

ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದ ಸುದ್ದಿ ಬಹಿರಂಗಗೊಳ್ಳುವ ಎರಡು ವಾರಕ್ಕೆ ಮೊದಲು, ಪ್ರಪಂಚದ ಶೇ 70ರಷ್ಟು ಹುಲಿಗಳಿಗೆ ಭಾರತ ನೆಲೆಯಾಗಿದೆ ಎಂಬ ಸುದ್ದಿಯನ್ನು ಪ್ರಧಾನಿ ದೇಶಕ್ಕೆ ಬಿತ್ತರಿಸಿದರು. ಹುಲಿಗಳ ಸಂಖ್ಯೆ ನೈಸರ್ಗಿಕವಾಗಿ ಹೆಚ್ಚಾಗುವುದು ಆ ಪ್ರದೇಶದ ಕಾಡಿನ ಆರೋಗ್ಯವನ್ನು ಬಿಂಬಿಸುವ ಮಾನದಂಡವಾಗಿದೆ.

ಮೇರು ಬೇಟೆಪ್ರಾಣಿಗಳಾದ ಹುಲಿ, ಚಿರತೆ, ಸಿಂಹದಂತಹವು ಹೆಚ್ಚುತ್ತಿರುವ ಬಲಿಪ್ರಾಣಿಗಳನ್ನು ನಿಯಂತ್ರಿಸುವುದಲ್ಲದೆ, ಜಲಭದ್ರತೆಯಂತಹ ಅನೇಕ ನೈಸರ್ಗಿಕ ಸೇವೆಗಳನ್ನು ನೀಡುತ್ತವೆ. ಹುಲಿಗಳ ಇಂತಹ ನೈಸರ್ಗಿಕ ಸೇವೆಯ ಮಹತ್ವವನ್ನು ಅರಿತ ಕೇಂದ್ರ ಸರ್ಕಾರವು ಅವುಗಳ ಸಂರಕ್ಷಣೆಗಾಗಿ ಹಲವು ಬಿಗಿಯಾದ ಕಾನೂನು ಕಟ್ಟಳೆಗಳನ್ನು ಜಾರಿ ಮಾಡಿದೆ.

ಹುಲಿಗಳನ್ನು ಸಾಕುವುದು, ಹುಲಿಗಳು ಹಾಗೂ ಅವುಗಳ ಬಲಿಪ್ರಾಣಿಗಳ ಬೇಟೆ, ಆವಾಸಸ್ಥಾನ ನಾಶ ಮತ್ತು ಅವುಗಳ ಅಂಗಾಂಗ ಕಳ್ಳಸಾಗಣೆ ಮಾಡುವುದು 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

ಕೇಂದ್ರ ಸರ್ಕಾರವು 1973ರಲ್ಲಿ ಹುಲಿ ಯೋಜನೆಯನ್ನು ಪ್ರಾರಂಭಿಸಿ, ಹುಲಿಗಳ ರಕ್ಷಣೆಗೆ ಮುಂದಡಿ ಇಟ್ಟಿತು. ಯೋಜನೆಯ ಪ್ರಾರಂಭಿಕ ಹಂತದಲ್ಲಿ ದೇಶದಲ್ಲಿ 9 ಹುಲಿ ಸಂರಕ್ಷಣಾ ಅಭಯಾರಣ್ಯಗಳು ಇದ್ದವು. ಪ್ರಸ್ತುತ ಒಟ್ಟು 53 ಹುಲಿ ಸಂರಕ್ಷಣಾ ಪ್ರದೇಶಗಳಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿಯನ್ನು ನಡೆಸುತ್ತದೆ. ಈ ಪ್ರಾಧಿಕಾರವು ಭಾರತದ ಹುಲಿ ಸಂಪತ್ತನ್ನು ರಕ್ಷಣೆ ಮಾಡಲು ಇರುವ ಪರಮೋಚ್ಚ ಸ್ವತಂತ್ರ ಸಂಸ್ಥೆಯಾಗಿದೆ.

ಹಿಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಪ್ರಾಧಿಕಾರ ಹೇಳಿದೆಯಾದರೂ ಈ ಅವಧಿಯಲ್ಲಿ ಹುಲಿಗಳ ಆವಾಸಸ್ಥಾನಗಳು ಎಷ್ಟರಮಟ್ಟಿಗೆ ಹೆಚ್ಚಾಗಿವೆ ಎನ್ನುವುದು ಉತ್ತರವಿಲ್ಲದ ದೊಡ್ಡ ಪ್ರಶ್ನೆಯಾಗಿದೆ. 2018ರ ಹುಲಿ ಗಣತಿಯ ಅಂಕಿಅಂಶದ ಪ್ರಕಾರ, ಪಶ್ಚಿಮಘಟ್ಟದಲ್ಲಿ ಒಟ್ಟು 981 ಹುಲಿಗಳಿದ್ದವು. ಬರೀ ನಾಲ್ಕು ವರ್ಷಗಳ ಅವಧಿಯಲ್ಲಿ, ಅಂದರೆ 2022ರ ಗಣತಿಯಲ್ಲಿ ಈ ಸಂಖ್ಯೆ 824ಕ್ಕೆ ಇಳಿದಿದೆ.

ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ, ಅದರಲ್ಲೂ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಭಾಗದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಇದು ಪಶ್ಚಿಮಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಗಂಭೀರ ವಿದ್ಯಮಾನವಾಗಿದೆ. ಪ್ರಪಂಚದ ಎಂಟು ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ನಮ್ಮ ಪಶ್ಚಿಮಘಟ್ಟವೂ ಸೇರಿದೆ. ಆದರೆ ಅದೀಗ ಅಪಾಯದಲ್ಲಿದೆ. ಹುಲಿಗಳು ವಾಸಿಸಲು ಅತ್ಯಂತ ಪ್ರಶಸ್ತ ತಾಣವಾದ ಪಶ್ಚಿಮಘಟ್ಟದಲ್ಲಿ ಅವುಗಳ ಸಂತತಿ ಶೀಘ್ರವಾಗಿ ಇಳಿಮುಖವಾಗುತ್ತಿರುವುದಕ್ಕೆ ಕಾರಣಗಳೇನು?

ಬಹುಮುಖ್ಯವಾಗಿ, ಕಾಡಿನ ಗುಣಮಟ್ಟ ಕುಸಿತ, ಹುಲಿಗಳ ಆವಾಸಸ್ಥಾನದ ಛಿದ್ರೀಕರಣ, ಬಲಿಪ್ರಾಣಿಗಳ ಕಳ್ಳಬೇಟೆ, ನೆಲೆಗಳ ನಾಶ, ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿರ್ವಹಣಾ ಧೋರಣೆ, ಹುಲಿಗಳ ಅಂಗಾಂಗ ಕಳ್ಳಸಾಗಣೆ, ವ್ಯಾಪಕವಾದ ಏಕಜಾತಿಯ ನೆಡುತೋಪುಗಳು... ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಇದಕ್ಕೆ ಒಂದು ಉದಾಹರಣೆಯೆಂದರೆ, ಬಳ್ಳಾರಿ ಹಾಗೂ ಹೊಸಪೇಟೆಯಲ್ಲಿ ಸಿಗುವ ‘ಬಿ’ ದರ್ಜೆಯ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರನ್ನು ಅಂಕೋಲಾದ ತದಡಿ ಬಂದರಿನ ಮೂಲಕ ಚೀನಾ ದೇಶಕ್ಕೆ ಸಾಗಿಸುವ ಸಲುವಾಗಿ, ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಪ್ರಸ್ತಾವವನ್ನು 1998ರಲ್ಲೇ ಮಾಡಲಾಗಿರುವುದು.

ವಿವಿಧ ವೈಜ್ಞಾನಿಕ ಸಂಸ್ಥೆಗಳು, ಅರಣ್ಯ ಇಲಾಖೆ, ಸುಪ್ರೀಂ ಕೋರ್ಟ್‌ನಿಂದ ರಚಿತವಾದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಮತ್ತು ಹತ್ತು ಹಲವು ಪರಿಸರ ಅಧ್ಯಯನ ವರದಿಗಳ ಆಧಾರದ ಮೇಲೆ ಈ ಯೋಜನೆಯನ್ನು ಒಟ್ಟು ಹನ್ನೆರಡು ಬಾರಿ ತಿರಸ್ಕರಿಸಲಾಗಿದೆ. ಆದರೂ ರಾಜ್ಯ ಸರ್ಕಾರವು ಯೋಜನೆಯನ್ನು ಶತಾಯಗತಾಯ ಕಾರ್ಯರೂಪಕ್ಕೆ ತಂದೇ ತೀರುತ್ತೇವೆ ಎಂಬ ಹಟಕ್ಕೆ ಬಿದ್ದಿದೆ. ಒಂದೊಮ್ಮೆ ಈ ಯೋಜನೆ ಜಾರಿಯಾದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಯೋಜನೆಯ ಪ್ರದೇಶ ಹಾನಿಗೊಳಗಾಗಲಿದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಅಭಯಾರಣ್ಯದ ಹುಲಿಪಥ ಹಾಗೂ ಆನೆಪಥಗಳು ಶಾಶ್ವತವಾಗಿ ಛಿದ್ರವಾಗಲಿವೆ.

ವನ್ಯಜೀವಿಗಳ ನೈಸರ್ಗಿಕವಾದ ನಿರ್ದಿಷ್ಟ ಪಥಗಳ ಮಧ್ಯೆ ಹೊಸ ಹೊಸ ಹೆದ್ದಾರಿಗಳು ಅಥವಾ ರೈಲು ಮಾರ್ಗಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಜಲವಿದ್ಯುತ್ ಯೋಜನೆಗಳು ಜಾರಿಯಾದಲ್ಲಿ, ಮೇರು ಪ್ರಾಣಿಗಳ ಪಥವು ಛಿದ್ರಗೊಂಡು ಅವುಗಳ ಸಂತತಿ ಸ್ಥಳೀಯವಾಗಿ ಅಳಿದುಹೋಗಲಿದೆ.

ಈ ಪ್ರದೇಶಗಳ ಧಾರಣಾ ಸಾಮರ್ಥ್ಯವು ಕುಸಿದು, ಇಲ್ಲಿ ಹುಟ್ಟುವ ಅನೇಕ ಬಹುಮುಖ್ಯ ನದಿಗಳು ತಮ್ಮ ಹರಿವನ್ನು ನಿಲ್ಲಿಸಲಿವೆ. ನದಿಗಳಿಗೆ ಸೇರುವ ಉಪನದಿಗಳ ಪಥ ಬದಲಾವಣೆಯಿಂದಾಗಿ, ನದಿಗಳನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಪಟ್ಟಣಗಳು ಸಂತ್ರಸ್ತ ಪಟ್ಟಿಯಲ್ಲಿ ಸೇರಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ಇದಕ್ಕೆ ಜ್ವಲಂತ ಉದಾಹರಣೆ. ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಹುಟ್ಟಿ, ಬರೀ ನೂರು ಕಿಲೊಮೀಟರ್ ದೂರವಿರುವ ಅರಬ್ಬಿ ಸಮುದ್ರ ಸೇರುವ ನದಿಯು ತನ್ನ ಹರಿವನ್ನು ನಿಲ್ಲಿಸಿ ಉಪ್ಪಿನಂಗಡಿಯಲ್ಲಿಯೇ ಬತ್ತಿಹೋಗಿದೆ.

ಈ ಪರಿಸ್ಥಿತಿಯಲ್ಲಿ, ಸರ್ಕಾರದ ಪ್ರಮುಖ ಆದ್ಯತೆ ಏನಾಗಬೇಕು ಎಂದರೆ, ಹಾಲಿ ಇರುವ ವನ್ಯಜೀವಿ ಸಂರಕ್ಷಿತ ಪ್ರದೇಶಗಳನ್ನು ಸುಧಾರಣೆ ಮಾಡುವುದು, ನಿರ್ಣಾಯಕ ವನ್ಯಜೀವಿ ಆವಾಸಸ್ಥಾನಗಳನ್ನು ಗುರುತಿಸಿ, ಅವುಗಳ ಬಲವರ್ಧನೆ ಮಾಡುವುದು ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಸಂಪರ್ಕಿಸುವ ವನ್ಯಜೀವಿ ಪಥಗಳನ್ನು ಗುರುತಿಸಿ ಸಂರಕ್ಷಿಸುವುದು.

ಯಾವುದೇ ಕಾರಣಕ್ಕೂ ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಹಾಗೂ ಪಥಗಳಲ್ಲಿ ಜಾರಿ ಮಾಡದೇ ಇರುವುದು. ವನ್ಯಜೀವಿ ನೆಲೆಗಳನ್ನು ಹೆಚ್ಚು ಮಾಡುವುದರಿಂದ, ಶುದ್ಧಗಾಳಿ, ಜಲ ಹಾಗೂ ಆಹಾರ ಭದ್ರತೆಯನ್ನು ಪಡೆಯಬಹುದಾಗಿದೆ. ಇದರಿಂದ, ಒಟ್ಟು ಸಮಾಜದ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಂಡು ಒಂದು ಮಾದರಿ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.

ಭಾರತದಲ್ಲಿನ ಸೀಮಿತ ನೈಸರ್ಗಿಕ ಸಂಪತ್ತನ್ನು 140 ಕೋಟಿ ಜನಸಂಖ್ಯೆಗೆ ಹೊಂದಿಸುವುದು ತೀರಾ ಕ್ಲಿಷ್ಟಕರವಾಗಿ ಪರಿಣಮಿಸುತ್ತದೆ. ಪಶ್ಚಿಮಘಟ್ಟದ ಮೇಲೆ ಇದರಿಂದಾಗುವ ದೂರಗಾಮಿ ದುಷ್ಪರಿಣಾಮಗಳನ್ನು ಈಗಲೇ ಗುರುತಿಸಿ, ತಕ್ಕ ತಡೆ ಮಾರ್ಗಗಳನ್ನು ಸರ್ಕಾರ ರೂಪಿಸಬೇಕಾಗಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೂ ಶರಾವತಿ ಅಭಯಾರಣ್ಯಕ್ಕೂ ನಡುವೆ, ಹಾಗೆಯೇ ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯಕ್ಕೂ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೂ ನಡುವೆ ಹೊಸ ವನ್ಯಜೀವಿ ಅಭಯಾರಣ್ಯ ರಚಿಸಲು ಇಲ್ಲವೇ ಕಾಡಿನ ನಡುವೆ ಸಂಪರ್ಕ ಕಲ್ಪಿಸಲು ವಿಪುಲ ಅವಕಾಶಗಳಿವೆ. ಇಂತಹ ಸಾಧ್ಯತೆಗಳನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಗುರುತಿಸಿ, ಹೊಸ ವನ್ಯಜೀವಿ ಧಾಮಗಳನ್ನು ನಿರ್ಮಿಸುವುದು ಆದ್ಯತೆಯಾಗಬೇಕು. ಈ ರೀತಿಯ ಕ್ರಮಗಳು ಪಶ್ಚಿಮಘಟ್ಟದಲ್ಲಿ ಸಂರಕ್ಷಣಾ ಪ್ರದೇಶದ ಜಾಲವನ್ನು ವೃದ್ಧಿಪಡಿಸಿ, ವನ್ಯಜೀವಿಗಳ ದೀರ್ಘಕಾಲೀನ ಸಂರಕ್ಷಣೆಗೆ ಸಹಕಾರಿಯಾಗಲಿವೆ.

ರಾಜ್ಯದ ಎಲ್ಲ ಅಭಯಾರಣ್ಯಗಳಲ್ಲೂ ಅದೆಷ್ಟೋ ಕುಟುಂಬಗಳು ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಬದುಕುತ್ತಿದ್ದು, ಅವರು ನಾಗರಿಕ ಸಮಾಜದೊಂದಿಗೆ ಬದುಕುವ ಪ್ರಬಲ ಇಚ್ಛೆ ಹೊಂದಿದ್ದಾರೆ. ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಕಾಂಪಾ (ಕಾಂಪನ್ಸೇಟರಿ ಅಫಾರೆಸ್ಟೇಷನ್ ಫಂಡ್ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಪ್ಲಾನಿಂಗ್‌ ಅಥಾರಿಟಿ) ನಿಧಿಯನ್ನು ಬಳಸಿಕೊಂಡು, ಅಭಯಾರಣ್ಯದಲ್ಲಿ ಹಾಲಿ ಇರುವ ಕುಟುಂಬಗಳು ನಾಗರಿಕ ಸಮಾಜದಲ್ಲಿ ಬಂದು ನೆಲೆಸಲು ಸೂಕ್ತವಾದ ಪುನರ್ವಸತಿ ಒದಗಿಸುವ ಮೂಲಕ, ಆ ಕುಟುಂಬಗಳು ಸಮಾಜದಲ್ಲಿ ಗೌರವಯುತವಾಗಿ ಬಾಳುವೆ ಮಾಡುವಂತಹ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಬೇಕು.

ಹುಲಿ ಯೋಜನೆಯಡಿ ಸಂರಕ್ಷಿಸಲ್ಪಟ್ಟ ಪ್ರದೇಶಗಳಿಗೆ ಅತಿ ಹೆಚ್ಚು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡುತ್ತಿದೆ. ನಾಗರಹೊಳೆ, ಭದ್ರಾ, ಬಂಡೀಪುರದಂತಹ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಸ್ಥಿರವಾಗಿದೆ ಅಥವಾ ತುಸು ಏರಿಕೆಯಾಗಿದೆ. ಉದಾಹರಣೆಗೆ, 500 ಚದರ ಕಿ.ಮೀ ವ್ಯಾಪ್ತಿಯಿರುವ ಭದ್ರಾ ಅಭಯಾರಣ್ಯಕ್ಕೆ ವಾರ್ಷಿಕ ₹ 20 ಕೋಟಿ ಅನುದಾನವಿದ್ದು, ಇಷ್ಟೇ ವ್ಯಾಪ್ತಿಯಿರುವ ಶೆಟ್ಟಿಹಳ್ಳಿ ಅಭಯಾರಣ್ಯ, ಉಂಬ್ಳೇಬೈಲು ಪ್ರದೇಶಗಳಿಗೆ ಬರೀ ₹ 3 ಕೋಟಿ ಅನುದಾನವಿದೆ.

ಅರಣ್ಯ ಇಲಾಖೆಯು ಕೇಂದ್ರದಿಂದ ಬರುವ ಅನುದಾನವನ್ನು ನಿಗದಿತ ಸಮಯದ ಮಿತಿಯಲ್ಲಿ ಖರ್ಚು ಮಾಡಬೇಕಾದ ಭರದಲ್ಲಿ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ, ಕಟ್ಟಡ, ಸೇತುವೆಯಂತಹ ಅನವಶ್ಯಕ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದೆ. ವಾಸ್ತವವಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಸಂರಕ್ಷಣೆಯನ್ನು ಹೊರತುಪಡಿಸಿ, ಬೇರೆ ಯಾವ ತರಹದ ಚಟುವಟಿಕೆಗಳೂ ನಡೆಯಬಾರದು.

ಆವಾಸಸ್ಥಾನ ನಿರ್ವಹಣೆ ಹೆಸರಿನಲ್ಲಿ ಈ ಹಾನಿಕಾರಕ ಕೆಲಸಗಳನ್ನು ಇಲಾಖೆಯು ಮೊದಲು ನಿಲ್ಲಿಸಬೇಕು. ಹುಲಿ ಅಭಯಾರಣ್ಯಗಳಲ್ಲಿ ಕೇಂದ್ರ ಸರ್ಕಾರ ವಾಚರ್‌ಗಳ ಸಂಬಳವನ್ನೇ ಹಿಂದಿನ ವರ್ಷ ಮತ್ತು ಈ ವರ್ಷ ಬಿಡುಗಡೆ ಮಾಡಿಲ್ಲ. ಇದು ಸಂರಕ್ಷಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮತ್ತೊಂದು ಕಡೆ, ಹುಲಿ ಯೋಜನೆಯಿಂದ ಹೊರತಾಗಿರುವ ಶೆಟ್ಟಿಹಳ್ಳಿ, ಶರಾವತಿ, ಮಲೆಮಹದೇಶ್ವರದಂತಹ ಅನೇಕ ಅಭಯಾರಣ್ಯಗಳಿಗೆ ಅನುದಾನದ ತೀವ್ರ ಕೊರತೆಯಿದೆ.

ಹುಲಿ ಯೋಜನೆಯಡಿ ಬರುವ ಪ್ರದೇಶಗಳು ಹಾಗೂ ಹುಲಿ ಯೋಜನೆಯೇತರ ಅಭಯಾರಣ್ಯಗಳ ನಡುವೆ ಇರುವ ಅನುದಾನದ ತಾರತಮ್ಯವನ್ನು ನಿವಾರಿಸಿ, ಇತರ ಅಭಯಾರಣ್ಯಗಳನ್ನು ವನ್ಯಜೀವಿಗಳ ಉತ್ಕೃಷ್ಟ ನೆಲೆಗಳನ್ನಾಗಿ ರೂಪಿಸುವಲ್ಲಿ ಇಲಾಖೆ ಹಾಗೂ ಸರ್ಕಾರ ಕೆಲಸ ಮಾಡುವುದು ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT