ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತ್ಗಂಡು ಮಾತಾಡ್ತೀಯಾ?

Last Updated 29 ಜನವರಿ 2019, 20:15 IST
ಅಕ್ಷರ ಗಾತ್ರ

‘ಮೇಷ್ಟ್ರಿಗೆ ನಮಸ್ಕಾರ’ ಅನ್ನುತ್ತಾ ಊರ ಹಿರ‍್ಯಾರು ಆಗಲೇ ಪಡಸಾಲಿ ಹತ್ತಿದ್ರು. ‘ಬರ‍್ರಿ ಬರ‍್ರಿ’ ಅಂದು ಚಾಪಿ ಹಾಸಿದೆ.

‘ಏನು ಎಲ್ಲಾರೂ ಬಂದೀರಿ. ಏನು ವಿಷ್ಯಾ?’ ಅಂದೆ.

‘ಇವತ್ತು ಉಸ್ತುವಾರಿ ಮಂತ್ರಿ ಬರ್ತಾರ ಮಾಸ್ತರ. ಏನರ ಸಮಸ್ಯೆ ಇದ್ರ ಪಂಚಾಯ್ತಿ ಬಯಲಿಗೆ ಬರ‍್ರಿ ಅಂತ ಡಂಗ್ರಾ ಹೊಡಿಸ್ಯಾರಲ್ರೀ’.

‘ಹೌದಾ? ಅದಕ್ಕೇನೀಗ’ ಕ್ವಶ್ಚನ್ ಹಾಕ್ದೆ.

‘ಹೀಂಗ ಅಂದ್ರ ಹೆಂಗ್ರಿ? ನಮ್ಮೂರ್ಗೆ ಒಂದ ಹೈಸ್ಕೂಲ ಬೇಕು, ಈ ಮ್ಯಾಗಲ ಓಣೀಗೆ ನೀರ ಇಲ್ಲ, ದನಕ್ಕ ಮೇವು ಇಲ್ಲ. ಇವ್ನ ನೀವ ಮಂತ್ರಿಗೋಳ ಮುಂದ ಇಡಬೇಕು’ ಅಂದ್ರು.

‘ಅಲ್ಲ... ನೀವ ಹಿರ‍್ಯಾರು ಇಟ್ರ ಛಲೋ ಇತ್ತು’ ಅಂದೆ ತಲಿ ಕೆರಕೋಂತ.

‘ಹಂಗಂದ್ರ ಹೆಂಗ್ರಿ. ನೀವು ಓದ್ದೋರು. ಚಂದ ಒಪ್ಪಸ್ತೀರಿ’ ಅಂತ ಒತ್ತಾಯ ಮಾಡಿದ ಮ್ಯಾಲೆ ಒಪ್ಕೊಂಡೆ.

ಸಮಸ್ಯೇನೆಲ್ಲ ಪಟ್ಟಿ ಮಾಡಿಕೊಂಡು ನಾಕು ಗಂಟೇಕ ಪಂಚಾಯ್ತಿ ಬಯಲಾಗ ಹಾಜರಾದೆ. ಊರ ಮುಖಂಡ್ರೂ ಬಂದಿದ್ರು. ಮಿನಿಸ್ಟರ ಕಾರು ಐದಕ್ಕ ಬಂತು. ಸೀದಾ ಸ್ಟೇಜಿಗೆ ಬಂದ ಮಿನಿಸ್ಟರು ಯಾವ್ಯಾವ ಭಾಗ್ಯ ಮಾಡೇವಿ, ಇನ್ನೂ ಯಾವ ಭಾಗ್ಯ ಮಾಡ್ತೀವಿ ಅನ್ನೋದ್ನ ಜಾಹೀರು ಮಾಡಿದ್ರು. ಎಲ್ಲರೂ ಚಪ್ಪಾಳೆ ತಟ್ಟಿದ್ರು. ಮಿನಿಸ್ಟರು ‘ಏನ್ರೆಪಾ ಏನರ ಸಮಸ್ಯಾ ಐತೇನು’ ಅಂದ್ರು.

ಕಡೇಮನಿ ಕಲ್ಲವ್ವ ಎದ್ದ ನಿತಗೊಂಡ ಹೇಳಾಕ ಹೊಂಟ್ಲು. ಮಿನಿಸ್ಟರು ಗರಂ ಆದ್ರು. ‘ನನ್ ಏನಂತ ತಿಳಕೊಂಡಿ? ನನ್ ಎದ್ರಿಗೇ ಎದ್ದ ನಿತಗೊಂಡು ಮಾತಾಡ್ತಿದೀಯಾ’ ಅಂದು ಕೆಕ್ಕರಿಸಿದ್ರು. ಅಕಿ ಕೈಯಾಗಿನ ಮೈಕ ಕಸ್ಗೊಂಡ ಭರಾಟೀಗೆ ಮುಗ್ಗುರ್ಸಿ ಬಿದ್ಲು.

ಅಷ್ಟೊತ್ತಿಗೆ ಬಸ್ಯಾ, ಎದ್ರ ಬೈತಾರ ಅಂದ್ಕೊಂಡು ಕುತಗೊಂಡೇ ಮೇವಿನ ಸುದ್ದಿ ತಗ್ದ.ಮತ್ತ ಮಿನಿಸ್ಟರು ಗರಂ ಆದ್ರು. ‘ಏನಂತ ತಿಳ್ಕಂಡಿ ನನ್ನ? ಕುತಗೊಂಡು ಮಾತಾಡ್ತೀಯಾ? ಅಷ್ಟ ಸೊಕ್ಕ ನಿನಗ?’ ಅಂತಾ ಕೆಂಡಾಮಂಡಲ ಆದ್ರು. ‘ಇವ್ನ ಹೆಸ್ರ ಬರ್ಕರ‍್ರಿ. ಆಮ್ಯಾಲ ವಿಚ್ಯಾರ್ಸನ’ ಅಂದು, ‘ಮತ್ತೇನು ಐತಿ ಕೇಳ್ರಿ’ ಅಂದು ನೀರು ಕುಡದ್ರು.

ನನಿಗೆ ಮನವಿ ಸಲ್ಸೋ ಧೈರ್ಯನ ಬರಲಿಲ್ಲ. ಹಿರ‍್ಯಾರು ನೋಡಿಗೀಡ್ಯಾರು ಅಂದು ಸಪ್ಪಳಿಲ್ದಂಗ ಎದ್ದು ಮನೀಕಡೆ ಹೊಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT