ಯಾವ ಆಪರೇಷನ್ನು?

7

ಯಾವ ಆಪರೇಷನ್ನು?

Published:
Updated:
Prajavani

‘ಆಪರೇಷನ್‌ ಆಯ್ತಾ?’

‘ಇನ್ನೇನ್‌ ಆದಂಗೆಯೇ ಅಂತ ಫೋನ್‌ ಮಾಡಿದ್ರು...’

‘ಹಂಗಂದ್ರೇನು? ಆಪರೇಷನ್‌ ಶುರುವಾಗಿದೆ ಅಂತಾನಾ?’

‘ಆಗಿರಬೇಕು...’

‘ಅಲ್ಲಪ್ಪಾ... ಇದೇನ್‌ ದೊಡ್ಡ ರೋಗಾನಾ? ಸಣ್ಣದೊಂದು ಆಪರೇಷನ್‌. ಇಷ್ಟೇಕೆ ತಡ?’

‘ತಡ ಏನಿಲ್ಲ. ಜ್ಯೋತಿಷಿಗಳು ಶನಿವಾರ ಚೆನ್ನಾಗಿದೆ ಅಂದ್ರಂತೆ...’

‘ಆಪರೇಷನ್‌ ಮಾಡೋರು ಡಾಕ್ಟ್ರು. ಜ್ಯೋತಿಷಿಗೇನು ಕೆಲಸ? ವಾರದಿಂದ ಇವತ್ತು ಮಾಡ್ತೀನಿ, ನಾಳೆ ಮಾಡ್ತೀನಿ ಅಂತಿದ್ದಾರಲ್ಲಾ. ಅವರೆಂಥ ಡಾಕ್ಟ್ರೋ ಮಾರಾಯ?’

‘ಐಯ್... ಆಪರೇಷನ್‌ ಅಂದ್ರೆ ಸುಮ್ನೆ ಆಯ್ತದಾ? ಅದಕ್ಕೆಲ್ಲ ರೆಡಿ ಮಾಡ್ಬೇಕಲ್ವಾ.’

‘ಏನ್‌ ದುಡ್ಡು ಕಟ್ಟಿಲ್ವಂತಾ?

‘ದುಡ್ಡು ಬೇಜಾನ್‌ ಅಯ್ತೆ.’

‘ಇನ್ನೇನು ಆಸ್ಪತ್ರೇಲಿ ಬೆಡ್‌ ಇಲ್ವಾ?’

‘ಅಯ್ಯ, ಆಸ್ಪತ್ರೇನಾ ಅದು! ಫೈವ್‌ಸ್ಟಾರ್‌ ರೆಸಾರ್ಟು! ಅದರದ್ದೇನೂ ಸಮಸ್ಯೆ ಅಲ್ಲ.’

‘ಮತ್ತಿನ್ನೇನು, ಡಾಕ್ಟರ್‌ಗಳು ಯಾರೋ ಬರಬೇಕಿದೆಯಾ?’

‘ಡಾಕ್ಟ್ರದ್ದೂ ಸಮಸ್ಯೆ ಇಲ್ಲ. ಡೆಲ್ಲಿಯಿಂದ ಶಾ ಅಂತ ದೊಡ್ಡ ಡಾಕ್ಟ್ರೇ ರೆಡಿ ಇದ್ದಾರೆ.’

‘ಮತ್ತೇನಪ್ಪಾ?’

‘ಒಟ್ಟಿಗೇ 12 ಮಂದಿಗೆ ಮಾಡೋಣ ಅಂತಿದ್ರು.’

‘ಓಹೋ... ಸಾಮೂಹಿಕ ಮದುವೆ ಇದ್ದಂಗೆ ಸಾಮೂಹಿಕ ಆಪರೇಷನ್‌! ಅದ್ಹೆಂಗೆ ಮಾಡ್ತಾರೋ ಮಾರಾಯ? ಆಪರೇಷನ್‌ ಥಿಯೇಟರ್‌ನಲ್ಲಿ ಒಬ್ಬ ಪೇಷಂಟು, ಐದಾರು ಡಾಕ್ಟ್ರು ಇರೋದು ಗೊತ್ತಿತ್ತು. ಇಂಥ ಆಪರೇಷನ್‌ ನಾನ್‌ ಕೇಳಿಲ್ಲಪ್ಪ! ಅಷ್ಟು ದೊಡ್ಡ ಆಪರೇಷನ್‌ ಥಿಯೇಟರಾ!’

‘ಅಯ್ಯೊ, ಏನ್‌ ಜುಜುಬಿ ಆಪರೇಷನ್‌ ಅನ್ಕೊಂಡ್ರಾ? ಕೋಟ್ಯಂತರದ ವಹಿವಾಟು. ಆಪರೇಷನ್‌ ಯಶಸ್ವಿಯಾದ್ರೆ ಸರ್ಕಾರಾನೇ ಬಿದ್ದೋಗೋದು.’

‘ಏಯ್‌, ಯಾರ ಆಪರೇಷನ್‌ ಬಗ್ಗೆ ಮಾತಾಡ್ತಿದ್ದೀಯ? ಮೂಲೆಮನೆ ಕಮಲಮ್ಮಂಗೆ ಹರ್ನಿಯಾ ಆಪರೇಷನ್‌ ಇದೆ ಅಂದಿದ್ಯಲ್ವಾ?’

‘ಹೌದು, ಆಪರೇಷನ್‌ ಕಮಲದ ಬಗ್ಗೆನೇ ಹೇಳಿದ್ದು. ಆದರೆ ಅದು ಹರ್ನಿಯಾ ಅಲ್ಲ, ಹರ್ಯಾನಾದಲ್ಲಿ ಅಂದಿದ್ದೆ.’

‘ಥೂ ನಿನ್ನ! ಕಮಲಮ್ಮಂಗೆ ಹರ್ನಿಯಾ ಆಗಿತ್ತಲ್ವಾ. ಅದಕ್ಕೇ ಆಪರೇಷನ್‌ ಅನ್ಕೊಂಡೆ. ಈ ರಾಜಕೀಯದವ್ರ ಸಹವಾಸದಿಂದ ನೀನ್‌ ಉದ್ಧಾರ ಆಗಲ್ಲ ಬಿಡು...!’

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !