ಇಲ್ಲೂ ಹಿಂಗೇನಾ?

ಬುಧವಾರ, ಮಾರ್ಚ್ 27, 2019
22 °C
ಚುರುಮುರಿ

ಇಲ್ಲೂ ಹಿಂಗೇನಾ?

Published:
Updated:
Prajavani

ಪಾರ್ಕಲ್ಲಿ ಸುತ್ತ ಜನರನ್ನು ಸೇರಿಸಿಕೊಂಡು ಮೂರ್ತಿ ಭಾಷಣ ಬಿಗೀತಿದ್ದ. ‘ಸ್ನೇಹಿತರೇ ನಾವು ಭಯೋತ್ಪಾದನೆಯನ್ನ ವಿರೋಧಿಸಬೇಕು, ನಮ್ಮ ಮೇಲೆ ದಾಳಿ ಮಾಡಿದವರ ಸೊಕ್ಕು ಮುರಿಯಬೇಕು, ಮನೆಯಲ್ಲಿ ಸೇರಿದ ದುಷ್ಟರನ್ನ ಹೊರಗೆ ಹಾಕಬೇಕು. ಇದನ್ನೆಲ್ಲಾ ಮಾಡಲು ಮಾವನ ಹಕ್ಕುಗಳು ಅಡ್ಡಿಯಾಗಿವೆ’ ಅಂದ.

ಜನ ಹಿಂದೆ-ಮುಂದೆ ಯೋಚಿಸದೆ ಚಪ್ಪಾಳೆ ಹೊಡೆದರು. ನಾನು ಮಾನವ ಹಕ್ಕುಗಳ ಬಗ್ಗೆ ಕೇಳಿದ್ದೆ, ಮಾವನ ಹಕ್ಕುಗಳು ಯಾವುವು ಅಂತ ನನಗೆ ತಿಳಿಯಲಿಲ್ಲ. ಅಷ್ಟೊತ್ತಿಗೆ ಮೂರ್ತಿ ಹೆಂಡತಿ ‘ಪಾರ್ಕಿಂದ ಅವರನ್ನ ಕರಕೊಂಡು ಬನ್ನಿ’ ಅಂತ ಫೋನ್‌ ಮಾಡಿದರು.

‘ಏನ್ರೀ... ದೇಶಭಕ್ತಿ ಜಾಸ್ತಿಯಾದಂಗದೆ ಇವನಿಗೆ’ ಅಂತ ಮೂರ್ತಿಯ ಹೆಂಡತಿಯನ್ನ ಕೇಳಿದೆ. ಒಳಗೆ ಅವನ ಮಾವ-ಅತ್ತೆ, ಭಾಮೈದದೀರು ಎಲ್ಲಾ ಸೆಟಗೊಂಡು ಕೂತಿದ್ದರು.

‘ಅಯ್ಯೋ ದೇಶಾನೂ ಇಲ್ಲ, ಭಕ್ತೀನೂ ಇಲ್ಲ. ಮೊನ್ನೆ ಮಗಳ ಮದುವೆ ಫಿಕ್ಸ್ ಆಯ್ತು. ಸಿಂಪಲ್ಲಾಗೇ ಮಾಡಬೇಕು ಅಂತ ಇವರ ಹಟ. ಮೊಮ್ಮಗಳ ಮದುವೆ ನಾವಂದಂಗೇ ಆಗಬೇಕು ಅಂತ ನಮ್ಮಪ್ಪ ಖಡಕ್ ಆಗಿ ಅಂದ್ರು. ಅದುಕ್ಕೆ ಇವರು ಸಿಟ್ಟುಕೊಂಡು ಹಾಲು-ತರಕಾರಿ ತರತಿಲ್ಲ, ನೀರು ಸೇದಿ ಹಾಕ್ದೇ ಸೇಡು ತೀರಿಸಿಕೊಳತಾವರೆ’ ಅಂತ ಕಣ್ಣಿಗೆ ಕೈಯಿಟ್ಟರು. ಮೂರ್ತಿಯನ್ನೇ ಕೇಳಿದೆ ‘ಏನ್ಲಾ ಇದು ಭಯೋತ್ಪಾದನೇ, ಮಾವನ ಹಕ್ಕುಗಳು?’ ಅಂತ.

‘ನಾನೀಗ ರಿಟೈರ್ ಆಗಿದ್ದೀನಿ. ಕಾಸಿಗೆ ಕಷ್ಟ. ಅದಕ್ಕೆ ಮದುವೆ ಸಿಂಪಲ್ಲಾಗಿರಲಿ ಅಂದೆ. ಹೆಂಡತಿ ಆಗಲ್ಲಾ ಅಂತ ಉಣ್ಣಕ್ಕೆ ಇಕ್ಕದೇ ಭಯೋತ್ಪಾದನೆ ಮಾಡತಾವಳೆ. ನನ್ನ ದುಡ್ಡಿನ ಮೇಲೆ ಮಾವನದೇನು ಹಕ್ಕದೆ! ಏನು ಭಾವಾಜಿ ನಿಮಗೆ ಮಾನ-ಮರ್ಯಾದೆ ಇಲ್ಲವಾ ಅಂತ ಭಾಮೈದದೀರು ಅಂತಾರೆ! ಇವರೆಲ್ಲಾ ಸೇರಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಟಿಎಂ ಕಾರ್ಡು ಕಿತ್ತುಗಂಡಿದ್ದು, ಎಫ್‌.ಡಿಗಳಿಗೆ ಬಲವಂತವಾಗಿ ಸೈನ್ ಹಾಕಿಸಿಗಂಡಿದ್ದು ಸರಿಯಲ್ಲ. ಅವನ್ನೆಲ್ಲಾ ವಾಪಸ್ ಕೊಡಬೇಕು’ ಅಂದ.

ವಿವಾದ ಬಗೆಹರಿಸೋಕೆ ಮಗಳನ್ನ ಕೇಳನ ಅಂದ್ರೆ ತಲೆ ಮೇಲೆ ಕೈ ಹೊತ್ತು ಕೂತಿದ್ದ ಅವಳು ‘ಶಾಂತಿಯನ್ನ ಕಾಪಾಡಿ ಅಂಕಲ್!’ ಅಂದ್ಲು. ಪಾತ್ರಗಳೆಲ್ಲಾ ಗಜಿಬಿಜಿಯಾಗತೊಡಗಿದವು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !