ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಒಳಮೀಸಲಾತಿ ತೀರ್ಪು: ಸದಾಶಯದ ಮೈಲಿಗಲ್ಲು

ದೇಶದಾದ್ಯಂತ ಜಾತಿ ಜನಗಣತಿ ಅನಿವಾರ್ಯ ಎಂಬ ಮಾತಿಗೆ ಈ ತೀರ್ಪು ಬಲ ತಂದುಕೊಟ್ಟಿದೆ
ಯೋಗೇಂದ್ರ ಯಾದವ್, ಪ್ರಣವ್ ಧವನ್
Published : 5 ಆಗಸ್ಟ್ 2024, 23:40 IST
Last Updated : 5 ಆಗಸ್ಟ್ 2024, 23:40 IST
ಫಾಲೋ ಮಾಡಿ
Comments

ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮುನ್ನೋಟವಿರುವ ನೀತಿಯೊಂದರ ಬಾಗಿಲನ್ನು ಸುಪ್ರೀಂ ಕೋರ್ಟ್ ತೆರೆದಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಇದ್ದ ಕಾನೂನಿನ ಅಡ್ಡಿಗಳನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ತೆರವು ಮಾಡಿದೆ. ಮೀಸಲಾತಿಯ ವಿಚಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಕೆನೆಪದರದವರನ್ನು ಹೊರಗಿರಿಸಲು ಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಇದು ಚರ್ಚಾರ್ಹ ಹಾಗೂ ಇಲ್ಲಿ ಒಂದಿಷ್ಟು ಅಸ್ಪಷ್ಟತೆ ಇದೆ.

ಇಂತಹ ಮಹತ್ವದ ತೀರ್ಪುಗಳ ವಿಚಾರದಲ್ಲಿ ಟೀಕೆ, ಬೆಂಬಲ ಎದುರಾಗುವುದು ಸಹಜ. ದಲಿತ ನಾಯಕರಾದ ಪ್ರಕಾಶ್ ಅಂಬೇಡ್ಕರ್ ಮತ್ತು ಚಂದ್ರಶೇಖರ ರಾವಣ್ ಅವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ದಲಿತರಲ್ಲಿ ತೀರಾ ಹಿಂದುಳಿದಿರುವ ಮಾದಿಗ ಹಾಗೂ ಇತರ ಕೆಲವು ಸಮುದಾಯಗಳ ನಾಯಕರು ತೀರ್ಪನ್ನು ಸ್ವಾಗತಿಸಿದ್ದಾರೆ. ರಾಜ್ಯ ಸರ್ಕಾರಗಳು ಹೊಸ ನೀತಿಗಳನ್ನು ಹೇಗೆ ರೂಪಿಸುತ್ತವೆ ಹಾಗೂ ರಾಜಕೀಯ ಪಕ್ಷಗಳು ಕಾನೂನಿನ ದೃಷ್ಟಿಯಿಂದ ಬದಲಾಗಿರುವ ಈ ಪರಿಸ್ಥಿತಿಯಲ್ಲಿ ಹೊಸ ಬಗೆಯ ರಾಜಕಾರಣವನ್ನು ಹೇಗೆ ಕಟ್ಟುತ್ತವೆ ಎಂಬುದನ್ನು ಆಧರಿಸಿ ಹಲವು ಸಂಗತಿಗಳು ತೀರ್ಮಾನವಾಗಲಿವೆ. ಆದರೆ, ಮೀಸಲಾತಿಯ ವಿಚಾರದಲ್ಲಿ ಈ ತೀರ್ಪು ಒಂದು ಹೆಜ್ಜೆ ಮುಂದಕ್ಕೆ ಇರಿಸಿದಂತಿದೆ. ಸದಾಶಯದ ಕ್ರಮಗಳು ದಾಳಿಗೆ ಗುರಿಯಾಗಿರುವ ಈ ಸಂದರ್ಭದಲ್ಲಿ ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನೀತಿಗಳು ಹಾಗೂ ರಾಜಕಾರಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು, ಇನ್ನಷ್ಟು ಆಳವಾಗಿಸಲು ನೆರವಾಗಲಿದೆ.

ಪರಿಶಿಷ್ಟ ಜಾತಿಗಳ ಒಳವರ್ಗೀಕರಣಕ್ಕೆ ತಮಗೆ ಇದ್ದ ಮಿತಿಗಳನ್ನು ನಿವಾರಿಸಿಕೊಳ್ಳಲು ರಾಜ್ಯ ಸರ್ಕಾರಗಳು ಇಪ್ಪತ್ತು ವರ್ಷಗಳಿಂದ ನಡೆಸಿದ್ದ ಕಾನೂನು ಹೋರಾಟವನ್ನು ಈ ತೀರ್ಪು ಕೊನೆಗೊಳಿಸಿದೆ. ದೇಶದಲ್ಲಿ ಪರಿಶಿಷ್ಟ ಜಾತಿಗಳು ಎಂದು ಪರಿಗಣಿಸಬೇಕಿರುವ ಜಾತಿಗಳ ಪಟ್ಟಿಯನ್ನು ಅಧಿಸೂಚಿಸಲು ರಾಷ್ಟ್ರಪತಿಯವರಿಗೆ ಅಧಿಕಾರ ನೀಡುವ ಸಂವಿಧಾನದ 341ನೇ ವಿಧಿಯ ಸರಿಯಾದ ವ್ಯಾಖ್ಯಾನವೇ ಇಲ್ಲಿ ಚರ್ಚೆಗೆ ಗುರಿಯಾಗಿತ್ತು. 2004ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವೊಂದು, ಒಳಮೀಸಲಾತಿ ಕಲ್ಪಿಸಲು ಒಳವರ್ಗೀಕರಣ ಮಾಡುವುದನ್ನು ಕಾನೂನುಬಾಹಿರ ಎಂದು ಹೇಳಿತ್ತು. ಇ.ವಿ. ಚಿನ್ನಯ್ಯ ಪ್ರಕರಣದಲ್ಲಿ ಈ ಪೀಠವು ರಾಜ್ಯವೊಂದರ ಭೌಗೋಳಿಕ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಗಳೆಲ್ಲವೂ ಏಕರೂಪಿಯಾಗಿರುತ್ತವೆ, ಅವುಗಳ ಒಳವರ್ಗೀಕರಣಕ್ಕೆ ಅವಕಾಶ ಇಲ್ಲ ಎಂದು ಹೇಳಿತ್ತು.

ಇ.ವಿ.ಚಿನ್ನಯ್ಯ ಪ್ರಕರಣದ ತೀರ್ಪು ವಾಸ್ತವಕ್ಕೆ ಅನುಗುಣವಾಗಿರಲಿಲ್ಲ. ಎಸ್‌ಸಿ, ಎಸ್‌ಟಿಯಂತಹ ಸಮುದಾಯಗಳಲ್ಲಿ ಬೇರೆ ಬೇರೆ ಸ್ತರಗಳ, ಬೇರೆ ಬೇರೆ ಸಾಂಪ್ರದಾಯಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಆ ಕಾರಣಗಳಿಂದಾಗಿಯೇ ಬೇರೆ ಬೇರೆ ಮಟ್ಟಗಳಲ್ಲಿ ಅನನುಕೂಲಗಳನ್ನು ಹೊಂದಿರುವ ಗುಂಪುಗಳನ್ನು ಗುರುತಿಸಲು ಅದು ವಿಫಲವಾಗಿತ್ತು. ಈ ಭಿನ್ನ ಸಮುದಾಯಗಳು ಆಧುನಿಕ ಶಿಕ್ಷಣಕ್ಕೆ ಸಮಾನವಾಗಿ ಒಡ್ಡಿಕೊಂಡಿರಲಿಲ್ಲ. ಹೀಗಾಗಿ, ಅವುಗಳಿಗೆ ಸದಾಶಯದ ಕ್ರಮಗಳ ಪ್ರಯೋಜನ
ವನ್ನು ಸಮಾನವಾಗಿ ಪಡೆದುಕೊಳ್ಳಲು ಆಗಿರಲಿಲ್ಲ. ಸಹಜವಾಗಿಯೇ, ಮೀಸಲಾತಿಯ ಬಹುದೊಡ್ಡ ಪಾಲನ್ನು ಕೆಲವು ಸಮುದಾಯಗಳು ಪಡೆದುಕೊಂಡವು. ಈ ಅಸಮಾನತೆಯು ಎಡಗೈ, ಬಲಗೈ ಸಮುದಾಯಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯ ಸೃಷ್ಟಿಸಿದೆ, ಅದನ್ನು ತೀವ್ರಗೊಳಿಸಿದೆ. 

ಬಿಹಾರದ 2023ರ ಜಾತಿ ಜನಗಣತಿಯು ಎಸ್‌ಸಿ ಸಮುದಾಯದೊಳಗಿನ ವಿವಿಧ ಗುಂಪುಗಳ ನಡುವೆ
ಶೈಕ್ಷಣಿಕವಾಗಿ ಅಸಮಾನತೆ ತೀವ್ರವಾಗಿರುವುದನ್ನು ಗುರುತಿಸಿದೆ. ದೋಬಿ ಸಮುದಾಯದಲ್ಲಿ ಪ್ರತಿ 10 ಸಾವಿರ ಮಂದಿಗೆ 124 ಮಂದಿ ಉನ್ನತ ಶಿಕ್ಷಣ ಪದವಿ ಹೊಂದಿದ್ದರೆ, ಮುಸಾಹರ್‌ಗಳ ಪೈಕಿ ಒಬ್ಬ ಮಾತ್ರ ಇಂತಹ ಪದವಿ ಹೊಂದಿದ್ದಾನೆ! ತಮಿಳುನಾಡಿನಲ್ಲಿ ಅರುಣತಾತಿಯಾರ್‌ ಸಮುದಾಯವು ಒಟ್ಟು ಎಸ್‌ಸಿ ಜನಸಂಖ್ಯೆಯಲ್ಲಿ ಶೇ 16ರಷ್ಟು ಪ್ರಮಾಣದಲ್ಲಿದ್ದರೆ, ಸರ್ಕಾರಿ ಹುದ್ದೆಗಳಲ್ಲಿ ಅವರ ಪಾಲು ಶೇ 0.5ರಷ್ಟು ಮಾತ್ರ. ಈ ಅಸಮಾನತೆಗೆ ಇರುವ ಪರಿಹಾರ, ಒಳವರ್ಗೀಕರಣ ತಂದು ಪ್ರತಿ ಒಳವರ್ಗದ ಜಾತಿಯ ಪ್ರಮಾಣಕ್ಕೆ ಅನುಗುಣವಾಗಿ ಆ ವರ್ಗಕ್ಕೆ ಮೀಸಲಾತಿ ಕಲ್ಪಿಸುವುದು. ಇದನ್ನು ಒಬಿಸಿ ಸಮುದಾಯಗಳ ವಿಚಾರದಲ್ಲಿ ಬಹುತೇಕ ರಾಜ್ಯಗಳಲ್ಲಿ ಮಾಡಲಾಗಿದೆ. ಹೀಗಿದ್ದರೂ, 2004ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರದಲ್ಲಿ, ಎಸ್‌ಸಿ ವಿಚಾರದಲ್ಲಿ ಇಂಥದ್ದೇ ಒಳವರ್ಗೀಕರಣ ಮಾಡುವ ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ಬಿಹಾರ ರಾಜ್ಯಗಳ ಯತ್ನವನ್ನು ಕಾನೂನುಬಾಹಿರ ಎಂದು ಕೋರ್ಟ್‌ಗಳು ಘೋಷಿಸಿದ್ದವು.

ಈಗ ಸುಪ್ರೀಂ ಕೋರ್ಟ್‌ ತನ್ನ ಹಿಂದಿನ ತೀರ್ಪನ್ನು ರದ್ದುಪಡಿಸಿದೆ. ಒಳವರ್ಗೀಕರಣಕ್ಕೆ ಅವಕಾಶ ಇದೆ, ಅದು ಸಮಾನತೆಯ ತತ್ವಕ್ಕೆ ವಿರುದ್ಧವಾಗಿಲ್ಲ ಎಂದು ಕೋರ್ಟ್ ಹೇಳಿದೆ. ಒಳವರ್ಗೀಕರಣ ಮಾಡಲೇಬೇಕು ಎಂದು ಕೋರ್ಟ್ ಹೇಳಿಲ್ಲ; ಅದನ್ನು ಮಾಡಲು ಅವಕಾಶ ಇದೆ ಎಂದಷ್ಟೇ ಕೋರ್ಟ್ ಹೇಳಿದೆ. ಎಸ್‌ಸಿ ಸಮುದಾಯಗಳ ಪರಿಸ್ಥಿತಿಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆಯಾದ ಕಾರಣ, ಒಳವರ್ಗೀಕರಣದ ಅಧಿಕಾರವನ್ನು ರಾಜ್ಯಗಳಿಗೇ ನೀಡಲಾಗಿದೆ. ಚಿನ್ನಯ್ಯ ಪ್ರಕರಣಕ್ಕೆ ಆಧಾರವಾಗಿರುವ, ಕಾನೂನಿನ ತತ್ವಕ್ಕೆ ಬಲವಾಗಿ ಅಂಟಿಕೊಳ್ಳುವುದನ್ನು ತೊರೆದು ಸುಪ್ರೀಂ ಕೋರ್ಟ್‌, ಪರಿಶಿಷ್ಟ ಜಾತಿಗಳಲ್ಲಿ ತೀರಾ ದುರ್ಬಲವಾಗಿರುವ ವರ್ಗಗಳ ವಿಚಾರವಾಗಿ ಸ್ಪಂದನಶೀಲವಾಗಿ ನಡೆದುಕೊಂಡಿದೆ. ಈ ವರ್ಗಗಳ ಐತಿಹಾಸಿಕ ದುಮ್ಮಾನಗಳನ್ನು ಪರಿಹರಿಸಲು ಮಾರ್ಗವೊಂದನ್ನು ತೋರಿಸಿದೆ. ಆದರೆ ಇದನ್ನು ಜಾತಿ ಆಧಾರಿತ ಮೀಸಲಾತಿಯಿಂದ ದೂರ ಸರಿಯುತ್ತಿರುವ ಹೆಜ್ಜೆ ಎಂದು ಅರ್ಥ ಮಾಡಿಕೊಳ್ಳಬಾರದು. ಜಾತಿಪ್ರಜ್ಞೆ ಇರುವ ಸದಾಶಯದ ಕ್ರಮಗಳ ಅಗತ್ಯದ ವಿಚಾರವಾಗಿ ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಮೂಲಕ ರೂಪುಗೊಂಡ ಸಾಮಾಜಿಕ ಹಾಗೂ ಕಾನೂನಾತ್ಮಕ ಸಮ್ಮತಿಯನ್ನು ಮುಖ್ಯವಾದ ತೀರ್ಪು ಪುನರುಚ್ಚರಿಸುವ ಕೆಲಸ ಮಾಡಿದೆ. ಹೀಗಾಗಿ, ಈ ತೀರ್ಪು ಹೆಚ್ಚು ವಿಶಾಲವಾದ, ಹೆಚ್ಚು
ಪರಿಣಾಮಕಾರಿಯಾದ ಮತ್ತು ಇನ್ನಷ್ಟು ನ್ಯಾಯಸಮ್ಮತವಾದ ಸದಾಶಯದ ಕ್ರಮಗಳ ವ್ಯವಸ್ಥೆಗಾಗಿನ ಹೋರಾಟವನ್ನು ಬಲಪಡಿಸುವ ಕೆಲಸ ಮಾಡಿದೆ.

ತೀರ್ಪಿನಲ್ಲಿ ನಾಲ್ಕು ಮಂದಿ ನ್ಯಾಯಮೂರ್ತಿಗಳು ಆಡಿರುವ ಕೆಲವು ಮಾತುಗಳು ಮಾತ್ರ ಚರ್ಚಾರ್ಹವಾಗಿವೆ.
ಈ ಮಾತುಗಳು ಎಸ್‌ಸಿ ಸಮುದಾಯದಲ್ಲಿನ ಪ್ರಬಲ ವರ್ಗಗಳನ್ನು ಅಥವಾ ‘ಕೆನೆಪದರ’ವನ್ನು ಹೊರಗಿರಿಸುವ ಬಗ್ಗೆ ಇರುವಂತಿವೆ. ‘ಕೆನೆಪದರ’ ತತ್ವವು ಇದುವರೆಗೆ ಒಬಿಸಿ ಸಮುದಾಯಗಳಿಗೆ ಮಾತ್ರ ಅನ್ವಯವಾಗುತ್ತಿತ್ತು, ಎಸ್‌ಸಿ ಹಾಗೂ ಎಸ್‌ಟಿ ವರ್ಗಗಳಿಗೆ ಇದು ಅನ್ವಯವಾಗುತ್ತಿರಲಿಲ್ಲ. ಕೆನೆಪದರ ವಿಚಾರವು ಸುಪ್ರೀಂ ಕೋರ್ಟ್‌ ಪೀಠದ ಎದುರು ಇರಲಿಲ್ಲ. ಹೀಗಿದ್ದರೂ ನ್ಯಾಯಮೂರ್ತಿಗಳು ಈ ಬಗ್ಗೆ ಅಭಿಪ್ರಾಯ ದಾಖಲಿಸಿದ್ದಾರೆ. 

ಕೆನೆಪದರವನ್ನು ಹೊರಗಿರಿಸಬೇಕು ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಪಲ್ಲ. ಆದರೆ, ಏಳು ಮಂದಿ ನ್ಯಾಯಮೂರ್ತಿಗಳು ಇದ್ದ ಪೀಠದಲ್ಲಿನ ನಾಲ್ವರು ನ್ಯಾಯಮೂರ್ತಿಗಳು ಹೇಳಿರುವ ಮಾತುಗಳನ್ನು ಆಧಾರವಾಗಿ ಇರಿಸಿಕೊಂಡು, ಕೆನೆಪದರ ಮಾನದಂಡವನ್ನು ಅಳವಡಿಸಿಕೊಳ್ಳದ ಒಳಮೀಸಲಾತಿ ನೀತಿಯನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂಬ ಆತಂಕ ಇದೆ. ಎಸ್‌ಸಿ ಸಮುದಾಯಗಳಲ್ಲಿ
ಕೆನೆಪದರವನ್ನು ಗುರುತಿಸಲು ಬೇಕಿರುವ ಮಾನದಂಡಗಳು ಒಬಿಸಿ ವರ್ಗಗಳಲ್ಲಿನ ಕೆನೆಪದರವನ್ನು ಗುರುತಿಸಲು ಇರುವ ಮಾನದಂಡಗಳೇ ಆಗಬಾರದು ಎಂಬುದನ್ನು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸ್ಪಷ್ಟಪಡಿಸಿರುವುದು ಒಳ್ಳೆಯ ಸಂಗತಿ. ಹೀಗಿದ್ದರೂ ಇಲ್ಲಿ ದುರ್ಬಳಕೆಗಳಿಗೆ ಅವಕಾಶ ಇದೆ. ಅರ್ಹ ಅಭ್ಯರ್ಥಿ ಸಿಗಲಿಲ್ಲ ಎಂದು ಹೇಳಿ, ಮೀಸಲು ಹುದ್ದೆಗಳನ್ನು ಖಾಲಿ ಇರಿಸಿಕೊಳ್ಳುವುದು ಬಹಳ ಸಹಜವಾಗಿ ನಡೆದುಬಂದಿದೆ. ಕೆನೆಪದರ ತತ್ವವನ್ನು ಅಳವಡಿಸಿಕೊಂಡಾಗ, ಲಭ್ಯವಿರುವ ಅರ್ಹ ಅಭ್ಯರ್ಥಿಗಳ ಸಂಖ್ಯೆ ಇನ್ನಷ್ಟು ಕಡಿಮೆ ಆಗುತ್ತದೆ. ಆಗ ಮೀಸಲು ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸುವುದಕ್ಕೆ ದಾರಿ ಕಲ್ಪಿಸಿದಂತಾಗುತ್ತದೆ. 

ಹೀಗಾಗಿ, ಎಸ್‌ಸಿ, ಎಸ್‌ಟಿ ಸಮುದಾಯಗಳ ವಿಚಾರದಲ್ಲಿ ಕೆನೆಪದರವನ್ನು ಗುರುತಿಸುವ ಮಾನದಂಡವು ಎರಡು ಅಂಶಗಳನ್ನು ಒಳಗೊಳ್ಳಬೇಕು.

1) ಸಾಮಾಜಿಕ ವಾಗಿ, ಆರ್ಥಿಕವಾಗಿ ಮುಂದುವರಿದಿದ್ದಾರೆ ಎಂಬುದನ್ನು ಗುರುತಿಸಲು ಹೆಚ್ಚು ದೊಡ್ಡದಾದ ಮಟ್ಟವೊಂದನ್ನು ನಿಗದಿಪಡಿಸಬೇಕು; ಸಾಮಾಜಿಕವಾಗಿ ಹಾಗೂ ವೃತ್ತಿಯಲ್ಲಿ ಹೊಂದಿರುವ ಮಟ್ಟವನ್ನು ಪರಿಗಣಿಸಬೇಕು.

2) ಕೆನೆಪದರದವರು ಎಂದು ಗುರುತಿಸಲಾದವರನ್ನು ಮೀಸಲಾತಿಯ ಸಾಲಿನಲ್ಲಿ ಕೊನೆಯಲ್ಲಿ ಇರಿಸಬೇಕು; ಅವರನ್ನು ಮೀಸಲಾತಿಯಿಂದ ಅನರ್ಹಗೊಳಿಸಬಾರದು.

ಒಳವರ್ಗೀಕರಣಕ್ಕೆ ಸರಿಯಾದ ಆಧಾರ ಇರಬೇಕು ಎಂದು ಕೋರ್ಟ್‌ ಹೇಳಿರುವುದು, ದೇಶದಾದ್ಯಂತ ಜಾತಿ ಜನಗಣತಿ ನಡೆಸುವುದು ಅನಿವಾರ್ಯ ಎಂಬ ಮಾತಿಗೆ ಬಲ ತಂದುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT