ಸಂಭ್ರಮವಿದು, ಸಂಕಟವೇಕೆ?

7

ಸಂಭ್ರಮವಿದು, ಸಂಕಟವೇಕೆ?

Published:
Updated:
Prajavani

ಕ್ಯಾಸನೂರು ಕಾಡಿನ ಮಂಗವೊಂದು ಹಾದಿ ತಪ್ಪಿ ಶಿವಮೊಗ್ಗ ಪೇಟೆಗೆ ಬಂದುಬಿಟ್ಟಿತು. ಎಲ್ಲೆಲ್ಲೂ ಝಗಮಗಿಸುತ್ತಿದ್ದ ಸಹ್ಯಾದ್ರಿ ಉತ್ಸವದ ಪೋಸ್ಟರುಗಳ ಕಂಡು ದಂಗಾಯಿತು. ಪೋಸ್ಟರಂಟಿಸಿದ್ದ ಕಂಬದ ಮೇಲೆ ಕೂತು ಚಿಪ್ಸ್ ಮೆಲ್ಲುತ್ತಿದ್ದ ಪೇಟೆಮಂಗನನ್ನು ‘ಇದೇನಣ್ಣ’ ಎಂದು ಕೇಳಿತು.

‘ಅದ್ರಾಗೇ ಬರದೈತೆ, ಓದ್ಕ’ ದಿವ್ಯನಿರ್ಲಕ್ಷ್ಯದಿಂದ ನುಡಿದ ಪೇಟೆಮಂಗನಿಗೆ ಇದು ಕಾಡುಮಂಗವೆಂದು ಅರಿವಾಗಿದ್ದೇ ‘ಏ ಸರ‍್ಕಳಾ ಅತ್ಲಾಗೆ... ಮೈಮೇಲೆ ಎಷ್ಟ್ ಉಣ್ಣೆ ಮೆತ್ತಿಸ್ಕಂಡು ಬಂದಿದೀಯೋ’ ಎನ್ನುತ್ತ ದೂರ ಹೋಗಿ ಕೂತಿತು. ‘ಹೆಲಿಟೂರಿಸಂ ಅಂದ್ರೇನಣ್ಣ’ ಎಂದು ಕೇಳಿದ ಕಾಡುಮಂಗನ ಅಜ್ಞಾನಕ್ಕೆ ಮರುಗಿದ ಪೇಟೆಮಂಗ ವಿವರಿಸಿತು.

‘ಹೆಲಿಕಾಪ್ಟರಿನಲ್ಲಿ ಶಿವಮೊಗ್ಗದ ಸುತ್ತ ಮುತ್ತ ತೋರಿಸುವಾಗ ಕ್ಯಾಸನೂರು ಕಾಡ್‌ನೂ ತೋರುಸ್ತಾರಂತಾ’ ಅಂತ ಕೇಳಿದ್ದೇ ಪೇಟೆಮಂಗನಿಗೆ ನಖಶಿಖಾಂತ ಉರಿಯಿತು. ‘ನಿಮ್ಮ ಕ್ಯಾಸನೂರು ವರ್ಲ್ಡ್ ಫೇಮಸ್ಸಾಗಿದ್ದು ಮಂಗನಕಾಯಿಲೆಗೆ. ಕಲೆ, ಸಂಸ್ಕೃತಿಯಿಂದಲ್ಲ ಅನ್ನದನ್ನು ಮದ್ಲು ತಿಳ್ಕ ಮಾರಾಯ’.

‘ಅಲ್ಲಣ್ಣ... ಆ ಉಣ್ಣೆ ಕಚ್ಚಿಸ್ಕಂಡು ಕಾಡೊಳಗೆ ನಮ್ಮೋರು, ಹೊರಗೆ ಜನ್ರು ಸಾಯ್ತಾ ಬಿದ್ದಿರ್‌ವಾಗ ನೀವ್ಹಿಂಗೆ ಉತ್ಸವ...’ ಕಾಡುಮಂಗನಿಗೆ ದುಃಖವುಕ್ಕಿತು. ‘ಯಾರು ಯಾವಾಗ ಸಾಯಬೇಕಂತ ಬ್ರಹ್ಮ ಹಣೆ ಮೇಲೆ ಬರ‍್ದೆ ಕಳಸಿರ‍್ತಾನಂತಪ್ಪ... ನೀವಲ್ಲಿ ಸಾಯ್ತಿ
ದೀರಿ ಅಂತ ನಾವಿಲ್ಲಿ ಮಸಾಲೆದೋಸೆ ತಿನ್ನದು ಬಿಡಕ್ಕಾಗುತ್ತಾ. ದಿಲ್ಲಿಯಲ್ಲಿ ‘ಶಾ’ಣ್ಯಾಗೆ ವರಾಹ ಜ್ವರ ಬಂತು ಅಂತ ಗುರುಗ್ರಾಮದ ರೆಸಾರ್ಟಿನಲ್ಲಿದ್ದ ಕಮಲದಳಗಳು ಉಪವಾಸ ಇದ್ದರಾ... ಸರ್ಕಾರ ಬೀಳಿಸೋ ಬಲೆ ಹೆಣೆಯೋದು ಬಿಟ್ಟರಾ...?’ ಪೇಟೆಮಂಗನ ವೇದಾಂತ.

‘ವರಾಹಜ್ವರವಾ?’ ಕಾಡುಮಂಗನಿಗೆ ಕುತೂಹಲವುಕ್ಕಿತು. ‘ಹಾದಿಬೀದಿಲಿರೋರಿಗೆ ಬಂದ್ರೆ ಹಂದಿಜ್ವರ... ದೊಡ್ಡೋರಿಗೆ ಬಂದ್ರೆ ವರಾಹಜ್ವರ’. ಪೇಟೆಮಂಗ ನಕ್ಕಿತು. ‘ಉತ್ಸವದ ದುಡ್ಡಲ್ಲಿ ಕ್ಯಾಸನೂರು ಕಾಯಿಲೆ ಉಣ್ಣೇನ ಶಾಶ್ವತವಾಗಿ ಓಡಿಸಕ್ಕೆ ಏನಾದ್ರೂ ಮಾಡಬೌದಿತ್ತಲ್ಲವಾ’ ಕಾಡುಮಂಗ ಅಲವತ್ತುಕೊಂಡಿತು.

‘ಇದು ದೃಶ್ಯಕಾವ್ಯ ಸಂಭ್ರಮ. ಕಾಯಿಲೆ ಕಸಾಲೆ ಸಂಕಟ ದರ್ಶನವಲ್ಲ. ಲಸಿಕೆ ಹಾಕಾಕೆ ಕ್ರಮ ತಗಂಡಿದಾರಲ್ಲ, ಸಾಕಲ್ಲವಾ... ನಡಿ’ ಪೇಟೆಮಂಗ, ಕಾಡುಮಂಗನನ್ನು ಓಡಿಸಿತು.  

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !