ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳೆಯಲ್ಲ, ಕಡಗ ಹಾಕೀನಿ!

Last Updated 22 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಕ್ಕಣ್ಣ ಬಲುಖುಷಿಯಾಗಿ ಓಡೋಡಿ ಬಂತು. ‘ನೀ ಸುಮ್ ಸುಮ್ನೆ ಮೋದಿ ಮಾಮಾ, ನಿರ್ಮಲಕ್ಕಂಗೆ ಏನರ ಹೇಳಬ್ಯಾಡ. ತೆರಿಗೆ ಕಡಿಮೆ ಮಾಡ್ಯಾರ ನೋಡ್‍. ನಿನಗ ಎಷ್ಟ್ ತೆರಿಗೆ ರೊಕ್ಕ ಉಳಿತದ’ ಎಂದಿತು. ‘ಮಂಗ್ಯಾ... ತೆರಿಗೆ ಕಡಿತ ನಮಗಲ್ಲ, ಕಾರ್ಪೊರೇಟ್ ಕಂಪನಿಗಳಿಗಿ. ಸುದ್ದಿ ಸರಿಯಾಗಿ ಓದೀ ಇಲ್ಲೋ’ ರೇಗಿದೆ ನಾನು. ಬಾಲ ಮುದುರಿಕೊಂಡು ಕೂತು ಪೇಪರ್ ಓದಿತು.

‘ಷೇರು ಮಾರಾಟದಿಂದ ಬಂದ ಲಾಭದ ಮ್ಯಾಗ ತೆರಿಗೆ ರದ್ದು ಮಾಡ್ಯಾರಂತ. ಹಂಗಾರೆ ನಿನ್ನ ಷೇರೆಲ್ಲ ಮಾರಿಬಿಡು’ ಎಂದಿತು. ‘ನನ್ ಹತ್ರ ಎಲ್ಲಿ ಅದಾವ... ಒಂದೊಳ್ಳೆ ಸೀರೀನೆ ಇಲ್ಲ, ಷೇರು ಎಲ್ಲಿಂದ ಬರ್ತದ. ಅದ್ ಯಾಡ್ ಕೋಟಿಗಿಂತ ಹೆಚ್ಚಿದ್ದವ್ರಿಗಿ. ಪುಟಗೋಸಿ ಷೇರುದಾರರಿಗೆ ಅಲ್ಲ’ ಬೈಯ್ದೆ.

ಮತ್ತೆ ಕೂತು ಅಂತರ್ಜಾಲ ಜಾಲಾಡಿತು. ‘ಅಕ್ಟೋಬರ್ ಆದ ಮ್ಯಾಗೆ ನಾನೂ ಒಂದ್ ಸ್ಟಾರ್ಟ್ ಅಪ್ ಕಂಪನಿ ತೆಗಿತೀನವಾ... ತೆರಿಗೆ ಭಾಳ ಕಡಿಮಿಯಂತ’ ಎಂದಿತು ಮೆತ್ತಗೆ. ‘ಭಪ್ಪರೇ ಮಗನೇ... ನೀ ಏನ್ ಕಂಪನಿ ನಡೆಸ್ತೀಯಲೇ’ ಜೋರಾಗಿ ನಕ್ಕೆ.

‘ಯಾಕ... ನಂಗೇನ್ ಕಂಪನಿ ನಡೆಸಾಕ ಬರವಲ್ದೇನು? ನಾ ಏನ್ ನಿನ್ನಂಗ ಬಳೆ ತೊಟ್ಟೀನೇನ್... ನಮ್ ಕಿಚ್ಚಣ್ಣನಂಗ ಕಡಗ ಹಾಕೀನಿ. ನನ್ ಸುದ್ದಿಗಿ ಬರಬ್ಯಾಡ’ ಎಂದು ಮೀಸೆ ತಿರುವಿತು.

‘ಬಳೆ ತೊಟ್ಟಿದ್ದ ಕೈ ನಿನ್ನ ಕಿಚ್ಚಣ್ಣನ ತೊಟ್ಟಿಲು ತೂಗಿತ್ತಲೇ. ಬಳೆ ತೊಟ್ಟಿಲ್ಲ, ಸೀರಿ ಉಟ್ಟಿಲ್ಲ, ಮೀಸಿ ಬಿಟ್ಟೇನಿ ಅಂತೆಲ್ಲ ವದರೂದು ಬಿಡಾಕ ಹೇಳಲೇ. ಇನ್ನಾ ಯಾವ ಜಮಾನಾದಾಗ ಅದಾನ ನಿಮ್ಮ ಕಿಚ್ಚಣ್ಣ. ತಲಿವಳಗ ಸೆಗಣಿ ತುಂಬೈತೇನ್ ಅಂತ ಮದ್ಲು ಕೇಳ್ಹೋಗಲೇ’ ನಾನು ರೇಗುತ್ತಲೇ ಇದ್ದೆ.

‘ಸುಮ್ನೆ ನಿನ್ನ ಪರೀಕ್ಷೆ ಮಾಡಾಕ ಹೇಳಿದ್ನವ್ವ. ಒಟ್ಟು ಜಿಡಿಪಿಗೆ ಅರ್ಧ ಕೊಡೂದು ನೀವ್ ಹೆಣಮಕ್ಕಳೇ ಅಂತ. ಮತ್ತ ಬಳೆ ಹಾಕ್ಕೊಂಡ್ ನಿರ್ಮಲಕ್ಕ ಈಗ ನಮ್ಮ ವಿತ್ತ ಸಚಿವೆ ಆಗಿಲ್ಲೇನು’ ಎಂದೆಲ್ಲ ಹೇಳುತ್ತ ಕಡೆಗೆ ತಿಪ್ಪೆ ಸಾರಿಸುವ ಯತ್ನವ ಮಾಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT