ಶುಕ್ರವಾರ, ನವೆಂಬರ್ 15, 2019
21 °C

ಒಳ್ಳೆ ಸಮಯ!

Published:
Updated:
Prajavani

ಒಳ್ಳೆ ಸಮಯ, ಒಳ್ಳೆ ಸಮಯ, ಒಳ್ಳೆ ಸಮಯವೋ... ಕಳ್ಳತನವ ಮಾಡಲೆಮಗೆ ಒಳ್ಳೆ ಸಮಯವೋ... ಅಂತ ಹಾಡು ಹೇಳ್ಕೊಂತಾ, ದಿನದ ಕಾರ್ಯಾಚರಣೆ ಬಳಿಕ ಕಳ್ಳರೆಲ್ಲ ಒಂದೆಡೆ ಸೇರಿದರು. ಗ್ಯಾಂಗ್ ಲೀಡರ್ ಕೇಳಿದ ‘ಏನ್ರಯ್ಯ ಇವತ್ತು ಹೆಂಗಾತು ಬಿಸಿನೆಸ್ಸು? ಒಳ್ಳೆ ಕಮಾಯಿನೋ?’

ಒಬ್ಬ ಹೇಳಿದ ‘ಬಾಸ್, ಇವತ್ತು ಎರಡು ವ್ಯಾನಿಟಿ ಬ್ಯಾಗ್ ಹೊಡ್ದೆ. ತೆಗೆದು ನೋಡಿದ್ರೆ ಬರೀ ಮೇಕಪ್ ಸಾಮಾನು, ಚಿಲ್ಲರೆ ಕಾಸು...’

ಇನ್ನೊಬ್ಬ ಹೇಳಿದ ‘ಬಾಸ್ ಇವತ್ತು ಒಬ್ಬ ಶ್ರೀಮಂತನ ಪರ್ಸ್ ಎತ್ತಿದೆ. ಅದ್ರಲ್ಲಿ ಬರೀ ಎ.ಟಿ.ಎಂ ಕಾರ್ಡ್‌ಗಳು. ಕ್ಯಾಶೇ ಇಲ್ಲ...’

ಗ್ಯಾಂಗ್ ಲೀಡರ್‌ಗೆ ಕೋಪ. ‘ಈ ಕೇಂದ್ರ ಸರ್ಕಾರ್‌ದೋರು ಕ್ಯಾಶ್‍ಲೆಸ್ ಮಾಡಿ ನಮಗೆಲ್ಲ ನಷ್ಟ ಆಗ್ತಾ ಐತಿ. ಅದೇನೋ ಆರ್ಥಿಕ ಕುಸಿತ ಅಂತಿದ್ರಲ್ಲ, ಇದೇ ಇರಬೇಕು... ಇರ್‍ಲಿ, ನೆಕ್ಸ್ಟ್...’

ಮತ್ತೊಬ್ಬ ಹೇಳಿದ ‘ಬಾಸ್, ಒಬ್ಬ ದೊಡ್ಡ ಮನುಷ್ಯನ ಬ್ಯಾಗ್ ಎತ್ತಿದೆ. ಅದ್ರಲ್ಲಿ ಬರೀ ಚೀಟಿ. ಅವರಿಗೆ 50 ಲಕ್ಷ ಕೊಟ್ಟೆ, ಇವರಿಗೆ ಕೋಟಿ ಕೊಟ್ಟೆ ಅಂತ ಬರ್ಕಂಡಿದ್ರು...’

‘ಅವನ್ಯಾರೋ ರಾಜಕಾರಣಿ ಇರ್ಬೇಕು. ಆ ಚೀಟಿಗಳನ್ನ ಇ.ಡಿ.ಯವರಿಗೆ ಪೋಸ್ಟ್ ಮಾಡು, ಹಿಡ್ಕಂಡ್ ಹೋಗ್ತಾರೆ...’

ಅಷ್ಟರಲ್ಲಿ ತೆಪರೇಸಿ ಎದ್ದ. ‘ಬಾಸ್, ನಂದಿ ವತ್ತು ಸಕತ್ ಕಮಾಯಿ, ಎಣಿಸ್ಕಳಿ’ ಅಂದವನೇ ಎಲ್ಲ ಜೇಬುಗಳಿಂದ ದುಡ್ಡು ತೆಗೆ ತೆಗೆದು ರಾಶಿ ಹಾಕಿದ. ಗ್ಯಾಂಗ್ ಲೀಡರ್‌ಗೆ ಆಶ್ಚರ್ಯ!

‘ಏನಯ್ಯ ಇದೂ? ಬ್ಯಾಂಕ್ ದರೋಡೆನಾ’

‘ಅಲ್ಲ ಬಾಸ್, ಟ್ರಾಫಿಕ್ ದಂಡ...’

‘ಅದನ್ನ ಪೊಲೀಸ್ರು ಹಾಕ್ತಾರಲ್ವ?’

‘ನಾನೂ ಪೊಲೀಸ್ ಡ್ರೆಸ್ ಹಾಕ್ಕಂಡೇ ವಸೂಲಿ ಮಾಡಿದೆ ಬಾಸ್... ಬಾರ್ ಪಕ್ಕ ಕತ್ತಲಲ್ಲಿ ನಿಂತ್ಕಂಡು, ಕುಡಿದು ಬೈಕ್ ಓಡ್ಸೋರ್‍ನ ಹಿಡಿದು, ಒಂದೇ ದಿನಕ್ಕೆ ಇಷ್ಟು ದುಡ್ಡು ಎತ್ತಿದೀನಿ, ಹೆಂಗೆ?’

‘ವೆರಿಗುಡ್, ಇನ್ಮೇಲೆ ನಮಗೆ ದಿನಾ ಭರ್ಜರಿ ಇನ್‍ಕಂ ಅನ್ನು...!’

‘ಇಲ್ಲ ಬಾಸ್, ಇನ್‍ಕಂ ಕಡಿಮೆ ಆದ್ರೂ ಆಗಬಹುದು...’

‘ಯಾಕೆ?’

‘ಒಂದೆರಡು ದಿನದಲ್ಲಿ ಟ್ರಾಫಿಕ್ ದಂಡ ಕಡಿಮೆ ಮಾಡ್ತಾರಂತೆ!’

ಪ್ರತಿಕ್ರಿಯಿಸಿ (+)