ವಿರೋಧ ಪಕ್ಷಗಳಿಗೆ ಇದು ಆತ್ಮಾವಲೋಕನದ ಕ್ಷಣ; ಕೆಲವು ಕಹಿ ಸತ್ಯಗಳನ್ನು ಎದುರಿಸಬೇಕಾದ ಕ್ಷಣ ಮತ್ತು ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಕ್ಷಣ.

ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ಉತ್ತಮ ಫಲಿತಾಂಶವು ತೆರೆದಿದ್ದ ಅವಕಾಶಗಳ ಬಾಗಿಲು ಆಗಿನಿಂದ ಕುಗ್ಗುತ್ತಲೇ ಬಂದಿದ್ದು, ಈಗ ಸಂಪೂರ್ಣವಾಗಿ ಮುಚ್ಚಿಹೋಗಿದೆ ಎಂಬುದರಲ್ಲಿ ಸಂದೇಹ ಬೇಡ. ಸಂಪೂರ್ಣ ಅಧಿಕಾರವನ್ನು ವಶಪಡಿಸಿಕೊಳ್ಳುವ ಬಿಜೆಪಿಯ ತುಡಿತವು ಪಶ್ಚಿಮ ಬಂಗಾಳದ ಗೆಲುವಿನೊಂದಿಗೆ ಮತ್ತೊಂದು ಹಂತ ಮುಂದಕ್ಕೆ ಸಾಗಿದೆ. ಸಮಕಾಲೀನ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಅಳಿದುಳಿದ ನಿಷ್ಠೆ ಕೂಡ ಈಗ ಇನ್ನೊಂದು ಹಂತಕ್ಕೆ ಹಿಂದಕ್ಕೆ ಸರಿ ದಿದೆ. ವಿರೋಧ ಪಕ್ಷಗಳು ತಮ್ಮ ರಾಜಕಾರಣವನ್ನು ಪುನರ್ರೂಪಿಸಿ, ಕಾರ್ಯತಂತ್ರವನ್ನು ಪರಿಷ್ಕರಿಸಿ, ಚುನಾವಣಾ ಯಂತ್ರವನ್ನು ಪುನಶ್ಚೇತನ ಗೊಳಿಸದೇ ಇದ್ದರೆ ಪ್ರಜಾಸತ್ತಾತ್ಮಕ ಸ್ಪರ್ಧೆಯು ಸತ್ತೇ ಹೋಗಲಿದೆ. ಚುನಾವಣಾ ಕಣವನ್ನು ಮರು ಸಮತೋಲನಗೊಳಿಸಲು ಮತ್ತು ನ್ಯಾಯಸಮ್ಮತ ಸ್ಥಿತಿ ಕಾಣಿಸುವಂತೆ ಮಾಡಲು ಯಾರಾದರೂ ಪ್ರಯತ್ನ ಮಾಡದೇ ಇದ್ದರೆ, ಜನರ ಇಚ್ಛೆಯ ಪ್ರತಿಪಾದನೆಯೇ ಚುನಾವಣೆ ಎಂಬುದು ಇಲ್ಲವಾಗಲಿದೆ. ಇದು ವಿರೋಧ ಪಕ್ಷಗಳಿಗೆ ಮಾತ್ರವಲ್ಲ, ಆಡಳಿತಾರೂಢರಿಗೂ ಕೆಟ್ಟ ಸುದ್ದಿಯೇ ಆಗಿದೆ.

ಕೇರಳಂ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಈ ಹಸಿ ವಾಸ್ತವದಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯದಿರಲಿ. ಕೇರಳಂನಲ್ಲಿ ಪರ್ಯಾಯವಾಗಿ ನಡೆಸುತ್ತಿದ್ದ ಆಡಳಿತ ವ್ಯವಸ್ಥೆಯು ಈ ಬಾರಿ ಸ್ವಲ್ಪ ತಡವಾಗಿ ಅನುಷ್ಠಾನಕ್ಕೆ ಬಂದಿದೆ ಅಷ್ಟೇ. ಆಡಳಿತ ಪಕ್ಷವನ್ನು ಬದಲಿಸುವ ವಾಡಿಕೆಯ ಇಚ್ಛೆ ಮತ್ತು ‘ಎಲ್ಡಿಎಫ್’ ಸರ್ಕಾರದ ವಿರುದ್ಧ ಇದ್ದ ಅತೃಪ್ತಿಯಿಂದಾಗಿ ಇಂತಹ ಫಲಿತಾಂಶ ಬಂದಿದೆ. ಸಹಜವಾಗಿಯೇ ‘ಯುಡಿಎಫ್’ ಇದರ ಫಲಾನುಭವಿ ಮತ್ತು ಅಧಿಕಾರ ಬದಲಾವಣೆಯು ಒಂದು ಅವಧಿ ತಡವಾಗಿರುವುದು ಗೆಲುವಿನ ಅಂತರ ದೊಡ್ಡದಾಗಲು ಕಾರಣ. ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿಲ್ಲ ಎಂಬ ಸಮಾಧಾನವು ಆಡಳಿತ ಪಕ್ಷವು ಹೊಂದಿರುವ ಅಪಾರ ಬಲದ ಮುಂದೆ ತಾತ್ಕಾಲಿಕ ಎನಿಸಿಬಿಡುತ್ತದೆ. ಅಲ್ಪಸಂಖ್ಯಾತರ ಮತಗಳ ಮೇಲಿನ ‘ಯುಡಿಎಫ್’ ಅವಲಂಬನೆಯು ದೀರ್ಘಾವಧಿಯಲ್ಲಿ ಸಮಸ್ಯೆಗೆ ಕಾರಣವಾಗಬಹುದು.

ತಮಿಳುನಾಡಿನಲ್ಲಿ ವಿಜಯ್ ಅವರ ‘ಟಿವಿಕೆ’ಯ ಸಿನಿಮೀಯ ಯಶಸ್ಸು ಸ್ಫೂರ್ತಿದಾಯಕವಾದರೂ ಎಲ್ಲೆಡೆ ಅದನ್ನು ಅನುಕರಿಸಲು ಸಾಧ್ಯವಿಲ್ಲ. ಡಿಎಂಕೆಯ ಪ್ರಾಬಲ್ಯ, ಜೊತೆಗಿದ್ದ ದುರಹಂಕಾರ ಮತ್ತು ತಮ್ಮನ್ನು ಸೋಲಿಸಲಾಗದು ಎಂಬ ಮನಃಸ್ಥಿತಿಯಿಂದಾಗಿ ಜನರು ಪರ್ಯಾಯದತ್ತ ನೋಡುವಂತೆ ಮಾಡಿತು. ಸದಾ ಕುಸಿಯುತ್ತಲೇ ಇರುವ ಮತ್ತು ಪುನರ್ ರೂಪುಗೊಂಡ ‘ಎಐಎಡಿಎಂಕೆ’ ಪರ್ಯಾಯವಾಗುವ ಶಕ್ತಿ ಹೊಂದಿಲ್ಲ; ಜೊತೆಗೆ ರಾಜ್ಯದ ರಾಜಕೀಯ ಸಂಸ್ಕೃತಿಗೆ ಒಗ್ಗದ ಬಿಜೆಪಿಯ ಅಧೀನದಲ್ಲಿ ‘ಎಐಎಡಿಎಂಕೆ’ ಇದೆ ಎಂಬ ಭಾವನೆಯೂ ಇದೆ. ಈ ಶೂನ್ಯವನ್ನು ತುಂಬಲು ದ್ರಾವಿಡ ಸಿದ್ಧಾಂತವನ್ನು ಹೊಂದಿರುವ ಆದರೆ, ‘ಡಿಎಂಕೆ’ ರಾಜಕೀಯ ಮಾದರಿಗಿಂತ ಭಿನ್ನವಾದ ವ್ಯಕ್ತಿಯೊಬ್ಬರು ಬೇಕಿದ್ದರು. ತಾಜಾ ಪರ್ಯಾಯವೊಂದನ್ನು ನೀಡಿದ್ದ ಎಂಜಿಆರ್ ಮಾದರಿ ಜನರ ಮುಂದೆ ಇತ್ತು. ಡಿಎಂಕೆ ‘ರಾಜಕೀಯ ಪ್ರತಿಸ್ಪರ್ಧಿ’ ಮತ್ತು ಬಿಜೆಪಿ ‘ಸೈದ್ಧಾಂತಿಕ ವೈರಿ’ ಹಾಗೂ ತಾವು ಪೆರಿಯಾರ್, ಕಾಮರಾಜ್ ಮತ್ತು ಅಂಬೇಡ್ಕರ್ ಅನುಯಾಯಿ ಎಂದು ವಿಜಯ್ ಘೋಷಿಸಿಕೊಂಡಿದ್ದರು ಎಂಬುದೂ ಗಮನಾರ್ಹ. ರಾಜ್ಯದಲ್ಲಿ ಇಂತಹ ಸಂಯೋಜನೆ ವಿಶಿಷ್ಟವಾಗಿತ್ತು.

ಅಸ್ಸಾಂನಲ್ಲಿ ವಿರೋಧ ಪಕ್ಷಗಳು ಯಾವುದೇ ನೆಪದ ಹಿಂದೆ ಅಡಗಿಕೊಳ್ಳಲು ಬಿಡಬಾರದು. ಭಾರತದ ಚುನಾವಣಾ ಇತಿಹಾಸದಲ್ಲಿಯೇ ಹಿಂದೆಂದೂ ಇಲ್ಲದ ರೀತಿಯುಲ್ಲಿ ಕೋಮು ದೃಷ್ಟಿಕೋನದಲ್ಲಿ ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಕ್ಷೇತ್ರಗಳ ಗಡಿ ಬದಲಾಯಿಸಲು ಚುನಾವಣಾ ಆಯೋಗವನ್ನು ಆ ಪಕ್ಷವು ಬಳಸಿಕೊಂಡಿತು ಎಂಬುದು ನಿಜ. ಮತದಾನಕ್ಕೂ ಮೊದಲೇ ಬಿಜೆಪಿ ತನಗೆ 10 ಸ್ಥಾನಗಳನ್ನು ಕೊಟ್ಟುಕೊಂಡಿತ್ತು. ಅಸ್ಸಾಂ ಮುಖ್ಯಮಂತ್ರಿಯು ‘ಮಿಯಾ’ ಸಮುದಾಯದ ವಿರುದ್ಧ ಕೋಮುದ್ವೇಷದ ಹೇಳಿಕೆಗಳನ್ನು ನಿರ್ಲಜ್ಜವಾಗಿ ನೀಡುತ್ತಲೇ ಬಂದರು. ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಮೂಕಪ್ರೇಕ್ಷಕವಾಗಿದ್ದವು. ಹೀಗೆಲ್ಲ ಇದ್ದರೂ ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಎದುರಿಸುವ ಛಾತಿ ತೋರಿಸಿಲ್ಲ ಎಂಬುದೂ ನಿಜ.

ಬಿಜೆಪಿ ಸರ್ಕಾರ ಮತ್ತು ವಿಶೇಷವಾಗಿ ಮುಖ್ಯಮಂತ್ರಿಯ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು. ಜುಬಿನ್ ಗರ್ಗ್ ಸಾವು ಸರ್ಕಾರದ ವಿರುದ್ಧದ ತುಂಬು ಭಾವನಾತ್ಮಕ ವಿಚಾರವಾಗಿತ್ತು. ಇವೆಲ್ಲವನ್ನೂ ಸರ್ಕಾರದ ವಿರುದ್ಧ ಬಳಸಿಕೊಳ್ಳುವಲ್ಲಿ ವಿರೋಧ ಪಕ್ಷಗಳು ವಿಫಲವಾದವು. ಚುನಾವಣೆಯನ್ನು ಹೇಗೆ ಸೋಲಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿನ ವಿರೋಧ ಪಕ್ಷವು ಇಂತಹ ದೌರ್ಬಲ್ಯಗಳನ್ನು ತೋರಲಿಲ್ಲ. ಬಿಜೆಪಿ ನಿರಾಯಾಸವಾಗಿ ಗೆಲ್ಲಲು ಮಮತಾ ಬ್ಯಾನರ್ಜಿ ಅವಕಾಶ ಕೊಟ್ಟರು ಎಂದು ಯಾರೂ ಆರೋಪಿಸುವಂತಿಲ್ಲ. ಅವರಲ್ಲಿ ಕಾರ್ಯತಂತ್ರ, ಚೈತನ್ಯ ಮತ್ತು ಬಿಜೆಪಿಯನ್ನು ಎದುರಿಸುವ ಗಟ್ಟಿ ವ್ಯವಸ್ಥೆ ಇದ್ದವು. ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇರಲಿಲ್ಲ. ಎಡಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಮತಾ ಅವರಿಗೆ ಅನುಕೂಲವಾಯಿತು. ಕಾಂಗ್ರೆಸ್ನಿಂದ ಟಿಎಂಸಿಗೆ ಆದ ಹಾನಿ ಸ್ವಲ್ಪ ಮಾತ್ರ. ಪಶ್ಚಿಮ ಬಂಗಾಳವು ವಿರೋಧ ಪಕ್ಷಗಳಿಗೆ ಅಧ್ಯಯನಯೋಗ್ಯ ಪ್ರಕರಣ. ವಿರೋಧ ಪಕ್ಷಗಳ ಪ್ರತಿಯೊಬ್ಬ ನಾಯಕನೂ ಆತಂಕದಿಂದಲೇ ಗಮನಿಸಿದ ರಾಜ್ಯವೂ ಇದು ಹೌದು.

ಸುತ್ತು ಬಳಸು ಬೇಡ: ಗಣನೀಯವಾದ ‘ಆಡಳಿತ ವಿರೋಧಿ ಅಲೆ’, ಸರ್ಕಾರದ ಕುರಿತು ಜನರಲ್ಲಿ ಗುಪ್ತಗಾಮಿನಿಯಂತೆ ಅತೃಪ್ತಿ ಮತ್ತು ಆಕ್ರೋಶ ಇಲ್ಲದಿದ್ದರೆ ಈ ಮಟ್ಟದ ಚುನಾವಣಾ ಫಲಿತಾಂಶ ಬರಲು ಸಾಧ್ಯವಿಲ್ಲ. ಇವೆಲ್ಲವನ್ನು ಈವರೆಗೆ ನಿರ್ಲಕ್ಷಿಸಲಾಗಿತ್ತು. ಮಮತಾ ಅವರ ಮೇಲೆಯೇ ಜನರಿಗೆ ಆಕ್ರೋಶ ಇತ್ತು ಎಂದಲ್ಲ; ಸ್ಥಳೀಯ ನಾಯಕರು ಮತ್ತು ಆಡಳಿತದ ಗುಣಮಟ್ಟದ ಕುರಿತು ಜನರಲ್ಲಿ ಅಸಮಾಧಾನ ಇತ್ತು. ಬೇರೆ ರಾಜ್ಯಗಳಲ್ಲಿ ಇದೇ ರೀತಿಯ ಅಥವಾ ಅದಕ್ಕಿಂತ ಕೆಟ್ಟದಾದ ಆಡಳಿತ ನಡೆಸಿದ ಪಕ್ಷಗಳು ಶಿಕ್ಷೆ ಇಲ್ಲದೆ ಪಾರಾಗಿವೆ ಎಂಬುದು ನಿಜ. ಬಿಜೆಪಿ ಮತ್ತು ಅದಕ್ಕೆ ನಿಷ್ಠವಾಗಿರುವ ಮಾಧ್ಯಮಗಳು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡವು. ವಿರೋಧ ಪಕ್ಷವು ತನ್ನ ಆಳ್ವಿಕೆಯ ದಕ್ಷತೆಯನ್ನು ಪ್ರಾಮಾಣಿಕವಾಗಿ ಆತ್ಮಾವಲೋಕನಕ್ಕೆ ಒಳಪಡಿಸಬೇಕಿದೆ. ರಾಷ್ಟ್ರೀಯ ರಾಜಕಾರಣಕ್ಕೆ ಯಾವುದೇ ಯೋಜನೆ ರೂಪಿಸುವುದಕ್ಕೆ ಮುನ್ನ ಪಶ್ಚಿಮ ಬಂಗಾಳ ಮಾತ್ರವಲ್ಲ, ಪಂಜಾಬ್, ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ ಆಡಳಿತವನ್ನು ನಿಕಷಕ್ಕೆ ಒಡ್ಡಬೇಕಿದೆ.

ಅಂತಿಮವಾಗಿ, ಪಶ್ಚಿಮ ಬಂಗಾಳ ಚುನಾವಣೆಯ ಅತ್ಯಂತ ಕಳವಳಕಾರಿ ಸತ್ಯವೊಂದನ್ನು ಒಪ್ಪಿಕೊಳ್ಳೋಣ. ಈಗಿನ ಫಲಿತಾಂಶವು ಜನರ ಇಚ್ಛೆಯ ಪ್ರತಿಫಲನಕ್ಕೆ ಸೀಮಿತವಲ್ಲ. ಬಿಜೆಪಿಯ ಗೆಲುವು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಯೋಜಿತ ಕಾರ್ಯಾಚರಣೆಯ ಫಲವೂ ಹೌದು. 2024ರ ಲೋಕಸಭಾ ಚುನಾವಣೆಯಲ್ಲಿನ ಹಿನ್ನಡೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜರ್ಝರಿತವಾಗಿ, ಟಿಎಂಸಿಯನ್ನು ಎದುರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪರವಾಗಿರುವ ಮಾಧ್ಯಮಗಳು ಬಿಜೆಪಿಗೆ ಆಸರೆಯಾದವು. ನರೇಗಾ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಯನಂತಹ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂಪನ್ಮೂಲ ದೊರೆಯದಂತೆ ಕೇಂದ್ರವು ನೋಡಿಕೊಂಡಿತು. ಅಸ್ಸಾಂಗಿಂತಲೂ ಹೆಚ್ಚು ಪಶ್ಚಿಮ ಬಂಗಾಳದಲ್ಲಿ ಕೋಮುದ್ವೇಷದ ವಿಷಮಯವಾದ ಪ್ರಚಾರ ನಡೆಸಿದ್ದನ್ನು ಚುನಾವಣಾ ಆಯೋಗ ಸುಮ್ಮನೆ ನೋಡುತ್ತಾ ನಿಂತಿತು. ಈ ಎಲ್ಲಕ್ಕಿಂತ ಹೆಚ್ಚಾಗಿ, ಬೇರೆ ಯಾವುದೇ ರಾಜ್ಯದಂತಲ್ಲದೆ, ಗಣತಿ ನಮೂನೆ ಮತ್ತು ಪೌರತ್ವ ದಾಖಲೆಗಳನ್ನು ಸಲ್ಲಿಸಿದ್ದ 27 ಲಕ್ಷ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು (ಒಟ್ಟು 90 ಲಕ್ಷ ಜನರ ಹೆಸರು ತೆಗೆಯಲಾಗಿದೆ). ಈ ರದ್ದತಿಯು ತಪ್ಪು ಮತ್ತು ಉದ್ದೇಶಪೂರ್ವಕ ಎಂದು ಪ್ರತಿಯೊಂದು ಸ್ವತಂತ್ರ ತನಿಖೆಯೂ ಹೇಳಿದೆ. ಈ ಹೆಸರು ರದ್ದತಿಯು ರಾಜ್ಯದ ಒಟ್ಟು ಮತದಾರರ ಶೇ 4.3ರಷ್ಟಿದೆ. ಟಿಎಂಸಿಗಿಂತ ಬಿಜೆಪಿಗೆ ಸಿಕ್ಕ ಹೆಚ್ಚುವರಿ ಮತಗಳ ಪ್ರಮಾಣ ಶೇ 4.6ರಷ್ಟು. ಇದೊಂದು ಪ್ರಶ್ನೆಯನ್ನು ಕೇಳಲೇಬೇಕಿದೆ: ಈ 27 ಲಕ್ಷ ಜನರಿಗೆ ಮತದಾನಕ್ಕೆ ಅವಕಾಶ ಕೊಟ್ಟಿದ್ದರೆ ಫಲಿತಾಂಶದ ಮೇಲೆ ಅದು ಯಾವ ಪರಿಣಾಮ ಬೀರುತ್ತಿತ್ತು?

ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿ ಈ ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ: ಭಾರತದ ಚುನಾವಣೆಯ ಪ್ರಾಮಾಣಿಕತೆಯು ಕನಿಷ್ಠ ಸ್ವೀಕಾರಾರ್ಹ ಮಟ್ಟಕ್ಕಿಂತಲೂ ಕೆಳಕ್ಕೆ ಇಳಿದಿದೆಯೇ? ಚುನಾವಣಾ ಕಣದಿಂದ ಪರಾರಿ ಎಂಬಂತೆ ತೋರಿಸಿಕೊಳ್ಳದೆಯೇ ಯೋಜಿತ ಚುನಾವಣಾ ಫಲಿತಾಂಶವನ್ನು ನ್ಯಾಯಸಮ್ಮತಗೊಳಿಸಲು ವಿರೋಧ ಪಕ್ಷಗಳು ನಿರಾಕರಿಸುವುದು ಹೇಗೆ? ವಿರೋಧ ಪಕ್ಷವು ಈಗ ಅಥವಾ ಪಶ್ಚಿಮ ಬಂಗಾಳದ ಈ ಫಲಿತಾಂಶದ ಬಳಿಕವೂ ಅಲ್ಲದಿದ್ದರೆ ತನ್ನ ಗುರಿಯನ್ನು ಎಲ್ಲಿ ಮತ್ತು ಯಾವಾಗ ನಿಗದಿಪಡಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.