ರಾಜಿ ಮಾಡಿಕೊಳ್ಳುವುದನ್ನು ಹೆಣ್ಣಿಗೆ ಬಾಲ್ಯದಿಂದಲೇ ಸಮಾಜ ಅಭ್ಯಾಸ ಮಾಡಿಸುತ್ತದೆ. ಈ ರಾಜಿ, ಅವಳನ್ನು ಶೋಷಣೆಗೆ ಗುರಿಪಡಿಸಬಹುದು; ಅವಳ ಯಶಸ್ಸಿನ ಹಿಂದೆಯೂ ‘ರಾಜಿ’ಯ ಗಂಡುಹುನ್ನಾರ ಇರಬಹುದು. ‘ರಾಜಿ’ ಮನೋಭಾವದಿಂದ ಹೊರಬಾರದೆ ಹೋದರೆ ಲಿಂಗಸಮಾನತೆಯ ಪ್ರಯತ್ನಗಳು ಪೂರ್ಣಗೊಳ್ಳುವುದಿಲ್ಲ.

ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕಾದ ಮೌನಿಯೆಂದೇ ಮಹಿಳೆಯನ್ನು ಭಾವಿಸುತ್ತಾ ಬಂದಿದ್ದೇವೆ. ಈ ರಾಜಿ ಅವಳ ಆಯ್ಕೆಯಲ್ಲದಿದ್ದರೂ, ಅವಳು ಸಾಮಾಜಿಕ ನಿರೀಕ್ಷೆಗಳ ಚೌಕಟ್ಟಿನೊಳಗೆ ಹೊಂದಿಕೊಂಡು ಬದುಕಬೇಕು ಎನ್ನುವುದು ಸಮಾಜದ ನಿರೀಕ್ಷೆ. ಪುರುಷನಂತೆ ಸಹಜವಾಗಿ ಬದುಕುವ ಹಕ್ಕು ತನಗಿದೆ ಎನ್ನುವುದನ್ನು ನಿರೂಪಿಸಬೇಕಾದರೆ, ಅವಳು ತನ್ನ ಪಾತ್ರವನ್ನು ಧೈರ್ಯದಿಂದ ಪುನರ್ ರಚಿಸಬೇಕಾಗಿದೆ.

ಮೂಲತಃ ಯಾವುದೇ ಅಧಿಕಾರವು ಎಂದೂ ತಟಸ್ಥವಾಗಿರುವುದಿಲ್ಲ ಮತ್ತು ಎಲ್ಲರನ್ನು ಒಳ ಗೊಳ್ಳುವುದಿಲ್ಲ. ಇಲ್ಲಿಯವರೆಗೂ ಸಮಾಜದ ಮೇಲ್ವರ್ಗದ ಒಂದು ಸಣ್ಣ ಜನಸಮೂಹ– ಭೂಮಿ, ಜ್ಞಾನ, ಸಂಪತ್ತು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುತ್ತಾ ಬಂದಿದೆ. ಮಹಿಳೆಯರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಶಿಕ್ಷಣ ಮತ್ತು ಅಧಿಕಾರದ ಪ್ರವೇಶವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ, ಅವರನ್ನು ಗುಲಾಮಗಿರಿಯಲ್ಲಿ ಬಂಧಿಸಿ ಸೇವೆಗಳನ್ನು ಮಾಡಿಸಿಕೊಳ್ಳುತ್ತಾ ಬರಲಾಗಿದೆ. ಈ ಹೊರಗಿಡುವ ಕಾರ್ಯತಂತ್ರವೇ ಸಮಾಜವನ್ನು ರೂಪಿಸುತ್ತಾ ಬಂದಿದೆ. ಮನುಷ್ಯನ ಸ್ವಜಾಗೃತಿಯು ಪ್ರಶ್ನಿಸುವ ಗುಣವನ್ನು ಉತ್ಪಾದಿಸುವುದರಿಂದ, ಪ್ರಶ್ನಿಸುವುದು ಸಾಮಾಜಿಕ ಶ್ರೇಣಿಯನ್ನು ಅಸ್ಥಿರ ಗೊಳಿಸುತ್ತದೆ. ಹಾಗಾಗಿ, ಸ್ವ–ಅರಿವುಳ್ಳ ಮಹಿಳೆಯನ್ನು ಸುಲಭವಾಗಿ ನಿಯಂತ್ರಿಸಲಾಗುವುದಿಲ್ಲ. ಅಂತಹವರ ಸಾಹಸದ ಬದುಕನ್ನು ಸಮಾಜ ಮೆಚ್ಚುವ ಬದಲು ಸಂಶಯದಿಂದ ನೋಡುತ್ತದೆ.

ಮಹಿಳೆಗೆ ಸಾಕ್ಷರತೆ ಅನಗತ್ಯ, ಗಂಡಿನ ಅಡಿಯಾಳಾಗಿ ಸಂಸಾರ ನಿರ್ವಹಣೆ ಮಾಡುವುದರ ಲ್ಲಿಯೇ ಅವಳ ಬದುಕಿನ ದಾರಿಯಿದೆ ಎಂದು ನಂಬಿದ್ದ ಕಾಲದಲ್ಲಿ, ಸಾವಿತ್ರಿಬಾಯಿ ಫುಲೆಯಂತಹ ಅರಿವು ಕಂಡುಕೊಂಡ ಮಹಿಳೆಯರು ಈ ಸಮಾಜವನ್ನು ಪ್ರಶ್ನಿಸಿದರು. ಅಂಬೇಡ್ಕರ್, ಶಿಕ್ಷಣವನ್ನು ಮಹಿಳಾ ವಿಮೋಚನೆಯ ಮೊದಲ ಹೆಜ್ಜೆ ಎಂದು ಘೋಷಿಸಿ ದರು. ‘ಶಿಕ್ಷಣ, ಚಳವಳಿ, ಸಂಘಟನೆ’ ಎಂಬ ಅವರ ಕರೆ ದಲಿತರಂತೆ ಮಹಿಳೆಗೂ ಅನ್ವಯಿಸುತ್ತದೆ. ಈ ಸಂದೇಶವು ಸ್ಪಷ್ಟಪಡಿಸುವುದೇನೆಂದರೆ, ಮಹಿಳೆಯ ಸ್ವ–ಅರಿವು ಅಧಿಕಾರ ಕೇಂದ್ರಗಳಿಗೆ ಅಡ್ಡಿಯಾಗುತ್ತದೆ.

ಇಂದು ಮಹಿಳೆಯರಿಗೆ ಅಡೆತಡೆಗಳು ಕಡಿಮೆ ಯಾಗಿರಬಹುದು. ವಿಸ್ಮಯವೆಂದರೆ, ಪುರುಷ ಕೇಂದ್ರಿತ ಅಧಿಕಾರ ವ್ಯವಸ್ಥೆಗಳು ಮಹಿಳೆಯ ಅರಿವಿಗೆ ಬಾರದಂತೆ ತಮ್ಮನ್ನು ತಾವು ಆಧುನೀಕರಿಸಿಕೊಂಡಿದೆ. ಪರಿಣಾಮವಾಗಿ, ಮಹಿಳೆ ಇಂದು ವಿದ್ಯಾವಂತ ಳಾದರೂ, ವೈಯಕ್ತಿಕ ಮಹತ್ವಾಕಾಂಕ್ಷೆ ಹೊಂದದೆ ಸಾಂಪ್ರದಾಯಿಕ ಪಾತ್ರಗಳಲ್ಲೇ ನೆಮ್ಮದಿ ಕಂಡು ಕೊಳ್ಳಲು ಬಯಸುತ್ತಾಳೆ. ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಸುಸೂತ್ರವಾಗಿ ಮುಂದುವರಿಸಲು, ಮಹಿಳೆಯ ಈ ಮನೋಭಾವ ಪೂರಕ.

ಇಂದಿಗೂ, ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಮಹಿಳೆ ಹೋರಾಡಬೇಕಾಗುತ್ತದೆ. ಕೆಲಸದ ಸ್ಥಳದಲ್ಲಿ ತನ್ನ ಕಾರ್ಯತತ್ಪರತೆಯಿಂದ ಯಶಸ್ಸನ್ನು ಪಡೆಯಲು ಹೊರಟರೆ ಅವಳಿಗೆ ಅಡ್ಡಿಗಳು ಎದುರಾಗುತ್ತವೆ. ಇದು ಎಲ್ಲಾ ವಲಯಗಳಲ್ಲೂ ಕಾಣುವ ಸಾಮಾನ್ಯ ದೃಶ್ಯ. ತನ್ನ ಹೆಂಡತಿ ಮನೆಯೊಳಗೇ ಬಂದಿಯಾಗಿ ನಿಯಂತ್ರಣದಲ್ಲಿರಲಿ ಎಂದು ಆಶಿಸುವ ಪುರುಷನೇ, ತನ್ನೊಂದಿಗೆ ಕೆಲಸ ಮಾಡುವ ಮಹಿಳೆ ತನ್ನ ಗುಪ್ತ ಬಯಕೆಗಳಿಗೆ ಸಿಗಲಿ ಎನ್ನುವ ನಿರೀಕ್ಷೆ ಹೊಂದಿರುವುದನ್ನು, ಸಿಗದಿದ್ದಾಗ ಅವಳಿಗೆ ತೊಂದರೆ ಕೊಡುವು ದನ್ನು ನಾವು ನೋಡಿದ್ದೇವೆ. ಇಷ್ಟವಿದ್ದೋ, ಇಲ್ಲದೆಯೋ, ಪುರುಷನೊಂದಿಗೆ ರಾಜಿ ಮಾಡಿ ಕೊಳ್ಳುವ ಮಹಿಳೆಯರು ಬೇಗನೆ ತಮ್ಮ ಕ್ಷೇತ್ರದಲ್ಲಿ ಯಶಸ್ಸುಗಳಿಸುತ್ತಾರೆ. ಪರಿಣಾಮವಾಗಿ, ವೈಯಕ್ತಿಕ ಅರ್ಹತೆಯ ಆಧಾರದಲ್ಲಿ ಯಶಸ್ಸು ಗಳಿಸಲು ಹೆಣಗಾಡುವ ಮಹಿಳೆಯರು ಹಿಂದೆಯೇ ಉಳಿದು ಬಿಡುತ್ತಾರೆ. ಇದರಿಂದಾಗಿ, ಮಹಿಳೆಯ ಯಶಸ್ಸು ಅವಳ ಅರ್ಹತೆಯಿಂದಲ್ಲ, ಅವಳು ಅಧಿಕಾರ ದಲ್ಲಿರುವ ಪುರುಷನಿಗೆ ಎಷ್ಟು ಸಮೀಪವಾಗಿದ್ದಾಳೆ ಎನ್ನುವುದರಿಂದ ನಿರ್ಧಾರವಾಗುತ್ತದೆ ಎನ್ನುವ ತಪ್ಪು ಸಂದೇಶ ಸಿಗುತ್ತಿದೆ.

ಕೆಲಸದ ಸ್ಥಳಗಳಲ್ಲಿ ಮಹಿಳೆ ಮಾಡಿ ಕೊಳ್ಳಬೇಕಾದ ರಾಜಿಯನ್ನು ‘ಕಾಸ್ಟಿಂಗ್ ಕೌಚ್’ ಎಂದು ಸಾಮಾನ್ಯವಾಗಿ ಗುರ್ತಿಸಲಾಗಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರೂ, ಪುರುಷ ಕೇಂದ್ರಿತವಾಗಿರುವ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಈ ವ್ಯವಹಾರ ಅಸ್ತಿತ್ವದಲ್ಲಿದೆ. ಈ ಸಮಸ್ಯೆ ಶೋಷಣೆಗಿಂತ ಆಳವಾದದ್ದು. ಇಲ್ಲಿನ ಅಪಾಯವೆಂದರೆ, ಕೆಲವು ಮಹಿಳೆಯರು ಮಾಡಿಕೊಳ್ಳುವ ರಾಜಿಯಿಂದಾಗಿ ಎಲ್ಲಾ ಮಹಿಳೆಯರ ಯಶಸ್ಸನ್ನು ಸಂಶಯದಿಂದ ನೋಡುವಂತಹ ಪರಿಸ್ಥಿತಿ ಉಂಟಾಗುವುದು. ವಿರೋಧಾಭಾಸವೆಂದರೆ, ಪುರುಷ ಶಕ್ತಿಕೇಂದ್ರಗಳೊಂದಿಗೆ ಹೊಂದಿಕೊಳ್ಳುವ ಮಹಿಳೆಯರನ್ನು ‘ಸಾಧಕರು’ ಎಂದು ಸಂಭ್ರಮಿಸಲಾಗುತ್ತದೆ. ಆದರೆ, ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಇರುವವರನ್ನು ಮೂಲೆಗುಂಪಾಗಿಸ ಲಾಗುತ್ತದೆ. ಅಧಿಕಾರದ ಸಾಮೀಪ್ಯವನ್ನು ‘ಅರ್ಹತೆ’ ಎಂದು ತಪ್ಪಾಗಿ ಗ್ರಹಿಸಿದಾಗ, ನಿಜವಾದ ಸಾಧನೆ ಅದೃಶ್ಯವಾಗುತ್ತದೆ. ಆದ್ದರಿಂದ ಮಹಿಳೆ ತಾನು ಮಾಡಿಕೊಳ್ಳುವ ರಾಜಿಯ ಕುರಿತಾದ ಮೌನ ಮುರಿಯುವ ಕಾಲ ಪ್ರಸ್ತುತ ಬಂದಿದೆಯೆನ್ನಬಹುದು.

ಸ್ವಗೌರವವನ್ನು ಪ್ರತಿಪಾದಿಸುವ, ಅಥವಾ ಪುರುಷನ ಅನೈತಿಕತೆಯನ್ನು ಪ್ರಶ್ನಿಸುವ ಮಹಿಳೆಗೆ ‘ಅಸಹಕಾರ ಪ್ರವೃತ್ತಿಯವರು’ ಎಂದು ಹಣೆಪಟ್ಟಿ ಹಚ್ಚಲಾಗುತ್ತದೆ. ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ತೊಂದರೆಗೊಳಿಸದವರನ್ನು ‘ಯಶಸ್ವಿ’ ಮಹಿಳೆಯರೆಂದು ಸಂಭ್ರಮಿಸಲಾಗುತ್ತದೆ. ಈ ವಿದ್ಯಮಾನವು ಮಹಿಳೆಗೆ ಅಪಾಯಕಾರಿ ಸಂದೇಶ ಕಳುಹಿಸುತ್ತದೆ: ಅವಳ ರಾಜಿ ಪ್ರತಿಫಲಗಳನ್ನು ತರುತ್ತದೆ; ಸ್ವಾವಲಂಬಿ ಹೋರಾಟ ಅವಳನ್ನು ಪ್ರತ್ಯೇಕಗೊಳಿಸುತ್ತದೆ. ಇಂತಹ ಪ್ರವೃತ್ತಿ ಮಹಿಳಾ ಸಬಲೀಕರಣದ ಆಶಯಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅವಳು ಸಾಮಾನ್ಯ ಳಾಗಿಯೇ ಉಳಿಯುತ್ತಾಳೆ. ಅಂದರೆ, ಅವಳ ಧೈರ್ಯಕ್ಕಿಂತ ಮೌನಕ್ಕೆ ಪ್ರತಿಫಲ ಸಿಕ್ಕಾಗ, ಅವಳ ಶೋಷಣೆ ಹಾಗೆಯೇ ಉಳಿಯುತ್ತದೆ. ಅವಳ ಗೋಚರತೆಯು ಪುರುಷನ ಪೋಷಕತ್ವ ವನ್ನು ಅವಲಂಬಿಸಿದಾಗ, ಅವಳ ಯಶಸ್ಸು ಟೊಳ್ಳಾಗಿರುತ್ತದೆ.

ಇಲ್ಲಿನ ಪ್ರಶ್ನೆ, ಮಹಿಳೆ ತನ್ನ ಸ್ವಾವಲಂಬನೆಯಿಂದ ಪಡೆಯುವ ಯಶಸ್ಸು, ಪುರುಷ ಕೇಂದ್ರಿತ ವ್ಯವಸ್ಥೆಯನ್ನು ಏಕೆ ಅತಂತ್ರಗೊಳಿಸುತ್ತದೆ? ಏಕೆಂದರೆ, ತನ್ನ ಸಾಮರ್ಥ್ಯದಿಂದ ಯಶಸ್ವಿಯಾಗುವ ಮಹಿಳೆ, ತನ್ನ ಯಶಸ್ಸಿಗೆ ಪುರುಷನ ದೃಢೀಕರಣ ಅಗತ್ಯ ಎಂಬ ಹುಸಿಪುರಾಣವನ್ನು ಒಡೆಯುತ್ತಾಳೆ. ಇದಕ್ಕಾಗಿಯೇ, ಮಹಿಳೆ ತನ್ನ ದೇಹವನ್ನು ಪೋಷಿಸಲಿ, ಬುದ್ಧಿಯನ್ನಲ್ಲ ಎಂದು ಪುರುಷ ಸಮಾಜ ಆಶಿಸುತ್ತದೆ. ಇದಕ್ಕೆ ತಕ್ಕಂತೆ, ತನ್ನ ದೇಹ ಸೌಂದರ್ಯದಲ್ಲಿ ಸಮಯ ಕಳೆಯುವ ಮಹಿಳೆ ಮತ್ತು ಜ್ಞಾನಾರ್ಜನೆಯಲ್ಲಿ ತನ್ನೆಲ್ಲಾ ಸಮಯ ಕಳೆಯುವ ಪುರುಷ, ಸಮಾನವಾಗಿ ಸ್ಪರ್ಧೆಗಿಳಿಯಲು ಸಾಧ್ಯವೆ? ಜ್ಞಾನ ಗಳಿಸಲು ಪುರುಷನನ್ನು ಹೆಣ್ಣು ಅವಲಂಬಿಸುವುದು ಅನಿವಾರ್ಯವೆನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದನ್ನು ಮುರಿಯುವ ಹೆಣ್ಣು, ಅಂದರೆ ಜ್ಞಾನಾರ್ಜನೆಯಲ್ಲಿ, ಕೌಶಲ ತರಬೇತಿಯಲ್ಲಿ ಸಮಯ ಕಳೆಯುವ ಮಹಿಳೆ, ಪುರುಷನ ಈ ‘ಗೇಟ್ ಕೀಪಿಂಗ್’ ಕೃತಕ ಎಂದು ಸಾಬೀತುಪಡಿಸುತ್ತಾಳೆ.

ಅಸಹನೀಯ ಮೌನವನ್ನು ಮುರಿದ ಮಹಿಳೆ ಯರು ಪ್ರಾರಂಭಿಸಿದ ‘ಮೀ–ಟೂ’ ಅಂತಹ ಚಳವಳಿ ಗಳು ಪುರುಷ ಕೇಂದ್ರಿತ ಅಧಿಕಾರದ ವ್ಯಾಪಕ ದುರುಪಯೋಗವನ್ನು ಬಹಿರಂಗಪಡಿಸಿದವು. ಹೆಣ್ಣಿನ ಮೌನವು ಅಪರಾಧಿಗಳನ್ನು ರಕ್ಷಿಸುತ್ತದೆ ಎಂದು ಶೋಷಿತ ಮಹಿಳೆಯರು ಸಾಬೀತುಪಡಿಸಿದರು. ಆದರೆ, ಬಹಿರಂಗಪಡಿಸುವುದರಿಂದ ಮಾತ್ರ ಅಸಮಾನತೆ ಕೆಡವಲು ಸಾಧ್ಯವಿಲ್ಲ. ನಮಗೆ ಅಗತ್ಯ ವಿರುವುದು ಆಳವಾದ ಸಾಂಸ್ಕೃತಿಕ ಬದಲಾವಣೆ. ಮಹಿಳೆಗೆ ಸಬಲೀಕರಣವನ್ನು ಉಡುಗೊರೆಯಾಗಿ ನೀಡಲಾಗದು. ಅದಕ್ಕೆ ಅವಳೇ ಶ್ರಮಿಸಬೇಕು.

ನಿಜವಾದ ಸಬಲೀಕರಣವು ಅರಿವಿನೊಂದಿಗೆ ಪ್ರಾರಂಭವಾಗುತ್ತದೆ. ಹಕ್ಕುಗಳ ಅರಿವು, ವ್ಯವಸ್ಥಿತ ಪಕ್ಷಪಾತ, ಆರ್ಥಿಕ ರಚನೆಗಳು ಮತ್ತು ಒಬ್ಬರ ಸ್ವಂತ ಸಾಮರ್ಥ್ಯದ ಅರಿವು. ಆರ್ಥಿಕವಾಗಿ ಗಳಿಸುವ, ಆದರೆ ವ್ಯವಸ್ಥೆಯನ್ನು ಪ್ರಶ್ನಿಸಲು ಸಾಧ್ಯವಾಗದ ಮಹಿಳೆ ಸಂಪೂರ್ಣವಾಗಿ ಸ್ವತಂತ್ರಳಲ್ಲ. ಸಾರ್ವಜನಿಕವಾಗಿ ಭಾಗವಹಿಸುವ, ಆದರೆ ಸ್ವಂತವಾಗಿ ನಿರ್ಧರಿಸಲು ಸಾಧ್ಯವಾಗದ ಮಹಿಳೆ ಸಬಲಳಲ್ಲ.

ಮಹಿಳೆಯರ ಬಗೆಗಿನ ಸಾಮಾಜಿಕ ನಿರೀಕ್ಷೆಗಳನ್ನು ಮರು ವ್ಯಾಖ್ಯಾನಿಸಬೇಕಾಗಿದೆ ಎಂದು ನಾವು ನಿಜವಾಗಿಯೂ ನಂಬಿದರೆ, ಈ ಮರುವ್ಯಾಖ್ಯಾನವು ಆದಷ್ಟು ಬೇಗನೆ, ಅವರ ಪ್ರೌಢಾವಸ್ಥೆಯಲ್ಲಿಯೇ ಪ್ರಾರಂಭವಾಗಬೇಕಾಗಿದೆ. ನಾವು ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ಎಲ್ಲದಕ್ಕೂ ಹೊಂದಿಕೊಳ್ಳಲು ತರಬೇತಿ ನೀಡುತ್ತೇವೆ. ಕೌಟುಂಬಿಕ ಜವಾಬ್ದಾರಿ ಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೆ ಹೋದಾಗ, ಪಾಪಪ್ರಜ್ಞೆ ಕಾಡದೆ ಇರುವ ಮಹಿಳೆಯರನ್ನು ನಾವು ಕಾಣುವುದು ಬಹಳ ಅಪರೂಪ. ಈ ಮಾನಸಿಕ ಕಂಡೀಷನಿಂಗ್ ಅನ್ನು ಪ್ರಜ್ಞಾಪೂರ್ವಕವಾಗಿ ಬದಲಾಯಿಸಬೇಕಾಗಿದೆ.

ನಾವು ಮಹಿಳೆಯರಿಗೆ ಬಳಸುವ ಭಾಷೆ ಬದಲಾಗಬೇಕಾಗಿದೆ. ಅವಳ ತ್ಯಾಗ ವೈಭವೀಕರಿಸುವ ಬದಲು, ಸ್ವಾಭಿಮಾನದ ಕುರಿತು ಮಾತನಾಡಬೇಕಿದೆ. ಅವಳ ನಮ್ರತೆಯನ್ನು ಸದ್ಗುಣವೆಂದು ಸಮೀಕರಿಸುವ ಬದಲು, ಅವಳ ಮಹತ್ವಾಕಾಂಕ್ಷೆಯನ್ನು ಮೆಚ್ಚಬೇಕಾ ಗಿದೆ. ನಮ್ಮ ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರು ವುದು: ಸಾಂವಿಧಾನಿಕ ಹಕ್ಕುಗಳ ಅರಿವು, ಆರ್ಥಿಕ ಸಾಕ್ಷರತೆ, ಮತ್ತು ಕೆಲಸದ ಸ್ಥಳದಲ್ಲಿನ ನೈತಿಕತೆ. ಹೆಣ್ಣಿನ ಆರ್ಥಿಕ ಸ್ವಾತಂತ್ರ್ಯವೆಂದರೆ ಅದು ಸಂಬಳ ಮಾತ್ರವಲ್ಲ, ಮಾನಸಿಕ ಸ್ವಾತಂತ್ರ್ಯ ಕೂಡ.

ಮಹಿಳೆಯರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು, ನಿರ್ಭಯವಾಗಿ ಮಾತನಾಡುವುದನ್ನು ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವು ದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ. ಸಮಾಜ ದಲ್ಲಿರುವ ಅಸಮಾನತೆಗಳು ಸಹಾನುಭೂತಿಯಿಂದ ಕರಗುವುದಿಲ್ಲ; ಧೈರ್ಯವಾಗಿ ಎದುರಿಸಿದಾಗ ಹಿಮ್ಮೆಟ್ಟುತ್ತವೆ. ಪುರುಷ ಕೇಂದ್ರಿತ ಅಧಿಕಾರದ ಸಾಮೀಪ್ಯದಿಂದಾಗಿ ಸಿಗುವ ಸೌಲಭ್ಯಗಳು, ಪ್ರಶಸ್ತಿ ಪದೋನ್ನತಿಗಳು, ಪದವಿಗಳು ನಮಗೆ ಅಗತ್ಯವಿಲ್ಲ. ನಮ್ಮ ಸಾಮರ್ಥ್ಯಕ್ಕೆ ಸಮನಾದ ಮಾನ್ಯತೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.