ಆಪರೇಷನ್ ತೆಪರೇಸಿ!

7

ಆಪರೇಷನ್ ತೆಪರೇಸಿ!

Published:
Updated:
Prajavani

ಮನೆಯಲ್ಲಿ ತೆಪರೇಸಿ ಇನ್ನೇನು ಊಟಕ್ಕೆ ಕೂರಬೇಕು, ಮೊಬೈಲ್ ಸದ್ದು ಮಾಡತೊಡಗಿತು. ನೋಡಿದರೆ ಗೆಳೆಯ ದುಬ್ಬೀರ. ‘ಏನೋ ಮಗಾ, ಏನ್ಸಮಾಚಾರ?’ ಎಂದ ತೆಪರೇಸಿ.

‘ನನ್ ಸಮಾಚಾರ ಹಂಗಿರ್‌ಲಿ, ಮೊದ್ಲು ಟಿ.ವಿ ಆನ್ ಮಾಡು. ಟಿ.ವಿ ತುಂಬಾ ನಿಂದೇ ಬರಾಕತ್ತೇತಿ. ಆಪರೇಷನ್ ಕಮಲದಾಗೆ ನೀನೂ ಅದೀಯಂತಲ್ಲೋ? ನೀನೇ ಮೀಡಿಯೇಟರ್ ಅಂತೆ...?’

ತೆಪರೇಸಿಗೆ ಗಾಬರಿಯಾಯಿತು. ತಕ್ಷಣ ಟಿ.ವಿ ಆನ್ ಮಾಡಿದ. ಅವನದೇ ಬ್ರೇಕಿಂಗ್ ನ್ಯೂಸು! ಟಿ.ವಿ.ಯೋರು ತೆಪರೇಸಿ ಮೊಬೈಲ್‍ನಲ್ಲಿ ಮಾತಾಡ್ತಾ ನಿಂತಿರೋದನ್ನ ತೋರಿಸ್ತಾ ‘ಆಪರೇಷನ್ ಕಮಲದಲ್ಲಿ ಭಾಗಿಯಾಗಿರೋ ಈ ವ್ಯಕ್ತಿ ಯಾರು? ಶಾಸಕರಿಗೆ ಹಣ ತಲುಪಿಸಲು ಮಧ್ಯವರ್ತಿಯಾಗಿರುವ ಈತನ ಹಿಂದೆ ಯಾರ‍್ಯಾರಿದ್ದಾರೆ? ಎಷ್ಟು ಜನ ಶಾಸಕರಿಗೆ ಈತನ ಮೂಲಕ ಗಾಳ ಹಾಕಲಾಗಿದೆ? ಆ ಎಲ್ಲ ಶಾಸಕರು ಇವತ್ತೇ ರಾಜೀನಾಮೆ ಕೊಡ್ತಾರಾ?...’ ಇತ್ಯಾದಿ. ಅದರ ಜೊತೆಗೆ ‘ಎಕ್ಸ್‌ಕ್ಲೂಸಿವ್‌, ನಮ್ಮಲ್ಲೇ ಮೊದಲು’ ಅನ್ನೋ ಹೆಡ್ಡಿಂಗು! ಕೆಳಗೆ ಭಗ ಭಗ ಬೆಂಕಿ ಹೊತ್ತಿ ಉರೀತಿರೋ ಚಿತ್ರಣ! ತೆಪರೇಸಿಗೆ ತಲೆ ಧಿಮ್ ಅಂತು. ಅಲೇ ಇವ್ನ, ಇವರಿಗೇನು ತೆಲಿಗಿಲಿ ಕೆಟ್ಟೇತೋ ಹೆಂಗೆ? ನನಗೂ ಆಪರೇಷನ್ ಕಮಲಕ್ಕೂ ಏನು ಸಂಬಂಧ?

ಅಷ್ಟರಲ್ಲಿ ತೆಪರೇಸಿ ಯಾರ ಜೊತೆಗೋ ಮಾತಾಡಿದ ಸಂಭಾಷಣೆ ಪ್ರಸಾರವಾಗ ತೊಡಗಿತು. ‘ಆಪರೇಷನ್ ನಡೀತಾ ಇದೆ, ಇಬ್ರು ಅಥವಾ ಮೂವರು ಇರಬಹುದು. ಅಡ್ವಾನ್ಸ್ 25 ಕೊಟ್ಟಿದೀನಿ. ಆಮೇಲೆ ಉಳಿದದ್ದು ಸೆಟ್ಲ್ ಮಾಡಬೇಕು. ಕ್ಯಾಶ್ ರೆಡಿ ಇದೆ. ನಾನೇ ಕೊಡ್ತೀನಿ. ಆಪರೇಷನ್ ಸಕ್ಸಸ್ ಆಗುತ್ತೆ, ಹೆದರಬೇಡಿ...!’

ಇದು ತೆಪರೇಸಿ ತನ್ನ ಮಾವನ ಜೊತೆ ಮಾತಾಡಿದ್ದು. ತನ್ನ ಅತ್ತೆಗೆ ಸಣ್ಣದೊಂದು ಆಪರೇಷನ್ ಮಾಡಿಸಲು ಆಸ್ಪತ್ರೆಗೆ ಸೇರಿಸಿದ್ದ. ಅತ್ತ ಆಪರೇಷನ್ ನಡೆಯುತ್ತಿದ್ದಾಗ ಇತ್ತ ಕ್ಯಾಂಟೀನ್‍ಗೆ ಬಂದು ಮಾವನಿಗೆ ವಿಷಯ ತಿಳಿಸುತ್ತಿದ್ದ.

ಅದನ್ನೇ ಟಿ.ವಿ.ಯೋರು ವಿಡಿಯೊ ಮಾಡಿ ಹಾಕ್ಕಂಡು ಬಾರಿಸ್ತಾ ಇದಾರಲ್ಲ... ತೆಪರೇಸಿಗೆ ನಗು ಬಂತು. ತಕ್ಷಣ ದುಬ್ಬೀರನಿಗೆ ಫೋನ್ ಮಾಡಿ ಕತೆ ಹೇಳಿದ. ದುಬ್ಬೀರನಿಗೂ ನಗು ತಡೆಯಲಾಗಲಿಲ್ಲ. 

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !